ವಿಷಯಕ್ಕೆ ಹೋಗಿ

ಶಿಕ್ಷಣ ಮಾಫಿಯಾ !ಏಪ್ರಿಲ್ ಕಳೆದು ಮೇ ಬಂತೆಂದರೆ ಮಕ್ಕಳಿರುವ ಮನೆಯಲ್ಲಿ ತಲ್ಲಣ ಶುರುವಾಗುತ್ತದೆ. ಅದು ಮಕ್ಕಳನ್ನು ಶಾಲೆಗೆ ಸೇರಿಸುವ, ಅಥವಾ ಮುಂದಿನ ತರಗತಿಗೆ ಶುಲ್ಕ ತುಂಬುವ ತಲ್ಲಣ. ಕೆಲವೇ ವರ್ಷಗಳ ಹಿಂದಿನವರೆಗೂ ವಿದ್ಯೆ ಇಷ್ಟೊಂದು ದುಬಾರಿಯಾಗಿರಲಿಲ್ಲ. ಬಡ ಹಾಗೂ ಮಧ್ಯಮ ವರ್ಗದವರಿಗೆ ಉನ್ನತ ಶಿಕ್ಷಣವೊಂದು ಕೈಗೆಟುಕದ ಹಾಗಿತ್ತು ಅನ್ನುವುದನ್ನು ಬಿಟ್ಟರೆ ಪ್ರಾಥಮಿಕ ಶಿಕ್ಷಣವಾಗಲೀ ಪ್ರೌಢ ಶಿಕ್ಷಣವಾಗಲೀ ಅಥವಾ ಕಾಲೇಜು ವಿದ್ಯಾಭ್ಯಾಸವಾಗಲೀ - ಇವ್ಯಾವೂ ದುಬಾರಿ ಅನ್ನಿಸುತ್ತಲೇ ಇರಲಿಲ್ಲ. ಹಾಗಾಗಿ ಮನೆಯ ಮಕ್ಕಳು ಕಾಲೇಜು ಶಿಕ್ಷಣ ಮುಗಿಸುವವರೆಗೂ ಮನೆ ಮಂದಿಗೆ ಓದಿಸುವ ತಲೆ ಬಿಸಿ ಅಂತ ಏನೂ ಅನ್ನಿಸುತ್ತಿರಲಿಲ್ಲ. ಓದುವವರಿಗಷ್ಟೇ ಅದು ಇರುತ್ತಿದ್ದುದು. 

ಆದರೆ ಈಗೇನಾಗಿ ಹೋಗಿದೆ ? ವಿದ್ಯೆಯನ್ನ ಯಾರೂ ಕದಿಯಲಾಗದು, ಕದಿಯಲಾಗದ ವಸ್ತು ವಿದ್ಯೆ-ಸರಸ್ವತಿ ಎಂದೆಲ್ಲಾ ಹೇಳಲಾಗುತ್ತಿತ್ತು. ಶಿಕ್ಷಣ ಅಥವಾ ವಿದ್ಯೆ ಎಂದು ಹೇಳಲ್ಪಡುವ ವಿಷಯ ದೇಶದ ಪ್ರಮುಖ ವ್ಯಾಪಾರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಹಿಂದೆ ವರ್ತಕರು ದಿನಸಿ ಅಂಗಡಿ ಇಟ್ಟರೆ ನಷ್ಟ ಬಾರದು ಎಂದು ಹೇಳುತ್ತಿದ್ದರು. ಆ ಮಾತು ಈಗ ಶಾಲೆಯೊಂದನ್ನು ತೆರೆದರೆ.. ಎಂಬಂತೆ ಮಾರ್ಪಾಟಾಗಿದೆ. ಬೇರೆ ಯಾವ ವ್ಯವಹಾರ ಮಾಡಲು ತೊಡಗಿದರೂ ನಷ್ಟವೇರ್ಪಡುವ ಅವಕಾಶ ಇದೆ. ಆದರೆ ಶಾಲೆಯೊಂದನ್ನು ತೆರೆದುದೇ ಆದರೆ ಯಾವ ಕಾರಣಕ್ಕೂ ನಷ್ಟ ಎಂಬುದಿಲ್ಲ. ಏಕೆಂದರೆ ಇದೊಂದು ಪಕ್ಕಾ ವ್ಯಾಪಾರಿ ಸರಕಾಗಿ ಬದಲಾಗಿ ಹೋಗಿದೆ. ಇಂದಿನ ದಿನಗಳಲ್ಲಿ ರಾಜಕೀಯ, ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆ - ಈ ಮೂರೂ ದುಡ್ಡು ಮಾಡಲು ಇರುವ ಅತ್ಯಂತ ಸುಲಭದ ದಾರಿಗಳು! ಕೆಲವೇ ವರ್ಷಗಳ ಹಿಂದೆ ವಿದ್ಯೆ ಎಂಬ ಸರಸ್ವತಿ ದೇವತೆಯಾಗಿ ಕಂಗೊಳಿಸುತ್ತಿದ್ದಳು. ಆದರೆ ಈಗ ಆಕೆ ವ್ಯಾಪಾರಿ ಕುಳಗಳ ಕೈಯಲ್ಲಿ ವ್ಯಾಪಾರಕ್ಕಿಳಿದ ವೇಶ್ಯೆಯಂತೆ ನಲುಗಿ ಹೋಗಿದ್ದಾಳೆ. ಜೀವನಾಶ್ಯಕ ವಿಷಯವಾದ ಶಿಕ್ಷಣ ಕೂಡಾ ಖಾಸಗಿಯವರ ಹಿಡಿತದಲ್ಲಿ ನಲುಗುತ್ತಿದೆ. ಇದಕ್ಕೆಲ್ಲಾ ಕಾರಣ ಯಾರು ?

ನಾವೇ ! ದುಡ್ಡಿನ ಹಿಂದೆ ಓಡುತ್ತಿರುವವರು !

ಜೂನ್ ಕಳೆದ ನಂತರ ಮಗುವನ್ನು ಶಾಲೆಗೋ, ಕಾನ್ವೆಂಟಿಗೋ ಸೇರಿಸಿದ ಕನಿಷ್ಟ ಒಬ್ಬ ಆಟೋ ಚಾಲಕನನ್ನು ಮಾತಾಡಿಸಿ ನೋಡಿ.. ಆ ಕಾನ್ವೆಂಟಿನಲ್ಲಿ ನಾಲ್ಕು ಲಕ್ಷ ಕೇಳಿದರು, ನಮಗೆಲ್ಲಾ ಅಷ್ಟೊಂದು ಕಟ್ಟಲು ಎಲ್ಲಿ ಆಗುತ್ತೆ ಹೇಳಿ. ಕೊನೆಗೆ ಇನ್ನೊಂದರಲ್ಲಿ ಎರಡೂವರೆ ಲಕ್ಷಕ್ಕೆ ಸೇರಿಸಿದೆ. ಮಕ್ಕಳು ಓದಬೇಕಲ್ಲ!? ಕೂಡಿಟ್ಟಿದ್ದು ಒಂದು ಲಕ್ಷ ಇತ್ತು, ಇನ್ನು ಒಂದೂವರೆ ಲಕ್ಷ ಸಾಲ ಮಾಡಿದೆ. ದಿನಾ ದುಡಿದು ಸಾಲ ತೀರಿಸಬೇಕು! ಎಂಬಂತಹ ಮಾತುಗಳು ಕೇಳಿ ಬರದಿದ್ದರೆ ಹೇಳಿ. ಇದರಲ್ಲಿ ತಪ್ಪು ಯಾರದು ? ಲಕ್ಷಾಂತರ ಪೀಕುವ ಶಾಲೆಗಳದ್ದಾ ? ಅಥವಾ ಅಷ್ಟನ್ನು ಸಾಲ ಸೋಲ ಮಾಡಿ ಕಟ್ಟಿ ಓದಿಸುವ ಪಾಲಕರದ್ದಾ ? ಪಾಲಕರದ್ದು ತಪ್ಪು ಅನ್ನುವುದಾದರೆ ಕೋಟ್ಯಾಧೀಶರ ಮಕ್ಕಳು ಅದೇ ಲಕ್ಷಗಳನ್ನು ಉಂಡೆಲೆ ಬಿಸಾಡುವಂತೆ ಬಿಸಾಡಿ ವಿದ್ಯೆ ಪಡೆಯುತ್ತಾರಲ್ಲ ? ಉತ್ತಮವಾದ ಶಿಕ್ಷಣ ಸಹ ಹಣದ ಆಧಾರದಲ್ಲಿಯೇ ದೊರೆಯಬೇಕೇ ? 

ಇಂದು ಶಿಕ್ಷಣವೇ ಸರ್ವಸ್ವ, ಅಂಕಗಳೇ ದೇವರು ಎಂಬ ಮನೋಭಾವದಲ್ಲಿ ಅರಿವೇ ಗುರು ಕಲ್ಪನೆ ಮೂಲೆ ಸೇರಿದೆ. ಹಣದ ಹರಿವಿನ ಮುಂದೆ ಜ್ಞಾನದ ಅರಿವು ಕಾಲ ಕಸವಾಗಿದೆ. ಅಂಕ ಗಳಿಸಿದ ವಿದ್ಯಾರ್ಥಿ ಜ್ಞಾನದಲ್ಲಿ ಹಿಂದಿದ್ದರೂ ವ್ಯಾಪಾರೀ ಸಮಾಜದಲ್ಲಿ ಮುಂದೋಡುತ್ತಾನೆ. ಆದರೆ ಜ್ಞಾನ ಪಡೆಯುತ್ತಾ ಕುಳಿತ ವಿದ್ಯಾರ್ಥಿ ಅಂಕಗಳನ್ನು ಅಷ್ಟಕ್ಕಷ್ಟೇ ಎಂಬಂತೆ ಪಡೆದು ವ್ಯಾಪಾರಿ ಭೂಮಿಕೆಯಲ್ಲಿ ಹಿಂದುಳಿಯುತ್ತಾನೆ. ಜ್ಞಾನಕ್ಕಾಗಿ ವಿದ್ಯೆ ಅನ್ನುವುದು ಹೋಗಿ ದುಡಿಮೆಗಾಗಿ ವಿದ್ಯೆ ಅನ್ನುವಂತಾಗಿದೆ. ಹಾಗಾಗಿ ತಮ್ಮ ಮಕ್ಕಳು ಚೆನ್ನಾಗಿ ಅಂಕ ಪಡೆದು ಹೆಚ್ಚು ಹೆಚ್ಚು ದುಡ್ಡು ಸಂಪಾದಿಸಬೇಕು ಎಂಬ ಹಠದಲ್ಲಿ ಪಾಲಕರು ಒಳ್ಳೊಳ್ಳೆಯ ಶಾಲೆಗಳನ್ನು ಹುಡುಕುತ್ತಿದ್ದರೆ, ಚೆನ್ನಾಗಿ ಅಂಕ ತೆಗೆಸಿ ತಾವೂ ಹೆಚ್ಚು ಹೆಚ್ಚು ದುಡಿಮೆ ಮಡಿಕೊಳ್ಳಬಹುದು ಎಂಬ ತಂತ್ರದಲ್ಲಿ ಶಾಲೆ/ಕಾಲೇಜುಗಳ ಮಾಲಿಕರು ಇದ್ದಾರೆ. ಇದರಲ್ಲಿ ಯಾರದು ತಪ್ಪು ? ಯಾರದು ಸರಿ ಎಂದು ನಿರ್ಧರಿಸುವುದು ಕಷ್ಟವಾದೀತು.

ಎಲ್ಲಾ ತಂದೆ ತಾಯಿಯರಿಗೂ ತಮ್ಮ ಮಕ್ಕಳ ಮೇಲೆ ಉಜ್ವಲ ಕನಸುಗಳಿರುವುದು ಸಹಜ. ತಮ್ಮ ಮಕ್ಕಳು ಚೆನ್ನಾಗಿ ಓದಿ ಮುಂದೆ ಬರಬೇಕು, ಉತ್ತಮವಾದ ನೌಕರಿ ಹಿಡಿದು ಚೆನ್ನಾಗಿ ಸಂಪಾದಿಸಿ ಚೆನ್ನಾಗಿ ಜೀವಿಸಬೇಕು ಎಂಬೆಲ್ಲಾ ಕನಸುಗಳು ಸಹಜವಾಗಿಯೇ ಇರುತ್ತವೆ. ತಮ್ಮ ಮಗನೂ ಸಹ ದೊಡ್ಡ ಅಧಿಕಾರಿ ಆಗಬೇಕು, ಐಎಎಸ್ ಆಗಬೇಕು, ಐಪಿಎಸ್ ಆಗಬೇಕು, ಡಾಕ್ಟರ್ ಆಗಬೇಕು, ಇಂಜಿನಿಯರ್ ಆಗಬೇಕು ಎಂದೆಲ್ಲಾ ಬಡವರು ಕನಸು ಕಾಣುವುದೇ ತಪ್ಪಾ ? ಇದಕ್ಕೆಲ್ಲಾ ಮೂಲ ಬಂಡವಾಳ ವಿದ್ಯೆಯೊಂದೇ ಆಗಿತ್ತು.. ಹಿಂದೆ. ಆದರೆ ಈಗ ?! ಅದರ ಜೊತೆ ಮತ್ತೊಂದು ವಿಷಯ ಸೇರಿಕೊಂಡಿದೆ. ಅದೇನೆಂದರೆ ದುಡ್ಡು ! ಉತ್ತಮ ವಿದ್ಯೆಯನ್ನು ಪಡೆಯಲಿಕ್ಕೂ ದುಡ್ಡು ಬೇಕು. ಇಷ್ಟು ಹಣವಿದ್ದರೆ ಈ ಮಟ್ಟದ ಶಾಲೆ, ಇನ್ನಷ್ಟು ಹಣವಿದ್ದರೆ ಆ ಮಟ್ಟದ ಶಾಲೆ ಎಂಬಂತಾ ಸ್ಥಿತಿ ನಿರ್ಮಾಣವಾಗಿದೆ.

ಸ್ವಾತಂತ್ರ್ಯ ಬಂದು ಅರ್ಧ ಶತಮಾನಕ್ಕೂ ಅಧಿಕ ಕಾಲ ಸಂದಿದ್ದರೂ ಸಹ ಇನ್ನೂ ಬಡ ಜನತೆಯೆ ನೋವು ಪರಿಹಾರವೇ ಆಗಿಲ್ಲ. ಅವರ ಸ್ಥಿತಿ ಗುಡಿಸಲಿನಿಂದ ಹೆಂಚಿನ ಮನೆಗೆ ಅಥವಾ ಬಾಡಿಗೆ ಮನೆಗೆ ಬಂದಿರುವುದಷ್ಟೇ ಇಷ್ಟು ವರ್ಷಗಳ ಸಾಧನೆ. ಇನ್ನೂ ಎಷ್ಟು ಶತಮಾನಗಳವರೆಗೆ ಈ ತಾರತಮ್ಯ ? ಎಷ್ಟು ಶತಮಾನಗಳ ವರೆಗೆ ಬಡವರು ಉನ್ನತ ಶಿಕ್ಷಣದಿಂದ ವಂಚಿತರಾಗಿಯೇ ಇರಬೇಕು ? ಉತ್ತಮವಾದ ಶಿಕ್ಷಣವನ್ನು ಸಿರಿವಂತರಂತೆಯೇ ಬಡವರೂ ಕೂಡಾ ಪಡೆಯುವ ಹಕ್ಕು ಸಹ ನಾಗರಿಕರಿಗೆ ಇಲ್ಲವೆ ? ಎಲ್ಲದರಲ್ಲೂ ವೈಪರೀತ್ಯ ತಾಂಡವವಾಡುತ್ತಿರುವಾಗ ಶಿಕ್ಷಣದಲ್ಲೂ ಹಾಗೆಯೇ ಆಗಬೇಕೆ ?

ನಮ್ಮ ಸಂವಿಧಾನದ ಪ್ರಕಾರ ಶಿಕ್ಷಣ ಮೂಲಭೂತ ಹಕ್ಕುಗಳಡಿ ಬರುತ್ತದೆ. ಆದರೆ ಆದು ಇತ್ತೀಚಿಗೆ ಸಂವಿಧಾನವನ್ನೂ ಮೀರಿ ಮೂಲಭೂತ ಹಕ್ಕಿನಿಂದ ಹೊರಗುಳಿಯುತ್ತಿದೆ. ದೇಶದ ಪ್ರತಿ ಮಕ್ಕಳೂ ಉತ್ತಮವಾದ ಶಿಕ್ಷಣವನ್ನು ಪಡೆಯಬೇಕು ಅನ್ನುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಚಿಂತನೆ. ಹಾಗೆಯೆ ವಿದ್ಯೆ ಅನ್ನುವುದು ಪ್ರತಿಯೊಬ್ಬರ ಹಕ್ಕು ಸಹ ಆಗಿದೆ. ಆದರೆ ಅದನ್ನು ಕಸಿದುಕೊಳ್ಳುತ್ತಿರುವುದು ಯಾರು ?

ಲಕ್ಷಾಂತರ ವಿದ್ಯಾರ್ಥಿಗಳೂ ಮತ್ತು ಪೋಷಕರುಗಳೂ ಆರ್‌ಟಿಐ ಕಾನೂನಿನಿಂದ ಸಂತಸ ಪಟ್ಟು, ಇದರಿಂದ ತಮ್ಮ ಕನಸುಗಳೂ ನೆರವೇರಲಿವೆ ಎಂದುಕೊಂಡಿದ್ದರು. ಆದರೆ ಆದುದೇ ಬೇರೆ. ಆರ್.ಟಿ.ಐ. ಬಂದರೂ ಅಷ್ಟೇ, ಯಾವ ಕಾನೂನು ಬಂದರೂ ಅಷ್ಟೇ, ಬಡವನಿಗೆ ಉಪಕಾರವಾಗುವ ಬದಲು ಸಿರಿವಂತರಿಗೇ ಮನ್ನಣೆ ಎಂಬಂತಾಗಿದೆ. ಶಿಕ್ಷಣವೆಂಬುದೇ ಒಂದು ಜೂಜುಕೋರರ ಅಡ್ಡದಂತಾಗಿ ಹೋಗಿದೆ. ಲಾಟರಿ ಮುಖಾಂತರ ವಿಜೇತರಾದವರಿಗೆ ಶಿಕ್ಷಣ ಕೊಡುವಂತಹ ವ್ಯವಸ್ಥೆ ಈಗ ಶುರುವಾಗಿದೆ.

ಶೈಕ್ಷಣಿಕ ಖಾಸಗೀಕರಣ ! ನೈಜ ವಿದ್ಯೆಗೆ ಮರಣ!

ಯಾವಾಗ ವಿದ್ಯೆಯನ್ನೂ ಹಪ್ಪಳ ಸಂಡಿಗೆಯಂತೆ ಮಾರಿ ದುಡ್ಡು ಸಂಪಾದಿಸಬಹುದು ಎಂಬ ವಿಷಯ ಉದ್ಯಮಪತಿಗಳಿಗೆ, ರಾಜಕಾರಣಿಗಳಿಗೆ ಬಂದಿತೋ ಆಗಲೇ ಅವರ ಒಡೆತನದಲ್ಲಿ ಖಾಸಗಿ ಶಾಲಾ ಕಾಲೇಜುಗಳು ತಲೆ ಎತ್ತತೊಡಗಿದವು. ಕರ್ನಾಟಕದಲ್ಲಿನ ಎಲ್ಲಾ ಖಾಸಗಿ ವಿದ್ಯಾ ಸಂಸ್ಥೆಗಳನ್ನು ಗಮನಿಸಿದರೆ ತಿಳಿಯುವುದೇನೆಂದರೆ ಬಹುತೇಕ ವಿದ್ಯಾಸಂಸ್ಥೆಗಳ ಮಾಲಿಕರು ಒಂದೋ ರಾಜಕಾರಣಿಗಳಾಗಿದ್ದಾರೆ, ಅಥವಾ ಇತರೆ ಉದ್ಯಮಪತಿಗಳಾಗಿದ್ದಾರೆ, ಅಥವಾ ಆಧ್ಯಾತ್ಮ ಭೋಧಿಸಬೇಕಾಗಿದ್ದ ಮಠಾಧೀಶರುಗಳಾಗಿದ್ದಾರೆ. ಸಾರ್ವತ್ರಿಕವಾದ ಹಕ್ಕನ್ನು ಸರಿಸಮನಾಗಿ ಹಂಚುವ ಯಾವ ಮುಖವೂ ಇಲ್ಲಿ ಕಂಡು ಬರುವುದಿಲ್ಲ. ಬೆರಳೆಣಿಕೆಯ ವಿದ್ಯಾಸಂಸ್ಥೆಗಳನ್ನು ಬಿಟ್ಟರೆ ಉಳಿದವುಗಳೆಲ್ಲಾ ಲಾಭದ ಉದ್ದೇಶದಿಂದ ಸ್ಥಾಪಿಸಿದ ಹಾಗೂ ಲಾಭದಿಂದಲೇ ನಡೆಯುತ್ತಿರುವ ಉದ್ದಿಮೆಗಾಳಾಗಿವೆ !

ಈ ಖಾಸಗಿ ವಲಯಕ್ಕೆ ವಿದ್ಯಾರ್ಥಿಗಳ ಹಿತ ಚಿಂತನೆ ಎಳ್ಳಷ್ಟೂ ಇರುವುದಿಲ್ಲ. ನೀನು ದುಡ್ಡು ಕೊಡುತ್ತೀಯ, ನಾನು ವಿದ್ಯೆ ಕೊಡುತ್ತೇನೆ ಎಂಬ ಒಂದು ಸಾಲಿನ ವ್ಯವಹಾರ ಇಲ್ಲಿ ನಡೆಯುತ್ತಿದೆ ಅಷ್ಟೇ. ಆದರೆ ಇನ್ನಷ್ಟು ಧನಾಗ್ರಹಿಗಳಾದ ಖಾಸಗಿ ವಲಯ ಬರಬರುತ್ತಾ ಪೈಶಾಚಿಕ ಮನೋಭಾವಕ್ಕೆ ಇಳಿಯುತ್ತಿದೆ ಅನ್ನುವುದೇ ದುಃಖದ ವಿಚಾರ. ಇದಕ್ಕೆ ಹಲವಾರು ನಿದರ್ಶನಗಳು ಸಿಗುತ್ತವೆ.

ಉನ್ನತ ಶಿಕ್ಷಣವನ್ನಂತೂ ಬಡವರು, ಮಧ್ಯಮ ವರ್ಗದವರು ಮುಟ್ಟಲಿಕ್ಕೂ ಆಗದಂತೆ ಆಗಿದೆ. ಮೆಡಿಕಲ್ ಸೀಟು ಬೇಕಾದರೆ ಅರವತ್ತು ಲಕ್ಷ, ಇಂಜಿನಿಯರಿಂಗ್ ಸೀಟು ಬೇಕಾದರೆ ಐವತ್ತು ಲಕ್ಷ - ಹೀಗೆ ಬಡ-ಮಧ್ಯಮ ವರ್ಗದವರು ಎಟುಕಲಿಕ್ಕೇ ಆಗದಷ್ಟು ಎತ್ತರಕ್ಕೆ ಉನ್ನತ ಶಿಕ್ಷಣ ಹೊರಟು ಹೋಗಿದೆ. ಸಾಮಾನ್ಯ ವರ್ಗದ ಜನತೆ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಮಾತಿರಲಿ, ಪ್ರಾಥಮಿಕ ಶಿಕ್ಷಣವನ್ನೇ ಸರಿಯಾಗಿ ಕೊಡಿಸಲು ಸಹ ಪರದಾಡಬೇಕಾದಂತಹ ಪರಿಸ್ಥಿತಿ ಬಂದೊದಗಿದೆ. ಶಿಕ್ಷಣ ಕ್ಷೇತ್ರವೇ ಹಾರಾಜಿಗೆ ಬಿದ್ದಂತೆ ಕಾಣಿಸುತ್ತಿದೆ.

ಹಿಂದೆ ವರದಕ್ಷಿಣೆಯನ್ನು ಪಿಡುಗು ಎನ್ನುತ್ತಿದ್ದರು, ನಂತರ ಏಡ್ಸ್ ಅನ್ನು ಪಿಡುಗು ಅನ್ನಲಾಯ್ತು. ಅದೇ ರೀತಿ ಈಗ ಖಾಸಗಿ ಶಿಕ್ಷಣದ ಪಿಡುಗು ಶುರುವಾಗಿದೆ. ಈ ಪಿಡುಗು ಜನರಿಂದಾಗಿಯೇ ಶುರುವಾಯ್ತೋ ಅಥವಾ ಖಾಸಗಿ ವ್ಯಕ್ತಿಗಳು ಹರಡುತ್ತಿರುವರೋ ತಿಳಿಯದಾಗಲೀ, ಒಟ್ಟಿನಲ್ಲಿ ಬಡವ ನೀ ಇದ್ದಲ್ಲಿಯೇ ಬಿದ್ದು ಸತ್ತಂತಿರು ಎಂಬಂತೆ ವರ್ತಿಸುತ್ತಿದೆ ನಮ್ಮ ಸಮಾಜ! ದಿನದಿಂದ ದಿನಕ್ಕೆ ಶಿಕ್ಷಣವೆಂಬುದು ಬಡವರ ಪಾಲಿನ ಬಿಸಿಲುಗುದುರೆಯಾಗುತ್ತಿದೆ.

ಕೇಂದ್ರದ ದಿಟ್ಟ ಯೋಜನೆ ಆರ್.ಟಿ.ಇ. !

ಇಂತಹ ತಾರತಮ್ಯವನ್ನು ಮನಗಂಡ ಕೇಂದ್ರ ಸರ್ಕಾರ ಕೊನೆಗೂ ಸಮಾನ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಿತು. ಇದರ ಪ್ರಕಾರ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳೂ ಸಹ ಶೇ. ೨೫% ರಷ್ಟು ಸೀಟುಗಳನ್ನು ಬಡವರಿಗೆ ಮೀಸಲಿರಿಸಬೇಕು. ಇದೊಂದು ಬಡವರ ಪಾಲಿನ ಆಶಾಕಿರಣ ಎಂದೇ ಹೇಳಬೇಕು. ಇದು ಅತ್ಯಂತ ಸೂಕ್ತ ಕಾನೂನು. ಈ ಮೂಲಕ ಬಡ ಮಕ್ಕಳೂ ಸಹ ಆಂಗ್ಲ ಕಾನ್ವೆಂಟುಗಳಲ್ಲಿ ಸಿರಿವಂತ ಮಕ್ಕಳೊಂದಿಗೆ ಸಮಾನವಾಗಿ ಕಲಿಯಬಹುದು. ಉನ್ನತ ಶಿಕ್ಷಣದವರೆಗೂ ಬಡವರು ತಮ್ಮ ಪಾಲಿನ ಹಕ್ಕನ್ನು ಪಡೆದು ಉತ್ತಮ ಶಿಕ್ಷಣವನ್ನು ಪಡೆಯಬಹುದು. ಉನ್ನತ ಶಿಕ್ಷಣವನ್ನು ಪಡೆಯಬಹುದು. ಈ ಯೋಜನೆಯನ್ನು ರೂಪಿಸಿದ ಕಾಂಗ್ರೆಸ್ ಸರ್ಕಾರಕ್ಕೆ ನಾವು ಕೃತಜ್ಞತೆ ಸಲ್ಲಿಸಲೇ ಬೇಕು. ಇದರಿಂದಾಗಿ ಬಡ-ಮಧ್ಯಮ ವರ್ಗದ ಜನರೂ ಸಹ ತಮ್ಮ ಮಕ್ಕಳನ್ನೂ ವಿಶೇಷವಾಗಿ ಓದಿಸಲು ಈ ಕಾನೂನು ನೆರವಾಗಲಿದೆ ಎಂದು ಆಶಾಭಾವನೆಯನ್ನು ಬೆಳೆಸಿಕೊಂಡರು. ಆದರೂ ಇದು ಸಂಪೂರ್ಣವಾಗಿ ಕಾರ್ಯಗತವಾಗಲಿಲ್ಲ.

ಆರ್.ಟಿ.ಇ. (ಸಮಾನ ಶಿಕ್ಷಣ ಹಕ್ಕು) ಕಾಯ್ದೆ ಬರುವಾಗಲೇ ಖಾಸಗಿ ಶಿಕ್ಷಣ ವಲಯ ತಲ್ಲಣಿಸಿ ಹೋಯ್ತು. ಅವರಿಗೆ ೨೫% ಮಕ್ಕಳಿಗೆ ಸರ್ಕಾರಿ ಫೀಸು ಪಡೆದು ಶಿಕ್ಷಣ ಕೊಡಬೇಕಲ್ಲ ಎಂಬ ಚಿಂತೆಗಿಂತಲೂ ಹೆಚ್ಚಾಗಿ, ಶ್ರೀಮಂತ ವರ್ಗದ ಮಕ್ಕಳ ಜೊತೆ ಬಡವರ ಮಕ್ಕಳನ್ನೂ ಕೂರಿಸಿ ಪಾಠ ಮಾಡಬೇಕಲ್ಲ?! ಎಂಬ ಯೋಚನೆಯೇ ದೊಡ್ಡದಾದಂತೆ ಕಾಣಿಸಿತು. ಈ ಕಾರಣದಿಂದಾಗಿ ಬಡ ಮಕ್ಕಳಿಗೂ ಯೋಗ್ಯ ಶಿಕ್ಷಣ ಸಿಗಬೇಕು ಎಂಬ ಕೇಂದ್ರ ಸರ್ಕಾರದ ಕಾನೂನಿಗೆ ಹೇಗಾದರೂ ತೊಡರುಗಾಲು ಹಾಕಲು ಇವರೆಲ್ಲಾ ತಯಾರಾಗಿ ಹೋದರು.

ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕಟಿಬದ್ದರಾಗಬೇಕಾಗಿತ್ತು. ಆದರೆ ದುರದೃಷ್ಟವಶಾತ್ ಅದು ಹಾಗಾಗಲಿಲ್ಲ. ಶಿಕ್ಷಣ ಇಲಾಖೆಯ ಕೆಲ ಹಲಾಲುಖೋರ ಅಧಿಕಾರಿಗಳು ಅದಾಗಲೇ ಖಾಸಗಿ ವ್ಯಕ್ತಿಗಳಿಗೆ ಹರಾಜಾಗಿ ಹೋಗಿದ್ದರ ಫಲವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲುಗೈ ಆಗತೊಡಗಿತು. ಅಂದರೆ ಸರ್ಕಾರ ಹಾಸಿಗೆ ಕೆಳಗೆ ತೂರುತ್ತೇನೆಂದು ಹೊರಟರೆ, ಇವರು ರಂಗೋಲಿ ಕೆಳಗೆ ತೂರುವ ವಿದ್ಯೆಯನ್ನೇ ಕರಗತ ಮಾಡಿಕೊಂಡು ಬಿಟ್ಟರು!

ಕುಲಕೇಡಿ ಕುಸ್ಮಾ !

ಸರ್ಕಾರ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲಿಕರ ನಡುವೆ ಮುಸುಗಿನ ಗುದ್ದಾಟ ಪ್ರಾರಂಭವಾಗಿ ಬಹಳ ದಿನಗಳೇ ಕಳೆದಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲಿಕರೆಲ್ಲಾ ಸೇರಿಕೊಂಡು ರಚಿಸಿಕೊಂಡಿರುವ ಸಂಘಟನೆಯೇ ಕುಸ್ಮಾ. ದುಡ್ಡು ಮಾಡುವುದೊಂದೇ ಇವರ ಉದ್ದೇಶ. ಸರ್ಕಾರ ಯಾವುದೇ ಕಾನೂನು ರಚಿಸಿದರೂ ಅದು ಇವರಿಗೆ ಹೊರೆಯಾಗುವಂತೆ ಇರಬಾರದು. ಇವರ ಬಾಲ ಕಿಂಚಿತ್ತೂ ಸುಡಬಾರದು. ಸಮಾಜ, ಬಡ ಜನತೆ ಹೇಗಾದರೂ ಹಾಳು ಬಿದ್ದು ಹೋಗಲಿ, ಇವರಿಗೆ ಚಿಂತೆ ಇಲ್ಲ. ಇವರ ಬುಡ ಮಾತ್ರ ಸದಾ ತಣ್ಣಗಿರಬೇಕು. 

ಈಗಾಗಲೇ ಉನ್ನತ ಶಿಕ್ಷಣದಲ್ಲಿ ಸರ್ಕಾರಿ ಕೋಟಾದ ಸೀಟುಗಳ ಹಂಚಿಕೆಯಲ್ಲಿ ಶರಂಪರ ಸರ್ಕಾರದೊಂದಿಗೆ ಕಿತ್ತಾಡಿಕೊಂಡಿದ್ದಾರೆ. ಕೋರ್ಟು ಮೆಟ್ಟಿಲೇರಿದ್ದಾರೆ. ಸರ್ಕಾರಕ್ಕೇ ಸಡ್ಡು ಹೊಡೆದಿದ್ದಾರೆ. ಸರ್ಕಾರವನ್ನೂ ಒಂದು ಹಂತದವರೆಗೆ ಮಣಿಸಿದ್ದಾರೆ. ಅರೆರೆ ಹೌದಾ? ಇದೆಲ್ಲಾ ಕೇವಲ ಒಂದು ಖಾಸಗಿ ಸಂಘಟನೆಗೆ ಹೇಗೆ ಸಾಧ್ಯವಾಗಿ ಹೋಯ್ತು ? ಎಂದೆನ್ನುವಂತಿಲ್ಲ. ಏಕೆಂದರೆ ಯಾವ ಸರ್ಕಾರಕ್ಕೆ ಸೆಡ್ಡು ಹೊಡೆಯುತ್ತಾರೋ ಅದೇ ಸರ್ಕಾರದಲ್ಲೇ ಈ ಕುಸ್ಮಾದ ಪದಾಧಿಕಾರಿಗಳೂ ಮಂತ್ರಿಗಳಾಗಿರುತ್ತಾರೆ. ಅಂದರೆ ಸರ್ಕಾರವೂ ಇವರೇ, ಅದನ್ನು ಮಣಿಸುವುದೂ ಇವರೇ. 

ಕುಸ್ಮಾದ ಎದಿರು ಖಾಸಗಿ ಶಿಕ್ಷಣ ಸಂಸ್ಥೆ ಇಲ್ಲದ ಮಂತ್ರಿಗಳಾಗಲೀ ರಾಜಕಾರಣಿಗಳಾಗಲಿ ಮಾತಾಡುವಂತಿಲ್ಲ. ಕಾರಣ ಅದೇ ಪಕ್ಷಗಳಿಗೆ ಚುನಾವಣಾ ಫಂಡ್ ಮತ್ತೆ ಇವರಿಂದಲೇ ಹೋಗಬೇಕು. ನಿಷ್ಠುರ ಮಾಡಿಕೊಂಡರೆ ಪಾರ್ಟಿಫಂಡ್‌ಗೆ ಕೊಕ್ಕೆ ಬೀಳುತ್ತದೆ. ಹೀಗಾಗಿ ಕುಸ್ಮಾ ಸರ್ಕಾರದ ಹಾಗೂ ರಾಜಕಾರಣಿಗಳ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಉಗುಳುವಂತಿಲ್ಲ, ನುಂಗುವಂತೆಯೂ ಇಲ್ಲ!

ಸರ್ಕಾರ ಹಾಗೂ ಕುಸ್ಮಾ ನಡುವೆ ಮುಸುಕಿನ ಚಕಮಕಿ ಸದಾ ನಡೆಯುತ್ತಲೇ ಇರುತ್ತದೆ. ಸರ್ಕಾರ ರಚಿಸುವ ಪ್ರತಿ ಕಾನೂನನ್ನೂ ತಮಗೆ ಬೇಕಾದಂತೆ ತಿರುಚಿ ವ್ಯಖ್ಯಾನಿಸುವ ತಂತ್ರ ಕೂಡಾ ಇವರಿಗೆ ಕರಗತವಾಗಿದೆ. ಹಾಗೆ ಆಗದಿದ್ದರೆ ಲಂಚ ನೀಡಿಯಾದರೂ ತಮಗೆ ಬೇಕಾದಂತೆ ಪರಿವರ್ತಿಸಿಕೊಳ್ಳುತ್ತಾರೆ. ಅದೂ ಸಾಧ್ಯವಾಗದಿದ್ದರೆ ಆ ಕಾನೂನನ್ನು ಪಾಲಿಸುತ್ತಿರುವಂತೆ ನಾಟಕವಾಡಿ ಸರ್ಕಾರಕ್ಕೇ ಮಂಕುಬೂದಿ ಎರಚುತ್ತಾರೆ. ಇಂತಹ ದಗಲ್ಬಾಜಿ ಕುಸ್ಮಾ ಸಂಘಟನೆಯ ಎದಿರಾಗಿ ಸರ್ವರಿಗೂ ಸಮಾನ ಶಿಕ್ಷಣ ಕಾಯ್ದೆ ಬಂದಿತೆಂದರೆ ಅವರು ಸುಮ್ಮನಿದ್ದಾರೆಯೇ ?

ಈ ಕಾಯ್ದೆಗೆ ಹೇಗೆ ಹೊಗೆ ಹಾಕಬೇಕೆಂದು ಉಪಾಯ ಹುಡುಕತೊಡಗಿದರು. ಆಗ ಕಂಡು ಬಂದ ಒಂದು ಕಾರಣವೇ ಅಲ್ಪಸಂಖ್ಯಾತ ಕಾನೂನಿನಡಿ ನುಣುಚಿಕೊಳ್ಳುವುದು! ವಾಸ್ತವವಾಗಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಈ ಆರ್‌ಟಿಇ ಕಾನೂನು ಅನ್ವಯವಾಗುವುದಿಲ್ಲ ಎಂಬುದು ಸರ್ಕಾರವೇ ರಚಿಸಿದ ಕಾನೂನು ಹೇಳುತ್ತದೆ. ಅದ್ಯಾಕೆ ಹಾಗೆ ಮಾಡಿದರೋ ಗೊತ್ತಿಲ್ಲ. ಎಲ್ಲಾ ವಿದ್ಯಾ ಸಂಸ್ಥೆಗಳಿಗೂ ಅನ್ವಯವಾಗುವಂತೆ ಕಾನೂನನ್ನು ಜಾರಿಗೊಳಿಸಬೇಕಾಗಿತ್ತು. ಅಂದರೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತ ಬಡವರಿಗೇ ಅವಕಾಶ ಕೊಡುವಂತಹ ವ್ಯವಸ್ಥೆ ಮಾಡಬಹುದಾಗಿತ್ತು. ಆದರೆ ಸರ್ಕಾರ ಇಲ್ಲಿ ಎಡವಿತೆಂದೇ ಹೇಳಬೇಕು. 

ಆದರೆ ಕುಸ್ಮಾ ಇದನ್ನೇ ತನ್ನ ಬಂಡವಾಳವನ್ನಾಗಿಸಿಕೊಂಡು ರಂಗೋಲಿ ಕೆಳಗೆ ತೂರಿಯೇ ಬಿಟ್ಟಿದೆ. ಅಂದರೆ ಅಲ್ಪಸಂಖ್ಯಾತ ಕಾನೂನನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿಸಿಕೊಂಡು ನ್ಯಾಯಾಲಯದ ಮೇಟ್ಟಿಲೇರಿ ಆರ್‌ಟಿಇ ಕಾನೂನಿನ ಕುಣಿಕೆಯಿಂದ ನುಣುಚಿಕೊಳ್ಳುವುದರ ಜೊತೆಗೆ ನ್ಯಾಯಯುತವಾಗಿ ಬಡವರಿಗೆ ಸಿಗಬೇಕಾಗಿದ್ದ ಶಿಕ್ಷಣಕ್ಕೂ ಎಳ್ಳು ನೀರು ಬಿಟ್ಟಿವೆ.

ಕುಸ್ಮಾ ಒಂದು ಸಿರಿವಂತ ವ್ಯವಹಾರಸ್ಥರ ಗುಂಪು. ಅವರೆದುರು ಸರ್ಕಾರ ಸಹ ತಲೆ ತಗ್ಗಿಸಬೇಕಾಗಿರುವುದು ಈ ದೇಶದ ದುರಂತ. ಕುಸ್ಮಾದ ವ್ಯಕ್ತಿಗಳೇ ಸರ್ಕಾರವನ್ನು ತಮಗೆ ಬೇಕಾದಂತೆ ನಿರ್ವಹಿಸುತ್ತಾರೆ. ಇವರು ಅಷ್ಟೊಂದು ಶಕ್ತಿವಂತರಾಗಿದ್ದಾರೆ. ಆದರೆ ಇವರು ಅನುಸರಿಸುವುದೆಲ್ಲಾ ಕಳ್ಳ ದಾರಿಗಳೇ. ಉದಾಹರಣೆಗೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಆರ್.ಟಿ.ಇ ಅನ್ವಯವಾಗದು ಎಂಬುದೇನೋ ನಿಜ. ಅಂದರೆ ಸರ್ಕಾರದ ಯಾವುದೇ ಸವಲತ್ತು ಪಡೆಯದ ಮದರಸಾ, ಚರ್ಚ್ ಮುಂತಾದವುಗಳ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಇದು ಅನ್ವಯವಾಗಬೇಕು. ಆದರೆ ಸರ್ಕಾರದ ಕಣ್ಣಿಗೆ ಮಣ್ಣೆರೆಚುವ ಇವರು ಯಾವುದೋ ಒಂದು ಬಗೆಯಲ್ಲಿ ತಮ್ಮದೂ ಅಲ್ಪ ಸಂಖ್ಯಾತ ಶಿಕ್ಷಣ ಸಂಸ್ಥೆ ಎಂಬ ಸುಳ್ಳು ಪ್ರಮಾಣಪತ್ರ ಪಡೆದು ಕಾನೂನಿನಿಂದ ತಪ್ಪಿಸಿಕೊಂಡು ಬಡವರ ಹೊಟ್ಟೆಗೆ ಮಣ್ಣು ಹಾಕುತ್ತಿದ್ದಾರೆ. ಆ ಪ್ರಮಾಣಪತ್ರಗಳಲ್ಲೂ ಅಸಲಿ ಎಷ್ಟಿವೆಯೋ, ನಕಲಿ ಎಷ್ಟಿವೆಯೋ ಹೇಳಲಾಗದು. ಮಕ್ಕಳನ್ನು ಶಾಲೆಗೆ ಸೇರಿಸಲು ಹೋಗುವ ಪಾಲಕರ ದಿಕ್ಕು ತಪ್ಪಿಸಲು ಸೃಷ್ಟಿಯಾದ ನಕಲಿ ಪ್ರಮಾಣಪತ್ರಗಳು ಎಷ್ಟಿವೆಯೋ ಏನೋ. ಆರ್.ಟಿ.ಇ.ನ ಈ ಹಗರಣ ಬೆಳಕಿಗೆ ತರಲು ಆರ್.ಟಿ.ಐ. ಬೇಕಾಗಬಹುದು.

ಸರ್ಕಾರಿ ಶಿಕ್ಷಣ ಸಂಸ್ಥೆಗಳು ನಾಶ !

ಇಷ್ಟಕ್ಕೂ ಈ ಖಾಸಗಿ ಶಿಕ್ಷಣ ಸಂಸ್ಥೆಗಳು ಇಷ್ಟೊಂದು ಚಿಗಿತುಕೊಳ್ಳಲು ಕಾರಣವಾದರೂ ಏನು ? ಅದರಲ್ಲೂ ಸರ್ಕಾರವನ್ನೇ ನಿಯಂತ್ರಿಸುವ ಮಟ್ಟಕ್ಕೆ ಇವರು ಬೆಳೆದುದಾದರೂ ಹೇಗೆ ? ಇದಕ್ಕೆ ಮತ್ತೆ ಸರ್ಕಾರವೇ ನೇರ ಹೊಣೆಯಾಗಿ ನಮ್ಮೆದುರು ನಿಲ್ಲುತ್ತದೆ. ಸ್ವಾತಂತ್ರ್ಯ ಬಂದು ಏಳು ದಶಕ ಕಳೆದಿದ್ದರೂ ಇನ್ನೂ ಸರ್ಕಾರಿ ಶಿಕ್ಷಣ ವ್ಯವಸ್ಥೆ ಆರಕ್ಕೇರಿಲ್ಲ, ಮೂರಕ್ಕಿಳಿದಿಲ್ಲ ಎಂಬ ಸ್ಥಿತಿಯಲ್ಲೆ ಇದೆ. ಸರ್ಕಾರ ಮನಸ್ಸು ಮಾಡಿದ್ದರೆ ಸರ್ಕಾರಿ ಶಿಕ್ಷಣ ಮಂದಿರಗಳನ್ನು, ಶಾಲಾ ಕಾಲೆಜುಗಳನ್ನು ಖಾಸಗಿಯವರೂ ಎಟುಕಲಾಗದ ಮಟ್ಟಕ್ಕೆ ಮೇಲ್ದರ್ಜೆಗೇರಿಸಬಹುದಾಗಿತ್ತು. ಆದರೆ ಯಾವನೂ ಅದರತ್ತ ಗಮನ ಕೊಡಲಿಲ್ಲ. 

ಇನ್ನೂ ನೂರಕ್ಕೆ ನೂರರಷ್ಟು ಪ್ರಾಥಮಿಕ ಶಿಕ್ಷಣವನ್ನೇ ನೀಡಲಾಗದ ಸರ್ಕಾರ ಮೇಲ್ದರ್ಜೆಯ ಶಿಕ್ಷಣವನ್ನು ಉತ್ತಮವಾಗಿ ನೀಡುವುದಾದರೂ ಹೌದೇ ? ಪ್ರಾಥಮಿಕ ಶಿಕ್ಷಣವನ್ನೇ ಇನ್ನೂ ಸರಿಯಾಗಿ ಕೊಡಲು ಆಗಿಲ್ಲ. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ನೆಟ್ಟಗೊಂದು ಗಣಕವೂ ಇರುವುದಿಲ್ಲ. ಶಿಕ್ಷಕರ ಪ್ರಾಮಾಣಿಕತೆ, ಸಾಮರ್ಥ್ಯ, ಗುಣಮಟ್ಟ ಸಾಲುವುದಿಲ್ಲ. ಶಿಕ್ಷಕರಿಗೆ ಪಾಠ ಮಾಡುವುದಕ್ಕಿಂತಾ ನೂರೆಂಟು ಅಧಿಕ ಕೆಲಸಗಳನ್ನು ಹೇಳಿ ಅವರ ಗುಣಮಟ್ಟವನ್ನು ಕಸಿಯಲಾಗುತ್ತದೆ. ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣಿಸುತ್ತದೆ. ಇಷ್ಟೆಲ್ಲಾ ಕೊರತೆ ಇರುವ ಸರ್ಕಾರಿ ಶಾಲೆಗಳು ಅದು ಹೇಗೆ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಬಲ್ಲವು ?

ಅದೆಲ್ಲಕ್ಕಿಂತಲೂ ಮಿಗಿಲಾಗಿ ಭ್ರಷ್ಟಾಚಾರ, ಲಂಚಗುಳಿತನ ಸರ್ಕಾರಿ ಶಾಲೆಗಳನ್ನು ನುಂಗಿ ನೀರು ಕುಡಿಯುತ್ತಿದೆ. ಇಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೂ ಉಳಿಗಾಲವಿಲ್ಲ. ಯಾರಾದರೊಬ್ಬ ಪ್ರಾಮಾಣಿಕ ಅಧಿಕಾರಿ ಬಂದು ಒಂದು ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳನ್ನು ಉದ್ದಾರ ಮಾಡಲಿಕ್ಕೆ ನಿಂತನೆಂದರೆ ಕೂಡಲೇ ಖಾಸಗಿ ಶಾಲೆಗಳವರಿಂದ ಮಂತ್ರಿಗೊ, ಶಾಸಕನಿಗೋ ಹಣದ ಕಂತೆ ರವಾನೆಯಾಗುತ್ತದೆ. ಅದಕ್ಕಿಂತ ಮಿಗಿಲಾಗಿ ಆ ಮಂತ್ರಿ ಶಾಸಕರುಗಳಿಗೆ ಸೇರಿದ್ದೇ ಖಾಸಗಿ ಶಾಲೆಗಳಿರುತ್ತವೆ. ಸರ್ಕಾರಿ ಶಾಲೆಯಿಂದ ತಮ್ಮ ಶಾಲೆಗೆ ತೊಂದರೆ ಆಗುವುದನ್ನು ಯಾರು ತಾನೆ ಸಹಿಸುತ್ತಾರೆ ? ನಂತರದ್ದು ಗೊತ್ತೇ ಇದೆ. ಅಧಿಕಾರಿಯ ಕೈ ಕಟ್ಟಿ ಹಾಕಲಾಗುತ್ತದೆ. ಅವನ ಕೆಲಸಗಳು ನಿಂತಲ್ಲೇ ಸೊರಗುತ್ತವೆ. ಕೊನೆಗೆ ಸರ್ಕಾರಿ ಶಾಲೆಗಳ ಗುಣಮಟ್ಟ ಹೊಗೆ ! ಹಾಗೆಯೆ ಶಿಕ್ಷಣ ಕ್ಷೇತ್ರದ ಅಧಿಕಾರಿಗಳು ಸಹ ಖಾಸಗಿ ವ್ಯಕ್ತಿ/ಸಂಸ್ಥೆಗಳೊಂದಿಗೆ ಕೈ ಜೋಡಿಸುವ ಮೂಲಕ ಸರ್ಕಾರಕ್ಕೆ ಹಾಗೂ ಬಡ ಮಕ್ಕಳಿಗೆ ದ್ರೋಹ ಎಸಗುತ್ತಿದ್ದಾರೆ.

ಸರ್ಕಾರದ ಅಧಿಕಾರಿಗಳು ಮನಸ್ಸು ಮಾಡಿದರೆ ಸರ್ಕಾರಿ ಸಂಸ್ಥೆಗಳನ್ನು ಖಾಸಗಿಗಿಂತಲೂ ಚೆಂದವಾಗಿ ಮಾಡಬಹುದು ಎನ್ನುವುದಕ್ಕೆ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆ ಮಾದರಿಯಾಗಿದೆ. ಇದನ್ನು ನೋಡಿಯಾದರೂ ಇತರೆ ಅಧಿಕಾರಿಗಳು ಕಲಿಯಬಹುದಾಗಿತ್ತು. ಯಾವುದೇ ಕೆಲಸವನ್ನಾದರೂ ಸವಾಲಾಗಿ ಸ್ವೀಕರಿಸಿದರೆ ಸರ್ಕಾರಿ ಸಂಸ್ಥೆಗಳು ಖಾಸಗಿಯವರನ್ನು ಕ್ಷಣ ಮಾತ್ರದಲ್ಲಿ ಮಣಿಸಿಬಿಡಬಹುದು. ಏಕೆಂದರೆ ಸರ್ಕಾರದ ಬಳಿ ಎಲ್ಲವೂ ಇದೆ. ಯಾವುದಕ್ಕೂ ಯಾರ ಎದಿರೂ ಅಂಗಲಾಚಬೇಕಾಗಿಲ್ಲ. ಅನುಮತಿ ಪಡೆಯಲು ಲಂಚ ನೀಡಬೇಕಾಗಿಲ್ಲ. ಬೇಕಾಗಿರುವುದು ಅಚಲ ಮನಸ್ಸತ್ವ ಅಷ್ಟೇ. ಆದರೆ ಅಂತಹ ಅಧಿಕಾರಿಗಳ ಹಾಗೂ ಮಂತ್ರಿಗಳ ಕೊರತೆ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಾಗಿಯೇ ಇದೆ ಎನ್ನಬಹುದು.

ಇದಕ್ಕಾಗಿಯೇ ಇಂದು ಸಾಧಾರಣ ಆಟೋ ಚಾಲಕ ಸಹ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿರುವುದು. ತಮ್ಮ ಮಕ್ಕಳಿಗೆ ಗುಣಮಟ್ಟವಿಲ್ಲದ ಶಿಕ್ಷಣ ನೀಡಲು ಯಾರೂ ತಯಾರಿರುವುದಿಲ್ಲ. ಆದರೆ ದುರದೃಷ್ಟ ವಶಾತ್ ಸರ್ಕಾರಿ ಶಾಲೆಗಳಿಂದ ಅದನ್ನು ನಿರೀಕ್ಷಿಸಲಾಗುತ್ತಿಲ್ಲ! ಹೀಗೆ ಕಡೇ ಪಕ್ಷ ಬಡ ಮಕ್ಕಳ ಆಯ್ಕೆಯಾದರೂ ಸರ್ಕಾರಿ ಶಾಲೆಯಾಗಿರಬಹುದಾಗಿದ್ದ ಅವಕಾಶವನ್ನು ಸರ್ಕಾರವೇ ಕಾಲಕ್ರಮೇಣ ದೂರ ಮಾಡಿ ಹಾಕಿತು. ಬಡವನಾದರೂ ಅನಿವಾರ್ಯವಾಗಿ ಉತ್ತಮ ಶಿಕ್ಷಣ ಬೇಕಾದಲ್ಲಿ ಖಾಸಗಿ ಶಾಲೆಗಳನ್ನೇ ಆಯ್ದುಕೊಳ್ಳಬೇಕಾದ ಸ್ಥಿತಿಯನ್ನು ತಂದಿಟ್ಟಿತು ನಮ್ಮ ಸರ್ಕಾರ. 

ಇದಾಗುತ್ತಿದ್ದಂತೆಯೇ ಮಧ್ಯಮ ವರ್ಗದವರು ಸಾಲ ಸೋಲ ಮಾಡಿ ಖಾಸಗಿ ಶಾಲಾ ಕಾನ್ವೆಂಟುಗಳಿಗೇ ತಮ್ಮ ಮಕ್ಕಳನ್ನು ಸೇರಿಸತೊಡಗಿದರು. ಆಗ ಸರ್ಕಾರಿ ಶಾಲೆಗಳಿಗೆ ಮತ್ತೊಂದು ಗಂಡಾಂತರ ಎದುರಾಯ್ತು. ಅದು ವಿದ್ಯಾರ್ಥಿಗಳ ಕೊರತೆ. ಅಷ್ಟಾಗಿದ್ದೇ ತಡ, ವಿದ್ಯಾರ್ಥಿಗಳಿಲ್ಲ ಎಂಬ ನೆಪ ಹುಡುಕಿ ಕನ್ನಡ ಶಾಲೆಗಳನ್ನು ಮುಚ್ಚಲು ಶುರು ಮಾಡಿದರು. ಈಗಾಗಲೇ ರಾಜ್ಯಾಧ್ಯಂತ ನೂರಾರು ಶಾಲೆಗಳು ಬಾಗಿಲೆಳೆದುಕೊಂಡಿವೆ. ಇನ್ನೂ ಎಷ್ಟೋ ಶಾಲೆಗಳಲ್ಲಿ ಬೆರಳೆಣಿಕೆಯ ಮಕ್ಕಳು ಮಾತ್ರ ಇದ್ದಾರೆ. ಅವುಗಳನ್ನೂ ಸಮಯ ನೋಡಿಕೊಂಡು ಮುಚ್ಚಲಾಗುತ್ತದೆ.

ಇಂಗ್ಲೀಷ್ ಓಕೆ, ಹಿಂದಿ ಯಾಕೆ ?

ಇಂದಿನ ಜೀವನಕ್ಕೆ ಇಂಗ್ಲೀಷ್ ಅತ್ಯಗತ್ಯವಾಗಿದೆ. ಎಲ್ಲಾ ಪಾಲಕರೂ ತಮ್ಮ ಮಕ್ಕಳು ಚೆನ್ನಾಗಿ ಇಂಗ್ಲೀಷ್ ಕಲಿಯಲಿ ಎಂದೇ ಆಶಿಸುತ್ತಾರೆ. ಆದರೆ ಹಿಂದೀವಾಲ ರಾಜಕಾರಣಿಗಳ ಕುತಂತ್ರಕ್ಕೆ ಬಲಿ ಬಿದ್ದ ನಮ್ಮ ರಾಜಕಾರಣಿಗಳು ಕರ್ನಾಟಕದಂತಹ ರಾಜ್ಯದಲ್ಲೂ ಹಿಂದಿಯನ್ನು ಕಡ್ಡಾಯಗೊಳಿಸಿದ್ದಾರೆ. ಅನಗತ್ಯವಾಗಿ ಹಿಂದಿ ಹೇರಿಕೆಯನ್ನು ಅದು ರಾಷ್ಟ್ರಭಾಷೆ ಎಂಬ ಸುಳ್ಳು ಹೇಳುವುದರ ಮೂಲಕ ಮಾಡಲಾಗುತ್ತಿದೆ. ಹಿಂದಿಯನ್ನು ಕಡ್ಡಾಯ ವಿಷಯದಿಂದ ತೆಗೆದು ಹಾಕಬೇಕು. ಆಗ ಮಕ್ಕಳಿಗೆ ಸಮಯದ ಉಳಿತಾಯವಾಗಿ ಆ ಸಮಯವನ್ನು ಇಂಗ್ಲೀಷ್ ಕಲಿಯಲು ಉಪಯೋಗಿಸುತ್ತಾರೆ. ಆದರೆ ಯಾರದೋ ತೆವಲಿಗೆ ತಮ್ಮ ಸಮಯವನ್ನು ಹಿಂದಿಗಾಗಿ ಮೀಸಲಿಡಬೇಕಾಗಿದೆ. ಇದೂ ಕೂಡಾ ಹೊರೆಯೇ ಆಗಿದೆ.

ನಮ್ಮ ರಾಜ್ಯದಿಂದ ಪ್ರತಿಭಾವಂತ ವಿದ್ಯಾರ್ಥಿಗಳು ಸೃಷ್ಟಿಯಾಗುವುದಾದರೂ ಹೇಗೆ. ದೇಶದ ಇತರೆ ರಾಜ್ಯಗಳ ವಿದ್ಯಾರ್ಥಿಗಳ ಎದಿರು ನಮ್ಮವರು ಸೋಲುತ್ತಿದ್ದಾರೆ. ಐಪಿಎಸ್, ಐಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡಿಗರ ಗಣನೆ ಕ್ಷೀಣಿಸುತ್ತಿದೆ. ಇದಕ್ಕೆ ಕಾರಣವೇನು ? ನಮ್ಮ ಶಿಕ್ಷಣದ ಗುಣಮಟ್ಟ ಕುಸಿಯುತ್ತಿರುವುದು. ಖಾಸಗಿಯವರನ್ನು ಮಟ್ಟ ಹಾಕಿ ಸರ್ಕಾರಿ ಸಂಸ್ಥೆಗಳನ್ನು ಸಧೃಡಪಡಿಸುವ ಇಚ್ಚಾಶಕ್ತಿ ಸರ್ಕಾರಕ್ಕೆ ಇಲ್ಲವಾಗಿದೆ.

ಅಲ್ಪ ಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಆರ್.ಟಿ.ಇ. ಅನ್ವಯಿಸದು ಎಂಬ ಸುಪ್ರೀಂ ಕೋರ್ಟ್‌ನ ತೀರ್ಮಾನವನ್ನು ಸರ್ಕಾರ ಕೂಲಂಕುಶವಾಗಿ ಪರಿಶೀಲನೆ ಮಾಡಬೇಕಾಗಿದೆ. ಸರ್ಕಾರದ ವಾದದಲ್ಲಿ ಎಲ್ಲಿ ತಪ್ಪಾಗಿದೆ ಎಂದು ತಿಳಿದು ಮತ್ತೊಮ್ಮೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು. ಇಸ್ಲಾಂ, ಕ್ರೈಸ್ತ ಮುಂತಾದ ಧಾರ್ಮಿಕತೆಗೆ ಸಂಬಂಧಿಸಿದ ಸಂಸ್ಥೆಗಳಿಗೆ ಮಾತ್ರ ಸುಪ್ರೀಂ ಕೋರ್ಟ್ ಆದೇಶ ಅನ್ವಯವಾಗುತ್ತದೆಯೇ ಹೊರತಾಗಿ ಅಲ್ಪಸಂಖ್ಯಾತರು ನಡೆಸುವ ಸಂಸ್ಥೆಗಳಿಗೆಲ್ಲಾ ಅದು ಅನ್ವಯವಾಗುವಂತಹುದಲ್ಲ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲಿಕರು ವಾಮಮಾರ್ಗದ ಮೂಲಕ ಇದರ ಲಾಭ ಪಡೆಯುತ್ತಿದ್ದಾರೆ. ಇದು ತಪ್ಪಬೇಕು. ಬಡ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗುಂತಾಗಬೇಕು.

ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಖಾಸಗಿ ಸಂಸ್ಥೆಗಳಿಗೆ ಲಗಾಮು ಹಾಕಲಿ. ಎಲ್ಲಾ ಬಡ-ಮಧ್ಯಮ ವರ್ಗದ ಜನತೆಗೂ ಉತ್ತಮ ಶಿಕ್ಷಣವನ್ನು ಕೊಡಿಸುವ ನಿಟ್ಟಿನಲ್ಲಿ ಆರ್.ಟಿ.ಇ. ಪರಿಣಾಮಕಾರಿಯಾಗಿ ಜಾರಿಯಾಗಲಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…