ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಣ್ಣೋರನ್ನು ಹಾದಿ ಬದಿ ತಂದು ಕೂರಿಸಬೇಡಿರಪ್ಪೋ !

​ ಮೊನ್ನೆ ಡಾ. ರಾಜ್‌ಕುಮಾರ್‌ ಪುತ್ತಳಿಗೆ ಯಾರೋ ಬೆಂಕಿ ಹಚ್ಚಿ ಅವಮಾನ ಮಾಡಿದ್ದು ತುಂಬಾ ಬೇಸರ ತರಿಸಿತು. ಹಾಗೆಯೇ ರಾಜ್‌ ಅಭಿಮಾನಿಗಳು ಚಿಂತಿಸಬೇಕಾದ ಅವಶ್ಯಕತೆ ಸಹ ಇದೆ. ಅದೇನೆಂದರೆ ರಾಜ್‌ರ ಪ್ರತಿಮೆಗಳನ್ನು ಬೀದಿ ಪದಿಯಲ್ಲಿ, ಫುಟ್‌ಪಾತ್ ಬಳಿ ಹೀಗೆ ಎಲ್ಲೆಂದರಲ್ಲಿ ಇಡಲಾಗುತ್ತಿದೆ. ಈಗಾಗಲೇ ಅವರ ನೂರಾರು ಪ್ರತಿಮೆಗಳನ್ನು ರಾಜ್ಯಾಧ್ಯಂತ ಇರಿಸಿದ್ದು ಅವುಗಳಲ್ಲಿ ಕೆಲವೊಂದನ್ನು ಹೊರತು ಪಡಿಸಿ ಉಳಿದ ಯಾವುದಕ್ಕೂ ಸ್ವತಃ ಪ್ರತಿಮೆ ಇರಿಸಿದವರೇ ಗೌರವ ನೀಡಿದಂತೆ ಕಾಣಿಸುತ್ತಿಲ್ಲ. ಅಣ್ಣೋರಿಗೆ ನಿಜವಾದ ಗೌರವ ಸಲ್ಲಬೇಕಾದರೆ ಕಡೆ ಪಕ್ಷ ಉದ್ಯಾನಗಳಲ್ಲಿ, ಅಥವಾ ಒಳ್ಳೆಯ ಪರಿಸರದಲ್ಲಿ ಪಾಲಿಕೆಯ ಅನುಮತಿ ಪಡೆದು ಇರಿಸಬೇಕು. ಹಾದಿ ಬೀದಿಯ ಬದಿಗಳಲ್ಲಿ ಅವರ ಪ್ರತಿಮೆ ಇರಿಸಿ ಅವರಿಗೆ ಅಗೌರವ ಉಂಟು ಮಾಡುವುದು ಸರಿಯಲ್ಲ.

ಆಡೋನಿಗಿಂತಾ ಮಾಡೋನೇ ಮಿಗಿಲು !

​ ಪೈಸೆ ಪೈಸೆ ಕಾಳಧನವನ್ನೂ ತರುತ್ತೇನೆಂದು ಹೇಳಿದ ಮೋದಿ ಇದುವರೆಗೂ ನಾಯಾ ಪೈಸೆಯನ್ನೂ ತರಲಿಲ್ಲ. ಆದರೆ ಇತ್ತ ಸಿದ್ದರಾಮಯ್ಯ ಸದ್ದಿಲ್ಲದೇ ಲಕ್ಷಾಂತರ ಕೋಟಿ ಮೌಲ್ಯದ (ಕಪ್ಪು) ಭೂಮಿಯನ್ನು ಸರ್ಕಾರದ ವಶ ಮಾಡಿದ್ದಾರೆ.  ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನನ್ನು ನುಂಗಿ ನೀರು ಕುಡಿದಿದ್ದವರ ಮೇಲೆ ಗಧಾಪ್ರಹಾರ ಮಾಡಿದ ಸರ್ಕಾರ ಈಗಾಗಲೇ ೭೦೦ ಎಕರೆ ಭೂಮಿಯನ್ನು ತನ್ನ ವಶಕ್ಕೆ ಪಡೆದಿದೆ. ಮತ್ತು ಒಟ್ಟು ೨೫೦೦ ಎಕರೆ ಜಮೀನನ್ನು ವಶಪಡಿಸಿಕೊಳ್ಳಲು ದಾಖಲೆಗಳನ್ನು ತಯಾರು ಮಾಡಲಾಗಿದೆ. ಇದೆಲ್ಲವೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗದ ಜಮೀನಾಗಿರುವುದರಿಂದ ಪ್ರತಿ ಎಕರೆಗೂ ಹತ್ತಾರು ಕೋಟಿ ಮಾರುಕಟ್ಟೆ ಮೌಲ್ಯವಿದೆ. ಸರಿಯಾಗಿ ಲೆಕ್ಕ ಹಾಕಿದರೆ ವಶಪಡಿಸಿಕೊಂಡಿರುವ ಭೂಮಿಯ ಮೌಲ್ಯವೇ ಲಕ್ಷಾಂತರ ಕೋಟಿ ದಾಟಲಿದೆ !  ಇದಕ್ಕೆ ಮೂಲ ಕಾರಣಕರ್ತರು ಮಾಜಿ ಶಾಸಕ ಮತ್ತು 'ಭೂಕಬಳಿಕೆ ವಿರೋಧಿ ಹೋರಾಟಗಾರ'ರಾದ ಎಟಿ ರಾಮಸ್ವಾಮಿಯವರು. ಇವರಿಗೆ ಬೆಂಬಲ ನೀಡಿದ ಎಚ್.ಎಸ್. ದೊರೆಸ್ವಾಮಿಯವರಿಗೂ ಶ್ರೇಯಸ್ಸು ದೊರೆಯುತ್ತದೆ. ಇದಕ್ಕೇ ಹೇಳೋದು, ಆಡುವವನಿಗಿಂತಾ ಮಾಡುವವನೇ ಮಿಗಿಲು ಅಂತ ! ಹೋರಾಟಗಾರರಿಗೆ ಗೌರವ ನೀಡಿ ಇಂತಹ ಒಳ್ಳೆಯ ಕೆಲಸ ಮಾಡಿದ ಮುಖ್ಯಮಂತ್ರಿಗಳಿಗೆ ಧನ್ಯವಾದಗಳು.

ಸರಕಾರಿ ಅಧಿಕಾರಿಗಳಿಗೆ ಆಧಾರ್‌ ಕಡ್ಡಾಯ

​ ಭ್ರಷ್ಟಾಚಾರದ ಬಗ್ಗೆ ನಾವು ಕೇವಲ ರಾಜಕಾರಣಿಗಳನ್ನು ದೂರುತ್ತೇವೆ. ಆದರೆ ನಿಜವಾಗಿಯೂ ಹೆಚ್ಚು ಭ್ರಷ್ಟರಾಗಿರುವುದು ಈ ದೇಶದ ಅಧಿಕಾರಿಗಳು.  ಹಾಗೆಯೇ ಹೊರ ದೇಶದಲ್ಲಿರುವ ಕಪ್ಪುಹಣಕ್ಕಿಂತಾ ನಮ್ಮ ದೇಶದಲ್ಲಿರುವ ಕಪ್ಪು ಹಣ ಅತಿ ಮುಖ್ಯ. (ಇಂದಿಗೂ ಪ್ರತಿನಿತ್ಯ ಇದು ಸೃಷ್ಟಿಯಾಗುತ್ತಲೇ ಇದೆ) ಆಧಾರ್‌ ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದರಿಂದ ಮಾತ್ರ ಭ್ರಷ್ಟಾಚಾರಕ್ಕೆ ಹಾಗೂ ಕಪ್ಪು ಹಣಕ್ಕೆ ಬಹುತೇಕ ಕಡಿವಾಣ ಹಾಕಲು ಸಾಧ್ಯ. ಆಧಾರ್‌ಗೆ ಮನ್ನಣೆ ನೀಡಿರುವ ಕೇಂದ್ರಕ್ಕೆ ಧನ್ಯವಾದಗಳು. ಇದೀಗ ಕೆಂದ್ರ ಸರ್ಕಾರದ ಎಲ್ಲಾ ಅಧಿಕಾರಿಗಳೂ ತಮ್ಮ ಸೇವಾ ಪುಸ್ತಕದಲ್ಲಿ ಆಧಾರ್‌ ಸಮಖ್ಯೆ ನೀಡುವುದು ಕಡ್ಡಾಯವಾಗಿದೆ. ಇದನ್ನು ಎಲ್ಲಾ ರಾಜ್ಯ ಸರ್ಕಾರಗಳೂ ಅನುಸರಿಸಬೇಕು. ಆದರೆ ಕೇವಲ ಪಿಂಚಣಿ ಮುಂತಾದುವಕ್ಕೆ ಇದನ್ನು ಉಪಯೋಗಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಮೊದಲು ಎಲ್ಲರಿಗೂ ಆಧಾರ‍್ ವಿತರಿಸಿ, ನಂತರ ಸಾವಿರ ರೂಪಾಯಿಗಿಂತಾ ಹೆಚ್ಚಿನ ಮೌಲ್ಯದ  ಯಾವುದೇ ವಸ್ತು ಕೊಳ್ಳಬೇಕೆಂದರೂ ಆಧಾರ‍್ ಸಂಖ್ಯೆ ನೀಡುವುದು (ಪ್ರತಿಯೊಬ್ಬರೂ) ಕಡ್ಡಾಯವಾಗಬೇಕು. ಹಾಗೆ ಕೊಳ್ಳುವ ವಸ್ತುಗಳ ವಿವರ ನಮ್ಮ ಆಧಾರ್‌ ಖಾತೆಯಲ್ಲಿ ದಾಖಲಾಗುತ್ತಾ ಹೋಗಬೇಕು. ಇದನ್ನು ಮೋದಿಯವರು ಮಾಡಲಿ ಎಂದು ಆಶಿಸುತ್ತೇನೆ.