ವಿಷಯಕ್ಕೆ ಹೋಗಿ

ನೂರರ ಗಡಿ ದಾಟಿದ "ನಿಮ್ಮೆಲ್ಲರ ಮಾನಸ"


​ಒಂದು ಪತ್ರಿಕೆಯನ್ನು ನಡೆಸುವುದು ಎಷ್ಟು ಕಷ್ಟ ಅನ್ನೋದು ನನ್ನನ್ನೂ ಸೇರಿದಂತೆ ಕೈ ಸುಟ್ಟುಕೊಂಡ ಎಲ್ಲರಿಗೂ ಗೊತ್ತು. ಆದರೂ ಗೆಳೆಯ ಗಣೇಶ್‌ ಕೋಡೂರು ಛಲ ಬಿಡದ ತ್ರಿವಿಕ್ರಮನಂತೆ "ನಿಮ್ಮೆಲ್ಲರ ಮಾನಸ" ತಿಂಗಳ ಪತ್ರಿಕೆಯನ್ನು ನೂರು ಸಂಚಿಕೆಯ ಗಡಿ ದಾಟಿಸಿದ್ದು ಮೆಚ್ಚುವ ಕೆಲಸ. ಈ ಶುಭ ಸಂದರ್ಭದಲ್ಲಿ ಗಣೇಶ್‌ ಇಂದು ಒಂದು ಸಣ್ಣ ಕಾರ್ಯಕ್ರಮವನ್ನೂ ಇಟ್ಟುಕೊಂಡಿದ್ದರು. ಅವರ ಪತ್ರಿಕೆಯ ಓದುಗ ಮಿತ್ರರು ದೂರದೂರುಗಳಿಂದೆಲ್ಲಾ ಬಂದು ಸೇರಿದ್ದು ಎಲ್ಲರಿಗೂ ಕುಶಿ ನೀಡಿತು.

ಹಾಗೆಯೇ ಇಂದು ಗಣೇಶ್‌ ತುಂಬಾ ಭಾವುಕರಾಗಿದ್ದರು. ಅದಕ್ಕೆ ಕಾರಣ ತಾನಂದುಕೊಂಡಿದ್ದನ್ನು ಸಾಧಿಸಿದ ತೃಪ್ತಿಗಿಂತಲೂ ಹೆಚ್ಚಾಗಿ ಇಷ್ಟು ಸಾಧಿಸಲು ಎಷ್ಟು ಕಷ್ಟ ಪಡಬೇಕಾಯ್ತು ಅನ್ನೋದು ಅವರ ಮಾತುಗಳಿಂದಲೇ ತಿಳಿಯುತ್ತಿತ್ತು. ಅವರ ಮಾತು ಕೇಳುತ್ತಾ ನನ್ನ ಕಣ್ಣು ಸಹ ತೇವಗೊಂಡದ್ದು ಸುಳ್ಳಲ್ಲ. ಕಾರಣ ಗಣೇಶ್‌ ಕೋಡೂರು ಹೆಸರು ನಾನು ಮೊದಲಿಗೆ ನೋಡಿದ್ದು ತರಂಗದಲ್ಲಿ ಅವರ ಒಂದು ಕಥೆಯನ್ನು ನೋಡಿದಾಗ. ಮುಖತಃ ಭೇಟಿಯಾಗಿದ್ದು "ಪ್ರೇಮ ಸಾಮ್ರಾಜ್ಯ" ಎಂಬ ಪತ್ರಿಕೆಯ ಕಚೇರಿಯಲ್ಲಿ. ಹೊಟ್ಟೆ ಪಾಡಿಗಾಗಿ ನಾನು ಆ ಪತ್ರಿಕೆಗೂ ಲೇಖನ ಬರೆದು ಕೊಡಲು ಹೋದಾಗ ಅಲ್ಲಿ ಅದೇ ಕಾರಣಕ್ಕೆ ಬರೆಯುತ್ತಿದ್ದ ಗಣೇಶ್‌ ಇದ್ದರು. ಅದರ ಹಿಂದಿನ ಸಂಚಿಕೆಗೆ ನಾನು ಕೊಟ್ಟಿದ್ದ "ಸವಿ ನೆನಪುಗಳು ಬೇಕು" ಕತೆಯನ್ನು ಓದಿದ್ದ ಗಣೇಶ್‌ "ಅಷ್ಟೊಳ್ಳೆ ಕತೆಯನ್ನು ಯಾಕೆ ಈ ಪತ್ರಿಕೆಗೆ ಕೊಟ್ರಿ? ತರಂಗಕ್ಕೆ ಕಳಿಸಬೇಕಿತ್ತು, ತುಂಬಾ ಚೆನ್ನಾಗಿದೆ" ಅಂದರು. ತರಂಗಕ್ಕೆ ಕಳಿಸಿದ್ದರೆ ಅದು ಖಂಡಿತಾ ಪ್ರಕಟವಾಗುತ್ತಿತ್ತು. ಆದರೆ ಅದು ಪ್ರಕಟವಾಗಲು ಒಂದೆರಡು ತಿಂಗಳು ಮತ್ತು ಅಲ್ಲಿಂದ ಸಂಭಾವನೆ ಬರಲು ಕನಿಷ್ಟ ಮೂರು ತಿಂಗಳು ಕಾಯಬೇಕಿತ್ತು. ಆದರೆ ಮನೆಯ ಹತ್ತಿರವೇ ಇರುವ ಈ ಪತ್ರಿಕೆಯ ಕಚೇರಿಯಿಂದ ಪ್ರತಿ ತಿಂಗಳೂ ಪುಟಕ್ಕೆ ಇಷ್ಟು ಅಂತ ಹಣ ಕೈ ಸೇರುತ್ತಿತ್ತು. ಬಡತನದಲ್ಲೇ ಇದ್ದ ನನಗೆ ಅದು ಅಗತ್ಯವೂ ಇತ್ತು.


ಅದರ ನಂತರ ನಾನೂ "ಪಿಸುಮಾತು" ಪತ್ರಿಕೆ ಮಾಡಿ ಕೈ ಸುಟ್ಟುಕೊಂಡೆ. ಅದಾದ ನಂತರ ಗಣೇಶ್‌ "ನಿಮ್ಮೆಲ್ಲರ ಮಾನಸ" ಪ್ರಾರಂಭಿಸಿದರು. ನಾನೂ ಆಗಾಗ ಲೇಖನ ಬರೆಯುತ್ತಿದ್ದೆ. ಪ್ರತಿ ತಿಂಗಳೂ ಒಂದೊಂದು ಬರೆದು ಕೊಡಿ ಅಂತ ಅವರು ಕೇಳಿದರೂ ಹೊಟ್ಟೆ ಪಾಡಿಗಾಗಿ ಎಲ್ಲೆಲ್ಲೋ ದುಡಿಯುತ್ತಾ ಲೇಖನ ಬರೆದು ಕೊಡಲು ಸಾಧ್ಯವಾಗದೇ ಹೋಯ್ತು. ನಾನು ಬರೆದ ಕೆಲವೇ ಲೇಖನಗಳಿಗೂ ಒಟ್ಟಾಗಿ ಒಂದು ಬಾರಿ ಸಂಭಾವನೆ ಕೊಟ್ಟು ಋಣ ತೀರಿಸಿಕೊಂಡರು. ಅವರ ಪತ್ರಿಕೆಗೆ ಲೇಖನ ಬರೆಯದೇ ಹೋದರೂ ಸಹ ಅವರ ಪತ್ರಿಕೆಯನ್ನು ಗಮನಿಸುತ್ತಾ "ಏನೋ ಮಾಡುತ್ತಿದ್ದಾರೆ, ಮಾಡಲಿ" ಎಂದುಕೊಂಡಿದ್ದೆ. ಒಂದೆರಡು ವರ್ಷ ನಡೆಸಿದ್ದರೇನೋ, ಒಂದು ದಿನ ಸಿಕ್ಕಾಗ "ಪತ್ರಿಕೆ ಮುಂದುವರಿಸುವುದು ಸಾಧ್ಯವಾಗುತ್ತಿಲ್ಲ, ಒಂದೆರಡು ಸಂಚಿಕೆಯಲ್ಲಿ ನಿಲ್ಲಿಸಲಿದ್ದೇನೆ" ಅಂದರು. ತುಂಬಾ ಬೇಸರವಾದರೂ ಏನೂ ಮಾಡುವ ಸ್ಥಿತಿಯಲ್ಲಿ ನಾನಿರಲಿಲ್ಲ. ಕೊನೆಗೆ ಅವರ ಗೆಳೆಯರ‍್ಯಾರೋ ಕೈ ಹಿಡಿದು "ಡೆಲ್ಲಿ ಪ್ರೆಸ್‌"ನವರಿಗೆ ಪರಿಚಯಿಸಿ "ನಿಮ್ಮೆಲ್ಲರ ಮಾನಸ" ನಿಲ್ಲದಂತೆ ಮಾಡಿದರು. ಆಗ ಅವರಿಗೆ ಹಾರೈಸಿ ನಾನು ಬರೆದ ಪತ್ರವನ್ನು ಸಂಪಾದಕೀಯದಲ್ಲಿ ಪ್ರಕಟಿಸಿದ್ದಲ್ಲದೇ "ನನ್ನ ಮೆಚ್ಚಿನ ಲೇಖಕ ಶ್ರೀಪತಿ ಗೋಗಡಿಗೆ" ಎಂದು ಹೊಗಳಿದರು. 

ಡೆಲ್ಲಿ ಪ್ರೆಸ್‌ನೊಂದಿಗೆ ಸೇರಿದ ನಂತರ ಬಹುಶಃ ಅವರ ಪತ್ರಿಕೆ ಬಗೆಗಿನ "ಆರ್ಥಿಕ ಚಿಂತೆ" ಕಡಿಮೆ ಆಗಿ ಕೇವಲ ಅದರ ಗುಣಮಟ್ಟದ ಬಗ್ಗೆ ಮಾತ್ರ ಯೋಚಿಸುವಂತಾಗಿರಬಹುದು. ಆ ಕಾರಣಕ್ಕೆ ಪತ್ರಿಕೆಯಲ್ಲಿ ಅವರ ತಂಡದಿಂದ ಒಳ್ಳೊಳ್ಳೆಯ ಲೇಖನಗಳು ಬರುವುದನ್ನು ಗಮನಿಸಿದೆ. ಈ ನಡುವೆ ರವಿ ಬೆಳಗೆರೆಯವರ "ಓ ಮನಸೇ" ಮೂರನೆಯದೋ ನಾಲ್ಕನೆಯದೋ ಮರು ಹುಟ್ಟು ಕಂಡು ಮಾನಸಕ್ಕೆ ಸ್ವಲ್ಪ ತೊಂದರೆ ನೀಡಿರಲಿಕ್ಕೂ ಸಾಕು. ಅಷ್ಟಾದರೂ ಮಾನಸ ಮುಂದುವರಿಯಲು ಕಾರಣ ಗಣೇಶ್‌ರ ಓದುಗ ಬಳಗ ಮತ್ತವರ ಬರಹದ ಶಕ್ತಿ. ಒಂದು ಸಮಯದಲ್ಲಿ ಕಾಲಿಗೆ ಹವಾಯಿ ಚಪ್ಪಲಿ ಕೊಳ್ಳಲು ಹಿಂದೆ ಮುಂದೆ ನೋಡುವಂತ ಸ್ಥಿತಿಯಿಂದ (ಇಂದೇನೂ ಅವರು ಕಾರಿನಲ್ಲಿ ಓಡಾಡುತ್ತಿಲ್ಲ) ಇಲ್ಲಿಯವರೆಗೆ ಏರಿ ಬಂದ ಗಣೇಶ್‌ ಬಗ್ಗೆ ಹೆಮ್ಮೆ ಅನ್ನಿಸುತ್ತದೆ. ಇಂದು ಅವರ ಮತುಗಳನ್ನು ಕೇಳುತ್ತಾ ಹೋದಾಗ ನಾನೂ ಸಹ ಅವರ ರೀತಿಯೆ ಕಷ್ಟ ಪಟ್ಟೆನಲ್ಲ ಎಂಬ ನೆನಪಾಗಿ ಒಂದು ಕ್ಷಣ ಭಾವುಕನಾಗಬೇಕಾಯ್ತು. 

ಏನಾದರೂ "ನಿಮ್ಮೆಲ್ಲರ ಮಾನಸ" ನೂರ‍್ಕಾಲ ಬಾಳಲಿ. ಕನ್ನಡದ ಓದುಗರ ಮನೆ ಮಾತಾಗಲಿ. ಹಾಗೆಯೇ ಅವರ "ಅರುಡೊ" NGO ಮೂಲಕ ಹಳ್ಳಿಯ ಶಾಲಾ ಮಕ್ಕಳಿಗೆ ಸಹಾಯ ಮಾಡುತ್ತಲೂ ಇದ್ದಾರೆ. ಅದಕ್ಕಾದರೂ ಧನಿಕರು ಕೈ ಜೋಡಿಸಿ ಅವರ ಕೆಲಸದಲ್ಲಿ ಭಾಗಿಯಾಗಲಿ ಎಂದು ಆಶಿಸುವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…