ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಚಿತ್ರಮಂದಿರಗಳಲ್ಲಿ ಯಾರ್‌ ಯಾರ ಬಾಯಲ್ಲಿ "ಜ್ವಳ ಜ್ವಳ" ಆಗಲಿದೆಯೋ...

ನಾವು ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರಗೀತೆ ಹಾಡುವಾಗ ಹೆಚ್ಚಾಗಿ ಗುಂಪಲ್ಲಿ ಗೋವಿಂದ ಆಗಿ ಹಾಡುವುದೇ ಹೆಚ್ಚು. ಅದೇ ಒಬ್ಬೊಬ್ಬರನ್ನೇ ನಿಲ್ಲಿಸಿ ಹಾಡು ಅಂದರೆ ಯಾರಿಗೂ ಸರಿಯಾಗಿ ಬರುತ್ತಿರಲಿಲ್ಲ. ಹೀಗಿರಲೊಮ್ಮೆ ನಮ್ಮ ಶಾಲೆಗೆ ಹಾವೇರಿ ಕಡೆಯ ಕಡಕ್‌ ಮುಸ್ಲಿಂ ಮೇಷ್ಟ್ರು ವರ್ಗ ಆಗಿ ಬಂದ್ರು. ಬಂದ ಮೊದಲ ದಿನವೇ "ಬಡಿಗಿ ತರ‍್ರಲೇ" ಅಂತ ಒಂದು ದೊಡ್ಡ ಕೋಲು ತರಿಸಿ ಇಟ್ಟುಕೊಂಡು ಬಡಿಯತೊಡಗಿದರು. ಪ್ರತಿಯೊಂದಕ್ಕೂ ಭಯಂಕರ ಸ್ಟ್ರಿಕ್ಟು.  ಒಂದು ದಿನ ರಾಷ್ಟ್ರಗೀತೆ ಹೇಳುತ್ತಿರುವಾಗ ಅವರಿಗೆ ಯಾರೋ ಸರಿಯಾಗಿ ಹೇಳುತ್ತಿಲ್ಲ ಅನ್ನೋ ಅನುಮಾನ ಬಂದಿದೆ. ಒಂದೆರಡು ದಿನ ಗಮನಿಸಿದವರು ಕೊನೆಗೂ ಯಾರು ತುಂಬಾ ತಪ್ಪಾಗಿ ಹೇಳುತ್ತಾರೆ ಅಂಗ ಗೊತ್ತು ಮಾಡಿ ಆ ಹುಡುಗನಿಗೆ "ನೀನೊಬ್ನೇ ಹೇಳಲೇ ರಾಷ್ಟ್ರಗೀತೆನಾ" ಅಂದ್ರು. ಸರಿ ಅವ ಸುರು ಮಾಡಿದ.. "ಜನ ಗಣ ಮನ ಅದಿ ನಾಯಕ ಜಯ ಹೇ..." ... ... "ಉಚ್ಚಲ ಜಲದಿ ತರಂಗ" ಅನ್ನೋ ಸಾಲನ್ನು "ಉಚ್ಚೆಲ್ಲ ಜ್ವಳ ಜ್ವಳ ಲಂಗ!" ಅಂದು ಬಿಟ್ಟ. ಮೇಷ್ಟ್ರು ಬಡಿಗೆ ಹಿಡಿದೇ ನಿಂತಿದ್ರು. ಅಂಡಿನ ಮೇಲೆ ಚೆನ್ನಾಗಿ ಬಡಿದ್ರು. ಅದಾದ ನಂತರ ಎಲ್ಲರಿಗೂ ರಾಷ್ಟ್ರಗೀತೆ ಸರಿಯಾಗಿ ಬಾಯಿಪಾಠ ಮಾಡಿಸಿದ್ರು. ಅದೆಲ್ಲಾ ಆಗಿ ಈಗ... ಚಿತ್ರಮಂದಿರಗಳಲ್ಲಿ ಯಾರ್‌ ಯಾರ ಬಾಯಲ್ಲಿ "ಜ್ವಳ ಜ್ವಳ" ಆಗಲಿದೆಯೋ...