ವಿಷಯಕ್ಕೆ ಹೋಗಿ

ಕತೆ - ಸೂರ್ಯಾವಸಾನ
೨೦೧೨ನೇ ಇಸವಿ ಡಿಸೆಂಬರ್ ೨೧

ಅಂದು ಖಗೋಳ ಶಾಸ್ತ್ರದ ವಿಜ್ಞಾನಿಗಳೆಲ್ಲಾ ದಿಗಿಲುಗೊಂಡು ಗರಬಡಿದವರಂತೆ ಕುಳಿತುಬಿಟ್ಟಿದ್ದರು. ಅದಕ್ಕೆ ಬೃಹತ್ ಕಾರಣವೇ ಇತ್ತು ಉರಿಯುತ್ತಿರುವ ಗೋಲ ಸೂರ್ಯನಲ್ಲಿ ದಿಢೀರ್ ಬದಲಾವಣೆಗಳು ಕಂಡು ಬಂದಿದ್ದವು. ಸೂರ್ಯನಲ್ಲಿ ನಡೆಯುತ್ತಿದ್ದ ರಾಸಾಯನಿಕ ಪ್ರಕ್ರಿಯೆಗಳು ಅದು ಹೇಗೋ ಉಲ್ಟಾ ಆಗಿ ಸೂರ್ಯ ತಣ್ಣಗಾಗತೊಡಗಿದ್ದ ! ಅವನ ಸಾವು ನಿಶ್ಚಯವಾಗಿ ಕೆಲವೇ ದಿನಗಳಲ್ಲಿ ಬ್ಲಾಕ್ ಹೋಲ್ ಆಗಲಿದ್ದ! ಸಾವಿರಾರು ವರ್ಷಗಳಲ್ಲಿ ನಡೆಯಬೇಕಾದ ಈ ಕ್ರಿಯೆ ಕೆಲವೇ ದಿನಗಳಲ್ಲಿ ಉಚ್ಚ ಘಟ್ಟವನ್ನು ತಲುಪಿದ್ದಕ್ಕೂ, ಇನ್ನು ಕೆಲವೇ ದಿನಗಳಲ್ಲಿ ಸೂರ್ಯ ಪೂರ್ತಿ ಇಲ್ಲವಾಗಿ ಬಿಡುವುದಕ್ಕೂ ಕಾರಣವನ್ನೇ ಕಂಡುಹಿಡಿಯಲಾಗದೆ ವಿಲವಿಲನೆ ಒದ್ದಾಡುತ್ತಿದ್ದರು ವಿಜ್ಞಾನಿಗಳು! 

ಕಾರಣವನ್ನು ಕಂಡು ಹಿಡಿದರೆ ಅದನ್ನು ತಡೆಯುವುದಕ್ಕೂ ದಾರಿ ಹೊಳೆಯಬಹುದೆಂಬುದು ಅವರ ಆಶಯವಾಗಿತ್ತು. ಆ ಕಾರಣಗಳನ್ನೆಲ್ಲಾ ಸರಿಯಾಗಿ ಕಂಡುಕೊಳ್ಳದೆ ಜನರಿಗೆ ವಿಷಯವನ್ನು ಮುಂದೊಡ್ಡುವಂತೆಯೂ ಇಲ್ಲ. 

ಈ ನಡುವೆ ಯಾವುದೋ ದೇಶದ ಇನ್ಯಾವುದೋ ಒಬ್ಬ ಅನಾಮಧೇಯ ವಿಜ್ಞಾನಿ ಸೂರ್ಯನು ದಿನೇ ದಿನೇ ಕುಂದುತ್ತಿದ್ದಾನೆ! ಕೆಲವೇ ದಿನಗಳಲ್ಲಿ ಸೂರ್ಯನ ಸಾವು ನಿಶ್ಚಿತ! ಹಾಗೆ ನಡೆದು ಹೋದರೆ ನಮ್ಮ ಸಾವು ನಿಶ್ಚಿತ! ಏಕೆಂದರೆ ಸೂರ್ಯನ ಗುರುತ್ವ ಬಲದಲ್ಲೇ ಈ ನಮ್ಮ ಭೂಮಿ ನಿಂತಿದೆ. ಸೂರ್ಯನೇ ಇಲ್ಲವೆಂದ ಮೇಲೆ ಭೂಮಿ ಬಿದ್ದು ಹೋಗುತ್ತದೆ. ಅಥವಾ ಸೂರ್ಯನ ಅಗಾಧ ಗುರುತ್ವ ಬಲಕ್ಕೆ ಒಳಗಾಗಿ ಸರ್ರನೆ ಹೋಗಿ ಸೂರ್ಯನಿಗೇ ಅಪ್ಪಳಿಸಿಕೊಂಡುಬಿಡುತ್ತದೆ. ಅಥವಾ ಸೂರ್ಯನೆಂಬ ಕಪ್ಪು ರಂಧ್ರದೊಳಗೆ ಸೇರಿಕೊಂಡು ಜೀವಕುಲಕ್ಕೆಲ್ಲಾ ಓಂ ನಮಃ ಶಿವಾಯಃ ಹೇಳುತ್ತದೆ ಎಂಬಂತಹ ವಿಷಯವನ್ನು ಸ್ಫೋಟಿಸಿ ಹೆಸರು ಮಾಡಿಯೇ ಬಿಟ್ಟ! 

ಇದು ಪ್ರಚುರವಾಗುತ್ತಿದ್ದಂತೆಯೇ ಅವನ ಹೆಸರು ಹಾಳಾಗಿ ಹೋಗಲಿ! ಅದ್ಯಾರಿಗೆ ಬೇಕಾಗಿದೆ? ಮನುಕುಲ ಉಳಿದರೆ ಸಾಕು! ಎಂದು ಜನರು ಪತ್ರಿಕೆಗಳಿಗೆ, ಪತ್ರಿಕೆಯವರು ಮಂತ್ರಿಗಳಿಗೆ, ಮಂತ್ರಿಗಳು ಪ್ರಧಾನ ಮಂತ್ರಿಗಳಿಗೆ, ಅವರು ವಿಜ್ಞಾನಿಗಳಿಗೆ ಮುಗಿಬಿದ್ದರು. ಎಲ್ಲಾ ದೇಶದಲ್ಲಿಯೂ ಇದೇ ನಡೆಯಿತು. 

ಕೆಲವೇ ದಿನಗಳಲ್ಲಿ ಸೂರ್ಯನ ಬಿಸಿಲು ಗಣನೀಯವಾಗಿ ಇಳಿಮುಖವಾಗಿ ಹೋಯ್ತು. ಆದರೂ ಕೆಲವು ಪುಢಾರಿಗಳು ಮಹಾಜನಗಳೇ ಇದನ್ಯಾರೂ ನಂಬಬೇಡಿ. ಜಗತ್ತನ್ನು ಮಂಗ ಮಾಡಲು ಅಮೆರಿಕಾ ಹೂಡಿದ ತಂತ್ರ ಇದು! ಎಂದೂ ಇದೆಲ್ಲಾ ಸುದ್ದಿ ಪಾಕಿಸ್ಥಾನದವರ  ಕುಯುಕ್ತಿ ಎಂದೂ ಹೇಳಿಕೊಂಡು ತಿರುಗಾಡಿದರು! ಆದರೂ ಸೂರ್ಯನ ಶಾಖ ಕಡಿಮೆಯಾಗುವುದು ಮಾತ್ರ ನಿಲ್ಲಲಿಲ್ಲ! 

ಜನರಿಗೇ ಇದು ನೇರವಾಗಿ ಅನುಭವವಾದಾಗ ತಮ್ಮ ಅವಸಾನ ಸಮೀಪಿಸಿತೆಂದು ಹುಯಿಲೆದ್ದಿತು. ವಿಜ್ಞಾನಿಗಳು ಕೈ ಚೆಲ್ಲಿದರು. ಸೂರ್ಯನಂತ ಸೂರ್ಯನೇ ಆರಿ ಹೋಗಿಬಿಡುತ್ತಾನೆಂದರೆ ಯಾರೇನು ಮಾಡಲು ಸಾಧ್ಯ? ಭಾರತದಲ್ಲಿ ಹೋಮ ಹವನಗಳು ದಿನದ ಇಪ್ಪತ್ತ ನಾಲ್ಕು ಗಂಟೆಗಳೂ ಜರುಗತೊಡಗಿದವು. ಉಳಿದ ದೇಶಗಳಲ್ಲಿ ಚರ್ಚುಗಳೂ ಮಸೀದಿಗಳು ತುಂಬಿದವು. ಯುದ್ಧಗಳು ನಿಂತವು ಸಾಯಿಸುವುದಕ್ಕಿಂತ ಬದುಕುವುದೇ ಮುಖ್ಯವೆಂಬುದನ್ನು ಆಗ ಅರಿಯುವಂತಾಯ್ತು. ಸಭ್ಯ ಸನ್ಯಾಸಿಗಳು ಎಲ್ಲಾ ಭಗವಂತನ ಇಚ್ಚೆ! ಎಂದು ಹೇಳಿ ಹಿಮಾಲಯದ ದಾರಿ ಹಿಡಿದರು. ಖೊಟಾ ಸ್ವಾಮೀಜಿಗಳು ಈ ಅನಿರೀಕ್ಷಿತ ಪ್ರಳಯವನ್ನು ಕಂಡು ವಿಲವಿಲನೆ ಒದ್ದಾಡಿದರು. ಅದರಲ್ಲೂ ಒಬ್ಬ ಬಾಬಾ ಇದೆಲ್ಲಾ ನನ್ನದೆ ಇಚ್ಚೆ ಎಂದು ಹೇಳಿ ಕಿರು ನಕ್ಕ! ಜನ ಅವನ ಕಾಲಿಗೆ ಎರಗಿದರು. ಒಂದಿಷ್ಟು ಜನ ಅವನಿಗೂ ಕಲ್ಲು ಹೊಡೆದು ಸಾಯಿಸಿದರು !

ಮುಂದಿನ ಪರಿಣಾಮಗಳ ಬಗ್ಗೆ ವಿಜ್ಞಾನಿಗಳು ತಲೆ ಕೆಡಿಸಿಕೊಂಡರು. ಸೂರ್ಯ ಕಪ್ಪು ರಂಧ್ರವಾದಾಗ ಎಲ್ಲವನ್ನೂ ತನ್ನತ್ತ ಆಕರ್ಷಿಸುತ್ತಾನೆ ! ಆದ್ದರಿಂದ ಸೂರ್ಯನಿಗೆ ಹತ್ತಿರವಿರುವ ಗ್ರಹಗಳು ಅವನೆಡೆಗೆ ಸೆಳೆಯಲ್ಪಡುತ್ತವೆ! ಬುಧ, ಶುಕ್ರ ನಂತರ ಭೂಮಿ! ಕಪ್ಪು ರಂಧ್ರದ ಶಕ್ತಿ ಅಗಾಧವಾಗಿರುತ್ತದೆ. ತನ್ನೊಳಗೆ ಸೆಳೆದುಕೊಂಡ ವಸ್ತು ಹೊರಬರುವ ಪ್ರಮೆಯವೇ ಇಲ್ಲ! ಹಾಗೊಂದು ವೇಳೆ ಈ ಭೂಮಿಯೇನಾದರೂ ಸೂರ್ಯನ ಕಪ್ಪು ರಂಧ್ರದಲ್ಲಿ ಸಿಕ್ಕು ಹಾಕಿಕೊಂಡದ್ದೇ ಆದರೆ ಇಲ್ಲಿನ ಸಕಲ ಜೀವ ರಾಶಿಗಳೂ ನಾಶವಾಗಿ ಹೇಳ ಹೆಸರಿಲ್ಲದಂತಾಗುತ್ತವೆ!  ಅದನ್ನು ತಪ್ಪಿಸಬೇಕೆಂದು ಜಗತ್ತಿನ ಉನ್ನತ ಮಟ್ಟದ ವಿಜ್ಞಾನಿಗಳೆಲ್ಲಾ ಸಭೆ ಸೇರಿ ಚರ್ಚಿಸಿದರು. 

ಹಾಗೆ ನಡೆದುದೇ ಆದರೆ ಒಂದಿಷ್ಟು ಜನರನ್ನು ಚಂದ್ರಲೋಕಕ್ಕೆ ಸಾಗಿಸಿದರಾಯ್ತು! ಎಂಬ ಸಲಹೆಯೊಂದು ಮರಿ ವಿಜ್ಞಾನಿಯೊಬ್ಬನಿಂದ ಬಂತು! ಭೂಮಿಯಂತ ಭೂಮಿಯೇ ಸೂರ್ಯನ ಸೆಳವಿಗೆ ಒಳಪಟ್ಟುದೇ ಆದರೆ ಆ ಚಂದ್ರನೆಲ್ಲಾ ಇನ್ಯಾವ ಲೆಕ್ಕ? ಸೂರ್ಯ ಅಳಿದುದೆ ಆದರೆ ಈ ಸೌರ ಮಂಡಲದ ಯಾವ ಗ್ರಹವೂ ನೆಟ್ಟಗಿರುವುದಿಲ್ಲ! ಸೂರ್ಯನ ಉದರ ಸೇರುವಂತಹವು ಸೇರುತ್ತವೆ. ಉಳಿದವು ಎಲ್ಲೋ ಬಿದ್ದು ಹೋಗುತ್ತವೆ!

ಭೂಮಿಯಲ್ಲಿ ಇರುವ ಪೆಟ್ರೋಲನ್ನೆಲ್ಲಾ ತೆಗೆದುಕೊಂಡು ಹೋಗಿ ಸೂರ್ಯನಿಗೆ ಸುರಿದರೆ ಇನ್ನೊಂದಿಷ್ಟು ದಿನ ಉರಿಯಬಹುದು! ಅದರೆ ನಂತರ? ಯಾರಿಗೂ ದಿಕ್ಕು ತೋಚಲಿಲ್ಲ. ಇಲ್ಲಿಂದ ಎಸ್ಕೇಪ್ ಆಗಬೇಕೆಂದರೆ ಈ ಸೌರವ್ಯೂಹವನ್ನೇ ತೊರೆದು ಬೇರೆ ಸೌರವ್ಯೂಹಕ್ಕೆ ವಲಸೆ ಹೋಗಬೇಕು! ಹಾಗೊಂದು ಸೌರವ್ಯೂಹ ಇರುವುದೇ ಸಂದೇಹ! ಇದ್ದರೂ ಹುಡುಕಬೇಕು. ಇನ್ನು ಹುಡುಕುವುದೆಂದರೆ ಬೆಂಕಿ ಬಿದ್ದಾಗ ಬಾವಿ ತೋಡಿದಂತೆಯೇ! 

ಇಷ್ಟರಲ್ಲಿ ಅಮೆರಿಕಾ ಒಂದು ಉತ್ತಮ ಯೋಜನೆಯನ್ನು ರೂಪಿಸಿತು. ಅದರಂತೆ ಅದು ದೊಡ್ಡದಾದ ರಾಕೇಟನ್ನು ಒಂದೆರಡು ದಿನಗಳಲ್ಲಿ ನಿರ್ಮಿಸಿತು. ಅದರಲ್ಲಿ ಭೂಮಿಯ ವಿಭಿನ್ನ ಭಾಗದ ಉತ್ತಮ ಆರೋಗ್ಯವಂತರಾದ, ಸೌಂದರ್ಯವಂತರಾದ ಒಟ್ಟು ಏಳು ಜೋಡಿ ಯುವಕ ಯುವತಿಯರನ್ನು ಆರಿಸಿ ಬೇರಾವುದೋ ಸೌರವ್ಯೂಹದೆಡೆಗೆ ಕಳುಹಿಸುವುದೆಂದಾಯ್ತು. ಅದರಂತೆ ನಮ್ಮ ಭಾರತದ ಒಂದು ಜೋಡಿಯನ್ನೂ ಆರಿಸಿದರು. ಅದೂ ನಮ್ಮ ಕನ್ನಡದವರೇ ಆಗಿದ್ದರು. ಇವರು ದೇಶದ ಇತರ ಹಲವು ಭಾಷೆಗಳನ್ನೂ ಬಲ್ಲವರಾಗಿದ್ದರು. 

ಲೇಸರ್ ಮೂಲಕ ಅವರ ಜೀವಕೋಶಗಳ ಮೇಲೆ ಶಾಕ್ ನೀಡಿ ಅದರ ಸಮಯವನ್ನು ನಿಧಾನಗೊಳಿಸಲಾಯ್ತು. ಅಂದರೆ ನಿಮಿಷಕ್ಕೆ ಎಪ್ಪತ್ತೆರಡು ಬಾರಿ ಮಿಡಿಯಬೇಕಾದ ಹೃದಯ ಕೇವಲ ಹನ್ನೆರಡು ಬಾರಿ ಮಿಡಿಯುವಂತೆ ಮಾಡಿದರು. ಇದರಿಂದ ಅವರ ಎಲ್ಲಾ ಆವಯವಗಳೂ ನಿಧಾನವಾಗಿ ಕೆಲಸ ಮಾಡುತ್ತಾ ಅವರ ವಯಸ್ಸು ಎರಡು ಪಟ್ಟು ಅಧಿಕವಾಯ್ತು! ಅವರಿಗೆ ಆಹಾರವನ್ನು ಮೂಲ ವಸ್ತುವನ್ನಾಗಿ ಬೇರ್ಪಡಿಸಿ ಆಹಾರವನ್ನಾಗಿಸುವ ವ್ಯವಸ್ಥೆ ಮಾಡಲಾಯ್ತು. ಇದರಿಂದ ಆವರ ಆಹಾರ ಎಷ್ಟು ವರ್ಷಗಳಾದರೂ ಖಾಲಿಯಾಗುವುದೇ ಇಲ್ಲ! 

ಏಳೂ ಜೋಡಿಗಳನ್ನು ಪ್ರತ್ಯೇಕವಾದ ಕೋಣೆಗಳಲ್ಲಿ ಇರಿಸಿ ರಾಕೆಟ್‌ನ ಕೆಳಗೆ ಬೆಂಕಿ ಹೊತ್ತಿಸಿ ಹಾರಿಸಿಯೇ ಬಿಟ್ಟರು! ಇದಕ್ಕೂ ಮುನ್ನ ಅವರ ಕರ್ತವ್ಯವನ್ನು ಮನವರಿಕೆ ಮಾಡಿದ್ದರು. ಒಟ್ಟಿನಲ್ಲಿ ಮನುಕುಲ ಎಲ್ಲಾದರೂ ಒಂದು ಗ್ರಹದಲ್ಲಿ ಬದುಕಬೇಕು. ಈ ರಾಕೆಟ್ ಇಂಧನ ತೀರುವವರೆಗೆ ಸೆಕೆಂಡಿಗೆ ೧೦೦೦ ಕಿ.ಮೀ. ವೇಗದಲ್ಲಿ ಅಂಡ್ರೋಮಿಡಾ ಆಕಾಶಗಂಗೆಯತ್ತ ಚಲಿಸುತ್ತದೆ. ಇಂಧನ ತೀರಿದ ನಂತರ ಅದರಲ್ಲಿಯೇ ಅಯಸ್ಕಾಂತೀಯ ಶಕ್ತಿಯನ್ನು ಉತ್ಪತ್ತಿ ಮಾಡಿ ತನ್ನನ್ನು ತಾನೇ ಅದಕ್ಕೆ ಒಳಪಡಿಸಿಕೊಂಡು ಚಲಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಅಂಡ್ರೋಮಿಡಾ ಆಕಾಶಗಂಗೆಯನ್ನು ತಲುಪಿದಾಗ ಅಲ್ಲಿ ಜೀವಿಗಳು ಬದುಕಲು ಯೋಗ್ಯವಾದ ವಾತಾವರಣವಿರುವ ಯಾವುದಾದರೊಂದು ಗ್ರಹವನ್ನು ಹುಡುಕಬೇಕು. ಸಿಕ್ಕಿದಾಗ ಈ ರಾಕೇಟಿನಲ್ಲಿ ಇರುವ ವಿಶಿಷ್ಟ ಯಂತ್ರಗಳ ಸಹಾಯದಿಂದ ಆಮ್ಲಜನಕವನ್ನು ಉತ್ಪತ್ತಿ ಮಾಡಿ ಬದುಕಬೇಕು. ಅಲ್ಲಿ ತಳವೂರಿ ಎಲ್ಲಾ ಸುಸೂತ್ರವಾದ ಮೇಲೆ ಎಲ್ಲಾ ಜೋಡಿಗಳೂ ಬೇಧಭಾವವಿಲ್ಲದೆ ಸ್ವೇಚ್ಚೆಯಾಗಿ ಲೈಂಗಿಕ ಕ್ರಿಯೆ ನಡೆಸಿ ಅಲ್ಲಿ ಮನುಕುಲವನ್ನು ವೃದ್ಧಿಸಬೇಕು. ಆ ಮಕ್ಕಳು ಬೆಳೆದಾಗ ಅವರಿಗೆ ಎಲ್ಲಾ ಭಾಷೆಗಳನ್ನೂ ಕಲಿಸಿ ನಡೆದ ವಿದ್ಯಾಮಾನಗಳನ್ನೆಲ್ಲಾ ತಿಳಿಸಬೇಕು! 

ಹೀಗೆ ಯೋಜಿಸಲಾದ ರಾಕೆಟ್‌ನಲ್ಲಿದ್ದ ಎಳೂ ಜೋಡಿಗಳೂ ಅತೀ ಉತ್ಸುಕತೆಯಿಂದಿದ್ದರೂ ಇಲ್ಲಿರುವ ಕೋಟ್ಯಾನುಕೋಟಿ ಮಾನವರು ಸತ್ತುಹೋಗಿ ಬಿಡುತ್ತಾರಲ್ಲ ಎಂದು ಯೋಚಿಸಿ ದುಃಖಿತರೂ ಆದರು. ತಾವೂ ಹೋಗಿ ಅಂಡ್ರೋಮಿಡಾ ಸೇರುತ್ತೇವೋ ಇಲ್ಲವೋ ಯಾರಿಗೆ ಗೊತ್ತು? ಅಲ್ಲಿ ಯೋಗ್ಯವಾದ ಗ್ರಹ ಸಿಗುತ್ತದೋ ಇಲ್ಲವೋ? ಕೊನೆಗೆ ಭೂಮಿಯಿಂದ ಅದೆಷ್ಟೋ ಕೋಟ್ಯಾಂತರ ಕಿ.ಮೀ. ದೂರದಲ್ಲಿ ಪ್ರಾಣತ್ಯಾಗ ಮಾಡಬೇಕಾಗುತ್ತದೆಯೇನೋ? ಎಂದು ನೊಂದುಕೊಂಡರು.

ಅಂತೂ ಅವರನ್ನು ಹೊತ್ತ ರಾಕೇಟ್ ಭೂಮಿಯನ್ನು ಬಿಡುವ ವೇಳೆಗೆ ಸೂರ್ಯ ಸಂಜೆಯ ಸೂರ್ಯನಂತೆ ಕೆಂಬಣ್ಣಕ್ಕೆ ತಿರುಗುತ್ತಿದ್ದ. ಅವನು ಆ ಬಣ್ಣಕ್ಕೆ ಬಂದು ಅದಾಗಲೇ ಮೂರ‍್ನಾಲ್ಕು ದಿನಗಳಾಗಿದ್ದವು! ಇನ್ನೊಂದೆರಡು ದಿನಗಳಲ್ಲಿ ಕಂದಾಗುತ್ತಾನೆ. ನಂತರ ಕಪ್ಪಾಗುತ್ತಾನೆ. ಅದರ ನಂತರ ಅವನಲ್ಲಿ ನಡೆಯುವ ವಿಶೇಷ ಪ್ರಕ್ರಿಯೆಗಳಿಂದಾಗಿ ಅವನ ಗುರುತ್ವ ಶಕ್ತಿ ಹೆಚ್ಚುತ್ತ ಹೋಗಿ ಕೊನೆಗೆ ತನ್ನ ಬೆಳಕನ್ನೇ ನುಂಗುವ ಮಟ್ಟ ತಲುಪಿದನೆಂದರೆ ಅಗೋಚರನಾಗಿ ಬಿಡುತ್ತಾನೆ! ಅಂತಹ ಪ್ರಚಂಡ ಗುರುತ್ವ ಶಕ್ತಿಯು ಭೂಮಿಯನ್ನೂ ಸೂರ್ಯನೊಳಗೆ ಎಳೆದುಕೊಳ್ಳಬಹುದು! ಎಂದೆಲ್ಲಾ ವಿಜ್ಞಾನಿಗಳು ವಿವರಣೆ ನೀಡುತ್ತಿದ್ದರೆ ಭೂಲೋಕದೊಳಗೆ ಕೋಲಾಹಲ ತೀವ್ರವಾಗುತ್ತಿತ್ತು! 

ಹಳ್ಳಿ ಹಳ್ಳಿಗಳಲ್ಲೂ ಭೂತಾರಾಧನೆಗಳು ಹೆಚ್ಚಾದವು. ದೇವರನ್ನೇ ನಂಬದವರೂ ಈಗ ದೇವಾಲಯಗಳನ್ನು ಹುಡುಕಿಕೊಂಡು ಹೋಗಿ ರಾತ್ರಿ ಹಗಲು ಜಪ ಮಾಡ ತೊಡಗಿದರು. ಇನ್ನೂ ಕೆಲವರು ದೇವರನ್ನು ಸದಾ ಪೂಜಿಸುತ್ತಿದ್ದವರೂ ದೇವರಿಂದ ವಿಮುಖರಾದರು! ನಾಸ್ತಿಕರು ಇನ್ನು ನಮ್ಮನ್ನು ರಕ್ಷಿಸುವುದಿದ್ದರೆ ದೇವರಿದ್ದರೆ ಅವನಿಂದಲೇ ಸಾಧ್ಯ ಎಂಬ ನಿಲುವಿಗೆ ಬಂದರೆ, ಆಸ್ತಿಕರು ನಮ್ಮನ್ನು ರಕ್ಷಿಸಲಾಗದ ದೇವರನ್ನು ಪೂಜಿಸಿಯೇನು ಫಲ? ಎಂದು ಕೇಳಲಾರಂಭಿಸಿದರು! ಇರುವುದು ಕೆಲವೇ ದಿನ, ಅಷ್ಟರಲ್ಲಿ ಎಷ್ಟಾಗುತ್ತದೋ ಅಷ್ಟನ್ನು ಅನುಭವಿಸಬೇಕೆಂದು ಹೊರಟವರಿಂದ ಪ್ರಪಂಚದಲ್ಲೆಡೆ ಅತ್ಯಾಚಾರಗಳು ಅಧಿಕವಾದವು. ಹಲವು ಹೆಣ್ಣುಗಳು ಇದೇ ಸಿದ್ಧಾಂತಕ್ಕೆ ಬಂದುದರಿಂದ ಇರೋ ಬರೋ ರೋಗಗಳೆಲ್ಲಾ ಅಧಿಕವಾಗಿ ಹರಡತೊಡಗಿದವು. ಹಲವು ದೇಶಗಳು ಲೈಂಗಿಕತೆಯನ್ನೂ ವೈಭೋಗವನ್ನೂ ಸಾರ್ವಜನಿಕಗೊಳಿಸಿ ಪ್ರಕಟಣೆ ಹೊರಡಿಸಿದವು! ಸಾಯುವ ಸಮಯ ಸಮೀಪಿಸಿತೆಂದು ತಿಳಿದ ಲಕ್ಷಾಂತರ ಜಿಪುಣರು ಮಹಾ ದಾನಶೂರರಾದರು! 

ಅತ್ತ ಸೂರ್ಯ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿರುವಂತೆಯೇ ಇತ್ತ ಭೂಮಿಯಲ್ಲಿ ನಡುಕ ಶುರುವಾಯ್ತು. ಸೂರ್ಯನ ಗುರುತ್ವ ಶಕ್ತಿ ಕಡಿಮೆಯಾಗಿ ಹೋಗಿದ್ದರಿಂದ ಭೂಮಿ ನಿಧಾನವಾಗಿ ಅದರಿಂದ ಬೇರ್ಪಡಲಾರಂಭಿಸಿತು! ಅದಾಗಲೇ ಗುರು, ಶನಿ ಮುಂತಾದ ಗ್ರಹಗಳು ಸೂರ್ಯನ ಆಕರ್ಷಣೆಯಿಂದ ಬೇರ್ಪಟ್ಟು ಎತ್ತಲೋ ಹೊರಟು ಹೋಗಿರುವುದಾಗಿಯೂ ವಿಜ್ಞಾನಿಗಳು ಹೇಳಿದರು! ಮತ್ತು ಅದು ನಿಜವೂ ಆಯ್ತು! 

ಗಾಳಿ ಬೀಸುವುದು ಜೋರಾಯ್ತು. ಭೂಮಿಯ ಅಲುಗಾಟ ಹೆಚ್ಚಾಗಿ ದೊಡ್ಡ ಕಟ್ಟಡಗಳು ಒಂದೊಂದಾಗಿ ಕುಸಿಯಲಾರಂಭಿಸಿದವು! ಇದನ್ನು ಮೊದಲೇ ನಿರೀಕ್ಷಿಸಿದ್ದ ವಿಜ್ಞಾನಿಗಳು ಮುನ್ಸೂಚನೆ ನೀಡಿದ್ದರಿಂದ ಎಲ್ಲರೂ ಪ್ರಾಣಾಪಾಯದಿಂದ ಪಾರದರೂ, ಪ್ರಾಣ ಭಯದಿಂದ ಒಬ್ಬರೂ ಪಾರಾಗದೆ ಎಲ್ಲರೂ ತತ್ತರಿಸಿದರು? 

ಸೂರ್ಯನ ಬೆಳಕು ಇಲ್ಲವಾಯಿತು. ಭೂಮಿಯೆಲ್ಲಾ ಕತ್ತಲಾವರಿಸಿಕೊಂಡು ನಕ್ಷತ್ರಗಳ ಬೆಳಕೊಂದೇ ಉಳಿಯಿತು. ಚಂದ್ರ ಬಂದು ಭೂಮಿಗೆ ಬಡಿಯಬಹುದೆಂದು ವಿಜ್ಞಾನಿಗಳು ಅಂದಿದ್ದರು! ಆದರೆ ಪುಣ್ಯಕ್ಕೆ ಅದೊಂದು ಹಾಗೆ ಆಗಲಿಲ್ಲ ! ಚಂದ್ರನನ್ನು ಗುರು ಗ್ರಹ ಸೆಳೆದುಕೊಂಡಿತು! ಹೀಗೆ ಸೂರ್ಯನ ಹಿಡಿತದಿಂದ ಕಳಚಿಕೊಂಡ ಭೂಮಿ ಅತಿ ವೇಗವಾಗಿ ಚಲಿಸಲಾರಂಭಿಸಿತು. ಅದೆಲ್ಲೊ ಪ್ರಪಾತದಲ್ಲಿ ಬಿದ್ದು ಹೋಗುತ್ತಿರುವಂತೆ ಎಲ್ಲರಿಗೂ ಭಾಸವಾಯ್ತು. ಭೂಮಿಯ ಚಲಿಸುವಿಕೆಯಿಂದ ನಕ್ಷತ್ರಗಳೇ ಎತ್ತಲೋ ಹೋಗುತ್ತಿವೆಯೇನೋ ಎನ್ನುವಂತೆ ಕಂಡು ಬಂತು ! ಗಾಳಿ ರೊಂಯ್ಯನೆ ಬೀಸುತ್ತಿತ್ತು. ಗಿಡ ಮರಗಳೆಲ್ಲಾ ಕಿತ್ತು ಹೋಗಿ ಎತ್ತೆತ್ತಲೋ ಹಾರಾಡುತ್ತಿದ್ದವು. ಸಮುದ್ರದಲ್ಲಿ ಸಾವಿರ ಅಡಿಗಳಿಗೂ ಮಿಕ್ಕಿದ ಎತ್ತರದ ಅಲೆಗಳೆಲ್ಲ ಎದ್ದೇಳುತ್ತಿದ್ದವು. ಇದರಿಂದಾಗಿ ನಿಮಿಷಕ್ಕೆ ಸಾವಿರ ಸಂಖ್ಯೆಯಲ್ಲಿ ಜನರು ಸಾಯ ತೊಡಗಿದರು. 

ಹೀಗೆ ವೇಗವಾಗಿ ಸಾಗುತ್ತಿರುವ ಭೂಮಿಯಲ್ಲಿ ಅತೀವವಾಗಿ ವಿದ್ಯುತ್ ಮತ್ತು ಶಾಖ ಉಂಟಾಗತೊಡಗಿತ್ತು! ಜನರಲ್ಲೂ ವಿದ್ಯುತ್ ಉತ್ಪತ್ತಿಯಾಗಿ ಒಬ್ಬರು ಮತ್ತೊಬ್ಬರನ್ನು ಮುಟ್ಟಿದರೆ ಕಿಡಿಗಳು ಬರುತ್ತಿದ್ದವು! ತಮ್ಮನ್ನು ತಾವೇ ಕರೆದುಕೊಂಡಾಗಲೂ ಕಿಡಿಗಳುಂಟಾಗಿ ಬಟ್ಟೆಗೆ ಬೆಂಕಿ ಬೀಳುವ ಪ್ರಸಂಗಗಳೂ ಜರುಗಿದವು! ಜನರೆಲ್ಲಾ ಮೊದ ಮೊದಲು ಹೋ... ಎಂದು ಕೂಗಿ ಕೂಗಿ ಕೊನೆಗೆ ಸಾಕಾಗಿ ಸುಮ್ಮನಾಗಿ ಏನಾಗುತ್ತದೆಯೆಂದು ಕಾದು ನೋಡತೊಡಗಿದರು. ಈ ಘಟನೆಗಳ ನಡುವೆಯೂ ಕೆಲವರು ಬೇಸತ್ತು ಆತ್ಮಹತ್ಯೆ ಮಾಡಿಕೊಳಳಲು ಬಾವಿ ಹುಡುಕುತ್ತಿದ್ದರು !

ಇದೆಲ್ಲದರ ಮಧ್ಯೆ ಇನ್ನೊಂದು ಪ್ರಸಂಗವೂ ನಡೆಯಿತು. ಅದೇನೆಂದರೆ ಮನುಕುಲದ ಉದ್ಧಾರಕ್ಕಾಗಿ ಹಾರಿಸಿ ಬಿಟ್ಟಿದ್ದರಲ್ಲ. ಏಳು ಜೋಡಿಗಳನ್ನು ಹೊತ್ತ ರಾಕೇಟನ್ನು! ಆದರ ಜೊತೆಗೆ ಸಾಧ್ಯವಾದಷ್ಟು ಸಮಯ (ದೂರದವರೆಗೆ) ಇರಲಿ ಎಂದು ಸಂಪರ್ಕವನ್ನು ಇರಿಸಿಕೊಂಡಿದ್ದರು ವಿಜ್ಞಾನಿಗಳು. ಈಗ ವಿಷಯವೇನೆಂದರೆ ಭೂಮಿಯಿಂದ ಬಹಳಷ್ಟು ದೂರ ಹೋಗಿದ್ದ ಆ ರಾಕೆಟ್‌ನಲ್ಲಿ ಕೂಡಾ ತೊಂದರೆ ಕಂಡು ಬಂದಿತು! ಆಹಾರಕ್ಕಾಗಿ ಮೂಲವಸ್ತುಗಳನ್ನು ಬೇರ್ಪಡಿಸುವ ಯಂತ್ರ ಅದು ಹೇಗೋ ಸುಟ್ಟು ಹೋಯಿತು! ಪಾಪಿ ಅಂತರಿಕ್ಷಕ್ಕೆ ಹಾರಿದರೂ ಗ್ರಹಚಾರ ತಪ್ಪಲಿಲ್ಲ ಅಂದುಕೊಂಡರು. ಅದನ್ನು ಸರಿಪಡಿಸಲು ಸಾಧ್ಯವೇ ಇಲ್ಲ ಎಂದಾದಾಗ ಸಾವೇ ಗತಿ ಎಂದು ಹೆದರಿದರು ಅದರಲ್ಲಿದ್ದವರು! ಬಹುಶಃ ಭೂಮಿಯಲ್ಲಿರುವವರೇ ಕ್ಷೇಮದಿಂದ ಇದ್ದಾರೇನೋ ಎಂದುಕೊಂಡು ಭೂಮಿಯನ್ನು ಸಂಪರ್ಕಿಸಿ ಮಾತನಾಡಿದರೆ ಅದು ಸೌರಮಂಡಲವನ್ನು ಬಿಟ್ಟು ಪಯಣಿಸುತ್ತಿರುವುದು ತಿಳಿದು ಬಂತು. ಇದರಿಂದ ಇನ್ನೂ ಗಾಬರಿಯಾಯ್ತು ಅವರಿಗೆ! 

ತಕ್ಷಣವೇ ರಾಕೇಟನ್ನು ತಿರುಗಿಸಿ, ಸೆಕೆಂಡಿಗೆ ಎರಡು ಸಾವಿರ ಕಿ.ಮೀ.ವೇಗದಲ್ಲಿ ಭೂಮಿಯತ್ತ ದೌಡಾಯಿಸಿದರು! ಆದಾಗಲೇ ಆಕರ್ಷಣ ಶಕ್ತಿಯಿಂದಲೇ ಚಲಿಸುವ ಸಾಮರ್ಥ್ಯವನ್ನು ಅದು ಪಡೆದುದರಿಂದ ಅಷ್ಟು ವೇಗ ಸಾಧ್ಯವಾಯ್ತು. ಭೂಮಿಯಲ್ಲಿನ ವಿಜ್ಞಾನಿಗಳೂ ಸಂದೇಶ ನೀಡುತ್ತಾ ಭೂಮಿ ಚಲಿಸುತ್ತಿರುವ ದಿಕ್ಕಿನೆಡೆಗೆ ಬರಲು ನೆರವಾಗತೊಡಗಿದರು. ಈ ನಡುವೆ ಕರ್ನಾಟಕದ ಜೋಡಿ  ಅತೀವ ಭಯಗೊಂಡು ನೆರವಿಗಾಗಿ ಬೇರೆ ಕೋಣೆಯಲ್ಲಿದ್ದ ಅಮೆರಿಕೆಯ ಅಮೆರಿಕೆಯ ಜೋಡಿಯನ್ನು ಸಂಪರ್ಕಿಸಲು ನಾವೀಗ ಸ್ವಲ್ಪ ಬಿಸಿಯಲ್ಲಿದ್ದೇವೆ, ನಂತರ ಮಾತಾಡೋಣ! ಎಂಬ ಉತ್ತರ ಬಂತು. ಯಾವ ಬಿಸಿ ಎಂದು ತಿಳಿಯದೆ ಕೆದಕಿ ಕೇಳಿದಾಗ ಇನ್ನೇನು? ಭೂಮಿಯಿಂದ ಲಕ್ಷಾಂತರ ಮೈಲಿ ದೂರದಲ್ಲಿದ್ದೇವೆ. ಭೂಮಿ ಬೇರೆ ಅದೆತ್ತಲೋ ಹೋಗುತ್ತಿದೆಯಂತೆ. ನಾವದನ್ನು ಹಿಡಿಯುವಷ್ಟರಲ್ಲಿ ಇನ್ಯಾವ ಯಂತ್ರ ಸುಟ್ಟು ಹೋಗಿ ಸಾಯುತ್ತೇವೆಯೋ ಏನೋ? ಭೂಮಿಯನ್ನು ಹೋಗಿ ಸೇರಿದರೂ ಅದಿನ್ಯಾವ ಗ್ರಹಕ್ಕೆ ಬಡಿದುಕೊಂಡು ಸ್ಫೋಟಗೊಳ್ಳುತ್ತದೋ? ಅಂತೂ ಸಾವೇ ನಿಶ್ಚಿತವಾಗಿದೆ ! ಬೇರಾವುದೋ ಲೋಕದಲ್ಲಿ ಜನಸಂಖ್ಯೆಯನ್ನು ವೃದ್ಧಿ ಮಾಡುವ ಬದಲು ಸಾಯುವ ಮುನ್ನ ಸ್ವಲ್ಪ ಜಾಲಿಯಾಗಿರೋಣ ಅಂತ ಇಬ್ಬರೂ ಒಂದಾಗ್ತಿದ್ದೀವೆ... ನೀವೂ ಚಿಂತೆ ಮಾಡ್ದೇ ಎಂಜಾಯ್ ಮಾಡಿ! ಎಂದರು. ಅದನ್ನು ಕೇಳಿದಾಗ ಅವರ ಬಿಸಿ ಇವರಿಗೂ ಏರಿತು! ಒಬ್ಬರ ತೆಕ್ಕೆಯಲ್ಲಿ ಇನ್ನೊಬ್ಬರು ಸೇರಿಕೊಂಡು ಜಗತ್ತನ್ನೇ ಮರೆತರು!

ಇತ್ತ ಭೂಮಿಯಲ್ಲಿ ಮುನ್ನೂರು ಕೋಟಿ ದೇವತೆಗಳ ಹೆಸರುಗಳೂ ಉಚ್ಚರಿಸಲ್ಪಡುತ್ತಿದ್ದವು ಎಂದು ನೆನಪಿರದ ದೇವತೆಗಳೂ ಇಂದು ಜನರ ಬಾಯಿಯಲ್ಲಿ ನಲಿದಾಡಿದರು ! ಎಂದೂ ಪೂಜೆ ಕಂಡಿರದಿದ್ದ ಮಂದಿರಗಳಲ್ಲೂ ಇಂದು ಜನ ಜಂಗುಳಿ. ಹಿಂದುಗಳು ಅನೇಕರು ಚರ್ಚು, ಮಸೀದಿಗಳಿಗೆ ಓಡಿದ್ದರೆ, ಅವರು ಮಂದಿರಗಳಿಗೆ ಬಂದಿದ್ದರು. ಎಲ್ಲಾ ದೇವರುಗಳ ಪರೀಕ್ಷೆ ನಡೆಯುವಂತಿತ್ತು.

ಭೂಮಿ ಗಿರಗಿರನೆ ತಿರುಗುತ್ತಾ ಎತ್ತೆತ್ತಲೋ ಚಲಿಸುತ್ತಿತ್ತು. ಅಷ್ಟರಲ್ಲಿ ಆ ಏಳು ಜೋಡಿಗಳ ರಾಕೆಟ್ ಅದು ಹೇಗೋ ಭೂಮಿಯನ್ನು ಸಮೀಸಿಯೇ ಬಿಟ್ಟಿತು. ಆಗ ರಾಕೇಟ್‌ನ ವೇಗವನ್ನು ತಗ್ಗಿಸಿ ಭೂಮಿ ಚಲಿಸುತ್ತಿರುವ ವೇಗಕ್ಕೆ ಹೊಂದಿಕೆ ಮಾಡಿಕೊಂಡು ನಿಧಾನವಾಗಿ ಅಂತೂ ಅರಬ್ಬಿ ಸಮುದ್ರದಲ್ಲೇ ಇಳಿದರು. ಅಲ್ಲಿ ನೋಡಿದರೆ ಅಲೆಗಳು ಮುಗಿಲೆತ್ತರಕ್ಕೆ ಏರುತ್ತಿದ್ದವು! ಪುಣ್ಯಕ್ಕೆ ಅವರಿರುವ ಭಾಗವನ್ನು ನೀರಿನಲ್ಲಿ ತೇಲುವಂತೆಯೇ ವ್ಯವಸ್ಥೆ ಮಾಡಿದ್ದರಿಂದ ಬಚಾವಾದರು! ಅದು ತೆರೆಗಳ ಜೊತೆಗೆ ಎದ್ದೆದ್ದು ನೆಗೆಯುತ್ತ ಆ ಕಗ್ಗತ್ತಲಿನಲ್ಲಿ... ನಕ್ಷತ್ರಗಳ ಬೆಳಕಿನಲ್ಲಿ ದಡದತ್ತ ಸಾಗಿದ್ದರೆ ಭೂಮಿ ದಿಕ್ಕಾಪಾಲಾಗಿ ಇನ್ನೆತ್ತಲೋ ಬೀಳುತ್ತಿತ್ತು! 

ವಿಜ್ಞಾನಿಗಳು ಆಸೆಯಿಂದ ಅಲ್ಲಾಡುತ್ತಿದ್ದ ದುರ್ಬೀನನ್ನು ಗಟ್ಟಿಯಾಗಿ ಹಿಡಿದುಕೊಂಡು ಮನ ಬಂದತ್ತ ನೋಡುತ್ತಿದ್ದರು. ಯಾವುದಾದರೊಂದು ನಕ್ಷತ್ರದ ಸನಿಹಕ್ಕೆ ಭೂಮಿ ಹೋದರೆ ಸಾಕು. ಅದರ ಗುರುತ್ವ ಬಲಕ್ಕೆ ಸಿಲುಕಿ ಅದನ್ನೇ ಸುತ್ತಲಾರಂಭಿಸುತ್ತದೆ!  ನಂತರ ಅದುವೇ ನಮಗೆ ಸೂರ್ಯ! ಎಂಬುದು ಅವರ ಆಸೆ, ನಿರೀಕ್ಷೆಗಳಾಗಿದ್ದವು! 

ಅವರ ನಿರೀಕ್ಷೆ ಸುಳ್ಳಾಗಲಿಲ್ಲ. ದೂರದ ಒಂದು ಚುಕ್ಕೆ ಬರಬರುತ್ತ ದೊಡ್ಡದಾಗಿ ಕಾಣಿಸುತ್ತಿರುವುದು ದುರ್ಬೀನ್‌ನಲ್ಲಿ ಕಾಣಿಸಿತು! ಅಂದರೆ ಭೂಮಿ ಅದರತ್ತಲೇ ಚಲಿಸುತ್ತಿದೆ! ವಿಜ್ಞಾನಿಗಳ ಮುಖದಲ್ಲಿ ಸಂತಸದ ನಗು ಮಿನುಗಿತು. ಕೆಲವು ದಿನಗಳು ಹಾಗೆಯೇ ಸಾಗಿದಾಗ ಆ ನಕ್ಷತ್ರ ಇನ್ನೂ ಹತ್ತಿರವಾಗಿ ಬೆಳಕು ಹೆಚ್ಚಾಗಿ, ಅದು ಬಿಸಿಲಾಗಿ ಬದಲಾಗಲಾರಂಭಿಸಿತು. ಇದನ್ನು ಕಂಡು ಜನರಿಗೆಲ್ಲಾ ಸಂತೋಷವಾಗಿ ಕೂಗಾಡಿದರು. ಇಷ್ಟರಲ್ಲಿ ಅದು ರೋಹಿಣಿ ನಕ್ಷತ್ರ ಎಂದು ವಿಜ್ಞಾನಿಗಳು ಕಂಡು ಹಿಡಿದಿದ್ದರು. 

ಅದು ಸುಮಾರು ಸೂರ್ಯನಷ್ಟು ಗಾತ್ರದಲ್ಲಿ ಕಾಣಲಾರಂಭಿಸಿದಾಗ ಅದರ ಗುರುತ್ವ ಪರಿಧಿಗೆ ಸಿಲುಕಿದ ಭೂಮಿ ನಿಧಾನಗೊಂಡು ರೋಹಿಣೀ ನಕ್ಷತ್ರವನ್ನೇ ಸುತ್ತಲಾರಂಭಿಸಿತು. ಇದರಿಂದ ಎಲ್ಲಾ ಪ್ರಕೃತಿ ವಿಕೋಪಗಳು ಒಂದೊಂದಾಗಿ ತಣ್ಣಗಾದವು. 

ಕೂಡಲೇ ಭೂಮಿಯಲ್ಲಾದ ಅನಾಹುತಗಳ ವೀಕ್ಷಣೆಗೆ ವಿಮಾನಗಳು ಹಾರಿದವು. ಉಳಿದ ಗ್ರಹಗಳಾದ ಗುರು ಶನಿ ಮುಂತಾದವುಗಳ ಕಥೆ ಏನಾಯಿತೆಂದು ತಿಳಿಯಲು ಅಮೆರಿಕಾ ರಷ್ಯಾಗಳು ಜಂಟಿಯಾಗಿ ರಾಕೆಟ್‌ಗಳನ್ನು ಉಡಾವಣೆ ಮಾಡಿದವು. 

ಆದರೆ ಅಂದು ಭಾರತದ ದೂರದರ್ಶನದಲ್ಲಿ ವಾರ್ತೆ ಈ ರೀತಿಯಾಗಿ ಪ್ರಸಾರವಾಗುತ್ತಿತ್ತು. ಭೂಮಿ ಬೀಳುತ್ತಿದ್ದ ಇಷ್ಟು ದಿನಗಳಲ್ಲಿ ಭಾರೀ ಅಂಧಕಾರ ಇದ್ದುದರಿಂದ ಆ ಸಮಯದಲ್ಲಿ ಪಾಕಿಸ್ಥಾನಿ ಸೈನಿಕರು ಸುಮಾರು ಹನ್ನೆರಡು ಕಿ.ಮೀ. ಗಡಿಯೊಳಗೆ ಬಂದಿದ್ದು ಅವರನ್ನು ಹಿಮ್ಮೆಟ್ಟಿಸಲು ಭಾರತದ ಸೈನಿಕರು ಸಜ್ಜುಗೊಂಡಿದ್ದಾರೆ! 

ಅಂದು ೨೦೧೩ನೇ ಇಸವಿ ಜನವರಿ ೨೬.

[ ಈ ಕತೆಯು ತುಷಾರ ಮಾಸಪತ್ರಿಕೆಯ ೨೦೦೩ರ ಫೇಬ್ರವರಿ ಸಂಚಿಕೆಯಲ್ಲಿ ಪ್ರಕಟಗೊಂಡಿದೆ ]
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…