ವಿಷಯಕ್ಕೆ ಹೋಗಿ

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮೀಯ ಆಂಟಿಯೊಂದಿಗಿನ ಗೆಳೆತನ ಹೇಳಿ ಕೇಳಿ ಬರುವುದಲ್ಲ. ಯಾವಾಗ ಈಕೆಯೊಂದಿಗೆ ಇಷ್ಟೊಂದು ಹತ್ತಿರ ಆದ್ವಿ ಅಂತ ತಿಳಿಯುವುದೂ ಇಲ್ಲ. ದೇವರೇ ನೀಡಿದ ಗುರುವಿನಂತೆ ನಮ್ಮ ತಪ್ಪುಗಳನ್ನು ಆತ್ಮಿಯತೆಯಿಂದ ಸರಿ ಪಡಿಸುವ ದೇವತೆಯಂತೆ ಅವತರಿಸಿ ಬಿಡುವುದಿದೆ. ಇದೊಂತರಾ ವಿಸ್ಮಯ.

ಆಂಟಿಗೆ ತುಂಬಾ ತಿಳಿದಿರುತ್ತದೆ. ಆಂಟಿಯೂ ಗುರುವಿನಂತೆಯೇ ಆದರೂ, ತಾಯಿಗೂ ಅಂಟಿಯೂ ವ್ಯತ್ಯಾಸವಿದೆ. ಯಾವ ಆಂಟಿಯೂ ತಂದೆ ತಾಯಿಗಳಂತೆ ಗದರುವುದಿಲ್ಲ. ಬದಲಿಗೆ ಪಕ್ಕದಲ್ಲಿ ಕೂರಿಸಿಕೊಂಡು ನಲ್ನುಡಿಗಳಿಂದ ತಿಳಿ ಹೇಳುತ್ತಾಳೆ. ಬಹುಶಃ ಅವಳು ಹೇಳಿದ ನಂತರ ಅದನ್ನು ಮೀರುವುದು ಕಷ್ಟ. ಏಕೆಂದರೆ ನಮ್ಮ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತಹ ಪರಿಹಾರವನ್ನೇ ಆಕೆ ಹೇಳುವುದು. ತಪ್ಪು ಮಾಡಿದಾಗ ತಾಯಿ ದಂಡಿಸುತ್ತಾಳೆ. ಆದರೆ ಆಂಟಿ ಯಾವ ಕಾರಣಕ್ಕೂ ದಂಡಿಸುವುದಿಲ್ಲ. ಯಾಕೆಂದರೆ ಅವಳು ಗೆಳತಿಯಂತೆ, ಹೆಚ್ಚೆಂದರೆ ಕಿವಿ ಹಿಂಡಿಯಾಳು. ಅಥವಾ ಹುಸಿಕೋಪ ತೋರಬಹುದು. ಆದರೆ ದಂಡನೆಗಿಳಿಯುವುದಿಲ್ಲ.

ಆಂಟಿಯ ಮಧ್ಯೆ ಯಾವುದೇ ನಿಂಬಂಧನೆಯಿರುವುದಿಲ್ಲ. ಅಲ್ಯಾಕೆ ಹೋದೆ? ಇಲ್ಯಾಕೆ ಬಂದೆ? ಯಾಕಿಷ್ಟು ಲೇಟು? ಎಂಬ ಪ್ರಶ್ನೆಗಳಿರುವುದಿಲ್ಲ. ಹಾಗಾಗಿಯೇ ಆಂಟಿ ತುಂಬಾ ಪ್ರಿಯವಾಗುತ್ತಾಳೆ. ಅವಳಲ್ಲಿ ಯಾವುದನ್ನೂ ಕೇಳಲೂ ಹೆದರ ಬೇಕಾಗಿಲ್ಲ. ಯಾವುದಕ್ಕೂ  ಅನುಮತಿ ಪಡೆಯಬೇಕಾಗಿಲ್ಲ. ಕೆಲವೊಮ್ಮೆ ಅಮ್ಮನ ಬಗ್ಗೆಯೂ ದೂರನ್ನು ಆಂಟಿಯಲ್ಲಿಗೆ ಒಯ್ಯಬಹುದು. ಅದಕ್ಕೆ ಆಂಟಿ ಸಮಾಧಾನವನ್ನೂ ಮಾಡುತ್ತಾಳೆ. ನಮ್ಮ ತಪ್ಪಿದ್ದರೆ ತಿದ್ದುತ್ತಾಳೆ. ತಪ್ಪಿಲ್ಲದೇ ಅಮ್ಮ ಬೈದಿದ್ದರೆ `ಹೌದಾ? ಇರು ನಿಮ್ಮಮ್ಮನಿಗೆ ನಾನು ಹೇಳುತ್ತೇನೆ` ಎಂದು ನೆಮ್ಮದಿ ನೀಡುತ್ತಾಳೆ.

ಎಲ್ಲರಿಗೂ ಇಷ್ಟೊಂದು ಅಪ್ಯಾಯಮಾನಳಾದ ಆಂಟಿ ದೊರಕಿ ಹೋಗುತ್ತಾರೆಂದಲ್ಲ. ಆದರೆ ದೊರಕಿದರೆ ಪುಣ್ಯ. ಎಲ್ಲಾ ಹೆಣ್ಣಿನಲ್ಲೂ ಒಬ್ಬ ಪ್ರೀತಿ ಪೂರ್ವಕ ಆಂಟಿಯಿದ್ದೇ ಇರುತ್ತಾರೆ. ಆದರೆ ಅವರ ಮನೆಯ ಪರಿಸ್ಥಿತಿಗನುಗುಣವಾಗಿ ವರ್ತಿಸುತ್ತಾರಷ್ಟೆ. ತನ್ನ ಪತಿ, ಅತ್ತೆ, ಮಾವ ಅಥವಾ ಬೇರೆ ಯಾರಾದರೂ ಇದ್ದಾಗ ಆಂಟಿ ತನ್ನ ಆತ್ಮೀಯತೆಯನ್ನು ತೋರಲು ಸಾಧ್ಯವಾಗದೇ ಇರಬಹುದು. ಆದರೂ ಆಂಟಿ ಸದಾ ಗುರುವಿನ ಸ್ಥಾನದಲ್ಲಿ ನಿಲ್ಲುವವಳು. ಆಕೆ ಒಮ್ಮೆ ತಲೆಯನ್ನು ನೇವರಿಸಿದರೆ ಮನಸ್ಸಿನಲ್ಲಿ ಎಷ್ಟೇ ಗೊಂದಲ, ಬೇಸರಗಳಿದ್ದರೂ ನೆಮ್ಮದಿ ಸಿಕ್ಕುತ್ತದೆ. ದುಃಖವಾದಾಗ ಆಂಟಿಯ ಸಮಾಧನದ ಮಾತುಗಳು ಯಾರಿಗಾದರೂ ಆಹ್ಲಾದತೆ ನೀಡಬಲ್ಲುದು.

ಆಂಟಿ ತೀರಾ ಮನೆಯವಳಂತೆಯೇ. ಅವಳಲ್ಲಿ ಯಾವ ಹಿಂಜರಿಕೆಯೂ ಬೇಡ. ಕಾಫಿ ಕುಡಿಯಲು ನಮ್ಮ ಮನೆಯೆ ಆಗಬೇಕೆಂದಿಲ್ಲ. ಅಮ್ಮನಿಗೆ ಕೇಳಿದರೆ `ಬೇರೆ ಕೆಲಸ ಮಾಡ್ತಿದೀನಿ, ಆಮೇಲೆ ಮಾಡ್ತೀನಿ ಹೋಗೋ ಅಂದಾಳು. ಆದರೆ ಆಂಟಿ ಹಾಗಲ್ಲ. `ಆಂಟೀ, ಕಾಫಿ ಮಾಡ್ತೀರಾ?' ಅಂದರೆ ಸಾಕು ಅದಕ್ಕಾಗಿಯೇ ಕಾದಿದ್ದವರಂತೆ ಇರೋ, ನಂಗೂ ಕುಡಿಬೇಕೆನ್ನಿಸಿದೆ ಅನ್ನುತ್ತಾ ಹೋಗಿ ಮಾಡಿಕೊಡಬಲ್ಲರು. ಆಂಟಿಯ ಮನೆಗೆ ಹೋಗುವುದೆಂದರೆ ಹತ್ತಿರದ ಬಂಧುವಿನ ಮನೆಗೆ ಹೋದಂತೆಯೇ. ಅಲ್ಲಿ ನಮ್ಮದೇ ಸಾಮ್ರಾಜ್ಯ. ಆಂಟಿ ಆಸಕ್ತಿಯಿಂದ ನೋಡುವ ಧಾರಾವಾಹಿ ಬದಲಾಯಿಸಿ ಕ್ರಿಕೆಟ್ ಹಾಕಿಕೊಂಡೂ ನೋಡಬಹುದು. ಅಷ್ಟೊಂದು ಅಧಿಕಾರ ನಮಗಿರುತ್ತದೆ.

ಹಬ್ಬ ಹರಿದಿನಗಳಲ್ಲಿ ಆಂಟಿಯ ಮನೆಗೆ ಹೋಗಲು ಕಷ್ಟವಾಗುತ್ತದೆ. ಯಾವಾಗ ಹೋದರೂ ನಮಗಾಗಿ ಆಂಟಿ ಸಿಹಿ ಪದಾರ್ಥಗಳನ್ನು ಎತ್ತಿಟ್ಟಿರುತ್ತಾರೆ. ಒತ್ತಾಯ ಮಾಡಿ ತಿನ್ನಿಸುತ್ತಾರೆ. ಹಬ್ಬಕ್ಕೆ ತಪ್ಪದೇ ಕರೆಯುತ್ತಾರೆ. ಮಗನ ಅಥವಾ ಮಗಳ ಜನ್ಮದಿನಕ್ಕೆ ಮರೆಯದೇ ಆಹ್ವಾನಿಸುತ್ತಾರೆ. ನಾವು ಫಸ್ಟ್ ಕ್ಲಾಸ್ ನಲ್ಲಿ ಪಾಸಾದಾಗ ತಮ್ಮ ಮಕ್ಕಳೇ ಉತ್ತೀರ್ಣರಾದರೇನೋ ಎಂಬಂತೆ ಹರ್ಷಿಸುತ್ತಾರೆ. ಅಪ್ಪನ ಬುದ್ಧಿಮಾತು, ಅಣ್ಣನ ಹುಡುಗಾಟ, ಅಕ್ಕನ ಅಕ್ಕರೆ, ತಂಗಿಯ ಕೊಂಕು, ಗೆಳೆಯರ ಸಾಂಗತ್ಯಗಳೆಲ್ಲಾ ಒಂದೆಡೆಯೇ ದೊರೆಯುತ್ತದೆಂದರೆ ಅದು ಆಂಟಿಯ ಬಳಿಯೇ.

ಮುದ್ದಿನ ಆಂಟಿಯ ಬಳಿ ಯಾವುದಕ್ಕೂ ಮುಚ್ಚು ಮರೆಯಿರುವುದಿಲ್ಲ.... ಇರಬಾರದು. ಏನೇ ವಿಷಯಗಳಿದ್ದರೂ ನಿರ್ಭಿಡೆಯಿಂದ ಚರ್ಚಿಸಬಹುದು. ಆಂಟಿ ಏನೆಂದರೆ ಏನೂ ತಿಳಿದುಕೊಳ್ಳಲಾರಳು.  ಮನಸ್ಸಿಗೆ ಹಿಡಿಸಿದ ಹುಡುಗಿಯ/ಹುಡುಗನ ಬಗ್ಗೆ ಹೇಳಿದಾಗ `ಹೌದೇನೋ? ಎಂದು ಕಣ್ಣರಳಿಸಿ ಕೇಳುತ್ತಾಳೆ. ಮಧುರವಾಗಿ ಮಾತನಾಡಿಸಿ ಏನೆಂದರೆ ಏನೂ ಮುಚ್ಚಿಟ್ಟುಕೊಳ್ಳಲಾಗದಂತೆ ಹೇಳಿಬಿಡುವಂತಹ ಪ್ರಚೋದನೆಯನ್ನು ಉಂಟು ಮಾಡುತ್ತಾಳೆ. ಏಕೆಂದರೆ ಆಂಟಿಗೆ ಎಲ್ಲವೂ ಗೊತ್ತು. ಹದಿಹರೆಯದ ತುಮುಲ, ಅತಂಕ, ಕುತೂಹಲ, ಆಸಕ್ತಿ, ಪ್ರೀತಿ-ಪ್ರೇಮಗಳೆಲ್ಲವನ್ನ್ನೂ ಆಂಟಿ ಅದೆಂದೋ ಕಂಡಾಗಿರುತ್ತದೆ. ಯೌವ್ವನದ ಅವಗಾಹನೆ ಆಕೆಗೆ ಬೆರಳ ತುದಿಯಲ್ಲಿರುತ್ತದೆ. ಹಾಗಾಗಿ ಆಕೆಗೆ ಯಾವುದೂ ಹೊಸದಲ್ಲ, ಯಾವುದೂ ಅಪರಿಚಿತವೂ ಅಲ್ಲ! ನಮ್ಮನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೂ ಅಲ್ಲ. ಮೇಲಾಗಿ ಆಂಟಿಗೆ ಯಾವುದೇ ಅಭಿಲಾಷೆಗಳಿರುವುದಿಲ್ಲ. ನಿಮ್ಮ ಸಂತೋಷವೇ ಆಕೆಗೆ ಮುಖ್ಯ.

ಹಾಗೆಯೇ ಆಂಟಿ ಸೂಕ್ಷ್ಮಮತಿಯೂ ಹೌದು. ಕೆಲವು ಸಂದರ್ಭಗಳಲ್ಲಿ ಹೆತ್ತ ತಾಯಿ ಅರಿಯಲಾಗದ ಸೂಕ್ಷ್ಮಗಳನ್ನು ಆಕೆ ಅರಿತು ಬಿಡುತ್ತಾಳೆ. ತನ್ನ ಮಗನ ವಾರಿಗೆಯ ಹುಡುಗನೊಬ್ಬ ಮಂಕಾಗಿದ್ದಾನೆಂದರೆ ಅವನ ತಾಯಿಗಿಂತಲೂ ಬೇಗನೆ ಈ ಆಂಟಿ ಗುರುತಿಸಿಬಿಡಬಲ್ಲಳು. `ಏನೋ  ಯಾವ ಚೆಲ್ವಿ ಬಲೆ ಬೀಸಿದ್ದಾಳೋ? ಎಂಬ ಪೀಠಿಕೆಯೊಂದಿಗೆ ಶುರು ಮಾಡಿದಳೆಂದರೆ, ಯವುದೇ ಹುಡುಗಿ ಹುಡುಗನ ಮನಸ್ಸಿನ ಪಾತಾಳದಲ್ಲೇ ಅಡಗಿದ್ದರೂ ಕೆಲವೇ ನಿಮಿಷದಲ್ಲಿ ಬಹಿರಂಗ ಮಾಡಿಬಿಡಬಲ್ಲಳು. ಹುಡುಗಿಗೆ ಪ್ರೇಮಪತ್ರ ಹೇಗೆ ಬರೆಯಬೇಕು? ಹೇಗೆ ತಲುಪಿಸಬೇಕು? ಆ ಹುಡುಗಿ ಇವನಿಗೆ ಒಲಿಯುವ ಸಾಧ್ಯತೆ ಇದೆಯಾ? ಒಲಿಸಿಕೊಳ್ಳಲು ಬೇರೆನು ಮಾಡಬೇಕು? ಎಂಬ ಸಕಲ ವಿವರಗಳನ್ನೂ ಆಂಟಿ ಮಾತ್ರವೇ ನೀಡಬಲ್ಲಳು. ಕೆಲವೊಮ್ಮೆ ಆ ಹುಡುಗಿಯನ್ನು ಮಾತಾಡಿಸಿ ಇಂಥಾ ಹುಡುಗ ನಿನ್ನ ಮೇಲೆ ಮನಸ್ಸು ಮಾಡಿದ್ದಾನೆ. ನೀನೇನಂತೀಯಾ?` ಎಂದು ಕೇಳಿ ಅವಳ ಅಭಿಪ್ರಾಯವನ್ನೂ ತಿಳಿಯಬಲ್ಲಳು. ಅಲ್ಲದೇ `ಅವನು ನಮ್ಮ ಹುಡುಗ ಕಣೆ, ತುಂಬಾ ಬಳ್ಳೆಯವನು. ಅವನ ಬಗ್ಗೆ ನನಗೆ ಎಲ್ಲಾ ತಿಳಿದಿದೆ` ಎಂಬ ಸರ್ಟಿಫಿಕೇಟನ್ನೂ ನೀಡಬಹುದು.

ಹಾಗೆಯೇ ಹದಿನಾರರ ಹುಡುಗಿಯೊಬ್ಬಳು `ಆಂಟಿ, ಆ ಹುಡುಗ ಇವತ್ತು ಈ ಪತ್ರ ನೋಡಿ' ಎಂಡು ಯಾರೋ ಹುಡುಗ ಕೊಟ್ಟ ಲವ್ ಲೆಟರನ್ನು ಹಿಡಿದು ಹೋಗುವುದು ಆಂಟಿಯ ಬಳಿ ಮಾತ್ರ. ಆ ಹುಡುಗನಿಗೆ ಹೇಗೆ ಉತ್ತರಿಸಬೇಕು ಅಥವಾ ಎದುರಿಸಬೇಕು ಅಥವಾ ತಿರಸ್ಕರಿಸಬೇಕೆಂಬ ಉಪಾಯಗಳು ಆಂಟಿಯಲ್ಲದೇ ಇನ್ಯಾರು ಹೇಳಲು ಸಾಧ್ಯ?
ಆಂಟಿ ಸೋಮಾರಿಯಲ್ಲ, ಸದಾ ಏನಾದರೂ ಕೆಲಸ ಮಾಡಿಕೊಂಡೇ ಇರುತ್ತಾಳೆ. ತಲೆ ಹರಡಿಕೊಂಡ ಹುಡುಗಿಯರಿಗೆ ತಲೆಯನ್ನು ಒಪ್ಪವಾಗಿ ಬಾಚಿ, ಜಡೆ ಹಾಕಿ ಬಿಡುತ್ತಾಳೆ. ತನ್ನ ತೋಟದ್ದೇ ಒಂದು ಡೇರೆ ಯೂವು ಅಥವಾ ಗುಲಾಬಿ ಹೋವನ್ನು ತಂದು ಮುಡಿಸಿ `ಮುದ್ದುಹುಡುಗಿ ಎಂದು ಬೊಗಸೆಯಲ್ಲಿ ಬಾಚಿ ಲಟಲಟನೆ ನೆಟಿಗೆ ತೆಗೆದು ಹರ್ಷಿಸಬಲ್ಲಳು. ಯಾವ ಸಂಬಂಧವೂ ಇಲ್ಲದ ತಾಯಿಯ ವಯಸ್ಸಿನ ಅಥವಾ ಹಿರಿಯಕ್ಕನ ವಯಸ್ಸಿನ ಆಂಟಿ ಅಷ್ಟೆಲ್ಲಾ ಪ್ರೀತಿ ತೋರುವುದೇ ವಿಸ್ಮಯವಲ್ಲವೇ?

ಹೀಗೆ ಹುಡುಗರಿರಲಿ, ಹುಡುಗಿಯರಿರಲಿ ಎಲ್ಲರಿಗೂ ಒಬ್ಬ ಆತ್ಮೀಯ ಆಂಟಿ ಇರಲೇಬೇಕು. ಅದರಲ್ಲೂ ಹುಡುಗಿಯರಿಗೆ ಅವರ ದೇಹದ ಬಗ್ಗೆ, ತೆಗೆದುಕೊಳ್ಳಬೇಕಾದ ಎಚ್ಚರಿಕೆಯ ಬಗ್ಗೆ. ಇನ್ನೂ ಏನೇನೋ ವಿಷಯಗಳನ್ನೆಲ್ಲಾ ಬೇರೆಲ್ಲರಿಗಿಂತಲೂ ಚೆನ್ನಾಗಿ ಆಂಟಿ ಹೇಳಬಲ್ಲಳು. ಮಾಡಿದ ತಪ್ಪನ್ನು ತಿದ್ದಿ ಹೊಸ ರೂಪ ನೀಡಬಲ್ಲಳು. ಆಕೆಯ ಸಹನೆ ನಮಗೆ ಮಾದರಿಯಾಗಬಲ್ಲದು. ಅಂಥಹ ಪ್ರೀತಿಯನ್ನು ಯಾರೂ ಮಿಸ್ ಮಾಡಿಕೊಳ್ಳ ಬಾರದು.

ಕಾಮೆಂಟ್‌ಗಳು

savitha ಹೇಳಿದ್ದಾರೆ…
ಚೆನ್ನಾಗಿದೆ, ವಾಸ್ತವದಲ್ಲಿ ಇಂತ ಆಂಟಿ ಸಿಕ್ತಾರ???!!
ಪಿಸುಮಾತು ಹೇಳಿದ್ದಾರೆ…
ಯಾಕೆ ಸಿಗಲ್ಲ ? ಎಲ್ಲರಿಗೂ ಸಿಗದಿರಬಹುದು. ಕೆಲವರಿಗಾದರೂ ಸಿಕ್ಕೇ ಸಿಗ್ತಾರೆ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …