ವಿಷಯಕ್ಕೆ ಹೋಗಿ

ಕನ್ನಡಿಗರಿಗೆ ಏರ್‌ಟೆಲ್ ನಾಮ !ನಾನು ಏಳೆಂಟು ವರ್ಷದಿಂದ ಏರ್‌ಟೆಲ್ ಪ್ರೀಪೇಡ್ ಮೊಬೈಲ್ ಸಿಮ್‌ಕಾರ್ಡ್‌ ಉಪಯೋಗಿಸುತ್ತಿದ್ದೇನೆ. ಮೂರ್ನಾಲ್ಕು ವರ್ಷದಿಂದ ಮತ್ತೊಂದು ಪೋಸ್ಟ್‌ಪೇಡ್ ಸಿಮ್‌ಕಾರ್ಡ್‌ ಉಪಯೋಗಿಸುತ್ತಿದ್ದೇನೆ. ಒಂದು ವರ್ಷದಿಂದ ಏರ್‌ಟೆಲ್ ಡಿಶ್ ಟಿವಿ ಉಪಯೋಗಿಸುತ್ತಿದ್ದೇನೆ. ಆದರೂ ಇವರ ಸೇವೆ ನನಗೆ ತೃಪ್ತಿದಾಯಕವಾಗಿಲ್ಲ.

ಪ್ರಿಪೇಡ್‌ ಸಿಮ್‌ನಲ್ಲಿ ಈ ಹಿಂದೆ ಆಗಾಗ ಇದ್ದಕ್ಕಿದ್ದಂತೆ ದುಡ್ಡು ಕಟಾವು ಆಗುತಿತ್ತು. ಕೇಳಿದರೆ ನೀವು "ಅದನ್ನು ಆಯ್ಕೆ ಮಾಡಿದ್ದೀರಿ, ಇದನ್ನು ಒತ್ತಿದ್ದೀರಿ" ಎಂದು ಕಾಗೆ ಹಾರಿಸುತ್ತಿದ್ದರು. ಒಂದು ಸಲ ಜಗಳ ಮಾಡಿದ ನಂತರ ಕಟಾವು ಆದ ಹಣ ಹಿಂದಿರುಗಿಸಿದ್ದರು. ಯಾವುದಾದರೂ ವಿಷಯವನ್ನು ನೀವು ಪಟ್ಟು ಹಿಡಿದು ಕೇಳಿದರೆ, "ಸರ‍್ ಅರ್ಧ ಗಂಟೆಯಲ್ಲಿ ಸರಿ ಮಾಡಿ ಕೊಡುತ್ತೇವೆ", ಎಂದು ಹೇಳುತ್ತಾರೆ. ಅರ್ಧ ಗಂಟೆ ಕಳೆದ ನಂತರ ಮತ್ತೆ ಕರೆ ಮಾಡಿದರೆ ’ಗ್ರಾಹಕ ಸೇವಾ ಪ್ರತಿನಿಧಿ’ಗಳಿಗೆ ಕರೆ ಹೋಗುವುದೇ ಇಲ್ಲ. ಕಂಪ್ಯೂಟರ‍್ ಆಂಟೀ "ಒಂದು ಒತ್ತಿ, ಎರಡು ಒತ್ತಿ, ಅದನ್ನು ಒತ್ತಿ, ಇದನ್ನು ಒತ್ತಿ’ ಎಂದು ನಮ್ಮ ಸಮಯ ತಿನ್ನುತ್ತಾಳೇಯೇ ಹೊರತೂ, ’ಒಂಬತ್ತು ಒತ್ತಿ’ ಎಂದು ಹೇಳುವುದೇ ಇಲ್ಲ. ಸುಮಾರು ಹದಿನೈದು ದಿನ ನಾವು ಏನೇ ತಿಪ್ಪರಲಾಗ ಹಾಕಿದರೂ ಸಂಪರ್ಕಿಸಲು ಸಾಧ್ಯವಾಗುವುದಿಲ್ಲ. ಅಷ್ಟರಲ್ಲಿ ಆ ವಿಷಯವೇ ಮರೆತು ಹೋಗಿರುತ್ತದೆ.

ಎರಡು ವರ್ಷದ ಹಿಂದೆ ಟ್ರಾಯ್ ಸೂಚನೆ ಮೇರೆಗೆ "ಆಜೀವ ಸದಸ್ಯತ್ವ" ಎಂದು ಹೇಳಿ ರೂ. 1,200/- ಕಟ್ಟಿಸಿಕೊಂಡರು. ಆಗಲೂ ’ಆಜೀವ ಎಂದರೆ ಎಷ್ಟು ದಿನ?" ಎಂದು ಕೇಳಿದ್ದೆ. "ನೀವು ಜೀವಂತ ಇರುವವರೆಗೆ" ಎಂದು ತಿಳಿಸಿದ್ದರು. ನಾನೂ ಖುಷಿ ಆಗಿದ್ದೆ. ಆದರೆ ಈಗ ಅದು ಕೊನೆಗೊಳ್ಳುವ ದಿನಾಂಕವನ್ನು ಪರಿಶೀಲಿಸಿದರೆ 22 ಮೇ 2012 ಎಂದು ತೋರಿಸುತ್ತಿದೆ. ಅಂದರೆ ಏರ್‌ಟೆಲ್‌ನವರ ಪ್ರಕಾರ ನಾನು ಸಾಯಲು ಇನ್ನೆರಡೇ ತಿಂಗಳು ಬಾಕಿ ! ಇವರೇ ಬೇಗನೆ ಒಂದು ಪ್ರಳಯ ಮಾಡುತ್ತಾರೋ ಏನೋ !? ಅಥವಾ ಸುಪಾರಿ ಕೊಟ್ಟು ನನ್ನನ್ನು ಮುಗಿಸಲು ಸಂಚು ರೂಪಿಸಿದ್ದಾರೆಯೇ ? ಗೊತ್ತಿಲ್ಲ.

ಆ ನಂತರ DND ಸೇವೆ ಬಂತು. ಈಗ ಆ ತೊಂದರೆ ಇಲ್ಲ. ಪೋಸ್ಟ್‌ಪೇಡ್ ಸಿಮ್‌ನಿಂದ ಅಷ್ಟೇನೂ ತೊಂದರೆ ಆಗಿಲ್ಲ. ಆದರೆ ಬಿಲ್ ಕಟ್ಟುವುದು ಒಂದು ದಿನ ತಡವಾದರೂ ದಿನಕ್ಕೆ ನಾಲ್ಕಾರು ಜನ ಕರೆ ಮಾಡಿ ಏನೋ ಲಕ್ಷ ರೂಪಾಯಿ ಸಾಲ ಕೊಟ್ಟವರಂತೆ "ಯಾವಾಗ ಕಟ್ಟುತ್ತೀರಿ?" ಎಂದು ಕೇಳುತ್ತಿದ್ದರು. ಮೊನ್ನೆ ಒಂದು ದಿನ "ನಾನು ಕಟ್ಟಲ್ಲ, ಡಿಸ್‌ಕನೆಕ್ಟ್ ಮಾಡಿ," ಎಂದು ಹೇಳಿದೆ. ಅದಾದ ನಂತರ ಕರೆ ಬಂದಿಲ್ಲ, ನಾನು ಬಿಲ್ ಕಟ್ಟಿಲ್ಲ, ಅವರು ಡಿಸ್‌ಕನೆಕ್ಟ್ ಸಹ ಮಾಡಿಲ್ಲ!

ಅದೆಲ್ಲಾ ಒಂದೆಡೆಗಿರಲಿ, ಅಸಲಿ ವಿಷಯ ಇರುವುದು ಏರ್‌ಟೆಲ್‌ನವರ ಡಿಶ್ ಟಿವಿ ಒಳಗೆ. 
ರೂ 1,590/- ನೀಡಿ ಇವರ ಕೊಡೆ (ಆಂಟೆನಾ) ಹಾಕಿಸಿಕೊಳ್ಳುವಾಗ ಇವರು ಹೇಳಿದ್ದು ಕನ್ನಡದ ಎಲ್ಲಾ ವಾಹಿನಿಗಳೂ ಬರುತ್ತವೆ ಎಂದು. ನಾನು ಕ್ರಿಕೆಟ್ ವಿಶ್ವಕಪ್‌ ಸಮಯದಲ್ಲಿ ಹಾಕಿಸಿದ್ದು. ಹಾಗಾಗಿ ಆಗ ಸಮಯವಿದ್ದಾಗೆಲ್ಲಾ ಬರೀ ಕ್ರಿಕೆಟ್ ನೋಡೋದೇ ಆಯ್ತು. ಕ್ರಿಕೆಟ್ ಹಂಗಾಮ ಮುಗಿದ ನಂತರವೇ ನನಗೆ ತಿಳಿದಿದ್ದು, ಏರ್‌ಟೆಲ್‌ನವರ ಕೊಡೆ ಕೊಡೆಯಲ್ಲ, ಅದೊಂತರ ಟೋಪಿ ಎಂದು. 

ಇವರ ಡಿಶ್‌ನಲ್ಲಿ ಕನ್ನಡದ ಅನೇಕ ವಾಹಿನಿಗಳು ಸಿಗುವುದೇ ಇಲ್ಲ. (ಉದಾ : ರಾಜ್‌ ಮ್ಯುಸಿಕ್, ಸಮಯ, ಚಿಂಟೂ ಇತ್ಯಾದಿ). ಸುವರ್ಣಾ, ಜನಶ್ರೀ ವಾಹಿನಿಯನ್ನು ಕೇಳಿದ ನಂತರ ಹಾಕಿ ಕೊಟ್ಟರು. ಉದಯ ಕಾಮೆಡಿ ಬೇಕಾದರೆ ಮತ್ತೊಂದಿಷ್ಟು ಹಣ ನೀಡಬೇಕಂತೆ. ಹಣ ನೀಡಿದರೂ ರಾಜ್‌ ಮ್ಯುಸಿಕ್, ಚಿಂಟೂ ಹಾಗೂ ಇತ್ತೀಚಿನ ಪಬ್ಲಿಕ್ ಟಿವಿಗಳು ಸಿಗುವುದಿಲ್ಲವಂತೆ ! ಆದರೆ ಹಣ ನೀಡಿದ ತಪ್ಪಿಗೆ ಅನೇಕ ಇತರೆ ಭಾಷೆಗಳ ವಾಹಿನಿಗಳನ್ನು ಬಳುವಳಿಯಾಗಿ ನೀಡಿದ್ದಾರೆ. ನಮ್ಮ ದುಡ್ಡು ಸದುಪಯೋಗ ಆಗಬೇಕೆಂದರೆ ಅವುಗಳನ್ನು ನೋಡಿ ಕರ್ಮ ಕಳೆದುಕೊಳ್ಳಬೇಕು ಅನ್ನುವುದು ಏರ್‌ಟೆಲ್ ಗ್ರಾಹಕ ಸೇವಾ ಶತ್ರುಗಳ ಅಂಬೋಣ.

ಮತ್ತೊಂದು ಗಮನಾರ್ಹ ಅಂಶವೆಂದರೆ ಇವರು ಅನೇಕ ಪ್ಯಾಕೇಜ್‌ಗಳನ್ನು ಮಾಡಿದ್ದಾರೆ. ಆದರೆ ಅವುಗಳಲ್ಲಿ ಕನ್ನಡಕ್ಕೆ ಸಂಬಂಧಿಸಿದ ಪ್ಯಾಕೇಜ್ ಇಲ್ಲ. ಕನ್ನಡವೊಂದೇ ಅಲ್ಲದೇ ದಕ್ಷಿಣ ಭಾರತದ ಯಾವ ಭಾಷೆಗೂ ಪ್ರತ್ಯೇಕ ಪ್ಯಾಕೇಜ್ ಇಲ್ಲ. "ಸೌತ್ ಇಂಡಿಯಾ ಪ್ಯಾಕೇಜ್" ಅಂತ ಒಂದಿದೆ. ಅದನ್ನೇ ಹಾಕಿಸಿಕೊಳ್ಳಬೇಕು. ಅದರಲ್ಲೂ ದಕ್ಷಿಣ ಭಾರತದ ಎಲ್ಲಾ ವಾಹಿನಿಗಳೂ ಬರುವುದಿಲ್ಲ ಅನ್ನೋದು ಅವರ ಕೊಡೆಯಷ್ಟೇ ದಿಟ.


ಕನ್ನಡಿಗರಿಂದ ಸುಲಿಗೆ ಮಾಡಿ ಕನ್ನಡದ ಎಲ್ಲಾ ವಾಹಿನಿಗಳನ್ನೂ ತೋರಿಸದೇ ನಮ್ಮ ದುಡ್ಡಿನಿಂದ ಬೇರೆ ಭಾಷೆಯ ವಾಹಿನಿಗಳನ್ನು ನಮ್ಮ ಮೇಲೆ ಹೇರಿಕೆ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ "ಪ್ಯಾಕೇಜ್‌ ಇರೋದೇ ಹೀಗೆ!" ಎಂಬ ಉತ್ತರ ಬರುತ್ತದೆ. ಅಂದರೆ ಅವರು ಇರೋದೇ ಹೀಗೆ! ಹಾಗಾದ್ರೆ ಕನ್ನಡಿಗರು ಸುಮ್ಮನಿರೋದಾದ್ರೂ ಹೇಗೆ ?
2 ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…

ಭ್ರಷ್ಟಾಚಾರದ ಸುಳಿಯಲ್ಲಿ ಬಡ ಭಾರತ

ಭಾರತಕ್ಕೆ ಉತ್ತಮ ಭವಿಷ್ಯವಿಲ್ಲ ಅನ್ನೋದು ಪದೇ ಪದೇ ಸಾಬೀತಾಗುತ್ತಾ ಬಂದಿದೆ. ಎಲ್ಲೋ ಒಮ್ಮೊಮ್ಮೆ ಮಿಂಚಿನಂತೆ ಉದಯಿಸುವ ಆಶಾಕಿರಣಗಳು ಸ್ವಲ್ಪ ಸಮಯದಲ್ಲೇ ಭ್ರಷ್ಟ ಮೋಡದ ಸುಳಿಗೆ ಸಿಲುಕಿ ಜನರ ಎದುರಿನಿಂದ ಕಾಣೆಯಾಗುತ್ತಿರುವುದನ್ನು ಕಾಣುತ್ತಲೇ ಬಂದಿದ್ದೇವೆ. ಅಣ್ಣಾ ಹಜಾರೆ, ಸಂತೋಷ್ ಹೆಗಡೆ ಮುಂತಾದ ನಕ್ಷತ್ರಗಳು ಆಗಾಗ ಉದಯಿಸಿದರೂ ಸಹ ಅವರ ವರ್ಚಸ್ಸು ಮತ್ತು ಪ್ರಾಮಾಣಿಕತೆಯನ್ನು ಈ ಭಂಡ ರಾಜಕಾರಣಿಗಳು ಹೊಸಕಿ ಹಾಕುತ್ತಿದ್ದಾರೆ.

ರಾಜಕಾರಣಿಗಳು ಮಾತ್ರವಲ್ಲ, ಅಧಿಕಾರಿಗಳೂ ಭ್ರಷ್ಟರಾಗಿದ್ದಾರೆ. ಬರೇ ರಾಜಕಾರನಿಗಳನ್ನ ದೂರಿ ಪ್ರಯೋಜನವಿಲ್ಲ ಅನ್ನುವವರಿದ್ದಾರೆ. ಅದು ನಿಜ ಕೂಡಾ. ಆದರೆ ಆ ಅಧಿಕಾರಿಗಳನ್ನು ಕೊಬ್ಬಲು ಬಿಟ್ಟಿದ್ದು ಮಾತ್ರ ಇದೇ ರಾಜಕಾರಣಿಗಳೇನೆ. ರಾಜಕಾರಣಿಗಳು ಸರಿಯಾಗಿದ್ದರೆ ಅಧಿಕಾರಿಗಳನ್ನು ನಿಯಂತ್ರಿಸುವುದು ಕಷ್ಟದ ಕೆಲಸವೇನಲ್ಲ. ಮುಖ್ಯವಾಗಿ ಅಧಿಕಾರಿಗಳು ರಾಜಕಾರಣಿಗಳಷ್ಟು ಭ್ರಷ್ಟರಲ್ಲ. ಅವರಿಗೆ ಕೆಲಸದ ಭಯವಿರುತ್ತದೆ. ಕೆಲಸ ಕಳೆದುಕೊಂಡರೆ ಬದುಕೋದು ಕಷ್ಟ ಎಂಬ ಅರಿವಿರುತ್ತದೆ. ಆದರೆ ರಾಜಕಾರಣಿಗಳಿಗೆ ಯಾವ ಭಯವೂ ಇಲ್ಲ. ಒಮ್ಮೆ ಸೋತರೂ ಮತ್ತೊಮ್ಮೆ ಗೆದ್ದು ಬರಬಹುದು ಎಂಬ ನಂಬಿಕೆ ಅವರಿಗಿದೆ. ಯಡಿಯೂರಪ್ಪನಂತವರ ಕೃಪಾಕಟಾಕ್ಷವಿದ್ದರೆ ಸೋತರೂ ಸೋಮಣ್ಣನಂತೋರು ಮಂತ್ರಿ ಆಗ್ತಾರೆ. ಭಂಡ ರಾಜಕಾರಣಿಗಳಿಗೆ ಇನ್ನೇನು ಬೇಕು ?

ಹೀಗಾಗಿ ಇಂದು ಹಗರಣಗಳ ಮೇಲೆ ಹಗರನಗಳು ನಡೆಯುತ್ತಿವೆ. ಒಂದಾದ ನಂತರ ಮತ್ತೊಂದರಂತೆ ಸಾವಿರಾರು ಕೋಟಿಗಳ…