ವಿಷಯಕ್ಕೆ ಹೋಗಿ

ಎಲ್ಲಾರ್ನೂ ಕಾಯೋ ದೇವ್ರೇ, ನೀ ಎಲ್ಲಿ ಕುಂತಿದ್ದಿ ?


ನಿಜವಾಗಿಯೂ ದೇವರಿದ್ದಾನೆಯೇ? ಎಂದು ಆಸ್ತಿಕರನ್ನು ಕೇಳಿದರೆ ಹೌದು ಎನ್ನುತ್ತಾರೆ. ತೋರಿಸಿ ಎಂದರೆ ಅವರಿಂದ ಅದು ಸಾಧ್ಯವಿಲ್ಲ. ಆದರೆ ಲೋಕದ ಸೃಷ್ಠಿ, ಅನಂತ ವಿಶ್ವ, ವಿಜ್ಞಾನಕ್ಕೂ ಬೇಧಿಸಲಾಗದ ಸಾವಿರಾರು ವಿಷಯಗಳನ್ನು ಕಂಡಾಗ `ದೇವರು ಇರಬಹುದೇ?' ಎಂಬ ಸಂದೇಹ ಮೂಡದಿರದು. ಯಾವ ಯಾವುದೋ ವಿಷಯಗಳತ್ತ ಸಂಶೋಧನೆ ನಡೆಸುವ ವಿಜ್ಞಾನಿಗಳು ದೇವರಿದ್ದಾನೆಯೇ ಎಂಬುದನ್ನು ಸಂಶೋಧಿಸಲು ಮುಂದಾಗಿಲ್ಲ! ದೇವರನ್ನು ಕಣ್ಣಾರೆ ಕಂಡವರು ಎಲ್ಲೂ ದೊರಕುವುದಿಲ್ಲ. ಆದರೂ ಅದರ ಅನುಭೂತಿಯಾದುದರ ಬಗ್ಗೆ ಅಲ್ಲಲ್ಲಿ ಕೇಳಿಬರುವುದುಂಟು. ಅದು ಅವರವರ ಭ್ರಮೆಯೇ? ಅಥವಾ ನಿಜವೇ? ಉತ್ತರ ತಿಳಿದಿಲ್ಲ. 

ಅನಾದಿ ಕಾಲದಿಂದ ಹೇಗೆ ದೇವರ ಅಸ್ತಿತ್ವ ನಂಬಿಕೆಯಲ್ಲಿ, ಸಂಪ್ರದಾಯದಲ್ಲಿ ಹಾಸು ಹೊಕ್ಕಾಗಿದೆಯೋ, ಹಾಗೆಯೇ ಅವಘಡಗಳೂ ಸಂಭವಿಸುತ್ತಾ ದೇವರ ಅಸ್ತಿತ್ವದ ನಂಬಿಕೆಯನ್ನೇ ಅಲ್ಲಾಡಿಸುತ್ತಾ ಬಂದಿವೆ. ನಾವು ಕಂಡಿರುವಂತೆಯೇ ಗುಜರಾತ್ ಭೂಕಂಪ, ಓರಿಸ್ಸಾ ಚಂಡಮಾರುತ, ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡ ತ್ಸುನಾಮಿ, ಕುಂಭಕೋಣಂ ಅಗ್ನಿ ದುರಂತದಲ್ಲಿ ಎಳೆ ಹಸುಳೆಗಳು ಸುಟ್ಟು ಕರಕಲಾದುದು `ದೇವರು ಇರಲು ಸಾಧ್ಯವೇ ಇಲ್ಲ' ಎಂಬ ನಾಸ್ತಿಕರ ಹೇಳಿಕೆಯನ್ನು ಪುಷ್ಟೀಕರಿಸುತ್ತವೆ.
ಆಸ್ತಿಕರಾದವರಿಗೆ ಅದನ್ನು ಅಷ್ಟು ಸುಲಭವಾಗಿ ಅರಗಿಸಿಕೊಳ್ಳಲಾಗದ ಕಾರ್ಯ. ಅದೇನೇ ನಡೆದರೂ ದೇವರಿಂದಲೇ ನಡೆಯುತ್ತಿದೆಯೆಂಬ ನಂಬುಗೆ. ಒಳ್ಳೆಯದೆಲ್ಲಾ ನಡೆಯುವಾಗ `ಎಲ್ಲಾ ದೇವರ ದಯೆ ಎಂದು ಧನ್ಯತೆಯಿಂದ ನುಡಿಯುವುದೂ, ದುಃಖ ಬಂದೆರಗುವಾಗ `ದೇವರಿಗೆ ಕಣ್ಣಿಲ್ಲ' ಎನ್ನುವುದೂ ಅನಾದಿ ಕಾಲದಿಂದಲೂ ನಡೆದು ಬಂದ ಆಸ್ತಿಕರ ಪಾಲಿನ ಅಭ್ಯಾಸ.

ಆದರೆ, ನೂರಾರು ತತ್ವಜ್ಞಾನಿಗಳೂ, ಚಿಂತನಶೀಲರೂ `ದೇವರಿದ್ದಾನೆಯೇ?' ಎಂಬ ಪ್ರಶ್ನೆಗೆ ಅವರದ್ದೇ ಆದ ಉತ್ತರ ಕಂಡುಕೊಂಡಿದ್ದಾರೆ. ದೇವರ ಅಸ್ತಿತ್ವವನ್ನು ಮೊದಲಿಗೆ ಪ್ರಕಾಂಡವಾಗಿ ಪ್ರಶ್ನಿಸಿದವರು ರಷ್ಯಾದ ತತ್ವಜ್ಞಾನಿ `ಡಾಸ್ಟಾಬೆಯಸ್ಕಿ.' ಅವರ ಕೃತಿ The Brothers karamazov ಎಂಬ ಕಾದಂಬರಿಯಲ್ಲಿ ಒಂದೆಡೆ ಐವಾನ್ ಹಾಗೂ ಅಲ್ಯೋಷಾ ಎಂಬ ಸಹೋದರರ ನಡುವೆ ವಾಗ್ವಾದ ನಡೆಯುತ್ತದೆ. ಐವಾನ್ ಒಬ್ಬ ನಾಸ್ತಿಕ. ಅಲ್ಯೋಷ ಆಸ್ತಿಕ. `ದೇವರಿಲ್ಲ' ಎಂದು ಸಾಧಿಸಲು ಐವಾನ್ ತೆಗೆದುಕೊಳ್ಳುವ ವಿಷಯ- `ಮಕ್ಕಳಿಗೆ ಬರುವ ಸಂಕಟ ಹಾಗೂ ಸಾವು!'

ಎಳೆಯ ಮಕ್ಕಳಿಗೆ ಪ್ರಪಂಚಾದ್ಯಂತ ಉಂಟಾಗುವ ಭಯಂಕರ ಸಾವು-ನೋವಿನ ಉದಾಹರಣೆ ನೀಡಿ `ದೇವರು ಇದನ್ನು ಹೇಗೆ ನೀಡಲು ಸಾಧ್ಯ?' ಎಂದು ಕೇಳುತ್ತಾನೆ. `ಅದನ್ನು ದೇವರೇ ನೀಡುವುದು ಎಂದಾದರೆ ಅಂತಹ ದೇವರನ್ನು ನಾನು ಧಿಕ್ಕರಿಸುತ್ತೇನೆ' ಎನ್ನುತ್ತಾನೆ ಐವಾನ್.

ಮತ್ತೆ ಮುಂದುವರಿದು `ದೇವರು ಎಲ್ಲವನ್ನು ತಿಳಿದಿರುವವನು. ಸೃಷ್ಠಿಕರ್ತ ಅವನೇ ಎಂದಾದರೆ, ಈ ಹಿಂಸೆಗಳ ಜವಾಬ್ದಾರಿಯನ್ನು ಅವನೇ ಹೊತ್ತುಕೊಳ್ಳಬೇಕಾಗುತ್ತದೆ. ಅಖಂಡ ವಿಶ್ವವನ್ನೂ ಸೃಷ್ಠಿಸಿದವನಿಗೆ ಅವಘಡಗಳನ್ನು ತಡೆಯುವುದು ಮಹಾ ಕೆಲಸವೇನಲ್ಲ. ಮುಂದೆ ನಡೆಯುವ ಸಮಾಚಾರವೂ ಅವನಿಗೆ ತಿಳಿಯುತ್ತದೆ ಎಂದಾದರೆ ಏಕೆ ಭಯಂಕರ ಅವಘಡಗಳನ್ನು ನಡೆಯದಂತೆಯೇ ತಡೆದುಬಿಡಬಾರದು?' ಎಂದು ಪ್ರಶ್ನಿಸುತ್ತಾನೆ. ಇದು ಸರಿಯಾದ ಪ್ರಶ್ನೆ ಕೂಡಾ. ಆದರೆ ಈ ಪ್ರಶ್ನೆಗಳಿಗೆ ಆಸ್ತಿಕರಿಂದ ಸಮರ್ಪಕ ಉತ್ತರ ಬಂದಿಲ್ಲ. ಬರಲು ಸಾಧ್ಯವೂ ಇಲ್ಲ. 

ಇನ್ನು ಕೆಲವು ಆಸ್ತಿಕರು ಕೆಲವೊಂದು ವಿತಂಡ ವಾದಗಳನ್ನು ಮುಂದಿಡುತ್ತಾರೆ. ಅವರು ಈ ಜನ್ಮವನ್ನು ಬಿಟ್ಟು ಹಿಂದಿನ ಜನ್ಮಕ್ಕೆ ತೆರಳುತ್ತಾರೆ. ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಈ ಜನ್ಮದಲ್ಲಿ ಈ ರೀತಿ ಕಷ್ಟ, ನಷ್ಟ, ನೋವಿಗೆ ಕಾರಣವಾಗಿದೆ ಅನ್ನುತ್ತಾರೆ. ಅಂದರೆ ಒಬ್ಬ ದೈವ ಭಕ್ತನನ್ನು ಒಬ್ಬ ಕ್ರೂರಿ ವಿನಾಕಾರಣ ಕೊಂದು ಹಾಕಿದರೆ ಅದು ಇವರ ಪ್ರಕಾರ ಸರಿ. ಆ ದೈವಭಕ್ತ ಹಿಂದಿನ ಜನ್ಮದಲ್ಲಿ ಏನೋ ತಾರಾತಿಗಡಿ ಮಾಡಿರುತ್ತಾನೆ. ಬಹುಶಃ ಹಿಂದಿನ ಜನ್ಮದಲ್ಲಿ ಇವನೇ ಮಹಾ ಕ್ರೂರಿಯಾಗಿದ್ದು ಇನ್ನೊಬ್ಬ ಸಭ್ಯನನ್ನು ಕೊಂದಿರುತ್ತಾನೆ. ಆದುದರಿಂದ ಇವನಿಗೆ ಈ ಜನ್ಮದಲ್ಲಿ ಶಿಕ್ಷೆ ಆಯ್ತು ಅಂತಲೇ ಇಟ್ಟುಕೊಳ್ಳೋಣ. ದೇವರು ಈಸ್ ಗ್ರೇಟ್! ಆದರೆ ಈಗ ಕೊಲೆಗಾರನಾಗಿರುವ ವ್ಯಕ್ತಿಗೆ ಮುಂದಿನ ಜನ್ಮದಲ್ಲಿ ಶಿಕ್ಷೆ ಇರಬಾರದಲ್ಲವೇ? ಏಕೆಂದರೆ ಅವನು ಆ ಸಭ್ಯನನ್ನು ಕೊಂದಿರುವುದು ದೇವರ ಇಚ್ಚೆ ಮೇರೆಗೆ. ಆದುದರಿಂದ ಇವನಿಗೆ ಯಾವುದೇ ಶಿಕ್ಷೆ ಬರುವುದಿಲ್ಲ ಅಂತಾಯ್ತು. ಹೀಗಾದಾಗ ಈ ಶಿಕ್ಷೆಯ ಚಕ್ರ ಬೇಗನೆ ಮುಗಿದು ಹೋಗಿರಬೇಕಿತ್ತು. 

ಆದರೆ ಇಂದಿಗೂ ಕೊಲೆ, ಸುಲಿಗೆ, ಮೋಸ ವಂಚನೆಗಳು ನಿಂತಿಲ್ಲ. ಅಮಾಯಕರ ಸಾವು-ನೋವು ನಿಂತಿಲ್ಲ. ಇದಕ್ಕೆಲ್ಲಾ ಕಾರಣ ಏನು? ದೇವರು ಯಾಕೆ ಹೀಗೆ ಮಾಡುತ್ತಾನೆ? ಇಂದು ದೇವರ ಹೆಸರಲ್ಲೇ ಎಷ್ಟೊಂದು ಮಾರಣ ಹೋಮಗಳು ನಡೆಯುತ್ತಿಲ್ಲ? ಮನುಷ್ಯರು ತಪ್ಪು ಮಾಡುವವರೆಗೂ ಸುಮ್ಮನಿದ್ದು ಆಮೇಲೆ ಶಿಕ್ಷೆ ನೀಡುವುದಾದರೆ ಇದೊಂಥರ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರ ನೀತಿ ಆಗಿ ಹೋಯ್ತಲ್ಲವೇ? ಮನುಷ್ಯರು ತಪ್ಪು ಮಾಡುವಾಗಲೇ ತಡೆಯುವ ಶಕ್ತಿ ದೇವರಿಗೆ ಇಲ್ವಾ ?
ಸಾವಿರಾರು ವರ್ಷದಿಂದಲೂ ಮನುಷ್ಯ ಹಿಂಸಾವಾದಿಯಾಗಿದ್ದಾನೆ. ಸಹ ಪ್ರಾಣಿಗಳನ್ನು ಹಿಂಸಿಸುತ್ತಾನೆ. ಅವನ್ನು ಬೇಟೆಯಾಡಿ ತಿನ್ನುತ್ತಾನೆ . ಮನುಷ್ಯನನ್ನೇ ಹಿಂಸಿಸುತ್ತಾನೆ. ವಿನಾಕಾರಣ ಕೊಲ್ಲುತ್ತಾನೆ. ಆ ಪ್ರಾಣಿಗಳು ಏನು ಪಾಪ ಮಾಡಿದ್ದವು? ಹಿಂಸೆಗೊಳಗಾಗಿ ಸತ್ತವರ ಪಾಡೇನು? ಹಿಂಸೆ ನೀಡಿದವರಿಗೆ ಶಿಕ್ಷೆಯೇನು? ದೇವರೇ ಸೃಷ್ಠಿಸಿದ ಈ ಭೂಮಿಯೇಕೆ ಈ ರೀತಿ ವರ್ತಿಸುತ್ತಿದೆ? ಜ್ವಾಲಾಮುಖಿಗಳು ಸಿಡಿಯುವುದೇಕೆ? ಚಂಡ ಮಾರುತ ಬೀಸುವುದೇಕೆ? ಕಡಲು ಉಕ್ಕುವುದೇಕೆ? ಬೆಂಕಿಯೆಂಬ ಬೆಂಕಿ ಚಿಕ್ಕ ಕಂದಮ್ಮಗಳನ್ನು ಬಿಡದೇ ಸುಟ್ಟು ಹಾಕುವುದೇಕೆ? ಈ ಎಲ್ಲಾ ಪ್ರಕೃತಿ ವಿಕೋಪಗಳನ್ನು ದೇವರಿಂದ ತಡೆಯಲಾಗದೇ? ಅವನೇ ಸೃಷ್ಠಸಿದ ಪ್ರಕೃತಿಯನ್ನು ಅವನೇ ನಿಯಂತ್ರಿಸಬಹುದಲ್ಲ? ಅದು ಸಾಧ್ಯವಿಲ್ಲ ಅಂದ ಮೇಲೆ ಅವನ್ಯಾವ ಸೀಮೆ ದೇವರು?

ಕ್ಯಾನ್ಸರ್, ಕಾಲರಾ, ಪ್ಲೇಗ್ ಮುಂತಾದ ಸಾವಿರಾರು ರೋಗಗಳಿಗೆ ಬಲಿಯಾಗಿ ಒಳ್ಳೆಯವರೂ, ಮೇಲಾಗಿ ಆ ದೇವರ ಭಕ್ತರೂ ಸಾಯುತ್ತಾರಲ್ಲ? ಈ ಒಳ್ಳೆಯವರು ಅಂದರೆ ಯಾರು? ಯಾರಿಗೆ ಏನೂ ಕೆಡುಕನ್ನುಂಟು ಮಾಡದವನೂ ಕೆಲವರಿಗೆ ಕೆಟ್ಟವನಾಗಿ ಇರುತ್ತಾನೆ. ಪ್ರಾಮಾಣಿಕರಾದವರೂ ಸಹ ಹಲವರ ಪಾಲಿಗೆ ದುಃಸ್ವಪ್ನವಾಗಿ ಕಾಡುತ್ತಿರುತ್ತಾರೆ. ಈ ಒಳ್ಳೆಯತನಕ್ಕೆ ಮಾನದಂಡ ಯಾವುದು? ಹೀಗೆ ದೇವರಿಗೆ ವಿರುದ್ಧವಾಗಿ, ದೇವರಿದ್ದಾನೆ ಎಂದು ಹೇಳುವವರ ಮುಂದೆ ಸಾವಿರಾರು ಪ್ರಶ್ನೆಗಳನ್ನಿರಿಸಬಹುದು. ಇಂಥಹ ಪ್ರಶ್ನೆಗಳಿಗೆ ಸಾಮಾನ್ಯ `ಆಸ್ತಿಕರಾದಂತಹ ಯಾರಿಗೂ ಉತ್ತರಿಸಲು ಸಾಧ್ಯವಿಲ್ಲ. 

ಆದರೂ ನಡೆಯುವುದಕ್ಕೆಲ್ಲಾ ಕಾರಣನಾದ ದೇವರು ಎಂಬ ಶಕ್ತಿಯೊಂದು ಖಂಡಿತಾ ಇದೆಯೆಂದೇ ಎಲ್ಲರೂ ನಂಬುತ್ತಾರೆ. ಒಳ್ಳೆಯದು - ಕೆಟ್ಟದು ಎಲ್ಲಾ ಅವನಿಗೆ ಬಿಟ್ಟಿದ್ದು ಎಂದು ಹೇಳುವ ಮೂಲಕ ಜವಾಬ್ದಾರಿಯನ್ನು ಅವನ ತಲೆ ಮೇಲೆ ಎಳೆದು ನುಣುಚಿಕೊಳ್ಳುತ್ತಾರೆ. `ಅಖಂಡ ವಿಶ್ವವನ್ನೇ ಸೃಷ್ಠಿಸಿರುವ ದೇವರು, ಒಳ್ಳೆಯವನಾಗಿ, ತಾಯಿಯಂತೆ ಸಹನಾಶೀಲನಾಗಿ, ಕರುಣಾಳುವಾಗಿ ಇರಬೇಕು. ಮಾನವಳಾದ ತಾಯಿಯೇ ಮಗುವಿನ ಎಲ್ಲಾ ತಪ್ಪುಗಳನ್ನು ಮನ್ನಿಸುವಾಗ ಮಹಾತ್ಮನಾದ ದೇವರು ಯಾಕೆ ಹೀಗೆ ಎಲ್ಲರನ್ನೂ ಗೋಳು ಹೊಯ್ದುಕೊಳ್ಳುತ್ತಾನೆ? ಎನ್ನುತ್ತಾರೆ `ಥಾಮಸ್ ಅಕ್ವಿನಾಸ್' ಎಂಬ ಜ್ಞಾನಿ. 

ಆಸ್ತಿಕರ ಇನ್ನೊಂದು ವಾದ ಈ ರೀತಿ ಇದೆ. ಒಂದು ವೇಳೆ ಒಳ್ಳೆಯದು - ಕೆಟ್ಟದು, ಬಿಸಿಲು - ನೆರಳು, ಧನಾತ್ಮಕ -ಋಣಾತ್ಮಕಗಳಿರುವಂತೆಯೇ ಏಕೆ ಎರಡು `ಶಕ್ತಿಗಳು ಇರಬಾರದು? ನಾವು ನಂಬಿರುವಂತಹ ದೇವರು ಒಳ್ಳೆಯವನೇ ಇರಬಹುದು. ಆದರೆ, ಇಲ್ಲಿ ನಡೆಯುತ್ತಿರುವ ಕೆಟ್ಟದ್ದಕ್ಕೆಲ್ಲಾ ಕಾರಣವಾಗಿ ಯಾವುದಾದರೂ `ಕೆಟ್ಟ ದೇವರೂ ಒಬ್ಬನಿರಬಹುದೇ? ಅವರಿಬ್ಬರೊಳಗೆ ಹೋರಾಟ ಸಾಗಿರಬಹುದೇ? ಅಥವಾ ಒಬ್ಬನೇ ದೇವರಲ್ಲೂ ಈ ಎರಡೂ ಗುಣಗಳಿರಬಾರದೇಕೆ? ಈ ಆಧಾರದಲ್ಲಿಯೇ ಪ್ರೇತ, ಭೂತ, ಪಿಶಾಚಿ, ದೆವ್ವ, ಡಾಕಿಣಿಗಳಂತಹ ಕಲ್ಪನೆಗಳು ಹುಟ್ಟಿಕೊಂಡಿರುವುದು.

ಮಂಗನಿಂದ ಮಾನವನಾದ ಎಂಬುದರಲ್ಲಿ ಯಾವ ಸಂದೇಹವೂ ಯಳಿದಿಲ್ಲ. ಆ ಸ್ಥಿತಿಯಿಂದ ಈ ಸ್ಥಿತಿಗೆ ಬೆಳೆದಿದ್ದಾನೆ ಮಾನವ. ಎಷ್ಟೋ ರೋಗಗಳಿಗೆ ಮದ್ದು ಕಂಡು ಹಿಡಿದಿದ್ದಾನೆ. ಸಾವನ್ನೂ ಕೆಲವೊಮ್ಮೆ ಮುಂದೆ ಹಾಕುತ್ತಾನೆ. ನೋವು ನಿವಾರಕ ಕಂಡು ಹಿಡಿದಿದ್ದಾನೆ. ಚಂದ್ರನಲ್ಲಿಗೂ ಹೋಗಿ ಬರುತ್ತಾನೆ. ಮಂಗನ ಸ್ಥಿತಿಯಿಂದ ಈ ಸ್ಥಿತಿಗೆ ಬೆಳೆದಿರುವಾಗ, ಇಷ್ಟೆಲ್ಲಾ  ಸಾಧ್ಯವಾಗಿರುವಾಗ ಮುಂದೊಂದು ದಿನ ತ್ಸುನಾಮಿಯನ್ನೂ ತಡೆಯುವ ಶಕ್ತಿ ಮಾನವನಿಗೆ ಬಂದರೂ ಅಚ್ಚರಿಯಿಲ್ಲ. ಅಥವಾ ದೇ ತ್ಸುನಾಮಿ, ಜ್ವಾಲಾಮುಖಿಗಳಿಂದಾಗಿ ಇಡಿಯ ಜೀವ ಕುಲವೇ ಅಳಿದು ಹೋದರೂ ದೇವರು ಬಂದು ಕಾಪಾಡಲಾರ.

ಇನ್ನು ಕೆಲವರ ವಿಚಾರಧಾರೆ ಏನೆಂದರೆ ದೇವರು ಇದ್ದಾನೆ, ಆದರೆ ಆತ ಸರ್ವಶಕ್ತನೇನಲ್ಲ. ಅವನಿಗೂ ಕೆಲವು ಇತಿ ಮಿತಿಗಳಿವೆ. ಅದು ರಾಮ, ಕೃಷ್ಣರ ಕಾಲದಲ್ಲೇ ಸಾಬೀತಾಗಿದೆ. ರಾಮನಿಂದ ವನವಾಸವನ್ನು ತಪ್ಪಿಸಿಕೊಳ್ಳಲಾಗಲಿಲ್ಲ. ಕೃಷ್ಣನಿಂದ ಯುದ್ಧವನ್ನು ತಡೆಯಲಾಗಲಿಲ್ಲ. ತಾಯಿಯೊಂದಿಗೆ ಸಂಪರ್ಕವಿರುವ ಹೊಕ್ಕಳ ಬಳ್ಳಿಯನ್ನು ಹರಿದು ಹಾಕದೇ ಮಗುವೊಂದು ಬೆಳೆಯಲು ಸಾಧ್ಯವೇ? ತನ್ನ ಮಗು ಬೆಳೆಯುತ್ತಾ ಹೋದಂತೆ ತಾಯಿ ಅವನಿಗೆ ಬುದ್ಧಿವಾದ ಹೇಳಿ, ವಿದ್ಯೆ ಕಲಿಸುತ್ತಾಳೆ. ಬುದ್ಧಿ ಬೆಳೆದಂತೆ ಅವನೇ ಸ್ವತಂತ್ರವಾಗಿ ಉತ್ತಮ ವ್ಯಕ್ತಿಯಾಗಿ ಬೆಳೆದು ನಿಲ್ಲಲಿ ಎಂದು ಆಶಿಸುತ್ತಾಳೆ. ಒಂದು ವೇಳೆ ಅವನು ಕೆಟ್ಟವನಾದರೆ ಆ ತಾಯಿ ನೊಂದುಕೊಳ್ಳುತ್ತಾಳೆ. ಹಾಗೆಯೇ ದೇವರ ಸ್ಥಿತಿಯೂ ಏಕೆ ಆಗಿರಬಾರುದ? ಪ್ರಪಂಚವನ್ನೇ ಸೃಷ್ಠಿಸಿದ ಎಂದ ಮಾತ್ರಕ್ಕೆ `ಸರ್ವಶಕ್ತ ಎಂದು ಕೊಳ್ಳಬಹುದೇ?

ಅಥವಾ, ಆರಿಸಿಕೊಳ್ಳಲಿಕ್ಕೆ, ನೂರಾರು ದಾರಿಗಳನ್ನು ನಮ್ಮ ಮುಂದೆ ಇರಿಸಿ, ಹೀಗಿದೆ ಸಮಾಚಾರ. ನೀನೀಗ ಯಾವುದನ್ನು ಆಯ್ಕೆ ಮಾಡುತ್ತೀಯಾ? ಎಂದು ಆ ದೇವರು ನಮಗೆ ಕೇಳುತ್ತಿರಬಹುದೇ? ನಿಧರ್ಾರ ಕೈಗೊಳ್ಳಲು ನಮಗೆ ಪ್ಲಸ್-ಮೈನಸ್, ಒಳ್ಳೆಯದು-ಕೆಟ್ಟದು, ಬುದ್ಧಿವಂತಿಕೆ-ದಡ್ಡತನ, ಕೋಪ-ಸಂಯಮ ಹೀಗೆ ಎರಡೆರಡು ದಾರಿಗಳಿರುತ್ತವೆ. ಬಿಸಿಲೇ ಇಲ್ಲದಿದ್ದರೆ ನೆರಳು ಹೇಗೆ? ಹಗಲೇ ಇಲ್ಲವೆಂದರೆ ರಾತ್ರಿಯೆಲ್ಲಿ? ಕೆಟ್ಟವರೇ ಇಲ್ಲವೆಂದರೆ ಒಳ್ಳೆಯದು ಎಂಬುದಕ್ಕೆ ಅರ್ಥವೇನು? ಆದ್ದರಿಂದಲೇ ಲೋಕದಲ್ಲಿ ಎರಡೂ ಇದೆ. ಎನ್ನುವುದು ಅವರ ವಾದ. ಆದರೆ ಅರಗಿಸಿಕೊಳ್ಳುವುದು ಕಷ್ಟ.

ದೇವರು ನಮ್ಮನ್ನು ಪಂಜರದೊಳಗೆ ಕೂಡಿ ಹಾಕಿಲ್ಲ. ಸರ್ವ ಸ್ವತಂತ್ರ್ಯವೂ ನಮಗಿದೆ. ಆದ್ದರಿಂದ ನಾವೇ ನಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿ ಕೊಂಡು ಬದುಕಬೇಕು. ಹಾಗೆ ಬದುಕಿ ತೋರಿಸಿದವರು ನೂರಾರು ಜನ. ಗಾಂಧಿ, ಬುದ್ಧ, ಸರ್ವಜ್ಞ ಮುಂತಾದ ಸಾವಿರಾರು ಜನರನ್ನು ಕಾಣುತ್ತೇವೆ. ಕಿರಿಯ ಮಟ್ಟದಲ್ಲಾದರೂ ಆ ಸಾಧನೆಯನ್ನು ನಾವು ಮಾಡಲಾಗದೇ? ಶೌರ್ಯ, ತ್ಯಾಗ, ಗುರಿ, ವಿಶ್ವಾಸ ಇವ್ಯಾವೂ ಇಲ್ಲದ ಒಬ್ಬ ವ್ಯಕ್ತಿ ಯಾವ ಜೀವಿಗೂ ಕಿಂಚಿತ್ತೂ ನೋವುಂಟು ಮಾಡದೇ ತನ್ನ ಪಾಡಿಗೆ ತಾನು ಒಂದು ಮೂಲೆಯಲ್ಲಿ ಬಿದ್ದುಕೊಂಡಿದ್ದರೆ ಅವನು ಒಳ್ಳೆಯವನೆಂದು ಅರ್ಥವೇ? `ಮರಣವೆಂಬುದೇ ಇಲ್ಲವಾದರೆ `ಹುಟ್ಟು ಅರ್ಥ ಕಳೆದುಕೊಳ್ಳುತ್ತದೆ. ಆಸೆ ಇಲ್ಲದೇ ಹೋದರೆ ತ್ಯಾಗಕ್ಕೆ ಬೆಲೆಯಿಲ್ಲ. ನೋವು ಇಲ್ಲವೆಂದರೆ `ನಲಿವು ಎಂಬುದಿರಲು ಸಾಧ್ಯವಿಲ್ಲ. ಸಾವು ಇಲ್ಲದೇ ಹೋದರೆ ಯಾರಿಗೂ ಗುರಿಯಿರುವುದಿಲ್ಲ. ಬದುಕಿನ ನೀತಿಯಿರುವುದಿಲ್ಲ. ಬಾಳಿಗೆ ಅರ್ಥವೇ ಇರುವುದಿಲ್ಲ. 

ಎಲ್ಲರೂ ಸರಿಯಾಗಿ ನೂರು ವರ್ಷವೇ ಬದುಕುವುದಾದರೆ, ಏನೇ ಆದರೂ ಸಾಯುವುದಿಲ್ಲವೆಂದಾದರೆ ಆ ನೂರು ವರ್ಷವನ್ನು ಜನ ಹೇಗೆ ಬದುಕಬಹುದೋ ಯೋಚಿಸಿ! ದುಡಿಯದೇ, ಸೋಮಾರಿಗಳಾಗಿ, ಏನೂ ಮಾಡದೇ ಬದುಕುತ್ತಾರೆ. `ಸಾವು ಆಕಸ್ಮಿಕವಾದುದರಿಂದಲೇ ಅಲ್ಲವೇ ನಮ್ಮ ಬದುಕಿಗೆ ಇಷ್ಟೊಂದು ಮಹತ್ವವಿರುವುದು? ಸಾವು ಇಲ್ಲದೇ ಹೋದರೆ ಬದುಕು ನಿಸ್ತೇಜವಾಗಿ, ಬೇಸರ ಹುಟ್ಟಿ ಸಾಯಲೂ ಸಾಧ್ಯವಿಲ್ಲದೇ... ಅದೆಂತಹ ಹಿಂಸೆಯೆಂಬುದನ್ನು ಯೋಚಿಸಿ!

ನೋವು-ನಲಿವು, ಕಷ್ಟ-ಸುಖಗಳನ್ನು ಅನುಭವಿಸದ ಬದುಕು ಬದುಕೇ ಅಲ್ಲ. ಯಾವುದೇ ನೋವು, ಕಷ್ಟಗಳನ್ನು ಅನುಭವಿಸದವನಿಗೆ ಸುಖದ ಅನುಭವ ಆಗುವುದದರೂ ಹೇಗೆ? ಹಿಂಸೆಗೆ, ಕೆಟ್ಟದ್ದಕ್ಕೆಲ್ಲಾ ಎದುರಾಗಿ ನಾವೆಷ್ಟರ ಮಟ್ಟಿಗೆ ಹೋರಾಡುತ್ತೇವೆ? ಹೇಗೆ ಬದುಕುತ್ತೇವೆ ಎಂಬುದರ ಮೇಲೆಯೇ ನಮ್ಮ ಬದುಕಿನ ನಿಜವಾದ ಅರ್ಥವಿದೆ.

ಇಂದಿರುವ ನಾವು ಮರು ಕ್ಷಣದಲ್ಲಿ ಸಾಯಬಹುದು. ಆದರೆ ಅದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. ಬದುಕಿರುವಷ್ಟು ಕಾಲ ಸಾಧನೆಯನ್ನೇನಾದರೂ ಮಾಡಿದ್ದೇವೆಯೇ? ಒಳ್ಳೆಯವರಾಗಿ ಬದುಕಿದ್ದೇವೇಯೇ ಎಂಬುದಷ್ಟೇ ಮುಖ್ಯ. ಹಾಗಾಗಿ ದೇವರು ಇರಲಿ ಬಿಡಲಿ ಅವನನ್ನು ನೆಚ್ಚಿಕೊಳ್ಳದೇ ನಮ್ಮಷ್ಟಕ್ಕೆ ನಾವು ಬದುಕುವುದರಲ್ಲೇ ಇದೆ ಸುಂದರ ಬದುಕು. ಎಲ್ಲರಿಗೂ ಎಲ್ಲಿ ಸಿಕ್ಕಿ ಹೋಗುತ್ತೆ ಸುಂದರ ಬದುಕು? ಎಂದು ಕೇಳಬಹುದು. ಇಲ್ಲಿ ಸುಂದರ ಅಂದರೆ ಸುಖಮಯ ಎಂದೇನೂ ಅರ್ಥವಲ್ಲ. ನೋವು ನಲಿವುಗಳಿರುವ ಸಾಹಸಮಯ, ಕ್ಲಿಷ್ಟ - ಸರಳ ಸಮ್ಮಿಶ್ರಗಳ ಸಮಾಗಮದ ಬದುಕೇ ಸುಂದರ. ಕಷ್ಟವನ್ನೂ ಪ್ರೀತಿಯಿಂದ ಸ್ವೀಕರಿಸಿದರೆ ಕಷ್ಟ ಕೂಡಾ ಮಧುರವೇ! ಎಂದಿದ್ದಾರೆ ದಾರ್ಶನಿಕರು.  

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…