ವಿಷಯಕ್ಕೆ ಹೋಗಿ

ಭಾರತ ಹಾಕಿ ತಂಡದ ಯಶೋಗಾಥೆ - 2


1928ರಲ್ಲಿ ಮೊದಲ ಬಾರಿಗೆ ಆಮ್ಸಟರ್ ಡಾಮ್ ಒಲಂಪಿಕ್ ಗೆ ಭಾರತದ ಹಾಕಿ ತಂಡ ಹೊರಡುವ ಹೊತ್ತಿಗೆ ದೇಶದಲ್ಲೇನೂ ಹಾಕಿ ಪ್ರಚಲಿತವಾಗಿರಲಿಲ್ಲ. ಹಾಗೆ ನೋಡಿದರೆ ಜನರಿಗೆ ಈಗ ಹಾಕಿಯ ಬಗ್ಗೆ ಇರುವ ಪರಿಚಯವಾಗಲಿ ಆಸಕ್ತಿಯಾಗಲಿ ಆಗ ಇರಲೇ ಇಲ್ಲ. ಪತ್ರಿಕೆಗಳೂ ಇಷ್ಟೊಂದು ಇರಲಿಲ್ಲ. ಇದ್ದಂತಹ ಪತ್ರಿಕೆಗಳೆಲ್ಲಾ ಸ್ವಾತಂತ್ರ್ಯ ಹೋರಾಟದ ವಿಷಯಗಳಿಗೇ ಮೀಸಲಾಗಿದ್ದವು. ಒಲಂಪಿಕ್ ಅಂದರೇನೆಂದೆ ತಿಳಿಯದ ಜನರಿಗೆ ಅಲ್ಲಿ ಹೋಗಿ ಭಾರತದವರು ಹಾಕಿ ಆಡುತ್ತಾರೆಂಬ ವಿಷಯ ತಿಳಿಸುವ ದರ್ದು ಆಗ ಪತ್ರಿಕೆಗಳಿಗೂ ಇರಲಿಲ್ಲ. ಒಂದು ವೇಳೆ ಯಾವುದಾದರೊಂದು ಪತ್ರಿಕೆ ಪ್ರಕಟಿಸಿದರೂ ಜನರಿಗದು ಬೇಕೂ ಆಗಿರಲಿಲ್ಲ. ಕೆಲವು ಪತ್ರಿಕೆಗಳಲ್ಲಿ ಮೂಲೆಯ ಸುದ್ದಿಯಾಗಿ ಅದು ಪ್ರಕಟವಾಗಿತ್ತಷ್ಟೇ. ಆ ವರ್ಷದ ಭಾರತದಿಂದ ಬೇರಾವ ಸ್ಪರ್ಧಿಗಳೂ ಒಲಂಪಿಕ್‌ಗೆ ಭಾಗವಹಿಸಲು ಹೊರಡಲಿಲ್ಲ. ಹೊರಟದ್ದು ದ್ಯಾನ್‌ಚಂದ್ ನೇತೃತ್ವದ ಹಾಕಿ ತಂಡವೊಂದೇ. ಅಂದು ಮುಂಬೈ ಬಂದರಿನಲ್ಲಿ ಅಮ್ಸರ್‌ಡಾಮ್‌ಗೆ ಹೊರಡಲು ಹಡಗನ್ನೇರಿದ ಭಾರತದ ಹಾಕಿ ತಂಡವನ್ನು ಬೀಳ್ಕೊಡಲು ಅಲ್ಲಿದ್ದುದು ಮೂರೇ ಜನ! ಹಾಕಿ ಫೆಡರೇಷನ್‌ನ ಅಧ್ಯಕ್ಷ, ಕಾರ್ಯದರ್ಶಿ, ಹಾಗೂ ಒಬ್ಬ ಪತ್ರಕರ್ತ. ಆ ಪತ್ರಕರ್ತನಿಲ್ಲದೇ ಹೋಗಿದ್ದರೆ ಅಲ್ಲಿ ಮೂರು ಜನರಾದರೂ ಇದ್ದರು ಎಂಬ ವಿಷಯವೂ ತಿಳಿಯುತ್ತಿರಲಿಲ್ಲ! ಹೀಗೆ ಹೊರಟಿತ್ತು ನಮ್ಮ ತಂಡ. ಅದರ ನಂತರದ ವಿಜಯೋತ್ಸವವನ್ನು ಹಿಂದಿನ ಸಂಚಿಕೆಯಲ್ಲೇ ಓದಿದ್ದೀರಿ.

ನಂತರದ ಸತತ ಆರು ವಿಜಯಗಳ ನಂತರ ಭಾರತದ ಹಾಕಿಯ ಪ್ರಕಾಶ ಕುಂದಿತು. 1956ರಲ್ಲಿ ಪಾಕಿಸ್ತಾನದ ವಿರುದ್ಧ ಕೇವಲ ಒಂದು ಗೋಲು ಬಾರಿಸಿದರೂ ಚಿನ್ನವನ್ನಂತೂ ಗೆದ್ದುಕೊಂಡರು. ಥೇಟು ಯುದ್ಧ ಭೂಮಿಯಂತೆಯೇ ಆಗಿ ಹೋಗಿತ್ತು ಆ ಪಂದ್ಯ. ಆಟ ಮುಗಿದು ಭಾರತ ಪದಕ ಹೊರುತ್ತಿರುವಂತೆಯೇ ಪಾಕಿಸ್ತಾನಿ ತಂಡದ ಮ್ಯಾನೇಜರ್ ರಿಯಾಜುದ್ದೀನ್ ಅಹ್ಮದ್ ಎಂಬಾತ ``ನಮ್ಮೀರ್ವರ ಮೊದಲ ಆಟದಲ್ಲಿ ಭಾರತವೇನೋ ಗೆದ್ದಿದೆ. ಆದರೆ ಮುಂದಿನ ಒಲಂಪಿಕ್‌ನ ಫಲಿತಾಂಶವನ್ನು ಬದಲಿಸಿ ಭಾರತದ ಬಂಗಾರ ಬೇಟೆಗೆ ಅಂತಿಮ ಹಾಡುತ್ತೇವೆ`` ಎಂದುಬಿಟ್ಟ. ಅದಕ್ಕೆ ತಕ್ಕಂತೆ ಅವರು ತಮ್ಮ ತಂಡವನ್ನು ಸತತ ನಾಲ್ಕು ವರ್ಷ ಸಾಣೆ ಹಿಡಿದರು.

ಆದರೆ ಭಾರತದಲ್ಲಿ ಸ್ವಾತಂತ್ರ್ಯ ಸಿಕ್ಕಿದ್ದರಿಂದ ಭ್ರಷ್ಟಾಚಾರ ಅದೀಗ ಹೆಡೆಯೆತ್ತ ತೊಡಗಿತ್ತು. `ರಾಜಕೀಯ ತನ್ನ ಕುಯುಕ್ತಿಯನ್ನು ಎಲ್ಲೆಡೆಯೂ ಹರಿಬಿಡಲಾರಂಭಿಸಿತ್ತು. ಅದರ ಕೆಟ್ಟ ನಾಲಗೆ ಹಾಕಿ ಫೆಡರೇಷನ್‌ಗೂ ಚಾಚಿಕೊಂಡಿತು. ಪ್ರತಿಭಾವಂತ ಆಟಗಾರರಿಗೆ ಕಿರಿಕಿರಿ ಕೊಟ್ಟು ಮೂಲೆ ಗುಂಪಾಗಿಸುವ ಯತ್ನ, ತಮಗೆ ಬೇಕಾದವರನ್ನು ತುರುಕುವ ಯತ್ನಗಳೆಲ್ಲಾ ನಡೆಯತೊಡಗಿದ್ದವು. ಹಾಗಾಗಿ ಸೆಡ್ಡು ಹೊಡೆದು ಹೋಗಿದ್ದ ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವ ಮುಂದಾಲೋಚನೆಯನ್ನು ಅಥವಾ ಪ್ರಯತ್ನವನ್ನು ಭಾರತ ತಂಡ ಮಾಡಲಾಗಲಿಲ್ಲ. 

ಆಗ ಬಂದೇ ಹೋಯ್ತು ೧೯೬೦ ರ ಒಲಂಪಿಕ್ 


ಆ ವರ್ಷ ರೋಮ್‌ನಲ್ಲಿ ಅದು ನಡೆಯಿತು. ತಲೆಯನ್ನು ಒತ್ತೆಯಿಟ್ಟಾದರೂ ಚಿನ್ನ ಗೆಲ್ಲಬೇಕೆಂಬ ನಿರ್ಧಾರದೊಂದಿಗೇ ಬಂದಿದ್ದರು ಪಾಕಿಸ್ತಾನಿಗಳು. ಆದರೆ ಭಾರತ ತಂಡ ಸೊರಗಿ ಹೋಗಿತ್ತು. ನಮ್ಮ ಆಟಗಾರರಿಗಿದ್ದ ಒಂದೇ ಕೆಚ್ಚೆಂದರೆ `ಪಾಕಿಸ್ತಾನದೊಂದಿಗೆ ಸೋಲಬಾರದೆಂದು!' ಆದರೂ ಎರಡೂ ತಂಡಗಳೆದುರು ಉಳಿದ ತಂಡಗಳೆಲ್ಲಾ ಸೋತು ಸುಣ್ಣವಾದವು. ಫೈನಲ್‌ಗೆ ಬಂದಿದ್ದು ಭಾರತ - ಪಾಕಿಸ್ತಾನಗಳೇ ! 

1956ರ ಮೇಲ್ಬೋರ್ನ್‌ ಒಲಂಪಿಕ್‌ನ ಅಂತಿಮ ಪಂದ್ಯದಲ್ಲಿ ಯಾವ ರೀತಿ ಸೆಣೆಸಾಟ ನಡೆಯಿತೋ ಹಾಗೆಯೇ ಇದೂ ಸಹ ನಡೆಯಿತು. ಆದರೆ ಮೇಲಧಿಕಾರಿಗಳ ನೀತಿ ನಿಯಮಗಳಿಂದ ಬೇಸತ್ತಿದ್ದ ಆಟಗಾರರಿಗೆ `ಎದುರಲ್ಲಿರುವುದು ಶತ್ರು ದೇಶ, ಇದನ್ನು ಗೆದ್ದೇ ತೀರಬೇಕು' ಎಂಬ ಅಕ್ರೋಶವನ್ನುಳಿದು ಬೇರೇನೂ ಇರಲಿಲ್ಲ. ಅವರೂ ಸಾಧ್ಯವಾದಷ್ಟು ಶ್ರಮಿಸಿ ಆಡಿದರು. ಆಟದ ಕೊನೆಯ ಘಟ್ಟದವರೆಗೂ ಯಾವ ತಂಡಕ್ಕೂ ಗೋಲು ಬಂದಿರಲಿಲ್ಲ. ಆದರೆ ಕೊನೆಯ ಹಂತದಲ್ಲಿ ಅದೃಷ್ಟ ಪಾಕಿಸ್ತಾನಕ್ಕೇ ಒಲಿಯಿತು. ಅವರೊಂದು ಗೋಲು ಹಾಕಿಯೇ ಬಿಟ್ಟರು. ಚಿನ್ನ ಅವರ ಪಾಲಾದರೆ ಭಾರತಕ್ಕೆ ಬೆಳ್ಳಿ ಮಾತ್ರ ಉಳಿಯಿತು! ಸತತವಾಗಿ ಇಪ್ಪತ್ತನಾಲ್ಕು ಪಂದ್ಯಗಳಲ್ಲಿ ಗೆದ್ದು ಆರು ಚಿನ್ನದ ಪದಕ ಪಡೆದಿದ್ದ ಭಾರತಕ್ಕೆ ಮೊದಲ ಬಾರಿಗೆ ಮುಖಭಂಗ ಉಂಟಾಯ್ತು! ಅದೂ ವಿರೋಧಿ ರಾಷ್ಟ್ರ ಪಾಕಿಸ್ತಾನದೆದುರಿಗೆ! ಭಾರತದ ಆಟಗಾರರು ತಲೆ ಎತ್ತದಂತಾದರು.

ಅಂದು ಭಾರತ ಸೋತಿತು ಎಂಬ ಸುದ್ದಿಯನ್ನು ಪ್ರಪಂಚದಾದ್ಯಂತ ಹಾಕಿ ಬಲ್ಲ ಯಾರೂ ನಂಬದಾದರು! ಎಷ್ಟೋ ಜನರಿಗದು ಕನಸೋ ನನಸೋ ತಿಳಿಯದ ಗೊಂದಲವಾಗಿತ್ತು!
ಕೊನೆಗೂ ಪಾಕಿಸ್ತಾನ ತಾನು ಹೇಳಿದಂತೆಯೇ ಸೇಡು ತೀರಿಸಿಕೊಂಡಿತ್ತು. ಅಂದಿನ ಸೋಲನ್ನು ಭಾರತದ ಆಟಗಾರರಿಂದ ಜೀರ್ಣಿಸಿಕೊಳ್ಳುವುದೇ ಕಷ್ಟವಾಯ್ತು. ಅದರಿಂದ ಅವರು ಕಂಗೆಟ್ಟು ಹೋದರಲ್ಲದೇ ಅಪರಿಮಿತ ಅವಮಾನ ಅವರನ್ನು ಕಾಡಿತು. ಮತ್ತೆ ನಾಲ್ಕು ವರ್ಷ ವಿಪರೀತ ಶ್ರಮಿಸಿದ ಅವರು ಅದರ ಮುಂದಿನ ಒಲಂಪಿಕ್‌ನಲ್ಲಿ ಅಂತೂ ಪಾಕಿಸ್ತಾನದ ವಿರುದ್ಧ ಗೆದ್ದು ಸೇಡು ತೀರಿಸಿಕೊಂಡರು.


1964ರ ಒಲಂಪಿಕ್‌ ಹಾಕಿಯ ಅಂತಿಮ ಪಂದ್ಯಕ್ಕೆ ಬೇರೆಲ್ಲಾ ತಂಡಗಳನ್ನೂ ಬಗ್ಗು ಬಡಿದು ಭಾರತ ಪಾಕಿಸ್ತಾನಗಳೇ ಬಂದವು. ಅದು ಈ ತಂಡಗಳ ನಡುವಿನ ಮೂರನೇ ಪಂದ್ಯ. ಮೊದಲ ಪಂದ್ಯದಲ್ಲಿ ಭಾರತ ಒಂದು ಗೋಲು ಬಾರಿಸಿ ಚಿನ್ನ ಪಡೆದಿದ್ದರೆ, ಎರಡನೇ ಪಂದ್ಯದಲ್ಲಿ ಕೂಡಾ ಒಂದೇ ಗೋಲು ಬಾರಿಸಿದ ಪಾಕ್ ಚಿನ್ನ ಪಡೆದಿತ್ತು. ಈ ಆಟ ಇನ್ನೊಂದು ಬಗೆಯ ಫೈನಲ್ ಆಗಿ ಪರಿಣಮಿಸಿತು. ಇದೂ ಸಹ ಇನ್ನೊಂದು ಯುದ್ಧದಂತೆಯೇ ನಡೆಯಿತು. ಕೊನೆಗೂ ಒಂದು ಗೋಲು ಗಳಿಸಿದ ಭಾರತ ಹಿಂದಿನ ಸೇಡು ತೀರಿಸಿಕೊಳ್ಳುವುದರೊಂದಿಗೆ ಪಾಕಿಸ್ತಾನವನ್ನು ಸೋಲಿಸಿ ಚಿನ್ನ ಬಾಚಿಕೊಂಡಿತು!

ಚಿನ್ನದ ಭೇಟೆ ಕೊನೆಯಾಯ್ತು

ಅದೇ ಕೊನೆ, ಮತ್ತೆ ಭಾರತ ಲಯ ಕಂಡುಕೊಳ್ಳಲೇ ಇಲ್ಲ. ನಂತರ 1980ರಲ್ಲೇನೋ ಭಾರತಕ್ಕೆ ಚಿನ್ನ ಬಂತು. ಆದರೆ ಆ ಒಲಂಪಿಕ್‌ಗೆ ಪಾಕಿಸ್ತಾನವೂ ಸೇರಿದಂತೆ ಅಮೆರಿಕಾದ ಸ್ನೇಹಿತ ರಾಷ್ಟ್ರಗಳೆಲ್ಲಾ ಬಹಿಷ್ಕಾರ ಹಾಕಿದ್ದವು. ಆ ಕಾರಣಕ್ಕೆ ದುರ್ಬಲ ದೇಶಗಳೊಂದಿಗೆ ಆಡಿದ ಭಾರತ ಚಿನ್ನವನ್ನೇನ್ನೋ ತಂದಿತು. ಅದು ಮೆಚ್ಚುವಂತಹ ಘನ ಕಾರ್ಯವೇನಾಗಿರಲಿಲ್ಲ.

ಏನಾಯ್ತು ಹಾಕಿ ತಂಡಕ್ಕೆ ?

ಇಂತಹ ಅಮೋಘ ಇತಿಹಾಸ ಹೊಂದಿದ ಭಾರತೀಯ ಹಾಕಿ ತಂಡ ಕಳೆದ ಬಾರಿಯ [ 2008 ] ಒಲಂಪಿಕ್‌ಗೆ ಅರ್ಹತೆ ಪಡೆಯಲು ಸಹ ವಿಫಲವಾದುದು ಘೋರ ದುರಂತವೇ ಸೈ. ಇದಕ್ಕೆಲ್ಲಾ ಕಾರಣವೇನು ? ಉತ್ತರ ಅಷ್ಟು ಸರಳವಾದುದಲ್ಲ. ಏಕೆಂದರೆ ಹಾಕಿಯನ್ನು ದುರ್ಬಲಗೊಳಿಸಿದ್ದು ಬರಿಯ ರಾಜಕೀಯ  ಶಕ್ತಿಗಳಷ್ಟೇ ಅಲ್ಲ, ನಾವೂ, ನೀವೂ ಅದರಲ್ಲಿ ಕೈಯಾಡಿಸಿದ್ದೇವೆ! ಕ್ರಿಕೆಟ್ ಎಂದರೆ ಪ್ರಾಣ ಬಿಡುವ ನಾವು ಹಾಕಿಯ ಕತೆ ಏನಾಯ್ತೆಂದೇ ಗಮನಿಸುವುದಿಲ್ಲ. ಕ್ರಿಕೆಟ್‌ನಲ್ಲಿ ಯಾವ್ಯಾವ ದೇಶದ ತಂಡದಲ್ಲಿ ಯಾರು ಯಾರು ಆಟಗಾರರಿದ್ದಾರೆ ಎಂದು ಅವರ ಚರಿತ್ರೆಯನ್ನೆಲ್ಲಾ ಹೇಳುವ ನಮಗೆ ನಮ್ಮದೇ ಹಾಕಿ ತಂಡದಲ್ಲಿ ಇರುವ ಆಟಗಾರರ ಎಲ್ಲರ ಹೆಸರುಗಳೇ ತಿಳಿದಿಲ್ಲ. 

ಮಾಧ್ಯಮದವರಿಗೂ ಹಾಕಿ ಬೇಕಾಗಿಲ್ಲ. ಜಾಹೀರಾತುದಾರರಿಗೆ ಕ್ರಿಕೆಟ್ ಆಟಗಾರರು ಹಾಗೂ ಸಿನೆಮಾ ತಾರೆಯರನ್ನುಳಿದು ಬೇರಾರೂ ಬೇಡ. ನಿನ್ನೆ ಮೊನ್ನೆ ಕ್ರಿಕೆಟ್ ತಂಡದೊಳಕ್ಕೆ ಬಂದವನೊಬ್ಬ ಜಾಹೀರಾತಿಗೆ ಫೋಸ್ ಕೊಟ್ಟು ಕೋಟ್ಯಾಂತರ ರೂಪಾಯಿ ಬಾಚುತ್ತಿದ್ದರೆ ಅತ್ತ ಬಂಗಾರ ಗೆದ್ದು ಬಂದಿದ್ದ ಹಾಕಿ ಆಟಗಾರರು ಇಂದು ಅದನ್ನೇ ಮಾರಿಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ.

ಎಲ್ಲಕ್ಕಿಂತಲೂ ಮೇಲಾಗಿ ಇಂದಿನ `ರಾಜಕೀಯ' ಹಾಕಿಯನ್ನು ಇನ್ನಿಲ್ಲದಂತೆ ಪೀಡಿಸಿದೆ. ಕ್ರಿಕೆಟ್ ತಂಡವನ್ನಾದರೆ ಇಂಡಿಯ ದೇಶವೂ ಗಮನಿಸುತ್ತದಾದ್ದರಿಂದ ಅಲ್ಲಿ ಹೆಚ್ಚಾಗಿ ಗೋಲ್ಮಾಲ್ ಮಾಡಲಾಗದು. ಆದರೆ ಹಾಕಿಯಲ್ಲಿ ಏನು ಬೇಕಾದರೂ ಮಾಡಬಹುದೆಂದು ಅವರು ತಿಳಿದಿದ್ದಾರೆ. ಕೆ.ಪಿ.ಎಸ್.ಗಿಲ್ ನಂತಹ ತಲೆ ಮಾಸಿದ ವ್ಯಕ್ತಿಗಳು, ಎಂದೂ ಹಾಕಿ ಬ್ಯಾಟ್ ಹಿಡಿದು ಗೊತ್ತಿಲ್ಲದವರು ಹಾಕಿ ಫೆಡರೇಷನ್ ಅನ್ನು ಆಕ್ರಮಿಸಿ ತಮ್ಮ ಅಹಂಭಾವವನ್ನು ಮೆರೆಯುತ್ತಿದ್ದಾರೆ. ಧನರಾಜ್ ಪಿಳ್ಳೆಯಂತಹ ಆಟಗಾರ ಬೇರಾವ ತಂಡದಲ್ಲೂ ಇರಲಿಲ್ಲ. ಆದರೆ ಅವರನ್ನೇ ಹೊರ ಹಾಕಿ ಒಲಂಪಿಕ್‌ಗೆ ಕಳಿಸುವ ಪ್ರಯತ್ನ ಸಹ ನಡೆಯಿತು! ಕೊನೆಗೆ ತೀವ್ರ ವಿರೋಧದ ಫಲವಾಗಿ ಅಂತೂ ಅವರನ್ನು ಸೇರಿಸಿಕೊಂಡರು. (ನಾಯಕ ಪದವಿ ನೀಡದೇ) ತಂಡವನ್ನು ಅಥೆನ್ಸ್‌ಗೆ ಕಳಿಸಿದರು. ಇಂತಹ ಕಿರುಕುಳಗಳ ಮಧ್ಯೆ ಯಾವ ಆಟಗಾರ ತಾನೇ ಉತ್ತಮವಾಗಿ ಆಡಲು  ಸಾಧ್ಯ?

ಕುರಿ ಮಂದೆ

ಭಾರತದ ಹಾಕಿ ಫೆಡರೇಷನ್ ಹೇಗಿದೆ ಗೊತ್ತಾ? ಅದಕ್ಕೆ ಒಬ್ಬ ಅಧ್ಯಕ್ಷರಿದ್ದಾರೆ. ಇನ್ನೊಬ್ಬ ಉಪಾಧ್ಯಕ್ಷ, ಏಳು ಜನ ಮುಖ್ಯಸ್ಧರು, ಬಬ್ಬ ಕಾರ್ಯದರ್ಶಿ, ಮೂರು ಜನ ಉಪ ಕಾರ್ಯದರ್ಶಿಗಳು, ಹತ್ತು ಜನ ನಿರ್ವಹಣಾ ಸದಸ್ಯರುಗಳು! ಹೀಗೆ ಒಟ್ಟು ಇಪ್ಪತ್ತನಾಲ್ಕು ಜನ ಪ್ರತಿ ತಿಂಗಳೂ ಲಕ್ಷಾಂತರ ರೂಪಾಯಿ ಸಂಬಳ ಪಡೆದುಕೊಳ್ಳುತ್ತಿದ್ದಾರೆ. ಆದರೆ ನಿಮಗೆ ತಿಳಿದಿರಲಿ,  ಇವರ್ಯಾರೂ ಹಾಕಿ ದಾಂಡು ಹಿಡಿದು ಆಡಿದವರಲ್ಲ! ಒಂದು ಪಂದ್ಯಕ್ಕಾದರೂ ಭಾರತ ತಂಡವನ್ನು ಪ್ರತಿನಿಧಿಸಿದವರಲ್ಲ! ಬಿಸಿಲಿನ  ಮೈದಾನದಲ್ಲಿ ಬೆವರಿಳಿಸಿ ಆಟವಾಡಿದವರಲ್ಲ! 

ಆದರೆ ಭಾರತ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುವುದು ಮಾತ್ರ ಇವರೇ! ಆಟವನ್ನೇ ಆಡಲು ಬಾರದ ದಂಡಪಿಂಡಗಳಿಂದ ಇನ್ನೆಂತಹ ಪ್ರತಿಭಾವಂತರನ್ನು ಆಯ್ಕೆ ಮಾಡಲು ಸಾಧ್ಯ?  ಇವರೆಲ್ಲಾ ಐ.ಎ.ಎಸ್., ಐ.ಪಿ.ಎಸ್. ಓದಿದ ಮಹಾನುಭಾವರು. ಇವರೆದಿರು ಯಾವ ಅಟಗಾರನೂ ಉಸಿರೆತ್ತುವಂತಿಲ್ಲ! ಇದು ನಮ್ಮ ಭಾರತದ ಹಾಕಿಗಾಗಿರುವ ದುರ್ಗತಿ!

ಇದೆಲ್ಲಾ ತೊಲಗಿ ಹಾಕಿ ತಂಡ ಮತ್ತೆ ತನ್ನ ಹಳೆಯ ಬಲದೊಂದಿಗೆ ವಿಜೃಂಭಿಸೀತೇ? ಇತಿಹಾಸದ ಚಿನ್ನದ ಪುಟಗಳು ಮತ್ತೆ ನಮ್ಮೆದುರು ತೆರೆದುಕೊಂಡಾವೆಯೇ? ಅಂತಹುದೊಂದು ಅದೃಷ್ಟ ನಮಗಿರಲೆಂದು ಆಶಿಸೋಣ. ಮೊನ್ನೆ ಮೊನ್ನೆ ನಡೆದ ಒಲಂಪಿಕ್ ಅರ್ಹತಾ ಪಂದ್ಯಾವಳಿಯಲ್ಲಿ ಭಾರತ ಸತತವಾಗಿ ಗೆಲುವು ಸಾಧಿಸಿದೆ. ಆದರೆ ಈ ಪಂದ್ಯಾವಳಿಯಲ್ಲಿ ಆಡಿದ ತಂಡಗಳೆಲ್ಲಾ ಕಳೆದ ಬಾರಿ ಒಲಂಪಿಕ್‌ನಿಂದ ಹೊರಗುಳಿದ ಕಳಪೆ ತಂಡಗಳೇ ಎಂಬುದನ್ನು ಮರೆಯಬಾರದು. ಕಡೇ ಪಕ್ಷ ಅವುಗಳ ಎದುರಾದರೂ ಉತ್ತಮವಾಗಿ ಆಡಿದರಲ್ಲಾ ಎಂದು ಸಮಾಧಾನ ಪಡಬೇಕಷ್ಟೇ. ಕ್ರೀಡಾ ಮಂತ್ರಿ ಮಾಖೇನ್ ಅವರ ಶ್ರಮ ಅಷ್ಟಾದರೂ ಕೆಲಸ ಮಾಡಿರುವಂತಿದೆ. ಒಲಂಪಿಕ್‌ನಲ್ಲಿ ಏನಾಗುತ್ತೋ ನೋಡೋಣ.

ಹಾಕಿಗೊಬ್ಬನೇ ದ್ಯಾನ್‌ಚಂದ್

ಕ್ರಿಕೆಟ್ಗೆ ಸಚಿನ್ ಇದ್ದಂತೆ, ಪುಟ್ಬಾಲ್ಗೆ ಪೀಲೆಯಿದ್ದಂತೆ ಹಾಕಿಗೆ ನಮ್ಮ ದ್ಯಾನ್‌ಚಂದ್. ಅವರನ್ನು  ಮೀರಿದ ಆಟಗಾರ ಪ್ರಪಂಚದಲ್ಲಿ ಇನ್ನೊಬ್ಬನಿಲ್ಲ. ಸತತ ಇಪ್ಪತ್ಮೂರು ವರ್ಷ ಭಾರತ ತಂಡದ ಪರವಾಗಿ ಆಡಿದ ದ್ಯಾನ್‌ಚಂದ್ ಅವರು ಗಳಿಸಿದ್ದು ಒಟ್ಟು ನಾಲ್ಕು ನೂರಕ್ಕೂ ಹೆಚ್ಚು ಗೋಲುಗಳು! ನಂಬಲಿಕ್ಕೇ ಕಷ್ಟವಾದರೂ ಇದು ನಿಜ.

ಇಷ್ಟಾದರೂ ದ್ಯಾನ್‌ಚಂದ್ ಪ್ರತಿಮೆ ಭಾರತದಲ್ಲಿ ಕಡಿಮೆ! ಆದರೆ ವಿಯನ್ನಾದಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ವಿದೇಶಿಯರು ಧ್ಯಾನಿಸಿ ಗೌರವಿಸಿರುವ ದ್ಯಾನ್‌ಚಂದ್ ಬಗ್ಗೆ ನಮ್ಮವರಿಗೇ ಎಷ್ಟೋ ಜನರಿಗೆ ಗೊತ್ತಿಲ್ಲವೆಂದರೆ ಇದಕ್ಕಿಂತ ಖೇದ ಇನ್ನೇನಿದೆ? 
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…