ವಿಷಯಕ್ಕೆ ಹೋಗಿ

ಸೋಲು ಗೆಲುವಿನ ಬದುಕಿನಲ್ಲಿ ಕಲ್ಪನೆ ಮತ್ತು ವಾಸ್ತವ

ನಮ್ಮ ಜೀವನದಲ್ಲಿ ಸೋಲೆಂಬುದು ಎಷ್ಟು ಸಹಜವೋ ಅದರಂತೆಯೇ ಪ್ರತಿ ಸೋಲಿನ ನಂತರವೂ ನಾವು ಒಬ್ಬಂಟಿಯಾಗಿಯೇ ಉಳಿದಿರುತ್ತೇವೆಂಬುದೂ ಕೂಡ ನಿಜ. `ಸೋಲು ಎಂಬ ಒಂದು ಅಗೋಚರ ಪ್ರಕ್ರಿಯೆ ಗೆಲುವಿಗಿಂತಲೂ ತುಂಬಾ ಬಿರುಸು ಹಾಗೂ ಶಕ್ತಿಶಲಿಯಾದುದು. ಹಾಗೂ ತೀರಾ ಕಹಿಕಹಿ. ಆ ಕಹಿಯ ಘಾಟು ನಾವು ತಾಳಿಕೊಳ್ಳುವುದಂತಿರಲಿ, ನಮ್ಮ ಗೆಳಯ ಗೆಳತಿಯರೇ ತಾಳಲಾಗದೇ ಮೂಗು ಮುರಿದು ನಮ್ಮಿಂದ ನಾಜೂಕಾಗಿ ಜಾರಿ ದೂರಾಗಿ ಬಿಡುವ ಸಂಭವವವೂ ಇರುತ್ತದೆ. (ಒಬ್ಬಿಬ್ಬರು ಉತ್ತಮ ಸ್ನೇಹಿತು ಉಳಿದರೆಂದರೆ ಅದೇ ನಮ್ಮ ಪುಣ್ಯ)

ಜೀವನದಲ್ಲಿ ಮನುಷ್ಯನಿಗೆ ಅತಿ ದೊಡ್ಡದೆನ್ನಬಹುದುದಾದ ಸೋಲೊಂದು ಬಂದು ಅಪ್ಪಳಿಸಿತೆಂದರೆ ಅದರ ನಂತರ ಮನಸ್ಸು ಸಾಂತ್ವನ ಬಯಸುತ್ತದೆ. ಮತ್ತು ಸೋಲಿನಿಂದ ಎದ್ದು ಮತ್ತೊಂದು ಗೆಲುವಿಗೆ ಅಣಿಯಾಗಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಮುಂದಿನ ಗೆಲುವನ್ನು ನಿಶ್ಚಯಿಸುವ ಭರದಲ್ಲಿ ಹಠಕ್ಕೆ ಬೀಳುವ ಮನಸ್ಸು ಯೋಜನೆಗೆ ಬದಲಾಗಿ `ಕನಸು ಎಂಬ ರತ್ನಮಾಳಿಗೆ ಹೊಕ್ಕು ಬಿಟ್ಟಿತೆಂದರೆ ಗತಿ? ಮುಂದಿನ `ಯಶಸ್ಸು ಎಂಬ ಕಲ್ಪನೆಯನ್ನು ಅದೆಷ್ಟು ಸುಂದರವಾಗಿ ಕಟ್ಟಿಕೊಳ್ಳುತ್ತೇವೆ? ಮುಂದೆ ಅದೇನೋ ದೊಡ್ಡದೊಂದು ಯಶಸ್ಸು ನಮಗಾಗಿಯೇ ರತ್ನಗಂಬಳಿ ಹಾಸಿ ಕಾದಿರುವಂತೆ ಕಲ್ಪಿಸಿಕೊಳ್ಳುತ್ತೇವೆ. ಈ ಕಲ್ಪನೆ ಅಥವಾ ಕನಸು ನಮ್ಮನ್ನು ಮತ್ತೊಂದು ಸೋಲಿಗೆ ದೂಡುವ ಅವಕಾಶ ಕೂಡಾ ಇರುತ್ತದೆ. ಈ ಸಮುಯದಲ್ಲಿ ಕೊಂಚವಾರದೂ ವಾಸ್ತವನವನ್ನು ವಿವೇಚಿಸದೇ ಹೋದರೆ ಬದುಕಿಗೆ ಮತ್ತೊಂದು `ಹೊಡ್ತ ಗ್ಯಾರಂಟಿ.

ಹಾಗಂತ ಮುಂದಿನ ಯಶಸ್ಸಿನ ಬಗ್ಗೆ, ಅದರ ರೂಪರೇಶೆಯ ಬಗ್ಗೆ ಏನನ್ನೂ ಕಲ್ಪಸಿಕೊಳ್ಳಲೇ ಬಾರದೇ? ಕನಸು ಕಾಣಲೇಬಾರದೇ? ಖಂಡಿತಾ ಹಾಗೇನಿಲ್ಲ. ಸೋಲಿನ ದವಡೆಯಲ್ಲಿರುವ ಮನುಷ್ಯನಿಗೆ ಸಮಾಧಾನ ನೀಡುವ ಏಕೈಕ ದಾರಿಯೇ ಕನಸು ಕಾಣುವುದು! ಇಲ್ಲದ್ದನ್ನು ಇರುವಂತೆ ಕಲ್ಪಸಿಕೊಳ್ಳುವುದು. ಆದರೆ ಕಲ್ಪನೆ ಅಥವಾ ಕನಸು ಎಮದಿಗೂ ವಾಸ್ತವವಾಗಿರಲು ಸಾಧ್ಯವಿಲ್ಲ. ಆದರೆ ಹುಚ್ಚು ಕೋಡಿ ಮನಸು ಕಲ್ಪನೆಯ ಮಹಲನ್ನು ಯಾರ ಹಂಗಿಲ್ಲದೇ ಕಟ್ಟಿಕೊಳ್ಳಬಲ್ಲದು. ಸುಳ್ಳಾದ ಒಂದು ಸುಭದ್ರ ಯಶಸ್ಸಿನ ಕೋಟೆಯನ್ನು ನಿರ್ಮಿಸಿ ಕೊಳ್ಳಬಹುದು. ಆದರೆ ಜಗತ್ತಿನ ಅತಿ ಕ್ರೂರಿಯಾದ ವಾಸ್ತವ ಎಂಬುದೊಂದಿದೆಯಲ್ಲ, ಅದು ನಮ್ಮನ್ನು ಎಷ್ಟೆಲ್ಲಾ ಜನರ ನಡುವೆಯೂ ನಗ್ನರನ್ನಾಗಿಸಿ ಬಿಡುತ್ತದೆ. ಕಾದಿಟ್ಟು ಬಂದಿದ್ದ ಅಷ್ಟೂ ಮರ್ಯಾದೆಯನ್ನು ಹೇಳಹೆಸರಿಲ್ಲದಂತೆ ಅಳಿಸಿ ಹಾಕಿಬಿಡುತ್ತದೆ. ಅದಕ್ಕಾಗಿಯೇ ಕಲ್ಪನೆಯ ಕೋಟೆ ಕಟ್ಟುವ ಮೊದಲು ಇದೆಲ್ಲವನ್ನೂ ನಾವು ಯೋಚಿಸಿಕೊಳ್ಳಲೇಬೇಕು.

ವಯಸ್ಸಿಗೆ ತಕ್ಕಂತೆ

ಒಂದೊಂದು ವಯಸ್ಸಿನಲ್ಲಿಯೂ ನಮ್ಮ ಕಲ್ಪನೆಗಳು ಬೇರೆಯೇ ಆದ ರೀತಿಯಲ್ಲಿರುತ್ತದೆ. ಅದು ಸಮಯ ಸಂದರ್ಭಕ್ಕೆ ತಕ್ಕಂತೆ ತನ್ನ ತನವನ್ನು ಬದಲಾಯಸಿರುತ್ತದೆ. ಮೂರ್ನಾಲ್ಕು ವರ್ಷ ವಯಸ್ಸಿನ ಮಗುವಿಗೆ ತನ್ನದೇ ಆದ ಹೊಸ ಹೊಸ ಕಲ್ಪನೆಗಳಿರುತ್ತವೆ. ಪಕ್ಕದ ಮನೆಯ ಮಗು ಓಡಿಸುವ ಸೈಕಲ್ ತನ್ನದೆಂಬಂತೆ, ತಾನು ಅದರ ಮೇಲೆ ಸವಾರಿ ಮಾಡುವಂತೆ ಕನಸು ಕಾಣುತ್ತದೆ. ಆದರೆ ನಮಗಿಂತಲೂ ಚೆನ್ನಾಗಿ ಮಕ್ಕಳಿಗೆ ಅರ್ಥವಾಗುವುದೇನೆಂದರೆ ಕಲ್ಪನೆ ಎಂದಿಗೂ ವಾಸ್ತವ ಅಲ್ಲ ಎಂಬುದು. ಹಾಗಾಗಿಯೇ ಅದೇ ಮಗು ತನ್ನ ಅಪ್ಪ ಅಮ್ಮನೊಂದಿಗೆ ಪಕ್ಕದ ಮನೆಯ ಮಗು ಓಡಿಸುವಂತಹುದೇ ಸೈಕಲನ್ನು ತನಗೂ ಕೊಡಿಸುವಂತೆ ಹಠ ಹಿಡಿಯುವುದು! ಕಲ್ಪನೆಯಿಂದ ದೊಡ್ಡವರು ಪಡುವಷ್ಟು ಸಂತೋಷವನ್ನು ಮಕ್ಕಳು ಪಡುವುದಿಲ್ಲ (ಬುದ್ಧಿವಂತ ಮಕ್ಕಳು!) ಹಾಗೇನಾದರೂ ಆಗಿದ್ದಲ್ಲಿ ಯಾವ ಮಕ್ಕಳೂ ಯಾವುದಕ್ಕೂ ಹಠ ಹಿಡಿಯುತ್ತಿರಲಿಲ್ಲ. ಅವಷ್ಟಕ್ಕೆ ಅವೇ ತಮಗೆ ಬೇಕಾದುದನ್ನು ಕಲ್ಪಸಿಕೊಂಡು ಸಂತಸದಿಂದ ಇರುತ್ತಿದ್ದವು.

ಶಾಲೆಯಲ್ಲಿ ಓದುವಾಗ ಸರಿಯಾಗಿ ಓದದೇನೇ ತಾನು ಉತ್ತೀರ್ಣನಾಗಿಬಿಡುತ್ತೇನೆಂದು ಒಬ್ಬ ವಿದ್ಯಾರ್ಥಿ ಅಂದುಕೊಂಡು ಸಂತೋಷಿಸಿದರೆ ಬಹುಶಃ ಆ ಸಂತೋಷಕ್ಕೆ ಬೆಲೆ ಇಲ್ಲ. ಯುವಕ ಯುವತಿಯರಂತೂ ಕನಸು ಕಾಣುವುದರಲ್ಲಿ ನಿಸ್ಸೀಮರು. ಕನಸಿಗೂ ಏನಾದರೂ ತೆರಿಗೆ ಕಟ್ಟುವಂತಿದ್ದರೆ ದೇಶದ ಪೂರ್ತಿ ಆದಾಯವನ್ನು ನಾವೇ ತುಂಬಿಕೊಡುತ್ತಿದ್ದೆವು. ಮುಂದೆ ಸಿಗುವ ಸಂಗಾತಿಯೊಡಗಿನ ಹಾಗೂ ಪ್ರೇಮಿಯೊಂದಿಗಿನ ಕಲ್ಪನೆಗಳೂ ಸಾವಿರಾರು. ಅವುಗಳಲ್ಲಿ ಎಷ್ಟು ನಿಜವಾಗುತ್ತವೋ. ಅದೆಷ್ಟು ಸುಳ್ಳಾಗುತ್ತವೋ, ದೇವರೇ ಬಲ್ಲ.

ಮಗುಚಿ ಬಿದ್ದ ಗೆಲುವಿನೆಡೆಗೆ...

ಒಬ್ಬ ವ್ಯಕ್ತಿ ಯಾವುದೋ ಒಂದು ಉದ್ಯೋಗ ಹಿಡಿದು ಮೊಳೆ ಬಡಿದುಕೊಂಡು ಕುಳಿತಂತೆ ಜೀವನ ಪೂರ್ತಿ ಅದೇ ಕೆಲಸ ಮಾಡಿಕೊಂಡಿದ್ದನೆಂದರೆ ಬಹುಶಃ ಅವನಿಗೆ ಸೋಲಿನ ಭೀತಿ ಕಾಡದೆ ಇರಬಹುದು. ಹೆಚ್ಚು ಕ್ರಿಯಾಶೀಲರಾದ ವ್ಯಕ್ತಿಗಳು ಸದಾ ಏನಾದರೂ ಮಾಡುತ್ತಲೇ ಇರುತ್ತಾರೆ. ಹೊಸ ಹೊಸ ಸಾಹಸಗಳಿಗೆ ಕೈ ಹಾಕುತ್ತಾರೆ. ಲಕ್ಷಾಂತರ ಬಂಡವಾಳ ಹಾಕಿರಬಹುದು, ಅಥವಾ ಬಂಡವಾಳವೇ ಇಲ್ಲದ ಯೋಜನೆಯಿರಬಹುದು. ಚಿಕ್ಕದಿರಲಿ ದೊಡ್ಡದಿರಲಿ ಆಯಾ ವ್ಯಕ್ತಿಗಳು ಶಕ್ತಿಮೀರಿ ಶ್ರಮಿಸಿರುತ್ತಾರೆ. ಆದಾಗ್ಯೂ ಒಂದೊಮ್ಮೆ ಸೋಲು ಉಂಟಾಯ್ತೆಂದರೆ!?

ಎಲ್ಲಾ ಸರಿಯಿದೆಯೆಂದುಕೊಂಡಿದ್ದರೂ ಈ ಸೋಲು ಧುತ್ತತೆ ನಮಗೆ ಎದುರಾಗುವುದು ಸಹಜ. ಅದು ಮೊಬೈಲ್ನಲ್ಲಿ ಅಥವಾ ಕಂಪ್ಯೂಟರ್ನಲ್ಲಿ ಆಡುವ ಆಟವಾಗಿದ್ದಲ್ಲಿ ಹೊಸ ಆಟವನ್ನು ತಕ್ಷಣವೇ ಪ್ರಾರಂಭಿಸಿಬಿಡಬಹುದು. ಆದರೆ ಜೀವನದ ಆಟ ಅಷ್ಟು ಮಾತ್ರಕ್ಕೆ ಸರಿ ಹೋಗಿಬಿಡುವುದಿಲ್ಲ. ಪ್ರತಿ ಸೋಲಿಗೂ ಅದು ಬೆಲೆ ಕೇಳುತ್ತದೆ. ಆ ಬೆಲೆ ಏನಾದರೂ ಆಗಿರಬಹುದು... ಸಮಯ, ಹಣ, ನಂಬಿಕೆ, ಮರ್ಯಾದೆ ಹೀಗೆ. ಕೆಲವು ಸೋಲಿನ ಹೊಡೆತಗಳು ನಮ್ಮನ್ನು ಬಕ್ಕಬಾರಲು ಬೀಳಿಸಿ ಹೋಗಿರುತ್ತವೆ. ಮುಂದೆಂದೋ ಚೇತರಿಸಿ ಕೊಳ್ಳುವ ಮೊದಲು ಎಷ್ಟೊಂದು ಯಾತನೆ, ಅವಮಾನ ಅನುಭವಿಸುತ್ತೇವೆ!?  ಕೆಲವರಂತೂ ಒಮ್ಮೆ ಸೋಲುಂಡರೆಂದರೆ ಮತ್ತೆಂದೂ ಯಾವ ಸಾಹಸಕ್ಕೂ ಕೈ ಹಾಕದೇನೇ ತಮ್ಮ ಅಷ್ಟೂ ಕ್ರಿಯಾಶೀಲತೆಯನ್ನು ಕೊಂದಿಕೊಂಡು ಸುಮ್ಮನಾಗಿಬಿಡುತ್ತಾರೆ.

ಹಲವರು ಈಗಾಗಲೇ ಮಗುಚಿ ಬಿದ್ದಿರುವ ತಮ್ಮ ಯಶಸ್ಸಿನ ಕಟ್ಟಡದ ಬಗ್ಗೆಯೇ ಇಲ್ಲದ ಕನಸು ಕಾಣತೊಡಗುತ್ತಾರೆ. ಅದು ಈಗಾಗಲೇ ಮಗುಚಿ ಬಿದ್ದಾಗಿದೆ ಎಂಬ ಕಟುವಾಸ್ತವವನ್ನು ಅರಿತುಕೊಳ್ಳುವ ವ್ಯವಧಾನ ಸಹ ಅವರಿಗಿರುವುದಿಲ್ಲ. `ಛೆ! ನಾನು ಹಾಗೆ ಮಾಡದೇ ಹೀಗೆ ಮಾಡಿದ್ದಿದ್ದರೆ ಗೆದ್ದುಬಿಟ್ಟಿರುತ್ತಿದ್ದೆ, ಎಂದು ಸೋತಾದ ಹಲುಬುವವರಿದ್ದಾರೆ. ಯೋಚಿಸಿದರೆ ತಿಳಿಯುತ್ತದೆ.  ಯಾವುದೇ ಸಂದರ್ಭವೂ ಮತ್ತೊಮ್ಮೆ ಘಟಿಸಲಾರದು ಅಂತ. ಆದರೂ, ನಮಗೆ ಕೆಲವೊಮ್ಮೆ ಸೋಲನ್ನು ಅಷ್ಟು ಸುಲಭವಾಗಿ ಅರಗಿಸಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಹಾಗಾಗಿ ಅದೇ ವಿಷಯದ ಸುತ್ತಲೇ ನಮ್ಮ ಕಲ್ಪನೆಯ ಹುತ್ತ ಬೆಳೆಯತೊಡಗುತ್ತದೆ.

ಕಲ್ಪನೆಗೊಂದು ಸಮರ್ಥನೆ

ಕೆಲವರು ಸೋಲಿನ ನಂತರದ ಅವರ ಕಲ್ಪನೆ ಕನಸುಗಳಿಗೆ ಒಂದು ಸಮರ್ಥನೆಯನ್ನೂ ಕೊಡುತ್ತಾರೆ. ಅದೇನೆಂದರೆ `ಒಂದು ಬಾರಿ ಹೀಗಾಯ್ತು, ಮುಂದೆ ಹೀಗಾಗಬಾರದು ನೋಡಿ. ಅದಕ್ಕೇ ಸೋಲಿನ ಬಗ್ಗೆ ಪ್ರತಿ ವಿಷಯವನ್ನು ತಿಳಿದಿಕೊಳ್ತಾ ಇದ್ದೀನಿ. ಅಂತಾರೆ. ಮುಂದೆ ಹೀಗಾಗಬಾರದು ಅನ್ನುವುದೇನೋ ನಿಜ. ಹೀಗಾಗಿ ಹೋಯ್ತಲ್ಲ ಅಂತ ಚಿಂತಿಸುವುದಕ್ಕಿಂತಾ ಏಕೆ ಹೀಗಾಯ್ತು? ಅಂತ ಯೋಚಿಸಿದರೆ ಒಳ್ಳೆಯದು. ಆದರೆ ಆಗಿ ಹೋಗಿರುವ ಒಂದು ಸೋಲನ್ನೇ ಹಿಡಿದು ಜೋತಾಡುತ್ತಿದ್ದರೆ ಹೇಗೆ? ನಡೆದುಬಿಟ್ಟಿದೆ ಅಂದ ಮೇಲೆ ಅದು ಮುಗಿದು ಹೋದ ಅಧ್ಯಾಯವೆಂದೇ ಅರ್ಥ. ಅದರ ಬಗ್ಗೆ ಮತ್ತು ಮತ್ತೂ ತಲೆಬಿಸಿ ಮಾಡಿಕೊಂಡು ಪ್ರಯೋಜನವೇನು? ಆದರೂ ಹಿಂದಿನ ಸೋಲಿನ ಅನೇಕ ಮಜಲುಗಳನ್ನು ಅರಿಯುವ ಅವಶ್ಯಕತೆ ಕೆಲವರಿಗೆ ಇದ್ದೇ ಇರುತ್ತದೆ. ಅದು ಯಾರಿಗೆಂದರೆ ಒಮ್ಮೆ ಸೋತರೂ ಕೂಡಾ ಮತ್ತದೇ ರಂಗದಲ್ಲೇ ಮುನ್ನುಗ್ಗಬೇಕಾದ ಅನಿವಾರ್ಯತೆ ಅಥವಾ ಹುಮ್ಮಸ್ಸು ಇದ್ದರೆ ಕಳೆದುಕೊಂಡಲ್ಲಿಯೇ ಹುಡುಕು ಎಂಬ ನುಡಿಯಂತೆ ಅವರು ಎಲ್ಲಿ ಸೋತಿರುತ್ತಾರೋ ಅಲ್ಲೇ ಗೆಲುವಿನ ಹೊಸ್ತಿಲನ್ನು ತುಳಿಯಲು ತವಕಿಸುತ್ತಾರೆ. ಅದಕ್ಕೆ ಅನಿವಾರ್ಯತೆಯೂ ಕಾರಣವಾಗಬಹುದು. ಕೋಟ್ಯಾಂತರ ರೂಪಾಯಿ ಸುರಿದು ಕಟ್ಟಿದ್ದ ಫ್ಯಾಕ್ಟರಿಯೊಂದು ಕೆಲಸವಿಲ್ಲದೇ ನಿಂತಿದೆಂದರೆ ಅದು ಅದನ್ನು ಕಟ್ಟಿದಾತನ ಸೋಲು. ಹಾಗಂತ ಅವನು `ಇದರಲ್ಲಿ ಸೋತೆ ಇನ್ನೊಂದು ಬೇರೆ ವಸ್ತುವನ್ನು ತಯಾರಿಸುವ ಫ್ಯಾಕ್ಟರಿ ಕಟ್ಟುತ್ತೇನೆ` ಎಂದು ಹೊರಡಲು ಸಾಧ್ಯವಾದೀತೆ? ಮುಚ್ಚಿರುವ ಫ್ಯಾಕ್ಟರಿಯನ್ನು ಮಾರಲು ಹೋದರೆ ಅರ್ಧ ಬೆಲೆಗೂ ಹೋಗದು. ಆಗ ಅವನು ಅದೇ ಫ್ಯಾಕ್ಟರಿಯನ್ನು ಹೇಗಾದರೂ ಉದ್ದಾರ ಮಾಡಲಿಕ್ಕೇ ಹೊರಡುತ್ತಾನೆ. ಅದವನ ಅನಿವಾರ್ಯತೆ.

ಇನ್ನೂ ಕೆಲವರು ಒಂದರಲ್ಲಿ ಸೋತರೂ ಮತ್ತದೇ ದಾರಿಯನ್ನೇ ಆಯ್ದುಕೊಳ್ಳುತ್ತಾರೆ. ಏಕೆಂದರೆ ಬೇರೆ ಕೆಲಸ ಅವರಿಗೆ ತಿಳಿದಿರುವುದಿಲ್ಲ! ಸೋತರೂ ಸರಿ, ದಿವಾಳಿಯಾದರೂ ಸರಿ. ಗೊತ್ತಿರುವ ಒಂದೇ ದಾರಿಯಲ್ಲಿ ಅವರು ನಡೆಯಬೇಕಾಗಿರುತ್ತದೆ. ಇನ್ನೂ ಕೆಲವರಿರುತ್ತಾರೆ. ಅವರೂ ಸೋತೆಡೆಯೇ ಗೆಲುವಿನ ಸೋಪಾನ ಹುಡುಕುತ್ತಾರೆ. ಅವರಿಗದು ಖಂಡಿತಾ ಅನಿವಾರ್ಯತೆಯಾಗಿರುವುದಿಲ್ಲ. ಬೇರೆ ಉದ್ಯೋಗ ಗೊತ್ತೇ ಇಲ್ಲ ಅಂತಲೂ ಅಲ್ಲ. ಆದರೆ ಅವರೊಂದು  ಬಗೆಯ ಹುಂಬರು. ಸೋಲನ್ನೆ ಸೋಲಿಸಲು ಎದೆ ತಟ್ಟಿ ಹೊರಟು  ಬಿಡುವಂತವರು. ಹಲವು ಸಿನಿಮಾ ನಿರ್ಮಾಪಕರು, ನಿರ್ದೇಶಕರು ಇದೇ ರೀತಿಯ ಜಿದ್ದು ಬೆಳೆಸಿ ಕೊಂಡಿರುತ್ತಾರೆ. ನಟರೂ ಸಹ. ಇಂಥವರ ಹತ್ತು ಸಿನಿಮಾ ಸೋತರೂ ಮತ್ತೆ ಮತ್ತೆ ಹೊಸ ಪ್ರಯೋಗ ನಡೆಸುತ್ತಲೇ ಇರುತ್ತಾರೆ.

ಈ ರೀತಿ ಮೇಲಿನ ಮೂರು ವರ್ಗಗಳ ಮಂದಿಯೂ ಸೋತಿರುವುದಕ್ಕೆ ಕಾರಣಗಳನ್ನು ಹುಡುಕಿಕೊಳ್ಳಲೇಬೇಕು. ಸೋಲಿನ ಬಗ್ಗೆ ಚಿಂತಿಸಲೇಬೇಕು. ಗೆಲುವಿನ ಕಲ್ಪನೆ ಕಟ್ಟಲೇಬೇಕು. ಯಶಸ್ಸಿನ ಕನಸು ಕಾಣಲೇಬೇಕು. ಅದೆಲ್ಲದರ ಜೊತೆಗೆ ಪ್ರಾಕ್ಟಿಕಲ್ ಪ್ಲಾನಿಂಗ್ ಇರಬೇಕೇ ಹೊರತೂ ಸಂಪೂರ್ಣವಾದ ಕಲ್ಪನಾ ಮನೋರಥವಲ್ಲ! ಅಂಥವರು ತಮ್ಮ ಸೋಲನ್ನು ವಿಮರ್ಶಿಸಿ ಕೊಳ್ಳಲೇಬೇಕಾಗುತ್ತದೆ.

ಕಲ್ಪನೆ ಹಾಗೂ ವಿಮರ್ಶೆಗಳ ವ್ಯತ್ಯಾಸ

ಪ್ರತಿಯೊಂದು ವಿಷಯವನ್ನು ನಾವು ವಿಮರ್ಶೆ ಮಾಡುತ್ತಾ ಕುಳಿತರೆ ಮನಸ್ಸಿನ ನೆಮ್ಮದಿ ಸಂಪೂರ್ಣ ನಾಮವಶೇಶವಾಗುವುದರಲ್ಲಿ ಎರಡು ಮಾತಿಲ್ಲ. ನೊಂದಿರುವ ಮನಸ್ಸಿಗೆ ನೆಮ್ಮದಿ ಬೇಕು. ಒಂದು ಭದ್ರತೆಯ ಭಾವ ಮೂಡಲೇಬೇಕು. ಇದನ್ನೆಲ್ಲಾ ಒದಗಿಸುವುದು ಕಲ್ಪನೆಯೇ ಹೊರತು ವಿಮರ್ಶೆಯಲ್ಲ. ಅದಕ್ಕಾಗಿಯೇ ನಮಗೆ ಕಲ್ಪನಾಲೋಕ ಕೊಂಚವಾದರೂ ಬೇಕೆ ಬೇಕು. ಸೋತು ಬಿದ್ದಿರುವಾತನಿಗೆ ಮತ್ತೊಂದು ಓಟಕ್ಕೆ ಹುಮ್ಮಸ್ಸೆಂಬ ಟಾನಿಕ್ಕನ್ನು ಕೂಡುವುದೇ ಈ ಕಲ್ಪನೆ! ಕಲ್ಪನೆ ಎಂಬುದೊಂದು ನಮಗೆ ದೊರೆತಿರುವ ಮಾತು ಕೇಳುವ ಭೂತ! ಅದನ್ನು ಹೇಗೆ ಬಳಸಿಕೊಳ್ಳಬೇಕೋ ಹಾಗೇ ಬಳಸಿಕೊಂಡರೆ ನಮಗೆ ಲಾಭ. ಇಲ್ಲವೆಂದರೆ ಖಂಡಿತಾ ಆ ಭೂತದಿಂದ ಅಪಾಯ ತಪ್ಪಿದ್ದಲ್ಲ.

ಯಡಬಿಡಂಗಿ ಕಲ್ಪನೆ

ಕಲ್ಪನೆ ಅಥವಾ ಕನಸುಗಳು ನಮ್ಮನ್ನು ನೂರಾರು ರೀತಿಯಲ್ಲಿ ಕಾಡದಿರವು. ಕೆಲವರು ತಾವು ಸೋಲುತ್ತೇವೆಂದು ತಿಳಿದಿದ್ದರೂ ಗೆಲುವಿನ ಕನಸು ಕಾಣುತ್ತಾರೆ. ಅನುತ್ತೀರ್ಣರಾಗುತ್ತೇವೆಂದು ಗೊತ್ತಿದ್ದರೂ ಮುಂದಿನ ತರಗತಿಗೆ ಹೋದಂತೆ ಕನಸು ಕಾಣುತ್ತಾನೆ. ಕೆಲವರು ಅದಕ್ಕೂ ಮುಂದೆ ಹೋಗಿ ತಾನು ವೈದ್ಯನಾದಂತೆ, ವಿಜ್ಞಾನಿಯಾದಂತೆ ಕನಸು ಕಾಣುತ್ತಾರೆ. ಇಂತಹ ಕಲ್ಪನೆಗಳಿಂದ ಸ್ಪೂರ್ತಿಯೇನೋ ದೊರೆಯಬಹುದಾಗಲೀ ನಮಗೆ ಇಲ್ಲದ ಸಾಮರ್ಥ್ಯ ದೊರೆಯುವುದಾದರೂ ಎಲ್ಲಿಂದ?
ಹೀಗೆ ನಾವು `ಧನಾತ್ಮಕ ಯೋಚನೆ ಎಂಬ ಹೆಸರಲ್ಲಿ ಕಲ್ಪನಾ ಲಹರಿಗೆ ಮಾರು ಹೋಗುತ್ತೇವೆ. ಹೋಗಲಿ, ಇಷ್ಟೆಲ್ಲಾ ಕಲ್ಪನೆಯ ಕೋಟೆ ಕಟ್ಟುವ ನಾವು ಅದಕ್ಕಾಗಿ ಒಂದಿಷ್ಟು ತಯಾರಿಯನ್ನು ಯಾಕೆ ಮಾಡಿಕೊಳ್ಳಬಾರದು. ಅಂದರೆ ಅದು ವಾಸ್ತವದ ಪ್ರಯತ್ನವಾಗಿರುತ್ತದೆ. ಏನೇನೂ ಇಲ್ಲದೆ ಯಾರದೋ ಒತ್ತಾಯಕ್ಕೆ ಮಣಿದು ಗೊತ್ತಿಲ್ಲದ ಹಾದಿಯಲ್ಲಿ ಧುಮುಕುವುದು ಮೂರ್ಖ ಕೆಲಸವಾದೀತು ಅಲ್ಲದೇ?

ಕಾಮೆಂಟ್‌ಗಳು

ashokkodlady ಹೇಳಿದ್ದಾರೆ…
@ ಪಿಸುಮಾತು....

ತುಂಬಾ ಉತ್ತಮ ಲೇಖನ....ತುಂಬಾ ಚೆನ್ನಾಗಿ ಬರೆದಿದ್ದೀರಿ.

ಸೋಲೇ ಗೆಲುವಿನ ಸೋಪಾನ..ಎನ್ನುತ್ತಾರೆ...ಒಮ್ಮೆ ಸೋತವರು ಹತಾಶರಾಗುವುದು ಸರಿಯಲ್ಲ...ಮುಂದೆ ಗೆಲುವು ಸಿಗಬಹುದೆಂಬ ಆಶಾ ಭಾವದೊಂದಿಗೆ ಕನಸು ಕಾಣುವುದರಲ್ಲಿ ತಪ್ಪೇನಿಲ್ಲ...

ಹಾಗೆ ಕಲ್ಪನೆಯ ಬಗ್ಗೆ ನೀವು ಹೇಳಿದ ಮಾತುಗಳು-

"ನಮಗಿಂತಲೂ ಚೆನ್ನಾಗಿ ಮಕ್ಕಳಿಗೆ ಅರ್ಥವಾಗುವುದೇನೆಂದರೆ ಕಲ್ಪನೆ ಎಂದಿಗೂ ವಾಸ್ತವ ಅಲ್ಲ ಎಂಬುದು. ಹಾಗಾಗಿಯೇ ಅದೇ ಮಗು ತನ್ನ ಅಪ್ಪ ಅಮ್ಮನೊಂದಿಗೆ ಪಕ್ಕದ ಮನೆಯ ಮಗು ಓಡಿಸುವಂತಹುದೇ ಸೈಕಲನ್ನು ತನಗೂ ಕೊಡಿಸುವಂತೆ ಹಠ ಹಿಡಿಯುವುದು "

- ಮಕ್ಕಳಿಗೆ ಅರ್ಥವಾಗುವುದು ಕೆಲವೊಮ್ಮೆ ದೊಡ್ಡವರಿಗೆ ಅರ್ಥವಾಗುವುದಿಲ್ಲ...ಈ ಮಾತು ಖಂಡಿತಾ ನಿಜ....

ಒಟ್ಟಾರೆ ತುಂಬಾ ಉತ್ತಮ ಲೇಖನ....ಇಷ್ಟ ಆಯಿತು ....
ಪಿಸುಮಾತು ಹೇಳಿದ್ದಾರೆ…
ಧನ್ಯವಾದಗಳು ಆಶೋಕ್ ಅವರೇ.
Suma ಹೇಳಿದ್ದಾರೆ…
e lekana kuda tumba chennagide sir. bahala olleya mahiti.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…