ವಿಷಯಕ್ಕೆ ಹೋಗಿ

ಮೈ ಲಾರ್ಡ್ ನನ್ನ ವಾದ....

"ದೇಶವನ್ನು ಒಡೆಯಲು ಯತ್ನಿಸಬೇಡಿ" - ಇದು ಮೊನ್ನೆ ನೀವು ಹೇಳಿದ ಮಾತು. ಒಂದು ಪ್ರತಿಮೆಯ ಅನಾವರಣವನ್ನು ತಡೆಯುವುದರಿಂದ ದೇಶ ಒಡೆಯುತ್ತದೆಯೇ? ಇಷ್ಟಕ್ಕೂ ದೇಶ ಒಡೆಯದಿರಲೆಂದು ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆಯೇ? ಇವೆರಡೂ ಅಲ್ಲ ಅನ್ನುವುದು ಎಲ್ಲರಿಗೂ ತಿಳಿದ ವಿಷಯ. ಮೊದಲಿಗೆ ಎರಡು ರಾಜ್ಯಗಳ ಸೌಹಾರ್ಧತೆಗಾಗಿ ತಿರುವಳ್ಳುವರ್ ಪ್ರತಿಮೆ ಬೆಂಗಳೂರಿಗೆ ಬರಲಿಲ್ಲ ಅನ್ನುವುದನ್ನು ತಿಳಿಯಪಡಿಸುತ್ತೇನೆ ಯುವರ್ ಆನರ್. ಅದನ್ನು ತಮಿಳರು ಮೊದಲು ಇಲ್ಲಿ ಸ್ಥಾಪಿಸಲು ಹೊಂಚು ಹಾಕಿದರು. ಅದಾದ ಎಷ್ಟೋ ವರ್ಷಗಳ ನಂತರ ತಿರುವಳ್ಳುವರ್ ಪ್ರತಿಮೆಗೆ ಪ್ರತಿಯಾಗಿ ಚೆನ್ನೈನಲ್ಲಿ ಸರ್ವಜ್ಞ ಪ್ರತಿಮೆ ಸ್ಥಾಪಿಸಬೇಕು ಅನ್ನುವ ಹೊಸ ವಾದ ಹುಟ್ಟಿಕೊಂಡಿತು ಅಷ್ಟೇ.
ನಾವು ಯಾರನ್ನು ಬೇಕಾದರೂ ನಿಯಂತ್ರಿಸಬಹುದು ಅನ್ನುವುದು ಮೊದಲಿಗೆ ರಾಜಕಾರಣಿಗಳಿಗೆ, ನಂತರ ಪೊಲೀಸರಿಗೆ, ತದ ನಂತರ ಪತ್ರಕರ್ತರಿಗೆ ಹಾಗೂ ಇದೀಗ ನಿಮಗೆ ಅಂಟಿದ ಜಾಡ್ಯ. "ಯಾರೂ ಪ್ರತಿಮೆ ಅನಾವರಣವನ್ನು ತಡೆಯಬಾರದು, ಅಷ್ಟೇ ಅಲ್ಲ, ಪ್ರತಿಭಟನೆಯನ್ನೂ ಮಾಡಬಾರದು" ಅನ್ನುವ ಮೂಲಕ ಪ್ರಜಾಪ್ರಭುತ್ವದಲ್ಲಿ ನಾವು ಬದುಕುತ್ತಿದ್ದೇವೆ ಅನ್ನುವ ಅಂಶವನ್ನೇ ನೀವು ಅಳಿಸಿ ಹಾಕಿದಿರಿ. ನಿಜವಾಗಿಯೂ ನ್ಯಾಯದಾನ ನೀಡುವುದಾಗಿದ್ದರೆ "ಚೆನ್ನೈನಲ್ಲಿಯೂ ಸರ್ವಜ್ಞನ ಪ್ರತಿಮೆಯನ್ನು ಸೂಕ್ತ ಸ್ಥಳದಲ್ಲಿ ಸ್ಥಾಪಿಸುವಂತೆ ಸೂಚಿಸಬುದಾಗಿತ್ತು. ಒಂದೇ ದಿನ ಎರಡೂ ಕಡೆ ಅನಾವರಣ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬಹುದಾಗಿತ್ತು. ಆದರೆ ಅದನ್ನು ನೀವು ಮಾಡಲಿಲ್ಲ.
ಕೆಲವು ವರ್ಷದ ಹಿಂದೆ ಕೋಲಾರದಲ್ಲಿ ತಮಿಳು ಶಾಸಕನೊಬ್ಬ ಎಂಜಿಆರ್ ಪ್ರತಿಮೆಯನ್ನು ಸ್ಥಾಪಿಸಲು ಹೊರಟಿದ್ದ. ಅದನ್ನು ಕನ್ನಡ ಮುಖಂಡರು ತಡೆದರು. ಬಹುಶಃ ಅದರ ದೂರು ನಿಮ್ಮ ಬಳಿ ಬಂದಿದ್ದರೆ ನೀವು ಹೇಳಿರುತ್ತಿದ್ದಿರಿ.. "ದೇಶ ಒಡೆಯಬೇಡಿ, ಎಂಜಿಆರ್ ಪ್ರತಿಮೆ ಸ್ಥಾಪಿಸಲು ಬಿಡಿ" ಎಂದು! ಏಕೆಂದರೆ ತಮಿಳರ ಪಾಲಿಗೆ ಎಂಜಿಆರ್ ಸಹ ಮಹಾನ್ ವ್ಯಕ್ತಿಯೇ.
ಇದೇ ತಮಿಳನೊಬ್ಬ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ನೀಡಬಾರದು ಎಂದು ನಿಮ್ಮ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದಾಗ ಖಂಡಿತಾ ನಿಮ್ಮ ನ್ಯಾಯಾಲಯ ಅವನಿಗೆ "ದೇಶ ಒಡೆಯಲು ಯತ್ನಿಸಬೇಡಿ" ಎಂದು ಎಚ್ಚರಿಕೆ ನೀಡಲೇ ಇಲ್ಲ. ಕಾವೇರಿ ನೀರಿಗಾಗಿ ಜಯಲಲಿತ ಸುಪ್ರೀಂ ಕೋರ್ಟ್‌‍ಗೆ ಹೋದಾಗ ಆಕೆಗೂ ಕೂಡಾ "ದೇಶ ಒಡೆಯಲು ಯತ್ನಿಸಬೇಡಿ" ಎಂದು ಹೇಳಲಿಲ್ಲ. ಏಕೆಂದರೆ ದೇಶ ಒಡೆಯಲು ಕನ್ನಡಿಗರಲ್ಲದೇ ಇನ್ಯಾರು ಯತ್ನಿಸಲು ಸಾಧ್ಯ ಅನ್ನುವುದು ನಿಮ್ಮ ಅಭಿಪ್ರಾಯ.
ಅವರು ನೀರು ಬಿಡಿ ಅಂದಾಗೆಲ್ಲಾ ನಾವು ಬಿಡಬೇಕು. ಇಲ್ಲಾಂದರೆ ನಿಮ್ಮ ಪ್ರಕಾರ ದೇಶ ಒಡೆದು ಚೂರಾಗಿ ಹೋಗುತ್ತದೆ. ಅವರು ಹೇಳಿದ ಜಾಗದಲ್ಲಿ, ಅವರು ಹೇಳಿದ ಪ್ರತಿಮೆಯನ್ನು ಸ್ಥಾಪಿಸಬೇಕು. ಇಲ್ಲಾಂದರೆ ದೇಶ ನಮ್ಮಿಂದ ಒಡೆದು ಹೋಗುತ್ತದೆ. ಇದೆಲ್ಲಿಯ ನ್ಯಾಯ ಸ್ವಾಮಿ?
ತಿರುವಳ್ಳುವರ್ ದೊಡ್ಡ ಕವಿ ಇರಬಹುದು. ಆದರೆ ಅದೇ ತಮಿಳು ಸರ್ಕಾರ ಕವಿಯ ನುಡಿಗಳನ್ನು ಕನ್ನಡದಲ್ಲಿ ಮುದ್ರಿಸಿ ಕಡಿಮೆ ಬೆಲೆಗೆ ನಮಗೆಲ್ಲಾ ನೀಡಿದ್ದಿದ್ದರೆ ನಮಗೂ ಆ ಕವಿಯ ದೊಡ್ಡ ಜ್ಞಾನ ತಿಳಿದಿರುತ್ತಿತ್ತು. ತಮಿಳರು ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಪುಸ್ತಕ ಮುದ್ರಿಸುತ್ತಾರೆ. ಆದರೆ ಅವರ ಸಾಹಿತ್ಯದ ಬಗ್ಗೆ ಕನ್ನಡದಲ್ಲಿ ಮುದ್ರಿಸುವ ಪ್ರಯತ್ನ ಮಾಡುವುದಿಲ್ಲ.
ಅದೆಲ್ಲಾ ಇರಲಿ, ಈಗ ನಿಮ್ಮ ಬಗ್ಗೆಯೇ ಒಂದೆರಡು ಪ್ರಶ್ನೆ.
ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ತಂತಮ್ಮ ಆಸ್ತಿ ವಿವರವನ್ನು ಭಹಿರಂಗಪಡಿಸುತ್ತಾರೆ. ಆದರೆ ನಿವ್ಯಾಕೆ ಅದನ್ನು ಮಾಡಲು ಹಿಂಜರಿಯುತ್ತೀರಿ ಸ್ವಾಮಿ? ಒಂದು ವಿಧದಲ್ಲಿ ನೀವೂ ಕೂಡಾ ಸರಕಾರಿ ನೌಕರರೇ ಹೊರತೂ ಬೇರೇನಲ್ಲ. ಹಾಗಿದ್ದರೆ ನಿಮಗೇಕೆ ವಿಷೇಶ ಸೂತ್ರ? ಸರ್ಕಾರದಿಂದ ಪಡೆವ ಸಂಬಳದ ಲೆಕ್ಕವನ್ನು ಸರಕಾರಕ್ಕೆ ನೀಡಲು ನಿಮಗೇಕೆ ಹಿಂಜರಿಕೆ? ಉಳಿದವರೆಲ್ಲಾ ಸಾಧಾರಣ ಪ್ರಜೆಗಳು, ನೀವು ಮಾತ್ರ ಎಲ್ಲರಿಗಿಂತಲೂ ಮಿಗಿಲು ಅನ್ನುವ ಭ್ರಮೆಯೇ?
ದಟ್ಸಾಲ್ ಯುವರ್ ಆನರ್...
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…

ಭ್ರಷ್ಟಾಚಾರದ ಸುಳಿಯಲ್ಲಿ ಬಡ ಭಾರತ

ಭಾರತಕ್ಕೆ ಉತ್ತಮ ಭವಿಷ್ಯವಿಲ್ಲ ಅನ್ನೋದು ಪದೇ ಪದೇ ಸಾಬೀತಾಗುತ್ತಾ ಬಂದಿದೆ. ಎಲ್ಲೋ ಒಮ್ಮೊಮ್ಮೆ ಮಿಂಚಿನಂತೆ ಉದಯಿಸುವ ಆಶಾಕಿರಣಗಳು ಸ್ವಲ್ಪ ಸಮಯದಲ್ಲೇ ಭ್ರಷ್ಟ ಮೋಡದ ಸುಳಿಗೆ ಸಿಲುಕಿ ಜನರ ಎದುರಿನಿಂದ ಕಾಣೆಯಾಗುತ್ತಿರುವುದನ್ನು ಕಾಣುತ್ತಲೇ ಬಂದಿದ್ದೇವೆ. ಅಣ್ಣಾ ಹಜಾರೆ, ಸಂತೋಷ್ ಹೆಗಡೆ ಮುಂತಾದ ನಕ್ಷತ್ರಗಳು ಆಗಾಗ ಉದಯಿಸಿದರೂ ಸಹ ಅವರ ವರ್ಚಸ್ಸು ಮತ್ತು ಪ್ರಾಮಾಣಿಕತೆಯನ್ನು ಈ ಭಂಡ ರಾಜಕಾರಣಿಗಳು ಹೊಸಕಿ ಹಾಕುತ್ತಿದ್ದಾರೆ.

ರಾಜಕಾರಣಿಗಳು ಮಾತ್ರವಲ್ಲ, ಅಧಿಕಾರಿಗಳೂ ಭ್ರಷ್ಟರಾಗಿದ್ದಾರೆ. ಬರೇ ರಾಜಕಾರನಿಗಳನ್ನ ದೂರಿ ಪ್ರಯೋಜನವಿಲ್ಲ ಅನ್ನುವವರಿದ್ದಾರೆ. ಅದು ನಿಜ ಕೂಡಾ. ಆದರೆ ಆ ಅಧಿಕಾರಿಗಳನ್ನು ಕೊಬ್ಬಲು ಬಿಟ್ಟಿದ್ದು ಮಾತ್ರ ಇದೇ ರಾಜಕಾರಣಿಗಳೇನೆ. ರಾಜಕಾರಣಿಗಳು ಸರಿಯಾಗಿದ್ದರೆ ಅಧಿಕಾರಿಗಳನ್ನು ನಿಯಂತ್ರಿಸುವುದು ಕಷ್ಟದ ಕೆಲಸವೇನಲ್ಲ. ಮುಖ್ಯವಾಗಿ ಅಧಿಕಾರಿಗಳು ರಾಜಕಾರಣಿಗಳಷ್ಟು ಭ್ರಷ್ಟರಲ್ಲ. ಅವರಿಗೆ ಕೆಲಸದ ಭಯವಿರುತ್ತದೆ. ಕೆಲಸ ಕಳೆದುಕೊಂಡರೆ ಬದುಕೋದು ಕಷ್ಟ ಎಂಬ ಅರಿವಿರುತ್ತದೆ. ಆದರೆ ರಾಜಕಾರಣಿಗಳಿಗೆ ಯಾವ ಭಯವೂ ಇಲ್ಲ. ಒಮ್ಮೆ ಸೋತರೂ ಮತ್ತೊಮ್ಮೆ ಗೆದ್ದು ಬರಬಹುದು ಎಂಬ ನಂಬಿಕೆ ಅವರಿಗಿದೆ. ಯಡಿಯೂರಪ್ಪನಂತವರ ಕೃಪಾಕಟಾಕ್ಷವಿದ್ದರೆ ಸೋತರೂ ಸೋಮಣ್ಣನಂತೋರು ಮಂತ್ರಿ ಆಗ್ತಾರೆ. ಭಂಡ ರಾಜಕಾರಣಿಗಳಿಗೆ ಇನ್ನೇನು ಬೇಕು ?

ಹೀಗಾಗಿ ಇಂದು ಹಗರಣಗಳ ಮೇಲೆ ಹಗರನಗಳು ನಡೆಯುತ್ತಿವೆ. ಒಂದಾದ ನಂತರ ಮತ್ತೊಂದರಂತೆ ಸಾವಿರಾರು ಕೋಟಿಗಳ…