ವಿಷಯಕ್ಕೆ ಹೋಗಿ

ಧರ್ಮಸ್ಥಳದ ಸುತ್ತ, ಅನುಮಾನಗಳ ಹುತ್ತ !!


ನೂರಾರು ವರ್ಷಗಳಿಂದಲೂ ಜನರ ಭಕ್ತಿ ಭಾವಕ್ಕೆ ಹೆಸರಾದ ಕ್ಷೇತ್ರ ಧರ್ಮಸ್ಥಳ. ಅಂದಿನಿಂದ ಇಂದಿನವರೆಗೂ ಜನರು ಭಯ-ಭಕ್ತಿಯಿಂದ ಶ್ರೀ ಮಂಜುನಾಥ ಸ್ವಾಮಿಯ ಕ್ಷೇತ್ರಕ್ಕೆ ನಡೆದುಕೊಳ್ಳುತ್ತಾ ಬಂದಿದ್ದಾರೆ. ನಂಬಿದ ಯಾರನ್ನೂ ಮಂಜುನಾಥ ಕೈ ಬಿಡಲಾರ ಎಂಬ ಬಲವಾದ ನಂಬಿಕೆ ಈಗಲೂ ಇದೆ. ಜನರಿಗೆ ಮಂಜುನಾಥನ ಮೇಲೆ ಎಷ್ಟು ಭಯ-ಭಕ್ತಿಯಿದೆಯೋ ಅಷ್ಟೇ ಗೌರವ ಕ್ಷೇತ್ರದ ಧರ್ಮದರ್ಶಿಯಾದ ವೀರೇಂದ್ರ ಹೆಗ್ಗಡೆಯವರ ಮೇಲೂ ಇದೆ. ಜನರ ನಂಬಿಕೆಗೆ ಚ್ಯುತಿ ಬರುವಂತೆ ಅವರೂ ಸಹ ಎಂದೂ ನಡೆದುಕೊಂಡವರಲ್ಲ. ಹಾಗೆಯೆ ಕ್ಷೇತ್ರದ ಅಭಿವೃದ್ದಿಯ ಜೊತೆಗೆ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯನ್ನು ರೂಪಿಸಿ ಆ ಮೂಲಕ ಕರ್ನಾಟಕದ ಸಾವಿರಾರು ಹಳ್ಳಿಗಳ ಲಕ್ಷಾಂತರ ಬಡ ಜನರಿಗೆ, ಅದರಲ್ಲೂ ಮುಖ್ಯವಾಗಿ ಬಡ ಮಹಿಳೆಯರಿಗೆ ಅನುಕೂಲವಾಗುವಂತೆ ಮಾಡಿದ್ದಾರೆ. ಇವೆಲ್ಲಾ ಪ್ರಶ್ನಾತೀತ ವಿಷಯಗಳು. 
ಆದರೆ ಅದೇ ಮಂಜುನಾಥನ ಕ್ಷೇತ್ರದಲ್ಲಿ ನಡೆದ ಸೌಜನ್ಯ ಎಂಬ ಕಾಲೇಜು ವಿದ್ಯಾರ್ಥಿನಿಯ ಬರ್ಬರ ಅತ್ಯಾಚಾರ ಹಾಗೂ ಕೊಲೆ ಒಂದಿಷ್ಟು ಅನುಮಾನ, ಅಸಮದಾನಗಳನ್ನು ಸ್ಥಳೀಯರಲ್ಲೇ ಹುಟ್ಟು ಹಾಕಿರುವುದಂತೂ ನಿಜ. ಒಂದು ನೆನಪಿರಲಿ, ಈ ಲೇಖನದ ಉದ್ದೇಶ ಧರ್ಮಸ್ಥಳದ ಅಥವಾ ವೀರೇಂದ್ರ ಹೆಗ್ಗಡೆಯವರ ತೇಜೋವಧೆ ಮಾಡುವ ಅಥವಾ ಅವರ ಗೌರವಕ್ಕೆ ಧಕ್ಕೆ ತರುವದಲ್ಲ. ಈ ಲೇಖನದಲ್ಲಿ ಧರ್ಮಸ್ಥಳದ ಹಾಗೂ ಹೆಗ್ಗಡೆಯವರ ಹೆಸರುಗಳನ್ನು ಬಳಸಿಕೊಂಡಿರುವುದಕ್ಕೆ ಕಾರಣ ಈ ಪ್ರಕರಣ ನಡೆದಿರುವುದು ಧರ್ಮಸ್ಥಳದಲ್ಲಿಯೇ ಆಗಿರುವುದರಿಂದ ಮಾತ್ರ.
ಅಪಹರಣ, ಹತ್ಯಾಚಾರ !*
೨೦೧೨ ರ ಅಕ್ಟೋಬರ್ ೯ ರಂದು ಕಾಲೇಜಿನ ವಿಶೇಷ ತರಗತಿ ಮುಗಿಸಿಕೊಂಡು ಉಜಿರೆಯಿಂದ ಬಸ್ಸನ್ನೇರಿ ಧರ್ಮಸ್ಥಳದ ಸ್ನಾನಘಟ್ಟದಲ್ಲಿರುವ ಶಾಂತಿವನ ತಂಗುದಾಣದಲ್ಲಿ ಇಳಿದ ಸೌಜನ್ಯ ತನ್ನ ಸೋದರ ಮಾವ ವಿಠ್ಠಲಗೌಡರನ್ನ ಸ್ವಲ್ಪ ಮಾತಾಡಿಸಿ ಮನೆಯತ್ತ ಹೊರಟಿದ್ದಾಳೆ. ಅಂದು ತುಂಬಾ ಮಳೆ ಇದ್ದ ಕಾರಣ ಆಕೆಯ ಕೈಲಿ ಕೊಡೆ ಇತ್ತು. ಆಕೆಯನ್ನು ನೋಡಿದ್ದು ಅದೇ ಕೊನೆ. ಆಕೆ ನಡೆದುಕೊಂಡು ಹೊರಟ ಕಾಲು ದಾರಿಯಲ್ಲೇ ಅಪಹರಣಕ್ಕೊಳಗಾದಳು.
ಸಂಜೆ ಆರು ಗಂಟೆಯಾದರೂ ಮಗಳು ಮನೆಗೆ ಬಾರದಿದ್ದರಿಂದ ಗಾಬರಿಯಾದ ಆಕೆಯ ಮನೆಯವರು ಹುಡುಕಾಟ ಶುರು ಮಾಡಿದ್ದಾರೆ. ನಾಲ್ಕೂ ಕಾಲರ ಹೊತ್ತಿಗೆ ತನ್ನನ್ನು ಮಾತಾಡಿಸಿಕೊಂಡು ಮನೆಯತ್ತ ಹೋಗಿರುವುದಾಗಿ ವಿಠ್ಠಲ ಗೌಡರು ಹೇಳುತ್ತಿರುವಂತೆಯೇ ಏನೋ ಅನಾಹುತ ನಡೆದಿದೆಯೆಂಬ ಅನುಮಾನ ಎಲ್ಲರನ್ನೂ ಕಾಡಿದೆ. ಸುದ್ದಿ ಹರಡುತ್ತಿರುವಂತೆಯೇ ಐನೂರಕ್ಕೂ ಹೆಚ್ಚು ಜನರು ಶಾಂತಿವನ ಬಸ್ ನಿಲ್ದಾಣದಿಂದ ಹಿಡಿದು ಆಕೆಯ ಮನೆಯವರೆಗೆ (ಪಾಂಗಳ) ಒಂದಿಂಚೂ ಬಿಡದೆ ಹುಡುಕಾಡಿದ್ದಾರೆ. ಆದರೆ ಆಕೆಯ ಪತ್ತೆಯಾಗಿಲ್ಲ!
ಮೊದಲಿಗೆ ಧರ್ಮಸ್ಥಳದ ಪೊಲೀಸ್ ಔಟ್‌ಪೋಸ್ಟ್‌ನಲ್ಲಿ ದೂರು ಹೇಳಿದ್ದಾರೆ. ನಂತರ ಬೆಳ್ತಂಗಡಿ ಪೊಲೀಸರ ಬಳಿಯೂ ದೂರು ದಾಖಲಿಸಿದ್ದಾರೆ. ಮಳೆ ತುಂಬಾ ಇದ್ದ ಕಾರಣ ರಾತ್ರಿ ಹುಡುಕಾಟವನ್ನು ಸ್ಥಗಿತಗೊಳಿಸಲಾಯ್ತು. ಮರುದಿನ ಬೆಳಗ್ಗೆಯೇ ಇವರು ಹುಡುಕಾಡಿದ ಜಾಗದಲ್ಲೇ, ರಸ್ತೆಯಿಂದ ಕಾಣಿಸುವಂತೆಯೇ ಶವದ ರೂಪದಲ್ಲಿ ಸೌಜನ್ಯ ಪತ್ತೆಯಾಗಿದ್ದಾಳೆ! ರಾತ್ರಿ ಹುಡುಕುವಾಗ ಇಲ್ಲದ ಶವ ಬೆಳಗ್ಗೆ ಬಂದುದಾದರೂ ಹೇಗೆ ? ಎಂಬುದೇ ಮೊದಲ ಅನುಮಾನ !
ಒಬ್ಬನಿಂದಾದ ಕೃತ್ಯವಲ್ಲ!
ಘಟನೆ ನಡೆದ ಎರಡು ದಿನಗಳ ನಂತರ ಸಂತೋಷ್ ಕುಮಾರ್ ಎಂಬ ಹೆಸರಿನ ಮಾನಸಿಕ ಅಸ್ವಸ್ಥನೊಬ್ಬನನ್ನು ಪೊಲೀಸರು ತಂದು ಇವನೇ ಹತ್ಯಾಚಾರವೆಸಗಿದ್ದು ಎಂದು ಹೇಳಿದ್ದಾರೆ. ಇವರು ಬಂಧಿಸಿರುವ ಮಾನಸಿಕ ಅಸ್ವಸ್ಥ ಹತ್ಯಾಚಾರವೆಸಗುವಷ್ಟು ಶಕ್ತಿವಂತನೇ ಅಲ್ಲ. ಅಲ್ಲದೇ ಸೌಜನ್ಯ ಸಾಕಷ್ಟು ಬಲಿಷ್ಟವಾಗಿಯೇ ಇದ್ದಳು. ಸ್ಥಳೀಯರು ಹೇಳುವ ಪ್ರಕಾರ ಇದು ಖಂಡಿತಾ ಒಬ್ಬನಿಂದಾದ ಕೃತ್ಯ ಅಲ್ಲವೆ ಅಲ್ಲ. ಇದರ ಹಿಂದೆ ಐದಾರು ಜನರ ಕೈವಾಡವಿದೆ. ಹಾಗೂ ಎಲ್ಲಿ ಆಕೆಯ ದೇಹ ದೊರೆಯಿತೋ ಅಲ್ಲಿ ನಡೆದ ಕೃತ್ಯವೂ ಅಲ್ಲ. ಆಕೆಯನ್ನು ಅಪಹರಿಸಿ ಬೇರೆಲ್ಲೋ ಕೊಂಡೊಯ್ದು ಹತ್ಯಾಚಾರವೆಸಗಿ ತಂದು ಇಲ್ಲಿ ಹಾಕಿದ್ದಾರೆ. ನಂತರ ಈ ಮಾನಸಿಕ ಅಸ್ವಸ್ಥನನ್ನು ಹಿಡಿದು ತಂದು ಬಲಿಪಶು ಮಾಡಿದ್ದಾರೆ. ಈ ಐದಾರು ಜನರೂ ಸಹ ತನಿಖೆಗಾಗಿ ಪೊಲೀಸರು ಅಥವಾ ಸಿಐಡಿ ಅಧಿಕಾರಿಗಳು ಬರುವ ದಿನ ಧರ್ಮಸ್ಥಳದಿಂದ ನಾಪತ್ತೆಯಾಗುತ್ತಾರೆ! ಇವರು ಕೃತ್ಯ ನಡೆಸಿಲ್ಲ ಅಂದರೆ ಇವರು ನಾಪತ್ತೆಯಗುವ ಕಾರಣವಾದರೂ ಏನು ?
ಇದಕ್ಕೆ ಇಂಬು ನೀಡುವಂತೆ ಸೌಜನ್ಯಳ ದೇಹ ಸಿಕ್ಕಿದ ಸ್ಥಳದಲ್ಲಿ ಒದ್ದಾಡಿದ ಯಾವ ಕುರುಹುಗಳೂ ಕಂಡು ಬಂದಿಲ್ಲ. ಅವಳ ಬಳಿ ಇದ್ದ ಕೊಡೆ ಸಹ ಕಾಣೆಯಾಗಿದೆ. ಎಲ್ಲಕ್ಕೂ ಮೇಲಾಗಿ ಆಕೆಯ ಹೆತ್ತವರು ಯಾರ ಮೇಲೆ ಅನುಮಾನ ವ್ಯಕ್ತ ಪಡಿಸುತ್ತಿದ್ದಾರೋ ಅವರೇ ಈ ಅಸ್ವಸ್ಥ ಮನಸಿನ ವ್ಯಕ್ತಿಯನ್ನು ಹಿಡಿದು ಇವನೇ ಹತ್ಯಾಚಾರ ಎಸಗಿದವನು ಎಂದು ಹೇಳಿ ಪೊಲೀಸರಿಗೆ ಒಪ್ಪಿಸಿದ್ದು!
ಅನುಮಾನ ಯಾರ ಮೇಲೆ?
ಸೌಜನ್ಯಳ ಹೆತ್ತವರ ಹಾಗೂ ಆಕೆಯ ಪರವಾಗಿ ನ್ಯಾಯಕ್ಕಾಗಿ ಹೋರಾಡುತ್ತಿರುವವರ ಪ್ರಕಾರ ವೀರೇಂದ್ರ ಹೆಗ್ಗಡೆಯವರ ತಮ್ಮನ ಮಗ ನಿಶ್ಚಲ್ ಜೈನ್, ಅನ್ನಪೂರ್ಣ ಛತ್ರದ ಮ್ಯಾನೇಜರ್ ಪುತ್ರ ಧೀರಜ್ ಖೆಲ್ಲಾ, ಕಚೇರಿಲ್ಲಿ ಕೆಲಸ ಮಾಡುವ ಮಲ್ಲಿಕ್ ಜೈನ್ ಮತ್ತು ಧರ್ಮಸ್ಥಳದಲ್ಲೇ ಆಟೋ ಓಡಿಸಿಕೊಂಡಿರುವ ಉದಯ್ ಜೈನ್ – ಇವರುಗಳ ಮೇಲೆ ನೇರ ಆರೋಪ ಮಾಡುತ್ತಾರೆ.
ಈ ನಾಲ್ವರ ಮೇಲೆ ಅನುಮಾನವಿರುವುದಾಗಿ ಸೌಜನ್ಯ ಕೊಲೆಯಾದ ಸಂದರ್ಭದಲ್ಲೇ ಪೊಲೀಸರಿಗೆ ಮಾಹಿತಿ ನೀಡಿದಾಗ್ಯೂ ಸಹ ಯಾರೂ ಇವರನ್ನು ಕರೆದು ವಿಚಾರಣೆ ಮಾಡಲಿಲ್ಲ. ಘಟನೆಯ ದಿನ ಇವರೆಲ್ಲಾ ಧರ್ಮಸ್ಥಳದಲ್ಲೇ ಇದ್ದರು ಎಂದು ಸ್ಥಳೀಯರು ಹೇಳುತ್ತಾರೆ. ಘಟನೆ ನಡೆದ ಒಂದು ವರ್ಷದ ನಂತರ ಸಿಐಡಿ ಅಧಿಕಾರಿಗಳು ಮೊನ್ನೆ ಮೊನ್ನೆ ಈ ಆರೋಪಿಗಳನ್ನು ಕರೆಸಿ ವಿಚಾರಣೆ ಮಾಡಿದ್ದಾರೆ. ಆದರೆ ಒಂದು ವರ್ಷದ ನಂತರ ಅದೇನು ಸಾಕ್ಷ್ಯ ಉಳಿದಿರುತ್ತದೆಯೋ, ಸಿಐಡಿ ಅಧಿಕಾರಿಗಳು ಎಷ್ಟರ ಮಟ್ಟಿಗೆ ನಿಷ್ಪಕ್ಷಪಾತ ವಿಚಾರಣೆ ಮಾಡುತ್ತಾರೋ ಮಂಜುನಾಥನೇ ಬಲ್ಲ. ಘಟನೆಯ ದಿನದ ಈ ಎಲ್ಲಾ ಅನುಮಾನಿತ ವ್ಯಕ್ತಿಗಳ ಮೊಬೈಲ್ ನಂಬರ್ ಟ್ರ್ಯಾಕ್ ತೆಗೆದು ಪರಿಶೀಲನೆ ಮಾಡಬೇಕು ಎಂಬುದು ಹೋರಾಟಗರರ ಒತ್ತಾಯವಾದರೆ, ಅದನ್ನು ಪೊಲೀಸರು ಇದುವರೆಗೂ ಮಾಡಿಲ್ಲ ! ಅದನ್ನು ಮಾಡಿದ್ದೇ ಆದಲ್ಲಿ ಅವರೆಲ್ಲಾ ಅಂದು ಧರ್ಮಸ್ಥಳದಲ್ಲೇ ಇದ್ದರೋ ಅಥವಾ ಇರಲಿಲ್ಲವೋ ಎಂಬುದು ಗೊತ್ತಾಗಿ ಹೋಗುತ್ತದೆ.
ಅಂದು ತಮ್ಮ ತಮ್ಮನ ಮಗ ದೇಶದಲ್ಲೇ ಇರಲಿಲ್ಲ, ವಿದೇಶದಲ್ಲಿದ್ದರು ಎಂದು ಹೆಗ್ಗಡೆಯವರು ನಿಶ್ಚಲ್ ಜೈನ್‌ನ ವಿಸಾಸ ಪ್ರತಿಯನ್ನು ಪತ್ರಕರ್ತರಿಗೆ ನಿಡಿದ್ದಾರೆ. ಆದರೆ ಈ ಪ್ರತಿಯೇ ನಕಲಿ ಎಂದು ಹೋರಾಟಗಾರರು ದೂರಿದ್ದಾರೆ. ಹೋರಾಟಗಾರರ ಪ್ರಕಾರ, ಯಾವುದೇ ವಿಸಾದಲ್ಲಿ ಕಾಟು ಚಿತ್ತು ಇರುವಂತಿಲ್ಲ. ಆದರೆ ಹೆಗ್ಗಡೆ ನೀಡಿದ ವಿಸಾ ಕಾಟು-ಚಿತ್ತುಗಳಿಂದ ಕೂಡಿದೆ. ಇತರೆ ಅಸಲಿ ವಿಸಾಗಳಿಗೆ ತಾಳೆ ಹಾಕಿ ನೋಡಿದಾಗ, ದಿನಾಂಕಗಳ ಸ್ಥಾನ ಅದಲು ಬದಲಾಗಿದೆ. ಇಂತಹ ಗುರುತರ ಆರೋಪಗಳೂ ಕೇಳಿ ಬರುತ್ತಿದ್ದು ಸಿಬಿಐ ತನಿಖೆ ಸೂಕ್ತ ಎಂಬ ಭಾವನೆ ಎಲ್ಲರಲ್ಲೂ ಮನೆ ಮಾಡಿದೆ.
ಸಿಬಿಐ ತನಿಖೆಗೆ ಒತ್ತಾಯ
ಧರ್ಮಸ್ಥಳದಲ್ಲಿ ನಡೆದಿರುವ ಅನೇಕ ಅಸಹಜ ಸಾವುಗಳ [ಪ್ರತ್ಯೇಕ ಪೆಟ್ಟಿಗೆಯ ಮಾಹಿತಿ ನೋಡಿರಿ] ಬಗ್ಗೆ ಜನರಿಗೆ ವಿಪರೀತ ಅಸಹನೆ ಹಾಗೂ ಅನುಮಾನ ಶುರುವಾಗಿದೆ. ಇವೆಲ್ಲವನ್ನೂ ಸೇರಿಸಿ ಒಂದು ಸಮಗ್ರ ಸಿಬಿಐ ತನಿಕೆ ಆಗಬೇಕು ಎಂದು ಕಳೆದ ಒಂದು ವರ್ಷದಿಂದಲೂ ಬೆಳ್ತಂಗಡಿ ಮುಂತಾದೆಡೆ ಹೋರಾಟ ನಡೆದಿದೆ. ಇದರ ಮುಂದಾಳತ್ವವನ್ನು ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಹಿಸಿದ್ದಾರೆ.
ಸ್ಥಳೀಯ ಪೊಲೀಸರಿಂದ ಹಾಗಿರಲಿ, ಸಿಐಡಿಯವರಿಂದಲೂ ಸಹ ನ್ಯಾಯ ಸಿಗುವುದು ಸಾಧ್ಯವಿಲ್ಲ ಎಂದೇ ಸ್ಥಳೀಯರು ದೂರುತ್ತಾರೆ. ಇದಕ್ಕೆ ಕಾರಣರಾದವರು ಅತ್ಯಂತ ಪ್ರಭಾವಶಾಲಿಯಾಗಿದ್ದು, ಧರ್ಮಸ್ಥಳದಲ್ಲಿ ಒಂದು ಪ್ರತ್ಯೇಕ ಆಡಳಿತ ವ್ಯವಸ್ಥೆಯೇ ಜಾರಿಯಲ್ಲಿದೆ. ಅದು ಯಾವ ಸರ್ಕಾರಕ್ಕೂ ತಲೆ ಬಾಗುವುದಿಲ್ಲ. ಸರ್ಕಾರ ನಿರ್ವಹಿಸುವ ಮಂತ್ರಿ ಮಾಗಧರೇ ಅಲ್ಲಿಗೆ ಹೋಗಿ ಅವರ ಪಾದಕ್ಕೆ ಅಡ್ಡ ಬಿದ್ದು ಬರುತ್ತಾರೆ. ವಿಷಯ ಹೀಗಿರುವಾಗ ಅದೇ ಸರ್ಕಾರದ ಪೊಲಿಸ್ ಇಲಾಖೆಯಿಂದ ನ್ಯಾಯಯುತ ತನಿಖೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ.
ಸ್ಥಳೀಯರ ಪ್ರಕಾರ ಹೆಗ್ಗಡೆಯವರು ಸಿಐಡಿ ಅಥವಾ ಸ್ಥಳೀಯ ಸರ್ಕಾರದ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದ್ದಾರೆ. ಹಾಗಾಗಿ ಸಿಬಿಐ ತನಿಖೆಯೇ ಸೂಕ್ತ ಎನ್ನುತ್ತಾರೆ. ಹೆಗ್ಗಡೆಯವರ ಕುಟುಂಬದವರು ಈ ಕೊಲೆಯಲ್ಲಿ ಭಾಗಿಯಾಗಿದ್ದಾರೆಯೆ ಇಲ್ಲವೇ ಎಂದು ನಾವು ತೀರ್ಮಾನಿಸಲು ಸಾಧ್ಯವಿಲ್ಲ. ವೃಥಾ ಅವರ ಮೇಲೆ ಆರೋಪವೂ ಸರಿಯಲ್ಲ. ಅದು ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕಾದ ವಿಷಯ. ಆದರೆ ಅನುಮಾನ ಬಂದಾಗ ಅದರ ಬಗ್ಗೆ ಸೂಕ್ತ ತನಿಖೆಯೇ ಆಗಿಲ್ಲ ಎಂದರೆ ಹೇಗೆ ? ಆ ಹುಡುಗಿಯ ತಂದೆ ತಾಯಿಗೆ ಹೆಗ್ಗಡೆ ಕುಟುಂಬದ ಸದಸ್ಯರ ಮೇಲೆ ಬಲವಾದ ಅನುಮಾನವಿದೆ. ಕೆಲವೊಂದು ಕಾರಣಗಳನ್ನೂ ಅವರು ನೀಡಿ ಅನುಮಾನಿಸುತ್ತಿದ್ದಾರೆ. ಯಾವುದೇ ಘಟನೆ ನಡೆದಾಗ ನೊಂದವರು ಯಾರ ಮೇಲಾದರೂ ಅನುಮಾನ ವ್ಯಕ್ತ ಪಡಿಸಿದರೆ ಅದರ ಬಗ್ಗೆ ವಿಚಾರಣೆ ಮಾಡಬೇಕಾದುದು ಪೊಲಿಸರ ಕರ್ತವ್ಯ. ಆದರೆ ಇಲ್ಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ. ಇದು ಯಾವ ಕಾರಣಕ್ಕೆ ? ಯಾವುದೇ ಪಕ್ಷಪಾತ ಅಥವಾ ಪ್ರಭಾವ ಇಲ್ಲದಿದ್ದರೆ ಪೊಲಿಸರು ಈ ರೀತಿ ನಿಷ್ಕ್ರಿಯರಾಗಲು ಸಾಧ್ಯವಿತ್ತೇ ? ಎಂಬುದು ಹೆತ್ತವರ ಅಳಲು. ಆದರೆ ಕೇಳುವವರು ಅದೇ ಹೆಗ್ಗಡೆಯವರ ಜೊತೆ ವೇದಿಕೆಯೇರಿ ಹೆಗ್ಗಡೆಯವರ ಮರ್ಯಾದೆಗೆ ಕುತ್ತು ತರಬಾರದು ಎಂದು ಅರಚುತ್ತಿದ್ದಾರೆ. ಹೆಗ್ಗಡೆ ಅಥವಾ ಅವರ ಕಡೆಯವರಿಂದ ಏನೂ ತಪ್ಪು ನಡೆಯದೇ ಹೋದರೆ ಮರ್ಯಾದೆಗೆ ಚ್ಯುತಿಯಾಗುವುದಾದರೂ ಎಲ್ಲಿಂದ ? ತನಿಖೆ ಸರಿಯಾಗಿ ನಡೆದ ಮೇಲೆ ತಾನೆ ನಿಜವಾದ ಅಪರಾಧಿಗಳು ಯಾರು ಅಂತ ತಿಳಿಯುವುದು?!
ಕೊನೆಯದಾಗಿ ಪತ್ರಿಕೆಯ ಆಶಯ ಇಷ್ಟೇ. ಅದು ಧರ್ಮಸ್ಥಳವಿರಲಿ, ಯಾವ ಸ್ಥಳವೇ ಇರಲಿ. ಈ ದೇಶದ, ರಾಜ್ಯದ ಕಾನೂನಿನಿಂದ ಹೊರತಾಗಲು ಯಾರಿಗೂ ಅವಕಾಶವಿಲ್ಲ. ಎಲ್ಲರೂ ಕಾನೂನಿನ ಮುಂದೆ ಸಮಾನರು. ಯಾರು ತಪ್ಪು ಮಾಡಿದ್ದಾರೋ ಇಲ್ಲವೋ ಎಂಬುದು ತೀರ್ಮಾನವಾಗುವುದು ಸೂಕ್ತ ತನಿಖೆಯ ನಂತರವೇ ಹೊರತೂ ಯಾವ ಸ್ಥಳ ಮಹಿಮೆಯಿಂದಲೂ ಅಲ್ಲ. ಈಗಾಗಲೇ ಸ್ಥಳೀಯರು ರಾಜ್ಯ ಪೊಲೀಸ್ ಹಾಗೂ ಸಿಐಡಿ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಸಿಬಿಐ ತನಿಖೆ ಆಗಲೇ ಬೇಕೆಂದು ಹಠ ಹಿಡಿದಿದ್ದಾರೆ. ಆದುದರಿಂದ ಸರ್ಕಾರ ಕೂಡಲೇ ಇದನ್ನು ಯಾರ ಮುಲಾಜಿಗೂ ಒಳಗಾಗದೇ ಸಿಬಿಐ ತನಿಖೆಗೆ ವಹಿಸಲಿ. ಸತ್ಯಾಸತ್ಯತೆ ಹೊರ ಬರಲಿ. ಸೌಜನ್ಯಳ ಪ್ರಕರಣದೊಂದಿಗೆ ಧರ್ಮಸ್ಥಳದಲ್ಲಿ ನಡೆದ ಎಲ್ಲಾ ಕೊಲೆಗಳಿಗೂ ಮಂಜುನಾಥ ಮಂಗಳ ಹಾಡುವಂತಾಗಲಿ.
ಮತ್ತೊಂದು ವಿಚಾರವೆಂದರೆ ಈಗ ಬಹುತೇಕರ ಮನದಲ್ಲಿ ಹೆಗ್ಗಡೆ ಕುಟುಂಬದ ಮೇಲೆ ಸಣ್ಣಗೆ ಅನುಮಾನ ಮೂಡಿ ಆಗಿದೆ. ಸರಿಯಾದ ತನಿಖೆಯಾಗದೇ ಹೋದರೆ ಆ ಅನುಮಾನ ದೊಡ್ಡ ಹುತ್ತವಾಗಿ ಅದು ಹೆಗ್ಗಡೆಯವರ ವರ್ಚಸ್ಸಿಗೆ ದೊಡ್ಡ ಹೊಡೆತವನ್ನೇ ನೀಡಲಿದೆ. ಹಾಗಾಗಿ ಹೆಗ್ಗಡೆಯವರ ಗೌರವದ ಉಳಿವಿಗಾಗಿ, ಧರ್ಮಸ್ಥಳದ ಮೇಲಿನ ಭಕ್ತರ ನಂಬಿಕೆಯ ಉಳಿವಿಗಾಗಿ, ಸೌಜನ್ಯಳ ಹೆತ್ತವರ ನೋವಿಗೆ ಸ್ವಲ್ಪವಾದರೂ ಸಾಂತ್ವನ ದೊರಕಲಿಕ್ಕಾಗಿ ಸಿಬಿಐ ತನಿಖೆಯಾಗಲೇ ಬೇಕಾದ ಅಗತ್ಯ ಈಗ ಎದುರಾಗಿದೆ.

***

ಸೌಜನ್ಯಯುತ ಬದುಕು

ಆಕೆ ಹುಟ್ಟಿದ್ದು ೧೯೯೫ರ ಅಕ್ಟೋಬರ್ ೧೮ ರಂದು. ಧರ್ಮಸ್ಥಳದ ಪಾಂಗಳ ಎಂಬಲ್ಲಿರುವ ಚಂದಪ್ಪ ಗೌಡ ಹಾಗೂ ಕುಸುಮತಿ ದಂಪತಿಗಳ ಪುತ್ರಿ ಈಕೆ. ಸೌಜನ್ಯಳನ್ನೂ ಸೇರಿ ಈ ದಂಪತಿಗೆ ಒಟ್ಟು ನಾಲ್ಕು ಹೆಣ್ಣು ಮಕ್ಕಳು ಮತ್ತು ಒಂದು ಗಂಡು ಮಗು. ಸೌಜನ್ಯ ಎರಡನೆಯವಳು. ಧರ್ಮಸ್ಥಳದಲ್ಲೇ ಹುಟ್ಟಿದ್ದರಿಂದಲೋ ಏನೋ ಈ ಮುಗುವಿಗೆ ಚಿಕ್ಕಂದಿನಿಂದಲೇ ಮಂಜುನಾಥ ಸ್ವಾಮಿಯ ಬಗ್ಗೆ ವಿಶೇಷ ಒಲವಿತ್ತು. ಮನೆಯ ವಾತಾವರಣವೂ ದೇವರ ಭಕ್ತಿಯಲ್ಲೇ ತೇಲುತ್ತಿದ್ದುದರಿಂದ ಸೌಜನ್ಯ ಭಕ್ತಿಯ ಪರಾಕಾಷ್ಟೆಯಲ್ಲೇ ಬೆಳೆದಳು. ತಮ್ಮ ಮನೆಗೆ ಬಂದ ಭಾಗ್ಯಲಕ್ಷ್ಮಿಯೇ ಈಕೆ ಎಂದು ಹೆತ್ತವರು ಭಾವಿಸಿದರು.
ಅಂಗನವಾಡಿಯ ನಂತರ ಸೌಜನ್ಯ ಧರ್ಮಸ್ಥಳದ ಪ್ರಾಥಮಿಕ ಶಾಲೆಗೆ ವಿದ್ಯಾಭ್ಯಾಸಕ್ಕಾಗಿ ಸೇರಿದಳು. ಆಕೆ ಅತ್ಯಂತ ಬುದ್ದಿವಂತಳಾಗಿದ್ದ ಕಾರಣ ಶಾಲಾ ದಿನಗಳಲ್ಲೇ ಆಕೆ ಎಲ್ಲಾ ಶಿಕ್ಷಕರ ಮನ ಗೆದ್ದಿದ್ದಳು. ಆಕೆಯ ಮಾತು, ತಿಳುವಳಿಕೆ ಶಿಕ್ಷಕರಿಂದ ಹಿಡಿದು ಎಲ್ಲಾ ಜನರೂ ಆಶ್ಚರ್ಯ ಪಡುವಂತಿರುತ್ತಿತ್ತು. ಎಸ್.ಡಿ.ಎಂ. ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನೂ ಪೂರೈಸಿದಳು. ಬೆಳೆದಂತೆ ಇನ್ನೂ ಹೆಚ್ಚಿನ ಭಕ್ತಿ ಹಾಗೂ ನಮ್ರತೆಯನ್ನು ರೂಢಿಸಿಕೊಂಡಳು.
ಎಂದೂ ತಂದೆ ತಾಯಿಯ ಬಳಿ ಅದು ಬೇಕು ಇದು ಬೇಕೆಂದು ಹಠ ಹಿಡಿದವಳಲ್ಲ. ತಮ್ಮ ಕುಟುಂಬದ ಬಡತನವನ್ನು ಒಪ್ಪಿಕೊಂಡು ಅದರಂತೆಯೇ ನಡೆದಳು. ಮನೆಯಿಂದ ಎರಡು ಕಿ.ಮೀ. ದೂರದ ಶಾಲೆಗೆ ನಡೆದುಕೊಂಡೇ ಹೋಗುತ್ತಿದ್ದಳು. ಆಧ್ಯಾತ್ಮ ಹಾಗೂ ಶಿಕ್ಷಣ ಎರಡನ್ನೂ ಜೀವನದಲ್ಲಿ ಅಳವಡಿಸಿಕೊಂಡವಳು. ಅಕ್ಕಪಕ್ಕದವರ ಬಗ್ಗೆ ತಲೆ ಕೆಡಿಸಿಕೊಂಡವಳಲ್ಲ. ದಾರಿಯಲ್ಲಿ ನಡೆಯುವಾಗ ಯಾರಾದರೂ ಪಕ್ಕದಲ್ಲೇ ಬಂದು ನಿಂತರೂ ತಲೆ ಎತ್ತಿ ನೋಡದೆ ತನ್ನಷ್ಟಕ್ಕೆ ತಾನೇ ನಡೆದು ಹೋಗುವಾಕೆ. ಬಹುಶಃ ಇದೇ ಅವಳಿಗೆ ಮುಳುವಾಯ್ತು!
ಹತ್ತನೇ ತರಗತಿಯಲ್ಲಿ ಶೇ. ೭೫%ರಷ್ಟು ಅಂಕಗಳೊಂದಿಗೆ ಉತ್ತೀರ್ಣಳಾದ ಸೌಜನ್ಯ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿಗೆ ಪಿಯುಸಿ ಓದಲು ಸೇರಿಕೊಂಡಳು. ಆಕೆಗೆ ತಾನು ಇಂಜಿನಿಯರ್ ಆಗಬೇಕೆಂಬ ಮಹದಾಸೆಯಿತ್ತು. ಹಾಗೆಯೆ ಅತ್ಯಂತ ವಿನಯವಂತೆಯೂ ಆಗಿದ್ದಳು. ಬೌದ್ದಿಕವಾಗಿಯೂ ಆಕೆ ಅತ್ಯಂತ ಪ್ರಬುದ್ಧೆಯಾಗಿದ್ದಳು. ಇದರಿಂದ ಮನೆಯಲ್ಲಿ ಎಲ್ಲರೂ ಆಕೆಯ ಮಾತನ್ನು ಕೇಳುತ್ತಿದ್ದರು.
ಬಿಡುವಾದಾಗೆಲ್ಲ ಏನಾದರೂ ಕೆಲಸವನ್ನು ಮಾಡುತ್ತಲೆ ಇರುತ್ತಿದ್ದಳು. ಮನೆಯಲ್ಲಿ ಕೆಲಸವಿಲ್ಲವೆಂದರೆ ನೇತ್ರಾವತಿ ಸ್ನಾನಘಟ್ಟದ ಬಳಿ ಇರುವ ಆಕೆಯ ಸೋದರ ಮಾವ ವಿಠ್ಠಲ ಗೌಡರ ಹೋಟೆಲಿಗೆ ಹೋಗಿ ಅಲ್ಲಿ ಸಹಾಯ ಮಾಡುತ್ತಿದ್ದಳು. ತನ್ನ ಅಕ್ಕನ ಮದುವೆಗೆ ತಾನು ಮಾವನ ಹೋಟೆಲಲ್ಲಿ ದುಡಿದು ಸಂಪಾದಿಸಿದ ಹಣದಿಂದಲೇ ತನ್ನ ಬಟ್ಟೆ ಕೊಂಡಿದ್ದಳು. ತಾನು ಓದಿ ಕೆಲಸಕ್ಕೆ ಸೇರಿ ದುಡಿದು ತನ್ನ ಮದುವೆ ಖರ್ಚನ್ನು ತಾನೇ ನೋಡಿಕೊಳ್ಳಬೇಕು, ಅದನ್ನು ಮನೆಯವರ ತಲೆ ಮೇಲೆ ಹೊರಿಸಬಾರದು ಎಂಬ ಕನಸಿಟ್ಟುಕೊಂಡಿದ್ದಳು. ಆದರೆ ಆಕೆಯ ಎಲ್ಲಾ ಕನಸುಗಳನ್ನೂ ದುಷ್ಟುರು ೨೦೧೨ ರ ಅಕ್ಟೋಬರ್ ೯ ರಂದು ಹೂವನ್ನು ಹೊಸಕುವಂತೆ ಹೊಸಕಿ ಹಾಕಿದರು.
ಅಂದು ಕಾಲೇಜಿಗೆ ಹೋಗಿದ್ದ ಸೌಜನ್ಯ ವಿಶೇಷ ತರಗತಿ ಮುಗಿದ ನಂತರ ಮಧ್ಯಾಹ್ನ ಉಜಿರೆಯಿಂದ ಬಸ್ಸನ್ನೇರಿ ಧರ್ಮಸ್ಥಳ ನೇತ್ರಾವತಿ ನದಿಯ ಸ್ನಾನಘಟ್ಟ ಪಕ್ಕದ ಶಾಂತಿವನ ತಂಗುದಾಣದಲ್ಲಿ ಸುಮಾರು ೪.೧೦ಕ್ಕೆ ಇಳಿದುಕೊಂಡಿದ್ದಾಳೆ. ಅಲ್ಲಿ ಸಿಕ್ಕ ಆಕೆಯ ಸೋದರ ಮಾವ ವಿಠ್ಠಲ ಗೌಡರನ್ನು ಕೊಂಚ ಮಾತನಾಡಿಸಿ ಮನೆಯತ್ತ ಕಾಲು ದಾರಿಯಲ್ಲಿ ಹೆಜ್ಜೆ ಹಾಕಿದ್ದಾಳೆ. ಅದುವೇ ಕೊನೆ, ಆಕೆ ಜೀವಂತವಾಗಿ ಕಾಣಿಸಿಕೊಂಡಿದ್ದು! ನಂತರ ಆಕೆ ದೊರೆತದ್ದು ಅಲ್ಲಿಂದ ಸ್ವಲ್ಪವೇ ದೂರದ ಕಾಡಿನಲ್ಲಿ ಹೆಣವಾಗಿಯೆ ! ಅದೂ ಅಸ್ತವ್ಯಸ್ತಗೊಂಡ ಉಡುಗೆಯಲ್ಲಿ… ಅತ್ಯಾಚಾರದ ನಂತರದ ಸ್ಥಿತಿಯಲ್ಲಿ!

***

ಕರ್ತವ್ಯಭ್ರಷ್ಟ ಪೊಲೀಸ್ ಅಧಿಕಾರಿಗಳು !

ಸೌಜನ್ಯ ಪ್ರಕರಣದ ತನಿಖೆ ನಡೆಸಿರುವ ಬೆಳ್ತಂಗಡಿ ಪೊಲೀಸರು ಹಾಗೂ ಸಿಐಡಿ ಇಲಾಖೆ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯೇ ಅಪೂರ್ಣವಾಗಿದ್ದು, ಪೊಲೀಸ್ ಇಲಖೆಯ ಮೇಲೆಯೆ ಅನುಮಾನಗಳ ಹುತ್ತ ಬೆಳೆದಿದೆ.
ಆರೋಪ ಪಟ್ಟಿಯಲ್ಲಿ ಮುಚ್ಚಿಟ್ಟ ವಿಷಯಗಳೇನು?
ಸೌಜನ್ಯ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲಿ ಕೆಲವು ವಿಷಯವನ್ನು ಉದ್ದೇಶ ಪೂರ್ವಕವಾಗಿ ಮುಚ್ಚಿಡಲಾಗಿರುವುದು ಮೇಲ್ನೋಟಕ್ಕೇ ಕಂಡು ಬರುತ್ತಿದೆ. ಖಾಸಗಿ ಸುದ್ದಿ ವಾಹಿನಿಯಲ್ಲಿ ಮಾತನಾಡಿದ ನಿವೃತ್ತ ದಕ್ಷ ಪೊಲೀಸ್ ಅಧಿಕಾರಿ ಜಿ.ಎ. ಬಾವ, ಹಿರಿಯ ಕ್ರೈಂ ವಕೀಲರಾದ ಶಂಕರಪ್ಪ ಹಾಗೂ ಡಾ.ಕಿರಣ್ ಅವರು ಸೌಜನ್ಯ ಪ್ರಕರಣದ ತನಿಖೆ ನಡೆಸಿರುವ ಅಂದಿನ ಬೆಳ್ತಂಗಡಿ ಎಸ್.ಐ. ಯೋಗೀಶ್ ಅನೇಕ ಅಚಾತುರ್ಯವನ್ನು ಎಸಗಿರುವುದನ್ನು ಒತ್ತಿ ಹೇಳಿದ್ದಾರೆ.
ಆರೋಪ ಪಟ್ಟಿಯ ಸಲ್ಲಿಕೆಯ ವೇಳೆ ಪಾಲಿಸಬೇಕಾದ ನಿಯಮಗಳನ್ನು ಪಾಲಿಸಿಲ್ಲ. ಇಲ್ಲಿ ಬೇಕೆಂದೇ ಕೆಲವು ಅಂಶಗಳನ್ನು ಮುಚ್ಚಿಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸೌಜನ್ಯ ಮೃತದೇಹ ಪತ್ತೆಯಾದ ವೇಳೆ ಅಲ್ಲಿಯೇ ಪಕ್ಕದಲ್ಲಿ ಬಿಳಿಯ ಹಾಳೆಯ ಸಣ್ಣ ಚೀಟಿಯೊಂದು ಬಿದ್ದಿದ್ದು, ಅದನ್ನು ಸೌಜನ್ಯಳ ಸಂಬಂಧಿಯೊಬ್ಬರು ಗುರುತಿಸಿ ಕೈಯಲ್ಲಿ ಎತ್ತಿಕೊಂಡು ಅದರಲ್ಲಿದ್ದ ನಂಬರ್ ಅನ್ನು ತಮ್ಮ ಮೊಬೈಲ್‌ನಲ್ಲಿ ಡಯಲ್ ಮಾಡಲು ನೋಡಿದ್ದರು. ಆದರೆ ಅಷ್ಟರಲ್ಲಿ ಅವರನ್ನು ತಡೆದಿದ್ದ ಪೊಲೀಸ್ ಅಧಿಕಾರಿ ಚೀಟಿಯನ್ನು ಕಸಿದುಕೊಂಡು ಅದು ತಮಗೆ ಬೇಕು ಎಂದು ಕೊಂಡೊಯ್ದಿದ್ದರು. ಎಂದು ಸೌಜನ್ಯ ತಂದೆ ಚಂದಪ್ಪ ಗೌಡ ಆರೋಪ ಮಾಡಿದ್ದಾರೆ. ಆದರೆ ಆರೋಪ ಪಟ್ಟಿಯಲ್ಲಿ ಚೀಟಿ ಸಿಕ್ಕಿದ ಬಗ್ಗೆ ಯಾವುದೇ ದಾಖಲೆ ಇಲ್ಲದಿರುವ ಬಗ್ಗೆ ಹಿರಿಯ ವಕೀಲ ಶಂಕರಪ್ಪ ಪ್ರಶ್ನಿಸಿದ್ದಾರೆ.
ಯಾವುದೇ ವ್ಯಕ್ತಿಯ ಮೃತದೇಹ ಸಿಕ್ಕಿದ ಸಂದರ್ಭ ಅದೂ ಕೊಲೆಯಂಥ ಗಂಭೀರ ಪ್ರಕರಣ ನಡೆದಾಗ ಅಲ್ಲಿ ಸುತ್ತಮುತ್ತ ಸಿಗುವ ಯಾವುದೇ ವಸ್ತುವನ್ನೂ ಬಿಡುವ ಹಾಗಿಲ್ಲ. ಎಲ್ಲವನ್ನೂ ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ ಸೀಲ್ ಮಾಡಿ ಕೊಂಡೊಯ್ಯಲಾಗುತ್ತದೆ. ಆದರೆ ಇಲ್ಲಿ ಮಾತ್ರ ಪೊಲೀಸರು ಆ ನಿಯಮವನ್ನು ಪಾಲಿಸಿಲ್ಲ. ಪಂಚನಾಮೆಯಲ್ಲಿ ಎಲ್ಲೂ ನಮೂದಿಸಿಲ್ಲ. ಇದರಿಂದ ಆ ಚೀಟಿಯನ್ನು ಉದ್ದೇಶಪೂರ್ವಕವಾಗಿಯೇ ಅಡಗಿಸಿರುವ ಸಾಧ್ಯತೆಯಿದೆ ಎಂಬ ಆರೋಪ ಕೂಡಾ ಕೇಳಿಬಂದಿದೆ. ಮೊಬೈಲ್ ನಂಬರ್ ಯಾರದಿತ್ತು? ಅದು ಹತ್ಯಾಚಾರ ನಡೆದ ಸ್ಥಳದಲ್ಲೇ ಯಾಕಿತ್ತು ? ಅದನ್ನು ಇರಿಸಿದವರು ಯಾರು? ಯಾವ ಕಾರಣಕ್ಕೆ ಇರಿಸಿದರು? ಉದ್ದೇಶಪೂರ್ವಕವೇ ? ದುರುದ್ದೇಶ ಪೂರ್ವಕವೇ ? ಅಥವಾ ಆಕಸ್ಮಿಕವೇ ?
ಅದು ಯಾರದ್ದೇ ಆಗಿರಲಿ, ಅದನ್ನು ಉದ್ದೇಶಪೂರ್ವಕವಾಗಿ ಬರೆದು ಮೃತದೇಹದ ಪಕ್ಕ ಎಸೆದಿರಲಿ, ಆದರೆ ಪ್ರಕರಣದ ಪಂಚನಾಮೆ ನಡೆಯುವ ಸಂದರ್ಭ ಅಲ್ಲಿದ್ದ ಶಂಕಾಸ್ಪದ ವಸ್ತುವನ್ನು ವಶಕ್ಕೆ ತೆಗೆದುಕೊಳ್ಳಬೇಕಿತ್ತು. ಆದರೆ ಇಲ್ಲಿ ಚೀಟಿ ಪತ್ತೆಯಾಗಿರುವ ಬಗ್ಗೆ ಯಾವುದೇ ಮಾಹಿತಿಯನ್ನು ಎಸ್.ಐ. ನಮೂದಿಸಿಲ್ಲ. ಮೃತದೇಹದ ಭಾವಚಿತ್ರದಲ್ಲಿ ಇದು ಸ್ಪಷ್ಟವಾಗಿ ಕಂಡರೂ ಸಿಐಡಿ ತನಿಖೆಯಲ್ಲಿ ಉಲ್ಲೇಖವಾಗದೇ ಇರುವುದು ತನಿಖೆ ದಿಕ್ಕುತಪ್ಪಿದೆ ಎನ್ನುವುದಕ್ಕೆ ಪ್ರಮುಖ ಕಾರಣ ಎಂದು ಶಂಕರಪ್ಪ ಹೇಳಿದರು.
ಮಳೆ ಬಂದರೂ ಬಟ್ಟೆ ನೆನದಿಲ್ಲ ! ಕೊಡೆಯೂ ಕಾಣೆ !
ಇನ್ನೂ ಒಂದು ಗಮನಾರ್ಹ ಸಂಗತಿಯೆಂದರೆ ಸೌಜನ್ಯ ನಾಪತ್ತೆಯಾಗುವ ದಿನ ಧರ್ಮಸ್ಥಳದಲ್ಲಿ ಭಾರೀ ಮಳೆ ಬಂದಿದೆ. ಆದರೆ ಮೃತದೇಹದ ಬಳಿಯಿದ್ದ ಬಟ್ಟೆಬರೆ, ಶಾಲಾ ಬ್ಯಾಗ್, ಪುಸ್ತಕಗಳು ಒದ್ದೆಯಾಗಿರಲಿಲ್ಲ. ಇದು ಹೇಗೆ ಸಾಧ್ಯ ? ಅಂದರೆ ಮಳೆ ಬರುವ ಸಮಯ (ಸಂಜೆ ಹಾಗೂ ರಾತ್ರಿ) ಆಕೆ ಅಲ್ಲಿ ಇರಲಿಲ್ಲ. ಅಪಹರಣ ಮಾಡಿ ಬೇರೆಲ್ಲೋ ಕೊಂಡೊಯ್ದು ಹತ್ಯಾಚಾರವೆಸಗಿದ್ದಾರೆ. ಬೆಳಗಿನ ಜಾವ ಯಾರು ಇಲ್ಲದಿರುವ ಸಮಯ ನೋಡಿ ದೇಹವನ್ನು ತಂದು ರಸ್ತೆಯಿಂದ ಸ್ವಲ್ಪವೇ ದೂರದಲ್ಲಿ ಪೊದೆಗಳ ನಡುವೆ ಮಲಗಿಸಿ, ಒಂದು ಕೈಯನ್ನು ಗಿಡಕ್ಕೆ ಕಟ್ಟಿ ಹೋಗಿದ್ದಾರೆ. ಆದರೆ ಪಂಚನಾಮೆಯ ಫಾರಂನಲ್ಲಿ ಈ ಬಗ್ಗೆ ತುಂಬಿಸಬೇಕಿದ್ದ ಕಾಲಂ ಅನ್ನು ಖಾಲಿ ಬಿಡಲಾಗಿದೆ.
ಸಂಜೆ ಅವಳು ಕೊಡೆ ಹಿಡಿದುಕೊಂಡು ಮನೆಯತ್ತ ಹೋಗಿರುವುದನ್ನು ಸುಮಾರು ಜನ ನೋಡಿದ್ದಾರೆ. ಆದರೆ ಆಕೆಯ ಶವದ ಬಳಿ ಎಲ್ಲೂ ಕೊಡೆ ಇರಲಿಲ್ಲ, ಅದು ಸಿಗಲೂ ಇಲ್ಲ! ಹಾಗಿದ್ದರೆ ಅದು ಎಲ್ಲಿ ಹೋಯ್ತು ?
ಇನ್ನು ಅತ್ಯಾಚಾರ ಮತ್ತು ಕೊಲೆಯಂಥ ಘಟನೆ ನಡೆದಾಗ ಸರ್ಕಲ್ ಇನ್ಸ್‌ಪೆಕ್ಟರ್ ಅಥವಾ ಅದಕ್ಕಿಂತ ಹಿರಿಯ ಅಧಿಕಾರಿ ತನಿಖೆ ನಡೆಸಬೇಕೆಂಬ ಇಲಾಖಾ ನಿಯಮವಿದ್ದರೂ ಇಲ್ಲಿ ಸಬ್‌ಇನ್ಸ್‌ಪೆಕ್ಟರ್ ಯೋಗೀಶ್‌ಕುಮಾರ್ ತನಿಖೆ ಮಾಡಿದ್ದಾರೆ. ಮತ್ತು ಅವರು ಅದಕ್ಕೆ ಬೇಕಾದ ಕಾರಣವನ್ನು ನೀಡದೇ ಇರುವುದು ಸಂಶಯಕ್ಕೆ ಕಾರಣವಾಗಿದೆ.
ಸೌಜನ್ಯಳ ಶವ ಮರದ ಬೇರೊಂದರ ಮೇಲೆ ಬಿದ್ದಿದ್ದು, ಆಕೆಯ ಬೆನ್ನಿನ ಭಾಗ ಇಲ್ಲವೇ ದೇಹದ ಭಾಗಕ್ಕೆ ಯಾವುದೇ ರೀತಿಯ ತರಚು ಗಾಯವಾಗಿರುವ ಬಗ್ಗೆ ಪಂಚನಾಮೆಯಲ್ಲಿ ಉಲ್ಲೇಖ ಮಾಡಿಲ್ಲ. ಆಕೆಯ ಮೇಲೆ ಘಟನಾ ಸ್ಥಳದಲ್ಲೇ ಆತ್ಯಾಚಾರ ನಡೆದಿದ್ದರೆ ಸ್ಥಳದಲ್ಲಿ ಹೊರಳಾಡಿದ ಕುರುಹು ಕಂಡುಬರಬೇಕಿತ್ತು. ಆದರೆ ಸುತ್ತಲಿನ ಪರಿಸರದಲ್ಲಿ ಅದಕ್ಕೆ ಪೂರಕವಾದ ಯಾವುದೇ ಸಾಕ್ಷ್ಯ ಲಭಿಸಿಲ್ಲ ಮತ್ತು ಅದನ್ನು ಪಂಚನಾಮೆಯಲ್ಲಿ ದಾಖಲು ಮಾಡಿಲ್ಲ.
ಇನ್ನು ಸ್ಥಳದಲ್ಲಿ ಆರೋಪಿಯ ಫೂಟ್‌ಪ್ರಿಂಟ್ ಕೂಡಾ ಪತ್ತೆಯಾಗಿಲ್ಲ. ಒಂದು ವೇಳೆ ಬೆರಳಚ್ಚು ತಜ್ಞರಿಂದ ಸ್ಥಳಪರೀಕ್ಷೆ ನಡೆಸಿದ್ದರೆ ಆರೋಪಿಯ ಫೂಟ್‌ಪ್ರಿಂಟ್ ಸಿಗುತ್ತಿತ್ತು. ಇದರಿಂದ ಆರೋಪಿ ಆತನೇ ಅಲ್ಲವೇ ಎನ್ನುವ ಶಂಕೆ ದೂರವಾಗುತ್ತಿತ್ತು. ಆದರೆ ಇದಾವುದರ ಬಗ್ಗೆಯೂ ಪಂಚನಾಮೆಯಲ್ಲಿ ದಾಖಲೆ ಇಲ್ಲದೇ ಇರುವುದು ಬಹಿರಂಗವಾಗಿದೆ.
ಸೌಜನ್ಯ ದೇಹದಲ್ಲಿ ರಕ್ತ, ವೀರ್ಯದ ಕಲೆ ಇದಾವುದೂ ಇದ್ದ ಬಗ್ಗೆ ಆರೋಪ ಪಟ್ಟಿಯಲ್ಲಿ ಹೇಳಿಲ್ಲ. ಮೇಲಾಗಿ ಆಕೆಯ ಗುಪ್ತಾಂಗದಲ್ಲಿ ಒಂದೆರಡು ಹಿಡಿ ಮಣ್ಣು ತುರುಕಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ವೀರ್ಯದ ಪತ್ತೆಯಾಗದಿರಲಿ ಎಂಬ ಕಾರಣಕ್ಕೇ ಆ ರೀತಿ ಮಾಡಿರಬಹುದು. ಆದರೆ ಅಷ್ಟೊಂದು ಬುದ್ದಿವಂತಿಕೆ ಒಬ್ಬ ಮಾನಸಿಕ ಅಸ್ವಸ್ಥನಿಂದ ಸಾಧ್ಯವೇ ? ಸೌಜನ್ಯ ಮೃತದೇಹದಲ್ಲಿ ಒಳ ಉಡುಪು ಸಹ ಇರಲಿಲ್ಲ. ಘಟನೆ ನಡೆದ ಮರುದಿನ ಆಕೆಯ ಮನೆಯಿಂದ ತನಿಖಾಧಿಕಾರಿ ಯೋಗೀಶ್‌ಕುಮಾರ್ ಒಳಚಡ್ಡಿಯನ್ನು ಕೇಳಿ ಪಡೆದುಕೊಂಡಿದ್ದಾನೆ. ಅದನ್ನೇ ಪೊಲೀಸರು ಗೋಣಿಚೀಲದಲ್ಲಿ ಹಾಕಿ ತಂದು ಕಾಡಿನಲ್ಲಿ ಸಿಕ್ಕಿತು ಎಂದು ಹೇಳಿದ್ದಾರೆ. ಇದು ಪೊಲೀಸರ ಮೇಲಿನ ಆರೋಪಕ್ಕೆ ಪುಷ್ಠಿ ನೀಡುವ ಅಂಶವಾಗಿದೆ. ಇನ್ನು ಸೌಜನ್ಯ ಮನೆಗೆ ಹೋಗುವಾಗ ಮಳೆಯಿದ್ದ ಕಾರಣ ಕೊಡೆಯನ್ನು ಹಿಡಿದುಕೊಂಡಿದ್ದಳು ಎಂದು ಸಾಕ್ಷಿಗಳು ಹೇಳಿರುವುದು ಆರೋಪ ಪಟ್ಟಿಯಲ್ಲಿ ತಿಳಿಸಿದ್ದರೂ ಆ ಕೊಡೆ ಏನಾಯಿತು ಎನ್ನುವ ಬಗ್ಗೆ ಹೇಳಲಾಗಿಲ್ಲ. ಒಂದು ವೇಳೆ ಮೃತದೇಹ ಸಿಕ್ಕ ಸ್ಥಳದಲ್ಲೇ ಕೃತ್ಯ ನಡೆದಿದ್ದರೆ ಕೊಡೆ ಯಾಕೆ ಸಿಗಲಿಲ್ಲ ಎನ್ನುವ ಪ್ರಶ್ನೆಗೂ ಉತ್ತರವಿಲ್ಲ.
ಇವಿಷ್ಟೇ ಅಲ್ಲದೆ ಸೌಜನ್ಯ ಪ್ರಕರಣದ ಆರೋಪ ಪಟ್ಟಿಯಲ್ಲಿ ಇಂಥ ಹತ್ತಾರು ಲೋಪದೋಷಗಳು ಕಂಡುಬರುತ್ತಿದ್ದು, ಪ್ರಕರಣದ ದಿಕ್ಕು ತಪ್ಪಿಸುವ ಎಲ್ಲಾ ಪ್ರಯತ್ನ ನಡೆದಿದೆ ಎಂದು ಹಿರಿಯ ವಕೀಲರು ಆರೋಪಿಸಿದ್ದಾರೆ. ಹಾಗಿದ್ದರೆ ಎಸ್.ಐ. ಯೋಗೀಶ್ ಕುಮಾರ್ ಹೀಗೆ ಪ್ರಕರಣದ ಹಾದಿ ತಪ್ಪಿಸಲು ಕಾರಣವೇನು ? ಆತನ ಮೇಲಿದ್ದ ಒತ್ತಡಗಳೇನು ? ಅವನ ಮೇಲೆ ಇಷ್ಟೊಂದು ಅನುಮಾನ ಆರೋಪಗಳಿದ್ದರೂ ಏಕೆ ಇನ್ನೂ ಇಲಾಖಾ ತನಿಖೆಗೆ ಒಳಪಡಿಸಿಲ್ಲ ? ಪೊಲೀಸ್ ಇಲಾಖೆಯನ್ನೇ ತನಗೆ ಬೇಕಾದಂತೆ ನಿಯಂತ್ರಿಸುತ್ತಿರುವ ಶಕ್ತಿ ಯಾವುದು ?

***

ಒಂದಲ್ಲ ಎರಡಲ್ಲ… ಸಾವುಗಳಿಗೆ ಲೆಕ್ಕವಿಲ್ಲ !

ಧರ್ಮಸ್ಥಳದಲ್ಲಿ ನಡೆದ ಸೌಜನ್ಯಳ ಹತ್ಯಾಚಾರದ ವಿಷಯ ಮಾತ್ರ ರಾಜ್ಯಾಧ್ಯಂತ ಸುದ್ದಿ ಮಾಡುತ್ತಿರಬಹುದು. ಆದರೆ ಅಲ್ಲಿ ನಡೆದ ಅಸ್ವಾಭಾವಿಕ ಸಾವುಗಳಿಗೆ, ಕೊಲೆ, ಅತ್ಯಾಚಾರಗಳಿಗೆ ಲೆಕ್ಕವೇ ಇಲ್ಲ. ಪೊಲೀಸ್ ದಾಖಲೆಯ ಪ್ರಕಾರ ಪತ್ತೆ ಹಚ್ಚಲಾಗದ ಅಸ್ವಾಭಾವಿಕ ಸಾವುಗಳ ಪಟ್ಟಿ ಇಂತಿದೆ:-

ವರ್ಷ – ಧರ್ಮಸ್ಥಳ – ಉಜಿರೆ – ಒಟ್ಟು
೨೦೦೧ – ೨೩ -೬ -೨೯
೨೦೦೨ -೨೭ -೫ -೩೨
೨೦೦೩ -೩೬ -೯ -೪೫
೨೦೦೪ -೩೯ -೬ -೪೫
೨೦೦೫ -೧೮ -೯ -೨೭
೨೦೦೬ -೩೧ -೫ -೩೬
೨೦೦೭ -೩೪ -೮ -೪೨
೨೦೦೮ -೩೩ -೮ -೪೧
೨೦೦೯ -೩೨ -೯ -೪೦
೨೦೧೧ -೨೫ -೪ -೨೯
೨೦೧೨ -೨೦- ೯ -೨೯
ಒಟ್ಟು  ೩೧೮ -೭೮ -೩೯೬
ಈ ಸಾವಿನ ಸಂಖ್ಯೆ ನೋಡುತ್ತಿದ್ದರೆ ಅದೇನು ಧರ್ಮಸ್ಥಳವೇ ? ಅಥವಾ ಅಧರ್ಮಸ್ಥಳವೇ ? ಎಂಬ ಅನುಮಾನ ಮೂಡದಿರದು. ದಕ್ಷಿಣ ಕನ್ನಡದ ಯಾವ ತಾಲ್ಲೂಕನ್ನು ತೆಗೆದುಕೊಂಡರೂ ನಿಮಗೆ ಈ ರೀತಿಯ ಸಾವಿನ ಸಂಖ್ಯೆ ಸಿಗದು. ಹಾಗಿದ್ದರೆ ಇಲ್ಲಿ ಮಾತ್ರ ಇಷ್ಟೊಂದು ಸಾವುಗಳು ಸಂಭವಿಸಲು ಕಾರಣವೇನು ?
ಇದೆಲ್ಲದರ ಜೊತೆಗೆ ಹತ್ಯಾಚಾರ ಆರೋಪಿಯೆಂದು ಸಂತೋಷ್‌ನನ್ನು ಹಿಡಿದು ಕೊಟ್ಟರಲ್ಲ, ಆ ಗುಂಪಿಗೆ ನಿಕಟವರ್ತಿಯಾದ ಒಬ್ಬ ಯುವಕನೂ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಹೋರಾಟಗಾರರು ಅದು ಆತ್ಮಹತ್ಯೆಯಲ್ಲ, ಅದೂ ಸಹ ಕೊಲೆಯೆ. ಸಾಕ್ಷ್ಯ ನಾಶಕ್ಕಾಗಿ ಮಾಡಲಾದ ಕೊಲೆ ಎಂದು ಆಪಾದಿಸಿದ್ದಾರೆ. ಇದನ್ನೆಲ್ಲ ನೋಡಿದರೆ ಧರ್ಮಸ್ಥಳದಲ್ಲಿ ನಿಜಕ್ಕೂ ಏನು ನಡೆಯುತ್ತಿದೆ ಎಂಬ ಆತಂಕ ಮೂಡದಿರದು.
ಈಗ ಸೌಜನ್ಯ ಪರವಾಗಿ ಹೋರಾಟಕ್ಕಿಳಿದಿರುವ ಆಕೆಯ ಸೋದರ ಮಾವ ವಿಠ್ಠಲ ಗೌಡ ಹೇಳುವ ಪ್ರಕಾರ ಇಲ್ಲಿ ಅತ್ಯಾಚಾರ ಕೊಲೆ ಮಾಡಲಿಕ್ಕಾಗಿಯೇ ಒಂದು ವ್ಯವಸ್ಥಿತ ಜಾಲವಿದೆ. ಅದಕ್ಕೆ ಪ್ರಭಲ ವ್ಯಕ್ತಿಗಳ ರಕ್ಷಣೆಯೂ ಇದೆ. ಇಲ್ಲಿ ನಡೆದ ಅನೇಕ ಕೊಲೆಗಳಿಗೆ ಕಾರಣ ರಿಯಲ್ ಎಸ್ಟೇಟ್ ದಂಧೆ! ಇದು ಹೆಸರಿಗೆ ಮಾತ್ರ ಧರ್ಮಸ್ಥಳ, ಇಲ್ಲಿ ಧರ್ಮದ ಹೆಸರಲ್ಲಿ ಅಧರ್ಮ ತಾಂಡವವಾಡುತ್ತಾ ಇದೆ ಎಂದೆನ್ನುತ್ತಾರೆ.
ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹೇಳುವುದೇನೆಂದರೆ, ನೇತ್ರಾವತಿ ಹಾಗೂ ಧರ್ಮಸ್ಥಳದ ನಡುವೆ ಒಬ್ಬ ಬ್ರಾಹ್ಮಣರ ಮನೆ ಇದೆ. ಆ ಜಾಗವನ್ನು ತಮಗೇ ಮಾರಾಟ ಮಾಡಬೇಕೆಂದು ಖಾವಂದರು ಕೇಳಿದ್ದಾರೆ. ಆದರೆ ಆ ಬ್ರಾಹ್ಮಣರು ಅದಕ್ಕೆ ಒಪ್ಪಿಲ್ಲ. ಈ ವಿಷಯವಾಗಿ ಅವರ ಪುತ್ರಿ ವರ್ಷಾ ಎಂಬಾಕೆಯನ್ನು ಕೊಲೆಗಾರರು ಗುರಿ ಮಾಡಿದ್ದಾರೆ. ಸೌಜನ್ಯ ಸಹ ಹೆಚ್ಚುಕಡಿಮೆ ವರ್ಷಳಂತೆಯೇ ಇದ್ದುದರಿಂದ ಅಂದು ವರ್ಷಾ ಬದಲಿಗೆ ಸೌಜನ್ಯ ಸಿಕ್ಕಿ ಹಾಕಿಕೊಂಡಿರಬಹುದು.
ಒಟ್ಟಿನಲ್ಲಿ ಧರ್ಮಸ್ಥಳದಲ್ಲಿ ನೂರಾರು ಕೊಲೆ, ಅತ್ಯಾಚಾರದ ಪ್ರಕರಣಗಳು ನಡೆದಿವೆ. ಅವುಗಳ ಹಿಂದೆ ಒಂದು ವ್ಯವಸ್ಥಿತ ಜಾಲ ಇರುವುದರ ಬಗ್ಗೆ ಸ್ಥಳೀಯರು ನೇರವಾಗಿಯೇ ಆರೋಪಿಸುತ್ತಾರೆ. ಇದನ್ನೆಲ್ಲಾ ಗಮನಿಸಿದಾಗ ಈ ಬ್ರಹ್ಮರಹಸ್ಯವನ್ನು ಬಗೆದಿಡಲು ರಾಜ್ಯದ ಪೊಲೀಸ್ ಅಥವಾ ಸಿಐಡಿಯಿಂದ ಖಂಡಿತಾ ಸಾಧ್ಯವಿಲ್ಲ. ಸಿಬಿಐ ತನಿಖೆ ನಡೆದಲ್ಲಿ ಸತ್ಯ ಹೊರ ಬರಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…