ನಾನು ಐದಾರು ಚಿಕ್ಕ ಚಿಕ್ಕ ಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಪತ್ರಿಕೆಗಳು ಚಿಕ್ಕವಾದರೂ ಇವುಗಳ ಸಂಪಾದಕರು ಮಾತ್ರ ಸಾಮಾನ್ಯದವರು ಅಂತ ನನಗನ್ನಿಸಿಲ್ಲ. ಕೆಲವರಂತೂ ಅಂಗೈಯಲ್ಲೇ ಆಕಾಶ ತೋರಿಸಬಲ್ಲ ಜಾಣರು, ಮತ್ತು ಅವಕಾಶ ಸಿಕ್ಕರೆ ಅದೇ ಅಕಾಶವನ್ನೇ ನುಂಗಿ ಅರಗಿಸಿಕೊಳ್ಳಬಲ್ಲಷ್ಟು ಸಾಮರ್ಥ್ಯರು. ಅವರುಗಳಲ್ಲಿ ಇಬ್ಬರು ಅಂತಹ ಅಸಾಧಾರಣ ವ್ಯಕ್ತಿಗಳ ಜೊತೆ ಕೆಲಸ ಮಡುವ ಅವಕಾಶ ನನಗೆ ದೊರೆತಿತ್ತು.
ಮೊದಲನೆಯವರು ವಿ. ಶಶಿಧರ್. ಕೇವಲ ಇವರ ಹೆಸರು ಹೇಳಿದರೆ ಅಷ್ಟಾಗಿ ಯಾರಿಗೂ ಗೊತ್ತಾಗುವುದಿಲ್ಲ. ಆದರೆ ದೇಶದಲ್ಲೇ ಏಕೈಕ 'ಪೊಲೀಸ್ ಮಹಾ ಸಂಘ'ವನ್ನು ನಮ್ಮ ರಾಜ್ಯದಲ್ಲಿ ಸ್ಥಾಪಿಸಿ ಅದರ ಮೂಲಕ ಇಡೀ ಇಲಾಖೆಗೆ ಮತ್ತು ಸರ್ಕಾರಕ್ಕೆ ತಲೆ ನೋವಾಗಿ ಒಂದು ಸಮಯದಲ್ಲಿ ಕಲರವವೆಬ್ಬಿಸಿದ ಶಶಿಧರ್ ಎಂದರೆ ಬಹುತೇಕರಿಗೆ ಗೊತ್ತಾಗಿ ಹೋಗುತ್ತದೆ. ಇಂದು ಪತ್ರಿಕೆ ನಿಲ್ಲಿಸಿದ್ದರೂ ಭ್ರಷ್ಟರ ಮೇಲೆ ದೂರು ದಾಖಲಿಸುತ್ತಾ ಕೆಲವರ ಪಾಲಿಗೆ ನುಂಗಲಾರದ ತುತ್ತಾಗಿದ್ದಾರೆ. ಒಂದು ಕೇಸಿನಲ್ಲಿ ಸೋನಿಯಾ ಗಾಂಧಿಗೂ ಹೈಕೋರ್ಟ್ನಿಂದ ನೋಟೀಸ್ ಕೊಡಿಸಿದ ಕೀರ್ತಿ ಇವರದು! ಇವರು ಸ್ಥಾಪಿಸಿದ 'ಪೊಲೀಸ್ ವರ್ಲ್ಡ್' ಪತ್ರಿಕೆಗೆ ಸುಮಾರು ಮೂರು ವರ್ಷ ದುಡಿದೆ.
ಎರಡನೆಯವರು ಪ್ರಜಾಮತ ಖ್ಯಾತಿಯ ಅಶೋಕ್ ಬಾಬು. ನನಗೆ ತಿಳಿದಂತೆ ಇವರು ಕನ್ನಡ ಪತ್ರಿಕಾ ರಂಗದ ದಿಗ್ಗಜರೇ ಹೌದು. ನಾವು ಚಿಕ್ಕ ಹುಡುಗರಾಗಿದ್ದಾಗ ಇವರ ಪ್ರಜಾಮತ ಮನೆ ಮಂದಿಯ ಪತ್ರಿಕೆಯಾಗಿದ್ದರೆ 'ಸುರತಿ' ಎಂಬ ವಿಶಿಷ್ಟ ಲೈಂಗಿಕ ವಿಷಯಗಳ ಪತ್ರಿಕೆ ಸದ್ದಿಲ್ಲದೇ ಯುವಕ-ಯುವತಿಯರ ಅಂತರಂಗದ ಪತ್ರಿಕೆಯಾಗಿತ್ತು. ಆ ಸಮಯದಲ್ಲೇ ಐದು ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗುತ್ತಿದ್ದವಂತೆ ! (ರತಿ ವಿಜ್ಞಾನವೊಂದು ಇಲ್ಲದೇ ಹೋಗಿದ್ದರೆ ಪ್ರಸಾರ ಸಂಖ್ಯೆ ೧೦ ಲಕ್ಷ ದಾಟುತ್ತಿತ್ತು ) ಜನ ಸುರತಿಗಾಗಿ ಎಷ್ಟು ಕಾಯುತ್ತಿದ್ದರೆಂದರೆ ಸ್ವತಃ ಮುಖ್ಯಂತ್ರಿ ಗುಂಡೂರಾವ್ ಕರೆ ಮಾಡಿ 'ಈ ಸಲ ಏನು ಬರೆದಿದೀಯ ಮಾರಾಯ, ಸಾಧ್ಯವಾದರೆ ನನಗೆ ಮೊದಲೇ ಕಳಿಸಿ ಬಿಡು, ಓದಬಿಡುತ್ತೇನೆ' ಎಂದು ಕೇಳಿದ್ದೂ ಇದೆಯೆಂದು ಅಶೋಕ್ ಬಾಬು ಹೇಳುತ್ತಿದ್ದರು.
ಆದರೆ ನಂತರದ ದಿನಗಳಲ್ಲಿ ಸುರತಿಗಾಗಿಯೇ ಅವರ ಮೇಲೆ ಹತ್ತಾರು ದೂರುಗಳು ದಾಖಲಾಗಿ ಇನ್ನಿಲ್ಲದ ಪಡಿಪಾಟಲು ಪಡುವಂತಾಯ್ತು. ಸಾಲದ ಹೊರೆಯಲ್ಲಿ ನಲುಗಿದರು. ನಾವು ಕಚೇರಿಯಲ್ಲಿದ್ದ ಸಮಯದಲ್ಲೇ ರಾಜ್ಯದ, ದೇಶದ ಬಹುತೇಕ ಬ್ಯಾಂಕ್ಗಳಿಂದ ಸಾಲ ವಸೂಲಿಗಾಗಿ ಜನ ಬಂದು ಹೋಗುತ್ತಿದ್ದರು. ಇವರಿಲ್ಲದ ಸಮಯದಲ್ಲಿ ಎಗರಾಡುತ್ತಿದ್ದ ಸಾಲಗಾರರನ್ನು ಕೇವಲ ಎರಡು ನಿಮಿಷದ ಮಾತುಕತೆರ ಮೂಲಕ ಸರಿ ಮಾಡಿ ಕಳಿಸುತ್ತಿದ್ದ ಅವರ ಚಾಲಾಕಿತನ ನಿಬ್ಬೆರಗಾಗುವಂತೆ ಮಾಡಿತ್ತು.
ಅಶೋಕ್ ಬಾಬು ನಡೆಸುತ್ತಿದ್ದ 'ನಮ್ಮ ಬೆಂಗಳೂರು' ಪತ್ರಿಕೆಯಲ್ಲಿ ಸಹ ಸಂಪಾದಕನಾಗಿ ಒಂದು ವರ್ಷ ದುಡಿದೆ. ಎಷ್ಟೋ ಸಮಯ ಕಚೇರಿಯಲ್ಲೇ (ಎನ್ಆರ್ ಕಾಲೋನಿಯ ಅವರ ಮನೆ) ಉಳಿದು ಅಲ್ಲೇ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದೆವು. ಬ್ರಾಹ್ಮಣ ರಾಜಕಾರಣಿಗಳ ಕುತಂತ್ರಗಳನ್ನು ಸವಿವರವಾಗಿ ಬಿಚ್ಚಿಡುತ್ತಿದ್ದ ಇವರು ಮದುವೆಯಾಗಿದ್ದೂ ಬ್ರಾಹ್ಮಣ ಯುವತಿಯನ್ನೇ ಆಗಿತ್ತು !
ನಂತರದ ದಿನಗಳಲ್ಲಿ ಅವರ ಸಂಪರ್ಕ ನನಗೆ ಸಿಗಲಿಲ್ಲ. ಕೆ.ಎನ್.ಎನ್. ಸುದ್ದಿ ಸಂಸ್ಥೆ ಸ್ಥಾಪಿಸಿದ್ದು ಗೊತ್ತಾಯಿತು. ಹಾಗೆಯೇ ಪ್ರಜಾಮತವನ್ನೂ ಮರಳಿ ಪ್ರಾರಂಭಿಸಿದರು. ಇದರ ಬಗ್ಗೆ ನನಗೆ ಹೇಳದಿದ್ದುದರಿಂದ ನಾನೂ ಅವರನ್ನು ಸಂಪರ್ಕಿಸಲು ಹೋಗಲಿಲ್ಲ. ಆಮೇಲೆ ಒಂದು ದಿನ ಇದ್ದಕ್ಕಿದ್ದಂತೆ ಅವರೇ ಕರೆ ಮಾಡಿ ಕ್ಷೇಮ ವಿಚಾರಿಸಿ 'ಪ್ರಜಾಮತ, ಕೆಎನ್ಎನ್ ಅನ್ನು ದೀನೇಶ್ ಅನ್ನುವವರು ನೋಡಿಕೊಳ್ತಿದಾರೆ. ಬೇಕಾದರೆ ನೀವೂ ಸೇರಿಕೊಳ್ಳಿ, ಬನ್ನಿ' ಎಂದು ಕರೆದರು. ಆದರೆ ನಾನಾಗಲೇ ಪತ್ರಿಕಾ ರಂಗದ ಸಹವಾಸ ಸಾಕು ಎಂದು ವೆಬ್ಡಿಸೈನ್ ಕಲಿಯುತ್ತಿದ್ದೆ. ಮುಂದೆ ಅವರ ಸಂಪರ್ಕ ಸಿಗಲೇ ಇಲ್ಲ.
ಇಂತಹ ಅಶೋಕ್ ಬಾಬು ಮೊನ್ನೆ ತೀರಿಕೊಂಡರು. ಅವರ ನೆನಪು ಸದಾ ಉಳಿದಿರುತ್ತದೆ.
ಕಾಮೆಂಟ್ಗಳು