ವಿಷಯಕ್ಕೆ ಹೋಗಿ

ಮೂರ್ಛೆ ರೋಗದ ಬಾಲಚಂದ್ರನನ್ನು ಮರ ಹತ್ತಿಸುತ್ತಿದ್ದುದು !

ನಾವು ಏಳನೇ ತರಗತಿಯಲ್ಲಿ ಓದುವಾಗ ನಮ್ಮ ತರಗತಿಯಲ್ಲಿ ಸರಿಯಾಗಿ ಏಳು ವಿದ್ಯಾರ್ಥಿಗಳಿದ್ದೆವು. ಐದು ಜನ ಗಂಡು ಮತ್ತು ಎರಡು ಜನ ಹೆಣ್ಣು ಮಕ್ಕಳು. ನಾವು ಐದು ಜನರೂ ಬಹಳಾ ಒಗ್ಗಟ್ಟಾಗಿ ಇದ್ದು ನಮಗಿಂತಾ ಕಿರಿಯ ಹುಡುಗರನ್ನು ಚೆನ್ನಾಗಿ ತದುಕಿ ಒಂದು ಹದ್ದುಬಸ್ತಿನಲ್ಲಿ ಇಟ್ಟಿದ್ದೆವು. ನಮ್ಮಲ್ಲೊಬ್ಬ ಗೆಳೆಯ ಬಾಲಚಂದ್ರ. ಅವನಿಗೆ ಮೂರ್ಛೆ ರೋಗ ಇತ್ತು. ಇದ್ದಕ್ಕಿದ್ದಂಗೆ ಪ್ರಜ್ಞೆ ತಪ್ಪಿ ಬಿದ್ದು ಹೋಗುತ್ತಿದ್ದನು. ಹಾಗಾಗಿ ಅವನ ಹಿಂದೆ ಮುಂದೆ ನಾವ್ಯಾರಾದರೂ ಇದ್ದೇ ಇರುತ್ತಿದ್ದವು. ಹೆಚ್ಚಾಗಿ ಪ್ರಾರ್ಥನೆಗೆ ನಿಂತಾಗಲೇ ಅವನು ಬೀಳುತ್ತಿದ್ದುದು.

ಶನಿವಾರ ಶಾಲೆ ಬಿಟ್ಟ ನಂತರ ನಾವು ಸೀದಾ ಮನೆಗೆ ಹೋಗುತ್ತಿರಲಿಲ್ಲ. ಹೋದರೆ ಮುಳುಗಡೆಗೆ ಈಜು ಹೊಡೆಯಲು, ಇಲ್ಲಾಂದರೆ ಬೆಟ್ಟ ಗುಡ್ಡದಲ್ಲಿ ಆಯಾ ಕಾಲಕ್ಕೆ ಸಿಗುವ ಕಾಯಿ, ಹಣ್ಣುಗಳನ್ನು ಕಿತ್ತು ತಿನ್ನಲು ಹೊರಡುತ್ತಿದ್ದೆವು. ಅದು ಎಷ್ಟತ್ತರದ ಮರವಾದರೂ ಸರಿ, ಮುಳ್ಳು ಕಂಟಿಯಲ್ಲಿದ್ದರೂ ಸರಿ, ಬಿಡುತ್ತಿರಲಿಲ್ಲ.

ಮುಳುಗಡೆ ಸಮೀಪದಲ್ಲಿ ನಾಲ್ಕು ತೆಂಗಿನ ಮರಗಳು ಇದ್ದವು. ಅವು ಯಾರಿಗೂ ಸೇರಿದ ಮರಗಳಲ್ಲ. ಹಿಂದೆ ಅಲ್ಲಿ ಇದ್ದು ಲಿಂಗನಮಕ್ಕಿ ಅಣೆಕಟ್ಟು ಆದ ನಂತರ ಊರು ಮುಳುಗಿ ಹೋಗಿದ್ದು, ಅವರೆಲ್ಲಾ ಊರು ಬಿಟ್ಟು ಹೋಗಿದ್ದಾರೆ. ಆದರೇನಂತೆ, ಆ ತೆಂಗಿನ ಮರಗಳಲ್ಲಿ ಹುಲುಸಾಗಿ ಎಳನೀರು ಸಿಗುತ್ತಿತ್ತು. ಆದರೆ ನಾವೆಲ್ಲಾ ಬೇರೆ ಮರಗಳನ್ನು ಸಲೀಸಾಗಿ ಹತ್ತುತ್ತಿದ್ದವಾದರೂ ತೆಂಗಿನ ಮರ ಹತ್ತಲು ಬಾರದು. ಅದು ಬರುವುದು ಬಾಲಚಂದ್ರನೊಬ್ಬನಿಗೇ! ಹಾಗಾಗಿ ಅವನನ್ನೇ ಮರ ಏರಿಸಿ ಕಾಯಿ ಕೀಳಿಸುತ್ತಿದ್ದವು. ಮರ ಏರಿದ ಸಮಯ ಏನಾದರೂ ಮೂರ್ಛೆ ಬಂದರೆ ಗತಿಯೇನು? ಎಂದು ನಾವ್ಯಾರೂ ಯೋಚಿಸುತ್ತಿರಲಿಲ್ಲ. ಮೊದಲಿಗೆ ಅವನೂ ಯೋಚಿಸುತ್ತಿರಲಿಲ್ಲ. ಸರಸರನೆ ಮರವೇರಿ ಕಾಯಿಗಳನ್ನು ಕಿತ್ತು ಕೆಳಗೆಸೆಯುತ್ತಿದ್ದ.  ಪುಣ್ಯಕ್ಕೆ ಯಾವತ್ತೂ ಹಾಗೆ ಆಗಲಿಲ್ಲ. ಬಾಲಚಂದ್ರ ಈಗ ಸಾಗರದಲ್ಲಿ ಅಂಗಡಿ ಹಾಕಿಕೊಂಡಿದ್ದಾನೆ.

ಕಾಮೆಂಟ್‌ಗಳು

ashokkodlady ಹೇಳಿದ್ದಾರೆ…
ಮೂರ್ಛೆ ರೋಗದ ನಿಮ್ಮ ಗೆಳೆಯನನ್ನು ಮರ ಹತ್ತಿಸುತಿದ್ದ ನಿಮ್ಮ ಧೈರ್ಯಕ್ಕೂ, ಮರ ಹತ್ತುವ ಅವರ ಧೈರ್ಯಕ್ಕೂ ಮೆಚ್ಚಲೇಬೇಕು.....ಇದನ್ನು ಓದಿ ನಾನು ಶಾಲೆಗೆ ಹೋಗುವಾಗ ಸ್ನೇಹಿತರೊಂದಿಗೆ ಸೇರಿ ಮಾಡುತಿದ್ದ 'ಕಿತಾಪತಿ' ಗಳ ನೆನಪಾಯಿತು...
Shreepathi Gogadige ಹೇಳಿದ್ದಾರೆ…
ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು ಅಶೋಕ್ ಅವರಿಗೆ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…