ವಿಷಯಕ್ಕೆ ಹೋಗಿ

ಪಾತಾಳ ಲೋಕದ ಸುಂದರಿ


ಹಿಂದೆ ವಿಮಾನವನ್ನು ಕಂಡು ಹಿಡಿಯಲು ರಾಜಾಧಿರಾಜರುಗಳೆಲ್ಲಾ ಪ್ರಯತ್ನಿಸಿದ್ದರಂತೆ. ಕೊನೆಗೆ ಕಂಡು ಹಿಡಿದವರು ರೈಟ್ ಸಹೋದರರು. ಈಗ ಬಾನಿನ ತುಂಬಾ ವಿಮಾನಗಳು ರೆಕ್ಕಿ ಬಿಚ್ಚಿಕೊಂಡು ಹಾರಾಡುತ್ತವೆ. ಅದೆಲ್ಲಾ ವೈಜ್ಞಾನಿಕತೆ ಬದಿಗಿರಲಿ. ನನ್ನಂತಹ ಬಡವನಿಗೂ ಬಾನಲ್ಲಿ ಹಾರುವ ಆಸೆ. ಆದರೆ ಹೇಗೆ? ವಿಮಾನವನ್ನೇರುವಷ್ಟು ಹಣವಿಲ್ಲ. ಹಾಗಾಗಿ ಹಳ್ಳಿಯಲ್ಲಿದ್ದುಕೊಂಡೇ ನನ್ನಾಸೆಯನ್ನು ಪೂರೈಸಿಕೊಳ್ಳಲು ಒಂದು ಉಪಾಯ ಮಾಡಿದೆ. ಅದೇನೆಂದರೆ ಬಿದಿರಿನ ತೆಳು ದರ್ಬೆಗಳನ್ನು ಕಟ್ಟಿ ದೊಡ್ಡದಾದ ಆಕಾಶಬುಟ್ಟಿಯೊಂದನ್ನು ತಯಾರಿಸಿದೆ. ಸುತ್ತಲೂ ಟಾರ್ಫಾಲಿನ್ ಬಿಗಿದು ಒಳಗೆ ಚಿಕ್ಕ ದೊಂದಿಯನ್ನು ಕಟ್ಟಿದೆ. ಒಂದು ದಿನ ಅದರಲ್ಲಿ ಹಾರಾಟ ನಡೆಸುವುದೆಂದು ನಿಶ್ಚಯಿಸಿದೆ.

ನಿಗದಿತ ದಿನದಂದು ಹೊಸ ಬಟ್ಟೆ ಧರಿಸಿ ಸಿದ್ಧನಾದೆ. ಆಕಾಶಬುಟ್ಟಿಗೆ ಹಗ್ಗ ಕಟ್ಟಿ  ನಾನು ಕುಳಿತುಕೊಳ್ಳಲೂ ವ್ಯವಸ್ಥೆ ಮಾಡಿಕೊಂಡಿದ್ದೆ. ಜೊತೆಗೆ ಬೇಕಾಗುವ ಎಣ್ಣೆ ಎರಡು ಲೀಟರಿನಷ್ಟನ್ನು ಒಂದು ಕ್ಯಾನ್‌ನಲ್ಲಿ ಕಟ್ಟಿಕೊಂಡೆ. ಆಕಾಶಬುಟ್ಟಿಯ ತಳಭಾಗದಲ್ಲಿ ಮಾತ್ರ ಕೊಂಚ ಜಾಗ ತೆರೆದಿರುತ್ತದೆ. ಅದರ ಮೂಲಕ ಎಣ್ಣೆ ಹಾಕುವುದು. ಎಲ್ಲಾ ತಯಾರಾಗಿದೆಯೆಂದು ಖಾತರಿಯಾದ ಬಳಿಕ ದೊಂದಿಗೆ ಒಂದಿಷ್ಟು ಎಣ್ಣೆ ಹಾಕಿ ಬೆಂಕಿ ಹೊತ್ತಿಸಿದೆ. ಬೇಕಾಗುತ್ತದೆಯೆಂದು ಬೆಂಕಿ ಪೊಟ್ಟಣವನ್ನು ಸಹ ಇರಿಸಿಕೊಂಡೆ. ದೊಂದಿ ಚಿಕ್ಕದಾಗಿ ಆಕಾಶಬುಟ್ಟಿಯೊಳಗೆ  ಉರಿಯತೊಡಗಿತು. 

ದೊಂದಿ ಉರಿದಂತೆಲ್ಲಾ ಆಕಾಶಬುಟ್ಟಿಯೊಳಗಿನ ಗಾಳಿ ಬಿಸಿಯಾಗುತ್ತಾ ಹೋಗಿ ಅದು ಹಗುರಾಗತೊಡಗಿತು. ಕೊಂಚ ಸಮಯಕ್ಕೆ ಅದು ನಿಧಾನವಾಗಿ ಮೇಲೇರತೊಡಗಿತು. ಅಂದು ಅದೃಷ್ಟಕ್ಕೆ ಗಾಳಿ ಹೆಚ್ಚಾಗಿ ಬೀಸುತ್ತಿರಲಿಲ್ಲ. ಆಕಾಶಬುಟ್ಟಿ ನೆಲವನ್ನು ಬಿಟ್ಟು ಮೇಲೆದ್ದು ನಿಧಾನಕ್ಕೆ ಆಕಾಶದತ್ತ ಹೊರಟಾಗ ಅದರ ಹಗ್ಗವನ್ನು ಹಿಡಿದುಕೊಂಡೆ. ಇನ್ನೊಂದಿಷ್ಟು ಮೇಲೇರಿಸಿದಾಗ ಹಗ್ಗದಲ್ಲೇ ಜೋಕಾಲಿ ಯಂತೆ ಮಾಡಿಕೊಂಡಿದ್ದೆನಲ್ಲ, ಅದರಲ್ಲಿ ಏರಿ ಕುಳಿತೆ. ನನ್ನ ಭಾರಕ್ಕೆ ಆಕಾಶಬುಟ್ಟಿ ಕೆಳಗಿಳಿಯಿತು! ನಾನು ನೆಲಕ್ಕೇ ಕುಳಿತಂತಾಯ್ತು. 

ನನ್ನನ್ನೂ ಎತ್ತಿಕೊಂಡು ಅದು ಮೇಲೇರಬಹುದೇನೋ ಎಂದುಕೊಂಡು ಕಾದೆ. ಅಪ್ಪ, ಅಮ್ಮ, ಅಣ್ಣಂದಿರೆಲ್ಲಾ ನಗಲಾರಂಭಿಸಿದ್ದರು. ಎಷ್ಟು ಹೊತ್ತು ಕಾದರೂ ಅದು ನನ್ನನ್ನು ಎತ್ತಿಕೊಂಡು ಹಾರದಾಯ್ತು. ನನಗೆ ನಿರಾಶೆ ಕಾಡಿತು. ದೊಂದಿಗೆ ಮತ್ತೂ ಒಂದಿಷ್ಟು ಎಣ್ಣೆಯನ್ನು ಸುರಿದೆ. ದೊಂದಿ ಮತ್ತಷ್ಟು ಜೋರಾಗಿ ಉರಿಯತೊಡಗಿತು. ಕೊಂಚ ಸಮಯಕ್ಕೆ ಆ ಗೋಲದೊಳಗಿನ ಗಾಳಿ ವಿಪರೀತ ಬಿಸಿಯೇರಿತು. ಒಮ್ಮೆ ಅದು ಕದಲಿತು... ಹಾಗೂ ನನ್ನನ್ನು ಎತ್ತಿಕೊಂಡು ನಿಧಾನಕ್ಕೆ ಮೇಲೇರಿತು. ಇಂಚು ಇಂಚಾಗಿ ನಾನು ಮೇಲೇರತೊಡಗಿದ್ದೆ ! ನನಗೆ ಎಲ್ಲಿಲ್ಲದ ಸಂತೋಷವಾಗಿದ್ದರೆ ಮನೆಯವರೆಲ್ಲಾನಿಬ್ಬೆರಗಾದರು. ನೋಡ ನೋಡುತ್ತಿರುವಂತೆಯೇ ಆಳೆತ್ತರಕ್ಕೆ ಏರಿದೆ.. ಹಾಗೂ ಇನ್ನೂ ಮೇಲೇರುತ್ತಲೇ ಹೋದೆ. ಗಾಳಿ ಒಂದು ದಿಕ್ಕಿನಿಂದ ಮೆಲ್ಲಗೆ ಬೀಸುತ್ತಲಿದ್ದುದರಿಂದ ಅದು ಬೀಸುತ್ತಿರುವ ದಿಕ್ಕಿಗೆ ನನ್ನ ಆಕಾಶಬುಟ್ಟಿ ಹೊರಟಿತು.

ಹೀಗೆ ಹೊರಟಿದ್ದನ್ನು ಕಂಡೂ ನನಗೂ ಭಯವಾಯ್ತು. ಆದರೆ ನಿಯಂತ್ರಿಸುವ ಯಾವ ಸಾಧನವೂ ಇರಲಿಲ್ಲ. ಕೆಳಗಿದ್ದವರು ಗಾಬರಿಯಿಂದ ಹುಷಾರು... ಹುಷಾರು... ಅಷ್ಟು ಮೇಲೆ ಹೋಗಬೇಡ, ಸಾಕು ಇಳಿಯೋ ಅನ್ನುತ್ತಿದ್ದರು. ಆದರೆ ಅದಾಗಲೇ ತುಂಬಾ ಮೇಲೇರಿದ್ದೆ. ಅದನ್ನು ಕೆಳಗಿಳಿಸುವುದು ಹೇಗೆಂದು ತಿಳಿಯಲಿಲ್ಲ. ಧೈರ್ಯವಹಿಸಿ ಕುಳಿತೆ. ಎತ್ತರದ ಬಿದಿರು ಮೆಳೆಯೊಂದು ಕೈಗೆ ಸಿಗುವಂತೆ ತೋರಿತು. ಅದನ್ನಾದರೂ ಹಿಡಿದುಕೊಳ್ಳೋಣವೆಂದು ಕೈಚಾಚಿದೆ. ಆದರದು ಸಿಗಲಿಲ್ಲ, ತುದಿಯಲ್ಲಿದ್ದ ಮುಳ್ಳೊಂದು ನನ್ನ ಕೈಗೆ ಪರಚಿ ರಕ್ತ ಜಿನುಗಿತು. ಆಕಾಶಬುಟ್ಟಿ ನನ್ನನ್ನು ಹೊತ್ತು ಮತ್ತೂ ಆಕಾಶದೆತ್ತರಕ್ಕೆ ಹಾರಿತು. ಅದರೊಳಗಿನ ದೊಂದಿ ಉರಿಯುತ್ತಲೇ ಇತ್ತು. ಅದನ್ನು ಆರಿಸಿದರೆ ಕೆಳಗಿಳಿಯುತ್ತದೆ. ಆದರೆ ನನಗದು ಬೇಕಾಗಿರಲಿಲ್ಲ. ಬಡವನಿಗೆ ದೊರೆತ ಹಾರಾಡುವ ಭಾಗ್ಯವನ್ನು ನಾನೇಕೆ ಕಳೆದುಕೊಳ್ಳಲಿ? ಸುಮ್ಮನೇ ಕುಳಿತೆ. ಮನೆಯವರಿಗೆ ಕೈಬೀಸಿದೆ. ಅವರು ದಿಜ್ಞೂಢರಾರಾಗಿ ನಿಂತುಬಿಟ್ಟಿದ್ದರು. 

ಕೆಳಗಿನ ಮಲೆನಾಡಿನ ದೃಶ್ಯಗಳು ರಮ್ಯ ಮನೋಹರವಾಗಿ ಕಂಡುಬಂತು. ಅಲ್ಲಲ್ಲಿ ಎದ್ದು ನಿಂತಿದ್ದ ಎತ್ತೆತ್ತರದ ಬೆಟ್ಟಗಳ ತುದಿಯಿಂದ ಜಾರಿರುವ ಪಚ್ಚೆಮಣಿಗಳ ರಾಶಿಯೇನೋ ಎಂಬಂತೆ ತೋರುತ್ತಿದ್ದ ನಿತ್ಯ ಹರಿದ್ವರ್ಣ ಕಾಡು ಹೃನ್ಮನ ಸೆಳೆಯಿತು. ನಡುವೆ ಹರಿವ ಶರಾವತಿ ನದಿ ಸೂರ್ಯನ ಕಿರಣಕ್ಕೆ ಛಳ್ ಎಂದು ಮಿನುಗಿ ವಜ್ರ ನದಿಯಂತೆ ನೋಟವಿಕ್ಕಿತ್ತು. ಕಾಲಡಿಯ ಕಾನನದ ನಡುವಿಂದ ಯಾವ ಯಾವುದೋ ಕಾಡುಪಕ್ಷಿಗಳ ಕಲರವ ಅಲೆ ಅಲೆಯಾಗಿ ಕಾಶದತ್ತ ತೇಲಿ ಬರುತ್ತಲಿತ್ತು. ನಾನು ಮೇಲೇರುತ್ತಾ ಏರುತ್ತಾ ಮೋಡಗಳವರೆಗೂ ಸಾಗಿದೆ. ನನಗೀಗ ಭಯವಿರಲಿಲ್ಲ, ಎಲ್ಲಿಗೆ ತಲುಪುತ್ತೇನೆಂಬ ಕುತೂಹಲವಿತ್ತು. ಇಂತಹದೊಂದು ಸಾಹಸ ಅತ್ಯಂತ ರೋಮಾಂಚನವಿತ್ತು. ನಾನೀಗ ಆಕಾಶದಲ್ಲಿ ಪಕ್ಷಿಗಳನ್ನೂ ಮೀರಿ ಮೋಡಗಳ ಜೊತೆಯಲ್ಲಿ ಹಾರುತ್ತಿದ್ದೇನೆ. ಪಕ್ಷಿಗಳು ನನ್ನಿಂದ ಕೆಳಗೆ ಹಾರಾಡುತ್ತಲಿದ್ದರೆ, ಮೋಡಗಳನ್ನೂ ದಾಟಿ ನಾನು ಮುಂದೆ ಸಾಗಿದ್ದೇನೆ. ತುಂಬಾ ತುಂಬಾ ಅನಂದ ಭರಿತನಾದೆ. ಅದನ್ನು ತಡೆದು ಕೊಳ್ಳಲಾಗಲಿಲ್ಲ.... ಓ ಹೋಯ್ ಎಂದು ಜೋರಾಗಿ ಚೀರಿದೆ. ಅದು ಮೋಡಗಳಿಗೆ ಬಡಿದು ಮತ್ತೆ ಮರುಕಳಿಸಿತು. ಇತ್ತ ಭೂಮಿಗೂ ಅತ್ತ ಬಾನಿಗೂ ನನ್ನ ಕೂಗಿನ ಅಲೆಗಳು ಚಲಿಸಿದವು! 

ನನ್ನ ಪಯಣ ಪಶ್ಚಿಮ ಘಟ್ಟದಾಚೆ ಸಹ್ಯಾದ್ರಿ ಸೀಮೆಯನ್ನು ದಾಟಿತು. ಅಲ್ಲಿ ಭೂಮಿ ಮುಗಿದಂತೆ ಕತ್ತಲೆಯ ಲೋಕವೊಂದು ಬಾಯ್ತೆರೆದುಕೊಂಡಂತೆ ಕಂಡು ಬಂತು. ಅಲ್ಲೇನೋ ಆಕರ್ಷಿಸುವಂತೆ ನಾನು ಕೆಳಗಿಳಿಯ ತೊಡಗಿದ್ದೆ. ಆಕಾಶಬುಟ್ಟಿಯೊಳಗೆ ಇಣುಕಿದೆ.  ದೊಂದಿಗೆ ಹಾಕಿದ್ದ ಎಣ್ಣೆ ಕಡಿಮೆಯಾಗಿದ್ದರಿಂದ ಬೆಂಕಿ ಕಿರಿದಾಗಿತ್ತು. ಆ ಕಾರಣಕ್ಕೆ ಗೋಲ ಕೆಳಗಿಳಿಯುತ್ತಿತ್ತು. ಮತ್ತೊಂದಿಷ್ಟು ಎಣ್ಣೆ ಸುರಿದರೆ ಗೋಲ ಮೇಲೇರುತ್ತದೆ. ಆದರೆ ಆ ಕತ್ತಲೆಯ ಬೃಹದಾಕಾರದ ಪಾತಾಳದೊಳಕ್ಕೆ ಏನಿದೆಯೆಂಬ ಕುತೂಹಲ ನನ್ನನ್ನು ಕಾಡಿತು. ಹೇಗಿದ್ದರೂ ಎಣ್ಣೆ ಸುರಿದರೆ ಮತ್ತು ಮೇಲೇರುತ್ತೇನೆ. ಅಲ್ಲಿ ಏನಿದೆಯೆಂದು ನೋಡಿಯೇ ಬಿಡೋಣವೆಂದು ಸುಮ್ಮನೇ ಕುಳಿತೆ. ಗೋಲ ನಿಧಾನವಾಗಿ ಆ ಪಾತಾಳ ಲೋಕಕ್ಕೆ ಇಳಿಯಲಾರಂಭಿಸಿತು. ಅದು ಇಳಿಯುತ್ತಾ ಹೋದಂತೆ ಸಂಪೂರ್ಣವಾದ ಕತ್ತಲು ಸುತ್ತಲೂ ವ್ಯಾಪಿಸಿಕೊಂಡಿತು. ಅಗಾಧವಾದ ಆ ಕಾರ್ಗತ್ತಲ ನಡುವೆ ನನ್ನ ಪುಟ್ಟ ಅಕಾಶ ಬುಟ್ಟಿಯೊಳಗಿನ ದೊಂದಿ ಮಂದ್ರ ಪ್ರಕಾಶ ಚೆಲ್ಲುತ್ತಾ ಹೋಯ್ತು. ನನಗೆ ಒಂದು ಬಗೆಯ ಭಯ ಮತ್ತೆ ಸುರುವಾಯ್ತು. ನಾನೀಗ ಹೋಗುತ್ತಿರುವುದು ಎಲ್ಲಿಗೆ? ಇಷ್ಟು ದಿನವೂ ಇಂತಹದೊಂದು ಅಗಾಧವಾದ ಕತ್ತಲ ಪ್ರಪಾತವಿರುವ ವಿಷಯ ಯಾಕೆ ಯಾರ ಗಮನಕ್ಕೂ ಬಂದಿರಲಿಲ್ಲ?! ಇಲ್ಲಿ ಮನುಷ್ಯರು ಇರುತ್ತಾರಾ? ಅಥವಾ ರಾಕ್ಷಸರೋ? ನಾನು ಇಲ್ಲಿ ಇಳಿದವನು ಮರಳಿ ಜೀವದೊಂದಿಗೆ ಮೇಲೇರುತ್ತೇನಾ? ಒಂದು ಅರಿವಾಗಲಿಲ್ಲ. ಆದರೂ ಇಳಿದೆ. 

ಇನ್ನೂ ಕೆಳಗಿಳಿಯುತ್ತಾ ಹೋದಂತೆ ಕತ್ತಲು ತುಂಬಾ ಗಾಢವಾಗಿ ಏನೊಂದೂ ಕಾಣಿಸದಂತಾಯ್ತು. ಮೇಲೆ ನೋಡಿದರೆ ತುಂಬಾ ಎತ್ತರದಲ್ಲಿ ನಾನಿಳಿದ ಪ್ರಪಾತದ ದ್ವಾರ ಕಾಣಿಸುತಲಿತ್ತು.  ಮತ್ತೊಂದಿಷ್ಟು ಇಳಿದಾಗ ಒಂದು ಬಗೆಯ ಮಂದ್ರ ಪ್ರಕಾಶ ಗೋಚರಿಸಿತು. ಜೊತೆಗೇ ವಿನೂತನ ಬಗೆಯ ಪರಿಮಳ ಮೂಗಿಗೆ ಅಡರಿತು. ಇನ್ನೂ ಇಳಿಯುತ್ತಾ ಹೋದಂತೆ ಮಂದ್ರ ಪ್ರಕಾಶ ಚಂದಿರನ ಬೆಳುದಿಂಗಳಿನಷ್ಟು ಹರಡಿಕೊಂಡು ಅಲ್ಲೊಂದು ಹೂತೋಟದಂತಹ ಲೋಕ ತೆರೆದುಕೊಂಡಿತ್ತು. ಅಲ್ಲಿಗೆ ನನ್ನ ಪಾದ ಸ್ಪರ್ಶವಾದಾಗ ಕೆಳಗಿಳಿದೆ. ಕೆಳಗೆಲ್ಲಾ ಹೂಗಳೇ ದಪ್ಪಗೆ ಹರಡಿದ್ದವು. ಅವು ಅತಿ ಮಧುರವಾಗಿ ನನ್ನ ಅಂಗಾಲಿಗೆ ಸ್ಪರ್ಶವೀಯ್ದವು. 

ಸುತ್ತಲೂ ನೋಡಿದೆ, ಯಾರೆಂದರೆ ಯಾರು ಕಾಣಿಸಲಿಲ್ಲ. ಬಾನಿನತ್ತ ನೋಡಿದರೆ ಚಂದಿರ ಬೆಳಗುತ್ತಿದ್ದ. ಅರೆರೆ, ಇದು ಹಗಲಲ್ಲವೇ ಎನ್ನಿಸಿತು. ದೊಂದಿಯ ಬೆಂಕಿ ಕ್ಷೀಣಗೊಂಡಿದ್ದರಿಂದ ಆಕಾಶಬುಟ್ಟಿಯೂ ನೆಲದಲ್ಲಿ ಕುಳಿತುಕೊಂಡಿತು. ಸುತ್ತಲೂ ಬಗೆ ಬಗೆಯ ಪುಷ್ಪಗಳೇ ಇದ್ದವು. ಅವುಗಳಿಂದ ವಿಶಿಷ್ಟ ಬಗೆಯ ಸುಗಂಧ ಸುತ್ತಲೂ ಹರಡಿ ಅಹ್ಲಾದಗೊಳಿಸುತ್ತಲಿತ್ತು. ಯಾರೂ ಕಂಡು ಬರಲಿಲ್ಲ. ಎಲ್ಲೆಡೆಯೂ ನೋಡುತ್ತಾ ಹೋದೆ... 

ಆಗ ಕಂಡು ಬಂದಳು ಆ ಸುಂದರಿ...

ತಬ್ಬಿಬ್ಬಾಗಿ ನಿಂತುಬಿಟ್ಟೆ. ಏಕೆಂದರೆ ಅವಳು ಚಂದಿರನ ಮಗಳೆಂಬಷ್ಟು ಸುಂದರವಾಗಿದ್ದಳು! ಭೂಮಿಯಲ್ಲೆಲ್ಲೂ ಅಷ್ಟೊಂದು ಚೆಲುವಿರುವ ಹೆಣ್ಣನ್ನು ನಾನು ನೋಡಿಯೇ ಇರಲಿಲ್ಲ. ಎಲ್ಲಕ್ಕಿಂತಲೂ ವಿಚಿತ್ರವೆಂದರೆ ಆಕೆ ಹೂವಿನ ಪಕಳೆಗಳಿಂದಲೂ, ಹೂಗಳಿಂದಲೂ ಮಾಡಿದ್ದ ವಸ್ತ್ರವನ್ನೇ ಧರಿಸಿದ್ದಳು! ಅಂತಹ ಅಪ್ರತಿಮ ಸೌಂದರ್ಯವತಿಯನ್ನು ಹಿಂದೆಂದೂ ನಾನು ಕಂಡಿರಲಿಲ್ಲ. ಮಹಾಶ್ವೇತೆಯಾದ ಅವಳ ಸಂಪದ್ಭರಿತ ಅಂಗಗಳು ಆಕೆ ತೊಟ್ಟದ್ದ ಹೂಗಳ ಉಡುಗೆಯನ್ನೂ ಮೀರಿ ಹೊರಗೆ ಇಣುಕು ನೋಟ ಬೀರಿದ್ದರೆ ನನ್ನಲ್ಲಿ ಏನೋ ರೋಮಾಂಚನ. ಅವಳನ್ನೇ ನೋಡುತ್ತಾ ನಿಂತೆ. 

ಅವಳಲ್ಲಿ ಆತಂಕವಿತ್ತು. ನನ್ನನ್ನೇ ಅನುಮಾನದಿಂದಲೂ, ಕುತೂಹಲದಿಂದಲೂ ನೋಡುತ್ತಿದ್ದಳು. ನಾನು ಎರಡು ಹೆಜ್ಜೆ ಮುಂದೆ ಹೋಗಿ ಇದು ಯಾವ ಊರು? ಎಂದು ಕೇಳಿದೆ. 

....ಸೌಗಂಧಿಕಾ ವನ ಮೆಲ್ಲನೆ ನುಡಿದಳಾಕೆ. ಅವಳ ಧ್ವನಿ ಅದೆಷ್ಟು ಮಧುರವಾಗಿತ್ತೆಂದರೆ ಒಮ್ಮೆ ವಿಶಿಷ್ಟ ಸಂಮೋಹನಕ್ಕೊಳಗಾಗಿದ್ದೆ. 

ನಿನ್ನ ಹೆಸರೇನು? ಕೇಳಿದೆ ಮತ್ತೆ. 

ಹಾಗೆಂದರೇನು? ಮರು ಪ್ರಶ್ನಿಸಿದಳು. 

ಕನ್ನಡವನ್ನು ಚೆನ್ನಾಗಿಯೇ ಬಲ್ಲವಳಿಗೆ ಹೆಸರೆಂದರೇ ತಿಳಿದಿಲ್ಲವೆಂದರೆ ಏನರ್ಥ? ಉತ್ತರ ಹೊಳೆಯಲಿಲ್ಲ.  ಯಾರು ನೀವು? ಕೇಳಿದೆ.

ನಾವು ಸೌಗಂಧಿನಿಯರು! ಎಂದಳಾಕೆ.

ಬಾಯಾರಿಕೆಯಾಗಿದೆ ನೀರು ಕೊಡ್ತೀಯಾ?

ನನ್ನ ಹಿಂದೆ ಬಾ ಎಂದು ಹೇಳಿ ಮುಂದೆ ನಡೆದಳು. 

ನಾನು ಹಿಂಬಾಲಿಸಿದೆ. ಗಾಳಿ ತಣ್ಣಗೆ ತೀಡುತ್ತಲಿದ್ದರೆ ಆಕೆ ಸುಂದರ ಮೇಘದಂತೆ ನಡೆದು ಹೋಗುತಲಿದ್ದಳು. ಅವಳು ಹೊದ್ದಿದ್ದ ಪುಷ್ಪಗಳ ವಸ್ತ್ರ ಆಕೆಯ ದೇಹ ಕೋಮಲತೆಯನ್ನು ಮರೆಮಾಚಲು ಸೋತಿತ್ತು. ಹೂಗಳೆಡೆಯಿಂದ ಬೆಳ್ಳಿ ನುಣುಪಿನ ದೇಹ ಕಂಡು ಬರುತ್ತಲಿತ್ತು. ಅವಳ ಹಂಸ ನಡಿಗೆಗೆ ಬಳುಕುವ ಸೊಂಟ ಆಕರ್ಷಕವಾಗಿದ್ದರೆ, ಒಂದೊಂದೇ ಹೆಜ್ಜೆಯನ್ನು ಹೂಗಳ ರಾಶಿಯ ಮೇಲಿರಿಸುತ್ತಾ ನಡೆದಳಾಕೆ. ಅವಳ ಭಾರಕ್ಕೆ ಮುದುಡುತ್ತಿದ್ದ ಹೂಗಳು ಹೆಜ್ಜೆ ತೆಗೆದೊಡನೆಯೇ ಮತ್ತೆ ಮೊದಲಿನಂತಾಗುತ್ತಲಿದ್ದವು. ಇದೊಳ್ಳೆಯ ವಿಚಿತ್ರ ಲೋಕ ಎಂದುಕೊಂಡೆ. ಅವಳ ನೀಳವಾದ ಕೇಶ ರಾಶಿ ಕಪ್ಪು ಜಲಪಾತದಂತೆ ಪೃಷ್ಠದವರೆಗೂ ಇಳಿದಿತ್ತು. 

ಒಂದೆಡೆ ಹೋಗಿ ನಿಂತಾಕೆ ಇದು ಪೌರ್ಣಮಿ ಸರೋವರ. ಬಾಯಾರಿಕೆ ತೀರುವಷ್ಟು ನೀರು ಕುಡಿ ಅಂದಳು. 

ನಾನು ಅವಳು ಕೈ ತೋರಿದೆಡೆ ನೋಡಿದೆ. ಅಲ್ಲೊಂದು ಪುಟ್ಟ ಹೊಂಡದಂತಹ ಭಾಗವಿತ್ತು. ನೀರು ಕಂಡುಬರಲೇ ಇಲ್ಲ. ಕುಡಿಯುವುದೇನನ್ನು? ನೋಡಿದರೆ ಆ ಹೊಂಡದೊಳಗೆ ವಿವಿಧ ಬಗೆಯ ಮೀನುಗಳು ಆಡುತ್ತಲಿವೆ. ಅವು ಗಾಳಿಯಲ್ಲಿಯೇ ಓಡಾಡುತ್ತಿರುವಂತೆನ್ನಿಸಿತು. ಸುಂದರಿ, ಇಲ್ಲಿ ನೀರು ನನಗೆ ಕಾಣಿಸುತ್ತಲೇ ಇಲ್ಲವಲ್ಲ? ಎಂದೆ. 

ನಿನ್ನ ಕಣ್ಣು ಮಂಜಿರಬೇಕು. ಬೊಗಸೆಯಲ್ಲಿ ಮೊಗೆದಿಕೋ, ಸಿಗುತ್ತದೆ ಎಂದು ಹೇಳಿ ನಕ್ಕಳು. 

ಅವಳ ನಗುವಿನಲ್ಲಿ ಜಗತ್ತನ್ನೇ ಮರೆತೆ. ಹಾಗೆಯೇ ನಿಂತು ಅವಳ ಸುಂದರ ವದನವನ್ನೇ ನೋಡಿದೆ. ಇವಳು ಭಾಗಶಃ ಕಿನ್ನರ ಜಾತಿಗೆ ಸೇರಿದವಳೇ ಅಂದು ಕೊಂಡೆ. 

ಏನು ನೋಡ್ತಾ ಇದ್ದೀಯಾ? ನೀರು ಕುಡಿ ಬೇಗ ಎಂದಳಾಕೆ. 

ಏನಾದರಾಗಲೆಂದುಕೊಂಡು ನೀನು ತುಂಬಾ ಸುಂದರವಾಗಿರುವೆ ಎಂದೆ. 

ಅವಳಿಗೆ ಕೋಪ ಬರಲಿಲ್ಲ... ಬದಲಿಗೆ ನಾಚಿಕೊಂಡಳು. ಅದೇ ನಾಚಿಕೆಯಲ್ಲಿಯೇ ನುಡಿದಳಾಕೆ... ಬಾಯಾರಿಕೆ ಎಂದೆಯಲ್ಲ... ನೀರು ಕುಡಿದು ಬಾಯಾರಿಕೆ ನೀಗಿಸಿಕೋ.

ನನಗಂತೂ ಪರಾಂಬರಿಸಿ ನೋಡಿದಾಗಲೂ ನೀರು ಕಾಣಿಸಲಿಲ್ಲ. ಅವಳು ಹೇಳಿದುದರಿಂದಲೂ, ಅಲ್ಲಿ ಮೀನುಗಳು ಇದ್ದುದರಿಂದಲೂ ನೀರಿದ್ದರೂ ಇರಬಹುದೆಂದುಕೊಂಡು ಬಾಗಿ ಕೊಳದೊಳಕ್ಕೆ ಕೈ ಆಡಿಸಿದೆ. ಅರರೇ... ಎಂಥಹ ವಿಸ್ಮಯ? ಅಲ್ಲಿ ನೀರಿದೆ? ಕೈಗೆ ಸಿಗುತ್ತಿದೆಯೇ ಹೊರತು ಕಾಣಿಸುತ್ತಲೇ ಇಲ್ಲ.  ಈ ಲೋಕದ ನೀರೇ ಅಷ್ಟೊಂದು ಶುಭ್ರವಾಗಿದೆ ಎಂದುಕೊಂಡು ಬೊಗಸೆಯಲ್ಲಿ ನೀರು ತೆಗೆದುಕೊಂಡು ಕುಡಿದೆ. ಅಬ್ಬಬ್ಬಾ... ಎಷ್ಟೊಂದು ಸಿಹಿಯಾಗಿತ್ತೆಂದರೆ ವರ್ಣಿಸಲಿಕ್ಕೇ ಆಗದು. ನಿಮ್ಮ ಲೋಕದ ನೀರು ತುಂಬಾ ಸಿಹಿಯಾಗಿದೆ ಎಂದೆ ಅವಳಿಗೆ. 

ಸರಿ ಹೊರಡು ಎಂದಳು. 

ಸುಂದರೀ ... ನಾನೀ ಊರನ್ನು ನೋಡಲೆಂದು ಬಂದಿರುವೆ 

ಹೌದಾ... ಹಾಗಾದರೆ ಬಾ ನನ್ನ ಜೊತೆ ಹೆಜ್ಜೆ ಹಾಕಿದಳು. 

ಎಲ್ಲಿ ನೋಡಿದರೂ ಬರೀ ಹೂಗಳೇ ತುಂಬಿಕೊಂಡಿದ್ದವು. 

ನೆಲದಲ್ಲೂ ಹೂವಿನದೇ ಹಾಸು. ಇದೊಂದು ವಿಚಿತ್ರ ಲೋಕವೇ ಸರಿ ಅನ್ನಿಸಿತು. ವಿಚಿತ್ರಕ್ಕಿಂತಲೂ ಮಿಗಿಲಾದ ಅಹ್ಲಾದತೆಯಿತ್ತು... ಸೌಂದರ್ಯವಿತ್ತು ನರನಾಡಿಗಳನ್ನು ಚೇತನಗೊಳಿಸುವ ಹೂಗಳ ಪರಿಮಳವಿತ್ತು. ಆ ಸುಂದರಿಯ ವನಪಿನ ಹೆಜ್ಜೆಗಳನ್ನೇ ಹಿಂಬಾಲಿಸಿದೆ. ನೆಲದಲ್ಲೇಕೆ ಹೂಗಳನ್ನು ಹಾಸಿದ್ದೀರಿ? ಕೇಳಿದೆ. 

ಅದು ಹಾಸಿದ್ದಲ್ಲ... ಹೂಗಿಡಗಳಿಂದ ಉದುರಿದ್ದು! ನುಡಿದಳು ಸುಂದರಿ. 

ಆದರೆ ಒಂದೂ ಬಾಡಿಯೇ ಇಲ್ಲವಲ್ಲ?

ಇಲ್ಲಿ ಬಿಸಿಲಿರುವುದಿಲ್ಲವಾದ್ದರಿಂದ ಬಾಡುವುದಿಲ್ಲ. 

ಶ್ವೇತ ವರ್ಣದ ಹಂಸಗಳೂ ನಡೆದಾಡುತ್ತಿದ್ದವು. ಅವುಗಳೆಡೆಯಲ್ಲಿ ದಾರಿ ಮಾಡಿಕೊಂಡು ಹೊರಟ ಈ ಸುಂದರಿಯೂ ಒಂದು ಹಂಸವಾಗಿ ಕಂಡು ಬಂದಳು. ಅವಳ ನಡಿಗೆಯೂ ಹಾಗೆಯೇ ಹಂಸ ನಡಿಗೆಯಂತೆಯೇ ಇತ್ತು. 

ನನ್ನ ಕೈಗೆ ಬಿದಿರು ಮುಳ್ಳು ತಾಗಿ ಆಗಿದ್ದ ಗಾಯ ಈಗ ನೀರು ತಾಕಿದ್ದರಿಂದ ಮತ್ತೆ ಉರಿಯತೊಡಗಿತು. ಆಗ ಅವಳಲ್ಲಿ ಈ ಊರಲ್ಲಿ ಆಸ್ಪತ್ರೆಗಳಿವೆಯೇ? ಕೇಳಿದೆ. 

ಹಾಗೆಂದರೇನು? ಕೇಳಿದಳಾಕೆ. 

ಅಲ್ಲಿಗೆ ಆಸ್ಪತ್ರೆಗಳಿಲ್ಲವೆಂದಾಯ್ತಲ್ಲ?! ಸ್ವಲ್ಪ ಯೋಚಿಸಿ ರೋಗ ರುಜಿನ ಬಂದರೆ ಏನು ಮಾಡುತ್ತೀರಿ? ಎಂದು ಕೇಳಿದೆ. 

ರೋಗ ರುಜಿನವೆಂದರೆ ಅವರ‍್ಯಾರು? ನಿಮ್ಮವರಾ? ನಿಂತು ಕೇಳಿದಳು ಸುಂದರಿ. 

ನಾನು ಸುಸ್ತಾದೆ. ಅವಳಿಗೆ ನನ್ನ ಅಂಗೈಲಾದ ಗಾಯ ತೋರಿಸಿ ಗಾಯವಾಗಿದೆ ಎಂದೆ. 

ಹೇಗಾಯ್ತು? 

ಮುಳ್ಳು ಗೀರಿತು... ನೋವಾಗ್ತಿದೆ. 

ಮುಳ್ಳು ಮತ್ತು ನೋವೆಂದರೇನು?

ಇದ್ಯಾವುದೋ ಹುಚ್ಚರ ಸಂತೆಯೆನ್ನಿಸಿತು. ಮುಳ್ಳೆಂದರೆ ಏನು ಎಂದು ತಿಳಿಯದವಳಿಗೆ ಏನು ಹೇಳಲಿ? ಯೋಚಿಸಿದೆ. ಹೂವಿರುವಲ್ಲಿ ಮುಳ್ಳು ಇರಬೇಕಲ್ಲ? ಅಕ್ಕಪಕ್ಕದ ಹೂಗಿಡಗಳಲ್ಲಿ ತಡಕಾಡಿದೆ. ಊಹುಂ, ಯಾವ ಗಿಡದಲ್ಲೂ ಮುಳ್ಳಿಲ್ಲ! 

ಇಲ್ಲೆಲ್ಲಾದರೂ ಗುಲಾಬಿ ಗಿಡವಿದ್ದಿದ್ದರೆ... ಎಂದು ಯೋಚಿಸುವಾಗಲೇ ಅದೂ ಕೂಡ ಕಂಡಿತು. ಓಡಿ ಹೋಗಿ ನೋಡಿದೆ. ಆಶ್ಚರ್ಯ! ಅದರಲ್ಲೂ ಮುಳ್ಳಿಲ್ಲ! ಹಾಗಾದರೆ ಇದು ಮುಳ್ಳುಗಳನ್ನೇ ಅರಿಯದ ಲೋಕ ಎಂದರ್ಥವಾಯ್ತು. ಆದರೆ ನೋವು ಸಹ ತಿಳಿಯದು ಅಂತಿದ್ದಾಳಲ್ಲ ಇವಳು? ಅದನ್ನು ತೋರಿಸಿಯೇ ಬಿಡುವುದೆಂದು ತೀರ್ಮಾನಿಸಿ ಒಂದು ಚಿಕ್ಕ ಕೋಲನ್ನು ತೆಗೆದುಕೊಂಡು ಅವಳ ಕೈಗೆ ಬಾರಿಸಿದೆ. ನೋವೆಂದರೆ ಏನೆಂದು ತಿಳಿಯಲೆಂದು ಜೋರಾಗಿಯೇ ಹೊಡೆದಿದ್ದೆ! 

ಆ... ಚೀರಿದಳು ಸುಂದರಿ. ನನಗೆ ಸಂತೊಷವಾಯ್ತು...

ಗೊತ್ತಾಯಿತಾ? ಇದುವೇ ನೋವು! ಎಂದೆ. 

ಹೌದಾ? ವೇದನೆಯಲ್ಲೇ ಕೇಳಿದಳಾಕೆ. 

ಇದಕ್ಕೆ ನೀವೇನು ಹೇಳುತ್ತೀರಿ? 

ಹೇಳುವುದೇನಿದೆ? ಅನುಭವಿಸುವುದು! 

ಅದೇ ಅನುಭವ ನನಗೂ ಆಗ್ತಿದೆ. 

ಕೊಂಚ ಇರು, ಎಂದವಳು ನಾಲ್ಕೈದು ಜಾತಿಯ ಹೂವುಗಳನ್ನು ತೆಗೆದುಕೊಂಡು ಹೊಸಕಿ ನನ್ನ ಅಂಗೈಗಾದ ಗಾಯಕ್ಕೆ ಹಚ್ಚಿದಳು. ತಣ್ಣನೆಯ ಅನುಭವದೊಂದಿಗೆ ನೋವು ಮರೆಯಾಗತೊಡಗಿತು. ಹಾಗೆ ಹಚ್ಚಲೆಂದು ಸನಿಹ ಬಂದವಳ ಹತ್ತಿರದ ನೋಟ ನನ್ನ ಮನಸ್ಸನ್ನು  ಕಲ್ಲೋಲಗೊಳಿಸಿತು. ಹೂಗಳ ವಸ್ತ್ರದ ಸಂದಿಯಿಂದ ಕಂಡು ಬರುತ್ತಿದ್ದ ಆಕೆಯ ಎದೆಯ ಯೌವನದಂಗಗಳು ನನ್ನನ್ನು ಚಂಚಲಚಿತ್ತಗೊಳಿಸಿದವು. ಆಕೆಯಿಂದ ವಿಶೇಷವಾದ ಘಮವೊಂದು ಸೂಸುತ್ತಲಿತ್ತು. ಅವಳ ಕೈ ಸ್ಪರ್ಶವಾದಾಗ ಮಂಜಿನ ಹಿತ ಸ್ಪರ್ಶದಂತಿತ್ತು! 

ಸ್ವಲ್ಪ ಮುಂದೆ ಹೋದಾಗ ಒಂದಿಷ್ಟು ಹುಡುಗಿಯರ ಕಿಲಕಿಲ ನಗು ಕೇಳಿ ಬಂದಿತು. ನೋಡಿದರೆ ಸುಂದರಿಯರ ದಂಡೊಂದು ನವಿಲಿನ ಹಿಂಡಿನಂತೆ ನಡೆದು ಬರುತ್ತಲಿತ್ತು. ಅವರೂ ಸಹ ಹೂವಿನಿಂದ ತಯಾರಿಸಿದ ವಸ್ತ್ರವನ್ನೇ ಧರಿಸಿದ್ದರು. ಅವರೆಲ್ಲಾ ಎದುರು ಬಂದಾಗ ನನ್ನನ್ನು ನೋಡಿ ಅಚ್ಚರಿಯಿಂದ ಈ ಸುಂದರಿಯಲ್ಲಿ ಯಾರಿವರು?  ಕೇಳಿದರು. 

ಗೊತ್ತಿಲ್ಲ... ಮೇಲಿನಿಂದ ಇಳಿದರು. 

ಎಲ್ಲಿಗೆ ಕರೆದೊಯ್ಯುತ್ತಿರುವೆ? 

ಈ ಲೋಕ ನೋಡಬೇಕಂತೆ. 

ಹೌದಾ? ಹಾಗಿದ್ದರೆ ತೋರಿಸು. ಎಂದು ಹೇಳಿ ಮತ್ತೆ ನಗುತ್ತಾ ನಡೆದು ಹೋದರು. 

ನಾನು ಇವಳಲ್ಲಿ ಯಾರೋ ಗೊತ್ತಿಲ್ಲ ಅಂತ ಯಾಕೆ ಹೇಳ್ತೀರಿ? ನಾನು ನರಮನುಷ್ಯ! ಹೆಸರು ಪುರುಷೋತ್ತಮ ಎಂದೆ. 

ಅವಳು ಮತ್ತೆ ಕೇಳಿದಳು, ಹೆಸರು ಎಂದರೆ?

ನಮ್ಮಲ್ಲಿ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ಗುರುತಿಸಲು ಇಡುವ ಪದವದು. ಪುರುಷೋತ್ತಮ ಎಂದು ಕರೆದರೆ ಎಷ್ಟೇ ಜನರಿದ್ದರೂ ನಾನು ಮಾತ್ರವೇ ತಿರುಗಿ ನೋಡುತ್ತೇನೆ. 

ಇಲ್ಲಿ ಹಾಗಿಲ್ಲವಲ್ಲ?! 

ನಿನ್ನನ್ನು ಸುಂದರಿಯೆಂದೇ ಕರೆಯೋಣವೆಂದುಕೊಂಡಿದ್ದೆ. ಆದರೆ ಇಲ್ಲಿ ನೋಡಿದರೆ ಎಲ್ಲರೂ ಸುಂದರಿಯರೇ. ಹಾಗಾಗಿ ನಿನಗೊಂದು ಹೆಸರು ಇಡುತ್ತೇನೆ. 

ಏನು ಇಡುತ್ತೀಯಾ? 

ಯೋಚಿಸಿ ಸ್ವಾತಿ ಎಂದಿರಿಸಲೇ? ಕೇಳಿದೆ. 

ಅಂದರೆ ನೀನು ಸ್ವಾತಿ ಎಂದಾಗೆಲ್ಲಾ ನಾನು ತಿರುಗಿ ನೋಡಬೇಕೆ? ಕೇಳಿದಳು. 

ಹೌದು.. ಅದೇ ನಿನ್ನ ಹೆಸರು ಎಂದೆ.

ಒಪ್ಪಿಕೊಂಡಳು. ಮುಂದೆ ಹೋದಾಗ ಒಂದಿಷ್ಟು ಜನ ಕುಳ್ಳಗಿನ ಗಂಡಸರು ಕಂಡು ಬಂದರು. ಅವರು ಹೂತೋಟ ನಿರ್ಮಿಸುವುದರಲ್ಲೇ ಮಗ್ನರಾಗಿದ್ದರು. ಈ ಹುಡುಗಿಯರಿಗಿಂತಲೂ ತುಂಬಾ ಕುಳ್ಳಗಿರುವುದು ಅಚ್ಚರಿಯೆನಿಸಿತು. ಸ್ವಾತಿ, ಅವರೆಲ್ಲಾ ಕೆಲಸ ಮಾಡುತ್ತಲೇ ಇದ್ದಾರೆ. ಹೆಂಗಳೆಯರೆಲ್ಲಾ ತಿರುಗಾಡುತ್ತೀದ್ದೀರಿ. ಏನಿದರ ಅರ್ಥ? ಎಂದು ಕೇಳಿದೆ. 

ಹೌದು, ಇಲ್ಲಿ ಗಂಡಸರೆಲ್ಲಾ ಕೆಲಸಗಾರರೇ. ಒಂದು ರೀತಿಯಲ್ಲಿ ಇದು ಸ್ತ್ರೀ ಪ್ರಧಾನ ಲೋಕ. ಆದರೆ ಅದು ಅವರೇ ಆರಿಸಿಕೊಂಡಿದ್ದು. ಅವರಿಗೆ ಕೆಲಸ ಮಾಡದೇ ಇರಲು ಆಗುವುದಿಲ್ಲ. ಹಾಗೆಯೇ ನಾವು ಚಿಕ್ಕ ಕೆಲಸ ಮಾಡುವುದನ್ನೂ ಅವರು ಒಪ್ಪುವುದಿಲ್ಲ. ನಮಗೊಬ್ಬಳು ರಾಣಿಯಿದ್ದಾಳೆ.  ಅವಳು ಹೇಳಿದಂತೆಯೇ ನಾವೆಲ್ಲಾ ಕೇಳುವುದು. ಅದರಲ್ಲೂ ಇಲ್ಲಿನ ಗಂಡಸರು ರಾಣಿಯ ಸೇವೆಗಾಗಿ ಹಾತೊರೆಯುತ್ತಿದ್ದಾರೆ. ಅದು ದೊರೆಯದಿದ್ದರೂ ಉಳಿದ ಸ್ತ್ರೀಯರ ಸೇವೆಯೇ ಅವರಿಗೆ ಸಂತಸ ನೀಡುತ್ತದೆ. 

ಮದುವೆ ನಡೆಯುತ್ತದೆಯೇ? 

ಮದುವೆಯೆಂದರೆ? 

ಸರಿ ಹೋಯ್ತು.. ಗಂಡು ಹೆಣ್ಣು ಒಂದಾಗುವುದು? 

ಅದಾ? ನಾಚುತ್ತಾ ಉತ್ತರಿಸಿದಳು... ರಾಣಿ ತನಗೆ ಬೇಕಾದ ಬಲಿಷ್ಠ ಗಂಡನೊಬ್ಬನನ್ನು ದಿನವೂ ಆರಿಸಿಕೊಳ್ಳುತ್ತಾರೆ. ಉಳಿದವರೂ ತಮಗೆ ಬೇಕೆನಿಸಿದಾಗ ಇಷ್ಟವಾದ ಗಂಡನ್ನು ಆರಿಸಿಕೊಳ್ಳುತ್ತಾರೆ. 

ಅವಳ ಮಾತು ಕೇಳಿ ಪೆಚ್ಚಾದೆ. 

ಅವಳು ನಿಂತು ಕೇಳಿದಳು... ಯಾಕೆ ಹಾಗೆ ಮುಖ ಪೆಚ್ಚು ಮಾಡಿಕೊಂಡೆ? 

ಹಾಗಾದರೆ... ನಿನಗಿಷ್ಟವಾದ ಗಂಡು ಯಾರು? ಎಂಬ ಪ್ರಶ್ನೆಯನ್ನು ಕೇಳಿ, ಅವಳಿಂದ ಇನ್ನೆಂತಹ ಉತ್ತರ ಬರುತ್ತದೋ ಎಂಬ ಅಂಜಿಕೆಯಲ್ಲಿ ನಿಂತೆ. 

ಛೇ, ನನಗಿದುವರೆಗೂ ಯಾರೂ ಹಿಡಿಸಿಯೇ ಇಲ್ಲ. ನಾನಿನ್ನೂ ಕನ್ಯೆಯಾಗುಳಿದಿದ್ದೇನೆ. ಏಕೆಂದರೆ ನಾನು ಹೇಳಿದ ಕೆಲಸವನ್ನು ಈ ಲೋಕದ ಯಾವ ಗಂಡಸೂ ಮಾಡಲಾಗಿಲ್ಲ. 

ಏನು ಕೆಲಸ ಹೇಳಿದೆ ಸ್ವಾತಿ ನೀನು? 

ಆಗಲೇ ತೋರಿದೆನಲ್ಲ ಪೌರ್ಣಮಿ ಸರೋವರವನ್ನು? ಅದರಲ್ಲಿ ಒಂದು ವಿಶಿಷ್ಟವಾದ ಚಿನ್ನದ ವರ್ಣದ ಮೀನಿದೆ. ಅದನ್ನು ಹಿಡಿದು ನನಗೆ ಕೊಡಬೇಕು. 

ಅದೇಕೆ ನಿನಗೆ? 

ಅದರ ತಲೆಯೊಳಗೆ ವಜ್ರದ ಹರಳಿರುತ್ತದೆ. ಅದರಿಂದ ನಾನು ಮೂಗುತಿ ಮಾಡಿಸಿ ಹಾಕಿಕೊಳ್ಳಬೇಕು. 

ಆದರೆ ಯಾವ ಗಂಡಸರೂ ಯಾಕೆ ಆ ಮೀನನ್ನು ಹಿಡಿದು ತರಲಿಲ್ಲ? 

ಇಲ್ಲಿಯವರಿಗೆ ಈಜು ಬಂದರೆ ತಾನೇ? ಕೆಲವರು ಬಲೆ ಹಾಕಿಯೂ, ಕೆಲವರು ಗಾಳ ಹಾಕಿಯೂ ಅದನ್ನು ಹಿಡಿಯಲು ನೋಡಿದರು. ಆದರದು ಸಿಗಲಿಲ್ಲ. 

ನಾನು ಪ್ರಯತ್ನಿಸಲೇ? 

ತುಂಬಾ ಸಂತೋಷ, ಪ್ರಯತ್ನಿಸು. 

ನಾನು ಗೆದ್ದರೆ ನನ್ನನ್ನು ಮದುವೆಯಾಗ್ತೀಯಾ? 

ಹ್ಞುಂ, ಆಗ್ತೀನಿ. 

ಬಾ ಹೋಗೋಣ ಸರೋರವರಕ್ಕೆ ಎಂದು ಹೇಳಿ ನೀರೇ ಕಾಣದ ಸರೋವರದಲ್ಲಿ ಚಿನ್ನದ ವರ್ಣದ ಮೀನನ್ನು ಹಿಡಿಯಲು ತವಕಿಸಿದೆ. 

ಅವಳು ತಡೆದು ಬಾ, ಹೀಗೆಯೇ ಒಂದು ಸುತ್ತು ಹಾಕಿ ಅಲ್ಲಿಗೆ ಹೋಗೋಣ ಎಂದಳು. 

ಆ ದಾರಿಯಲ್ಲಿ ಹೂಗಳನ್ನೇ ನೇಯ್ದು ಉಡುಪು ತಯಾರಿಸುತ್ತಿದ್ದವರನ್ನು ತೋರಿಸಿದಳು. ಆ ಲೋಕದಲ್ಲಿ ರೋಗವೆಂಬುದೇ ಇರಲಿಲ್ಲವಾದ್ದರಿಂದ ಆಸ್ಪತ್ರೆಯೂ ಇರಲಿಲ್ಲ. ಜಾತಿ, ಧರ್ಮ, ಭಾಷೆಗಳ ಭೇದಭಾವವಿರಲಿಲ್ಲ. ಸೋಮಾರಿತನ ವೆಂದರೇನೆಂಬುದೇ ತಿಳಿದಿರಲಿಲ್ಲ. 

ಒಂದು ಸುತ್ತು ಹಾಕಿ ಆ ಸರೋವರಕ್ಕೆ ಬಂದೆವು. ಅಲ್ಲಿ ಆಡುತ್ತಿದ್ದ ಚಿನ್ನದ ವರ್ಣದ ಮೀನನ್ನು ಸ್ವಾತಿ ನನಗೆ ತೋರಿಸಿದಳು. ನಾನು ನೀರಿನಲ್ಲಿ ಇಳಿದು ಮುಳುಗಿ ಆ ಮೀನನ್ನು ಬೆನ್ನಟ್ಟಿದೆ. ತುಂಬಾ ಸಮಯ ಪ್ರಯತ್ನಿಸಿದ ನಂತರ ಅದು ನನ್ನ ಕೈಗೆ ಸಿಕ್ಕಿ ಬಿದ್ದಿತು. ಅದನ್ನು ತಂದು ಆ ಸುಂದರಿಯ ಕೈಲಿರಿಸಿದಾಗ ವಿಪರೀತ ಸಂತೋಷ ಪಟ್ಟುಕೊಂಡಳಾಕೆ. ನಂತರ ಇದರಲ್ಲಿರುವ ವಜ್ರವನ್ನು ತೆಗೆದು ನನ್ನ ಮೂಗುತಿಗೆ ತೊಡಿಸು ಎಂದಳು. 

ನಾನು ಹಾಗೆಯೇ ಮಾಡಿದೆ. ಮಿರಮಿರನೆ ಮಿಂಚುತ್ತಿದ್ದ ಆ ಹರಳಿನಿಂದಾಗಿ ಅವಳು ಇನ್ನೂ ದೇವತೆಯಂತೆ ಕಂಗೊಳಿಸ ತೊಡಗಿದಳು. ಮರುಕ್ಷಣವೇ ಅವಳು ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು ಓ ಅಂತರ ಲೋಕದ ಕಿನ್ನರಾ... ನನ್ನ ಆಸೆಯನ್ನು ಪೂರೈಸಿದ ಮನೋಹರ... ನಾನಿನ್ನು ನಿನಗೇ ಸ್ವಂತ... ನನ್ನನ್ನು ಹೊಂದು ಬಾ... ಎಂದುಲಿದು ಕಣ್ಮುಚ್ಚಿಕೊಂಡಳು. 

ಆ ಸುಂದರ ಮೃದು ದೇಹಿಯ ಮೇಲಿನ ಪುಷ್ಪಗಳ ಉಡುಗೆ ನನ್ನ ಕೈಚಳಕದಿ ದೂರಾಯಿತು. ನನ್ನ ಪ್ರೇಮ ರಾಗಕೆ ವೀಣೆಯಾದಳು. ದೇವರಾಗ ಆಕ್ಷಣದಲ್ಲಿ ನಮ್ಮಿಬ್ಬರ ದೇಹರಾಗವಾದಂತೆ ಒಂದಾದೆವು. ಆ ವಿಶಿಷ್ಟ ಲೋಕದ ಹೂಹಾಸಿನ ನೆಲ ನಮಗೆಂದೇ ಸಿದ್ಧಗೊಂಡಿತ್ತೇನೋ ಅನ್ನಿಸಿತು. ಅದರ ಮೇಲೆ ನರಮಾನವ ಮತ್ತು ಸೌಗಂಧಿಕಾ ಸ್ತ್ರೀಯ ದೇಹ ಸಮಾಗಮ ಎರಡು ಮನಸ್ಸುಗಳ ಸಮರ್ಪಣೆಯೊಂದಿಗೆ ನಡೆದೇ ಹೋಯ್ತು.

ಹಾಗೆ ತುಂಬಾ ಹೊತ್ತು ಕಳೆದ ನಂತರ ಬಾ ನನ್ನ ಜೊತೆ ಎಂದು ಹೇಳಿ ಕೈ ಹಿಡಿದುಕೊಂಡು ಕರೆದೊಯ್ದು ಅವರ ರಾಣಿಯೆದುರು ನಿಲ್ಲಿಸಿದಳು ಸ್ವಾತಿ. 

ರಾಣಿಯು ಅಚ್ಚರಿಯಿಂದ... ಹೇ ಯಾರಿವನು? ಎಂದು ಕೇಳಿದಳು. 

ಮಹಾರಾಣಿ... ಇವರು ಮೇಲಿನ ಲೋಕದಿಂದ ಇಳಿದು ಬಂದವರು... ಇವರೇ ನನ್ನ ಪತಿಯಾಗಿದ್ದಾರೆ ಹೆದರುತ್ತಾ ನುಡಿದಳು ಸ್ವಾತಿ. 

ಒಮ್ಮೆಲೇ ರಾಣಿಯ ಮುಖ ಸೂರ್ಯನಷ್ಟು ಉರಿಯಲಾರಂಭಿಸಿತು. ನಮ್ಮ ಲೋಕದ ಹೆಣ್ಣನ್ನು ಲಪಟಾಯಿಸಲು ಬಂದ ಧೂರ್ತನಿವನು. ಯಾರಲ್ಲಿ... ಇವನನ್ನು ಹಿಡಿದು ಮಕರ ಸರೋವರಕ್ಕೆ ಹಾಕಿ ಮೊಸಳೆಗಳಿಗೆ ಆಹಾರವಾಗಿಸಿ. ಎಂದು ಕಿರುಚಿದಳು. 

ಸ್ವಾತಿ ಭಯ ಭೀತಳಾಗಿ ನನ್ನನ್ನು ತಬ್ಬಿ ಹಿಡಿದು ಅಯ್ಯೋ...  ಪುರುಷೋತ್ತಮಾ... ಇಬ್ಬರನ್ನೂ ಸಾಯಿಸುತ್ತಾರೆ. ಏನಾದರೂ ಮಾಡು ಎಂದು ಅಂಗಲಾಚಿದಳು. 

ಅದಾಗಲೇ ಕುಳ್ಳಗಿನ ಗಂಡಸರು ಯಾವ ಯಾವುದೋ ಆಯುಧವನ್ನು ಹಿಡಿದು ಬರುತ್ತಿದ್ದರು. ನಾನು ಅನಾಮತ್ತಾಗಿ ಸ್ವಾತಿಯನ್ನು ಎತ್ತಿಕೊಂಡು ಓಡಿದೆ. ಆ ಗಂಡಸರು ನನ್ನ ವೇಗಕ್ಕೆ ಓಡಲಾಗದಿದ್ದರೂ ಆಯುಧದೊಂದಿಗೆ ಬೀಳುತ್ತಾ  ಏಳುತ್ತಾ ಬರುತ್ತಲಿದ್ದರು. 

ನಾನಿರಿಸಿದ್ದ ಆಕಾಶಬುಟ್ಟಿಯ ಬಳಿಯ ಬಂದು ದೊಂದಿಗೆ ಎಣ್ಣೆ ಸುರಿದು ಬೆಂಕಿ ಹೊತ್ತಿಸಿದೆ. ಅದರೊಳಗಿನ ಗಾಳಿ ಬಿಸಿಯೇರತೊಡಗಿತು. ಅವರು ಹತ್ತಿರ ಬರುತ್ತಲಿದ್ದರು. ಅಷ್ಟರೊಳಗೆ ಇದು ಹಾರುತ್ತದಾ? ಸಂದೇಹ. ಅಲ್ಲದೇ ಇದು ಇಬ್ಬರನ್ನೂ ಹೊತ್ತು ಹಾರುತ್ತದಾ? ಅದೂ ಕೂಡಾ ಸಂದೇಹ. ಇಂದು ದಿಕ್ಕಿಲ್ಲದ ಲೋಕದಲ್ಲಿ ಮೊಸಳೆಗೆ ಆಹಾರವಾಗುತ್ತೇನೆಂದುಕೊಂಡೆ. 

ಅಂತೂ ಆಕಾಶಬುಟ್ಟಿ ಮೇಲೆದ್ದಿತು. ಅದು ಇನ್ನೊಮ್ಮೆ ಮೇಲೇರಿದಾಗ ಹಗ್ಗದ ಜೋಕಾಲಿಯಲ್ಲಿ ನಾನು ಕುಳಿತುಕೊಂಡು ಸ್ವಾತಿಯನ್ನು ನನ್ನ ತೊಡೆಯ ಮೇಲೆ ಕೂರಿಸಿಕೊಂಡೆ. ಕುಳ್ಳನೆ ಗಂಡಸರು ಹತ್ತಿರ ಬರುವುದಕ್ಕೂ ಆಕಾಶಬುಟ್ಟಿ ಹಾರುವುದಕ್ಕೂ ಸರಿಹೋಯ್ತು. ಕಡೆಗೂ ಅವರ ಕೈಗೆ ಸಿಗಲಿಲ್ಲ!

ಅಲ್ಲಿ ಗಾಳಿಯೇನೂ ಬೀಸುತ್ತಿರಲಿಲ್ಲವಾದ್ದರಿಂದ ನೇರವಾಗಿ ಮೇಲೇರಿ ಹೊರಗಿನ ಪ್ರಪಂಚಕ್ಕೆ ಬಂದೆವು. ಸಹ್ಯಾದ್ರಿಯ ವನಸಿರಿಯನ್ನು ನೋಡಿ ಆ ಪಾತಾಳ ಲೋಕದ ಸುಂದರಿ ದಿಜ್ಞೂಢಳಾದಳು. ಆದರೆ ನಮ್ಮ ಗಗನನೌಕೆ ಹಾರುತ್ತಾ ಹಾರುತ್ತಾ ಸಮುದ್ರದ ದಿಕ್ಕಿಗೆ ಹೊರಟಿತು. ಮಡಿಲಲ್ಲಿ ಅವಳಿದ್ದುದರಿಂದ ನನಗೆ ಬೇರೇನೂ ಮಾಡಲೂ ತೋಚದೇ, ಅವಳ ಸೌಂದರ್ಯವನ್ನೇ ಸವಿಯುತ್ತ, ಇಹವನ್ನೇ ಮರೆತೆ... ನಮ್ಮ ನೌಕೆ ಒಂದೊಂದೇ ಕಡಲನ್ನು ದಾಟುತ್ತಾ ಕೊನೆಗೊಮ್ಮೆ ಸಪ್ತಸಾಗರವನ್ನೂ ದಾಟಿ ಸಾವಿಲ್ಲದ, ಭಯವಿಲ್ಲದ, ಮೊದಲು ಕೊನೆಗಳೆರಡು ಇಲ್ಲದ ಸುಂದರ ಲೋಕಕ್ಕೆ ಕರೆದೊಯ್ಯಿತು. 
ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…