
ನಾನು ಕಾಡಿನಲ್ಲೇ ಹುಟ್ಟಿ ಬೆಳೆದವನು. ಕಾಡೆಮ್ಮೆ ಇಂದಿಗೂ ನಮ್ಮ ಮನೆ ಅಂಗಳದ ತನಕೆ ಕೆಲವೊಮ್ಮೆ ಬಂದು ಹೋಗುತ್ತವೆ. ಹುಲಿ, ಕತ್ತೆ ಕಿರುಬಗಳು ಬಂದು ನಾಯಿ ಮರಿಯನ್ನು ಎತ್ತಿಕೊಂಡು ಹೋಗುತ್ತವೆ. ಆಗಾಗ ನಮ್ಮನೆ ಹಸುಗಳು ಹುಲಿಗೆ ಆಹಾರವಾಗುತ್ತಿರುತ್ತವೆ. ನಾವು ಹುಡುಗರಾಗಿದ್ದಾಗ ನಮ್ಮನೆಯಿಂದ ಸ್ವಲ್ಪ ದೂರದಲ್ಲೇ ತೋಳದ ಹಿಂಡೊಂದು ನಮ್ಮ ಚಿಕ್ಕ ಕರುವೊಂದನ್ನು ಹಿಡಿಯಲು ಬಂದಿದ್ದವು. ಅವುಗಳಿಂದ ಕರುವನ್ನು ರಕ್ಷಿಸಲು ನಮ್ಮ ದನಕರುಗಳು ಸಾಹಸ ಮಾಡುತ್ತಿದ್ದವು. ಇದನ್ನು ಕಂಡ ನಾನೂ ನಮ್ಮಣ್ಣನೂ (ಆಗ ಚಿಕ್ಕ ಹುಡುಗರು) ನಾಯಿಯನ್ನು ಕರೆದುಕೊಂಡು ಕೂಗುತ್ತಾ ಅಲ್ಲಿಗೆ ಓಡಿದೆವು. ನಾವು ಹತ್ತಿರ ಹೋಗುವವರೆಗೂ ತೋಳಗಳು ಕದಲಿಲ್ಲ. ನಾವಿಬ್ಬರು ಮತ್ತು ನಾಯಿಗಳೆರಡು (ಅವು ಹಳ್ಳಿ ನಾಯಿಗಳು) ಇದ್ದುದರಿಂದ ಕೊನೆಗೂ ಅವು ಕಾಡಿನೊಳಗೆ ಓಡಿದವು. ಅಕಸ್ಮಾತ್ ಅವು ತಿರುಗಿ ನಮ್ಮೆ ಮೇಲೆಯೇ ಮುಗಿ ಬಿದ್ದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತೋ ಗೊತ್ತಿಲ್ಲ. ಬಲಢ್ಯ ತೋಳಗಳ ಎದುರಲ್ಲಿ ನಮ್ಮ ಕಂಟ್ರಿ ನಾಯಿಗಳು ಏನೂ ಮಾಡುವಂತಿರಲಿಲ್ಲ.
ಆಮೇಲೊಂದು ದಿನ ಬೆಳಗ್ಗೆ ಶಾಲೆಗೆ ಹೋಗಲು ನಮ್ಮನೆಯಿಂದ ಕಾಡಿನ ಅಂಕುಡೊಂಕು ದಾರಿಯಲ್ಲಿ ಓಡುತ್ತಾ ಹೊರಟಿದ್ದೆ. ಒಂದು ತಿರುವು ತಿರುಗಿದಾಗ ಕೇವಲ ಎಂಟತ್ತು ಅಡಿ ದೂರದಲ್ಲೇ ನಿಂತಿತ್ತು ಬೃಹತ್ ಗಾತ್ರದ ಕಾಡುಕೋಣ. ಎದೆ ಝಲ್ ಎಂದಿತ್ತು. ಹಿಂತಿರುಗಿ ಓಡಬೇಕು ಅನ್ನುವಷ್ಟರಲ್ಲಿ ಅದೇ ಹೆದರಿ ಓಡಿ ಹೋಗಿತ್ತು. ಮತ್ತೊಂದು ದಿನ ಸಂಜೆ ಶಾಲೆ ಬಿಟ್ಟು ಬರುವಾಗ ಬೆಟ್ಟದ ದಾರಿಯಲ್ಲಿ ನನ್ನಿಂದ ೫೦-೬೦ ಅಡಿ ದೂರದ ಪೊದೆಯ ಮರೆಯಿಂದ ಹುಲಿಯಂತಹ ಪ್ರಾಣಿಯೊಂದು ಭಯದಿಂದ ಓಡಿ ಹೋಯ್ತು. ಅದು ಮಳೆಗಾಲದ ಕತ್ತಲಾವರಿಸಿತ್ತಾದ್ದರಿಂದ ಹುಲಿಯೇ ಅಥವಾ ಕತ್ತೆ ಕಿರುಬವೇ ಅನ್ನೋದು ಸರಿಯಗಿ ಗೊತ್ತಾಗಲಿಲ್ಲ.
ನಮ್ಮ ಮನೆಯಿಂದ ಎರಡು ಮೂರು ಕಿಲೋಮೀಟರು ದೂರದೊಳಗೇ ಹೆಬ್ಬಾವು, ಕಾಳಿಂಗ ಸರ್ಪ ಎಲ್ಲವನ್ನೂ ನೋಡಿದ್ದೇನೆ. ನಮ್ಮ ಮನೆ ಪಕ್ಕದ ಗದ್ದೆಗೆ ಕಾಡುಕೊಣಗಳೂ ಕಾಡು ಹಂದಿಗಳೂ ಮಳೆಗಾಲದ ನಿತ್ಯದ ಅತಿಥಿಗಳು.
ಆ ನಂತರ...
ಒಂದು ಬಾರಿ ಬಳ್ಳಾರಿಯ ಪ್ರಾಣಿಸಂಗ್ರಹಲಾಯಕ್ಕೆ ಹೋಗಿದ್ದಾಗ ಅಲ್ಲಿನ ಹುಲಿ ಕೋಣೆಯಲ್ಲಿ ಮಲಗಿದ್ದ ಹುಲಿಯ ಬಾಲ ಕಂಬಿಗಳ ಮೂಲಕ ಹೊರಗೆ ಬಂದಿತ್ತು. ಅದನ್ನು ಕೆಲವರು ಹಿಡಿದು ಎಳೆದಾಡುತ್ತಾ ಹುಲಿಗೆ ತೊಂದರೆ ಕೊಡುತ್ತಿದ್ದರು. ಹುಲಿಗೆ ಅಭ್ಯಾಸವಾಗಿತ್ತೋ ಏನೋ, ಒಟ್ಟಿನಲ್ಲಿ ಅದು ಸುಮ್ಮನಿತ್ತು. ನಾನೂ ನನ್ನ ಗೆಳೆಯರೂ ಅವರಿಗೆ ಹಾಗೆ ಮಾಡಬೇಡಿರಿ ಎಂದು ಹೆದರಿಸಿದೆವು. ನಾವು ಆ ಕಡೆ ಹೋದ ನಂತರ ಮತ್ತೆ ಅವರುಗಳು (ಚಿಕ್ಕ ಪುಟ್ಟ ಮಕ್ಕಳೂ ಇದ್ದ ಕುಟುಂಬವದು) ಹಾಗೆಯೇ ಚೇಷ್ಟೆ ಮಾಡುತ್ತಿದ್ದರು. ನಾವು ಸಮಯವಾದ್ದರಿಂದ ಹೊರಗೆ ಬಂದೆವು. ನಂತರ ಏನೂ ಅವಗಡ ನಡೆದ ಬಗ್ಗೆ ವರದಿಯಂತೂ ಆಗಲಿಲ್ಲ.
ಆದರೆ ಎಲ್ಲಾ ಸಂದರ್ಭದಲ್ಲೂ ಹಾಗೆಯೇ ನಡೆಯದಲ್ಲ ? ಕಾಡು ಪ್ರಾಣಿಗಳನ್ನು ದೂರದಿಂದ ನೋಡಿ ಆನಂದಿಸಬೇಕೇ ಹೊರತೂ ಅವುಗಳ ಜೊತೆ ಚೆಲ್ಲಾಟವಾಡಲು ಹೋಗಬಾರದು. ಈ ಯುವಕ ರಕ್ಷಣಾ ಬೇಲಿಯನ್ನು ಹತ್ತಿ ಆಚೆ ಬಿದ್ದಿದ್ದಾನೆಂದರೆ ಈತ ಅವಿವೇಕಿಯಲ್ಲದೇ ಬೇರೇನಲ್ಲ. (ಮಾನಸಿಕ ಅಸ್ವಸ್ಥನಂತೆ). ಆದರೆ ಮುಂದೆ ಯಾರೂ ಇಂತಹ ಅಚಾತುರ್ಯಕ್ಕೆ ಇಳಿಯದಿರಲಿ.
ಕಾಮೆಂಟ್ಗಳು