ವಿಷಯಕ್ಕೆ ಹೋಗಿ

ಜಾತ್ಯಾತೀತ ತತ್ವಕ್ಕೆ ಮಂಗಳ ಹಾಡಿದ ಜೆಡಿಎಸ್‌ಗೆ ಮಂಗಳಾರತಿ ಎತ್ತಿದ ಮತದಾರ


ಇದು ಖುದ್ದಾಗಿ ಆಗಬೇಕಾಗಿತ್ತು. ಮಂಡ್ಯ, ರಾಮನಗರ, ಹಾಸನ ಎಲ್ಲಾ ನಮ್ ಬೆಲ್ಟು, ಇಲ್ಲಿ ಯಾರೂ ನಮ್ಮನ್ನ ಅಲ್ಲಡಿಸಕ್ಕಾಗಲ್ಲ ಎಂದು ಭರ್ಜರಿ ಶೋ ಕೊಡುತ್ತಿದ್ದ ಜೆಡಿಎಸ್ ನಾಯಕರಿಗೆ ಮತದಾರ ಸರಿಯಾದ ಬುದ್ದಿಯನ್ನೆ ಕಲಿಸಿದ್ದಾನೆ. ಅದರಲ್ಲೂ ದೇವೇಗೌಡ, ಕುಮಾರಸ್ವಾಮಿಗಳ ಮಿತಿ ಮೀರಿದ ಕಟುಂಬ ರಾಜಕಾರಣ ಕೊನೆಗೆ ಅವರ ಕುಟುಂಬದ ಸೋಲಿನ ಹೊಸ್ತಿಲಿಗೇ ಬಂದು ನಿಂತಿದೆ. ಸತ್ಯವನ್ನು ಅರಗಿಸಿಕೊಳ್ಳುವ ಸ್ಥಿಮಿತ ಅವರಲ್ಲಿರಬೇಕಷ್ಟೆ.
ಯಾವುದೇ ಮತದಾರರನ್ನ ಹಗುರವಾಗಿ ಪರಿಗಣಿಸುವಂತಿಲ್ಲ ಎಂಬ ಸಂದೇಶವನ್ನು ಈ ಬಾರಿಯ ಉಪ-ಚುನಾವಣೆಯಲ್ಲಿ ಜೆಡಿಎಸ್‌ಗೆ ರವಾನಿಸಿದ್ದಾರೆ ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮತದಾರರು. ಒಂದೆಡೆ ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿಯನ್ನು ಕಸ್ತೂರಿ ವಾಹಿನಿಯ ಕ್ಯಾಬಿನ್‌ಗೆ ಕಳಿಸಿಕೊಟ್ಟರೆ ಮತ್ತೊಂದೆಡೆ ಪುಟ್ಟರಾಜು ರವರನ್ನೂ ಮನೆಯಲ್ಲಿರುವಂತೆ ತಿಳಿಸಿದ್ದಾರೆ. ಯಾವುದೇ ಮಗ್ಗುಲಿಂದ ನೋಡಿದರೂ ಇದು ಕುಮಾರಸ್ವಾಮಿ-ದೇವೇಗೌಡರ ವೈಫಲ್ಯವಾಗಿಯೆ ಕಾಣಿಸುತ್ತಿದೆ. ಅದರಲ್ಲೂ ಹೆಸರಿಗಿಲ್ಲದ (ರಾಜಕಾರಣದಲ್ಲಿ) ಇಬ್ಬರು ವ್ಯಕ್ತಿಗಳಿಂದ ತಮ್ಮ ಮತಬ್ಯಾಂಕ್ ಕ್ಷೇತ್ರದಲ್ಲೇ ಲಕ್ಷಾಂತರ ಮತಗಳ ಅಂತರದಿಂದ ಸೋತಿದ್ದು ಇವರಿಬ್ಬರು ಮುಖಂಡರ ಮಗ್ಗುಲು ಮುರಿದಂತಾಗಿದೆ. ಅದೂ ಕೂಡಾ ಕಮಲ, ತೆಂಗಿನಕಾಯಿಗಳ ಬೆಂಬಲ ಪಡೆದೂ ತೆನೆ ಹೊತ್ತ ಮಹಿಳೆ ಮಕಾಡೆ ಮಲಗಿರುವುದು ಹಾಸ್ಯಾಸ್ಪದವಾಗಿದೆ.
ಜೆಡಿಎಸ್ ಎಡವಿದ್ದೆಲ್ಲಿ ?
ಈ ಉಪ-ಚುನಾವಣೆಯ ಅಗತ್ಯವೇ ಇರಲಿಲ್ಲ. ಅದನ್ನು ಸ್ವತಃ ಮೈಮೇಲೆಳೆದುಕೊಂಡಲ್ಲಿಂದಲೇ ಕುಮರಸ್ವಾಮಿಯವರ ಯಡವಟ್ಟು ಶುರುವಾಗಿತ್ತು. ಅವರು ರಾಜೀನಾಮೆ ನೀಡುವುದು ಕೇವಲ ಎಂಟು ದಿನ ತಡ ಮಾಡಿದ್ದರೂ ದೇಶದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ಉಳಿಯುತ್ತಿತ್ತು. ಮುಂದಿನ ಲೋಕಸಭಾ ಚುನಾವಣೆಗೆ ಒಂದು ನಿಗದಿಗಿಂತಲೂ ಕಡಿಮೆ ಸಮಯ ಉಳಿಯುವುದರಿಂದ ಈ ಬಾರಿಯ ಉಪ-ಚುನಾವಣೆ ಅಗತ್ಯವೇ ಬರುತ್ತಿರಲಿಲ್ಲ. ಆದರೆ ಇದರ ಅರಿವು ಕುಮಾರಸ್ವಾಮಿಯವರಿಗೆ ಇರಲಿಲ್ಲ ಎನ್ನಲಾಗದು. ಹೇಗಿದ್ದರೂ ಇದು ತನ್ನದೇ ಕ್ಷೇತ್ರ, ಇಲ್ಲಿ ಜೆಡಿಎಸ್ ಬಿಟ್ಟು ಇನ್ಯಾರು ಗೆಲ್ಲಲು ಸಾಧ್ಯ ಅನ್ನುವ ಅಹಮಿಕೆಯೋ ಅಂತೂ ಅನಗತ್ಯ ಚುನಾವಣೆಯನ್ನು ತಂದಿಟ್ಟು ಬೊಕ್ಕಸಕ್ಕೊಂದಿಷ್ಟು ಖರ್ಚು ಮಾಡಿಸಿಯೆ ಬಿಟ್ಟರು. ದೇಶದ ದುಡ್ಡಲ್ಲವೆ? ಒಂದಲ್ಲ, ಹತ್ತು ಚುನಾವಣೆ ನಡೆದರೇನಂತೆ ? ತಮಗೇನು ನಷ್ಟ ? ಎಂದು ಭಾವಿಸಿದವರಿಗೆ ಸರಿಯಾದ ನಷ್ಟ ನೀಡಲು ಮತದಾರ ನಿರ್ಧರಿಸಿದ್ದ.
ಹೀಗೆ ಅನಗತ್ಯ ಚುನವಣೆಯನ್ನು ಕ್ಷೇತ್ರದ ಮೇಲೆ ಹೇರಿದ್ದೇ ಜೆಡಿಎಸ್ ಮಾಡಿದ ಮೊದಲ ಅಪರಾಧ. ಅದಾದ ನಂತರವೂ ಇವರ ಯಡವಟ್ಟುಗಳು ಒಂದರ ಹಿಂದೊಂದರಂತೆ ಜಗಜ್ಜಾಹೀರಾದುದು ಚುನಾವಣೆ ಘೋಷಣೆಯಾದ ನಂತರ!
ಬೇರೆ ಅಭ್ಯರ್ಥಿಗಳಿಲ್ಲವೇ ಗೌಡರೇ ?
ಉಪ-ಚುನಾವಣೆ ಘೋಷಣೆಯಾದ ನಂತರವಾದರೂ ಗೌಡರ ಕುಟುಂಬ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ ಅದು ಹಾಗಾಲಿಲ್ಲ. ಅನಿತಾ ಕುಮಾರಸ್ವಾಮಿಯವರು ಕಳೆದ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಸ್ಪರ್ಧಿಸಿ ಸೋತಿದ್ದರು. ಮತ್ತದೇ ಅನಿತಾ ಕುಮಾರಸ್ವಾಮಿಯನ್ನೇ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ನಿಲ್ಲಿಸುವ ಮೂಲಕ ಕುಟುಂಬ ರಾಜಕಾರಣ ತಮ್ಮ ಆಜನ್ಮ ಸಿದ್ಧ ಹಕ್ಕು ಎಂಬುದನ್ನು ಸಾಬೀತು ಮಾಡಿದರು. ಪಕ್ಕದ ಮಂಡ್ಯ ಕ್ಷೇತ್ರಕ್ಕೆ ಪುಟ್ಟರಾಜುರನ್ನು ಕಣಕ್ಕಿಳಿಸಿದರೂ ಸಹ ಇದರ ಪರಿಣಾಮ ಅಲ್ಲಿಯೂ ಗಾಢವಾಗಿಯೇ ಹಬ್ಬಿತ್ತು. ಜೆಡಿಎಸ್‌ಗೆ ಗೌಡರ ಕುಟುಂಬದ ಜನರು ಬಿಟ್ಟರೆ ಬೇರೆ ಅಭ್ಯರ್ಥಿಗಳೇ ಇಲ್ಲ ಎಂಬ ಸೆಡವು ಮತದಾರರಲ್ಲಿ ಅಷ್ಟೇ ಅಲ್ಲ, ಕೆಳ ಮಟ್ಟದ ಕಾರ್ಯಕರ್ತರಲ್ಲೇ ಮನೆ ಮಾಡಿತು. ಇದರ ಪರಿಣಾಮ ಅಂತರ್ಗತವಾಗಿ ಹರಿದಾಡತೊಡಗಿದರೂ ಅದರ ಅರಿವು ಮಾತ್ರ ಮುಖಂಡರಿಗೆ ಆಗಲೆ ಇಲ್ಲ.
ಕ್ಷೇತ್ರದಲ್ಲಿ ಕೆಲವರಾದರೂ ಉತ್ತಮ ಮುಖಂಡರು ಜೆಡಿಎಸ್‌ಗೆ ಲಭ್ಯವಿದ್ದರು. ಅವರಲ್ಲಿ ಯಾರಾದರೊಬ್ಬರು ಸ್ಥಳೀಯರನ್ನು ಆರಿಸಿ ಕಣಕ್ಕಿಳಿಸಬಹುದಿತ್ತು. ಆದರೆ ಅಂತಹ ವಿಶಾಲ ಮನೋಭಾವವನ್ನು ಕುಮಾರಸ್ವಾಮಿಯಾಗಲಿ, ದೇವೇಗೌಡರಾಗಲಿ ತೋರಿಸುವ ಗೋಜಿಗೇ ಹೋಗಲಿಲ್ಲ. ಇದು ಸ್ಥಳೀಯವಾಗಿ ಚಾಲ್ತಿಯಲ್ಲಿರುವ ಮುಖಂಡರಿಗೆ ಇರಿಸು ಮುರಿಸು ಉಂಟು ಮಾಡಿದ್ದರಲ್ಲಿ ಯಾವ ಅನುಮಾನವೂ ಇಲ್ಲ. ಹತ್ತಾರು ವರ್ಷ ಪಕ್ಷಕ್ಕಾಗಿ ಮಣ್ಣು ಹೊತ್ತವರಿಗೆ ಕೊನೇ ಪಕ್ಷ ಉಪ-ಚುನಾವಣೆಯಲ್ಲೂ ಸ್ಪರ್ಧಿಸುವ ಅವಕಾಶ ಇಲ್ಲ ಅಂದರೆ ಹೇಗೆ ? ಒಂದು ವೇಳೆ ಇಲ್ಲಿ ಗೆದ್ದು ಬಂದರೂ ಅಧಿಕಾರ ಅಂತ ಸಿಗುವುದು ಏಳೆಂಟು ತಿಂಗಳು ಮಾತ್ರ ! ಅದು ಅಧಿಕಾರವೂ ಅಲ್ಲ, ಬರೀ ಸಂಸದ ಸ್ಥಾನ ಅಥವಾ ಹೆಗ್ಗಳಿಕೆ ಮಾತ್ರ. ಅದಕ್ಕೂ ಕೊಕ್ಕೆ ಹಾಕಿ ತನ್ನ ಪತ್ನಿಯನ್ನೇ ಮತ್ತೆ ಸ್ಫರ್ಧಿಸುವಂತೆ ಮಾಡಿದರೆ ಯಾವ ಮುಖಂಡ ತಾನೇ ಸರಿಯಾಗಿ ಕೆಲಸ ಮಾಡಲು ಸಾಧ್ಯ ?
ಹೀಗೆ ಜೆಡಿಎಸ್ ಅಂದರೆ ಗೌಡರ ಕುಟುಂಬ, ಗೌಡರ ಕುಟುಂಬ ಅಂದರೆ ಜೆಡಿಎಸ್ ಎಂಬ ಹೇಳಿಕೆ ಜೆಡಿಎಸ್‌ನೊಳಗೇ ಹರಿದಾಡುತ್ತಿರುವಾಗ ಅದು ಗೌಡರ ಕಿವಿಗೆ ಬೀಳದಿರುವುದು ಆಶ್ಚರ್ಯ.
ಹಾಗೇ ಸುಮ್ಮನೆ ಒಂದು ಸಲ ಯೋಚಿಸಿ ನೋಡಿ, ಜಾತ್ಯಾತೀತ ಜನತಾದಳದ ರಾಷ್ಟ್ರಾಧ್ಯಕ್ಷರು ಸನ್ಮಾನ್ಯ ದೇವೇಗೌಡ. ಆ ಪಕ್ಷದ ರಾಜ್ಯಾಧ್ಯಕ್ಷರು ದೇವೇಗೌಡರ ಮಗ ಕುಮಾರಸ್ವಾಮಿ. ಇವರು ಸಧ್ಯಕ್ಕೆ ವಿಧಾನಸಭೆಯ ಪ್ರತಿಪಕ್ಷದ ನಾಯಕರೂ ಹೌದು. ದೇವೇಗೌಡರ ಇನ್ನೊಬ್ಬ ಮಗ ಮಾಜಿ ಸಚಿವ, ಹಾಲೀ ಶಾಸಕ. ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿ ಮಾಜಿ ಶಾಸಕಿ. ಅಪ್ಪಿತಪ್ಪಿ ಜೆಡಿಎಸ್ ಏನಾದರೂ ಅಧಿಕಾರಕ್ಕೆ ಬಂದಲ್ಲಿ ಇವರು ಮಂತ್ರಿಯಾಗುವುದನ್ನು ತಡೆಯಲು ಬ್ರಹ್ಮನಿಂದಲು ಸಾಧ್ಯವಿಲ್ಲ! ಹಾಗೆಯೆ ಕಳೆದ ಬಾರಿಯ ಚುನಾವಣೆಯಲ್ಲೇ ಕುಮಾರಸ್ವಾಮಿಯವರ ಮಗ ಕೂಡಾ ಯವುದೋ ಕ್ಷೇತ್ರಕ್ಕೆ ಅಭ್ಯರ್ಥಿಯಾಗುತ್ತಾರೆಂಬ ವದಂತಿಗಳಿದ್ದವು. ಪುಣ್ಯಕ್ಕೆ ಅದೊಂದಾಗಲಿಲ್ಲ! ಹೀಗೆ ಒಂದಿಡೀ ಪಕ್ಷವನ್ನೇ ಒಂದು ಕುಟುಂಬ ಹಂಚಿಕೊಂಡು ಬಿಟ್ಟರೆ ಆ ಪಕ್ಷವನ್ನು ನಂಬಿರುವ ಇತರ ನಾಯಕರ ಗತಿಯೇನು ಗೌಡರೆ ?
ಬಗಲಿಗೆ ಬಗಣಿ ಗೂಟ ಬಡಿದ ಬಿಜೆಪಿ !
ಉಳಿದೆಲ್ಲಾ ವಿಷಯಗಳೂ ಒತ್ತಟ್ಟಿಗಿರಲಿ, ಇದೀಗ ಮುಗಿದಿರುವ ಉಪ-ಚುನಾವಣೆ ವಿಷಯಕ್ಕೇ ಬರೋಣ. ದೇವೇಗೌಡರು ಹೇಳೋದೇನು? ಮಾಡೋದೇನು ? ತಾನು ಹಾಗೂ ತಮ್ಮ ಪಕ್ಷ ಜಾತ್ಯಾತೀತ ಎಂದು ಹೇಳಿಕೊಂಡು ಊರೆಲ್ಲಾ ತಿರುಗುತ್ತಾರೆ. ಮುಸಲ್ಮಾನರ ಮನೆಗೆ ಹೋಗಿ ಬಿಳಿ ಟೋಪಿ ಹಾಕಿಕೊಂಡು, ಹಸಿರು ಶಾಲು ಹೊದ್ದುಕೊಂಡು ಇಫ್ತಾರ್ ಕೂಟದಲ್ಲಿ ಭಾಗವಹಿಸುತ್ತಾರೆ. ಬಿಜೆಪಿಯನ್ನು ಕೋಮುವಾದಿ ಅಂತ ಬೈದುಕೊಂಡು ತಿರುಗಾಡುತ್ತಾರೆ. ಕೊನೆಗೆ ಅದೇ ಪಕ್ಷದ ಜೊತೆ ಶಾಲು ಬದಲಾಯಿಸಿಕೊಳ್ಳುತ್ತಾರೆ. ಈ ಬಾರಿ ಇವರು ಮಾಡಿದ್ದೂ ಇದನ್ನೇ. ರಾತ್ರಿ ಕಂಡ ಬಾವಿಗೆ ಹಗಲು ಬೀಳೋದು ಅಂದರೆ ಇದೇ ಅಲ್ಲವೆ ?
ಈ ಬಾರಿ ಒಂದು ವೇಳೆ ಬಿಜೆಪಿ ಜೊತೆ ಸಖ್ಯ ಬೆಳೆಸದೇ ಹೋಗಿದ್ದಲ್ಲಿ ಜೆಡಿಎಸ್ ಈ ಪರಿ ಸೋಲುತ್ತಿರಲಿಲ್ಲ ಎಂದು ಕಾಂಗ್ರೆಸ್ ಮುಖಂಡರೇ ಹೇಳುತ್ತಿದ್ದಾರೆ. ಇವರು ಮಾಡಿಕೊಂಡ ಕೂಡಿಕೆಯಾದರೂ ಎಂಥಹುದು ? ಪ್ರಾರಂಭದಲ್ಲಿ ಇವನು ಗೆಳೆಯನಲ್ಲ.. ಎಂದೇ ಹೇಳಿಕೊಂಡು ಬಂದರು. ಆಮೇಲಾಮೇಲೆ ತುಂಬ ಸನಿಹ ಬಂದಿಹನಲ್ಲ… ಎಂದು ಹಾಡತೊಡಗಿದರು. ಆಗಲೇ ಜೆಡಿಎಸ್ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರು ಕಂಗಾಲಗಿದ್ದು ! ಗೌಡರು ತಮ್ಮನ್ನು ಆಳವಾದ ಹೊಂಡಕ್ಕೇ ಎಸೆದರು ಎಂದು ಅವರಂದುಕೊಂಡರು. ಈ ರೀತಿ ಅನೈತಿಕವಾಗಿ ಬಿಜೆಪಿ ಜೊತೆ ಸಖ್ಯ ಬೆಳೆಸುವಾಗ ಕುಮರಸ್ವಾಮಿಯವರು ಆಗಾಗ ಉದುರಿಸುತ್ತಿದ್ದ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್-ಬಿಜೆಪಿಯನ್ನು ಸಮಾನ ಅಂತರದಲ್ಲಿ ಇರಿಸಲಾಗುವುದು ಎಂಬ ಆಣಿಮುತ್ತುಗಳು ಎಲ್ಲಿ ಉದುರಿ ಹೋದವೋ ಏನೋ.
ಬಿಜೆಪಿ ಬೆಂಬಲ ನೀಡಿದರೂ ಅದನ್ನಾದರೂ ಅವರು ಸರಿಯಾಗಿ ಮಾಡಿದರಾ ? ಕಾಟಾಚಾರಕ್ಕೆಂಬಂತೆ ಆರ್. ಆಶೋಕ್ ಬಂದು ಒಂದೆರಡು ಬಾರಿ ಪ್ರಚಾರ ಮಾಡಿ ಹೋದರು. ಉಳಿದ ಬಿಜೆಪಿ ನಾಯಕರು ಅತ್ತ ಮುಖ ಹಾಕಲೂ ಇಲ್ಲ. ಇದೊಂಥರ ಬೆಂಬಲ ಕೊಟ್ಟೋನು ಕೋಡಂಗಿ, ಇಸಕೊಂಡೋನು ಈರಭದ್ರ ಎಂಬಂತಾಯ್ತು. ಬಿಜೆಪಿ ಬೆಂಬಲ ನೀಡಿದ್ದರಿಂದ ಜೆಡಿಎಸ್‌ನವರೂ ಸಹ ಇರಿಸುಮುರಿಸುಗೊಂಡು ಕೆಲಸ ಸರಿಯಾಗಿ ಮಡಲಿಲ್ಲ.
ಹಾಗೆ ನೋಡಿದರೆ ಬಿಜೆಪಿ ಜೊತೆ ಸಖ್ಯ ಮಾಡಲಿಕ್ಕೆ ಹೇಳಿಕೊಳ್ಳುವಂತಹ ಕಾರಣಗಳೇ ಇರಲಿಲ್ಲ. ಇದೊಂತರ ಕಾರಣವಿಲ್ಲದೆ ಆತ್ಮಹತ್ಯೆ ಮಾಡಿಕೊಂಡಂತಹ ಪ್ರಸಂಗ ! ಉಪ-ಚುನಾವಣೆ ನಡೆದ ಎರಡೂ ಕ್ಷೇತ್ರಗಳೂ ಹೇಳಿ ಕೇಳಿ ಜೆಡಿಎಸ್ ಪಟ್ಟಿಗಳು. ಇಲ್ಲಿ ನಿಜ ಹೇಳಬೇಕೆಂದರೆ ಕಾಂಗ್ರೆಸ್ ಅವರಿವರ ಸಹಾಯ ಯಾಚಿಸಬೇಕಾಗಿತ್ತು. ಆದರೆ ಸಹಾಯ ಯಾಚಿಸಿದ್ದರಿಂದಲೇ ಜೆಡಿಎಸ್ ಕೆಟ್ಟಿತು. ಚುನಾವಣಾ ಫಲಿತಾಂಶ ಬಂದಾಗ ಜೆಡಿಎಸ್ ಕಾರ್ಯಕರ್ತರು ಹೇಳಿದ್ದು.. ಜೆಡಿಎಸ್ ಸೋಲಿಗೆ ಕಾರಣ ಬಿಜೆಪಿ, ಮತ್ತೊಂದು ಕಾರಣ ಜೆಡಿಎಸ್‌ನ ಮುಖಂಡರು. ಬಿಜೆಪಿ ಮತಗಳು ಜೆಡಿಎಸ್‌ಗೆ ಬಂದವು, ಆದರೆ ಏನ್ಮಾಡೋದು, ಜೆಡಿಎಸ್ ಮತಗಳೇ ಕಾಂಗ್ರೆಸ್‌ಗೆ ಹೋಗಿದ್ದವು!
ಅಪ್ಪ ಯಾರಾದರೆ ಇವರಿಗೇನಂತೆ ?
ಜೆಡಿಎಸ್ ಅತಿ ದೊಡ್ಡ ಯಡವಟ್ಟು ಮಾಡಿಕೊಂಡಿದ್ದೇ ರಮ್ಯಳ ಅಪ್ಪನ ವಿಷಯ ಎತ್ತಿ. ಆಕೆಯ ಅಪ್ಪ ಯಾರಾದರೆ ಇವರಿಗೆ ಏನು ತೊಂದರೆ ಆಗುತ್ತಿತ್ತೋ ಗೊತ್ತಿಲ್ಲ. ಆಕೆಯ ತಂದೆಯ ವಿಷಯ ಚುನಾವಣೆಗೆ ಸಂಬಂಧಿಸಿದ್ದೇ ಅಲ್ಲ. ಅದು ಆಕೆಯ ಸ್ವಂತ ವಿಷಯ. ಅದನ್ನು ಕೆದಕಿ ಇವರು ಕೈಬಾಯಿ ಹೊಲಸು ಮಾಡಿಕೊಂಡರು. ಇತ್ತೀಚಿಗೆ ಇವರು ಅಂತ ಅಲ್ಲ, ಬಹುತೇಕ ರಾಜಕಾರಣಿಗಳು ತಮ್ಮ ಉತ್ತಮ ಕೆಲಸಗಳನ್ನು ಹೇಳಿಕೊಂಡು ಮತ ಯಾಚಿಸುವ ಬದಲಾಗಿ ಎದುರಿನವರ ಏನಾದರೂ ವಿಷಯಗಳನ್ನೇ ಮುಂದು ಮಾಡಿಕೊಂಡು ಮತ ಯಾಚಿಸಲು ಹೊರಡುತ್ತಾರೆ. ಇದು ಯಾಕೆ ಎಂದು ಅರ್ಥವಾಗದು. ಬಹುಶಃ ತನ್ನ ಬಗ್ಗೆ ಹೆಳಿಕೊಳ್ಳುವ ವಿಷಯ ಏನೂ ಇಲ್ಲವಾದಾಗ ಈ ರೀತಿ ಕೆಟ್ಟ ಚಾಳಿಯನ್ನು ಬೆಳೆಸಿಕೊಳ್ಳುತ್ತಾರೆ ಎಂದೆನಿಸುತ್ತದೆ.
ಅದೇ ರೀತಿ ಮಹದೇವಸ್ವಾಮಿ ಎಂಬ ಮಹಾಶಯ ರಮ್ಯಳ ಅಪ್ಪ ಯಾರು ? ಆಕೆ ಯಾಕೆ ತಂದೆಯ ಹೆಸರು ಹಾಕಿಲ್ಲ? ಎಂಬ ಎಡಬಿಡಂಗಿ ಪ್ರಶ್ನೆಯನ್ನ ಬಹಿರಂಗವಾಗಿ ಕೇಳಿದ. ಅಲ್ಲ, ಆಕೆಯ ಅಪ್ಪ ಯಾರಾದರೆ ಇವರಿಗೆ ಏನು ಚಿಂತೆ ? ಹೀಗೆ ಕೇಳುವವರಿಗೆ ಅಪ್ಪ ಇದ್ದಾಕ್ಷಣ ಆತನೆ ನಿಜವಾದ ತಂದೆ ಎಂಬ ಡಿಎನ್‌ಎ ಸರ್ಟಿಫಿಕೇಟನ್ನು ಇವರೆಲ್ಲಾ ಲಗತ್ತಿಸಲು ಸಾಧ್ಯವೆ ? ಅದಕ್ಕಾಗಿಯೆ ಹಿಂದಿನವರು ಅಮ್ಮ ನಿಶ್ಚಯ, ಅಪ್ಪ ಸಂಶಯ ಎಂಬ ನಾಣ್ನುಡಿಯನ್ನು ತೇಲಿ ಬಿಟ್ಟಿದ್ದಾರೆ. ತಂದೆಯ ವಿಷಯವನ್ನು ಕೆದಕುವುದು ಸೌಜನ್ಯವಲ್ಲ. ಅದನ್ನು ಆ ವ್ಯಕ್ತಿ ಮಾಡಿದ ನಂತರ ದೇವೇಗೌಡ, ಕುಮಾರಸ್ವಾಮಿಯವರಾದರೂ ಅದಕ್ಕೆ ತೇಪೆ ಹಾಕುವ ಕೆಲಸ ಮಾಡಬಹುದಿತ್ತು. ಆದರೆ ತೇಪೆ ಹಾಕುವುದು ಹಾಗಿರಲಿ, ಕುಮಾರಸ್ವಾಮಿಯವರು ಕೂಡಾ ಅದೇ ಪ್ರಶ್ನೆಯನ್ನು ಕೇಳಿದ್ದು ನಾಚಿಗೆಗೇಡಾಗಿತ್ತು. ಇನ್ನೊಬ್ಬ ಅಭ್ಯರ್ಥಿಯ ತಂದೆಯ ವಿಷಯ ಜಾಲಾಡುವ ಕುಮಾರಸ್ವಾಮಿಯವರು ಸ್ವತಃ ಮಾಡಿರುವುದೇನು ?
ಈ ಪ್ರಶ್ನೆಗಳಿಂದ ಕಂಗಾಲಾದ ರಮ್ಯ ಹೋದಲ್ಲೆಲ್ಲಾ ಕಣ್ಣೀರಿನ ಕೋಡಿಯನ್ನೇ ಹರಿಸಿದಳು. ಮೊದಲೆ ನಟಿ, ಇನ್ನು ಕೇಳಬೇಕೆ? ನಿಜವಾಗಿಯೂ ಅಳುತ್ತಿದ್ದಾಳೋ ಅಥವಾ ಗ್ಲಿಸರಿನ್ ಬಳಸಿದ್ದಾಳೋ ಎಂಬುದು ಕೂಡಾ ಜನರಿಗೆ ತಿಳಿಯದೇ ಹೋದರೂ ಆ ಕ್ಷಣಕ್ಕೆ ಆಕೆಯ ಮೇಲೆ ಅನುಕಂಪ ಮೂಡಿದ್ದರಲ್ಲಿ ಅನುಮಾನವಿಲ್ಲ.
ಯಾವುದೋ ಸಂದರ್ಭದಲ್ಲಿ ಕುಮಾರಸ್ವಾಮಿಯವರೂ ಕಣ್ಣೀರು ಹಾಕಿದರೆಂದು ಸುದ್ದಿಯಾಯ್ತು. ಗೆಲುವು ಸೋಲು ಇದ್ದದ್ದೆ. ಅದಕ್ಕಾಗಿ ಕಣ್ಣೀರು ಯಾಕೆ ಹಾಕಬೇಕು ? ಆಯಮ್ಮ ಏನೋ ಹೆಣ್ಣು ಮಗಳು, ನಿಮಗೇನಾಗಿತ್ತು ಅಂತ ಕಣ್ಣೀರು ಹಾಕಿದ್ರಿ ? ನಿಮಗೇನು ಕಡಿಮೆ ಆಗಿದೆ ? ನಗುವ ಹೆಂಗಸನ್ನ, ಅಳುವ ಗಂಡಸನ್ನ ನಂಬಬೇಡ ಅಂತ ಹಿರಿಯರು ಹೇಳಿದ್ದಾರೆ. ಅದು ತಿಳಿಯದೇ ಕುಮಾರಸ್ವಾಮಿಯವರೆ ?
ರಮ್ಯಗೆ ಸಿಕ್ಕ ಬೆಂಬಲ
ಇಷ್ಟೆಲ್ಲ ಆದರೂ ಪರಿಸ್ಥಿತಿ ಕಾಂಗ್ರೆಸ್‌ನೆಡೆಗೇ ಇತ್ತು. ಮೊದಲನೆಯದಾಗಿ ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಕಾಂಗ್ರೆಸ್ ಸರ್ಕಾರವೇ ಆದುದರಿಂದ ಜನರ ಮನಸ್ಸು ಅದರೆಡೆಗೇ ಇತ್ತು. ಮೇಲಾಗಿ ಮುಖ್ಯಮಂತ್ರಿಯಾಗಿ ಉತ್ತಮ ಹೆಸರು ಸಂಪಾದಿಸಿರುವ ಸಿದ್ದರಾಮಯ್ಯ. ಮೇಲಾಗಿ ಈ ಸರ್ಕಾರ ಜಾರಿಗೆ ತಂದ ರೂಪಾಯಿಗೊಂದು ಕಿಲೋ ಅಕ್ಕಿ. ಅದಕ್ಕೂ ಮೇಲಾಗಿ ಮಂಡ್ಯದ ಗಂಡು ಅಂಬರೀಶ್. ಇದೆಲ್ಲದರ ಜೊತೆಗೆ ರಮ್ಯ ಮನೋಹರ ಗ್ಲಾಮರಸ್! ಇಷ್ಟೆಲ್ಲದರ ಜೊತೆಗೆ ಜೆಡಿಎಸ್‌ನವರ ಎಡಬಿಡಂಗಿತನಗಳು! ಎಲ್ಲಾ ಸೇರಿಕೊಂಡು ರಮ್ಯ ಹಾಗೂ ಡಿ.ಕೆ. ಸುರೇಶ್‌ರನ್ನು ಗೆಲ್ಲಿಸಿದವು ಎನ್ನಬಹುದು.
ಸಾಧಾರಣವಾಗಿ ಉಪ-ಚುನವಣೆಗಳಲ್ಲಿ ಯಾವ ಪಕ್ಷ ಅಧಿಕಾರದಲ್ಲಿರುತ್ತೋ ಆ ಪಕ್ಷದ ಅಭ್ಯರ್ಥಿಯೇ ಗೆಲ್ಲುವ ಅವಕಾಶ ಹೆಚ್ಚು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಎಂಟತ್ತು ಉಪ-ಚುನಾವಣೆಗಳಲ್ಲೂ ಅದೇ ಪಕ್ಷ ಗೆದ್ದಿತ್ತು. ಕೊನೆಯ ಉಡುಪಿ ಉಪ-ಚುನಾವಣೆಯಲ್ಲಿ ಮಾತ್ರ ಮುಗ್ಗರಿಸಿತ್ತು.
ಇಷ್ಟೆಲ್ಲಾ ವಿಷಯಗಳಲ್ಲಿ ಕೋಟೆ ಬಿಟ್ಟುಕೊಟ್ಟು ಸೋತ ನಂತರ ಶ್ರೀಮತಿ ಅನಿತಾ ಕುಮಾರಸ್ವಾಮಿಯವರು ಆಡಿದ ಮತುಗಳಾದರೂ ಎಂತವು ? ಕೊನೆಗೂ ಹಣವೇ ಗೆದ್ದಿತು, ಆಹಾ! ನೀವೇನೂ ಹಣ ಹಂಚಲೇ ಇಲ್ಲವೆ ? ಅಥವಾ ನೀವೇನು ಗೆಲ್ಲಲೇ ಬೇಕಾದ ಅಭ್ಯರ್ಥಿಯೆ ? ಹಿಂದಿನ ಬಾರಿ ಶಾಸಕಿಯಾದ ನಂತರ ಏನು ಮಾಡಿದ್ದೀರಿ ಎಂಬುದು ಜನರಿಗೆ ತಿಳಿದಿಲ್ಲವೆ ? ಶಾಸಕಿಯಾದ ನಿಮಗೆ ಕಸ್ತೂರಿ ಟಿವಿ ಕಚೇರಿಯೆ ವಿಧಾನಸೌಧವಾಗಿತ್ತಲ್ಲ ? ಆಗ ಜನರೊಂದಿಗೆ ಬೆರೆಯಬೇಕು, ಅವರ ಕಷ್ಟ ಸುಖಗಳಿಗೆ ಸ್ಪಂದಿಸಬೇಕು ಅಂತ ಅನ್ನಿಸಲಿಲ್ಲವೆ ? ಯಾವ ಘನಂಧಾರಿ ಕೆಲಸ ರಾಜ್ಯಕ್ಕಾಗಿ ಮಾಡಿದ್ದೀರಿ ಎಂದು ನಿಮ್ಮನ್ನು ಗೆಲ್ಲಿಸಬೇಕು ? ನಿಮಗೆ ಓಟು ಹಾಕಲೇ ಬೇಕಾದ ಹರಕತ್ತು ಜನರಿಗೇನಿದೆ ? ದೇವೇಗೌಡರ ಸೊಸೆ, ಕುಮಾರಸ್ವಾಮಿಯವರ ಧರ್ಮಪತ್ನಿ ಅನ್ನುವುದು ಬಿಟ್ಟರೆ ಜನಸೇವೆ ಜನ ಮೆಚ್ಚುವಂತಹ ಯಾವ ಅರ್ಹತೆ ನಿಮ್ಮಲ್ಲಿದೆ ? ಜನರು ಹಣ ಪಡೆದು ಮತ ಚಲಾಯಿಸಿದರು ಎಂದು ಹೇಳಿ ಅವರನ್ನು ಅವಮಾನಿಸುವ ಅಧಿಕಾರ ನಿಮಗೆಲ್ಲಿದೆ ? ಸೋಲನ್ನು ಸೌಜನ್ಯಯುತವಾಗಿ ಒಪ್ಪಿಕೊಳ್ಳುವ ನೇರವಂತಿಕೆಯಾದರೂ ಬೇಡವೆ ?
ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಲಿ
ಈ ಲೇಖನ ಬರೆಯುತ್ತಿರುವ ಹೊತ್ತಿಗೇ ಜೆಡಿಎಸ್‌ನಲ್ಲಿ ಸಣ್ಣಗೆ ಕನಲಿಕೆ ಶುರುವಾಗಿರುವ ಸುದ್ದಿ ಬಂದಿದೆ. ಶಾಸಕ ಮಲ್ಲಿಕಾರ್ಜುನ ಖೂಬಾ ಪಕ್ಷಕ್ಕೆ ರಾಜೀನಾಮೆ ನಿಡುತ್ತಿರುವ ಸುದ್ದಿ ಅದು. ಅವರು ಕಾಂಗ್ರೆಸ್‌ಗೆ ಸೇರುವ ವದಂತಿಯೂ ಇದೆ. ಹಾಗೆಯೆ ಕುಮಾರಸ್ವಾಮಿಯವರ ಬಲಗೈ ಬಂಟ ಎಂದೇ ಪ್ರಸಿದ್ದಿ ಪಡೆದ ಜಮೀರ್ ಅಹ್ಮದ್ ಸಹ ಪಕ್ಷ ಬಿಡುವ ಸೂಚನೆ ಇದೆ.
ಇವರನ್ನೆಲ್ಲ ಕಾಂಗ್ರೆಸ್ ಹೈಜಾಕ್ ಮಾಡುತ್ತಿದೆ ಎಂದು ಅವರ ಮೇಲೆ ಗೂಬೆ ಕೂರಿಸಬಹುದು. ಆದರೆ ಸ್ಪಷ್ಟ ಬಹುಮತ ಹೊಂದಿರುವ ಹಾಗೂ ಏಕಾಏಕಿ ಒಬ್ಬ ನಟಿಯನ್ನ ಗೆಲ್ಲಿಸಿಕೊಳ್ಳಬಹುದಾದ ಶಕ್ತಿ ಇರುವ ಕಾಂಗ್ರೆಸ್ ಈಗ ಬೇರೆ ಪಕ್ಷದ ಶಾಸಕರನ್ನ ಹೈಜಾಕ್ ಮಾಡುತ್ತದೆಂಬುದಕ್ಕೆ ಆಧಾರವಿಲ್ಲ. ಅದೇನೇ ಆದರೂ ಈಗ ಒಬ್ಬ ಶಾಸಕ ಜೆಡಿಎಸ್ ತೊರೆದರೂ ವಿಧಾನಸಭೆಯಲ್ಲಿ ಕುಮಾರಸ್ವಾಮಿಯವರ ಪ್ರತಿಪಕ್ಷ ಸ್ಥಾನಕ್ಕೆ ಸಂಚಕಾರ ಬರಲಿದೆ! ಬಿಜೆಪಿ ಹಾಗೂ ಜೆಡಿಎಸ್ ಸಮಬಲ ಹೊಂದಿದ್ದರೂ ಮತಗಳ ಆಧಾರದಲ್ಲಿ ಕುಮಾರಸ್ವಾಮಿಯವರಿಗೆ ಪ್ರತಿಪಕ್ಷ ಸ್ಥಾನ ದೊರಕಿದೆ. ಈಗ ಒಬ್ಬ ಶಾಸಕ ಕಡಿಮೆಯಾಗಿ ಹೋದರೆ ಪ್ರತಿಪಕ್ಷ ಸ್ಥಾನ ಸರಾಗವಾಗಿ ಬಿಜೆಪಿ ಮಡಿಲು ಸೇರಲಿದೆ. ಇದು ಮುಂಬರುವ ಲೋಕಸಭೆ ಚುನಾವಣೆಗೆ ಜೆಡಿಎಸ್‌ಗೆ ದೊಡ್ಡ ಹೊಡೆತವಾಗುವುದರಲ್ಲಿ ಅನುಮಾನವಿಲ್ಲ. ಶಾಸಕರು ಜೆಡಿಎಸ್ ತೊರೆದರೆ ಅದಕ್ಕೆ ನೇರ ಹೊಣೆ ದೇವೆಗೌಡ ಹಾಗೂ ಕುಮಾರಸ್ವಾಮಿಯವರೆ ಆಗಿದ್ದಾರೆ. ಇನ್ನಾದರೂ ನೀವಿಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಿರಿ.
ಚುನಾವಣೆಯಲ್ಲಿ ಸೋತ ನಂತರ ಕುಮಾರಸ್ವಾಮಿಯವರು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ. ಅದಕ್ಕೆ ದೊಡ್ಡಗೌಡರು ಬೇಡ ಅಂದರೆ ಅದನ್ನೂ ಇವರು ಮಾಡಲಾರರು. ಇತ್ತ ಪ್ರತಿಪಕ್ಷ ಸ್ಥಾನ ಹೋದರೆ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಎಂಬಂತಾಗಬಹುದು. ಆದರೂ ಈಗಿರುವ ದಾರಿ ಪಕ್ಷದಲ್ಲೇ ಇರುವ ಉತ್ತಮ ನಾಯಕರಿಗೆ ಅಧಿಕಾರ ವಹಿಸಿ ತಂದೆ ಮಕ್ಕಳ ಪಕ್ಷ ಎಂಬ ಹಣೆ ಬರಹದಿಂದ ಬಿಡುಗಡೆ ಹೊಂದುವುದು. ಹಾಗೂ ಪಕ್ಷ ಸಂಘಟನೆಗೆ ಜಾತಿಯನ್ನು ಮೀರಿ ಒತ್ತು ಕೊಡುವುದು. ಪಕ್ಷಕ್ಕಾಗಿ ದುಡಿದವರಿಗೆ ಇನ್ನಾದರೂ ಮನ್ನಣೆ ನೀಡಿ ಅವರನ್ನು ಬೇರೆ ಪಕ್ಷಗಳಿಗೆ ಹೋಗದಂತೆ ತಡೆಯುವುದು. ಇದನ್ನೆಲ್ಲಾ ಮಾಡಿದರೆ ಜೆಡಿಎಸ್ ಚೇತರಿಸಿಕೊಳ್ಳಬಹುದೇ ಹೊರತಾಗಿ ಈಗಿರುವಂತೆಯೆ ಮುಂದುವರಿದರೆ ಬರುವ ಚುನಾವಣೆಯಲ್ಲಿ ನಾಲ್ಕು ಸ್ಥಾನ ಗೆಲ್ಲುವುದೂ ಕಷ್ಟವಾಗಬಹುದು! 
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…