ವಿಷಯಕ್ಕೆ ಹೋಗಿ

ಆ ಪುಟ್ಟ ಗೆಳತಿಯ ಕರೆಗಾಗಿ ಕಾಯುತ್ತಾ...


ದಾವಣಗೆರೆಯ ಆ ಹುಡುಗಿ ನನಗೆ ಪರಿಚಯವಾಗಿದ್ದು ಸುಮಾರು ಐದು ವರ್ಷಗಳ ಹಿಂದೆ. ಆಗ ಆಕೆ ಏಳನೇ ತರಗತಿ ಓದುತ್ತಿದ್ದಳು. ಒಂದು ದಿನ ಅವರ ಚಿಕ್ಕಪ್ಪನಿಗೆ ಮಾಡಿದ ಕರೆ ಗುರಿ ತಪ್ಪಿ ನನ್ನ ಮೊಬೈಲಿಗೆ ಬಂದಿತ್ತು. ರಾಂಗ್‌ ನಂಬರ್‌ ಅಂದರೂ ಕೇಳದೇ "ತಮಾಷೆ ಮಾಡ್ತಿದೀರ" ಅಂತ ಮಾತು ಮುಂದುವರಿಸಿದಳು. ನಾನು ನಿನ್ನ ಚಿಕ್ಕಪ್ಪ ಅಲ್ಲ ಅಂತ ಆಕೆಯನ್ನು ನಂಬಿಸಲು ಒಂದರ್ಧ ಗಂಟೆಯೇ ಹಿಡಿದಿತ್ತು. ಆಮೇಲೆ ಸ್ವಲ್ಪ ಸಮಯದ ನಂತರ ಮತ್ತೆ ಕರೆ ಮಾಡಿದ ಆಕೆ "ಸ್ಸಾರಿ" ಕೇಳಿದಳು. ಸರಿ ಅಂತ ನಾನೂ ಸುಮ್ಮನಾದೆ.

ಆದರೆ ಕೆಲ ದಿನಗಳ ನಂತರ ಮತ್ತೆ ಕರೆ ಮಾಡಿದ ಹುಡುಗಿ "ನಿಮ್ಮ ನಂಬರ್‌ ಚೆನ್ನಾಗಿದೆ, ಹಾಗಾಗಿ ನೆನಪಲ್ಲಿ ಇತ್ತು. (ಅವಳ ಚಿಕ್ಕಪ್ಪನ ನಂಬರಿಗೆ ಸಮೀಪದ್ದು ಬೇರೆ.) ಅದಕ್ಕೆ ಮತ್ತೊಮ್ಮೆ ಮಾತಾಡಿಸೋಣ ಅಂತ ಕಾಲ್‌ ಮಾಡಿದೆ" ಅಂದಳು. ಈ ಸಲ ನಾನೂ ಕುಶಿಯಿಂದ ಸಲುಗೆಯಿಂದ ಮಾತಾಡಿದೆ. ಅವಳ ಓದಿನ ಬಗ್ಗೆಯೆಲ್ಲಾ ವಿಚಾರಿಸಿದೆ. ಆಕೆ ತುಂಬಾ ಮುದ್ದು ಮುದ್ದಾಗಿ ಎಲ್ಲಾ ಹೇಳಿಕೊಂಡಳು. ಹೀಗೆ ನಮ್ಮ ಸ್ನೇಹ ಶುರುವಾಯ್ತು. ಆಕೆ ತನ್ನ ತಾಯಿಯ ಮೊಬೈಲ್‌ನಿಂದ ಕರೆ ಮಾಡುತ್ತಿದ್ದುದರಿಂದ ನಾನು ಆ ನಂಬರನ್ನು ಸೇವ್‌ ಮಾಡಿಕೊಳ್ಳಲಿಲ್ಲ. 

ತಿಂಗಳಿಗೆ ಮೂರ್ನಾಲ್ಕು ಬಾರಿಯಾದರೂ ನನಗೆ ಕರೆ ಮಾಡಿ ಮಾತಾಡುತ್ತಿದ್ದಳು. ಹೀಗೆ ದಿಗಳೆಯುತ್ತಾ ವರ್ಷಗಳುರುಳಿದಂತೆ ನಮ್ಮ ಸ್ನೇಹ ಹೆಚ್ಚು ಗಟ್ಟಿಯಾಯ್ತು. ಅದಾಗಲೇ ಆಕೆ SSLCಗೆ ಕಾಲಿರಿಸಿದ್ದಳು. ಜೊತೆಗೆ ಯೌವ್ವನಕ್ಕೆ ಕೂಡಾ. ಆ ಸಮಯದಲ್ಲೇ ಹುಡುಗರ ಕೀಚಾಯಿಸುವಿಕೆ ಬಗ್ಗೆ, ಲೈನ್‌ ಹೊಡೆಯುತ್ತಿರುವುದರ ಬಗ್ಗೆ, ಲವ್‌ ಲೆಟರ್‌ಗಳ ಬಗ್ಗೆ ಎಲ್ಲವನ್ನೂ ಮುಚ್ಚು ಮರೆ ಇಲ್ಲದೇ ನನ್ನ ಜೊತೆ ಹಂಚಿಕೊಂಡು ನನ್ನಿಂದ ಅನೇಕ ಸಲಹೆಗಳನ್ನೂ ಪಡೆಯತೊಡಗಿದ್ದಳು. ಆ ವಯಸ್ಸಿನಲ್ಲಿ ಅದೆಲ್ಲಾ ಸಹಜ ಕಣಮ್ಮ, ಅವರು ಲವ್‌ಲೆಟರ್‌ ಕೊಡೋದರಲ್ಲಿಯಾಗಲೀ, ಕಣ್ಣು ಹೊಡೆಯೋದರಲ್ಲಿಯಾಗಲೀ ತಪ್ಪಿಲ್ಲ. ಆದರೆ ನೀನು ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಓದಿನತ್ತ ಗಮನ ಕೊಡು ಎಂದು ಹೇಳುತ್ತಿದ್ದೆ. ಅದಲ್ಲದೇ ಆ ವಿಷಯಗಳನ್ನೆಲ್ಲಾ ತನ್ನ ತಾಯಿಗೂ ಹೇಳುತ್ತಿರುವುದಾಗಿ ಆಕೆ ಹೇಳಿದ್ದರಿಂದ ನಾನು ಅವನ್ನೆಲ್ಲಾ ಗಂಭೀರವಾಗಿ ತೆಗೆದುಕೊಳ್ಳಿಲ್ಲ. ಮತ್ತು ಆಕೆ ಬುದ್ದಿವಂತ ಹುಡುಗಿಯಾದ್ದರಿಂದ ಬೇರೆ ಯೋಚನೆಯೂ ಬರಲಿಲ್ಲ.

ನಂತರ ಆಕೆ ಪಿಯುಸಿಗೆ ಕಾಲಿರಿಸಿದ ನಂತರ ಆಕೆಗೆ ಅವರಮ್ಮ ಮೊಬೈಲು ಕೊಡುವುದನ್ನು ನಿಲ್ಲಿಸಿದರು. ಹಾಗಾಗಿ ಆಕೆಯ ಕರೆಗಳು ಬರುವುದೂ ಕಡಿಮೆಯಾಯ್ತು. ಎಂದಾದರೊಂದು ದಿನ ಯಾರಾದರೂ ತನ್ನ ಸಹಪಾಟಿಗಳ ಮೊಬೈಲ್‌ನಿಂದ ಕರೆ ಮಾಡಿ ಮಾತಾಡುತ್ತಿದ್ದಳು. ಬೇರೆ ಬೇರೆ ನಂಬರಿನಿಂದ ಕರೆ ಮಾಡುತ್ತಿದ್ದಳಾದ್ದರಿಂದ ನಾನು ಯಾವ ನಂಬರನ್ನೂ ಸೇವ್‌ ಮಾಡಿಕೊಳ್ಳಲಿಲ್ಲ.  ಆದರೆ ಆ ಆತ್ಮೀಯತೆ ಕಡಿಮೆ ಆಗಿರಲಿಲ್ಲ. ನಾನೇ "ಲೈನ್‌ ಹೊಡೆಯೋರ ಕ್ಯೂ ಎಷ್ಟುದ್ದ ಆಗಿದೆ? ಲವ್‌ ಲೆಟರ್‌ಗಳು ಎಷ್ಟಾದವು?" ಎಂದೆಲ್ಲಾ ತಮಾಷೆ ಮಾಡುತ್ತಿದ್ದೆ. ಅದಕ್ಕೆ ಆಕೆ ಬೇರೆ ಬೇರೆ ಹುಡುಗರು ತನ್ನನ್ನು ಬುಟ್ಟಿಗೆ ಹಾಕಿಕೊಳ್ಳಲು ಏನೆಲ್ಲಾ ಕಸರತ್ತು ನಡೆಸುತ್ತಿದ್ದಾರೆ ಎಂಬುದನ್ನೆಲ್ಲಾ ರಸವತ್ತಾಗಿ ಹೇಳುತ್ತಿದ್ದಳು. 

ಕಳೆದ ವರ್ಷ ಎರಡನೇ ವರ್ಷದ ಪಿಯುಸಿಗೆ ಕಾಲಿರಿಸಿದಳು. ಈ ನಡುವೆ ಆಕೆಯ ಕರೆಗಳು ಕಡಿಮೆಯಾಗಿದ್ದರೂ ಆಗಾಗ ಮಾತಾಡುವುದು ಇದ್ದೇ ಇತ್ತು. "ತಾನು ಫ್ಯಾಷನ್ ಡಿಸೈನರ್‌ ಆಗಬೇಕು, ಬೆಂಗಳೂರಲ್ಲಿ ಇರುವ ಶಾಲೆಗಳ ವಿವರ ಕೊಡು" ಅಂತ ಕೇಳಿದಾಗ ಸಂಗ್ರಹಿಸಿ ತಿಳಿಸಿದ್ದೆ. ಆಕೆಯ ಕೊನೆಯ ಕರೆ ಬಂದಿದ್ದು ಈಗ್ಗೆ ಮೂರು ತಿಂಗಳ ಹಿಂದೆ. "ಪರೀಕ್ಷೆ ಹತ್ತಿರ ಬರುತ್ತಿದೆಯಲ್ಲಾ, ಅಭ್ಯಾಸ ಹೇಗೆ ಮಾಡುತ್ತಿದ್ದೀಯಾ ?" ಎಂದು ಕೇಳಿದ್ದಕ್ಕೆ "ಈ ಸಲ ಯಾಕೋ ಸರಿಯಾಗಿ ಓದು ತಲೆಗೆ ಹೋಗುತ್ತಿಲ್ಲ" ಅಂದಳು. ಚೆನ್ನಾಗಿ ಓದಿಕೋ, ಇದು ಪ್ರಮುಖ ಘಟ್ಟ ಎಂದೆಲ್ಲಾ ಬುದ್ದಿ ಹೇಳಿದೆ. ನಂತರ ಆಕೆಯ ಮಾತು ಬೇರೆಡೆ ಹೊರಳಿ ಇದ್ದಕ್ಕಿದ್ದಂತೆ "ಪ್ರೆಗ್ನೆಂಟ್‌ ಹೇಗೆ ಆಗ್ತಾರೆ?" ಎಂದು ಕೇಳಿಬಿಟ್ಟಳು!

ಇದು ನನಗೆ ಅಸಹಜ ಅನ್ನಿಸಲಿಲ್ಲ, ಕಾರಣ ಈ ಹಿಂದೆಯೇ ಆಕೆ ತನ್ನ ಮುಟ್ಟಿನ ಬಗ್ಗೆ, ಆಸಮಯದಲ್ಲಿ ಅನುಭವಿಸುವ ನೋವಿನ ಬಗ್ಗೆ ಮುಕ್ತವಾಗಿ ನನ್ನೊಂದಿಗೆ ಹಂಚಿಕೊಂಡಿದ್ದಳು. ಆದರೆ ಈ ಬಾರಿ ಆಕೆ ಕೇಳಿದ ರೀತಿ ಒಂದು ಅನುಮಾನವನ್ನಂತೂ ತಟ್ಟನೆ ಹುಟ್ಟು ಹಾಕಿತು. "ನಿಮಗೆ ಪಾಠದಲ್ಲೇ ಈ ವಿಷಯ ಇರಬೇಕಲ್ವಾ ?" ಎಂದು ಕೇಳಿದೆ.

"ಅದು ನನಗೆ ಸರಿಯಾಗಿ ಅರ್ಥ ಆಗಿಲ್ಲ, ಸರಿಯಾಗಿ ಬಿಡಿಸಿ ಹೇಳು" ಎಂದಳು. ಐದು ವರ್ಷಗಳ ನಮ್ಮ ಆತ್ಮೀಯ ಗೆಳೆತನದ ಕಾರಣಕ್ಕೆ ಅದನ್ನು ವಿವರಿಸುವುದು ಕಷ್ಟವೇನೂ ಆಗಲಿಲ್ಲ. ಆದರೆ ಆಕೆಯ ಮುಂದಿನ ಪ್ರಶ್ನೆ ನನ್ನನ್ನು ಸ್ವಲ್ಪ ಗೊಂದಲಕ್ಕೆ ತಳ್ಳಿದ್ದಂತೂ ನಿಜ.

"ಪ್ರಗ್ನೆಂಟ್‌ ಆದರೆ ಅದನ್ನು ತೆಗೆಯುವುದು ಹೇಗೆ?" ಎಂದು ಕೇಳಿದ್ದಳಾಕೆ! 

"ಯಾಕೆ ಇದೆಲ್ಲಾ ಕೇಳ್ತಿದೀಯಾ ? ಯಾರಿಗಾದರೂ ಆ ಅಗತ್ಯ ಇದೆಯಾ? ಇದ್ದರೆ ತಕ್ಷಣ ಡಾಕ್ಟರ್‌ ಹತ್ತಿರವೇ ಹೋಗಬೇಕು" ಎಂದೆ. 

ಅದಕ್ಕೆ ಆಕೆ "ಛೇ, ಹಾಗೇನೂ ಇಲ್ಲ, ತಿಳಕೊಳ್ಳು ಕೇಳಿದೆ ಅಷ್ಟೇ" ಅಂದಳಾದರೂ ಮತ್ತೆ ಮತ್ತೆ ಅದನ್ನೇ ಪ್ರಶ್ನಿಸುವಾಗ ಮತ್ತಷ್ಟು ಅನುಮಾನ ಮೂಡಿತು. ಪಿಯುಸಿ ಹುಡುಗಿಯೊಬ್ಬಳು "ಬೇಡದ ಗರ್ಭ"ದ ಬಗ್ಗೆ ಮಾತಾಡುತ್ತಿದ್ದರೆ ಅನುಮಾನ ಮೂಡದಿದ್ದೀತೇ ?

ಕೊನೆಗೂ ಕೇಳಿಯೇ ಬಿಟ್ಟೆ.. "ನೀನು ಅಂತಹ ತಪ್ಪು ಮಾಡಿಕೊಂಡಿಲ್ಲ ತಾನೇ ?" 

ಅದಕ್ಕೆವಳು ನಗುತ್ತಾ "ತೋ, ನನ್ನ ಬಗ್ಗೆ ಗೊತ್ತಿಲ್ವಾ? ಹಾಗೆಲ್ಲಾ ಇಲ್ಲ" ಎಂದಳು.

ಹಾಗೆಲ್ಲಾ ಇಲ್ಲ ಎಂದು ಹೇಳಿ ಮಾತು ಮುಗಿಸಿದವಳು ನಂತರ ಇದುವರೆಗೂ ನನಗೆ ಕರೆ ಮಾಡಿಲ್ಲ! ಮೊನ್ನೆ ಮೊನ್ನೆ ಪಿಯುಸಿ ಫಲಿತಾಂಶ ಬಂದಿದೆ. ಕಡೆ ಪಕ್ಷ ಅದರ ಬಗ್ಗೆ ತಿಳಿಸಲಿಕ್ಕಾದರೂ ಕರೆ ಮಾಡಿರಬೇಕಿತ್ತು. ಮನಸಿಗೆ ಏನೋ ಒಂತರ ತಲ್ಲಣ.. ಆದರೂ ಆ ಪುಟ್ಟ ಗೆಳತಿಯ ಕರೆ ಇಂದಲ್ಲ ನಾಳೆ ಬಂದೀತು ಅಂತ ಕಾಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…