ವಿಷಯಕ್ಕೆ ಹೋಗಿ

ಬಡ ಮಕ್ಕಳಿಗೆ ಆಂಗ್ಲ ಮಾಧ್ಯಮ ಯಾಕೆ ಬೇಡ ?


ಗೌರವಾನ್ವಿತ ಸಾಹಿತಿಗಳು ಸ್ವಲ್ಪ ಯೋಚಿಸಬೇಕಾಗಿದೆ.. ಸರ್ಕಾರವು ಆರನೇ ತರಗತಿಯಿಂದ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಲು ಹೊರಟರೆ ಅದನ್ನು ಇವರು ಯಾಕೆ ವಿರೋಧಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿಲ್ಲ. ಸಾಹಿತಿಗಳು ಹೇಳುತ್ತಿರುವ ಕಾರಣ "ಕನ್ನಡಕ್ಕೆ ಧಕ್ಕೆ!". ಇದನ್ನು ಸ್ವಲ್ಪ ವಿವೇಚಿಸೋಣ.

ನಿಜ, ಕನ್ನಡಕ್ಕೆ ತೊಂದರೆ ಆಗಬಹುದು. ಆದರೆ ಸರ್ಕಾರ ಆಂಗ್ಲ ಮಾಧ್ಯಮ ತರಲು ಹೊರಟಿರುವುದು ಸರ್ಕಾರಿ ಶಾಲೆಗಳಲ್ಲಿ. ಅಂದರೆ ನಿಸ್ಸಂಶಯವಾಗಿ ಅಲ್ಲಿ ಓದುತ್ತಿರುವ ಮಕ್ಕಳು ( ಕನಿಷ್ಟ ೯೫% ) ಬಡ ಮಕ್ಕಳೇ ಹೊರತೂ ಶ್ರೀಮಂತರಲ್ಲ. ಇಂದು ಹಳ್ಳಿಯ ಅಲ್ಪಸ್ವಲ್ಪ ಹಣವಂತರೂ ಸಹ ತಮ್ಮ ಮಕ್ಕಳನ್ನು ಹತ್ತಿರದ ಪಟ್ಟಣದ ಆಂಗ್ಲ (ಖಾಸಗಿ) ಶಾಲೆಗಳಿಗೆ ಕಳಿಸುತ್ತಿದ್ದಾರೆ. ಇದರಿಂದಾಗಿ ಸರ್ಕಾರಿ ಶಾಲೆಗಳಿಗೆ ಮಕ್ಕಳಿಲ್ಲದೇ ಅವು ಮುಚ್ಚಿಕೊಳ್ಳುತ್ತಿವೆ. ಅಂದರೆ ದುಡ್ಡಿರುವ ಮಕ್ಕಳು ಆಂಗ್ಲ ಕಲಿತು ಬೆಂಗಳೂರಿನಂತಹ ನಗರದಲ್ಲಿ ಉತ್ತಮ ಕೆಲಸ ಹಿಡಿಯಲು ತಯಾರಾದರೆ ಬಡ ಮಕ್ಕಳು ಕನ್ನಡವನ್ನು ಮಾತ್ರ ಕಲಿತು ತೀರಾ ಕೆಳ ಮಟ್ಟದ ಕೆಲಸಗಳನ್ನೇ ನೆಚ್ಚಿಕೊಳ್ಳಬೇಕಾಗಿದೆ. ಏಕೆಂದರೆ ಬೆಂಗಳೂರಿನ ಚಿಕ್ಕದೊಂದು ರಿಯಲ್ ಎಸ್ಟೇಟ್ ಕಚೇರಿಗೆ ಸಹಾಯಕನಾಗಿ ಸೇರಲಿಕ್ಕೂ ಆಂಗ್ಲ ಬಂದರೆ ಹೆಚ್ಚು ಸಂಬಳ ಮತ್ತು ಅವಕಾಶವಿದೆ. ಅಷ್ಟೇಕೆ ಕೊನೆ ಪಕ್ಷ ದೊಡ್ಡದೊಂದ ಹೋಟೆಲಿನಲ್ಲಿ ಸರ್ವರ‍್ ಆಗಲಿಕ್ಕೂ ಆಂಗ್ಲ ಗೊತ್ತಿದ್ದರೆ ಸಂಬಳ ಜಾಸ್ತಿ ಸಿಗುತ್ತದೆ. ದೊಡ್ಡ ದೊಡ್ಡ ಸಂಸ್ಥೆಗಳಿಗೆ ಸೇರಲಿಕ್ಕಂತೂ ಆಂಗ್ಲ ಬೇಕೇ ಬೇಕು. ಸರ್ಕಾರಿ ನೌಕರಿಗೆ ಸೇರಲು ಲಂಚ ನಿಡಲೂ ಸಹ ಹಣ ಬೇಕು. ಸರ್ಕಾರಿ ಕೆಲಸಗಳನ್ನೂ ದುಡ್ಡಿರುವವರೇ ಹೊಡೆದುಕೊಳ್ಳುತ್ತಿದ್ದಾರೆ. ಯಡಿಯೂರಪ್ಪನಂತ ಮತಿಗೇಡಿಗಳಿಂದಾಗಿ ಅರವತ್ತು ವರ್ಷದ ವರೆಗೆ ಸರ್ಕಾರಿ ನೌಕರರು ಮೊಳೆ ಜಡಿದುಕೊಂಡು ಕೂರುವುದರಿಂದ ಬೇರೆಯವರಿಗೆ ಅವಕಾಶವಾದರೂ ಎಲ್ಲಿ ? ಅಂದರೆ ಉತ್ತಮ ಹುದ್ದೆ ಮತ್ತು ದುಡ್ಡು ಮತ್ತೆ ಹಣವಂತರ ಮಕ್ಕಳಿಗೇ ದೊರೆಯುವಂತಾಗುತ್ತದೆಯೇ ಹೊರತೂ ಬಡವರ ಮಕ್ಕಳು ಹೋಟೆಲು, ಬಾರ‍್ ಕೆಲಸಗಳಿಗೇ ಸೇರಬೇಕಾದ ಸ್ಥಿತಿ ಇದೆ.

ಇಂತಹ ಸಂದರ್ಭದಲ್ಲಿ ಕಾಗೇರಿಯವರು ಒಂದು ಉತ್ತಮ ಆದೇಶ ನೀಡಿದ್ದಾರೆ.  ಅವರ ಆದೇಶದಲ್ಲಿ ಏನು ತಪ್ಪಿದೆ ಸಾಹಿತಿಗಳೇ ? ಒಂದರಿಂದ ಐದನೇ ತರಗತಿಯವರೆಗೆ ಕನ್ನಡ ಕಲಿತಿರುವ ಮಕ್ಕಳು ಆರನೇ ತರಗತಿಯಿಂದ ಆಂಗ್ಲ ಮಾಧ್ಯಮ ಪಡೆದು ಆಂಗ್ಲವನ್ನೂ ಚೆನ್ನಾಗಿ ಕಲಿತರೆ ಅದರಿಂದ ಕನ್ನಡಕ್ಕೆ ಏನೂ ಧಕ್ಕೆ ಇಲ್ಲ. ಕನ್ನಡಕ್ಕೆ ಧಕ್ಕೆ ಬಂದಿರುವುದು ಯುಕೆಜಿ, ಎಲ್‌ಕೆಜಿ ಹಾಗೂ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮಕ್ಕೆ ಸೇರುವ ಮಕ್ಕಳಿಂದ. 

ಇಷ್ಟಕ್ಕೂ ಬಡವರ ಮಕ್ಕಳು ಮಾತ್ರ ಕನ್ನಡ ಉಳಿಸಲಿ, ಶ್ರೀಮಂತರ ಮಕ್ಕಳು ಆಂಗ್ಲ ಕಲಿತು ಉದ್ದಾರವಾಗಲಿ ಅನ್ನುವ ಸಾಹಿತಿಗಳ ಉದ್ದೇಶ ನ್ಯಾಯ ಸಮ್ಮತವಲ್ಲ. ಕನ್ನಡಾಭಿಮಾನ ಎಲ್ಲರಲ್ಲೂ ಬೆಳೆಯುವಂತಹ ಹೋರಾಟಗಳನ್ನು ಇವರು ರೂಪಿಸುವುದು ಬಿಟ್ಟು ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಲು ಹೊರಟಿದ್ದಾರೆ. ಇವರಲ್ಲಿ ಎಷ್ಟು ಜನ ಸಾಹಿತಿಗಳ ಮಕ್ಕಳು ಕನ್ನಡ ಸರ್ಕಾರಿ ಶಾಲೆಯಲ್ಲೇ ಕಲಿತಿದ್ದಾರೆ ? ಬಡವರ ಸ್ಥಿತಿ ಇವರಿಗೇನು ಅರ್ಥವಾಗಿದೆ ? "ಭಾಷೆಗಿಂತಲೂ ಮೊದಲು ಹೊಟ್ಟೆಪಾಡು ಮುಖ್ಯವಾಗುತ್ತದೆ" ಎಂದು ಪೂರ್ಣಚಂದ್ರ ತೇಜಸ್ವಿಯವರೇ ಹೇಳಿದ್ದರು. ಆದರೂ ಬಡವರನ್ನು ಮಾತ್ರ ಆಂಗ್ಲದಿಂದ ದೂರವಿಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಹಿಂದಿ ಹೇರಿಕೆ ವಿರುದ್ಧ ಮಾತ್ರ ಈ ಸಾಹಿತಿಗಳು ಸೊಲ್ಲೆತ್ತಿದ್ದು ಇದುವರೆಗು ಕಂಡು ಬಂದಿಲ್ಲ.

ಕನ್ನಡವನ್ನು ಉಳಿಸಲು ಆಂಗ್ಲ ಮಾಧ್ಯಮ ವಿರೋಧಿಸುವ ಇವರು ಮೊದಲು ಕಡ್ಡಾಯವಿರುವ ಹಿಂದಿಯನ್ನು ಐಚ್ಚಿಕ ವಿಷಯವಾಗುವಂತೆ ಹೋರಾಡಲಿ. ಹಿಂದಿಯನ್ನು ಅನಗತ್ಯವಾಗಿ ಹೇರಿಕೆ ಮಾಡಲಾಗಿದೆ. ಇದರಿಂದ ಹಳ್ಳಿಯ ಕನ್ನಡದ ಬಡ ಮಕ್ಕಳು ಮೂರು ಭಾಷೆಯನ್ನು ಕಲಿಯಲಾಗದೇ ತೊಳಲಾಡುತ್ತಿದ್ದಾರೆ. ಹಿಂದಿಯನ್ನು ಕಿತ್ತೊಗೆದರೆ ಕನ್ನಡ ಮತ್ತು ಆಂಗ್ಲವನ್ನು ಚೆನ್ನಾಗಿ ಕಲಿತು ಉತ್ತಮ ಕೆಲಸ ಹಿಡಿದು ಉದ್ದಾರವಾಗಲು ಅನುಕೂಲವಾಗುತ್ತದೆ. ಹಾಗೂ ಕರ್ನಾಟಕ ಸರ್ಕಾರಿ ನೌಕರಿಯು ಕನ್ನಡ ಮಾಧ್ಯಮದಲ್ಲಿ ಕಲಿತವರಿಗೇ ಮೀಸಲಾಗುವಂತೆ ಹೋರಾಡಲಿ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…