ವಿಷಯಕ್ಕೆ ಹೋಗಿ

ಪತ್ತೇದಾರಿ ಕಥೆ ಬರೆವ ರಹಸ್ಯ

ಪ್ರಾರಂಭ ಹೇಗಿರಬೇಕು ?

ಸಾಧಾರಣ, ಸಾಮಾಜಿಕ ಕಥೆ ಬರೆಯುವುದು ಸುಲಭ. ಆದರೆ ಒಂದು ಪತ್ತೇದಾರಿ ಕಥೆ ಬರೆಯುವುದು ತುಂಬಾ ಕಷ್ಟ. ಸಾಮಾಜಿಕ ಕಥೆ ಬರೆಯಲು ನೂರಾರು ವಿಷಯಗಳು ಸಿಗುತ್ತವೆ. ಅವುಗಳನ್ನು ಎಲ್ಲಿಂದ ಹೇಗೆ ಬೇಕಾದರೂ ಪ್ರಾರಂಭಿಸಬಹುದು. ಹೇಗೆ ಬೇಕಾದರೂ ಮುಕ್ತಾಯ ಮಾಡಬಹುದು. ಇಂತದ್ದೇ ಅನ್ನುವಂತಹ ಅಂತ್ಯ ಕಾಣಿಸುವ ಅಗತ್ಯ ಇರುವುದಿಲ್ಲ. ಮೇಲಾಗಿ ಬರವಣಿಗೆಯ ಶೈಲಿ ಅಷ್ಟೇನೂ ಉತ್ತಮವಾಗಿರದಿದ್ದರೂ ನಡೆದೀತು, ಒಂದು ಉತ್ತಮ ವಿಷಯವನ್ನಿಟ್ಟುಕೊಂಡು ಕಥೆ ಬರೆದು ಬಿಡಬಹುದು. ಆದರೆ ಪತ್ತೇದಾರಿ ಕಥೆಗೆ ಹಾಗಲ್ಲ. ಹೇಗಾದರೂ ಬರೆದರಾದೀತು ಅನ್ನುವಂತಿಲ್ಲ. ಮೊದಲ ಪ್ಯಾರಾದಿಂದಲೇ ಓದುಗರನ್ನು ಹಿಡಿದಿಡುವ ಕುಶಲತೆ ನಮಗಿರಬೇಕು.

ಉದಾ : ವಿಶಾಲವಾದ ಸ್ನಾನಗೃಹದ ಬಕೇಟಿನಲ್ಲಿದ್ದ ಬಿಸಿ ನೀರಿನಿಂದ ಎದ್ದ ಹಬೆ ಆ ಸ್ನಾನದ ಕೋಣೆಯನ್ನು ಪೂರ್ತಿಯಾಗಿ ಮಂಜಿನಂತೆ ಆವರಿಸುತ್ತಿತ್ತು. ಎದುರಿನ ಗೋಡೆಯಲ್ಲಿದ್ದ ನಿಲುವುಗನ್ನಡಿಯ ಮೇಲೆ ಮಂದ್ರವಾಗಿ ಹಬೆ ಅಂಟಿಕೊಂಡು ಸ್ನಾನಕ್ಕಿಳಿದಿದ್ದ ನಿತ್ಯಾಳ ಸುಂದರವಾದ ನಗ್ನ ದೇಹಕ್ಕೆ ತಾನೇ ಉಡುಗೆಯಾದಂತೆ ಭಾಸವಾಗುತ್ತಿತ್ತು. ಇದ್ಯಾವುದರ ಅರಿವೇ ಇಲ್ಲದ ಹದಿನೆಂಟರ ತರುಣಿ ನಿತ್ಯಾ ತನ್ನಷ್ಟಕ್ಕೆ ತಾನು ಸ್ನಾನ ಮುಗಿಸಿ ಆ ಕನ್ನಡಿಯಿಂದ ಎರಡಡಿ ದೂರ ನಿಂತು ಅದರಲ್ಲಿ ಮಂಜು ಮಂಜಾಗಿ ಗೋಚರಿಸುತ್ತಿದ್ದ ತನ್ನ ನಗ್ನ ಪ್ರತಿಬಿಂಬವನ್ನೇ ನೋಡುತ್ತಾ ಮೈ ಒರೆಸಿಕೊಳ್ಳತೊಡಗಿದಳು. ತನ್ನ ಸೌಂದರ್ಯವನ್ನು ತಾನೇ ಸವಿಯಲೋ, ಅಥವಾ ಮೊದಲೇ ಚಂದಿರನಷ್ಟು ಬೆಳ್ಳಗಿರುವ ತನ್ನ ದೇಹ ಬಿಸಿ ನೀರಿನ ಕಾರಣಕ್ಕೆ ಇನ್ನೆಷ್ಟು ಕೆಂಪಾಗಿದೆಯೋ ಎಂದು ತಿಳಿದುಕೊಳ್ಳಲೋ ಎಂಬಂತೆ ಒಮ್ಮೆ ಆ ಕನ್ನಡಿಯತ್ತ ನಡೆದು ಅದನ್ನು ತನ್ನ ಕೈಯಿಂದ ಒರೆಸಿದಳು. ಹಾಗೆ ಒರೆಸುತ್ತಿದ್ದವಳು ಆ ಕನ್ನಡಿಯಲ್ಲಿ ಕಂಡ ಅವಳ ಹಿಂದಿನ ದೃಶ್ಯವನ್ನು ನೋಡಿ ಕಿಟಾರನೆ ಕಿರುಚಿಕೊಂಡಳು.

ಈ ರೀತಿ ಒಂದು ಕಥೆಯನ್ನು ನೀವು ಪ್ರಾರಂಭಿಸಿದಿರಾದರೆ ಕಂಡಿತಾ ಮೊದಲ ಹೆಜ್ಜೆ ಸರಿಯಾಗಿಯೇ ಇರಿಸಿದ್ದೀರೆಂದಾಯ್ತು. ಏಕೆಂದರೆ ಯಾವ ಓದುಗನೂ ಅವಳು ಏಕೆ ಹಾಗೆ ಕಿರುಚಿಕೊಂಡಳು ಎಂದು ತಿಳಿದುಕೊಳ್ಳಲು ಎರಡನೇ ಪ್ಯಾರಾವನ್ನು ಓದದೇ ಇರಲಾರ. ಹೀಗೆ ಒಂದಾದ ನಂತರ ಒಂದರಂತೆ ಪ್ಯಾರಾವನ್ನು ಓದಿಸಿಕೊಂಡು ಹೋಗುವಂತದ್ದೇ ಪತ್ತೇದಾರಿ ಕಥೆಯ ಮೊದಲ ಲಕ್ಷಣ. ಅದನ್ನು ಸಾಧಿಸುವುದು ಅಷ್ಟು ಸುಲಭವೇನಲ್ಲ.

ವಿಷಯದ ಆಯ್ಕೆ

ಪತ್ತೇದಾರಿ ಕಥೆಗಳಿಗೆ ಸೂಕ್ತ ವಿಷಯವನ್ನು ಆಯ್ಕೆ ಮಾಡುವುದೇ ಒಂದು ದೊಡ್ಡ ಸವಾಲು. ಒಂದು ಕೊಲೆಯ ವಿಷಯವನ್ನು ತೆಗೆದುಕೊಂಡು ಕಥೆ ಬರೆಯುವುದು ಉತ್ತಮ.ಯಾವುದೋ ಒಬ್ಬ ಮುಖ್ಯ ವ್ಯಕ್ತಿಯ ಕೊಲೆ ನಡೆದಲ್ಲಿಂದ ಹಿಡಿದು, ಇನ್ಸ್‌ಪೆಕ್ಟರ್ ಅಥವಾ ಖಾಸಗಿ ಪತ್ತೇದಾರ ಕೊಲೆಗಾರನ್ನನು ಹಿಡಿದು ಹಾಕುವಲ್ಲಿಗೆ ಕ್ಲೈಮ್ಯಾಕ್ಸ್ ಕೊಡಬಹುದು. ಆದರೂ ಈಗಾಗಲೇ ಬಂದಿರುವ ಸಾವಿರಾರು ಕಥೆಗಳಿಗಿಂತಲೂ ವಿಭಿನ್ನವಾಗಿ ಬರೆಯುವುದು ಕಷ್ಟ. ವಿಶಾಲ ವಿವರಣೆಯ ಅವಕಾಶವಿರುವ ಕಾದಂಬರಿಯಲ್ಲಾದರೆ ಬೇರೆ ಬೇರೆ ಮಗ್ಗುಲುಗಳನ್ನು ವಿವರಿಸುತ್ತಾ ಹೋಗಬಹುದು. ಆದರೆ ಕಥೆಯಾದರೆ ಆದಷ್ಟು ಬೇಗ ಅದನ್ನು ಮುಗಿಸಿ ಸಂಪಾದಕರು ಒಪ್ಪುವ ಪುಟಗಳಲ್ಲೇ ಕೊಲೆಗಾರನನ್ನು ಹಿಡಿದು ಹಾಕಬೇಕು... ಹಾಗೂ ಕಥೆ ವಿಭಿನ್ನವಾಗಿರಬೇಕು. ಕಥೆ ವಿಭಿನ್ನವಾಗಿರಬೇಕು ಅಂದಾಗ ಕೊಲೆಯೂ ಕೂಡಾ ವಿಭಿನ್ನವಾಗಿರಲೇ ಬೇಕು. 

ಇದರಲ್ಲಿ ಎರಡು ವಿಧ :
1. ಕೊಲೆ ಸಾಧಾರಣ ರೀತಿಯಲ್ಲಿ ನಡೆದಿದ್ದು ಕೊಲೆಗಾರ ಯಾರೆಂದು ಪತ್ತೆ ಮಾಡುವುದು. 
2. ಕೊಲೆ ನಡೆದ ರೀತಿಯೇ ವಿಶಿಷ್ಠವಾಗಿದ್ದು (ಆತ್ಮಹತ್ಯೆಯಂತೆಯೋ, ಅಪಘಾತದಂತೆಯೋ ಇದ್ದು) ಅದನ್ನು ಕೊಲೆ ಎಂದು ನಿರೂಪಿಸಿ ಕೊಲೆಗಾರನನ್ನು ಹಿಡಿಯುವುದು. 
ಹೀಗೆ ಯಾವುದನ್ನೇ ಆದರೂ ಎಚ್ಚರಿಕೆಯಿಂದ ನಿರೂಪಿಸಬೇಕಾಗುತ್ತದೆ.

ನಿರೂಪಣೆ ರಸವತ್ತಾಗಿರಲಿ

ಪತ್ತೇದಾರಿ ಕಥೆಗಳಿಗೆ ನಿರೂಪಣೆ ಅತ್ಯಂತ ಮುಖ್ಯವಾದ ಅಂಶ. ಬೇರೆ ಕಥೆಗಳಂತೆ ಏನೇನೋ ಹೇಳುತ್ತ ಎಳೆದುಕೊಂಡು ಹೋಗುವಂತಿಲ್ಲ. ಹೇಳಬೇಕಾದ್ದನ್ನು ಮಾತ್ರ ಸ್ಫುಟುವಾಗಿ ಹೇಳಬೇಕು, ಮತ್ತು ಹೇಳಬೇಕಾದ್ದನ್ನೆಲ್ಲಾ ಹೇಳಲೇ ಬೇಕು. ಕಥೆಯನ್ನು ವೇಗವಾಗಿ ಓಡಿಸಬೇಕು.  ಅಗತ್ಯ ಇಲ್ಲದೇ ಏನೇನನ್ನೋ ಹೇಳುತ್ತ ಕೂರಬಾರದು. ಉದಾಹರಣೆಗೆ ಕೆಲವು ಕಥೆಗಾರರು ವಿನಾಕಾರಣ ಆ ಕೋಣೆಯಲ್ಲಿ ಒಂದು ಟಿಫಾಯಿ. ಅದರ ಮೇಲೆ ನಾಲ್ಕು ಪತ್ರಿಕೆಗಳು. ಒಂದು ದೊಡ್ಡ ಮಂಚ. ಸೋಫಾ ಸೆಟ್, ಎರಡು ಕುರ್ಚಿ... ಹೀಗೆ ಏನೇನೋ ಹೇಳುತ್ತಾ ಹೋಗುತ್ತಾರೆ. ಕಥೆಗೆ ಅಗತ್ಯ ಇದ್ದಲ್ಲಿ ಮಾತ್ರ ಇಂತಹ ವಿವರಣೆ ಬೇಕು. ಅತ್ಯಂತ ವಿಶಾಲವಾದ ಆ ಕೋಣೆ ಶ್ರೀಮಂತಿಕೆಯಿಂದ ಕೂಡಿತ್ತು. ಅಂದರೆ ಓದುಗರಿಗೆ ಅರ್ಥವಾಗಿ ಹೋಗುತ್ತದೆ. ಅಲ್ಲಿ ಏನೇನು ಇದ್ದಿರಬಹುದು ಎಂದು. ಎಲ್ಲವನ್ನೂ ವರ್ಣಿಸುವ ಅಗತ್ಯ ಇಲ್ಲ. ಹಾಗೆಯೇ ಕಥೆಯ ಕೊನೆಯಲ್ಲೆಲ್ಲೋ ಒಂದು ವಸ್ತು ಆ ಕೋಣೆಯಲ್ಲಿ ಇದ್ದಿರಬೇಕಾದ ಅಗತ್ಯ ಬರುತ್ತದೆಂದರೆ ಅದನ್ನು ಇಲ್ಲಿ ತೋರಿಸಿರಬಹುದು. 

ಕಥೆಯನ್ನು ತುಂಬಾ ಭೀಭತ್ಸವಾಗಿ ಬರೆಯಬಾರದು. "ಅಲ್ಲಿ ಸುಮಾರು ಆರು ಲೀಟರ್ ರಕ್ತ ಚೆಲ್ಲಿತ್ತು. ಎರಡು ಲೀಟರ್ ಕೆಂಪಗೆ ಹಾಸಿಗೆ ಮೇಲೂ, ಉಳಿದ ನಾಲ್ಕು ಲೀಟರ್ ನೆಲದಲ್ಲೂ ಹೊಳೆಯಂತೆ ಹರಿದು ಹೋಗಿತ್ತು. ಹೃದಯ ಕಿತ್ತು ಹೊರಗೆ ಬಿದ್ದು ವಿಲ ವಿಲ ಒದ್ದಾಡುತ್ತಿತ್ತು. ಒಂದು ಕಾಲು ಸುಟ್ಟು ದೂರ ಬಿದ್ದಿತ್ತು. ಅದರ ಮೇಲೆ ನೊಣಗಳು ಹಾರಾಡುತ್ತಿದ್ದವು." ಎಂಬಂತೆ ವರ್ಣಿಸಬಾರದು. ಇಂತಹ ಕಥೆಗಳನ್ನು ಓದಿ ಓದುಗರು ಮೂರ್ಛೆ ಹೋದರೂ ಹೋಗಬಹುದು.

ಆಹ್ಲಾದತೆ ಮತ್ತು ಕುತೂಹಲ

ಓದುತ್ತಾ ಹೋದಂತೆ ಓದುಗ ಆಹ್ಲಾದಗೊಳ್ಳಬೇಕು ಮತ್ತು ಮುಂದೇನು ಎಂದು ಕುತೂಹಲಗೊಳ್ಳಬೇಕು. ಪತ್ತೇದಾರಿ ಕಥೆಗಳಲ್ಲಿ ಶೃಂಗಾರ ಸಾಮಾನ್ಯ. ಅದನ್ನು ಅಗತ್ಯಕ್ಕೆ ತಕ್ಕಂತೆ, ಅಧಿಕವೂ ಆಗದಂತೆ ಬಳಸಿಕೊಳ್ಳುವ ಜಾಣ್ಮೆ ನಮಗಿರಬೇಕು. ಅಗತ್ಯಕ್ಕೆ ತಕ್ಕಂತೆ ಹೆಣ್ಣಿನ ಸೌಂದರ್ಯವನ್ನು ವರ್ಣಿಸಿ ಓದುಗರನ್ನು ಖುಷಿ ಪಡಿಸುವುದನ್ನೂ ತಿಳಿದಿರಬೇಕು. ಇನ್ನೊಮ್ಮೆ ಈ ಲೇಖನದ ಎರಡನೇ ಪ್ಯಾರಾದಲ್ಲಿ ನೀಡಿರುವ ಉದಾಹರಣೆಯ ಕಥೆ ಓದಿ ನೋಡಿ.. ಅಲ್ಲಿ ಅತಿರೇಕವಾಗದಂತೆ ಶೃಂಗಾರವನ್ನು ನೀಡಲಾಗಿದೆ. ಓದುಗರು ಶೃಂಗಾರದ ರಸಾನುಭವ ಪಡೆಯುತ್ತಿರುವಾಗಲೇ ಏಕಾಏಕಿ ಆತಂಕದ ವಾತಾವರಣ ಸೃಷ್ಟಿಸಲಾಗಿದೆ. ಇದು ಓದುಗರನ್ನು ಹಿಡಿದಿಡುವ ಉಪಾಯ. ಶೃಂಗಾರದ ಹೆಸರಲ್ಲಿ ಹೆಚ್ಚು ಅತಿರೇಕವಾಗಿ ಬರೆಯಬಾರದು. ಏಕೆಂದರೆ ಪತ್ತೇದಾರಿ ಕಥೆಗಳಿಗೆ ಮಹಿಳಾ ಓದುಗರೂ ಹೆಚ್ಚಾಗೇ ಇದ್ದಾರೆ. ಅವರು ಪುಸ್ತಕವನ್ನು ಕೆಳಗಿಡುವ ಅಪಾಯವಿರುತ್ತದೆ. ಆದರೆ ಆಹ್ಲಾದಕರ ಶೃಂಗಾರವನ್ನು ಎಲ್ಲರೂ ಇಷ್ಟ ಪಡುತ್ತಾರೆ. ಪತ್ತೇದಾರಿ ಕಥೆಗಳಿಗೆ ಚೂರು ಮಾತ್ರ ಹೆಚ್ಚು ಶೃಂಗಾರ ಸೇರಿಸಿದರೆ ತಪ್ಪೇನಿಲ್ಲ.
ನಿತ್ಯಾಳ ಹಿಂದೆ ಏನು ಬೇಕಾದರೂ ಇರಬಹುದು. ಒಂದು ಹೆಣ, ಅಪರಿಚಿತ ವ್ಯಕ್ತಿ, ಯಾರದೋ ಕೈ, ದೆವ್ವ, ರಕ್ತ... ಏನಾದರೂ. ಅಂದರೆ ಆತಂಕ, ಕುತೂಹಲ, ಭಯಾನಕ ಹಾಗೂ ಶೃಂಗಾರಮಯ ದೃಶ್ಯಗಳನ್ನು ಒಂದಕ್ಕೊಂದು ಪೋಣಿಸುತ್ತಾ ಹೋಗುವುದೇ ಪತ್ತೇದಾರಿ ಕಥೆಯ ತಿರುಳು.

ಹೆಚ್ಚು ಹೆಚ್ಚು ಓದಿ ತಿಳಿದುಕೊಳ್ಳಿ

ಪತ್ತೇದಾರಿ ಕಥೆಗಳನ್ನು ಬರೆಯಬೇಕೆಂದರೆ ನೀವು ಹೆಚ್ಚು ಹೆಚ್ಚು ಅಂತಹ ಕಥೆ ಕಾದಂಬರಿಗಳನ್ನು ಓದಲೇಬೇಕು. ನಮ್ಮ ಕನ್ನಡದ ಎನ್. ನರಸಿಂಹಯ್ಯ, ಕೌಂಡಿನ್ಯ, ಸಾಸ್ಕಾರ್ತಿ, ಸಿ.ಎಸ್. ರಾವ್, ಜಿಂದೆ ನಂಜುಂಡಸ್ವಾಮಿ, ಜಿ. ಪ್ರಕಾಶ್ ಮುಂತಾದ ಅನೇಕ ಕಥೆಗಾರರು ಪತ್ತೆದಾರಿಕೆಯಲ್ಲೇ ಹೆಸರು ಮಾಡಿರುವವರು. ಷೆರ್ಲಾಕ್ಸ್ ಹೋಮ್ಸ್  ಪಾತ್ರವನ್ನು ಸೃಷ್ಟಿಸಿದ ಸರ್. ಅರ್ಥರ್ ಕಾನನ್ ಡೈಲ್ ಪ್ರಪಂಚಕ್ಕೇ ಚಿರ ಪರಿಚಿತ. ಇವರ ಕಥೆ ಕಾದಂಬರಿಗಳನ್ನು ಓದಬೇಕು. ಹಾಗೆಯೇ ಅಪರಾಧ ಜಗತ್ತಿನ ಅನೇಕ ವಿಷಯಗಳನ್ನು ತಿಳಿದುಕೊಂಡಿರಬೇಕು. ಐ.ಪಿ.ಸಿ. ಸೆಕ್ಷನ್ 302 ಕೊಲೆಗೆ ಸಂಬಂಧಿಸಿದ್ದು ಎಂಬಂತಹ ತಿಳುವಳಿಕೆ ಇರಬೇಕು. ಪೋಸ್ಟ್ ಮಾರ್ಟಮ್ ರಿಪೋರ್ಟ್‌ಗೂ ಪೋರೆನ್ಸಿಕ್ ಲ್ಯಾಬ್ ರಿಪೋರ್ಟ್‌ಗೂ ಇರುವ ವ್ಯತ್ಯಾಸ ಅರಿತಿರಬೇಕು. ಒಬ್ಬ ವ್ಯಕ್ತಿಯ ಸಾವು ವಿಷದಿಂದ ಆಗಿದೆ ಎಂದು ಪೋಸ್ಟ್ ಮಾರ್ಟಮ್ ರಿಪೋರ್ಟ್‌ ಹೇಳಿದರೆ, ಅದು ಯಾವ ವಿಷ, ಎಷ್ಟು ಪ್ರಮಾಣದಿಂದ ಎಂದು ಹೇಳಲು ಪೊರೆನ್ಸಿಕ್ ಲ್ಯಾಬ್ ರಿಪೋರ್ಟ್‌ ಬೇಕಾಗುತ್ತದೆ. ಇಂತಹ ವಿಷಯಗಳ ಅರಿವು ನಮಗಿರಬೇಕು.
ಹಾಗೆಯೇ ಸ್ಥಳಗಳ ಪರಿಚಯವೂ ಇರಬೇಕು. ಕೆಲವೊಂದು ಸ್ಥಳಗಳನ್ನು ನೇರವಾಗಿ ನೋಡದೇ ಹೋದರೂ ಕೇಳಿಯಾದರೂ, ಓದಿಯಾದರೂ, ಟಿವಿಯಲ್ಲಿ ನೋಡಿಯಾದರೂ ತಿಳಿದುಕೊಂಡಿದ್ದರೇನೇ ಆ ಸ್ಥಳದ ಬಗ್ಗೆ ಬರೆಯಬೇಕು. ಅದಿಲ್ಲದೆ ನೀವೊಂದು ದೇಶದ ಕಥೆಯನ್ನು ಬರೆಯುತ್ತಾ ಅಲ್ಲಿ ರೈಲಿನಲ್ಲಿ ನಡೆವ ಒಂದು ಘಟನೆ ಬರೆದಿರೆಂದು ಇಟ್ಟುಕೊಳ್ಳಿ. ಅಲ್ಲಿ ಅಕಸ್ಮಾತ್ ರೈಲ್ವೆ ಹಳಿಯೇ ಇಲ್ಲದೇ ಹೋದರೆ ?  ಈ ರೀತಿ ತಪ್ಪಾಗಿ ಬರೆದಿರುವುದು ಓದುಗರಿಗೆ ಗೊತ್ತಾದರೆ ಇವನ್ಯಾರೋ ಪ್ರಪಂಚ ಜ್ಞಾನವಿಲ್ಲದವ ಎಂದುಕೊಂಡು ಬಿಡುತ್ತಾರೆ. ನಾನೊಂದು ಕಾದಂಬರಿಯಲ್ಲಿ ಸಂಜೆ ಗಲ್ಲಿಗೇರಿಸಿದರು ಎಂದು ಬರೆದು ಬಿಟ್ಟಿದ್ದೆ. ನನಗೆ ನಂತರವೇ ತಿಳೀದಿದ್ದು ಸಂಜೆ ಸಮಯ ಯಾರನ್ನೂ ಗಲ್ಲಿಗೆ ಹಾಕುವುದಿಲ್ಲ, ಮುಂಜಾನೆ ಸೂರ್ಯ ಮೂಡುವ ಮುನ್ನ ಅದನ್ನು ಮಾಡುತ್ತಾರೆ ಎಂದು. ವಿಷಯ ಜ್ಞಾನವಿಲ್ಲದೇ ಬರೆಯಲು ಹೋದರೆ ಇಂತಹ ಎಡವಟ್ಟುಗಳಾಗಿ ಬಿಡುತ್ತವೆ. ಲೇಖಕರು ಆದಷ್ಟೂ ಜಾಗೃತೆ ವಹಿಸಬೇಕು.

ಒಬ್ಬ ಕಥಾ ನಾಯಕನನ್ನು ಸೃಷ್ಟಿಸಿ

ಇದು ಪತ್ತೇದಾರಿ ಕತೆಗಾರರಿಗೆ ತುಂಬಾ ಮುಖ್ಯ. ಷೆರ್ಲಾಕ್ಸ್ ಹೋಮ್ಸ್ ಎಂದರೆ ಆತ ಕಾನನ್ ಡೈಲ್ ಅವರ ಕಥಾನಾಯಕ ಎಂದು ಎಲ್ಲರಿಗೂ ಗೊತ್ತು. ಅದೇ ರೀತಿ ಎನ್. ನರಸಿಂಹಯ್ಯನವರ ಕಥಾನಾಯಕ ಮೃತ್ಯಂಜಯ ಮತ್ತು ಗಾಳೀರಾಯ. ಪತ್ತೇದಾರಿ ಕಥೆ ಓದುವ ಅಭ್ಯಾಸ ಇರುವವರಿಗೆ ಜಿಂಕೆ ಅಂದರೆ ಜಿ. ಪ್ರಕಾಶ್ ನೆನಪಾಗುತ್ತಾರೆ. ಹಾಗೆಯೇ ನಿಮ್ಮದೇ ಒಂದು ನಾಯಕ ಪಾತ್ರವನ್ನು ಸೃಷ್ಟಿಸಿಕೊಳ್ಳುವುದು ಉತ್ತಮ. ಆ ಮೂಲಕ ಓದುಗರನ್ನು ನಿಮ್ಮ ಕಥೆಗಳಿಗಾಗಿ ಹಿಡಿದಿಡಬಹುದು. 

ಮೊದಲೇ ನಿರ್ಧರಿಸಿಕೊಳ್ಳಿ ಕ್ಲೈಮ್ಯಾಕ್ಸ್ !

ಇದು ಅತ್ಯಂತ ಮುಖ್ಯ. ನೀವು ಎಷ್ಟೇ ಚೆನ್ನಾಗಿ ಪ್ರಾರಂಭಿಸಿದರೂ, ಎಷ್ಟೇ ಚೆನ್ನಾಗಿ ನಿರೂಪಿಸಿದರೂ ಓದುಗರ ಮನಸಲ್ಲಿ ಕಥೆ ನಿಲ್ಲಬೇಕೆಂದರೆ ಕ್ಲೈಮ್ಯಾಕ್ಸ್ ಅದ್ಬುತವಾಗಿರಲೇ ಬೇಕು. ಯಾವುದನ್ನೂ ಗೊಂದಲಗೊಳಿಸುವಂತಿಲ್ಲ. ಏನೇ ಗೊಂದಲಗಳಿದ್ದರೂ ಅದನ್ನು ಕ್ಲೈಮ್ಯಾಕ್ಸ್ನಲ್ಲಿ ಪರಿಹರಿಸಲೇ ಬೇಕು. ಆರೇಳು ಪುಟಗಳ ಕಥೆ ಮುಗಿದಾಗ ಓದುಗ ನಿಟ್ಟುಸಿರಿಡುವಂತೆ ಇರಬೇಕು.
ನೀವೊಂದು ಕೊಲೆಯ ಕಥೆಯನ್ನು ಬರೆದಿದ್ದರೆ, ಅದು ಹೇಗೆ ? ಯಾಕೆ? ಯಾರಿಂದ ನಡೆಯಿತೆಂಬ ವಿಷಯ ನಿಮಗೆ ಸ್ಪಷ್ಟವಾಗಿ ತಿಳಿದಿರಲೇ ಬೇಕು. ಇಲ್ಲವೆಂದರೆ ಕ್ಲೈಮ್ಯಾಕ್ಸ್ನಲ್ಲಿ ಸೋಲು ಅನುಭವಿಸಬೇಕಾಗುತ್ತದೆ. "ನಾನೊಂದು ಪತ್ತೇದಾರಿ ಕಥೆಯನ್ನು ಅರ್ಧ ಬರೆದಿದ್ದೇನೆ. ಹೇಗೆ ಕೊನೆ ಮಾಡಬೇಕೆಂಬುದೇ ಗೊತ್ತಾಗುತ್ತಿಲ್ಲ" ಎಂದು ಕೆಲವು ಹೊಸ ಕತೆಗಾರರು ಹೇಳುವುದನ್ನು ಕೇಳಿದ್ದೇನೆ. ಇವರು ಅದನ್ನು ಕೊನೆ ಮಾಡಲು ಸಾಧ್ಯವೇ ಇಲ್ಲದಂತೆ ಪ್ರಾರಂಭಿಸಿ ಮುಂದುವರಿದಿದ್ದರೆ ಹೇಗೆ ತಾನೇ ಕೊನೆ ಹಾಡಲು ಸಾಧ್ಯ ?

ಒಬ್ಬ ಕೊಲೆಗಾರ ಕೊನೆಯಲ್ಲಿ ಹೇಗೆ ಸಿಕ್ಕಿ ಹಾಕಿಕೊಳ್ಳುತ್ತಾನೆ ಎಂಬುದನ್ನು ಸರಿಯಾಗಿ ನಿರ್ಧಾರ ಮಾಡಿಕೊಳ್ಳಿ. ಅದಕ್ಕೆ ತಕ್ಕಂತೆ ವಿವರಣೆ ನೀಡುತ್ತಾ ಹೋಗಿ. ಆಗ ಕ್ಲೈಮ್ಯಾಕ್ಸ್ನಲ್ಲಿ ಯಾವುದೇ ಗೊಂದಲ ಆಗುವುದಿಲ್ಲ. ಅದಿಲ್ಲವಾದರೆ ಕಥೆಯನ್ನು ಹೇಗೆ ಹೇಗೋ ನೀರಸವಾಗಿ ಮುಗಿಸಬೇಕಾಗುತ್ತದೆ.

ಪರಿಶೀಲನೆ

ಕಥೆಯೊಂದನ್ನು ಬರೆದಾದ ನಂತರ ಅದನ್ನು ನೀವೇ ಒಂದೆರಡು ಬಾರಿ ಓದಿ ನೋಡಿ. ಪ್ರತಿ ವಿಷಯವನ್ನೂ ಪರಿಶೀಲಿಸಿ. ಬರೆದಿರುವುದು ಏನಾದರೂ ತಪ್ಪಿದೆಯೇ ನೋಡಿ ಸರಿ ಪಡಿಸಿ. ಪತ್ತೇದಾರಿ ಕಥೆ ಓದುವಂತಹ ನಿಮ್ಮ ಸ್ನೇಹಿತರಿಗೆ ಕೊಟ್ಟು ಓದಿಸಿ. ಅವರು ಯಾವುದಾದರೂ ಸಂದೇಹವನ್ನು ವ್ಯಕ್ತ ಪಡಿಸಿದರೆ ಅದನ್ನು ಕಥೆಯಲ್ಲಿ ಯಾವ ಭಾಗದಲ್ಲಿ ಪರಿಹರಿಸಬಹುದೋ ಅಲ್ಲಿ ಒಂದೆರಡು ವಾಕ್ಯಗಳನ್ನು ಅತವಾ ಪ್ಯಾರಾವೊಂದನ್ನು ಸೇರಿಸುವ ಮೂಲಕ ಪರಿಹರಿಸಿ. ಪ್ರಾರಂಭದಲ್ಲಿ ಓದುಗರಲ್ಲಿ ನೀವು ಉಂಟು ಮಾಡಿದ ಗೊಂದಲ, ಅನುಮಾನಗಳನ್ನೆಲ್ಲ ಕ್ಲೈಮ್ಯಾಕ್ಸ್ನಲ್ಲಿ ಪರಿಹರಿಸಲಾಗಿದೆಯಾ ನೋಡಿ. ಒಂದು ಚಿಕ್ಕ ಅನುಮಾನವೂ ಉಳಿಯಬಾರದು. ಹಾಗೆ ನೋಡಿಕೊಳ್ಳಿ.

ಇನ್ನೇಕೆ ತಡ, ಆಸಕ್ತಿ ಇದ್ದರೆ ಈಗಲೇ ಒಂದು ಚಿಕ್ಕ ಕಥೆ ಪತ್ತೇದಾರಿ ಕಥೆ ಬರೆದು ಯಾವುದಾದರೂ ಪತ್ರಿಕೆಗೆ ಕಳಿಸಿ. ಕಥೆ ಪುಟ್ಟದಾಗಿ, ಕುತೂಹಲ ಭರಿತವಾಗಿ ಇದ್ದರೆ ಸಂಪಾದಕರು ಕಂಡಿತಾ ಪ್ರಕಟಿಸುತ್ತಾರೆ. 
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…

ಸ್ನೇಹದ ಸವಿ ಜೇನು !

ಮನದ ಹರುಷಕೆ ಹೊಸ ರಾಗ ಹೊಸೆದೆ
ಮನಸನಿಟ್ಟು ಕನಸ ಕಟ್ಟಿದೆ
ಮುಂಗುರುಳಲ್ಲಿ ಮೋಹ ತುಂಬಿ ನಕ್ಕೆ
ಮಾಡಿಕೊಳ್ಳಲಿಲ್ಲ ಸ್ನೇಹಕ್ಕೆ ಕೊಂಚವೂ ಧಕ್ಕೆ
ಮಮತೆಯ ನಲ್ನುಡಿಯೇ ನಿನ್ನಾಭರಣ
ಮಾತೆಯ ಮಡಿಲಂತೆ ನಿನ್ನಂತಕರಣ
ಮಡಿಲಲ್ಲಿ ಮುದುಡುವ ಮಗುವಿನಾ ಪರಿ
ಅಪ್ಪುಗೆಯಲ್ಲಿ ಗೆಳೆತನದ ತಿಳಿ ನೀರ ಝರಿ
ಮುದ್ದಿಸಿ ಹಣೆಗೆ ಮುತ್ತಿಟ್ಟ ಗಳಿಗೆ
ನೀ ನೆನೆದಿದ್ದೆ ನನ್ನ ಸ್ನೇಹ ಜಡಿ ಮಳೆಗೆ
ಗೆಳೆತನದ ಮಳೆಗಾಲ ಮುಗಿಯಲೇ ಬೇಕು
ಅಗಲುವಿಕೆಯ ಬಿರು ಬೇಸಗೆ ಸಹಿಸಲೇ ಬೇಕು
ಅಕ್ಕರೆಯ ಸವಿ ನೆನಪು ಮೆಲುಕುತ್ತಿರೋಣ
ಆತ್ಮೀಯ ಆರ್ಧತೆ ಸಲಹುತ್ತಿರೋಣ