ವಿಷಯಕ್ಕೆ ಹೋಗಿ

ಜಗತ್ತನ್ನು ಬೆಳಗಿದ ಅನಾಮಿಕ ವಿಜ್ಞಾನಿ : ನಿಕೋಲ ಟೆಸ್ಲಾ !


ಅದು ೧೮೮೪, ಕ್ರೊವೇಶಿಯಾದ ೨೮ ವರ್ಷದ ಒಬ್ಬ ಯುವಕ ತನ್ನ ಅಪ್ರತಿಮ ಬುದ್ದಿವಂತಿಕೆಯನ್ನು ಬಸಿದು ಹಣ ಸಂಪಾದಿಸುವ ಯೋಚನೆಯೊಂದಿಗೆ ಅಮೆರಿಕಾಕ್ಕೆ ಪ್ರವೇಶಿಸಿ ಅಲ್ಲಿ ಅದಾಗಲೇ ಪ್ರಸಿದ್ದಿ ಪಡೆದಿದ್ದ ಇನ್ನೊಬ್ಬ ಯುವ ವಿಜ್ಞಾನಿಯ ಎದುರು ತಾನೇ ಬರೆದುಕೊಂಡು ತಂದಿದ್ದ ಚಿಕ್ಕದೊಂದು ಪತ್ರವನ್ನು ಹಿಡಿದು ನಿಲ್ಲುತ್ತಾನೆ. ಎದುರಿಗಿದ್ದ ವಿಜ್ಞಾನಿಯೋ ಅದಾಗಲೇ ಜಗತ್ಪ್ರಸಿದ್ದಿ ಪಡೆದಿದ್ದ ಮತ್ತು ವಿದ್ಯುತ್‌ ಜನರೆಟರ್‌ಗಳನ್ನು ತಯಾರಿಸಿ ಮಾರುವ ಅತಿ ದೊಡ್ಡ ಸಂಸ್ಥೆಯ ಒಡೆಯ ಕೂಡಾ. ಈ ಯುವಕ ನೀಡಿದ ಆ ಪತ್ರದಲ್ಲಿ ಇದ್ದುದು ಎರಡೇ ಸಾಲು...

"ಈ ಜಗತ್ತಿನಲ್ಲಿ ಈಗ ಇರುವುದು ಇಬ್ಬರೇ ಜೀನಿಯಸ್‌ಗಳು. ಅದರಲ್ಲಿ ಒಬ್ಬರು ನೀವು, ಮತ್ತೊಬ್ಬ ನಾನು!"

ಈತನ ಕ್ರಿಯಾಶೀಲತೆಯನ್ನು ಕಂಡು ಬೆರಗಾದ ಆ ವಿಜ್ಞಾನಿ "ನಿನ್ನ ಯೋಜನೆಗಳನ್ನು ಇಲ್ಲಿ ಮಾಡು, ನಾವು ತಯಾರಿಸುತ್ತಿರುವ ಜನರೇಟರ್‌ಗಳ ರೀ-ಡಿಸೈನ್‌ ಮಾಡಿ ಕೊಡು, ನಿನಗೆ ೫೦ ಸಾವಿರ ಡಾಲರ್‌ ಬೋನಸ್‌ ಕೊಡುತ್ತೇನೆ" ಎಂದು ಭರವಸೆ ನೀಡಿದ.

೫೦ ಸಾವಿರ ಡಾಲರ್‌ ಅನ್ನುವುದು ಆಗ ಊಹೆಗೂ ನಿಲುಕದ ದೊಡ್ಡ ಮೊತ್ತವಾಗಿತ್ತು! ಈಗಲೂ ಕೂಡಾ. ಅತ್ಯಂತ ಕುಶಿಗೊಂಡ ಆ ಬಡ ಯುವಕ ಬೇಗ ಬೇಗನೆ ಅನೇಕ ಜನರೆಟರ್‌ಗಳ ಮಾಡೆಲ್‌ಗಳನ್ನು ಮಾಡಿ ಆ ವಿಜ್ಞಾನಿಗೆ ತೋರಿಸಿದ. ಎಲ್ಲವೂ ಈ ಮೊದಲು ಅವರು ತಯಾರಿಸುತ್ತಿದ್ದ ಜನರೇಟರ್‌ಗಳಿಗಿಂತ ಕಡಿಮೆ ಖರ್ಚಿನಲ್ಲಿ ತಯಾರು ಮಾಡಬಹುದಾದಂತಹ ಮಾಡೆಲ್‌ಗಳು. ಹೀಗೆ ತನಗೆ ಲಾಭದಾಯಕ ಮಾಡೆಲ್‌ಗಳನ್ನು ನೀಡಿ, ತಾನು ಭರವಸೆ ನೀಡಿದ್ದಂತಹ ೫೦ ಸಾವಿರ ಡಾಲರ್‌ ಬೋನಸ್‌ ಪಡೆಯಲು ಆಸೆಯಿಂದ ತನ್ನೆದುರು ಕೈ ಕಟ್ಟಿ ನಿಂತ ಯುವಕನಿಗೆ ಆ ವಿಜ್ಞಾನಿ ಹೇಳಿದ್ದು...

"೫೦ ಸಾವಿರ ಡಾಲರ್‌ ಅಂದರೆ ತಮಾಷೆ ಅಂದುಕೊಂಡೆಯಾ ? ಅಷ್ಟೊಂದು ಹಣ ಪಡೆಯುವವಷ್ಟು ಬುದ್ದಿವಂತಿಕೆ ನಿನ್ನದು ಅಂದುಕೊಂಡು ಬಿಟ್ಟೆಯಾ ? ನಾನು ಅಂದು ಹೇಳಿದ್ದು ತಮಾಷೆಗೆ ಅಷ್ಟೇ.  ಅಷ್ಟೆಲ್ಲಾ ದುಡಿಯುವ ಅರ್ಹತೆ ನಿನ್ನ ಬುದ್ದಿವಂತಿಕೆಗೆ ನಿಲುಕಿಲ್ಲ. ನಿನ್ನ ಸಾಮರ್ಥ್ಯಕ್ಕೆ ತಕ್ಕಂತೆ ಬೇಕಾದರೆ ವಾರಕ್ಕೆ ೧೦ ಡಾಲರ್‌ ಕೂಲಿ ಕೊಡುತ್ತೇನೆ." ಎಂದು.

ಹೀಗೆ ಕೆಲಸ ಮಾಡಿಸಿಕೊಂಡು ವಂಚನೆ ಮಾಡಿದ್ದಲ್ಲದೇ ಅವಮಾನವನ್ನೂ ಮಾಡಿದ ಆ ದೊಡ್ಡ ವಿಜ್ಞಾನಿಯ ಹೆಸರೇ ಥಾಮಸ್‌ ಆಲ್ವಾ ಎಡಿಸನ್‌! ಘೋರ ಅವಮಾನಗೊಂಡು ತಕ್ಷಣವೇ ಆ ಸಂಸ್ಥೆಗೆ ರಾಜೀನಾಮೆ ನೀಡಿ ಜಿದ್ದಿನೊಂದಿಗೆ ಹೊರ ನಡೆದ ಈ ಲೇಖನದ ದುರಂತ ನಾಯಕನ ಹೆಸರು.. ""ನಿಕೋಲ ಟೆಸ್ಲಾ!" ಈ ಕಾರಣದಿಂದ ಈ ಇಬ್ಬರ ನಡುವಿನ ಜಿದ್ದು ಕೊನೆಯ ವರೆಗೂ ಮುಂದುವರಿಯಿತು.

ನಿಕೋಲ ಟೆಸ್ಲಾ!

ಇಂದು ಬಹುತೇಕರು ಈ ಹೆಸರನ್ನು ಕೇಳಿಯೇ ಇಲ್ಲ. ಹಾಗೆ ಕೇಳಿರಬೇಕಾದಂತಹ ಸಾಧನೆಯನ್ನು ಈ ವ್ಯಕ್ತಿ ಅದೇನು ಮಾಡಿಬಿಟ್ಟಿದ್ದಾರೆ ಹೇಳಿ ಅನ್ನುತ್ತೀರಾ ? ಕೇಳಿ ಇಲ್ಲಿ.. ನಿಮ್ಮ ಮನೆಗೆ ನೀವು ಬಳಸುತ್ತಿರುವ ಎ.ಸಿ. ವಿದ್ಯುತ್‌ (ಅಲ್ಟರ್‌ನೇಟೀವ್‌ ಕರೆಂಟ್‌) ಅದನ್ನು ಕಂಡು ಹಿಡಿದುದು ಇವರೇ.  ಇಂದು ಬಹುತೇಕ ಎಲ್ಲಾ ವಿದ್ಯುತ್‌ ಉತ್ಪಾದನಾ ಘಟಕಗಳಲ್ಲಿ ಬಳಸುತ್ತಿರುವ ಅಯಸ್ಕಾಂತ ಆಧಾರಿತ ಟರ್ಬೈನ್‌ ಕೂಡಾ ಇವರ ಸಂಶೋಧನೆಯೇ. ನಿಮ್ಮ ಮನೆಯಲ್ಲಿ ಟ್ಯೂಬ್‌ ಲೈಟ್‌ ಇದ್ದುದು ಹೌದಾದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಬೆಳಕು ನೀಡುವ ಅನಿಲ ಆಧಾರಿತ ಬಲ್ಬ್‌ ಅನ್ನು ಅಭಿವೃದ್ದಿ ಮಾಡಿದ್ದು ಕೂಡಾ ಇವರೇ. ಅಷ್ಟೇ ಅಲ್ಲ, ಈಗ ಎಲ್ಲಾ ಕಡೆ ಬಳಕೆಯಲ್ಲಿರುವ ವಿದ್ಯುತ್‌ ಮೋಟರ್‌, ರಿಮೋಟ್‌ ಕಂಟ್ರೋಲರ್‌,  ವಾಹನಗಳ ಇಂಜಿನ್‌ನಲ್ಲಿ ಉಪಯೋಗಿಸುವ ಇಗ್ನೀಷಿಯನ್‌, ವಿಮಾನದಲ್ಲಿ ಬಳಸುವ ನಿಸ್ತಂತು ಉಪಕರಣಗಳು, ಎಕ್ಸ್‌-ರೇ ತಂತ್ರಜ್ಞಾನ, ರೇಡಿಯೋ ತರಂಗಗಳು, ಮೈಕ್ರೋ ಓವನ್‌ನಲ್ಲಿ ಉಪಯೋಗಿಸುವ ಮೈಕ್ರೋ ವೇವ್ಸ್‌ ತರಂಗಗಳು, ಹೀಗೆ ನಾವು ದಿನವೂ ನಾವು ಉಪಯೋಗಿಸುತ್ತಿರುವ ನೂರಾರು ಉಪಕರಣಗಳ ಹಿಂದಿನ ವ್ಯಕ್ತಿ ನಿಕೋಲ ಟೆಸ್ಲಾನೇ ಆಗಿದ್ದಾರೆ. ರೇಡಾರ್‌ ಹಾಗೂ ಇಂದು ಹೆಚ್ಚು ಪ್ರಬಲವಾಗುತ್ತಿರುವ "ಸೂರ್ಯಶಕ್ತಿಯ ಬಳಕೆ" (solar energy) ಕೂಡಾ ಇವನದೇ ಕಲ್ಪನೆ. ಅಷ್ಟೇ ಅಲ್ಲ, ನಮ್ಮ ಅರಿವಿಗೆ ಬಾರದ ಸಾವಿರಾರು ಅವಿಷ್ಕಾರಗಳ ಮೂಲ ಪುರುಷ ಟೆಸ್ಲಾ ಎಂದರೆ ಅತಿಷಯೋಕ್ತಿಯಲ್ಲ. ಏಕೆಂದರೆ ಈಗಲೂ ಈತನ ಹೆಸರಲ್ಲಿ ವಿವಿಧ ದೇಶಗಳಲ್ಲಿ ಮುನ್ನೂರಕ್ಕೂ ಹೆಚ್ಚು ಪೇಟೆಂಟ್‌ಗಳಿವೆ ಎಂದರೆ ನಂಬಲೇ ಬೇಕು. ನಮ್ಮ ದೇಶದಲ್ಲೂ ಈತ ಒಂದು ವಿಷಯದ ಪೇಟೆಂಟ್‌ ಪಡೆದಿದ್ದ. ಇದಲ್ಲದೇ ಈತ ತನ್ನ ಜೀವಿತ ಕಾಲದಲ್ಲಿ ಪಡೆದ ಪೇಟೆಂಟ್‌ಗಳ ಸಂಖ್ಯೆ ಬರೋಬ್ಬರಿ ಏಳು ನೂರಕ್ಕೂ ಹೆಚ್ಚು ಎಂದು ಹೇಳುತ್ತಾರೆ. ಆದರೆ ೧೯೪೩ರಲ್ಲಿ ಈತ ತೀರಿ ಹೋದ ನಂತರ ಬಹಳಷ್ಟನ್ನು ಬೇರೆ ಬೇರೆ ಪಟ್ಟಭದ್ರರು ತಮ್ಮ ಹೆಸರಿಗೆ ಮಾಡಿಕೊಂಡು ಹುಳ್ಳಗೆ ನಕ್ಕಿದ್ದಾರೆ.. ಮಾರ್ಕೋನಿಯಂತೆ !

ಇದೆಲ್ಲಕ್ಕಿಂತ ಹೆಚ್ಚಾಗಿ ಈತನನ್ನು ನಾವು ನೆನೆಸಿಕೊಳ್ಳಬೇಕಾದುದು, ಈತನ ಮಹಾನ್‌ ಕನಸಾಗಿದ್ದ ಇಡೀ ಪ್ರಪಂಚಕ್ಕೂ "ಉಚಿತ ವಿದ್ಯುತ್‌" ನೀಡಬೇಕೆಂಬ ಬೃಹತ್‌ ಯೋಜನೆ ! ಇವನ ಈ ಯೋಚನೆ ಏನಾದರೂ ಕಾರ್ಯರೂಪಕ್ಕೆ ಬಂದರೆ ತಾವೆಲ್ಲಾ ಮುಳುಗಿಯೇ ಹೋಗುತ್ತೇವೆ ಎಂದು ಎಡಿಸನ್‌ ಮತ್ತು ಇನ್ನೂ ಅನೇಕ ವಿಜ್ಞಾನಿಗಳು ಈತನಿಗೆ ಇನ್ನಿಲ್ಲದ ಕಷ್ಟ ಕೊಟ್ಟರು.  ಆದರೆ ಅವೆಲ್ಲವನ್ನೂ ಎದುರಿಸಿ ನಿಂತ ಟೆಸ್ಲಾ ಕೆಲವೊಂದು ವಿಷಯಗಳಲ್ಲಿ ಸೋಲುತ್ತಾ ಬಂದುದು ವಿಪರ್ಯಾಸವಾಗಿತ್ತು ಕೂಡ.  ಅದಲ್ಲದೇ ಈತನ ಯೋಚನೆಗಳು ಇನ್ನೂ ಹಲವಾರು ಇದ್ದವು. ಮುಖ್ಯವಾಗಿ ಒಂದು ಬಲವಾದ ವಿದ್ಯುತ್‌ ಬೀಮ್‌ ಅನ್ನು ಚಿಮ್ಮಿ ದೂರದಿಂದಲೇ ಯುದ್ದ ವಿಮಾನಗಳನ್ನು ಸುಟ್ಟು ಹಾಕುವುದು, ನಿರ್ದಿಷ್ಟ ಜಾಗದಲ್ಲಿ ಪ್ರಬಲ ನೆಲ ನಡುಕ ಉಂಟು ಮಾಡಿ ಪಟ್ಟಣ ಅಥವಾ ನಗರವನ್ನೇ ಧ್ವಂಸ ಮಾಡುವುದು ಇತ್ಯಾದಿಗಳಿದ್ದವು. ಒಟ್ಟಿನಲ್ಲಿ ಈತನೊಬ್ಬ ಅಮೆರಿಕ ಒಂದೇ ಅಲ್ಲ, ಇಡೀ ಜಗತ್ತಿನ ಜನ ನಾಯಕ ಎನ್ನಬಹುದು. ಏಕೆಂದರೆ ಇಂದು ಪ್ರತಿ ಜಾಗದಲ್ಲೂ ಈತನ ಅವಿಷ್ಕಾರಗಳನ್ನು ಅಥವಾ ಅದರ ಮುಂದುವರಿದ ಭಾಗವನ್ನೇ ನಾವೆಲ್ಲಾ ಉಪಯೋಗಿಸುತ್ತಾ ಇದ್ದೇವೆ. ಆದರೆ ಅದೇನು ಕಾರಣಕ್ಕೋ ಜನರು ಈತನನ್ನು ಸರಿ ಸುಮಾರಾಗಿ ಮರೆತೇ ಬಿಟ್ಟರು. ಮದುವೆಯನ್ನೂ ಆಗದೇ, ತನ್ನ ಸುಖ ಸಂತೋಷಗಳನ್ನೆಲ್ಲಾ ತ್ಯಜಿಸಿ ಜಗತ್ತಿಗೆ ಇಷ್ಟೆಲ್ಲಾ ವಸ್ತು ವಿಶೇಷಗಳನ್ನು ನೀಡಿದ ಮಹಾನುಭಾವನೊಬ್ಬ ನೋಬೆಲ್‌ ಪ್ರಶಸ್ತಿಯಿಂದಲೂ ವಂಚಿತನಾಗಿ, ತನ್ನ ಕೊನೆಯ ಕಾಲದಲ್ಲಿ ಹೋಟೆಲೊಂದರ ಚಿಕ್ಕ ಕೋಣೆಯಲ್ಲಿ ಅನಾಥವಾಗಿ ಸತ್ತು ಹೋದರು ಅಂದರೆ ನಂಬುವುದು ಕಷ್ಟ. ಆದರೂ ಇದು ನಿಜ.

ಅವ್ಯವಸ್ಥೆಯ ಬದುಕು

ನಿಕೋಲ ಟೆಸ್ಲಾನ ಬದುಕೇ ಒಂದು ರೀತಿಯ ಅವ್ಯವಸ್ಥೆಯಿಂದ ಕೂಡಿತ್ತು. ಇದಕ್ಕೆ ಕಾರಣ ಈತನ ಬಡತನ. ಕ್ರೊವೇಶಿಯಾದಲ್ಲಿ ಜುಲೈ ೧೦, ೧೮೫೬ರಂದು ಹುಟ್ಟಿದ ಟೆಸ್ಲಾನಿಗೆ ಬಾಲ್ಯದಿಂದಲೂ ವಿದ್ಯುತ್‌ ಮೇಲೆ ಅಪಾರ ಸೆಳೆತ. ಕಾರಣ ಬಾಲ್ಯದಲ್ಲಿಯೇ ಆತ ನೋಡುತ್ತಿದ್ದ ದೊಡ್ಡ ದೊಡ್ಡ ಚಂಡಮಾರುತಗಳ ಜೊತೆ ಬರುತ್ತಿದ್ದ ಮಿಂಚು, ಗುಡುಗು, ಸಿಡಿಲುಗಳು. ಮಿಂಚಿನಲ್ಲಿ ವಿದ್ಯುತ್‌ ಇದೆ ಎಂದು ಬೆಂಜಮಿನ್‌ ಫ್ರಾಂಕ್ಲಿನ್‌ ಹೇಳಿದ್ದನ್ನು ಗ್ರಹಿಸಿದ್ದ ಟೆಸ್ಲಾ ಆ ಮಹಾನ್‌ ವಿದ್ಯುತ್‌ ಶಕ್ತಿಯನ್ನು ಹೇಗಾದರೂ ಮಾನವ ಬಳಕೆಗೆ ಒಗ್ಗಿಸಲೇ ಬೇಕು ಎಂದು ಪಣ ತೊಟ್ಟಿದ್ದ. ಆದರೆ ತನ್ನ ಯೋಚನೆಗಳನ್ನು ಕಾರ್ಯರೂಪಕ್ಕೆ ತರಲು ಅವನ ಬಳಿ ಯಾವುದೇ ಸಲಕರಣೆಗಳು ಇರಲಿಲ್ಲ. ನಾವಿಂದು ಉಪಯೋಗಿಸುತ್ತಿರುವ ವಿದ್ಯುತ್‌ ಮೋಟರ್‌ಗಳ ಒಳ ರಚನೆ ಟೆಸ್ಲಾಗೆ ಹೊಳೆದಾಗ ಆತ ಎಲ್ಲೋ ನಡೆದುಕೊಂಡು ಹೋಗುತ್ತಿದ್ದರು. ಕೂಡಲೇ ಚಿಕ್ಕ ಕೋಲೊಂದರಿಂದ ಮಳೆಯಲ್ಲಿ ನೆನೆದಿದ್ದ ನೆಲದ ಮೇಲೆಯೇ ತನಗೆ ಬಂದ ಯೋಚನೆಯ ಮೋಟರ್‌ನ ರಚನೆಯನ್ನು ಚಿತ್ರ ಬಿಡಿಸಿ ನೋಡಿಕೊಂಡು ಅದು ಸಾಧ್ಯ ಎಂದು ಅರಿವಿಗೆ ಬಂದ ನಂತರವೇ ಅಲ್ಲಿಂದ ಕದಲಿದ್ದು. ಬಡ ಕುಟುಂಬಸ್ಥನಾದ ಕಾರಣ ತನಗೆ ಬೇಕಾದಂತಹ ಪ್ರಯೋಗಶಾಲೆ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ ಅನ್ನಿಸಿಯೇ ಮೇಲೆ ತಿಳಿಸಿದಂತೆ ಅವರು ಅಮೆರಿಕಾದತ್ತ ಪ್ರಯಾಣ ಬೆಳೆಸಿದ್ದು.


ಸೇಡು ತೀರಿಸಿಕೊಂಡ ಟೆಸ್ಲಾ!

ತನಗೆ ೫೦ ಸಾವಿರ ಡಾಲರ್‌ ನೀಡುವುದಾಗಿ ಆಮಿಷ ಒಡ್ಡಿ ತನ್ನಿಂದ ತಂತ್ರಜ್ಞಾನವನ್ನು ತಿಳಿದುಕೊಂಡು ವಂಚಿಸಿದ ಎಡಿಸನ್‌ಗೆ ಎದಿರೇಟು ಕೊಡಲೇ ಬೇಕು ಎಂದು ಟೆಸ್ಲಾ ಯೋಚಿಸುತ್ತಿದ್ದರು. ಆದರೆ ಬಡವನ ಸಿಟ್ಟು ದವಡೆಗೆ ಮೂಲ ಎಂಬಂತಾಗಿತ್ತು ಟೆಸ್ಲಾ ಸ್ಥಿತಿ. ಏಕೆಂದರೆ ಎಡಿಸನ್‌ ಅದಾಗಲೇ DC ( ಡೈರೆಕ್ಟ್‌ ಕರೆಂಟ್‌ ) ಮೂಲಕ ನ್ಯೂಯಾರ್ಕ್‌ ಸಿಟಿಯಲ್ಲಿ ಹೆಸರುವಾಸಿಯೂ ಮತ್ತು ಅತಿ ದೊಡ್ಡ ಉದ್ಯಮಿಯೂ ಆಗಿದ್ದರು. ಅವರ ಎದುರು ಸೆಣೆಸುವುದು ಸುಲಭದ ಮಾತಾಗಿರಲಿಲ್ಲ. ಬೀದಿಯಲ್ಲಿ ನಡೆದು ಹೋಗುವಾಗೆಲ್ಲಾ ಎಡಿಸನ್‌ ಹಾಕಿದ ಲೆಕ್ಕವಿಲ್ಲದಷ್ಟು ವೈಯರ್‌ಗಳು ಟೆಸ್ಲಾರನ್ನು ಕೆಣಕುತ್ತಿದ್ದವು. ಇದನ್ನೇ ಸವಾಲಗಿ ತೆಗೆದುಕೊಂಡ ಟೆಸ್ಲಾ ಎ.ಸಿ. (ಅಲ್ಟರ್‌ನೇಟೀವ್‌ ಕರೆಂಟ್‌) ಬಗ್ಗೆ ಆಸಕ್ತಿ ವಹಿಸಿದರು. DC ಗೆ ಎದುರಾಗಿ AC ಕರೆಂಟ್‌ ಅನ್ನು ಉಪಯೋಗಿಸುವುದು ಅತ್ಯಂತ ಕಡಿಮೆ ವೆಚ್ಚದ್ದು ಎಂಬುದು ಟೆಸ್ಲಾಗೆ ತಿಳಿದು ಹೋಯ್ತು. ತಕ್ಷನವೇ ಎಡಿಸನ್‌ಗೆ ಗುದ್ದು ಕೊಟ್ಟು ತನ್ನ ಸೇಡು ತಿರಿಸಿಕೊಳ್ಳಲು ಮುಂದಾದರು.

[ ಇಲ್ಲಿ AC current ಮತ್ತು DC current ನ ವ್ಯತ್ಯಾಸ ತಿಳಿಸಲೇ ಬೇಕಾಗಿದೆ. AC ಕರೆಂಟ್‌ ಅಂದರೆ ಮೊಬೈಲ್‌ ಬ್ಯಾಟರಿ, ಅಥವಾ ಟಾರ್ಚ್‌‌ಗಳಿಗೆ ಉಪಯೋಗಿಸುವ ಸೆಲ್‌ಗಳಲ್ಲಿ ಇರುವಂತದ್ದು. ಇದರ ಶಕ್ತಿ ತುಂಬಾ ಕಡಿಮೆ. ಮತ್ತು ತುಂಬಾ ದೂರದ ವರೆಗೆ ಇದನ್ನು ಸಾಗಿಸುವುದು ಕಷ್ಟ. ಏಕೆಂದರೆ DC ಕರೆಂಟ್‌ನಲ್ಲಿ ಎಲೆಕ್ಟ್ರಾನ್‌ಗಳು + ಬಿಂದುವಿನಿಂದ - ಬಿಂದುವಿಗೆ ಸಾಗಬೇಕು. ಅಂದರೆ + ಬಿಂದುವಿನಿಂದ ಹೊರಟ ಎಲೆಕ್ಟ್ರಾನ್‌ ಅದುವೇ ಸುತ್ತಾಡಿಕೊಂಡು ಬಂದು - ಬಿಂದುವನ್ನು ತಲುಪಬೇಕು. ಈ ಕಾರಣಕ್ಕೆ ಹೆಚ್ಚು ದೂರ ಹೋದಂತೆಲ್ಲಾ ಎಲೆಕ್ಟ್ರಾನ್‌ಗಳು ನಡುವಲ್ಲಿಯೇ ಸೋತು ಹೋಗುವುದರಿಂದ ವಿದ್ಯುತ್‌ ಶಕ್ತಿ ನಷ್ಟ ಹೊಂದುತ್ತದೆ. ಇದನ್ನು ನೀವು ಪರೀಕ್ಷಿಸಲು ಒಂದು ಬ್ಯಾಟರಿ ಸೆಲ್‌ಗೆ ಹತ್ತೇ ಸೆಂಟಿ ಮೀಟರ್‌ನ ವಯರ್‌ ಜೋಡಿಸಿ ಚಿಕ್ಕ ಬಲ್ಬ್‌ ಉರಿಸಿ. ಆಗ ಅದು ಹೆಚ್ಚು ಪ್ರಕಾಶಮಾನವಾಗಿ ಉರಿಯುತ್ತೆ. ಆದರೆ ೧೦ ಸೆ.ಮೀ. ಬದಲು ೧೦ ಮೀಟರ್‌ ಉದ್ದನೆಯ ವಯರ್‌ ಬಳಸಿದಾಗ ಬಲ್ಬ್‌ ತುಂಬಾ ಚಿಕ್ಕದಾಗಿ ಉರಿಯುತ್ತೆ. ಅಂದರೆ ಚಾರ್ಜ್‌ ಆದ ಎಲೆಕ್ಟ್ರಾನ್‌ಗಳು ಅಷ್ಟು ದೂರ ಸಾಗಲು ಸಾಧ್ಯವಾಗದೇ ನಷ್ಟ ಹೊಂದುತ್ತವೆ. ಇದನ್ನು ತಪ್ಪಿಸಬೇಕೆಂದರೆ ದೊಡ್ಡ ವೈಯರ್‌ ಉಪಯೋಗಿಸಿ ಒಂದು ಸೆಲ್‌ ಬದಲು ಹತ್ತು ಸೆಲ್‌ ಬಳಸಬೇಕಾಗುತ್ತದೆ. ಆದರೂ ೧೦ ಮೀಟರ್‌ ಬದಲು ೧೦೦ ಮೀಟರ್‌ ಅಥವಾ ಕಿಲೋ ಮಿಟರ್‌ ದೂರದವರೆಗೆ DC ಕರೆಂಟ್‌ ಅನ್ನು ಕಳಿಸಬೇಕೆಂದರೆ ? ಆದರೆ ಟೆಲ್ಸಾ ಕಂಡು ಹಿಡಿದ AC ಕರೆಂಟಿನಲ್ಲಿ ಚಾರ್ಜ್‌ ಆದ ಎಲೆಕ್ಟ್ರಾನ್‌ಗಳು + ಬಿಂದುವಿನಿಂದ - ಬಿಂದುವಿನ ವರೆಗೆ ಅವೇ ಹೋಗದೇ ಚಾರ್ಜ್‌ ಪಾರ್ಟಿಕಲ್ಸ್‌ಗಳನ್ನು ಮಾತ್ರ ದೂಡುತ್ತವೆ. ಅಂದರೆ ಎಲೆಕ್ಟ್ರಾನ್‌ಗಳು ಒಂದಕ್ಕೊಂದು ತಾಡಿಸುತ್ತಾ ವಿದ್ಯುತ್‌ ಅನ್ನು ಮುಂದೆ ಕಳಿಸುತ್ತವೆ. ಇದರಿಂದ ಚಿಕ್ಕ ವಯರ್‌ ಮೂಲಕವೂ ಹೆಚ್ಚು ವಿದ್ಯುತ್‌ ಅನ್ನು ಅತಿ ದೂರದ ವರೆಗೆ ಕಳಿಸಬಹುದು. ]

DC ಕರೆಂಟ್‌ನ ವೋಲ್ಟೇಜ್‌ ಅನ್ನು ಸಮತೋಲನದಲ್ಲಿ ಇಡಬೇಕಾದ್ದರಿಂದ ಎಡಿಸನ್‌ ಪ್ರತಿ ಮೈಲಿಗೆ ಒಂದರಂತೆ ಪವರ್‌ಪ್ಲಾಂಟ್‌ಗಳನ್ನು ಕಟ್ಟುತ್ತಿದ್ದರು! ೧೮೮೭ ರಲ್ಲಿ ಟೆಸ್ಲಾ ಏಳು ಎ.ಸಿ. ಕರೆಂಟ್‌ ಪ್ಲಾಂಟ್‌ಗಳನ್ನು ಸ್ಥಾಪಿಸುವ ಮೂಲಕ ಎಡಿಸನ್‌ಗೆ ಸೆಡ್ಡು ಹೊಡೆದರು. ಟೆಸ್ಲಾರ ಈ ಹೊಸ ಅವಿಷ್ಕಾರಕ್ಕೆ ಮಾರು ಹೋದ ಉದ್ಯಮಿ ಜಾರ್ಜ್‌ ವೆಸ್ಟಿಂಗ್‌ಹೌಸ್‌ ಕೂಡಲೇ ೬೦ ಸಾವಿರ ಡಾಲರ್‌ ಅನ್ನು ನೀಡಿ ಇದನ್ನು ಕೊಂಡುಕೊಂಡರು. ಹೊಸ AC ವಿದ್ಯುತ್‌ ಯೋಜನೆ ಯಶಸ್ವಿಯಾಯ್ತು. ಟೆಸ್ಲಾ ಈಗ ಅತಿ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರು ! ೧೮೯೧ ರಲ್ಲಿ ಟೆಸ್ಲಾರಿಗೆ ಅಮೆರಿಕ ಪೌರತ್ಯವೂ ದೊರೆಯಿತು.

ಅದೆ ಸಮಯಕ್ಕೆ ಎಡಿಸನ್‌ ಮತ್ತು ಟೆಸ್ಲಾರ ನಡುವಿನ ಶೀತಲ ಸಮರ ತಾರಕಕ್ಕೇರಿತು. ಟೆಸ್ಲಾರ AC ಕರೆಂಟಿನ ವಿರುದ್ದ ಎಡಿಸನ್‌ ದೊಡ್ಡ ಮಟ್ಟದ ಅಪಪ್ರಚಾರಕ್ಕೆ ಇಳಿದರು! ಎ.ಸಿ. ಕರೆಂಟ್‌ ಜೀವಿಗಳಿಗೆ ಅತ್ಯಂತ ಮಾರಕ ಎಂದು ಬಿಂಬಿಸತೊಡಗಿದರು. ಇದಕ್ಕಾಗಿ ಎಡಿಸನ್‌ ತುಳಿದ ದಾರಿ ಎಂತವರನ್ನೂ ಹುಬ್ಬೇರಿಸುವಂತೆ ಮಾಡುವಂತದು. ಸಾವಿರಾರು ಜನರ ಎದುರಲ್ಲಿ ಒಂದು ದೊಡ್ಡ ಆನೆಗೆ ಹೆಚ್ಚು ವೋಲ್ಟೇಜ್‌ನ ಎ.ಸಿ. ಕರೆಂಟನ್ನು ಕೊಟ್ಟು ಅದು ನಿಮಿಷದೊಳಗೆ ಸುಟ್ಟು ಕರಕಲಗುವಂತೆ ಮಾಡಿ ತೋರಿಸಿದರು ಎಡಿಸನ್‌. "ಟೆಸ್ಲಾರ ಎ.ಸಿ. ಕರೆಂಟ್‌ ಎಷ್ಟು ಅಪಾಯಕಾರಿ ಅನ್ನೋದನ್ನು ಈಗಲಾದರೂ ಮನಗಾಣಿರಿ" ಎಂಬಂತಿತತು ಅವರ ಪ್ರಯೋಗ. ಇದರಿಂದ ಜನರು ದಿಗಿಲು ಬಿದ್ದರು. ಇಷ್ಟೆಲ್ಲಾ ಅಪಾಯದ ಎ.ಸಿ. ಕರೆಂಟನ್ನು ಮನೆಯಲ್ಲಿ ಉಪಯೋಗಿಸುವುದಾದರೂ ಹೇಗೆ ಎಂಬ ಅನುಮಾನ ಎಲ್ಲರನ್ನೂ ಕಾಡಿತು. ಅಷ್ಟಕ್ಕೆ ಸುಮ್ಮನಾಗದ ಎಡಿಸನ್‌ "ಎ.ಸಿ. ಕರೆಂಟನ್ನು ಅಪರಾಧಿಗಳ ಮರಣದಂಡನೆಗೆ ಬಳಸಬಹುದು" ಎಂಬ ಬಿಟ್ಟಿ ಸಲಹೆಯನ್ನೂ ಕೊಟ್ಟರು.

ಆದರೆ ಎದೆಗುಂದದ ಟೆಸ್ಲಾ ಸರ್ಕಾರ‍ದ ಅಧಿಕಾರಿಗಳಿಗೆ ಎ.ಸಿ. ವಿದ್ಯುತ್‌ನಿಂದ ಆಗುವ ಲಾಭಗಳ ಬಗ್ಗೆ ಮಾಹಿತಿ ನೀಡಿದರು ಮತ್ತು ಆಪಾಯ ಎದುರಾಗದಂತೆ ಹೇಗೆ ಅದನ್ನು ಉಪಯೋಗಿಸಬಹುದು ಎಂಬುದನ್ನೂ ತೋರಿಸಿದರು. ಇದರಿಂದ ೧೮೯೩ರ "ಕೊಲಂಬಿಯನ್‌ ಎಕ್ಸ್‌ಫೋಷನ್‌" ಎಂಬ ಬೃಹತ್‌ ಮೇಳಕ್ಕೆ ವಿದ್ಯುತ್‌ ದೀಪಗಳನ್ನು ಅಳವಡಿಸುವ ಗುತ್ತಿಗೆ ವೆಸ್ಟಿಂಗ್‌ಹೌಸ್‌ ಸಂಸ್ಥೆಗೇ ದೊರೆಯಿತು. ಇದು ಎಡಿಸನ್‌ಗೆ ಟೆಸ್ಲಾ ಕೊಟ್ಟ ಮೊದಲ ಗುದ್ದಾಗಿತ್ತು. ಮತ್ತು ಎಡಿಸನ್‌ ಸೋತು ತಲೆ ತಗ್ಗಿಸುವಂತಾಯ್ತು. ಆ ಮೇಳದಲ್ಲಿ ಪ್ರಜ್ವಲವಾಗಿ ಉರಿದ ಟೆಸ್ಲಾರ ಹೊಸ ಅವಿಷ್ಕಾರ ಅಮೆರಿಕ ಅಧ್ಯಕ್ಷರನ್ನೊಳಗೊಂಡು ಎಲ್ಲರನ್ನೂ ಬೆಕ್ಕಸ ಬೆರಗಾಗಿಸಿತು. ಅಲ್ಲಿಂದ ಶುರುವಾದ ಟೆಸ್ಲಾರ ಎ.ಸಿ. ಕರೆಂಟಿನ ವಿಜಯೋತ್ಸವ ಇಂದಿಗೂ ನಿಂತಿಲ್ಲ. ಇಂದು ಜಲವಿದ್ಯುತ್‌ ಇರಲಿ, ಅಣುಸ್ಥಾವರ ಇರಲಿ, ಸೌರ ವಿದ್ಯುತ್‌ ಯೋಜನೆ ಇರಲಿ.. ಎಲ್ಲ ಕಡೆ ಉತ್ಪಾದಿಸಿ ಬಳಸುತ್ತಿರುವುದು ಎ.ಸಿ. ಕರೆಂಟನ್ನೇ ಅನ್ನೋದು ಗಮನಿಸಬೇಕಾದ ಅಂಶ.

ಹೀಗೆ ತನ್ನನ್ನು ಅವಮಾನಗೊಳಿಸಿದ ಎಡಿಸನ್‌ಗೆ ಮೊದಲ ಗುದ್ದು ಕೊಟ್ಟ ಟೆಸ್ಲಾ ಒಂದೆರಡು ವರ್ಷದಲ್ಲೇ ಮ್ತೊಂದು ಆಘಾತವನ್ನು ಎಡಿಸನ್‌ಗೆ ನೀಡಿದರು. ಅಲ್ಲಿಯವರೆಗೂ ನಯಾಗರ ಫಾಲ್ಸ್‌ನಿಂದ DC ಕರೆಂಟನ್ನು ಎಡಿಸನ್‌ ಉತ್ಪಾದಿಸಿ ನ್ಯೂಯಾರ್ಕ್‌ ನಗರಕ್ಕೆ ಸರಬರಾಜು ಮಾಡುತ್ತಿದ್ದರು. ಆದರೆ ಅದರ ಗುತ್ತಿಗೆಯನ್ನು ಟೆಸ್ಲಾ ಮುಂದಾಳತ್ವದ ವೆಸ್ಟಿಂಗ್‌ಹೌಸ್‌ ಸಂಸ್ಥೆ ಪಡೆದುಕೊಂಡಿತು. ಎಡಿಸನ್‌ರ ಯೋಜನೆಗೆ ಮೈಲಿಗೆ ಒಂದರಂತೆ ಪವರ್‌ಪ್ಲಾಂಟ್‌ಗಳ ಅವಶ್ಯಕತೆ ಇದ್ದರೆ ಟೆಸ್ಲಾರ ಯೋಜನೆಗೆ ನಯಾಗರ ಹತ್ತಿರ ಪವರ ಜನರೇಟರ್‌ ಇದ್ದರೆ ಮುಗಿಯಿತು. ನಡುವಲ್ಲಿ ಎಲ್ಲಿಯೂ ಪ್ಲಾಂಟ್‌ಗಳ ಅವಶ್ಯಕತೆಯೇ ಇರಲಿಲ್ಲ. ೧೮೯೬ರಲ್ಲಿ ಇದು ಪೂರ್ಣಗೊಂಡ ನಂತರ ಎಡಿಸನ್‌ರ DC ಕರೆಂಟು ಕಳೆಗುಂದಿತು, ಮತ್ತು ಅವರ ಸಂಸ್ಥೆ ನಷ್ಟದ ಹಾದಿ ಹಿಡಿಯಿತು. ಆ ಮೂಲಕ ಟೆಸ್ಲಾ ತನಗಾದ ಅವಮಾನದ ಸೇಡು ತೀರಿಸಿಕೊಂಡದ್ದು ಇತಿಹಾಸದಲ್ಲಿ ನಡೆದ ಒಂದು ರೋಮಂಚಕ ಸಮರ ಎಂದೇ ಹೇಳಬಹುದು. ಇವರ ಜಿದ್ದು ಯಾವ ಮಟ್ಟಕ್ಕೆ ಇತ್ತು ಅಂದರೆ ೧೯೧೫ರಲ್ಲಿ ಇವರಿಬ್ಬರ ಸಾಧನೆಯನ್ನೂ ಗುರುತಿಸಿ ಜಂಟಿಯಾಗಿ ನೋಬೆಲ್‌ ಪ್ರಶಸ್ತಿಯನ್ನೂ ಘೋಷಿಸಲಾಯ್ತು. ಆದರೆ ಇದರಿಂದ ಸಿಟ್ಟುಗೊಂಡ ಎಡಿಸನ್‌ ಮತ್ತು ಟೆಸ್ಲಾ ಇಬ್ಬರೂ ಇದನ್ನು ಪಡೆಯಲು ತಿರಸ್ಕರಿಸಿದರು. ಆದರೆ ನೋಬಲ್‌ ಮಂಡಳಿ ಮತ್ತೆಂದೂ ಇವರಿಬ್ಬರನ್ನೂ ಪ್ರಶಸ್ತಿಗೆ ಪರಿಗಣಿಸಲೇ ಇಲ್ಲ!

"ಟೆಸ್ಲಾ ಕಾಯಿಲ್‌" ಮೂಲಕ ಉಚಿತ ವಿದ್ಯುತ್‌... ಜಗತ್ತಿಗೆಲ್ಲ !

ಯಾವುದೇ ವಯರ್‌ಗಳ ಸಹಾಯವಿಲ್ಲದೇ ವಿದ್ಯುತ್‌ ಅನ್ನು ಎಲ್ಲಿಂದ ಎಲ್ಲಿಗೆ ಬೇಕಾದರೂ ಹಾಯಿಸಿ ಅದನ್ನು ಬಳಸಬಹುದು ಎಂದೇ ಟೆಸ್ಲಾ ಬಹಳವಾಗಿ ಪ್ರತಿಪಾದಿಸಿದ್ದರು. ಅದಕ್ಕೆ ಬೇಕಾದ ಯೋಜನೆಯನ್ನೂ ಅವರು ಸಿದ್ದ ಪಡಿಸಿದ್ದರು. ಅವರ ಪ್ರಕಾರ ನಮ್ಮ ಭೂಮಿಯನ್ನು ಸುತ್ತ ಬಹು ಮೇಲೆ ಅಯಾನ್‌ಗಳ ಒಂದು ಕವಚ ಇದೆ. (ಇದು ನಿಜಕ್ಕೂ ಇದೆ ಎಂದು ಸಾಬೀತಾಗಿದ್ದು ಅವರು ತೀರಿ ಹೋದ ಹತ್ತಾರು ವರ್ಷಗಳ ನಂತರ ! ) ತನ್ನ ಯೋಚನೆಯ ಅತಿ ದೊಡ್ಡ ಟವರ್‌ ಮೂಲಕ (ಟೆಸ್ಲಾ ಕಾಯಿಲ್‌ ಎಂದೇ ಪ್ರಸಿದ್ದಿಯಾಗಿದೆ) ಆ ಅಯಾನ್‌ ಕವಚಕ್ಕೆ ವಿದ್ಯುತ್‌ ಪೂರೈಕೆ ಮಾಡುವುದು. ಮತ್ತು ಜಗತ್ತಿನ ಎಲ್ಲಾ ಕಡೆ ಆ ವಿದ್ಯುತ್‌ ಅನ್ನು ಪಡೆಯುವ ರಿಸೀವರ್‌ಗಳನ್ನು ಸ್ಥಾಪಿಸಿ ನೇರವಾದ ವೈಯರ್‌ಗಳ ಜೋಡಣೆ ಇಲ್ಲದೆಯೇ ವಿದ್ಯುತ್‌ ಅನ್ನು ಪಡೆದು ಮನೆ ಮನೆಗೂ ನೀಡುವುದು. ಇಂತಹುದೊಂದು ಯೋಚನೆಯನ್ನು ಅವರು ಮೊದಲು ಹೊರಗೆಡವಿದ್ದು ೧೯೮೧ರಲ್ಲಿ. ಆಗ ಇವರ ವಯಸ್ಸು ಮೂವತ್ತೈದು ಆಗಿತ್ತು. ಇದು ಟೆಸ್ಲಾ ಅವರ ಮಹತ್ವಾಕಾಂಕ್ಷಿ ಯೋಜನೆಯಾಗಿತ್ತು. ತನ್ನ ಜೀವನದಲ್ಲಿ ಇದನ್ನು ಸಾಧಿಸಿಯೇ ತೀರಬೇಕು ಎಂದು ಪಣ ತೊಟ್ಟಿದ್ದರು ಕೂಡಾ.


ಇದಕ್ಕಾಗಿ ಅವರು ಬೃಹತ್‌ ಟೆಸ್ಲಾ ಕಾಯಿಲ್‌ ಒಂದನ್ನು ರೂಪಿಸಬೇಕು ಅಂದುಕೊಂಡಿದ್ದರು. ಈ ತಂತ್ರಜ್ಞಾನದ ಒಳ ತಿರುಳು ಸರಳವಾಗಿದೆ. ಇದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ವಿವರಿಸಬೇಕು ಎಂದರೆ, ಉದಾಹರಣೆಗೆ ಒಂದು ಇಂಚಿನ ಪೈಪ್‌ನಲ್ಲಿ ನೀರನ್ನು ಶಕ್ತಿಯುತವಾಗಿ ಪಂಪ್‌ ಮಾಡಲಾಗುತ್ತಿದೆ ಅಂದುಕೊಳ್ಳಿ. ಪೈಪ್‌ನ ಮತ್ತೊಂದು ತುದಿಯಿಂದ ನೀರು ಒಂದಿಷ್ಟು ದೂರ ಚಿಮ್ಮಿ ನೆಲಕ್ಕೆ ಬೀಳುತ್ತದೆ. ಈಗ ಆ ತುದಿಗೆ ಕಾಲು ಇಂಚಿನ ಇನ್ನೊಂದು ಪೈಪ್‌ ಅನ್ನು ಜೋಡಿಸಿದರೆ ? ಪ್ರಾರಂಬದಲ್ಲಿ ಒಂದು ಇಂಚಿನ ಪೈಪ್‌ನಲ್ಲಿ ಹರಿದು ಬರುವ ನೀರಿಗೆ ನಂತರ ಕಾಲು ಇಂಚಿನ ಜಾಗ ಮಾತ್ರ ದೊರೆತರೆ ಅಲ್ಲಿ ಅತ್ಯಂತ ಒತ್ತಡ ಶುರುವಾಗುತ್ತದೆ, ಮತ್ತು ಆ ಕಾಲು ಇಂಚಿನ ಪೈಪ್‌ನ ತುದಿಯಿಂದ ನೀರು ಮೊದಲಿಗಿಂತಲೂ ಬಹು ದೂರದ ವರೆಗೂ ಚಿಮ್ಮುತ್ತದೆಯಷ್ಟೇ ? ಇದೇ ಟೆಸ್ಲಾ ಕಾಯಿಲ್‌ನ ಒಳ ತಿರುಳು. ಆದರೆ ವಿದ್ಯುತ್‌ಗೆ ಇದನ್ನು ಅಳವಡಿಸುವುದು ಅಷ್ಟು ಸುಲಭದ್ದಲ್ಲ ಎಂಬುದನ್ನು ಅರಿಯಬೇಕಾದರೆ ಇಂದಿನ ವಿಜ್ಞಾನಿಗಳೂ ಸಹ ಇದನ್ನು ಸಾಧಿಸಲು ಕಷ್ಟ ಪಡುತ್ತಲೇ ಇರುವುದೇ ನಿದರ್ಶನವಾಗಿದೆ. ಟೆಸ್ಲಾ ಕಾಯಿಲ್‌ನಲ್ಲೂ ಮೊದಲಿಗೆ ಕಡಿಮೆ ವೋಲ್ಟೇಜ್‌ ವಿದ್ಯುತ್‌ ಅನ್ನು ಸ್ವಲ್ಪ ದಪ್ಪ ತಂತಿಯ ಮೂಲಕ ಹಾಯಿಸಲಾಗುತ್ತದೆ. ನಂತರ ಅತಿ ಚಿಕ್ಕ ತಂತಿಗೆ ದಾಟಿಸಲಾಗುತ್ತದೆ. ಆಗ ಅಲ್ಲಿ ವಿದ್ಯುತ್‌ನ ಅತೀವ ಒತ್ತಡ ಶುರುವಾಗಿ ವೋಲ್ಟೇಜ್‌ ನೂರ್ಮಡಿಕೊಳ್ಳುತ್ತದೆ. ಎಷ್ಟು ಹೆಚ್ಚಾಗುತ್ತದೆಂದರೆ ೧೨೦ ವೋಲ್ಟೇಜ್‌ನಲ್ಲಿ ವಿದ್ಯುತ್ತನ್ನು ಹಾಯಿಸಿದಾಗ ಅದು ೫ ಲಕ್ಷ ವೋಲ್ಟ್ಸ್‌ಗೆ ಹೆಚ್ಚುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ !

ಈ ರೀತಿಯ ಬೃಹತ್‌ ಟವರ್‌ ( ಕಾಯಿಲ್‌ ) ಒಂದನ್ನು ನಿರ್ಮಿಸಿ, ಅಂದರೆ ಸುಮರು ಎರಡು ಸಾವಿರ ಅಡಿ ಎತ್ತರದ್ದು! ಅದರ ಮೂಲಕ ಜಗತ್ತಿಗೆಲ್ಲಾ ವಿದ್ಯುತ್‌ ಅನ್ನು ಉಚಿತವಾಗಿ ಕೊಡಬೇಕು ಎಂಬ ಮಹದಾಸೆ ಟೆಸ್ಲಾಗೆ ಇತ್ತು. ಅದಕ್ಕಾಗಿ ಅವರು ಪ್ರಯತ್ನವನ್ನೂ ಪಟ್ಟರು. ಅವರ ಪ್ರಕಾರ ಭೂಮಿ ಅನ್ನುವುದು ಒಂದು ದೊಡ್ಡ ವಿದ್ಯುತ್‌ ಕಂಡಕ್ಟರ್‌ ಎಂಬುದರಲ್ಲಿ ಸಂದೇಹವಿರಲಿಲ್ಲ. ಮತ್ತು ಭೂಮಿಯನ್ನು ಸುತ್ತಿ ಇರುವ ಅಯಾನ್‌ ಪದರದ ಮೂಲಕ ವಿದ್ಯುತ್‌ ಅನ್ನು ಭೂಮಿಯ ಯಾವ ಭಾಗಕ್ಕಾದರೂ ತಲುಪಿಸಬಹುದು. ನಂತರ ನಮಗೆ ಬೇಕಾದಂತಹ ಜಾಗಗಳಲ್ಲಿ ಚಿಕ್ಕ ಚಿಕ್ಕ ಟವರ್‌ಗಳನ್ನು ಹಾಕಿ ಭೂಮಿಯ ಮೇಲ್ಬಾಗದಲ್ಲಿ ಹರಿಯುತ್ತಿರುವ ವಿದ್ಯುತ್‌ ಅನ್ನು ಪಡೆದು ಬಳಸಬಹುದು ಅನ್ನುವುದು ಟೆಸ್ಲಾರ ಯೋಚನೆಯಾಗಿತ್ತು. (ಯೋಚಿಸಿ ನೋಡಿ, ಅದರ ನಂತರದ ನೂರು ವರ್ಷಗಳ ನಂತರ ಇದೇ ಮಾದರಿಯನ್ನೇ ಅಲ್ಲವೇ ಮೊಬೈಲ್‌ ನೆಟವರ್ಕ್‌‌ಗೆ ನಾವು ಬಳಸುತ್ತಿರುವುದು! ). ಹಾಗೆಯೇ ಇಲ್ಲಿ ಇನ್ನೊಂದು ಸಂಶಯ ಕೂಡಾ ಮೂಡುತ್ತದೆ. ಟೆಸ್ಲಾರ ಪ್ರಕಾರ ಭೂಮಿಯ ಸುತ್ತಿ ಇರುವ ಅಯಾನ್‌ ಪದರದ ವರೆಗೂ ಟೆಸ್ಲಾ ಕಾಯಿಲ್‌ ಮೂಲಕ ವಿದ್ಯುತ್‌ ಅನ್ನು ಚಿಮ್ಮಿಸಬೇಕಾದರೆ (ಇಡೀ ಜಗತ್ತಿನ ಎಲ್ಲಾ ಊರುಗಳಿಗೂ ಸಾಕಾಗುವಷ್ಟು) ಎಷ್ಟೊಂದು ವಿದ್ಯುತ್‌ ಬೇಕು ?! ಅದನ್ನು ಎಲ್ಲಿಂದ ತರುವುದು ? ಎಂದು. ಇದಕ್ಕೂ ಟೆಸ್ಲಾರ ಬಳಿ ಉತ್ತರವಿತ್ತು. ನಯಾಗರ ಜಲಪಾತದಲ್ಲಿ ಕೋಟ್ಯಾಂತರ ತಿಎಂಸಿ ನೀರು ಹರಿದು ಹೋಗುತ್ತಿದೆಯಷ್ಟೇ. ಅದರಲ್ಲಿ ಒಂದಂಶವನ್ನು ಬಳಸಿದರೂ ಸಾಕು, ಇಡೀ ಜಗತ್ತಿಗೆ ನೀಡಬಹುದಾದಷ್ಟು ವಿದ್ಯುತ್ತನ್ನು ತಾನು ಉತ್ಪಾದಿಸಿ ಕೊಡಬಲ್ಲೆ ಎಂದು ಹೇಳಿದ್ದರು!

೧೮೮೯ ರಲ್ಲಿ ಈ ಯೋಜನೆಯನ್ನು ಪ್ರಯೋಗದ ಮೂಲಕ ಜನರಿಗೆ ತೋರಿಸಲು ಮುಂದಾದರು ಟೆಸ್ಲಾ. ಕೊಲರಡೋ ಸಮೀಪ ಇದಕ್ಕಾಗಿಯೇ ಒಂದು ಪ್ರಯೋಗಶಾಲೆ ಮತ್ತು ಸುಮರು ೮೦ ಅಡಿ ಎತ್ತರದ ಟವರನ್ನೂ ನಿರ್ಮಿಸಲಾಯ್ತು. ೧೮೯೩ ಸುಮಾರಿಗೆ ಪ್ರಯೋಗಾಲಯ ಕಾರ್ಯಾರಂಭ ಮಾಡಿತು. (ಈ ಪ್ರಯೋಗಾಲಯದೊಳಗೆ ಟೆಸ್ಲಾ ಕಾಯಿಲ್ ಮುಖಾಂತರ ಹರಿಯುತ್ತಿರುವ ಪ್ರಖರ ವಿದ್ಯುತ್‌ನ ಕೆಳಗೇ ನಿಕೊಲ ಟೆಸ್ಲಾ ಕುಳಿತು ಬರೆಯುತ್ತಿರುವುದನ್ನು ಚಿತ್ರದಲ್ಲಿ ಕಾಣಬಹುದು!). ಮುಖ್ಯವಾಗಿ ಅಂತಹ ಬೃಹತ್‌ ವಿದ್ಯುತ್‌ನಿಂದ ಜೀವಿಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ ಅನ್ನುವುದನ್ನು ಅವರು ತೋರಿಸಬೇಕಾಗಿತ್ತು. ಟೆಸ್ಲಾ ಕಾಯಿಲ್‌ ಅನ್ನು ಆನ್‌ ಮಾಡಿದಾಗ ಸುತ್ತಲೂ ನೆರೆದಿದ್ದವರು ಆ ಪ್ರಖರ ವಿದ್ಯುತ್‌ ಜ್ವಾಲೆಗಳನ್ನು ಕಂಡು ದಂಗಾದರು. ಸುಮಾರು ೫೦೦ ವೋಲ್ಟ್ಸ್ ನಷ್ಟೇ ವಿದ್ಯುತ್‌ ಅನ್ನು ಅದಕ್ಕೆ ಊಡಿಸಿದಾಗ ಆ ಕಾಯಿಲ್‌ ಹೊರ ಹಾಕಿದ್ದು ಸುಮಾರು ೧.೨ ಕೋಟಿ ವೋಲ್ಟ್ಸ್ ಶಕ್ತಿಯನ್ನು ! ಸ್ವಲ್ಪ ದೂರದಲ್ಲಿ ಸ್ವತಃ ತಾವೇ ಒಂದು ಬಲ್ಬ್ ಅನ್ನು ಕೈಲಿ ಹಿಡಿದೇ ಅದನ್ನು ಬೆಳಗಿಸಿ (ವೈಯರ್‌ ಇಲ್ಲದೇ) ನೆರೆದಿದ್ದ ಜನರಿಗೆ ತೋರಿಸಿದರು ಟೆಸ್ಲಾ. ಇದರಿಂದ ಟೆಸ್ಲಾರ ತಂತ್ರಜ್ಞಾನ ಜೀವಿಗಳಿಗೆ ತೊಂದರೆ ನೀಡದು ಎಂಬುದು ಸಾಬೀತಾಯ್ತು. ಅಷ್ಟೇ ಅಲ್ಲ, ಆ ೮೦ ಅಡಿ ಎತ್ತರದ ಟವರ್‌ ಮೂಲಕ ಒಂದು ಮೈಲಿ ದೂರದಲ್ಲಿ ಇರುವ ಬಲ್ಬ್‌ಗೂ ಯಾವುದೇ ಸಂಪರ್ಕ ಇಲ್ಲದಿದ್ದರೂ ವಿದ್ಯುತ್‌ ಅನ್ನು ಹಾಯಿಸಿ ಬೆಳಗಿಸಿ ತೋರಿಸಿದರು. ಇದನ್ನೆಲ್ಲಾ ಕಂಡ ಜನ ನಿಬ್ಬೆರಗಾದರು, ಮತ್ತು ಟೆಸ್ಲಾ ಇದ್ದಕ್ಕಿದ್ದಂತೆ ಪ್ರಸಿದ್ದಿಗೂ ಬಂದರು.

ಆದರೆ ಇವರ ಕನಸಿನ ಯೋಜನೆ ಪೂರ್ಣಗೊಳಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಇದಕ್ಕೆ ಅಪಾರ ಪ್ರಮಾಣದ ಹಣದ ಅವಶ್ಯಕತೆ ಇತ್ತು. ಆದರೆ ಟೆಸ್ಲಾರನ್ನು ನಂಬಿ ಬಿಲಿಯನ್‌ಗಟ್ಟಲೇ ಡಾಲರ್‌ ಸುರಿಯಲು ಯಾರೂ ಮುಂದೆ ಬರಲೇ ಇಲ್ಲ. ಇದಕ್ಕೆ ಟೆಸ್ಲಾರ "ಉಚಿತ ವಿದ್ಯುತ್‌" ಎಂಬ ಸಮಾಜ ಸೇವಾ ಮನೋಭಾವ ಕೂಡಾ ಮತ್ತೊಂದು ಕಾರಣವಾಗಿತ್ತು. ಈ ಮನುಷ್ಯನನ್ನು ನಂಬಿ ಹಣ ಹಾಕಿದರೆ ಲಾಭ ಗಿಟ್ಟುವುದಿಲ್ಲ ಎಂಬ ನಿಲುವಿಗೆ ಉದ್ಯಮಿಗಳು ಬಂದಿದ್ದರು. ಇಂದಿನಂತೆಯೇ ಅಂದಿನ ಉದ್ಯಮಿಗಳ ಮನಸ್ಥಿತಿಯೂ ಆಗಿತ್ತು. ಒಂದು ಡಾಲರ್‌ ಹಾಕಿದರೆ ನೂರು ಡಾಲರ್‌ ಲಾಭ ಬರಬೇಕೆಂಬ ಯೋಚನೆ ಅವರದು. ಹೀಗಾಗಿ ಟೆಸ್ಲಾರನ್ನು ಯಾರೂ ಪ್ರೋತ್ಸಾಹಿಸಲಿಲ್ಲ. ಇದರಿಂದ ಬೇಸರಗೊಂಡ ಟೆಸ್ಲಾ ಈಸ್ಟ್‌ ಕೋಸ್ಟ್‌ಗೆ ವಾಪಾಸಾದರು.

೧೯೦೧ ರಲ್ಲಿ ಕೊಲರಾಡೋ ಅನುಭವದ ಆಧಾರದಲ್ಲಿ ಈಸ್ಟ್‌ಕೋಸ್ಟ್‌ನಲ್ಲಿ ಮತ್ತೊಂದು ಪ್ರಯೋಗಶಾಲೆಯನ್ನು ಸ್ಥಾಪಿಸಿದರು. ಇದೂ ಕೂಡಾ ಅವರ ಕನಸಿನ ಯೋಜನೆಯಾದ "ನಿಸ್ತಂತು ವಿದ್ಯುತ್‌ ಸೇವೆ"ಯದೇ ಆಗಿತ್ತು. ಇಲ್ಲಿಯೂ ಒಂದು ೧೮೭ ಅಡಿ ಎತ್ತರದ ಟೆಸ್ಲಾ ಕಾಯಿಲ್‌ ಟವರೊಂದನ್ನು ಕಟ್ಟಿದರು. ಈ ಬಾರಿ ಸ್ವಲ್ಪ ಬದಲಾವಣೆ ಮಾಡಿದ ಟೆಸ್ಲಾ ಈ ಟವರ್‌ಗೆ ಸಮೀಪದಲ್ಲಿ ಅಲ್ಲಲ್ಲಿ ಇದೇ ಚಿಕ್ಕ ಚಿಕ್ಕ ಟವರ್‌ಗಳನ್ನು ನಿಲ್ಲಿಸಿ ಈ ಟವರ್‌ನಿಂದ ವಿದ್ಯುತ್‌ ಕಳಿಸುವ ಯೋಜನೆ ರೂಪಿಸಿದರು. ಇದಕ್ಕೆ ತಗಲುವ ವೆಚ್ಚವನ್ನು ಭರಿಸಲು ಮೋರ್ಗನ್‌ ಎಂಬ ಅತಿ ದೊಡ್ಡ ಉದ್ಯಮಿ ಮುಂದೆ ಬಂದರು. ಈ ಟವರ್‌ ಮೂಲಕ ಬರೀ ವಿದ್ಯುತ್‌ ಮಾತ್ರವಲ್ಲದೇ ಸಂಗೀತ, ಸಂದೇಶ, ಚಿತ್ರಗಳು ಮತ್ತು ಸುದ್ದಿಗಳನ್ನೂ ಕಳಿಸುವ ಮೂಲಕ ಕೋಟ್ಯಾಂತರ ಡಾಲರ್‌ ಲಾಭ ಮಾಡಬಹುದು ಎಂಬ ಭರವಸೆಯನ್ನು ಮೋರ್ಗನ್‌ಗೆ ಟೆಸ್ಲಾ ನೀಡಿದರು.

ಮಾರ್ಕೋನಿ ನೀಡಿದ ಆಘಾತ!

೧೨ ಡಿಸೆಂಬರ್‌ ೧೯೦೧ರಲ್ಲಿ ನಿಸ್ತಂತು ವಿದ್ಯುತ್‌ ಬಗ್ಗೆ ಟೆಸ್ಲಾ ಪ್ರಯೋಗ ನಡೆಸುತ್ತಿರುವಾಗಲೇ ಮಾರ್ಕೊನಿ ಎಂಬಾತನಿಂದ ಆಘಾತಕಾರಿ ಸುದ್ದಿಯೊಂದು ಬಂತು. ಯಾವ ರೇಡಿಯೋ ತರಂಗದ ಬಗ್ಗೆ ಟೆಸ್ಲಾ ಹತ್ತಾರು ವರ್ಷ ಕಷ್ಟಪಟ್ಟು ಪ್ರಯೋಗ ನಡೆಸಿ ಯಶಸ್ವಿಯಾಗಿದ್ದರೋ ಅದರ ಪೇಟೆಂಟ್‌ ಅನ್ನು ಮಾರ್ಕೋನಿ ಪಡೆದುಕೊಂಡಿದ್ದ! ಇದಕ್ಕಿಂತಲೂ ಆಘಾತದ ವಿಷಯವೆಂದರೆ ಮಾರ್ಕೋನಿ ಪೇಟೆಂಟ್‌ಗಾಗಿ ಮಂಡಿಸಿದ್ದ ರೇಖಾ ಚಿತ್ರಗಳೆಲ್ಲ ಒಂದು ಸಮಯದಲ್ಲಿ ಟೆಸ್ಲಾ ರಚಿಸಿದ್ದ ರೇಖಾಚಿತ್ರಗಳ ನಕಲೇ ಆಗಿದ್ದವು! ಟೆಸ್ಲಾ ಅಭಿವೃದ್ದಿ ಮಾಡಿದ ಈ ತಂತ್ರಜ್ಞಾನ ಮಾರ್ಕೋನಿ ಕೈಗೆ ಹೇಗೆ ಹೋಯ್ತು ಎಂಬುದು ಟೆಸ್ಲಾಗೂ ಗೊತ್ತಾಗಲಿಲ್ಲ. ಏಕೆಂದರೆ ಕೇವಲ ಪ್ರಯೋಗಗಳೇ ಬದುಕೆಂದುಕೊಂಡಿದ್ದ ಟೆಸ್ಲಾ ಎಂದೂ ನಂಬಿಕೆ ದ್ರೋಹದ ಬಗ್ಗೆಯಾಗಲೀ, ಪೇಟೆಂಟ್‌ ಪಡೆದು ರಕ್ಷಿಸಿಕೊಳ್ಳಬೇಕೆಂಬ ಕಾನೂನು ಬಗ್ಗೆಯಾಗಲೀ ಯೋಚಿಸಿರಲೇ ಇಲ್ಲ.

ಮಾರ್ಕೋನಿ ಮಾಡಿದ ದ್ರೋಹ ಟೆಸ್ಲಾರ ಜೀವನದ ದಿಕ್ಕನ್ನ ಮತ್ತೆ ಹಳ್ಳ ಹಿಡಿಸಿತು. ಏಕೆಂದರೆ ಟೆಸ್ಲಾರ ನಿಸ್ತಂತು ಯೋಜನೆಗಾಗಿ ಬಿಲಿಯನ್‌ಗಟ್ಟಲೇ ಹಣ ಸುರಿಯಲು ಮುಂದೆ ಬಂದಿದ್ದ ಮೋರ್ಗನ್‌ ತಕ್ಷಣ ತನ್ನ ನಿಲುವನ್ನು ಬದಲಿಸಿದ. ಕಾರಣ ಇಷ್ಟೇ, ಟೆಸ್ಲಾ ಹೇಳುತ್ತಿರುವ "ನಿಸ್ತಂತು" ಯೋಜನೆಯ ಮತ್ತೊಂದು ರೂಪವೇ ಮಾರ್ಕೊನಿ ಕಂಡು ಹಿಡಿದಿರುವ "ರೇಡಿಯೋ ತರಂಗ" ಎಂಬುದಾಗಿತ್ತು. ಅಲ್ಲದೇ ಇದುವರೆಗೂ ಟೆಸ್ಲಾರ ಹೆಸರಲ್ಲಿ ಇದ್ದ ಈ ಯೋಜನೆಯನ್ನು ಮೋರ್ಗನ್‌ ತನ್ನ ಹೆಸರಿಗೆ ಬರೆಸಿಕೊಂಡರು.  ಇದು ಟೆಸ್ಲರಿಗೆ ಅರಗಿಸಿಕೊಳ್ಳಲಾಗದ ತುತ್ತಾಯಿತು. ಅದಾಗಲೇ ಟೆಸ್ಲಾ ಕಾಯಿಲ್‌ನ ಟವರ್‌ ಕೆಲಸ ಪೂರ್ಣಗೊಂಡಿತ್ತು. ೧೯೦೫ರಲ್ಲಿ ಈ ಟವರ್‌ ಕೆಲಸವನ್ನೂ ಶುರು ಮಾಡಿತು. ಟೆಸ್ಲಾರ ಯೋಚನೆಯಂತೆ ವಿದ್ಯುತ್‌ ಅನ್ನು ಬಹು ದೂರದ ವರೆಗೆ ವೈಯರ್‌ಗಳ ನೆರವು ಇಲ್ಲದೇ ಸಾಗಿಸಬಹುದು ಎಂಬುದೂ ನಿರೂಪಿತವಾಯ್ತು. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಈ ಟವರು ಕುಸಿದು ಬಿತ್ತು ! ಇದನ್ನು ಬೇಕೆಂದರೆ ಟೆಸ್ಲಾ ಬೀಳಿಸಿದರು ಎಂದು ಜನ ಆಡಿಕೊಂಡರು. ಆದರೆ ಸತ್ಯ ಯಾರಿಗೂ ಗೊತ್ತಾಗಲಿಲ್ಲ. ಆದರೆ ಕೋಟ್ಯಾಂತರ ಬಿಲಿಯನ್‌ ಹಣ ವಿನಿಯೋಗಿಸುವವರು ಮುಂದೆ ಬಂದರೆ ಈಗಲೂ ಈ ಯೋಜನೆಯನ್ನು ಮಾಡಲು ಸಾಧ್ಯವಿದೆ ಎಂದು ಇಂದಿನ ವಿಜ್ಞಾನಿಗಳು ಹೇಳುತ್ತಿದ್ದಾರೆ. ೨೧ ಜೂನ್‌ ೧೯೪೩ ರಂದು US ಸುಪ್ರೀಮ್‌ ಕೋರ್ಟ್‌ "ಮಾರ್ಕೋನಿ ಪಡೆದಿರುವ ರೇಡಿಯೋ ಸಿಗ್ನಲ್‌ಗಳ ಮೇಲಿನ ಪೇಟೆಂಟ್‌ ಅಸಿಂಧು! ಇದರ ನಿಜವಾದ ಮಾಲಿಕ ನಿಕೋಲ ಟೆಸ್ಲಾ" ಎಂದು ಆದೇಶ ನೀಡಿತು. ಆದರೆ ದುರಂತ ನೋಡಿ, ಆ ಆದೇಶ ಬರುವ ಆರು ತಿಂಗಳ ಹಿಂದೆಯೇ ಟೆಸ್ಲಾ ಸತ್ತು ಹೋಗಿದ್ದರು!

ಟೆಸ್ಲಾ ಸತತ ಪ್ರಯೋಗ ಮಾಡಿದ ಆ ಪ್ರಯೋಗಶಾಲೆ ಇಂದು ಅನಾಥವಾಗಿ ಬಿಕೋ ಅನ್ನುತ್ತಿದೆ. ಕೊಲರಡೋ ಫೋಟೋಫಿಲ್ಮ್ ಸಂಸ್ಥೆಯು ಈ ಜಾಗವನ್ನು ಕೊಂಡುಕೊಂಡು ತನ್ನ ಕಚೇರಿ ಸ್ಥಾಪಿಸಿದ್ದರೂ ಟೆಸ್ಲಾರ ಪ್ರಯೋಗಶಾಲೆಯನ್ನು ಅವರ ನೆನಪಿಗಾಗಿ ಹಾಗೆಯೇ ಉಳಿಸಿದೆ.

ಇದೇ ಸಮಯದಲ್ಲಿ ಟೆಸ್ಲಾ ಇನ್ನೊಂದು ಪ್ರಯೋಗವನ್ನೂ ಮಾಡಿದ್ದರು. ಅದು ರೇಡಿಯೋ ತರಂಗಗಳನ್ನು ದೂರದ ಆಕಾಶಕಾಯಗಳತ್ತ ಕಳಿಸಿ ಅತ್ತಲಿಂದ ಉತ್ತರ ಬಂದರೆ ಸ್ವೀಕರಿಸುವುದು. ಬೇರೆ ಗ್ರಹವಾಸಿಗಳಿಂದ ತಮಗೆ ಸಂಕೇತಗಳು ಬರುತ್ತಿರುವುದಾಗಿಯೂ ಅವರು ತಿಳಿಸಿದರು. (ಇಂದಿಗೂ ಇದೇ ಮಾದರಿಯ ರೇಡಿಯೋ ಸಂಕೇತಗಳನ್ನೇ ಉಪಗ್ರಹಗಳ ಸಂಪರ್ಕಕ್ಕೆ ಉಪಯೋಗಿಸಲಾಗುತ್ತಿದೆ.)

ಈ ಎಲ್ಲಾ ಜಿದ್ದು, ಸಾಧನೆ, ಸಂಪಾದನೆ, ಅವಿಷ್ಕಾರಗಳ ನಡುವೆಯೇ ಕಾಲ ಕಳೆದ ಟೆಸ್ಲಾ ಮದುವೆಯನ್ನೂ ಆಗಲಿಲ್ಲ. ಇವರು ಎ.ಸಿ. ವಿದ್ಯುತ್‌ ಮೂಲಕ ಪ್ರಸಿದ್ದಿ ಪಡೆದ ನಂತರ ಇವರನ್ನು ಮೋಹಿಸಿ ಬಂದ ಹೆಣ್ಣುಗಳಿಗೆ ಲೆಕ್ಕವಿಲ್ಲ. ಆದರೆ ಆ ಸಮಯದಲ್ಲಿ ಅಮೆರಿಕೆಗೆ ಭೇಟಿ ನೀಡಿದ್ದ ಭಾರತದ ಯೋಗಿ ಸ್ವಾಮಿ ವಿವೇಕಾನಂದ ಅವರನ್ನೂ ಟೆಸ್ಲ ಭೇಟಿಯಾಗಿದ್ದರು. ಮತ್ತು ವಿವೇಕಾನಂದರ ಪ್ರವಚನಗಳಿಗೆ ಮಾರು ಹೋಗಿದ್ದರು. ವಿವೇಕರು ತನ್ನಲ್ಲಿ ಬಹಳಷ್ಟು ಬದಲಾವಣೆ ಮಾಡಿದರು ಎಂದು ಟೆಸ್ಲಾ ಹೇಳಿಕೊಂಡಿದ್ದಾರೆ. ಈ ಕಾರಣದಿಂದಲೇ ಟೆಸ್ಲಾ ಮದುವೆಯನ್ನು ನಿರಾಕರಿಸಿರಬಹುದು ಎಂದೂ ಕೆಲವರು ಹೇಳುತ್ತಾರೆ.

ಮಾರ್ಕೋನಿ ಮತ್ತಿತರರು ಮಾಡಿದ ಮೋಸದ ನಂತರ ಎಚ್ಚೆತ್ತ ಅವರು ನಂತರ ತಮ್ಮ ಅವಿಷ್ಕಾರಗಳಿಗೆ ಪೇಟೆಮಟ್‌ ಪಡೆಯತೊಡಗಿದರು. ಅವರನ್ನು ಹತ್ತಿರದಿಂದ ಬಲ್ಲವರು ಹೇಳಿದ ರೀತಿ ಟೆಸ್ಲಾ ಪ್ರಪಂಚದ ಹಲವಾರು ದೇಶಗಳ ಮೂಲಕ ಪಡೆದ ಪೇಟೆಂಟ್‌ಗಳ ಸಂಖ್ಯೆ ಏಳು ನೂರನ್ನೂ ದಾಟುತ್ತದೆ. ಆದರೆ ಇಂದು ಅಧಿಕೃತವಾಗಿ ದಾಖಲೆ ಉಳಿದಿರುವುದು ಸುಮಾರು ೨೭೮. ಇದೇನೂ ಕಡಿಮೆ ಸಂಖ್ಯೆಯಲ್ಲ. ಇದಲ್ಲದೇ ಎರಡನೇ ಮಹಾ ಯುದ್ದ ಶುರುವಾದ ಸಮಯದಲ್ಲಿ ವಿದ್ಯುತ್‌ ಬೀಮ್‌ ಮೂಲಕ ದೂರದ ವಿಮಾನಗಳನ್ನು ಸುಟ್ಟು ಬೂದಿ ಮಾಡುವ ತಂತ್ರಜ್ಞಾನವನ್ನು ಟೆಸ್ಲಾ ಅಭಿವೃದ್ದಿ ಮಾಡಿದ್ದಾಗಿ ಹೇಳಲಾಗುತ್ತಿದೆ. ಹಾಗೆಯೇ ನಿರ್ದಿಷ್ಟ ಪ್ರದೇಶದಲ್ಲಿ ವಿದ್ಯುತ್‌ ತರಂಗಗಳ ಮೂಲಕ ಕೃತಕ ಭೂಕಂಪವನ್ನು ಸೃಷ್ಟಿಸಿ ಆ ಪ್ರದೇಶವನ್ನೇ ಧ್ವಂಸ ಮಾಡುವ ತಂತ್ರಜ್ಞಾನವನ್ನೂ ಅವರು ತೆರೆದಿಟ್ಟರು. ಒಂದು ಸಮಯದಲ್ಲಿ ಬಡವರಾಗಿದ್ದ ಸಮಯದಲ್ಲಿ ಇಡೀ ಜಗತ್ತಿಗೂ ಉಚಿತ ವಿದ್ಯುತ್‌ ನೀಡುವ ಮಹಾನ್‌ ಕನಸು ಕಂಡ ವ್ಯಕ್ತಿಯಲ್ಲಿ ಧನಿಕರಾದ ನಂತರ ಇಂತಹ ವಿಧ್ವಂಸಕ ಗುಣ ಬಂದುದು ಹೇಗೆಂದು ಯಾರಿಗೂ ತಿಳಿಯಲಿಲ್ಲ.

ಅಮೆರಿಕೆಯ ಪಾಲಾದವೇ ರಹಸ್ಯ ಪತ್ರಗಳು ?

ನಿಕೋಲ ಟೆಸ್ಲಾ ತನ್ನ ಯೋಜನೆ ಮತ್ತು ಯೋಚನೆಗಳನ್ನು ಯಾರಲ್ಲೂ ಹೇಳಿಕೊಳ್ಳುತ್ತಿರಲಿಲ್ಲ. ಮನಸಿನಲ್ಲೇ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರು. ಅವರು ಯಾವುದಾದರೂ ಯಾಂತ್ರವನ್ನು ತಯಾರಿಸ ತೊಡಗಿದರೆ ಅದು ಪೂರ್ತಿಯಾಗುವ ವರೆಗೂ ಯಾರಿಗೂ ಅದು ಏನು ಕೆಲಸ ಮಾಡಲಿದೆ ಎಂದು ಗೊತ್ತಾಗುತ್ತಿರಲಿಲ್ಲ. ಆದರೆ ಟೆಸ್ಲಾ ವಯಸ್ಸಾದ ನಂತರ ನ್ಯೂಯಾರ್ಕ್‌‌ನ "ನ್ಯೂಯಾರ್ಕರ್‌ ಹೋಟೆಲ್‌"ನ ೩೩೨೭ನೆ ನಂಬರಿನ ಕೋಣೆಯಲ್ಲಿ ಕುಳಿತು ತನ್ನ ಎಲ್ಲಾ ಪ್ರಯೋಗಗಳ ಬಗ್ಗೆ ಮತ್ತು ಥಿಯರಿಗಳ ಬಗ್ಗೆ ಕಾಗದಗಳಲ್ಲಿ ಬರೆದಿಡುತ್ತಿದ್ದರು.  ೧೯೪೩ ಜನವರಿ ೭ ರಂದು ಅವರು ತೀರಿಕೊಂಡರು. ಆದರೆ ಅದು ಜಗತ್ತಿಗೆ ತಿಳಿದುದು ಎರಡು ದಿನಗಳ ನಂತರ. ಏಕೆಂದರೆ ಅವರ ಕೋಣೆಯ ಬಾಗಿಲಿಗೆ "ತೊಂದರೆ ಕೊಡಬೇಡಿ" ಎಂಬ ಫಲಕವನ್ನು ನೇತು ಹಾಕಿದ್ದರಿಂದ ಅವರ ಸೇವೆಗೆ ಇದ್ದ ಹೋಟೆಲ್‌ನ ಆಳು ಒಳಗೆ ಹೋಗಿರಲಿಲ್ಲ. ಎರಡು ದಿನಗಳೂ ಹೊರಗೆ ಬಾರದ್ದರಿಂದ ಅನುಮಾನದಿಂದ ಬಾಗಿಲು ಒಡೆದು ನೋಡಿದಾಗಲೇ ಟೆಸ್ಲಾ ಸಾವಿಗೆ ಇಡಾಗಿರುವುದು ಕಂಡು ಬಂತು. ಈ ಸಾವಿನ ಮೇಲೂ ಅನೇಕ ಅನುಮಾನಗಳು, ವದಂತಿಗಳು ಹುಟ್ಟಿಕೊಂಡವು.

ಈ ನಡುವೆ ಟೆಸ್ಲಾ ಕೊನೆಯದಾಗಿ ವಾಸವಿದ್ದ ೩೩೨೭ನೇ ಕೋಣೆಯನ್ನು ಅಮೆರಿಕಾದ ಗುಪ್ತಚರ ಇಲಾಖೆಯಾದ FBI ನವರು ತಮ್ಮ ವಶಕ್ಕೆ ಪಡೆದು ಆ ಕೋಣೆಯಲ್ಲಿ ಸಿಕ್ಕ ಎಲ್ಲಾ ಕಾಗದ ಪತ್ರಗಳನ್ನೂ ಕೊಂಡೊಯ್ದರು.  ನಂತರದ ದಿನಗಳಲ್ಲಿ ಅವುಗಳನ್ನು ನ್ಯೂಯಾರ್ಕ್‌‌ನ ವಸ್ತು ಪ್ರದರ್ಶನದಲ್ಲಿ ಇಡಲಾಯಿತಾದರೂ ಅದರಲ್ಲಿ ಟೆಸ್ಲಾ ಬಹುವಾಗಿ ಪ್ರೀತಿಸಿದ್ದ "ಟೆಸ್ಲಾ ಕಾಯಿಲ್‌ ಮುಖಾಂತರ ಜಗತ್ತಿಗೆಲ್ಲಾ ವಯರ್‌ ಇಲ್ಲದೇ ಉಚಿತ ವಿದ್ಯುತ್‌" ಒದಗಿಸುವ ಥಿಯರಿಯಾಗಲೀ, ವಿದ್ಯುತ್‌ ಬೀಮ್‌ ಮೂಲಕ ಕ್ಷಣದಲ್ಲಿ ವಿಮಾನಗಳನ್ನು ಸುಟ್ಟು ಹಾಕುವ ಮತ್ತು ನಿರ್ದಿಷ್ಟ ಜಾಗದಲ್ಲಿ ನೆಲನಡುಕದ ಭಾರೀ ಅಲೆಗಳನ್ನು ಎಬ್ಬಿಸಿ ನಿರ್ದಿಷ್ಟ ಪ್ರದೇಶವನ್ನೇ ನಾಶ ಮಾಡಬಲ್ಲ ವಿದ್ವಂಸಕ ಕೃತ್ಯದ ಥಿಯರಿಗಳಾಗಲೀ ಇರಲಿಲ್ಲ. ಅವುಗಳನ್ನೆಲ್ಲಾ FBI ನುಂಗಿ ಹಾಕಿತು ಎಂದೇ ಜನ ಆಡಿಕೊಂಡರು. ಆದರೆ ಅಮೆರಿಕ ಸರ್ಕಾರ ಇದನ್ನು ಅಲ್ಲಗಳೆಯಿತಾದರೂ "ಏರಿಯಾ-೫೧" ಎಂಬ ಅದರ ರಹಸ್ಯ ಪ್ರಯೋಗಶಾಲೆಯಲ್ಲಿ ಟೆಸ್ಲಾರ ಎಲ್ಲಾ ಥಿಯರಿಗಳನ್ನೂ ಪ್ರಯೋಗಕ್ಕೆ ಒಳಪಡಿಸಲಾಗುತ್ತಿದೆ ಎಂದೇ ಅನೇಕರು ಹೇಳುತ್ತಾರೆ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು.

* ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ.

* ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ.

* ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್.

* ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ.

* ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ.

* ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ.

* ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ.

* ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ.

* ಶಿಕ್ಷಣವೇ ಜೀವನದ ಬೆಳಕು - ಗೊರೂರು

* ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್.

* ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ.

* ವಿದ್ಯೆ ಗುರುಗಳ ಗುರು - ಭ್ರತೃ ಹರಿ.

* ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ …

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು.

ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ.

ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆತ್ಮ…