ಡಿಸೆಂ 21, 2016

ಚಿಂಗ್ರಿ ಶೋಕಿಯವ ಕಾಣುತ್ತಿಲ್ಲ...

0 ಪ್ರತಿಕ್ರಿಯೆಗಳು

ನಾನು ಸಾಗರದ ಜೂನಿಯರ್ ಕಾಲೇಜಿಗೆ ಹೋಗ್ತಾ ಇದ್ದಾಗ ಸಾಗರ ಪಟ್ಟಣದಲ್ಲಿ ಒಬ್ಬ ವ್ಯಕ್ತಿ ಇದ್ದ. ಅವನದು ಒಂತರ ಏಕ ವ್ಯಕ್ತಿ ನಾಟಕದ ರೀತಿಯ ಜೀವನ. ಸಾಗರದ ಎರಡು ಮೂರು ಕಡೆ ಅವನದೇ ಆದ ಜಾಗ ಇತ್ತು. ಅದರಲ್ಲಿ ಒಂದು ಪ್ರಸಿದ್ದ ಜಾಗ ಅಂದರೆ ದೊಡ್ಡ ಅಸ್ಪತ್ರೆಯ ಎದುರಿನ ಪುಟ್ ಪಾತು.

ಮದ್ಯಾಹ್ನ ಸುಮಾರು ಮೂರು ಗಂಟೆಗೆ ಅವನ ಶೋ ಪ್ರಾರಂಭ ಆಗುತ್ತಿತ್ತು. ಶ್ರೀ ಟಾಕಿಸು ಮತ್ತು ಸಾಗರ ಟಾಕಿಸಿನಲ್ಲಿ ಮ್ಯಾಟ್ನಿ ತಪ್ಪಿಸಿಕೊಂಡವರು, ಸಂತೆ ಗಿಂತೆ ಏನೂ ಅಲ್ಲದೆ ಯಾವ್ದೋ ಸರ್ಕಾರಿ ಕಚೇರಿ ಕೆಲಸಕ್ಕೆ ಬಂದವರು, ಆ ಸಮಯಕ್ಕೆ ಊರಿಗೆ ತೆರಳಲು ಬಸ್ ಇಲ್ಲದೆ ಇದ್ದವರು... ಹೀಗೆ ಕೆಲವಾರು ಮಂದಿ ಅವನ ಪ್ರದರ್ಶನದ ಗಿರಾಕಿಗಳು ಮತ್ತು ಕುರಿಗಳು. ನಾವು ಮದ್ಯಾಹ್ನದ ಕ್ಲಾಸಿಗೆ ಚಕ್ಕರ್ ಹಾಕಿಯೋ, ಅಥವಾ ಟೀಚರೇ ಚಕ್ಕರ್ ಹಾಕಿದ್ದರಂತಲೂ... ಒಟ್ಟಿನಲ್ಲಿ ನೆಹರು ಮೈದಾನದಲ್ಲಿ ದಾಟಿ ಆಸ್ಪತ್ರೆ ಪಕ್ಕದ ರಸ್ತೆಯಲ್ಲಿ ಇಳಿದರೆ ನೇರ ಹೋಗಿ ನಿಲ್ಲುತ್ತಿದ್ದುದು ಅವನ ಪ್ರದರ್ಶನದ ಎದುರೇ.

ಹಾಗೆ ನೋಡಿದರೆ ಅವನ ಬಳಿ ಏನೂ ಇರಲಿಲ್ಲ, ಒಂದು ತಮಟೆ, ಒಂದು ಪುಂಗಿ ಮತ್ತೊಂದು ಕೇರೆ ಹಾವು! ಅಷ್ಟೇ ಇದ್ದಿದ್ದು. ಅಷ್ಟು ಬಿಟ್ಟರೆ ಉಳಿದಂತೆ ಅವನ ಬಂಡವಾಳ ಮಾತು ಮಾತು ಮಾತು.. ಅಷ್ಟೇ.

ಆ ಕೇರೆ ಹಾವನ್ನು ಅವನು ಯಾವತ್ತೂ ಪೂರ್ತಿ ತೆರೆದು ತೋರಿಸಿದ್ದು ನಾನು ನೋಡಲಿಲ್ಲ. ಒಂದು ದಬ್ಬಾದ ಒಳಗೆ ಅಡನ್ನು ಇಟ್ಟು, ಒಂಚೂರು ಬಾಲ ಮಾತ್ರ ಹೊರಗೆ ಕಾಣಿಸುವಂತೆ ಮಾಡಿರುತ್ತಿದ್ದ. ಆದರೆ ಹೇಳುವುದು ಮಾತ್ರ "ಏಳು ಹೆಡೆಯ ಮಾಶೇಷ ಅದು, ನೋಡ್ತಾ ಇರಿ ಈಗ ತೆರೆದು ತೋರಿಸ್ತೀನಿ" ಅನ್ನುತ್ತಿದ್ದ.

ಜನ ಎಲ್ಲ ಏಳು ಹೆಡೆಯ ಮಾಶೇಷನನ್ನು ನೋಡಲು ಕಾತರದಿಂದ ನಿಲ್ಲುತ್ತಿದ್ದರು. ಕೂಡಲೇ ಅವನು ಮಾತು ಬದಲಿಸಿ ಇನ್ನೊಂದು ಏನೋ ವಿಷಯ ತಗೊಂಡು ತಮಟೆ ಬಾರಿಸತೊಡಗುತ್ತಿದ್ದ! ಆ ವಿಷಯ ಜನರಿಗೆ ಬೋರ್ ಆಗುತ್ತಿದೆ ಅಂತ ಗೊತ್ತಾದರೆ ಮತ್ತೊಂದು ವಿಷಯ. 'ಇವನದು ಬರೀ ಇದೇ ಆಯ್ತು' ಅಂತ ಜನ ಹೊರಡಲು ತಯಾರಾದರು ಅಂದರೆ ಮತ್ತೆ ಅವನ ಬಾಯಲ್ಲಿ ಏಳು ಹೆಡೆಯ ಮಾಶೇಷ!! 

ಹೀಗೆ ಜನರನ್ನು ಹಿಡಿದಿಟ್ಟುಕೊಳ್ಳುವ ಚಾಕಚಕ್ಯತೆ ಅವನಿಗೆ ಇತ್ತು. ಆದರೂ ಕೆಲವೊಮ್ಮೆ ಜನ ನಿಲ್ಲುತ್ತಿಲ್ಲ ಅನ್ನಿಸಿದರೆ ತಕ್ಷಣ ನಿಂತಿದ್ದ ಎಲ್ಲರ ಸುತ್ತ ಒಂದು ಗೆರೆ ಹಾಕಿ "ಈಗ ಗಳಿಗೆ ಸರಿ ಇಲ್ಲ, ಇನ್ನು ಹತ್ತು ನಿಮಿಷ ಕಾಯಿರಿ, ಅಚ್ಛೇ ದಿನ್ ಬರುತ್ತದೆ. ಒಂದ್ವೇಳೆ ನನ್ ಮಾತು ಮೀರಿ ನೀವು ಗೆರೆ ದಾಟಿ ಹೋದುದೇ ಹೌದಾದರೆ ರಕ್ತ ಕಾರಿಕೊಂಡು ಸಾಯುತ್ತೀರಿ" ಎಂದೂ ಹೆದರಿಸಿ ಬಿಡುತ್ತಿದ್ದ!

ಇಡೀ ಸಾಗರವನ್ನು ಉದ್ದಾರ ಮಾಡಲು ತನ್ನಿಂದ ಮಾತ್ರ ಸಾಧ್ಯ ಎಂಬಂತೆ ಮಾತಾಡುತ್ತಿದ್ದ. ಯಾವ ಹಾವು ಕಡಿದರೂ ಅದಕ್ಕೆ ತನ್ನ ಬಳಿ ಮದ್ದು ಇದೆ ಅಂತ ಹೇಳಿ ಅದೇನೋ ಹಾವಿನ ತರದ್ದೇ ಒಂದು ಬೇರು ಕೊಟ್ಟು ಹಣ ಪಿಕುತ್ತಿದ್ದ. ಹಾಗೆಯೇ ಇದ್ದಕ್ಕಿದ್ದಂತೆ ಆ ವಿಷಯ ಬಿಟ್ಟು ಮತ್ತೊಂದಕ್ಕೆ ಮಂಗನಂತೆ ಎಗರಿ ಬಿಡಿತ್ತಿದ್ದ. ಮತ್ತೆ ಅದೇ ಏಳು ಹೆಡೆಯ ಮಾಶೇಷ !!

ಇದ್ದಕ್ಕಿದ್ದಂತೆ "ಎಲ್ಲರೂ ತಮ್ಮ ಜೇಬಿನಲ್ಲಿ ಇರುವ ಹಣವನ್ನು ತೆಗೆದು ಕೈಲಿ ಹಿಡ್ಕೊಳ್ಳಿ" ಅಂತಿದ್ದ. ರಕ್ತ ಕಾರುವ ಹೆದರಿಕೆಯಿಂದ ಎಲ್ಲ ಹಾಗೆಯೇ ಮಾಡುತ್ತಿದ್ದರು. ಅವನು ಅದೂ ಇದೂ ಅಂತ ಏನೇನೋ ಹೇಳಿ ಎಲ್ಲರ ಕೈಯಿಂದ ಒಂದೆರಡು, ಅಥವಾ ಐದು, ಹತ್ತು ರೂಪಾಯಿಗಳನ್ನು ತೆಗೆದು ತನ್ನ ಜೇಬಿಗೆ ಹಾಕಿಕೊಂಡು ಜನರು ಏನಾಯ್ತೆಂದು ಅರಿಯುವ ಮೊದಲೇ ಮಾಶೇಷನ ಬಗ್ಗೆ ಮಾತು ಶುರು ಮಾಡುತ್ತಿದ್ದ!! "ಈಗ ನೋಡಿ, ಇದರ ಏಳು ಹೆಡೆಯನ್ನ ಹೇಗೆ ತೋರಿಸ್ತೀನಿ ಅಂತ" ಅನ್ನುತ್ತ....

ಹೀಗೆ ಚಿಂಗ್ರಿ ಆಟ ಆಡಿಕೊಂಡು, ಹಳ್ಳಿಗರನ್ನು ವಂಚಿಸಿ ಬದುಕು ಕಟ್ಟಿಕೊಂಡಿದ್ದ ಆ ವ್ಯಕ್ತಿ ನನ್ನಂಥವರಿಗೆ ಮನ ರಂಜನೆ ಮತ್ತು ಹೊತ್ತು ಕಳೆವ ಸರಕಾಗಿದ್ದ. ನಾನು ಊರು ಬಿಟ್ಟು ಚೆನ್ನೈ ಸೇರಿದೆ. ಆದರೂ ಸಾಗರ ಬಂದಾಗಲೆಲ್ಲ ಆಗಾಗ ಅವನು ಅಲ್ಲಿಲ್ಲಿ ಚಿಂಗ್ರಿ ಶೋ ತೋರಿಸುತ್ತ ಇದ್ದುದು ಕಾಣಿಸುತ್ತಿತ್ತು. ಆದರೆ ಅದೆಷ್ಟೋ ವರ್ಷಗಳಾದ ನಂತರ ಅವನು ಕಾಣಿಸದಾದ ಮತ್ತು ಕೊನೆಗೆ ಮರೆತೇ ಹೋದ. ಎಲ್ಲೋ ಅವನ ಗ್ರಾಚಾರ ಕೆಟ್ಟು ಯಾರ ಹತ್ರನೊ ಒಡೆ ತಿಂದು ಊರು ಬಿಟ್ಟಿರಬಹುದು ಅಂದುಕೊಂಡು ಸುಮ್ಮನಾದೆ.

ಅದೆಲ್ಲ ಆಗಿ ಈಗ... ಮೊನ್ನೆಯಿಂದ ಯಾಕೋ ಅವನ ನೆನಪು ಮತ್ತೆ ಮತ್ತೆ ಬರುತ್ತಿದೆ. ಯಾಕೆಂದರೆ ಅವನ ಗ್ರಾಚಾರ ಕೆಟ್ಟಿರುವ ಬದಲು ಅದೃಷ್ಟ ಕುಲಾಯಿಸಿ.. ದೆಹಲಿ ಹೋಗಿ ಎಲ್ಲಾದರೂ ಪ್ರದಾನ ಸೇವಕರ ಬಳಿ ಸಲಹೆಗಾರನಾಗಿ ಕೆಲಸಕ್ಕೆ ಸೇರಿಕೊಂಡು ಬಿಟ್ಟನಾ ಅಂತ!!

ಇತ್ತೀಚಿನ ಪ್ರತಿಕ್ರಿಯೆ

Recent Comments Widget

Blogroll