ವಿಷಯಕ್ಕೆ ಹೋಗಿ

ಬೆಂಗಳೂರು ಮಹಾನಗರ ಪಾಲಿಕೆಯ ಒತ್ತುವರಿ ಭೂಮಿ ತೆರವು ಯಾವಾಗ ?


ಪಾಲಿಕೆಯ ಸಾವಿರಾರು ಎಕರೆ ಭೂಮಿ ಬಲಾಢ್ಯರಿಂದ ಅತಿಕ್ರಮಣವಾಗಿದೆಯೆಂಬುದು ಅಂಗೈ ಹುಣ್ಣಿನಷ್ಟೇ ಸ್ಪಷ್ಟ. ಒತ್ತುವರಿಯಲ್ಲಿ ಜನಪ್ರತಿನಿಧಿಗಳ ಬೇನಾಮಿ ವಂಚನೆ ಇರದೆ ಇವೆಲ್ಲಾ ನಡೆಯಲು ಸಾಧ್ಯವಿಲ್ಲ. ನಗರದ ಕೆರೆ ಕುಂಟೆಗಳು, ರಾಜಕಾಲುವೆಗಳು, ಹಳೆಯ ಗುಂಡಿತೋಪು ಜಾಗ, ಉದ್ಯಾನವನ, ಸರ್ಕಾರಿ ಕಚೇರಿಗೆ ಸೇರಿದ ಭೂಮಿ,  ಶಾಲೆಗಳ ಆಟದ ಮೈದಾನವೂ ಸೇರಿದಂತೆ ಪಾಲಿಕೆಯ ಭೂಮಿ ಅಕ್ರಮ ಒತ್ತುವರಿಯಾಗಿವೆ.

ಜಂಟಿ ಸದನ ಸಮಿತಿ ಅಧ್ಯಕ್ಷರಾಗಿದ್ದ ಎ.ಟಿ. ರಾಮಸ್ವಾಮಿ ಪಾಲಿಕೆ ವ್ಯಾಪ್ತಿಯ ಭೂ ಒತ್ತುವರಿ ಕುರಿತು ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಪೂರಕ ದಾಖಲೆಗಳನ್ನು ಒದಗಿಸಿ ಭೂ ಒತ್ತುವರಿ ವಶಕ್ಕೆ ಶಿಫಾರಸು ಮಾಡಿರುತ್ತಾರೆ. ಆದರೆ ಈ ಸಂಬಂಧ ಪಾಲಿಕೆ ಆಡಳಿತ ದಿಟ್ಟ ಕ್ರಮಕ್ಕೆ ಮುಂದಾಗಿದೆ ನಿರ್ಲಕ್ಷ್ಯ ತೋರಿದೆ. ಅತಿಕ್ರಮಿತ ಭೂಮಿ ವಶಪಡಿಸಿಕೊಂಡರೆ ಪಾಲಿಕೆಗೆ ದೊಡ್ಡ ಮಟ್ಟದ ಆಸ್ತಿ ಉಳಿಯಲಿದೆ. ಆದಾಯಕ್ಕೂ ಮೂಲವಾಗಲಿದೆ. 

ಈ ಬಗ್ಗೆ ಬಿಬಿಎಂಪಿ ಮೇಯರ್ ಅವರಿಗೆ ಚಿಂತಿಸಲು ಸಮಯವಿಲ್ಲದಾಗಿದೆ. ನಿರೀಕ್ಷಿತ ಸಾಧನೆ ತೋರದೆ ಅವರು ಸ್ಥಾನ ತ್ಯಜಿಸುವ ಚಿಂತೆ ಅವರದು. ಆಯುಕ್ತ ಎಂ.ಲಕ್ಷ್ಮೀನಾರಾಯಣ ಅವರು ಭೂ ಒತ್ತುವರಿ ಪ್ರಕರಣಗಳ ಬಗ್ಗೆ ಯಾವ ನಿರ್ಧಾರ ತಳೆಯುವರೋ ನೋಡಬೇಕಿದೆ.

ಸತ್ಯ ನುಡಿದವರ ಮೇಲೆಯೇ ಗಧಾ ಪ್ರಹಾರ !

ಭೂಮಾಫಿಯಾದ ಕಬಂದ ಬಾಹುಗಳು ಎಷ್ಟು ಬಲಿಷ್ಟವಾಗಿವೆ ಎಂಬುದಕ್ಕೆ ಸತ್ಯ ನುಡಿದು ಈಗ ಸದನದ ಹಕ್ಕುಚ್ಯುತಿ ಎದುರಿಸುತ್ತಿರುವ ಪ್ರಾಮಾಣಿಕ ಅಧಿಕಾರಿ ವಿ. ಬಾಲಸುಬ್ರಮಣಿಯನ್ ಅವರೆ ಸಾಕ್ಷಿ. ಒತ್ತುವರಿ ತೆರವು ಕಾರ್ಯಪಡೆ ಅಧ್ಯಕ್ಷರಾಗಿರುವ ಇವರು ರಾಜಕಾರಣಿಗಳೇ ನಿಜವಾದ ಕಳ್ಳರು ಎಂಬಂತೆ ಮುಖಕ್ಕೆ ಹೊಡೆದಂತೆ ಸತ್ಯ ಬಿಚ್ಚಿಟ್ಟಿರುವುದು ಕಳ್ಳ ರಾಜಕಾರಣಿಗಳಿಗೆ ಸಹಿಸಲಾಗುತ್ತಿಲ್ಲ. ಸತ್ಯ ಹೇಳಿದರೆ ಈ ದೇಶದಲ್ಲಿ ಬದುಕುವುದುಂಟೆ ? ನೇರವಂತಿಕೆಯಿಂದ ಇರುವವರಿಗೆ ಇಲ್ಲಿ ಸ್ಥಾನವಿಲ್ಲ ಎಂಬುದನ್ನು ರಾಜಕಾರಣಿಗಳು ಸ್ವತಃ ತೀರ್ಮಾನಿಸಿರುವಂತಿದೆ.

ರಾಜಕಾರಣಿಗಳ ರಕ್ಷಣೆಯಲ್ಲೆ ಅಷ್ಟೂ ಭ್ರಷ್ಟಾಚಾರಗಳು, ಅನೈತಿಕಗಳು, ಭೂಮಾಫಿಯಾಗಳು ನಡೆಯುತ್ತವೆ ಎಂದರೆ ತಕ್ಷಣಕ್ಕೆ ನಂಬುವುದು ಕಷ್ಟ. ಆದರೆ ಹೂರಣವನ್ನು ಬೇಧಿಸುತ್ತಾ ಒಳ ಹೋದಂತೆ ಯಾವನೋ ಒಬ್ಬ ಕಳ್ಳ ರಾಜಕಾರಣಿ ಕಿಸಕ್ಕನೆ ನಗುವ ಮುಖ ಕಂಡು ಬರುತ್ತದೆ. ಆ ನಗುಮುಖಕ್ಕೆ ಮರುಳಾದರೆ ನಗು ಹಾಗೆಯೇ ಇರುತ್ತದೆ, ಅದನ್ನೇ ನೀವು ಎದುರು ಹಾಕಿಕೊಂಡರೆ ಆತ ನಿಮ್ಮ ಪಾಲಿಗೆ ಖಳ ನಾಯಕನಾಗುತ್ತಾನೆ. 

ವಿ. ಬಾಲಸುಬ್ರಮಣಿಯನ್ ಅವರು ಇಂದು ನಿಜ ಹೇಳಿ ರಾಜಕಾರಣಿಗಳನ್ನು ಎದುರು ಹಾಕಿಕೊಂಡಿರುವುದು ಹೀಗೇನೆ. ರಾಜಕಾರಣಿಗಳ ಭ್ರಷ್ಟ ಮುಖವನ್ನು ಇವರು ನೋಡಿದ್ದಾರೆ. ಆದರೆ ದುಷ್ಟ ಮುಖದ ಪರಿಚಯ ಈಗ ಆಗುತ್ತಿದೆ. ಭೂಒತ್ತುವರಿ ತೆರವು ಕಾರ್ಯಪಡೆಯ ಮಾಜಿ ಅಧ್ಯಕ್ಷರಾದ ಇವರು ಅಲ್ಲಿ ನಡೆದಿರುವ ಘನಘೋರ ದುರಾಡಳಿತವನ್ನು ಪತ್ರಿಕೆಗಳಿಗೆ ಬಿಚ್ಚಿಟ್ಟಿದ್ದಾರೆ. ಅವರು ಹೆಳುವ ಪ್ರಕಾರ ಭೂಮಾಫಿಯಾ ಅನ್ನುವುದು ಯಾವನೋ ಒಬ್ಬ ರಾಜಕಾರಣಿಯ ನೆರಳಡಿಯೆ ನಡೆಯುತ್ತದೆ. ಅದಕ್ಕೆ ಪ್ರತಿಫಲವಾಗಿ ರಾಜಕಾರಣಿಗಳು ಒಂದಿಷ್ಟು ಕಪ್ಪ ಕಾಣಿಕೆ ಪಡೆಯುತ್ತಾರೆ. ರಿಯಲ್ ಎಸ್ಟೇಟ್ ದಂಧೆಗಾರ ಒಂದಿಷ್ಟು ಭೂಮಿಯನ್ನು ಒತ್ತುವರಿ ಮಾಡಲು ರಾಜಕಾರಣಿಯೊಬ್ಬ ಸಹಾಯ ಮಾಡಿದರೆ ಅದಕ್ಕೆ ಪ್ರತಿಯಾಗಿ ಒಂದೆರಡು ಪ್ಲಾಟ್‌ಗಳು ಅನಾಯಾಸವಾಗಿ ಆ ರಾಜಕಾರಣಿಗೆ ದೊರಕಿ ಹೋಗುತ್ತವೆ. ಇದಕ್ಕಿಂತಲೂ ಇನ್ನೇನು ಬೇಕು ? 

ಸಿದ್ದರಾಮಯ್ಯನವರೇನೋ ಒತ್ತುವರಿ ತೆರವುಗೊಳಿಸುತ್ತೇನೆ ಎಂದು ಹೇಳುತ್ತಿದ್ದಾರೆ. ಆದರೆ ಅದು ಅಷ್ಟು ಸಲಭದ ಕೆಲಸವಲ್ಲ ಅನ್ನುವುದು ಅವರಿಗೂ ಗೊತ್ತಿದೆ. ಮುಖ್ಯಮಂತ್ರಿಯಾಗಲಿ, ಮಂತ್ರಿಗಳಾಗಲಿ ಯಾವುದಾದರೂ ಒಂದು ಕೆಟ್ಟ ಕೆಲಸದ ವಿರುದ್ಧ ಮಾತಾಡಿದರೆ ಅದರ ಒಳ ಮರ್ಮ ಬೇರೆಯದೇ ಇರುತ್ತದೆ. ಅದರರ್ಥ ಇಷ್ಟೇ.. ನೀವು ಕದಿಯುತ್ತಿರುವುದು ನನಗೆ ತಿಳಿದಿದೆ, ಈಗ ಬರುತ್ತಿರುವ ಮಾಮೂಲು ಯಾವುದಕ್ಕೂ ಸಾಲದು. ಬೇಗ ಇನ್ನೂ ಹೆಚ್ಚಿಗೆ ಕಪ್ಪ ನೀಡುವ ವ್ಯವಸ್ಥೆ ಮಾಡಿದರೆ ಸರಿ. ಇಲ್ಲಾಂದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬುದೇ ಆ ಮಾತಿನ ಅರ್ಥ.

ಆದರೆ ಜನರ ಹಾಗೂ ಪತ್ರಿಕೆಗಳ ಕಣ್ಣೊರೆಸಲು ಕೊನೆಯ ವಾಕ್ಯವನ್ನು ಮಾತ್ರ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಲಾಗುತ್ತದೆ. ಯಾವುದೇ ಮಂತ್ರಿಯಿಂದ ಹೀಗೆ ಕ್ರಮ ಕೈಗೊಳ್ಳುತ್ತೇನೆ ಎಂಬ ಮಾತು ಬಂದಾಗ ನಾವ್ಯಾರೂ ಖುಷಿ ಪಡಬೇಕಾದ ಅಗತ್ಯವೇನಿಲ್ಲ. ಏಕೆಂದರೆ ರಾಜಕಾರಣಿಗಳು ಹಾಗೆ ಹೇಳಿದ್ದಾರೆಂದರೆ ಅದರರ್ಥ ಅವರು ಇನ್ನೂ ಹೆಚ್ಚಿನ ಮಾಮೂಲು ಪಡೆಯಲು ಆಸೆ ಪಟ್ಟಿದ್ದಾರೆಂದೇ ಅರ್ಥ! ಅದಿಲ್ಲವಾದರೆ ಯಾಕೆ ಕ್ರಮ ಕೈಗೊಳ್ಳುತ್ತೇನೆ ಎಂದು ಬೊಂಬಡಾ ಬಜಾಯಿಸುವ ಬದಲು ನೇರವಾಗಿ ಕ್ರಮವನ್ನೇ ಕೈಗೊಳ್ಳಬಾರದು ? ಉಹ್ಞುಂ, ಇವರು ಹಾಗೆ ಮಾಡಲಾರು.

ಅದೇ ರೀತಿ ಈಗ ಸಿದ್ದರಾಮಯ್ಯ ಹಾಗೂ ಸಚಿವ ಶ್ರೀನಿವಾಸ್ ಪ್ರಸಾದ್ ಅವರು ಸೇರಿಕೊಂಡು ಮತ್ತೆ ಜನರ ಕಣ್ಣಿಗೆ ಬೆಣ್ಣೆ ತಿಕ್ಕುವ ಕೆಲಸಕ್ಕೆ ಕೈ ಹಾಕಿದ್ದಾರೆ. ಅದೇನೋ ಹೈಪವರ್ ಕಮಿಟಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಈ ಕಮಿಟಿಗಳ ಕತೆ ಏನೇನಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೆ ಆಗಿದೆ. ಬಾಲಸುಬ್ರಮಣಿಯನ್ ಹೇಳುವ ಪ್ರಕಾರ ಇದು ಕಮಿಟಿ ಮಾಡುವ ಕಾಲವಲ್ಲ. ಭೂಒತ್ತುವರಿಯನ್ನು ಖುದ್ದಾಗಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಯೆ ತೆರವು ಮಾಡಿ ಬಿಡಬಹುದು. ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಒಂದು ಸೂಚನೆ ನೀಡಿದರೂ ಸಾಕು. ಆದರೆ ಅದನ್ನು ಬಿಟ್ಟು ಮತ್ತೊಂದು ಕಮಿಟಿ ಮಾಡುವ ಇವರ ಮಾತಿನ ಹಿಂದೆಯೆ ಕಾಲ ನುಂಗುವ ಮಹಾ ತಂತ್ರವಿದೆ.

ಆಡಳಿತ ವ್ಯವಸ್ಥೆಯೆ ದೊಡ್ಡ ಕಳ್ಳರ ಜಾಲ!

ಭೂಒತ್ತುವರಿ ಮಾಡುವುದರಲ್ಲಿ ಯಾರು ಮುಂದು ? ಸಾಮಾನ್ಯ ಜನರೆ ? ಅಥವಾ ಆಡಳಿತದಲ್ಲಿರುವ ಅಧಿಕಾರಿ ವರ್ಗ ಹಾಗೂ ರಾಜಕಾರಣಿಗಳೇ ? ಸಂಶಯವೇ ಬೇಡ. ಅಧಿಕಾರಿ ವರ್ಗ ಹಾಗೂ ರಾಜಕಾರಣಿಗಳೇ ಬಹುತೇಕ ಭೂಒತ್ತುವರಿ ಪ್ರಕರಣಗಳ ನಿಜವಾದ ಕಳ್ಳರು. ಸಾಮಾನ್ಯ ಜನತೆ ಕಾನೂನಿಗೆ ಹೆದರಿ ಇಂತಹ ಕೆಲಸದಲ್ಲಿ ಕೈ ಹಾಕುವುದು ತೀರಾ ವಿರಳ. ಕಾನೂನಿಗೆ ಯಾರು ಹೆದರುವುದಿಲ್ಲವೋ ಅವರೇ ಇಂತಹ ಕೆಲಸದಲ್ಲಿ ಭಾಗಿಯಾಗುತ್ತಾರೆ. ಹೇಗೆ ನೊಡಿದರೂ ಕಾನೂನಿಗೆ ಹೆದರದವರು ಎಂದರೆ ಅದೇ ಕಾನೂನಿನ ಒಂದು ಭಾಗವಾಗಿರುವ ಆಡಳಿತ ವ್ಯವಸ್ಥೆಯಲ್ಲಿರವ ಜನರೇನೆ.

ರಿಯಲ್ ಎಸ್ಟೇಟ್ ದಂಧೆ ನಡೆಸುವವರು ಒತ್ತುವರಿ ಮಾಡುವಾಗ ಅಧಿಕಾರಿಗಳ ಕೃಪಾಶೀರ್ವಾದ ಪಡೆಯುತ್ತಾರೆ. ಅಧಿಕಾರಿಗಳು ಒತ್ತುವರಿಗೆ ಸಹಕರಿಸುವಾಗ ರಾಜಕಾರಣಿಗಳ ಕೃಪಾಶಿರ್ವಾದ ಪಡೆಯುತ್ತಾರೆ. ಒಟ್ಟಿನಲ್ಲಿ ಈ ಮೂರೂ ವರ್ಗದವರ ಸ್ನೇಹ ಮಧುರವಾಗಿದೆ. ಒಬ್ಬರನ್ನೊಬ್ಬರು ಬಿಟ್ಟು ಕೊಡದೇ ಶೋಲೆ ಸಿನಿಮಾದ ನಾಯಕರುಗಳ ರೀತಿ ಇವರು ಅನೋನ್ಯವಾಗಿದ್ದು ನಾಡನ್ನು ಲೂಟಿ ಹೊಡೆಯುತ್ತಿದ್ದಾರೆ.

ಬಾಲಸುಬ್ರಮಣಿಯನ್ ಅವರು ಹೇಳುವ ಪ್ರಕಾರ ಭೂಒತ್ತುವರಿಯಲ್ಲಿ ನಾಯಕನ ಪಾತ್ರ ವಹಿಸುವುದು ರಾಜಕಾರಣಿಗಳೆ. ಅವರು ಯಾವುದೇ ಪಕ್ಷದಲ್ಲಿರಲಿ ಅವವರಿಗೆ ಭಯವಿಲ್ಲ. ಎಲ್ಲಾ ಪಕ್ಷಗಳಲ್ಲೂ ಸಮಾನ ಕಳ್ಳರಿರುವುದರಿಂದ ಕಳ್ಳ-ಕಳ್ಳರ ನಡುವೆ ಸಂಬಂಧ ಏರ್ಪಡಿಸಿಕೊಳ್ಳುವುದು ಕಷ್ಟದ ಸಮಾಚಾರವೇನಲ್ಲ. ಹೀಗಾಗಿ ಆಡಳಿತ ಪಕ್ಷದವರು ಭೂಲೂಟಿ ಮಾಡುವಾಗ ವಿರೋಧ ಪಕ್ಷದವರು ಲಾಭ ಪಡೆಯುತ್ತಾರೆ. ಈ ಪಕ್ಷ ಬಂದಾಗ ಅವರ ಸಹಕಾರ, ಆ ಪಕ್ಷ ಅಧಿಕಾರಕ್ಕೆ ಬಂದಾಗ ಇವರ ಸಹಾಕರ. ಇದು ಇಂದಿನ ರಾಜಕಾರಣಿಗಳ ಸಹಾಕರದ ಪರಿ. ಅದರಲ್ಲೂ ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ ಮುಂತಾದೆಡೆ ಭೂಮಿಯ ಬೆಲೆ ಗಗನಕ್ಕೇರಿದೆ. ಸಾಮಾನ್ಯರು ಒಂದು ಪುಟ್ಟ ನಿವೇಶನ ಕೊಳ್ಳಲೂ ಸಹ ಅಸಾಧ್ಯವಾದ ವಾತಾವರಣ ನಿರ್ಮಾಣವಾಗಿದೆ. ಇಂತಹ ಸ್ಥಳಗಳಲ್ಲೇ ಭೂಗಳ್ಳರ ಕರಾಮತ್ತು ಎಗ್ಗಿಲ್ಲದೆ ನಡೆಯುತ್ತಿದೆ. ಕೆರೆ-ಕಟ್ಟೆಗಳೆನ್ನದೆ ಒತ್ತುವರಿ ಮಾಡಿ ಅದನ್ನು ಬಂದಷ್ಟು ಬೆಲೆಗೆ ಮಾರಿ ಕೈತೊಳೆದುಕೊಳ್ಳುತ್ತಾರೆ. ಅಥವಾ ಅಲ್ಲೊಂದು ಸುಂದರವಾದ ಅಪಾರ್ಟ್‌ಮೆಂಟ್ ಕಟ್ಟಿ ಅದನ್ನೂ ಲಕ್ಷಾಂತರದ ಬೆಲೆಗೆ ಮಾರಿಕೊಳ್ಳುತ್ತಾರೆ. ಹೀಗೆ ದುಡ್ಡು ಮಾಡಿಕೊಂಡು ಜಾಗ ಖಾಲಿ ಮಾಡುವ ಕುಳಗಳು ಮತ್ಯಾರೂ ಅಲ್ಲ. ಅಧಿಕಾರಿಗಳ, ರಾಜಕಾರಣಿಗಳ ಕೃಪಾಶೀರ್ವಾದ ಪಡೆದವರೇ ಆಗಿರುತ್ತಾರೆ. ಇವರನ್ನು ಹೆಡೆಮುರಿಗೆ ಕಟ್ಟುವುದಾದರೂ ಯಾರು ? ಹೇಗೆ ?

 
ಎ.ಟಿ. ರಾಮಸ್ವಾಮಿಯವರ ಸದನ ಸಮಿತಿ ಭೂಒತ್ತುವರಿಯ ಪ್ರಖಾಂಡ ವರದಿಯನ್ನು ನೀಡಿ ವರ್ಷಗಳೇ ಗತಿಸಿವೆ. ಆದರೆ ಅದನ್ನು ಇದುವರೆಗೂ ಜಾರಿಗೊಳಿಸಲು ಈ ಕಳ್ಳ ರಾಜಾರಣಿಗಳಿಗೆ ಸಾಧ್ಯವಾಗಿಲ್ಲ. ಇದರ ನಡುವೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮತ್ತೊಂದು ಸದನ ಸಮಿತಿ ಬೇಡ, ಎ.ಟಿ. ರಾಮಸ್ವಾಮಿ ಸಮಿತಿ ನೀಡಿದ ವರದಿಯಂತೆಯೆ ಭೂಒತ್ತುವರಿಯನ್ನು ತೆರವುಗೊಳಿಸಲು ಕಾರ್ಯಪಡೆಯನ್ನೇ ರಚಿಸುತ್ತೇನೆ ಎಂದು ಹೇಳಿದರು. ಆಗ ಈ ಕಾರ್ಯಪಡೆಗೆ ಮುಖ್ಯ ಕಾರ್ಯದರ್ಶಿಗಳೇ ಅಧ್ಯಕ್ಷರಾಗಬೇಕಾಗಿತ್ತು. ಆದರೆ ಅವರು ಕೆಲಸಗಳ ಒತ್ತಡವಿರುವುದರಿಂದ ಸಾಧ್ಯವಿಲ್ಲ ಎಂದು ಹೇಳಿದರು. ಆಗ ಜಂಟಿ ಸದನ ಸಮಿತಿಗೆ ಸಲಹೆಗಾರರಾಗಿದ್ದ ವಿ. ಬಾಲಸುಬ್ರಮಣಿಯನ್ ಅವರನ್ನೇ ಅಧ್ಯಕ್ಷರಾಗುವಂತೆ ಕೋರಲಾಯ್ತು. ಸಂಪೂರ್ಣ ಕೆಲಸ ಮಾಡಲು ಅವಕಾಶ ಇರುವುದಾದರೆ ಮಾತ್ರ ನಾನು ಅಧ್ಯಕ್ಷನಾಗುತ್ತೇನೆ, ನಾಮಕಾವಸ್ತೆ ಕಾರ್ಯಪಡೆಯಾದರೆ ಬೇಡ ಎಂದು ಆಗಲೆ ಇವರು ಕಡ್ಡಿ ಮುರಿದಂತೆ ಹೇಳಿದ್ದರು. ಅದಕ್ಕೆ ಒಪ್ಪಿಕೊಂಡ ಯಡಿಯೂರಪ್ಪ ಅದರಂತೆಯೇ ಭೂಒತ್ತುವರಿ ಕಾರ್ಯಪಡೆ ರಚಿಸಿದ್ದೇನೋ ನಿಜ. ಆದರೆ ಒಂದು ಕಡೆಯಿಂದ ಕಾರ್ಯಪಡೆ ರಚಿಸಿದ ಅವರು ಇನ್ನೊಂದು ಕಡೆಯಿಂದ ಅಂಡು ಸುಡುತ್ತಿದ್ದಂತೆಯೆ ಅದರ ಕೆಲಸವನ್ನೇ ನಿಲ್ಲಿಸಿಬಿಟ್ಟರು! 

ಹಾಗೂ ಹೀಗೂ ಆ ಕಾರ್ಯಪಡೆ ಒಂದೂವರೆ ವರ್ಷ ಕೆಲಸ ಮಾಡಿತು. ಸಂಪೂರ್ಣ ಮಾಡಲಿಕ್ಕೆ ಸರ್ಕಾರದ ಹಾಗೂ ಕಾನೂನು ತೂತುಗಳೇ ನೂರಾರಿದ್ದವು. ಅವುಗಳನ್ನೆಲ್ಲಾ ನಿಭಾಯಿಸಿಕೊಂಡು ಒತ್ತುವರಿ ತೆರವುಗೊಳಿಸುವುದಂದರೇನೂ ಅಷ್ಟೊಂದು ಸುಲಭವಲ್ಲ. ಅಲ್ಲಿ ಕಂಡು ಬಂದ ಹುಳುಕುಗಳೂ ಒಂದೆರಡಲ್ಲ. ಕಂದಾಯ ಇಲಾಖೆಯ ಕಾರ್ಯದರ್ಶಿಯೇ ಅಕ್ರಮ ಎಸಗಿದ್ದರು. ಇಂತಹ ವಿಷಯಗಳನ್ನೆಲ್ಲಾ ಕಾರ್ಯಪಡೆ ನೇರವಾಗಿ ಸರ್ಕಾರಕ್ಕೆ ವರದಿ ನೀಡಬೇಕಾಗಿತ್ತು. ಅದರಂತೆ ಕಾರ್ಯಪಡೆಯ ವರದಿ ಕಂದಾಯ ಇಲಾಖೆಗೆ ಹೋಗುತ್ತಿರುವಂತೆಯೆ ಉರಿದು ಬಿದ್ದದ್ದು ಕರುಣಾಕರ ರೆಡ್ಡಿ. ಏಕೆಂದರೆ ಕರುಣಾಕರ ರೆಡ್ಡಿಯೇ ಅಂದು ಕಂದಾಯ ಇಲಾಖೆಯ ಸಚಿವನಾಗಿದ್ದುದು! ಆತ ಈ ಕಾರ್ಯಪಡೆಯ ಸಹವಾಸವೇ ಬೇಡ, ಪ್ಯಾಕ್‌ಅಪ್! ಎಂದು ಘೋಷಿಸಿಬಿಟ್ಟ. ಅಲ್ಲಿಗೆ ಭೂಒತ್ತುವರಿ ಕಾರ್ಯಪಡೆಯ ಕೆಲಸ ಖತಂ ಆಯ್ತು. ಇದು ನಡೆದುದು ೨೦೧೧ರ ಜುಲೈ ೪ ರಂದು. ಆದರೆ ನೆನಪಿರಲಿ ರಾಜ್ಯದಲ್ಲಿ ವಿವಿಧ ಕಾರ್ಯಗಳಿಗಾಗಿ ಒಟ್ಟು ೧೭ ಕಾರ್ಯಪಡೆಗಳು ಕೆಲಸ ನಿರ್ವಹಿಸುತ್ತಿವೆ. ಅದರಲ್ಲಿ ಭೂಒತ್ತುವರಿ ತೆರವು ಕಾರ್ಯಪಡೆಯನ್ನು ಮಾತ್ರ ಮಂತ್ರಿಗಳು ತೆರವು ಮಾಡಿದ್ದಾರೆ. ಉಳಿದವುಗಳು ಹಾಗೆಯೆ ಇವೆ. ಅಂದರೆ ತಮ್ಮ ಬುಡಕ್ಕೆ ಯಾವಾಗ ಬೆಂಕಿ ಬೀಳುತ್ತೋ ಅವಾಗ ಮಾತ್ರ ಅವರು ಅದನ್ನು ತೆರವುಗೊಳಿಸುತ್ತಾರೆ.

ಕಾರ್ಯಪಡೆ ಕೆಲಸ ಮಾಡಿದ್ದ ಒಂದೂವರೆ ವರ್ಷದಲ್ಲೆ ಯಾವ ಯಾವ ಜಿಲ್ಲೆಯಲ್ಲಿ ಎಷ್ಟೆಲ್ಲಾ ಭೂಒತ್ತುವರಿಯಾಗಿದೆ, ಅದರ ಹಿಂದಿರುವವರಾದರೂ ಯಾರು ಎಂಬೆಲ್ಲಾ ಮಾಹಿತಿಯನ್ನು ಬಾಲಸುಬ್ರಮಣಿಯನ್ ಕಲೆ ಹಾಕಿದ್ದರು. ಜಿಲ್ಲೆಗೊಒದರಂತೆ ಒಟ್ಟು ಹತ್ತು ಸಂಪುಟಗಳ ವರದಿಯನ್ನೂ ಅವರು ನೀಡಿದ್ದಾರೆ. ರಾಜ್ಯದಲ್ಲಿ ಸುಮಾರು ೧೧ ಲಕ್ಷಕ್ಕೂ ಅಧಿಕ ಎಕರೆ ಭೂಮಿ ಒತ್ತುವರಿಯಾಗಿದೆ. ೧೫ ಲಕ್ಷ ಜನರು ಭೂಗಳ್ಳರು ಇದರಲ್ಲಿ ಭಾಗಿಯಾಗಿದ್ದಾರೆ ಎಂದರೆ ಭೂಗಳ್ಳರ ಜಾಲ ಎಷ್ಟು ವಿಶಾಲವಾಗಿದೆ ನೊಡಿ. ಇದರ ಮೌಲ್ಯವನ್ನು ಲೆಕ್ಕ ಹಾಕಿದರೆ ಕಾಮನ್‌ವೆಲ್ತ್, ೨ಜಿ ಹಾಗೂ ಬಳ್ಳಾರಿಯ ಗಣಿ ಹಗರಣಗಳಿಗಿಂತಲೂ ದೊಡ್ಡದು. ಅವೆಲ್ಲವನ್ನೂ ಸೇರಿಸಿದರೂ ಈ ಮೊತ್ತ ಮುಟ್ಟಲಾಗದು ಎನ್ನುತ್ತಾರೆ ಬಾಲಸುಬ್ರಮಣಿಯನ್!

ಮಾನ್ಯ ಸಿದ್ದರಾಮಯ್ಯನವರೆ, ನೀವು ತುಂಬಾ ಕೆಳ ಹಂತದಿಂದ, ತುಂಬಾ ಕಷ್ಟ ಪಟ್ಟು ಮೇಲೆ ಬಂದಿದ್ದೀರಿ. ಅದಕ್ಕಾಗಿ ನಾವು ಅಭಿನಂದಿಸಿದ್ದೂ ಆಯ್ತು, ಅಗತ್ಯಕ್ಕಿಂತ ಹೆಚ್ಚು ಹೊಗಳಿದ್ದೂ ಆಯ್ತು. ಅಂತೂ ಇಂತೂ ನೀವು ಮುಖ್ಯಮಂತ್ರಿಗಳಾದುದಕ್ಕೆ ಅಗತ್ಯಕ್ಕಿಂತ ಹೆಚ್ಚು ಸ್ಕೋಪ್ ತಗೊಂಡದ್ದೂ ಆಯ್ತು. ಇನ್ನಾದರೂ ಆಗಬೇಕಾಗಿರುವ ಕೆಲಸಗಳ ಕಡೆ ಗಮನ ಹರಿಸಿರಿ. ಒಂದು ರೂಪಾಯಿಗೆ ಅಕ್ಕಿ ಕೊಟ್ಟ ತಕ್ಷಣ ರಾಜ್ಯ ಉದ್ದಾರ ಆಗಿ ಹೋಯ್ತು, ಅಥವಾ ಆಗಿ ಬಿಡುತ್ತದೆ ಎಂದೆಲ್ಲಾ ಅಂದುಕೊಳ್ಳಬೇಡಿ. ಅಥವಾ ಅದು ನಿಮ್ಮ ಚುನಾವಣಾ ಗಿಮಿಕ್ ಎಂದು ಭಾವಿಸಿಕೊಂಡಿದ್ದೀರೋ ಏನೋ. ನಿಮ್ಮಿಂದ ಆಗಬೇಕಾಗಿರುವ ಕೆಲಸಗಳ ಬಗ್ಗೆ ರಾಜ್ಯದ ಜನತೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದನ್ನು ಹುಸಿಗೊಳಿಸಿದರೆ ಹತ್ತರೊಳಗೆ ಹನ್ನೊಂದನೆಯವರಾಗಿ ಇತಿಹಾಸದ ಬುಟ್ಟಿ ಸೇರುತ್ತೀರಿ ಜೋಕೆ.
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…