ವಿಷಯಕ್ಕೆ ಹೋಗಿ

ಪ್ರೇಮಿಗೊಂದು ಪ್ರೇಮದೋಲೆ ಬರೆಯಿರಿ ಇಂದೇ...ನೀವು ಪ್ರೇಮಿಸಿದ್ದೀರಿ. ಬದಲಿಗೆ ಆಕೆಯೂ ನಿಮ್ಮನ್ನು ನಿಮಗಿಂತಲೂ ಗಾಢವಾಗಿ ಪ್ರೀತಿಸುತ್ತಿದ್ದಾಳೆ. ಬಹುಶಃ ಇಬ್ಬರದೂ ಒಂದೇ ಕಾಲೇಜು. ಬೇಡವೆಂದರೂ ಹೆಚ್ಚು ಕಡಿಮೆ ದಿನವೂ ನೋಡುತ್ತೀರಿ, ಸಂದಿಸುತ್ತೀರಿ. ಬೇಕಾದಷ್ಟು ಮಾತೂ ಆಡ್ತೀರಿ. ಮೆಸೇಜೂ ಮಾಡ್ತೀರಿ... ಆದ್ರೂ ಒಂದು `ಪ್ರೇಮಪತ್ರ`ವನ್ನು ಬರೆದು ಕೊಟ್ಟು ನೋಡಿ. ಅದರ ಸಂಭ್ರಮವೇ ಬೇರೆ. ಅವಳಿಗಾಗುವ ಆನಂದವೂ ಬೇರೆ. ಪ್ರೇಮ ಪತ್ರಕ್ಕೆ ಆ ಶಕ್ತಿಯಿದೆ. 

`ಯಾಕೆ ಬಿಡಿ, ದಿನವೂ ನೋಡ್ತಿರ್ತೀವಿ. ಮಾತೂ ಆಡ್ತೀವಿ. ಅವಳ ಹತ್ರ ಮೊಬೈಲ್ ಇದೆ. ನನ್ನ ಹತ್ರಾನೂ ಇದೆ. ನನಗೆ ಮಾತನಾಡಬೇಕೆನ್ನಿಸಿದಾಗ ನಾನು ಕರೆ ಮಾಡ್ತೇನೆ. ಅವಳಿಗೆ ಆಸೆಯಾದಾಗ ಅವಳೇ ಕರೆ ಮಾಡ್ತಾಳೆ. ಇಬ್ಬರೂ ಗಂಟೆಗಟ್ಟಲೇ  ಫೋನ್‌ನಲ್ಲೇ ಮಾತಾಡ್ತೇವೆ. ಸಂದೇಶಗಳಿಗೆ ಲೆಕ್ಕವಿಲ್ಲ, ಎದುರು ಸಿಕ್ಕರಂತೂ ದಿನವೆಲ್ಲಾ ಕೂತು ಹರಟೆ ಹೊಡೀತೀವಿ. ಇನ್ನಾರು ತಿಂಗಳಲ್ಲೇ ಮದುವೆ. ಈಗ ಹೋಗಿ ಪ್ರೇಮ ಪತ್ರ?! ಅದೆಲ್ಲಾ ಓಲ್ಡ್ ಸ್ಟೈಲು. ಫಸ್ಟ್ ಗಿಯರ್ ಅದು. ನಾವು ಈಗಾಗ್ಲೇ ಟಾಪ್ ಗಿಯರಲ್ಲಿದ್ದೀವಿ" ಅಂತಲೂ ಕೆಲವರು ಹೇಳಬಹುದು. 

ಅದೆಲ್ಲಾ ನಿಜ. ದಿನವೂ ನೋಡ್ತೀರಿ. ಮೆಸೇಜೂ ಕಳಿಸ್ತೀರಿ. ಫೋನ್‌ನಲ್ಲಿ ಗಂಟೆಗಟ್ಟಲೇ ಮಾತೂ ಆಡ್ತೀರಿ. ಎದುರು ಸಿಕ್ರೆ ದಿನವೆಲ್ಲಾ ಹರಟೆ ಹೊಡಿತೀರಿ. ಎಲ್ಲಾ ನಿಜ... ಆದರೂ ನಿಮ್ಮ ಅಂತರಂಗದ ಪ್ರೇಮದ ತುಡಿತವನ್ನು ಎಂದಾದರೂ ಅವಳೆದುರು ಬಿಚ್ಚಿಟ್ಟಿದ್ದೀರಾ? ಬದಲಿಗೆ ನೀವೇ ನೋಡಿಕೊಂಡಿದ್ದೀರಾ? ದಯವಿಟ್ಟು ನಿಮ್ಮ ಅಂತರಂಗವನ್ನೊಮ್ಮೆ ನೀವೇ ತೆರೆದು ನೋಡಿಕೊಳ್ಳಿ. ಅಲ್ಲಿ ನಿಮ್ಮಾಕೆಗೆ ಎಷ್ಟು ಪ್ರೇಮದ ಪ್ರವಾಹವಿದೆ ಗಮನಿಸಿ. ಆ ಪ್ರವಾಹದ ಆಳ, ಹರವು, ವಿಸ್ತಾರ, ರಭಸವನ್ನು ನೀವಿಷ್ಟು ದಿನ ಆಡಿದ ಗಂಟೆಗಟ್ಟಲೇ ಮಾತಿನಲ್ಲೋ, ಅಥವಾ ದಿನಗಟ್ಟಲೇ ಕಳೆದ ಹರಟೆಯಲ್ಲೋ ಎಂದಾದರೂ ಕಿಂಚಿತ್ತಾದರೂ ಆಕೆಗೆ ತೆರೆದಿಡಲು ಸಾಧ್ಯವಾಗಿದೆಯೇ?

ನಿಮಗೆ ಅವಳು ಇಷ್ಟವಾದಳು. ಅವಳಿಗೆ ನೀವು ಇಷ್ಟವಾದಿರಿ. ಪ್ರೇಮ ಓ.ಕೆ. ಆಯ್ತು. ಮಾತುಕತೆ ಟಾಪ್ ಗಿಯರ್ಗೆ ಹೋಯ್ತು. ಆದರೆ ಆ ಅಂತರಂಗದ ಪ್ರೇಮ ಪ್ರವಾಹ ಇತ್ತಲ್ಲ?! ಅದು ಮಾತ್ರ ಗುಪ್ತಗಾಮಿನಿಯಾಗಿ ನಿಮ್ಮೆದೆಯಲ್ಲೇ ಉಳಿದು ಹೋಯ್ತು. ನೀವೆಂದೂ ಒಂದೇ ಒಂದು ತುಂಡು ಪತ್ರವನ್ನೂ ಆಕೆಗೆಂದು ಗೀಚಲಿಲ್ಲವೆಂದು ಅವಳೂ ತನ್ನಂತರಂಗದ ಪ್ರೇಮವನ್ನು ತೆರೆದಿಡಲೇ ಇಲ್ಲ! ಆ ಅಂತರಾಳದ ಪ್ರೇಮ ಎಷ್ಟು ಸುಂದರವಾಗಿ, ಎಷ್ಟೊಂದು ಸೊಗಸಾಗಿರುತ್ತದೆ ಗೊತ್ತೇ? ಅಲ್ಲೊಂದು ಸರೋವರ, ತಿಳಿನೀರ ತೊರೆ, ಬಣ್ಣ ಬಣ್ಣದ ಮೀನುಗಳು. ಬಾನು ತುಂಬಿದ ಸಣ್ಣ  ಮಳೆ. ಅದರಾಚೆ ಮಂದ್ರ ಸೂರ್ಯ. ಮಗ್ಗುಲಿಗೆ ಸಪ್ತವರ್ಣ ಕಾಮನಬಿಲ್ಲು. ಅದರ ಕೆಳಗೆ ನೀವಿಬ್ಬರು! ಇದೆಲ್ಲಾ ಕಲ್ಪನೆಯೇ. ಆದರೆ ಇಂಥಹುದೊಂದು ಕಲ್ವನೆಯನ್ನು ಅಕ್ಷರದ ಮೂಲಕವೇ ಬಹಿರಂಗಕ್ಕೆ ಕೊಂಡು ಬರಲು ಸಾಧ್ಯ, ಹಾಗೂ ಅದುವೇ ಚೆಂದ. ಅದು ಬಿಟ್ಟು ಪೋನು ಆಕೆ ಎತ್ತಿದೊಡನೆ ನೀವು ``ಪ್ರಿಯೆ, ಅಲ್ಲೊಂದು ಸರೋವರ, ತಿಳಿನೀರ ತೊರೆ... ಎನ್ನುತ್ತಾ ಹೋದರೆ, ಆಕೆ ``ಈ ಬಿರು ಬೇಸಗೆಯಲ್ಲಿ ಅದೆಲ್ಲಿ ಮಾರಾಯ? ಎಂದು ಕೇಳಿಯಾಳು. ಅದುವೇ ಪತ್ರಕ್ಕೂ ಪೋನಿಗೂ ಇರುವ ವ್ಯತ್ಯಾಸ!

ಕಲ್ಪನೆಗಳೇ ಕನಸುಗಳು, ಕನುಸುಗಳಿಲ್ಲದ ಬದುಕಿಲ್ಲ. ಹಾಗೆಯೇ ಸುಂದರ ಕಲ್ಪನೆಗಳಿಲ್ಲದ ಪ್ರೇಮವೂ ಇಲ್ಲ. ಪ್ರೇಮವೆಂದರೇನೇ ಕಲ್ಪನೆಗಳ ಮಹಾ ಸಾಗರ. ಹುಡುಗನಲ್ಲೊಂದು ಅಟ್ಲಾಂಟಿಕ್. ಅದಕ್ಕೆ ಆಳ, ಅಗಲ. ವಿಸ್ತಾರದ ಗಡಿಯಿಲ್ಲ. ಮೊಗೆದಷ್ಟೂ ತೀರದ ಕಲ್ಪನಾ ಲೋಕ.

ಅಂಥಹುದೊಂದು ಮಹಾ ಕಲ್ವನಾ ಕಡಲನ್ನು ಹೃದಯದೊಳಗಿಟ್ಟುಕೊಂಡು ಅದನ್ನು ನಿಮ್ಮ ಪ್ರೇಮಿಗೆ ತೋರಿಸದೇ ಹೋದರೆ ಹೇಗೆ? ಕೆಲವರಿಗೆ ಅಂದುಕೊಳ್ಳುವಷ್ಟು ಸೊಗಸಾಗಿ ಬರೆಯಲು ಬಾರದಿರಬಹುದು. ಆದರೂ ಬಂದ ಹಾಗೆಯೇ ಬರೆಯಬಹುದು. ಪ್ರತಿದಿನವೂ ಗಂಟೆಗಟ್ಟಲೇ ಮಾತನಾಡುವವರು ಎಂದಾದರೊಂದು ದಿನ ಕಷ್ಟಪಟ್ಟಾದರೂ ಬಂದು ಸುಂದರವಾದ ಓಲೆ ಬರೆದು ``ಸುಮ್ಮನೇ ಓದಿಕೋ ಅಂತ ಹೇಳಿ ಕೊಟ್ಟು ದೂರ ನಿಂತು ಆಕೆಯನ್ನು ಗಮನಿಸಿ ನೋಡಿ. ಆಕೆ ಅದನ್ನು ಓದುತ್ತಾ ಹೋದಂತೆ ಅದೆಂತಹ ಆನಂದ ಪರವಶತೆಗೆ ತನ್ನನ್ನು ತಾನೇ ಒಡ್ಡಿಕೊಳ್ಳುತ್ತಾಳೆಂಬುದನ್ನು ನೀವು ಅರಿಯಬಹುದು. 

ಇದನ್ನು ಹುಡುಗಿಯರೂ ಮಾಡಬಹುದು. ಕೆಲವರಿಗೆ ಪ್ರೇಮ ಅದೆಷ್ಟೇ ಟಾಪ್ ಗಿಯರ್‌ನಲ್ಲಿದ್ದರೂ ಮನಸಲ್ಲೇನೋ ಒಂದು ಹೇಳಿಕೊಳ್ಳಲಾಗದ ಆಸೆಯಿರುತ್ತದೆ. ಅದೊಂದು ಸಂಶಯಾಸ್ಪದ ತುಮುಲವೂ ಆಗಿರಬಹುದು. ಒಂದು ಮೊಳ ಮಲ್ಲಿಗೆ ತಂದು ಮುಡಿಸಲಿ ಎಂದೋ, ಸಿನಿಮಾಗೆ ಕರೆದೊಯ್ಯಲಿ ಎಂದೋ, ದೂರದ ಪ್ರವಾಸ ಹೋಗುವುದು, ಒಂದೆರಡು ಚುಂಬನ, ಹೀಗೆ ಯಾವ ವಾಂಛೆಯಾದರೂ ಇರಬಹುದು. ಪ್ರೇಮ ಅದೆಷ್ಟೇ ಗಾಢವಾಗಿದ್ದರೂ ಬಾಯ್ಬಿಟ್ಟು ಹೇಳಲಿಕ್ಕೇನೋ ಹಿಂಜರಿತ. ಕೆಲವು ಹುಡುಗಿಯರಿಗಂತೂ (ಸಾಮಾನ್ಯವಾಗಿ ಸದಾ ಕೀಟಲೆ ಮಾಡುತ್ತಿರುವವರಿಗೆ) ತನ್ನ ಪ್ರೇಮಿಯಿಂದ ಕಪಾಳಕ್ಕೆ ಹೊಡೆತ ತಿನ್ನಬೇಕೆಂಬ ಬಯಕೆಯೂ ಇತುತ್ತದೆಯಂತೆ! ಬಯಕೆ ಯಾವುದಾದರೂ ಹೇಳಲಿಕ್ಕೆ ಸಂಕೋಚವಾದಲ್ಲಿ, ಹಿಂಜರಿಕೆಯಿದ್ದಲ್ಲಿ ಪತ್ರದ ಮೂಲಕ ತಿಳಿಸಬಹುದು. ಇದರಿಂದ ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳಲು ಅನುಕೂಲವಾಗುತ್ತದೆ.

ಪ್ರೇಮಪತ್ರ ಬರೆಯುವುದರಿಂದ ಇನ್ನೂ ಚೆನ್ನಾಗಿ ಬರೆಯಬೇಕೆಂಬ ಅಭಿಲಾಶೆಯಿಂದ ದೊಡ್ಡ ಸಾಹಿತಿಗಳ ಪುಸ್ತಕಗಳನ್ನು ಓದಬೇಕೆನ್ನಿಸುತ್ತದೆ. ಹಾಗೆ ಓದುವುದರಿಂದ ನಿಮ್ಮ ಗೌರವ ಸಹಜವಾಗಿಯೇ ಹೆಚ್ಚುತ್ತದೆ. ಮತ್ತು ಜ್ಞಾನವೂ ಹೆಚ್ಚುವುದರಲ್ಲಿ ಸಂದೇಹವಿಲ್ಲ. ಒಂದೊಳ್ಳೆಯ ಪ್ರೇಮ ಪತ್ರವನ್ನು ರವಿ ಬೆಳಗೆರೆ ಮಾತ್ರವೇ ಅಲ್ಲದೇ ಬೇರೆಯವರೂ ಬರೆಯಬಹುದೆಂಬುದನ್ನು ಅರಿಯುತ್ತೀರಿ.

ನೀವು ಬರೆವ ಒಂದೇ ಒಂದು ಪ್ರೇಮಪತ್ರ ಆಕೆಗೆ ಇನ್ನಿಲ್ಲದ ಉತ್ಸಾಹ. ಅಭಿಮಾನವನ್ನು ನಿಸ್ಸಂದೇಹವಾಗಿ ತಂದುಕೊಡಬಲ್ಲದು. ಅದನ್ನವಳು ತನ್ನ ಬದುಕಿನ ಕೊನೆಯವರೆಗೂ ರಕ್ಷಿಸಿಟ್ಟುಕೊಂಡರೆ ಆಶ್ಚರ್ಯವಿಲ್ಲ. ಆಕೆ ನಿಮ್ಮೊಂದಿಗೆ ಗಂಟೆಗಟ್ಟಲೇ ಮೊಬೈಲ್ನಲ್ಲಿ ಮಾತನಾಡಿದ ಬಿಲ್ ಭದ್ರಪಡಿಸಿಟ್ಟುಕೊಳ್ಳುವುದಕ್ಕೂ ನೀವು ಬರೆದ ಪತ್ರವನ್ನು ಜೋಪಾನ ಮಾಡುವುದಕ್ಕೂ ಎಷ್ಟೊಂದು ವ್ಯತ್ಯಾಸವಿದೆ ಗೊತ್ತೆ? ನೀವಾಡಿದ ಮಾತನ್ನು ನೆನಪಿಟ್ಟುಕೊಳ್ಳಬಹುದೇ ಹೊರತೂ ಮತ್ತೆ ಮತ್ತೇ ಆಸೆಯಾದಾಗ ಕೇಳಲು ಸಾಧ್ಯವಿಲ್ಲ. ಆದರೆ ಪತ್ರವನ್ನು ಬೇಕಾದಾಗೆಲ್ಲಾ ಓದಬಹುದು. ತನ್ನ ಗೆಳೆಯನಿಗೆ ಎಷ್ಟೆಲ್ಲಾ ಕನಸುಗಳಿವೆಯೆಂದು ಮನವರಿಕೆ ಮಾಡಿಕೊಡುವುದೇ ಪ್ರೇಮಪತ್ರ.

ಮೇಲೊಂದು ಓಂ, ಪಕ್ಕಕ್ಕೆ `ಕ್ಷೇಮ, ನಡುವಲ್ಲೊಂದು `ಶ್ರೀ` ಎಂದೆಲ್ಲಾ ಬರೆಯಬೇಕಾದ ಅಗತ್ಯವೇ ಇಲ್ಲ. ನೇರವಾಗಿ ವಾಕ್ಯದಿಂದಲೇ ಪ್ರಾರಂಭಿಸಬಹುದು. `ಒಲವಿನ ಪ್ರೇಯಸಿ`, `ನನ್ನೊಲವಿನ ರಾಣಿ` ಮುಂತಾದ ವಾಕ್ಯಗಳಿಂದ ಶುರು ಮಾಡಬಹುದು. ನಂತರ ನಿಮಗೇ ತೋಚಿದಂತೆ ನಿಮ್ಮ ಕನಸುಗಳನ್ನು ಹಂಚಿಕೊಳ್ಳುತ್ತಾ ಹೋದರಾಯ್ತು. ಅದರಲ್ಲಿ ನಿಮ್ಮ ಪ್ರೇಮಿಯನ್ನು ನೀವೆಷ್ಟು ಗಾಢವಾಗಿ ಪ್ರೇಮಿಸುತ್ತಿದ್ದೀರೆಂದು ತಿಳಿಸಬಹುದು. ಇದರಿಂದ ಆಕೆಗೆ ಒಂದು ಭದ್ರತೆಯ ಭಾವನೆ ಮೂಡುತ್ತದೆ. ಅದಕ್ಕೆಂದು `ನಿನ್ನನ್ನು ಬರುವ ವರ್ಷ ಕ್ಯೂರಿಯಾಸಿಟಿ ಅಂತರಿಕ್ಷ ವಾಹನದಲ್ಲಿ ಕೂರಿಸಿಕೊಂಡು ಮಂಗಳ ಗ್ರಹಕ್ಕೆ ಕರೆದೊಯ್ದು ಓಡಾಡಿಸಿಕೊಂಡು ಬರುತ್ತೇನೆ ಎಂದೆಲ್ಲಾ ಬರೆಯಬೇಡಿ. ಇದರಿಂದ ಉಪಗ್ರಹದ ಹೆಸರಲ್ಲಿ ಇವನು ರೈಲು ಹತ್ತಿಸುತ್ತಿದ್ದಾನೆ ಎಂಬ ಭಾವನೆ ಬಂದು ಬಿಡಬಹುದು. ಪತ್ರವನ್ನು ಬರೆಯುವಾಗಲೂ ಎಚ್ಚರಿಕೆಯಿಂದ ಬರೆಯಬೆಕಾಗುತ್ತದೆ. ಮೇಲಿನಂತೆಯೇ ಬರೆದರೂ ಸಹ ವಾಕ್ಯದ ಕೊನೆಯಲ್ಲಿ `ಓಡಾಡಿಸಿಕೊಂಡು ಬರುವಾಸೆ ಎಂದಾಗಿಸಿದರೆ ಅದು ಕಲ್ಪನೆಯೆಂದಾಗುತ್ತದೆ.

ಪತ್ರವನ್ನೆಲ್ಲಾ ಬರೆದಾದ ಮೇಲೆ ಚಿಕ್ಕದೊಂದು ಕವನವನ್ನು ಆಕೆಯ ಮೇಲೆ ಬರೆಯಬಹುದು. ಕೆಲವರಿಗೆ ಅದು ಬರೆಯಲು ಬರದಿರಬಹುದು. ಆಗ ಎಲ್ಲಾದರೂ ಓದಿದ ಸುಂದರ ಕವನಗಳ ಸಾಲನ್ನೇ ಬರೆಯಬಹುದು. ಅಥವಾ ಯಾವುದಾದರೂ ಸಿನಿಮಾ ಹಾಡಿನ ಉತ್ತಮ ಸಾಲುಗಳನ್ನಾದರೂ ಬರೆಯಬಹುದು. ಒಟ್ಟಿನಲ್ಲಿ ತನ್ನ ನಲ್ಲನದು ಕವಿ ಹೃದಯ ಅನ್ನಿಸಿಕೊಂಡರಾಯ್ತು.
ಸ್ವಲ್ಪ ಕವಿಹೃದಯವಿದ್ದರೆ....
ಚಿಕ್ಕದೊಂದು ಹನಿಗವನವನ್ನಾದರೂ ಬರೆಯಬಹುದು. ನಿಮಗೆ ಅಷ್ಟೊಂದು ಚೆನ್ನಾಗಿ ಬರೆಯಲು ಸಾಧ್ಯವಿಲ್ಲವೆಂದರೆ ಮೇಲೆ ತಿಳಿಸಿರುವ ಉಪಾಯ ಮಾಡಬಹುಡು. ಇನ್ನು ಕೆಲವರ ಅಕ್ಷರಗಳೇ ಕಾಗೆ ಕಾಲು ಗುಬ್ಬಿ ಕಾಲಿನಂತಿರುತ್ತವೆ. `ಅಂತಹ ಅಕ್ಷರಳಲ್ಲಿ ಹೇಗೆ ಅವಳಿಗೆ ಪತ್ರ ಬರೆಯೋದು? ಎಂದೂ ಕೇಳುತ್ತಾರೆ. ಆದರೂ ಪ್ರಯತ್ನಿಸಿ. ಬರೆಯುವುದು ಸಾಧಾರಣ ಪತ್ರವಲ್ಲ. ಪ್ರೇಮಪತ್ರ! ಅದನ್ನು ಬರೆಯಲು ಕುಳಿತರೆ ಅಕ್ಷರಗಳು ತಾನಾಗೇ ಸುಂದರವಾಗುತ್ತವೆ. ಯಾವಾಗಲೂ ಬರೆವ ವೇಗವನ್ನು ಬಿಟ್ಟು ನಿಧಾನವಾಗಿ ಬರೆದರಾಯ್ತು.

ಪ್ರೇಮ ಪತ್ರಕ್ಕಿರುವ ಶಕ್ತಿ ಅಪಾರ. ಅದು ಪುಳಕಿತಗೊಳಿಸುತ್ತದೆ. ವೇದನೆಯಲ್ಲಿದ್ದರೆ ಸಾಂತ್ವನ ಹೇಳುತ್ತದೆ. ಮನಸ್ಸನ್ನು ಬಿಚ್ಚಿಡಲು ಸಹಕರಿಸುತ್ತದೆ. ಮೌನ ಸಾಮ್ರಾಜ್ಯದೊಳಗೇ ಒಂದು ಕಲ್ಪನೆಯ ಕೋಟೆಯನ್ನೂ ಕಟ್ಟಿಕೊಡುತ್ತದೆ. ನೆನಪನ್ನು ಉಳಿಸುತ್ತದೆ. ಸಂಭ್ರಮವನ್ನು ಮರುಕಳಿಸುತ್ತದೆ. ಪ್ರೇಮಿಗಳನ್ನು ಹತ್ತಿರವಾಗಿಸುತ್ತದೆ. ಬೇಸರವನ್ನು ದೂರಾಗಿಸುತ್ತದೆ. ಮನದೊಳಗಿನ ಸಂಶಯಗಳನ್ನು ನೀಗುತ್ತದೆ. ಸಾತ್ವಿಕ ಪ್ರೀತಿ ನೀಡುತ್ತದೆ, ಆಲಸ್ಯವನ್ನು ಕಳೆಯುತ್ತದೆ.... ಆದುದರಿಂದ ಇಂದೇ ಒಂದು ಪ್ರೇಮಪತ್ರ ಬರೆಯಿರಿ.(ನಿಮ್ಮ ಪ್ರೇಮಿಗೆ!)

ಆಕೆ `ನೀ ಬರೆದ ಒಲವಿನ ಓಲೇ..... ಎಂದು ಹಾಡುವಂತಾಗಲಿ.
ಪೆನ್ನು ಪೇಪರು ತಗೊಳ್ಳಿ.... ಪ್ರತಿಯೊಬ್ಬರೂ ಪುತ್ರ ಪ್ರೇಮಿಗಳಾಗುವ ಮೊದಲು ಪತ್ರಪ್ರೇಮಿಗಳಾಗಬೇಕು.
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…

ಸ್ನೇಹದ ಸವಿ ಜೇನು !

ಮನದ ಹರುಷಕೆ ಹೊಸ ರಾಗ ಹೊಸೆದೆ
ಮನಸನಿಟ್ಟು ಕನಸ ಕಟ್ಟಿದೆ
ಮುಂಗುರುಳಲ್ಲಿ ಮೋಹ ತುಂಬಿ ನಕ್ಕೆ
ಮಾಡಿಕೊಳ್ಳಲಿಲ್ಲ ಸ್ನೇಹಕ್ಕೆ ಕೊಂಚವೂ ಧಕ್ಕೆ
ಮಮತೆಯ ನಲ್ನುಡಿಯೇ ನಿನ್ನಾಭರಣ
ಮಾತೆಯ ಮಡಿಲಂತೆ ನಿನ್ನಂತಕರಣ
ಮಡಿಲಲ್ಲಿ ಮುದುಡುವ ಮಗುವಿನಾ ಪರಿ
ಅಪ್ಪುಗೆಯಲ್ಲಿ ಗೆಳೆತನದ ತಿಳಿ ನೀರ ಝರಿ
ಮುದ್ದಿಸಿ ಹಣೆಗೆ ಮುತ್ತಿಟ್ಟ ಗಳಿಗೆ
ನೀ ನೆನೆದಿದ್ದೆ ನನ್ನ ಸ್ನೇಹ ಜಡಿ ಮಳೆಗೆ
ಗೆಳೆತನದ ಮಳೆಗಾಲ ಮುಗಿಯಲೇ ಬೇಕು
ಅಗಲುವಿಕೆಯ ಬಿರು ಬೇಸಗೆ ಸಹಿಸಲೇ ಬೇಕು
ಅಕ್ಕರೆಯ ಸವಿ ನೆನಪು ಮೆಲುಕುತ್ತಿರೋಣ
ಆತ್ಮೀಯ ಆರ್ಧತೆ ಸಲಹುತ್ತಿರೋಣ