ವಿಷಯಕ್ಕೆ ಹೋಗಿ

ದೇವರ ಹೆಸರಲ್ಲಿ ಮೋಸ ನಿಲ್ಲೋದು ಯಾವಾಗ?

ಕೆಲವು ದಿನಗಳ ಹಿಂದೆ ನನ್ನ ಬಳ್ಳಾರಿಯ ಸ್ನೇಹಿತರೊಡಗೂಡಿ ತೀರ್ಥಹಳ್ಳಿ ಸಮೀಪದ ಬಿಜ್ಜುವಳ್ಳಿ ಎಂಬಲ್ಲಿನ ಅಯ್ಯಪ್ಪ ದೇವಸ್ಥಾನಕ್ಕೆ ಹೋಗಿದ್ದೆವು. ಮೊದಲ ಸಲ ಹೋದಾಗಲೇ ಅಲ್ಲಿನ ರೀತಿ ನೀತಿ ನನಗೆ ಸರಿ ಬರಲಿಲ್ಲ. ಭಕ್ತಿಯ ಬದಲಿಗೆ ತಮ್ಮ ಜೀವನೋಪಾಯಕ್ಕಾಗಿ ಆ ದೇವಾಲಯವನ್ನು ನಡೆಸುತ್ತಿರುವುದು ಎದ್ದು ಕಾಣಿಸುತ್ತಿತ್ತು.

ಹೋದ ಭಕ್ತರೆಲ್ಲಾ ಕಡ್ಡಾಯವಾಗಿ ೧೦ ರೂಪಾಯಿ ತೆತ್ತು ಚೀಟಿ ಪಡೆಯಬೇಕಾಗಿತ್ತು. ತೆಂಗಿನ ಕಾಯಿ ಒಡೆಸಬೇಕೆಂದರೆ ಅಲ್ಲಿಯೇ ಪೂಜಾರಿಗಳು ತಲಾ ನಲವತ್ತು ರೂಪಾಯಿಗೆ ಎರಡು ತೆಂಗಿನ ಕಾಯಿ ಮಾರುತ್ತಿದ್ದರು. ಬಹುಶಃ ಇಷ್ಟು ದುಬಾರಿಯ ತೆಂಗಿನ ಕಾಯಿಗಳು ನಮಗೆ ಬೇರೆಲ್ಲೂ ಸಿಗುವುದಿಲ್ಲ. ದೇವಸ್ಥಾನದ ಅಧ್ಯಕ್ಷರು ಬಾಯಿ ತುಂಬಾ ಎಲೆ ಅಡಿಕೆ ಹಾಕಿಕೊಂಡು ಅರ್ಧ ಗಂಟೆ ಪ್ರವಚನ ನೀಡಿದರು!

ಇದರ ಮಧ್ಯೆಯೂ ನನ್ನೊಂದಿಗೆ ಬಂದಿದ್ದ ಬಳ್ಳಾರಿಯ ನನ್ನ ಗೆಳೆಯರು ನನಗೆ ಗೊತ್ತಿಲ್ಲದೇ ಏನೋ ಒಂದು ಹರಕೆಯನ್ನೂ ಹೊತ್ತುಕೊಂಡು ಬಿಟ್ಟಿದ್ದರು. (ಯಾರ್ಯಾರಿಗೆ ಎಲ್ಲೆಲ್ಲಾ ಭಕ್ತಿ ಉಕ್ಕಿ ಬಿಡುತ್ತದೆ ಎಂದು ಆಶ್ಚರ್ಯವಾಯ್ತು). ಹರಕೆ ಏನೆಂದರೆ ತಮ್ಮ ಬೇಡಿಕೆ ಈಡೇರಿದರೆ ಒಂದು ಸಾವಿರ ಜನರಿಗೆ ಈ ದೇವಸ್ಥಾನದಲ್ಲಿ ಊಟ ಹಾಕಿಸುವುದು. ಅದರ ದರ ಪಟ್ಟಿ ಕೂಡಾ ದೇವಸ್ಥಾನದ ಗೋಡೆಯಲ್ಲಿ ನೇತಾಡುತ್ತಿತ್ತು. ಒಂದು ಸಾವಿರ ಜನರಿಗೆ ಅನ್ನದಾನ ಮಾಡಲು ಹದಿನೈದು ಸಾವಿರ ರೂಪಾಯಿ ಎಂದು ಬರೆದಿತ್ತು. ಇದು ಪರ್ವಾಗಿಲ್ಲ ಅಂತ ಅನ್ನಿಸಿತು ನನಗೆ. ಸಾವಿರ ಜನರಿಗೆ ಅನ್ನ, ಸಾರು, ಉಪ್ಪಿನಕಾಯಿ, ಒಂದು ಪಲ್ಯದಂತೆ ಬಡಿಸಿದರೂ ಹತ್ತು ಸಾವಿರ ರೂಪಾಯಿ ಖರ್ಚು ಬರುತ್ತದೆ. ಉಳಿದಿದ್ದು ದೇವಾಲಯಕ್ಕೆ ಲಾಭ ಅಂದುಕೊಂಡೆ.
ಆ ದೇವರ ಮಹಿಮೆಯೋ ಅಥವಾ ಕಾಕತಾಳೀಯವೋ ನನ್ನ ಗೆಳೆಯರ ಬೇಡಿಕೆ ಕೆಲವೇ ದಿನಗಳಲ್ಲಿ ನಡೆದೂ ಹೋಯ್ತು.
ಇದು ದೇವರ ಮಹಿಮೆಯೇ ಅನ್ನುವವರಿಗೆ ಒಂದು ಸಮಜಾಯಿಷಿ: ನನ್ನ ಗೆಳೆಯರು ಹೊತ್ತ ಹರಕೆ ಏನೆಂದರೆ ನಿರ್ದಿಷ್ಟ ಮೊತ್ತದ ಹಣ ಅವಸರಕ್ಕೆ ಅವರಿಗೆ ಬೇಕಾಗಿತ್ತು. ಅದು ವ್ಯವಸ್ಥೆ ಆಗಿ ತುಂಬಾ ದಿನದಿಂದ ನೆನೆಗುದಿಗೆ ಬಿದ್ದಿದ್ದ ಕೆಲಸವೊಂದು ನಡೆದು ಹೋಗಲಿ ಎಂಬುದೇ ಅವರ ಹರಕೆಯಾಗಿತ್ತು. ಆದರೆ ಹಣದ ವ್ಯವಸ್ಥೆಯೇನೋ (ದೇವರ ದಯೆ) ಆಯಿತಾದರೂ, ನೆನೆಗುದಿಗೆ ಬಿದ್ದಿದ್ದ ಕೆಲಸ ಮಾತ್ರ (ಅದವರ ಕರ್ಮ) ಮುಂದುವರಿಯಲಿಲ್ಲ. ಆದರೆ ಹರಕೆ ಹೊತ್ತವರಿಗೆ ಭಯ ಇರುತ್ತದಲ್ಲ?! ಹಾಗಾಗಿ ಹರಕೆ ಅರ್ಧಂಬರ್ಧ ನೆರವೇರಿದ್ದರೂ ಇವರು ಪೂರ್ತಿ ಹರಕೆ ತೀರಿಸುವ ನಿರ್ಧಾರಕ್ಕೇ ಬಂದರು. ದೇವರ ಬಳಿ ಚೌಕಾಸಿ ಯಾಕೆ ಎಂಬ ಭಯ ಅವರದ್ದಿರಬಹುದು, ಅಥವಾ ಅರ್ಧ ಕೆಲಸ ಆಗಿದ್ದಾಗಲೇ ತಾವು ಪೂರ್ತಿ ಸಾಲ ತೀರಿಸಿಬಿಟ್ಟರೆ ದೇವರು ಇನ್ನಷ್ಟು ಸಂತುಷ್ಟನಾಗಿ ಉಳಿದಿರುವ ಕೆಲಸವನ್ನೂ ಬೇಗನೆ ಮುಗಿಸಿ (ಗುತ್ತಿಗೆ ನೀಡಿರುವಂತೆ) ಕೊಡುತ್ತಾನೆ ಎನ್ನುವ ನಂಬಿಕೆಯೂ ಇರಬಹುದು.

ತಾವು ಹರಕೆ ಹೊತ್ತಿರುವಂತೆ ಒಂದು ಸಾವಿರ ಜನರಿಗೆ ಅನ್ನದಾನ ಮಾಡಿಸುವುದು ಅಂತ ನಿರ್ಧರಿಸಿದರು. ಮೊದಲ ಸಲ ಬಂದಾಗಲೇ ಇವರು ಸ್ವಲ್ಪ ದುಡ್ಡಿರುವ ಗಿರಾಕಿ (ನಾವು ಹೋದದ್ದು ಸ್ಕಾರ್ಪಿಯೋ ಕಾರ್‌ನಲ್ಲಿ) ಎಂದು ಅರಿತಿದ್ದ ದೇವಸ್ಥಾನದ ಅಧ್ಯಕ್ಷರು ಇವರ ದೂರವಾಣಿ ಸಂಖ್ಯೆಯನ್ನೆಲ್ಲಾ ಜೋಪಾನ ಮಾಡಿಕೊಂಡುಬಿಟ್ಟಿದ್ದರು! ಅಧ್ಯಕ್ಷರನ್ನು ಸಂಪರ್ಕಿಸಿದಾಗ ಖುಶಿಯಾದ ಅವರು ತಮ್ಮ ಬ್ಯಾಂಕ್ ಖಾತೆ ಸಂಖ್ಯೆ ನೀಡಿ ಅದಕ್ಕೆ ಹದಿನೈದು ಸಾವಿರ ರೂಪಾಯಿಯನ್ನು ಜಮಾ ಮಾಡುವಂತೆ ತಿಳಿಸಿದರು. ನನ್ನ ಗೆಳೆಯ ಹಾಗೆ ಮಾಡಿದ್ದೂ ಆಯ್ತು. ಅವರು ಅನ್ನದಾನ ಮಾಡುವ ದಿನ ಅವರು ಬಳ್ಳಾರಿಯಿಂದ, ನಾವೊಂದಿಬ್ಬರು ಬೆಂಗಳೂರಿನಿಂದ ಬಿಜ್ಜುವಳ್ಳಿಗೆ ಹೋದೆವು.

ದೇವಸ್ಥಾನದಲ್ಲಿ ಹೆಚ್ಚು ಜನರೇ ಇರಲಿಲ್ಲ. ಅಡುಗೆ ಎಲ್ಲಿ ಮಾಡುತ್ತಿದ್ದಾರೆ ಎಂದು ಹುಡುಕಿದರೆ (ನನಗೆ ಮೊದಲೇ ಅನುಮಾನವಿತ್ತು) ಸುತ್ತ ಮುತ್ತ ಎಲ್ಲೂ ಅಡುಗೆ ಮಾಡುತ್ತಿರುವ ಸುಳಿವೇ ಇಲ್ಲ. ಹಾಗಾದರೆ ಯಾರಿಗೆ ಹೇಗೆ ಅನ್ನದಾನ ಮಾಡುತ್ತಾರೆ ಅನ್ನುವ ಅನುಮಾನ ಮತ್ತೆ ನನ್ನನ್ನು ಕಾಡತೊಡಗಿತು.

ಅವೊತ್ತು ಅಲ್ಲಿ ತುಲಾಭಾರ ನಡೆಯುತ್ತಿತ್ತು. ಸುಮಾರು ಏಳೆಂಟು ಜನ ತುಲಾಭಾರ ನೆಡೆಸಿದರು. ಇಲ್ಲಿಯೂ ಒಂದು ಮೋಸ ನಡೆಯುತ್ತಿತ್ತು. ಅದೆಂದರೆ ದೇವರನ್ನು ನಂಬಿಸುವ ಮೋಸ. ಮೊದಲಿಗೆ ಒಬ್ಬ ಏಳೆಂಟು ವರ್ಷದ ಬಾಲಕನ ತುಲಾಭಾರ. ಅವನು ನಲವತ್ತೇಳು ಕಿ.ಗ್ರಾಂ. ಇದ್ದನಂತೆ. ಅದನ್ನು ಮೊದಲೇ ನೋಡಿಕೊಂಡೇ ಅವನ ತಂದೆ ತಾಯಿ ನಲವತ್ತೆಂಟು ಕಿ.ಗ್ರಾಂ.ನಷ್ಟು ಬೇಳೆ, ಕಾಳು, ಅಕ್ಕಿ (ಅವರು ದಾನ್ಯ ತುಲಾಭಾರ ಹರಕೆ ಹೊತ್ತಿದ್ದರಂತೆ) ತಂದಿದ್ದರು. ಹುಡುಗನ ಬಾರಕ್ಕಿಂತ ಒಂದು ಕಿ.ಗ್ರಾಂ. ಹೆಚ್ಚು ತಂದಿದ್ದರೂ ಹುಡುಗ ಕುಳಿತಿದ್ದ ತಟ್ಟೆ ಮೇಲೇಳಲೇ ಇಲ್ಲ. "ನೋಡಿ ಅವರವರ ಭಕ್ತಿಗನುಗುಣವಾಗಿ ದೇವರು ನೀವು ನೀಡಿದ್ದನ್ನು ಸ್ವೀಕರಿಸುತ್ತಾನೆ. ಇಲ್ಲಿ ನಿಮ್ಮದು ಏನೋ ಕೊರತೆ ಇದೆ. ಹಾಗಾಗಿ ದೇವರು ಸ್ವೀಕರಿಸುತ್ತಿಲ್ಲ. ಅವನಿಗೆ ನಿಮ್ಮ ಭಕ್ತಿ ಮೆಚ್ಚುಗೆ ಆಗದಿದ್ದರೆ ಯಾರ ವಸ್ತುವನ್ನೂ (ಎಲ್ಲ ವಸ್ತುವೂ ದೇವರದ್ದೇ ಅಲ್ಲವೇ?) ಅವನು ಸ್ವೀಕರಿಸುವುದಿಲ್ಲ. ಹಾಗೆ ಸ್ವೀಕರಿಸದಿದ್ದರೆ ನೀವು ತಂದಿರುವ ವಸ್ತುಗಳನ್ನು ನೀವೇ ತೆಗೆದುಕೊಂಡು ಹೋಗಬೇಕಾಗುತ್ತದೆ. ಇನ್ನೊಮ್ಮೆ ದೇವರಲ್ಲಿ ಭಕ್ತಿಪೂರ್ವಕವಾಗಿ ಬೇಡಿಕೊಂಡು ಬೇರೆ ಏನನ್ನಾದರೂ ಸ್ವಲ್ಪ ಹಾಕಿ" ಎಂದು ಅಲ್ಲಿನ ಪೂಜಾರಿಯೊಬ್ಬರು ಹೇಳಿದರು.
ತಟ್ಟೆ ಯಾಕೆ ಮೇಲೇಳುತ್ತಿಲ್ಲ ಎಂದು ನಾನು ಗಮನಿಸಿದೆ. ದಾನ್ಯ ಇರಿಸಿದ್ದ ತಟ್ಟೆಯನ್ನು ಪ್ರಾರಂಭದಲ್ಲಿ ಅಲುಗಾಡಬಾರದು ಅಂತ ಹಿಡಿದುಕೊಂಡಿದ್ದ ದೇವಸ್ಥಾನದ ಕಡೆಯ ಇಬ್ಬರು ಬೆರಳಿನಲ್ಲಿಯೇ ಅದು ಕೆಳಗಿಳಿಯದಂತೆ ಹಿಡಿದಿರುವುದು ಕಾಣಿಸಿತು! ಇದನ್ನು ಎಷ್ಟು ಜನ ಗಮನಿಸಿದರೋ ಇಲ್ಲವೋ ಗೊತ್ತಿಲ್ಲ. ಗಮನಿಸಿದರೂ ಭಕ್ತಿಯ ಪರಾಕಾಷ್ಟತೆಯಿಂದಾಗಿ ಯಾರೂ ಪ್ರಶ್ನಿಸಲಿಲ್ಲ.

ಹುಡುಗನ ತಂದೆ ಹಾಗೂ ತಾಯಿ ಲಘುಬಗೆಯಿಂದ ಮತ್ತೊಮ್ಮೆ ಪ್ರಾರ್ಥಿಸಿಕೊಂಡು ತಮ್ಮಲ್ಲಿದ್ದ ಅರ್ಧ ಕಿ.ಗ್ರಾಂ. ಹಣ್ಣುಗಳನ್ನು ಇರಿಸಿದರು... ಏನಾಶ್ಚರ್ಯ?? ಹುಡುಗನ ತಟ್ಟೆ ಮೇಲೆದ್ದೇ ಹೋಯ್ತು! (ದಾನ್ಯದ ತಟ್ಟೆಯನ್ನು ಹಿಡಿದಿದ್ದವರು ಕೈ ಸಡಿಲಿಸಿದ್ದೂ ಆಯ್ತು) ಪೂಜಾರಿಯಿಂದ ಭಕ್ತಿಯ ಬಗ್ಗೆ ಮತ್ತೊಂದಿಷ್ಟು ಮಾತುಗಳು ಹೊರ ಬಂದವು. ಅವೊತ್ತು ಅಲ್ಲಿ ಒಟ್ಟು ಹತ್ತು ಜನರು ತುಲಾಭಾರ ನಡೆಸಿದಾಗಲೂ ಹೀಗೆಯೇ ನಡೆಯಿತು. ಎಲ್ಲರ ಭಕ್ತಿಯೂ ಒಂದು ಕೆಜಿ, ಎರಡು ಕೆಜಿಯಷ್ಟೇ ಕಡಿಮೆ ಇದ್ದುದು ಅಯ್ಯಪ್ಪನ ಮಹಿಮೆಯಿಂದಲೇ ಇರಬೇಕು.

ಅನ್ನದಾನದ ವಿಷಯಕ್ಕೆ ಬರೋಣ.

"ಇವತ್ತು ಹೆಚ್ಚು ಜನ ಬಂದಿಲ್ಲ, ಐನೂರು ಜನ ಬರ್ತಾರೆ. ಅಷ್ಟು ಜನರಿಗೆ ಅನ್ನದಾನ ಮಾಡಿ ಇನ್ನೊಂದು ದಿನ ಮತ್ತೆ ಐನೂರು ಜನರಿಗೆ ಮಾಡುತ್ತೇವೆ.. ಅಡುಗೆ ಇಲ್ಲೇ ಹತ್ತಿರದಲ್ಲಿ ತಯಾರಾಗ್ತಿದೆ" ಎಂದು ಹೇಳಿದರು ಅಧ್ಯಕ್ಷರು.

ಅಂತೂ ಇವತ್ತು ಅನ್ನದಾನ ಇದೆ ಅನ್ನುವುದು ನಮಗೆ ಖಾತ್ರಿ ಆಯ್ತು. ಮಧ್ಯಾಹ್ನ ಎರಡು ಗಂಟೆ ಹೊತ್ತಿಗೆ ಅಲ್ಲಿದ್ದ ಎಲ್ಲರಿಗೂ "ಇವತ್ತು ದೇವಸ್ಥಾನದಲ್ಲಿ ಅನ್ನದಾನ ಇದೆ, ರಸ್ತೆಯ ಆ ಬದಿಯ ಮನೆಯಲ್ಲಿ ಹಾಕುತಾರೆ. ಎಲ್ಲರೂ ಊಟ ಮಾಡಿಕೊಂಡು ಹೋಗಿ" ಎಂದು ಉದ್ಘೋಷಿಸಿದರು!! ಆ ಮೊದಲೇ ಪೂಜೆ ಮುಗಿಸಿದ್ದವರು ಅನೇಕರು ಹೊರಟು ಹೋಗಿ ಆಗಿತ್ತು! ಉಳಿದಿದ್ದು ಸುಮಾರು ನೂರು ಜನ ಮಾತ್ರ!
ಕಡೇ ಪಕ್ಷ ಇಂಥವರು ಅನ್ನದಾನ ಮಾಡುತ್ತಿದ್ದಾರೆ ಅಂತಾನೂ ಹೇಳಲಿಲ್ಲ. ಸರಿ ಎಂದು ಊಟಕ್ಕೆ ಹೋಗಿ ನೋಡಿದರೆ ಹದಿನೈದು ಸಾವಿರಕ್ಕೆ ಪಂಗನಾಮ ಬಿದ್ದಿರುವುದು ಕಂಡುಬಂತು. ಅಂದು ತುಲಾಭಾರದಿಂದ ಬಂದ ಅಕ್ಕಿ ದಾನ್ಯಗಳೇ ಸುಮಾರು ಐನೂರು ಕೆಜಿ ದಾಟಿತ್ತು. ಅದನ್ನೇ ದೇವಸ್ಥಾನದ ಎದುರು ಮನೆಯಲ್ಲಿ ಅಡುಗೆ ಮಾಡಿದ್ದರು. ಆದರೆ ಬರೇ ಅನ್ನ ಸಾರು. ಸಾರಿನಲ್ಲಿ ಬೇಳೆ ಇರಲಿಲ್ಲ! ಉಪ್ಪಿನಕಾಯಿ ಬಿಟ್ಟರೆ ಬೇರೆ ಪಲ್ಯ ಏನೂ ಇರಲಿಲ್ಲ. ಆ ಮನೆಯವರು ಊಟ ಬಡಿಸಿದ್ದೋ ದೇವರಿಗೇ ಪ್ರೀತಿ. ಅನಾಥರಿಗೆ ಹಾಕುವಂತೆ ಇಷ್ಟಿಷ್ಟೇ ಹಾಕಿದ್ದಲ್ಲದೇ "ಬೇಗೆ ಬೇಗ ಅನ್ನ ಹಾಕಿಸಿಕೊಳ್ಳಿ... ಪಾತ್ರೆ ಈಗ ಒಳಗೆ ಹೋಗುತ್ತದೆ. ಒಳಗೆ ಹೋದರೆ ಮತ್ತೆ ಹೊರಗೆ ಬರುವುದಿಲ್ಲ" ಎನ್ನುವ ಧಮಕಿ ಬೇರೆ! ಅನ್ನದಾನ ಮಾಡಿದ್ದು ನಾವೋ ಅವರೋ ಅಂತ ಯಾರಿಗೂ ತಿಳಿಯಲಿಲ್ಲ, ಕೊನೆಗೆ ನಮಗೂ ಸಹ!

ಸಾವಿರ ಜನರಿಗೆ ಊಟ ಹಾಕುವುದಾಗಿ ಹೇಳಿದ್ದರೆ ಅಂದು ಊಟ ಮಾಡಿದವರು ಹೆಚ್ಚೆಂದರೆ ನೂರು ಜನ ಮಾತ್ರ. ಅದೂ ಯಾರದೋ ಮನೆ ಬಾಗಿಲಲ್ಲಿ ನಿಂತುಕೊಂಡು.

ಹದಿನೈದು ಸಾವಿರ ರೂಪಾಯಿ ಅಯ್ಯಪ್ಪನ ಹೆಸರಲ್ಲಿ ಡಮಾರ್!!

ಅವತ್ತಿನಿಂದ ಬಿಜ್ಜುವಳ್ಳಿ ಅಂದರೆ ಸಾಕು, ಬಳ್ಳಾರಿ ಮಿತ್ರರು ಬೆಚ್ಚಿ ಬೀಳುತ್ತಿದ್ದಾರೆ.
1 ಕಾಮೆಂಟ್

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…