ವಿಷಯಕ್ಕೆ ಹೋಗಿ

ಅತಿಥಿ ಸತ್ಕಾರ ಮತ್ತು ಬಡತನ !


ತೀರಾ ಬಡತನದಲ್ಲಿ ಹುಟ್ಟಿ ಬೆಳೆದವನು ನಾನು. ನಾನು ಹುಟ್ಟುವ ಮೊದಲು ನಮ್ಮ ತಂದೆ ತಾಯಿ ಎಷ್ಟೋ ಸಮಯ ಯಾರದೋ ಮನೆಯಿಂದ ತಂದ ಬಾಳೆ ಕಾಯಿಗಳನ್ನು ತಿಂದು ನೀರು ಕುಡಿದು ಹಸಿವು ನೀಗಿಸಿಕೊಂಡಿದ್ದಿದೆಯಂತೆ. ನಾನು ಹುಟ್ಟಿದ ವರ್ಷವೇ ನಮ್ಮಪ್ಪ ನಮ್ಮನೆ ಎದುರಿನ ಪಾಳು ಬಿದ್ದ ಒಂದಿಷ್ಟು ಜಾಗವನ್ನು ಕುಂಟೆ ಹೊಡೆದು ಭತ್ತ ಬೆಳೆದಿದ್ದನಂತೆ. ಹಾಗಾಗಿ ನಾನು ಹುಟ್ಟಿದ ನಂತರ ಊಟದ ಸಮಸ್ಯೆ ತಕ್ಕ ಮಟ್ಟಿಗೆ ಪರಿಹಾರವಾಯ್ತಂತೆ.

ನಾನು ಚಿಕ್ಕ ಹುಡುಗನಾಗಿದ್ದಾಗ ನಮ್ಮ ಮನೆಯ ಗೋಡೆ ಮಣ್ಣು-ಇಟ್ಟಿಗೆಯದಾಗಿರಲಿಲ್ಲ, ಬದಲಿಗೆ ಅಡಿಕೆ ಹಾಳೆ ಮತ್ತು ದಬ್ಬೆಗಳಿಂದ ಮಾಡಿದ ತಟ್ಟಿಯಾಗಿತ್ತದು. ಅಡಿಕೆ ಸೋಗೆಯನ್ನೆ ಮಾಡಿಗೆ ಹೊದೆಸಲಾಗಿತ್ತು. ಎಷ್ಟೋ ಸಮಯ ನಾಯಿ, ಕೋಳಿ, ಹಾವುಗಳು ಸರಾಗವಾಗಿ ಮನೆಯೊಳಗೆ ಬಂದು ಬಿಡುತ್ತಿದ್ದವು.  ಸುಮಾರು ವರ್ಷದ ನಂತರ ಅಪ್ಪ ಮಣ್ಣಿನ ಗೊಡೆಯ ಮನೆ ಕಟ್ಟಿಸಿದ. ಅದಾದ ಸುಮರು ವರ್ಷಗಳ ನಂತರ ಮಾಡಿಗೆ ಹೆಂಚು ಬಂತು. 

ಆಗೆಲ್ಲಾ ಗಂಜಿ ಊಟ ಸಾಧಾರಣವಾಗಿತ್ತು. ಹಬ್ಬಕ್ಕೆ ನುಚ್ಚಕ್ಕಿ ಹಾಗೂ ಬೆಲ್ಲದ ಪಾಯಸವೇ ಅದ್ಬುತ ಸಿಹಿ ಪದಾರ್ಥವಾಗುತ್ತಿತ್ತು. ಕೊನೆ ಕೊನೆಗೆ ಅಪ್ಪ ಬೇರೆಯವರ ಜಮೀನಿನಲ್ಲಿ ಅದ್ಯಾವುದೋ ಲೆಕ್ಕಾಚಾರದಲ್ಲಿ ಕಬ್ಬು ಬೆಳೆದು ಮನೆಗೆ ಬೆಲ್ಲ ಬರುವಂತಾಯ್ತು. ಆಲೆಮನೆ ಸಮಯದಲ್ಲಿ ಕಬ್ಬಿನ ರಸದಿಂದ ಮಣ್ಣಿ ಎಂಬ ಒಂದು ಬಗೆಯ ಮೈಸೂರ‍್ ಪಾಕ್‌ ತಯಾರಿಸುತ್ತಿದ್ದಳು ಅವ್ವ.

ಗದ್ದೆಗಳನ್ನು ವಿಸ್ತರಿಸುತ್ತಾ ಹಲವಾರು ವರ್ಷಗಳ ನಂತರ ಅವು ಸುಮಾರು ಒಂದು ಎಕರೆಯಷ್ಟಾದವು. ಅದರಲ್ಲೂ ಮಳೆ ಜಾಸ್ತಿ ಆದ ವರ್ಷದಲ್ಲಿ ಶರಾವತಿ ಹಿನ್ನೀರು ಬಂದು ಅರ್ಧ ಎಕರೆಯನ್ನು ಮುಳುಗಿಸುತ್ತದೆ! ಮಳೆ ಕಡಿಮೆಯಾದರೆ ಅದೇ ಮುಳುಗಡೆ ಪ್ರದೇಶದ ಇನ್ನೂ ಹೆಚ್ಚಿಗೆ ಒಂದೆರಡೆಕರೆ ಬೇಸಾಯ ಮಾಡುತ್ತಿದ್ದ. ಇದೂ ಒಂತರ ಲಾಟರಿ ರೀತಿ. ಈ ವರ್ಷ ಮಳೆ ಜಾಸ್ತಿ ಆಗಲ್ಲ, ಮುಳುಗಡೆ ತುಂಬಲ್ಲ ಅಂತ ಅಂದುಕೊಂಡು ಬೇಸಾಯ ಮಾಡಿದ ವರ್ಷವೇ ತಡವಾಗಿ ಮಳೆ ಬಂದು ಲಿಂಗನಮಕ್ಕಿ ಪೂರ್ತಿ ತುಂಬಿ ನಮ್ಮಪ್ಪನ ಗದ್ದೆಗಳೂ ಮುಳುಗಿ ನಾಶವಾಗುತ್ತಿದ್ದವು! ಕೆಲವೊಮ್ಮೆ ಭರ್ಜರಿ ಮುಂಗಾರು ಮಳೆಯನ್ನು ನೋಡಿ 'ಈ ವರ್ಷ ಗದ್ದೆ ಮಾಡಿದರೆ ಮುಳುಗುತ್ತವೆ' ಅಂದುಕೊಂಡು ಸುಮ್ಮನಾದರೆ, ಆ ವರ್ಷ ಮಳೆಯೇ ಸರಿಯಾಗಿ ಆಗದೇ ಹೊಟ್ಟೆ ಉರಿಸುತ್ತಿತ್ತು.

ಹೀಗೆ ಕಷ್ಟದ, ನಷ್ಟದ, ಬಡತನದ ಜೀವನವಿದ್ದಾಗ್ಯೂ ನಮ್ಮವ್ವ ಬಂದವರಿಗೆ ಊಟಕ್ಕೆ ಕರೆಯದೇ, ಒಂದು ಲೋಟ ಚಾ ಮಾಡಿ ಕೊಡದೇ ಕಳಿಸಿದವಳಲ್ಲ. ಬೆಳಗಿನ ಸಮಯ ಯಾರಾದರೂ ಬಂದರಂತೂ ಚಾ ಮಾಡಿಸಿದ ನಂತರವೇ ನಮ್ಮಪ್ಪ ಮುಂದಿನ ಮಾತುಕತೆ ಶುರು ಮಾಡುತ್ತಿದ್ದುದು. ನಮಗಿಂತಾ ಎಷ್ಟೋ ಬಡವರಾಗಿದ್ದ ಕೆಲವರು ಊಟ ತಿಂಡಿಯ ಸಮಯಕ್ಕೆ ಏನೇನೋ ನೆಪ ಮಾಡಿಕೊಂಡು ನಮ್ಮನೆಗೆ ಬರುತ್ತಿದ್ದರು. ಅವರು ಬೇಡ ಬೇಡವೆಂದರೂ ನಮ್ಮಪ್ಪ-ಅಮ್ಮ ಊಟ ತಿಂಡಿ ನೀಡುತ್ತಿದ್ದರು. ಧನಿಕರ ಮನೆ, ಕೊಟ್ಟಿಗೆಯ ಕೆಲಸ, ತೋಟದ ಕೆಲಸ, ಗೊಬ್ಬರ ತುಂಬಿ ಹೊರುವುದು, ಮಣ್ಣು ಹೊರುವುದು - ಹೀಗೆ ಅತ್ಯಂತ ಕಷ್ಟದ ಕೆಲಸಗಳನ್ನು ನನ್ನ ಅಪ್ಪ ಅಮ್ಮ ಮಾಡುತ್ತಿದ್ದರು. ಅವರು ಮಾಡುವ ಕೆಲಸವನ್ನು ಈಗ ನಾನು ಒಂದು ಗಂಟೆಯ ಸಮಯ ಮಾಡಲೂ ಸಾಧ್ಯವಾಗುವುದಿಲ್ಲ.

ಆಗ ರಾಮಕೃಷ್ಣ ಹೆಗಡೆ ಸರ್ಕಾರ ಪಡಿತರದಾರರಿಗೆ ಸೀರೆ ಪಂಚೆ ನೀಡಿತ್ತು. ಅದನ್ನೇ ನನ್ನ ಅಪ್ಪ, ಅಮ್ಮ ಎಷ್ಟು ಖುಶಿಯಿಂದ ಪಡೆದು ಬಳಸುತ್ತಿದ್ದರು ಅನ್ನುವುದನ್ನು ಬಣ್ಣಿಸಲಾಗದು. ನಂತರ ಶಾಲೆಯಲ್ಲಿ ಮಧ್ಯಾಹ್ನ ಉಪ್ಪಿಟ್ಟು ಕೊಡುತ್ತಿದ್ದರು. ನಮ್ಮ ಮೇಷ್ಟ್ರು ತಮ್ಮ ಮನೆಯಿಂದಲೇ ಅದನ್ನು ತಯಾರಿಸಿ ತರುತ್ತಿದ್ದರು. ಅದಕ್ಕೂ ಒಂದು ದಿನ ಯಾರೋ ಕಲ್ಲು ಹಾಕಿದರು. ಈಗ ಸಿದ್ದರಾಮಯ್ಯನವರು ನೀಡುವ ಒಂದು ರೂಪಾಯಿಗೆ ಕೆಜಿ ಅಕ್ಕಿಯನ್ನು ಕೆಲ ಸಿರಿವಂತ ದುಷ್ಟರು ಟೀಕಿಸುವುದನ್ನು ನೋಡಿದರೆ ಆ ಬಡತನದ ದಿನಗಳು ನೆನಪಾಗಿ ಕಣ್ಣು ತೇವವಾಗುತ್ತವೆ. ಬಡತನದ ಗಂಧ ಗಾಳಿಯೂ ಇಲ್ಲದ ಈ ಕುನ್ನಿಗಳು ಬಡವರ ಅನ್ನವನ್ನೂ ಎಷ್ಟು ತುಚ್ಚವಾಗಿ ಕಾಣುತ್ತಾರಲ್ಲ ? ಸರ್ಕಾರ ಪುಗಸಟ್ಟೆ ಕೊಡುತ್ತದೆ ಎಂದು ಹಂಗಿಸುವ ಈ ಐನಾತಿಗಳು ಸರ್ಕಾರದಿಂದ ಏನೂ ಪಡೆಯುತ್ತಿಲ್ಲವೇ ? ನೀರು, ವಿದ್ಯುತ್, ಅಡುಗೆ ಅನಿಲ, ಪೆಟ್ರೋಲು ಡೀಸೆಲ್ ಎಲ್ಲದರಲ್ಲೂ ಸಬ್ಸಿಡಿ ಪಡೆವ ಬಡ್ಡೀಮಕ್ಕಳು ಬಡವರು ಹೊಟ್ಟೆ ತುಂಬಾ ಉಂಡರೆ ಎಲ್ಲ ತಮ್ಮ ಮನೆ ಕೆಲಸಕ್ಕೆ ಬರುವುದಿಲ್ಲವೋ ಎಂಬ ಒಂದೇ ಕಾರಣಕ್ಕೆ ಬಡವರ ಅನ್ನದ ಬಗ್ಗೆ ಕುಹಕವಾಡುತ್ತಾರೆ! 

ಬೆಂಗಳೂರಿನವರು ಊಟ ಬಡಿಸಿದ ಬಗೆ !
ಇದನ್ನೆಲ್ಲಾ ನೋಡಿ ಬೆಳೆದ ನನಗೆ ಬೆಂಗಳೂರಿನಲ್ಲಿ ಆದ ಕೆಲವು ಅನುಭವಗಳನ್ನ ಮರೆಯಲಾಗದಾಗಿದೆ.
ಅದೊಮ್ಮೆ ನನ್ನ ಕಾದಂಬರಿಯೊಂದು ಪ್ರಕಟವಾದಾಗ ಆ ಪ್ರಕಾಶಕರ ಸ್ನೇಹಿತರೊಬ್ಬರು ಪರಿಚಯವಾಗಿ ಬಸವನಗುಡಿಯಲ್ಲಿನ ಅವರ ಮನೆಗೆ ಊಟಕ್ಕೆ ಬರಲೇ ಬೇಕೆಂದು ಆಹ್ವಾನಿಸಿದರು. ನಾನು ಹಾಗೆಲ್ಲಾ ಯಾರ ಮನೆಗೂ ಹೋಗುವವನಲ್ಲವಾದರೂ ಅವರ ಒತ್ತಾಯಕ್ಕೆ ಮಣಿದು ಹೋಗಲೇ ಬೇಕಾಯ್ತು. ಊಟಕ್ಕೆ ಕುಳಿತಾಗ ಅವರ ಪತ್ರನಿ ಒಂದು ಚಿಕ್ಕ ಪಾತ್ರೆಯಲ್ಲಿ ಸ್ವಲ್ಪವೇ ಅನ್ನವನ್ನು ತಂದು ಇಷ್ಟಿಷ್ಟೇ ನನ್ನ ತಟ್ಟೆಗೆ ಸೌಟಿನಿಂದ ತಳ್ಳತೊಡಗಿದರು. ಒಂದು ಬಾರಿ ಅವರು ತಳ್ಳುವ ಅನ್ನ ೨೫-೩೦ ಗ್ರಾಂ ಇದ್ದರೆ ಹೆಚ್ಚು. (ನಮ್ಮೂರಿನಲ್ಲಿ ಈ ತರ ಯಾರ ಮನೆಯಲ್ಲೂ ನೋಡಿರಲಿಲ್ಲ. ಒಂದು ಸಾರಿ ಕೈಲಿ ಹಿಡಿದು ಹಾಕಿದರೆಂದರೆ ಒಬ್ಬ ಸಾಮಾನ್ಯ ಮನುಷ್ಯನ ಹೊಟ್ಟೆ ಭರ್ತಿಯಾಗಿ ಬಿಡಬೇಕು, ಹಾಗೆ ಬಡಿಸುತ್ತಾರೆ). ಇವರು ಬಡಿಸುವುದನ್ನು ನೋಡಿ ನಾನೇ 'ಸಾಕು ಸಾಕು' ಎಂದು ತಡೆದೆ. ಎರಡನೇ ಬಾರಿಯೂ ಅದೇ ರೀತಿ ಆಯ್ತು. ಅಂತೂ ಊಟ ಮುಗಿಸಿ ಅವರ ಮನೆಯಿಂದ ಬೀಳ್ಕೊಟ್ಟೆ. ಅರ್ಧ ಗಂಟೆಯಲ್ಲೇ ಹಸಿವು ಶುರುವಾಯ್ತು, ಹೋಟೆಲಿಗೆ ಹೋಗಿ ಏನೋ ತಿಂದು ಹೊಟ್ಟೆ ತುಂಬಿಸಿಕೊಂಡೆ!

ಸಿನೆಮಾ ನಟನ ಮನೆಯಲ್ಲಿ !
ಅದಾದ ನಂತರ ಇತ್ತೀಚಿಗೆ ಒಮದು ಚಲನಚಿತ್ರಕ್ಕೆ ಲೆಕ್ಕಿಗನಾಗಿ ಕೆಲಸ ಮಾಡಬೇಕಾಗಿ ಬಂತು. ಆ ನಟ ಒಂದು ಸಮಯದ ಯೋಗರಾಜಭಟ್ಟರ ಶಿಷ್ಯ. ಆ ಕಾರಣಕ್ಕೇ ಚಿತ್ರಕ್ಕೆ ಅವನ ಸಂಬಳ ಮೊದಲಿಗೆ ಮೂರು ಲಕ್ಷ ಮಾತಾಡಿದ್ದು ಚಿತ್ರ ಮುಗಿವ ಹೊತ್ತಿಗೆ (ನಮ್ಮವರು ಚಿತ್ರ ನಿಮಾಣಕ್ಕೆ ತಡ ಮಾಡಿದರು) ಹದಿನೈದು ಲಕ್ಷಕ್ಕೇರಿತ್ತು! ಅದರಲ್ಲೂ ನಾವು ಹೇಳಿದ ಸಮಯಕ್ಕೆ ಬರುತ್ತಿರಲಿಲ್ಲ. ಅವನ ಡೇಟ್ ತೆಗೆದುಕೊಳ್ಳಲಿಕ್ಕೆ ಹರ ಸಾಹಸ ಮಾಡಬೇಕಾಯ್ತು. (ಚಿತ್ರ ಅರ್ಧದಲ್ಲಿ ನಿಂತು ಮತ್ತೆ ಶುರುವಾದ್ದರಿಂದ ನಕರಾ ಮಾಡುತ್ತಿದ್ದ.) ಆತನ ಮ್ಯಾನೇಜರ‍್ ಏನೇನೋ ಕತೆ ಹೇಳುತ್ತಿದ್ದ. ನಟನನ್ನೇ ಹುಡುಕಿಕೊಂಡು ಬೆಳ ಬೆಳಗ್ಗೆಯೇ ಒಟ್ಟು ಮೂರು ಬಾರಿ ನಾನೂ ನಿರ್ಮಾಪಕನೂ (ನನ್ನ ಗೆಳೆಯ) ಹೋಗಿದ್ದವು. ಆ ನಟ ಕೂಡಾ ಮಲೆನಡು ಬಾಗದವನೇ. ಆದರೆ ನಾವು ಹೋದ ಆ ಮೂರು ಬಾರಿಯಲ್ಲಿ ಒಮ್ಮೆ ಕೂಡಾ ಅವರ ಅಮ್ಮ ಒಂದು ಲೋಟ ಕಾಫಿ ಕೊಡಲಿಲ್ಲ! ಅವರಪ್ಪ ಕೊಡಿಸಲಿಲ್ಲ! ಒಟ್ಟು ಹದಿನೈದು ಲಕ್ಷ ಸಂಭಾವನೆ ಪಡೆದ ಈ ನಟ ಸಹ ಅಷ್ಟು ಸೌಜನ್ಯ ನೀಡಲಿಲ್ಲ!

ಬಡವನ ಸಿಟ್ಟು ದವಡೆಗೆ ಮೂಲ ಎಂಬ ಕಾರಣಕ್ಕೆ ಬಡವರು ಹಲ್ಲು ಕಡಿದು ಈ ಧನಿಕರ ದರ್ಪವನ್ನು ಸಹಿಸುತ್ತಾರೆ. ಆದರೆ ಬಡವನೇನಾದರೂ ಸಿಡಿದೆದ್ದರೆ ಧನಿಕರು ಹೇಳ ಹೆಸರಿಲ್ಲದಂತೆ ದಮನವಾಗುತ್ತಾರೆ. ಅಂತಹ ಕಾಲ ಬೇಗನೆ ಬರಲಿ, ಕೆಟ್ಟ ಧನಿಕರು ಬುದ್ದಿ ಕಲಿಯಲಿ ಎಂದು ಆಶಿಸುತ್ತೇನೆ.
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…