ವಿಷಯಕ್ಕೆ ಹೋಗಿ

ಹೆಗ್ಗಾಲ್ ಅಣಬೆಯ ಕಟ್ಟುಮಟ್ಲೆಯ ಘಮ!ಮೇಲಿನ ವಾಕ್ಯದಲ್ಲಿ ಮಲೆನಾಡಿನ ಹೊರತಾದ ಜನರಿಗೆ ಎರಡು ಪದಗಳು ಹೊಸತೆನಿಸಬಹುದು. ಮೊದಲನೆಯದು ಹೆಗ್ಗಾಲ್ ಹಾಗೂ ಎರಡನೆಯದು ಕಟ್ಟುಮಟ್ಲೆ. 

ಹೆಗ್ಗಾಲ್ ಅಣಬೆ

ಇದೊಂದು ಜಾತಿಯ ಅಣಬೆ ಮಾತ್ರ. ಮಲೆನಾಡಿನ ಕಾಡು ಮೇಡುಗಳಲ್ಲಿ ಮಳೆಗಾಲದ ಶುರುವಿಗೆ ಗುಡುಗು ಸಿಡಿಲು ಬಂದಾಗ ಭೂಮಿಯಿಂದ ಏಳುವ ಅಣಬೆಗಳಲ್ಲಿ ಹೆಗ್ಗಾಲ್ ಹೆಸರಿನ ಅಣಬೆ ತುಂಬಾ ಪ್ರಸಿದ್ಧ. ಕಾರಣ ಇದು ತುಂಬಾ ರುಚಿ. ಇದರ ಎದುರು ಪೇಟೆಯಲ್ಲಿ ಸಿಗುವ ಎಲ್ಲಾ ಅಣಬೆಗಳನ್ನೂ ನಿವಾಳಿಸಬೇಕು. 

ಇವು ಎಲ್ಲೆಂದರಲ್ಲಿ ವಿನಾಕಾರಣ ಹುಟ್ಟುವುದಿಲ್ಲ. ಇವುಗಳಿಗೆ ನಿರ್ದಿಷ್ಟ ಸ್ಥಳವಿರುತ್ತದೆ. ಅಲ್ಲಿ ಮಾತ್ರ ಮುಂಗಾರು ಶುರವಾಗುವಾಗ ಸಿಡಿಲಬ್ಬರ ಇರುವ ಒಂದು ನಿರ್ದಿಷ್ಟ ದಿನ ಬೆಳ ಬೆಳಗ್ಗೆ ನೂರಾರು ಅಣಬೆಗಳು ಹಿಂದಿನ ವರ್ಷ ಹುಟ್ಟಿದ ಸ್ಥಳದಲ್ಲೇ ಹುಟ್ಟುತ್ತವೆ. ಇವುಗಳ ಆಯಸ್ಸು ಕಡಿಮೆ. ಹುಟ್ಟಿದ ದಿನವೇ ನಾವು ನೋಡಿ ಕಿತ್ತು ತಂದು ಸಾರು, ಪಲ್ಯ ಮಾಡಿ ಸೇವಿಸಬೇಕು. ಒಂದು ದಿನ ಕಳೆದರೂ ಅವು ಬಾಡುತ್ತವೆ. ಅದರಲ್ಲೂ ಹುಟ್ಟಿದ ದಿನ ಬೆಳಗ್ಗೆ ಮೊಳಕೆ ರೂಪದಲ್ಲಿದ್ದರೆ ಸಂಜೆಯ ಹೊತ್ತಿಗೆ ಪೂರ್ತಿ ಅರಳಿ ನಿಂತಿರುತ್ತವೆ. ಸಂಜೆಯೊಳಗೆ ಕೀಳದೇ ಹೋದರೆ ವ್ಯರ್ಥವಾದಂತೆಯೆ.

 ನಾನು ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ನಮ್ಮ ಮನೆಯ ಆಜುಬಾಜಿನಲ್ಲಿ, ಶಾಲೆಗೆ ಹೋಗುವ ಕಾಡು ದಾರಿಯಲ್ಲಿ ಈ ಅಣಬೆಗಳು ಏಳುವ ಅನೇಕ ಜಾಗಗಳನ್ನು ಗುರುತಿಸಿ ಇಟ್ಟಿದ್ದೆ. ಪ್ರತಿ ವರ್ಷ ಮಳೆಗಾಲದ ಶುರುವಿನಲ್ಲಿ ರಾತ್ರಿ ಗುಡುಗು ಸಿಡಿಲು ಹೆಚ್ಚು ಆಗಿತ್ತು ಅಂದರೆ ಮುಗೀತು, ಬೆಳಗ್ಗೆ ಬೇಗ ಎದ್ದವನೇ ಅಣಬೆ ಏಳುವ ಸ್ಥಳಗಳಿಗೆ ಓಡುತ್ತಿದ್ದೆ. ಈ ಸ್ಥಳಗಳು ಹೇಗಿರುತ್ತಿದ್ದವು ಎಂದರೆ ಮುಳ್ಳು ಕಂಟಿಗಳ ಒಳಗೆ, ಬಿದಿರು ಮೆಳೆಗಳ ಒಳಗೆ ಇರುತ್ತಿದ್ದ ಪಾಳು ಹುತ್ತಗಳಂತಹ ಸ್ಥಳಗಳಾಗಿರುತ್ತಿದ್ದವು. ಗುಡುಗು ಮಿಂಚು ಬಂದ ದಿನ ನನ್ನ ಎಣಿಕೆ ತಪ್ಪಾಗುತ್ತಿರಲಿಲ್ಲ. ಯಾವುದಾದರೊಂದು ಸ್ಥಳದಲ್ಲಿ ಹೆಗ್ಗಾಲ್ ಅಣಬೆಗಳು ಸಿಕ್ಕೇ ಸಿಗುತ್ತಿದ್ದವು. ಎಲ್ಲಾ ಜಾಗದಲ್ಲೂ ಒಂದೇ ದಿನ ಏಳುತ್ತಿರಲಿಲ್ಲ ಅವು. 

ಅವುಗಳನ್ನು ಕಿತ್ತು ತಂದು ಮನೆಗೆ ಕೊಟ್ಟರೆ ಅಮ್ಮ ಸಾರು ಅಥವಾ ಪಲ್ಯ ಮಾಡುತ್ತಿದ್ದರು. ಹೆಗ್ಗಾಲ್ ಅಣಬೆಯ ಸಾರು ಅತ್ಯಂತ ರುಚಿದಾಯಕವಾಗಿರುತ್ತದೆ. (ಕೆಲವೊಂದು ವಿಷಯುಕ್ತ ಅಣಬೆಗಳೂ ಇವೆ.)

ಇವು ಗೆದ್ದಲ ಮೊಟ್ಟೆಗಳೇ ?

ಈ ಅಣಬೆಗಳನ್ನು ಕೆಲವು ತಿನ್ನುವುದಿಲ್ಲ. ಕಾರಣ ಇವು ಗೆದ್ದಲಿನ ಮೊಟ್ಟೆಗಳು, ಮಾಂಸಾಹಾರದ ಬಗೆ ಎಮದು ಹೇಳುತ್ತಾರೆ. ಇದನ್ನು ಪತ್ತೆ ಹಚ್ಚಬೇಕು ಎಂದು ಒಂದು ಬಾರಿ ಅಣಬೆ ಎದ್ದಾಗ ಅವುಗಳ ಬುಡವನ್ನು ಅಗೆದು ನೋಡಿದ್ದೆ. ಒಂದೆರಡು ಅಡಿ ಆಳದಿಂದ ಬೇರಿನ ರೂಪದಲ್ಲಿ ಭೂಮಿಯ ಮೇಲಿನ ವರೆಗೂ ಬಂದಿರುತ್ತವೆ. ಆ ಪ್ರಾರಂಭ ಮಾತ್ರ ಗೆದ್ದಲಿನ ಗೂಡಿನಲ್ಲೇ ಇರುತ್ತಿತ್ತು. ನಿಜಕ್ಕೂ ಗೆದ್ದಲಿನ ಮೊಟ್ಟೆಯೇ ಸಿಡಿಲು ಬಡಿದಾಗ ವಿದ್ಯುದ್ಕಾಂತೀಯ ಕಾರಣಕ್ಕೆ ಅಣಬೆಗಳಾಗುತ್ತವಾ ? ಅಥವಾ ಗೆದ್ದಲಿನ ಗೂಡಲ್ಲಿ ಮಾತ್ರ ಈ ಶಿಲೀಂದ್ರ (ಅಣಬೆ) ಹುಟ್ಟುತ್ತದಾ ಅಂತ ಗೊತ್ತಾಗಿಲ್ಲ. ಒಟ್ಟಿನಲ್ಲಿ ಗೆದ್ದಲಿನ ಗೂಡಿನಿಂದಲೇ ಹೆಗ್ಗಾಲ್ ಅಣಬೆ ಹುಟ್ಟುವುದಂತೂ ಸತ್ಯ.

ಕಟ್ಟುಮಟ್ಲೆಯ ಸವಿ !

ಈ ಅಣಬೆಗಳು ಹೆಚ್ಚಾಗಿ ಸಿಕ್ಕಾಗ ಸಾರು ಅಥವಾ ಪಲ್ಯ ಮಾಡುವುದೇನೋ ಸರಿ. ಆದರೆ ಒಂದೋ ಎರಡೋ ಸಿಕ್ಕಾಗ ಏನು ಮಾಡುವುದು ? ಅದಕ್ಕಾಗಿ ಮಲೆನಾಡಿಗರು ಉಪಯೋಗಿಸುವ ತಂತ್ರವೇ ಕಟ್ಟುಮಟ್ಲೆ! ಬಾಳೆ ಎಲೆಯನ್ನು ತಂದು ಕತ್ತರಿಸಿ ಒಂದರ ಮೇಲೊಂದರಂತೆ ಮೂರ್ನಾಲ್ಕು ತಡಿಕೆ ಮಾಡಿ ಇಡುವುದು. ಅಣಬೆಗಳನ್ನು ಸೋಸಿ ತೊಳೆದು ಬಾಳೆ ಎಲೆಯಲ್ಲಿ ಚೂರು ಮಾಡಿ ಹಾಕುವುದು. ನಂತರ ರುಚಿಗೆ ತಕ್ಕಷ್ಟು ಉಪ್ಪು, ಹಸಿ ಮೆಣಸು ಹಾಕಿ ಬಾಳೆಎಲೆಗಳನ್ನು ಮಡಿಚಿ ಕಟ್ಟುವುದು. ನಂತರ ಸೌದೆ ಒಲೆಯ ಒಳಭಾಗದಲ್ಲಿ ಅದನ್ನು ಇಟ್ಟು ಮೇಲೆ ಬಿಸಿ ಬೂದಿ ಹಾಗೂ ಕೆಂಡವನ್ನು ಹಾಕಿ ಬೆಂಕಿ ಒಟ್ಟುವುದು. ಹೀಗೆ ಒಂದೈದು ನಿಮಿಷ ಬಿಟ್ಟರೆ ಬಾಳೆ ಎಲೆಗಳ ಕಟ್ಟೊಳಗಿನ ಅಣಬೆ ಚೆನ್ನಾಗಿ ಬೆಂದು ಅದರ ಜೊತೆ ಖಾರ ಉಪ್ಪು ಸಹ ಬೆರೆತು ಅದವಾದ ರುಚಿ ಬರುತ್ತದೆ. ಅದನ್ನು ನಿಧಾನಕ್ಕೆ ತೆಗೆದು ಬಾಳೆ ಎಲೆಯನ್ನು ಬಿಡಿಸುತ್ತಿರುವಂತೆಯೇ ಒಂದು ವಿಶಿಷ್ಟವಾದ ಘಮ ಹರಡುತ್ತದೆ. ಆ ಸುವಾಸನೆಯನ್ನು ಆಘ್ರಾಣಿಸುತ್ತಾ ಒಂದೊಂದೆ ಚೂರನ್ನು ಸವಿಯುತ್ತಿದ್ದೆವು. ಅದರಂತಾ ರುಚಿಯನ್ನು ಬೇರೆಲ್ಲು ಕಂಡಿಲ್ಲ! ಇದೇ ಕಟ್ಟುಮಟ್ಲೆ ಅಂದರೆ.
ಅಣಬೆಯಂತೆಯೆ ಮೀನು, ಏಡಿಗಳೂ ಒಂದೋ ಎರಡೋ ಸಿಕ್ಕಾಗ ಅವುಗಳನ್ನೂ ಸಹ ಇದೇ ರೀತಿ ಕಟ್ಟುಮಟ್ಲೆ ಮಾಡುತ್ತಿದ್ದವು.
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…