ವಿಷಯಕ್ಕೆ ಹೋಗಿ

ಎಂ.ಹೆಚ್. 370 ನಿಗೂಢ ಕಣ್ಮರೆ!

ಮಾರ್ಚ್ 8, 2014 ರ ನಡುರಾತ್ರಿ ಹನ್ನೆರಡೂವರೆಗೆ ಸರಿಯಾಗಿ ಕೌಲಾಲಂಪುರ ದಿಂದ ಒಂದು ವಿಮಾನವು ಹೊರಡುತ್ತೆ. ಅದು ಮರುದಿನ ಬೆಳಗ್ಗೆ 6.30 ರ ಹೊತ್ತಿಗೆ ಚೀನಾದ ಬೀಜಿಂಗ್ ನ್ನು ಹೋಗಿ ಸೇರಬೇಕು. ಆದರೆ ಮರುದಿನ ಬೆಳಿಗ್ಗೆ ಅದು ಎಷ್ಟು ಹೊತ್ತು ಕಳೆದರೂ ಬೀಜಿಂಗ್ ಹೋಗಿ ಸೇರಲೇ ಇಲ್ಲ. ಅದಾಗಿ ಬರೋಬ್ಬರಿ ಐದು ವರ್ಷಗಳು ಕಳೆಯುತ್ತಾ ಬಂದರೂ ಇದುವರೆಗೂ ಕೂಡ ವಿಮಾನವು ಏನಾಯ್ತು, ಎಲ್ಲಿ ಹೋಯಿತು, ಈಗ ಎಲ್ಲಿದೆ, ಸಮುದ್ರಕ್ಕೆ ಬಿದ್ದು ಹೋಯಿತ, ಸಿಡಿದು ಹೋಯಿತಾ, ಸುಟ್ಟು ಬೂದಿ ಅಗೋಯ್ತಾ, ಅಥವಾ ಅನ್ಯಗ್ರಹ ವಾಸಿಗಳು ಏನಾದ್ರು ಅಪಹರಣ ಮಾಡ್ಕೊಂಡು ತಗೊಂಡೆ ಹೋಗ್ಬಿಟ್ರ ಏನಾಯ್ತು ಅನ್ನುವ ಸುಳಿವು ಸಿಕ್ಕಿಲ್ಲ.

ಆ ವಿಮಾನದ ಹೆಸರು ಮಲೇಶಿಯನ್ 370. ಅದರಲ್ಲಿ ಇದ್ದಿದ್ದು 229 ಜನ ಪ್ರಯಾಣಿಕರು ಮತ್ತು 12 ಜನ ಸಿಬ್ಬಂದಿಗಳು. ಈ ವಿಮಾನದ ಕಣ್ಮರೆಯು ವಿಮಾನಗಳ ಇತಿಹಾಸದಲ್ಲೇ ಅತಿದೊಡ್ಡ ಒಗಟಾಗಿ ಉಳಿದಿದೆ. ಅತ್ಯಾಧುನಿಕ ತಂತ್ರಜ್ಞಾನದ ಈ ಕಾಲದಲ್ಲಿಯೂ ಈ ರೀತಿ ನೂರಾರು ಜನರು ತುಂಬಿರುವ ದೊಡ್ಡದೊಂದು ವಿಮಾನವು ಕಳೆದು ಹೋಗುವುದು ಅಂದರೆ ನಂಬಲು ಕಷ್ಟವಾದರೂ ನಂಬಲೇ ಬೇಕಾಗಿದೆ. ಎಂ.ಎಚ್. 370 ವಿಮಾನವು ಬೀಜಿಂಗ್ ಮತ್ತು ಕೌಲಾಲಂಪುರ್ ನಡುವೆ ಪ್ರತಿದಿನವೂ ಓಡಾಡುತ್ತಿರುತ್ತದೆ. ಕೌಲಾಲಂಪುರ್ ಇಂದ ಬೀಜಿಂಗ್ ಗೆ 5.30 ಘಂಟೆಗಳ ಪ್ರಯಾಣ. ಅಂದು ಆ ವಿಮಾನದಲ್ಲಿ 49000 ಕೆಜಿಯಷ್ಟು ಉರುವಲು ಇತ್ತು. ಇದು ಸುಮಾರು ಏಳು ಮುಕ್ಕಾಲು ಗಂಟೆಗಳಷ್ಟು ಹೊತ್ತು ಹಾರಾಡಲು ಸಾಕಾಗುತ್ತಿತ್ತು. ಆ ವಿಮಾನವು 11 ವರ್ಷ ಹಳೆಯದು. ಆದರೆ ಅದುವರೆಗೂ ಯಾವುದೇ ತೊಂದರೆ ಕಾಣಿಸಿಕೊಂಡ ಉದಾಹರಣೆ ಇರಲಿಲ್ಲ.

ಅಂದು ಆ ವಿಮಾನದಲ್ಲಿ 10 ಜನ ವಿಮಾನದ ಸಿಬ್ಬಂದಿಯ ಜೊತೆ ಇಬ್ಬರು ಪೈಲಟ್ ಗಳು ಇದ್ದರು. ಅವರಲ್ಲಿ ಹಿರಿಯರು ಅಂದರೆ ಜಹಾರಿ ಅಹಮದ್ ಶಾ. ಇವರಿಗೆ 53 ವರ್ಷ ವಯಸ್ಸು. 1981ರಲ್ಲಿ ವಿಮಾನಯಾನ ಸೇವೆಗೆ ಸೇರಿದವರು. ಬರೋಬ್ಬರಿ 18 ಸಾವಿರ ಗಂಟೆಗಳ ವಿಮಾನ ಹಾರಾಟದ ಅನುಭವ ಇದ್ದಂಥವರು. ಸಹ ಚಾಲಕ ಫರಹಾನ್ ಅಬ್ದುಲ್ ಹಮೀದ್ 27 ವರ್ಷದ ಯುವಕ. ಇವರು ಸೇರಿದ್ದು 2007 ರಲ್ಲಿ ಮತ್ತು 2,700 ಗಂಟೆಗಳ ಹಾರಾಟದ ಅನುಭವ ಇವರಿಗೂ ಇತ್ತು. ಈ ವಿಮಾನದಲ್ಲಿದ್ದ ಒಟ್ಟು 229 ಜನ ಪ್ರಯಾಣಿಕರಲ್ಲಿ 153 ಜನ ಚೀನಿಯರು, 50 ಮಲೇಷಿಯನ್, 7 ಜನ ಇಂಡೋನೇಷಿಯ, ಆರು ಜನ ಆಸ್ಟ್ರೇಲಿಯಾ, ಐದು ಜನ ಭಾರತೀಯರು, ನಾಲ್ಕು ಜನ ಫ್ರೆಂಚರು, ಮೂರು ಜನ ಅಮೆರಿಕನ್ನರು, ಕೆನಡಿಯನ್, ಇರಾನಿಯನ್ನರು, ನ್ಯೂಜಿಲ್ಯಾಂಡ್ ನವರು ಇಬ್ಬಿಬ್ಬರು, ಉಕ್ರೇನಿಯನ್, ಡಚ್, ತೈವಾನ್ ಮತ್ತು ರಷ್ಯಾದ ಒಬ್ಬೊಬ್ಬರು ಇದ್ದರು. ವಿಮಾನವು ಮಾರ್ಚ್ 8 ರಂದು ಕೌಲಾಲಂಪುರ್ ವಿಮಾನ ನಿಲ್ದಾಣದ ರನ್ ವೇ ಇಂದ ರಾತ್ರಿ 12:42ಕ್ಕೆ ಸರಿಯಾಗಿ ಮೇಲೆ ಹಾರಿತು. ವಿಮಾನವು ರನ್ ವೇ ಯನ್ನು ಬಿಟ್ಟು ಹಾರುವ ಮೊದಲು ವಿಮಾನದ ಫಸ್ಟ್ ಆಫೀಸರ್ ಜಹಾರಿ ಅಹಮದ್ ಶಾ ಎಂದಿನಂತೆ ಸಹಜವಾಗಿ ಏರ್ ಟ್ರಾಫಿಕ್ ಕಂಟ್ರೋಲರ್ ಜೊತೆ ಮಾತನಾಡಿದ್ದಾರೆ. ವಿಮಾನವು ಆಗಸಕ್ಕೆ ಹಾರಿದ ನಂತರವೂ ಏರ್ ಟ್ರಾಫಿಕ್ ಕಂಟ್ರೋಲರ್ ಜೊತೆ ಸಹಜವಾಗಿ ಮಾತುಕತೆ ನಡೆಸಿದ್ದಾರೆ.
1 ಗಂಟೆ ಆರು ನಿಮಿಷಕ್ಕೆ ವಿಮಾನವು ಆಟೋಮೇಟೆಡ್ ಆಗಿ ತನ್ನ ಪೋಸಿಶನ್ ರಿಪೋರ್ಟನ್ನು ಕಳಿಸಿದೆ. ರಾತ್ರಿ 1 ಗಂಟೆ 18 ನಿಮಿಷಕ್ಕೆ ವಿಮಾನದ ಚಾಲಕರಿಂದ ಕೊನೆಯ ಸಂದೇಶ ಬಂದಿದೆ. ಕೌಲಾಲಂಪುರ ಏರ್ ಟ್ರಾಫಿಕ್ ಕಂಟ್ರೋಲರ್ ಇಂದ ಕೊನೆಯದಾಗಿ "ಇನ್ನು ಮುಂದೆ ಹೋ ಶಿನ್ ಮಿನ್ ಏರ್ ಟ್ರಾಫಿಕ್ ಕಂಟ್ರೋಲರ್ ಅನ್ನು ಸಂಪರ್ಕ ಮಾಡಿಕೊಳ್ಳಿ" ಎಂಬ ಸಂದೇಶವನ್ನು ಕಳಿಸಿದ್ದಾರೆ. ಅದಕ್ಕೆ ಉತ್ತರವಾಗಿ ವಿಮಾನದ ಚಾಲಕ ಅಹ್ಮದ್ ಶಾ ಅವರು "ಗುಡ್ ನೈಟ್ ಮಲೇಶಿಯಾ ತ್ರೀ ಸೆವೆನ್ ಝೀರೋ" ಎಂಬ ಉತ್ತರವನ್ನು ಕೊಟ್ಟಿದ್ದಾರೆ. ಅದಾದ ಸ್ವಲ್ಪ ಹೊತ್ತಿನಲ್ಲಿ "ಎಲ್ಲವೂ ಸರಿಯಾಗಿದೆ" ಎಂಬ ಮಾತು ಕೇಳಿ ಬಂದಿದೆ. ಇದನ್ನು ಕೇಳಿ ವಿಮಾನ ನಿಲ್ದಾಣದ ಫ್ಲೈಟ್ ಕಂಟ್ರೋಲರ್ ಗೆ ಸ್ವಲ್ಪ ಗೊಂದಲವಾಗಿದೆ. ಏಕೆಂದರೆ ಕೊನೆಯ ಮಾತುಗಳನ್ನು ಆಡಿದ ನಂತರ ಈ ರೀತಿಯಾಗಿ ಹೇಳಿದ್ದು ಅಸಹಜವಾಗಿತ್ತು. ಆದರೆ ಅಷ್ಟರಲ್ಲಿ ವಿಮಾನವು ಕೌಲಲಂಪುರ ಪರಿಧಿಯನ್ನು ದಾಟಿ ಹೊರಗೆ ಹೋಗುತ್ತಿದ್ದುದರಿಂದ ವಿಮಾನ ಚಾಲಕರೊಂದಿಗೆ ಮತ್ತೆ ಮಾತನಾಡುವ ಅವಕಾಶ ಇಲ್ಲವಾಗಿತ್ತು.

 ವಿಮಾನವು ಆಗ ಗಲ್ಫ್ ಆಫ್ ಥೈಲ್ಯಾಂಡ್ ಸಮುದ್ರದ ಮೇಲೆ ಹಾರುತ್ತಲೇ ಇತ್ತು. ಮಾತುಕತೆ ನಡೆದು ಕೇವಲ ಮೂರು ನಿಮಿಷಗಳ ನಂತರ ಅಂದರೆ ಒಂದು ಗಂಟೆ 21 ನಿಮಿಷಕ್ಕೆ ಸರಿಯಾಗಿ ವಿಮಾನವು ರೇಡಾರ್ ಪರದೆಯಿಂದ ಕಣ್ಮರೆಯಾಯಿತು. ಇದನ್ನು ಕಂಡು  ಕೌಲಾಲಂಪುರ್ ಏರ್ ಟ್ರಾಫಿಕ್ ಕಂಟ್ರೋಲರ್ ಚಕಿತರಾಗಿದ್ದಾರೆ. ಅತ್ತ ಹೋ ಶಿ ಮಿನ್ ಸಿಟಿಯ ಏರ್ ಟ್ರಾಫಿಕ್ ಕಂಟ್ರೋಲರ್ ಕೂಡ ಇದೀಗ ತಾನೇ ತಮ್ಮ ಸಂಪರ್ಕಕ್ಕೆ ಬರುವ ಮೊದಲೇ ಈ ರೀತಿ ಮಲೇಶಿಯನ್ ಥ್ರೀ ಸೆವೆಂಟಿ ವಿಮಾನವು ಎದುರಿನ ರೇಡರ್ ಪರದೆಯಿಂದ ಮರೆಯಾಗುವದನ್ನು ಗಮನಿಸಿದರು. ಗಲ್ಫ್ ಆಫ್ ಥೈಲ್ಯಾಂಡ್ ಪ್ರದೇಶವು ತುಂಬಾ ಅಪಾಯಕಾರಿ ಭಾಗವಾಗಿದ್ದರೂ ಸಹ ಆ ಸಮಯದಲ್ಲಿ ಮೋಡಗಳು ತೀರಾ ಕಡಿಮೆ ಇದ್ದವು. ಮತ್ತು ಯಾವುದೇ ಚಂಡಮಾರುತಗಳಾಗಲಿ, ಬಿರುಗಾಳಿಯಾಗಲಿ ಇರಲಿಲ್ಲ. ಇದರಿಂದ ವಿಮಾನದ ಸಂಪರ್ಕದ ಸಾಧನವನ್ನು ಯಾರೋ ಬೇಕಂತಲೇ ಆಫ್ ಮಾಡಿದಂತೆ ತೋರಿತು. ಕೂಡಲೇ ಎರಡೂ ವಿಮಾನ ನಿಲ್ದಾಣದ ಏರ್ ಕಂಟ್ರೋಲರ್ ಗಳು ಈ ವಿಷಯವನ್ನು ಸಂಬಂದ ಪಟ್ಟ ರಕ್ಷಣಾ ವಿಭಾಗಕ್ಕೆ ತಿಳಿಸಿದರು.

ವಿಮಾನ ನಿಲ್ದಾಣದ ರೇಡಾರ್ ಗೆ ವಿಮಾನದ ಸಂಪರ್ಕವು ಕಡಿದು ಹೋದರೂ ಕೂಡ ಮಿಲಿಟರಿ ರೇಡಾರ್ ನಲ್ಲಿ ವಿಮಾನವು ಹಾರಾಡುತ್ತಿರುವುದು ಕಾಣಿಸುತ್ತಲೇ ಇತ್ತು. ಇದರ ನಂತರ ನಡೆದಿದ್ದು ಒಂದು ಅಯೋಮಯವಾದ ಘಟನಾವಳಿ ಅನ್ನಬಹುದು. ಹೀಗೆ ಒಮ್ಮೆ ವಿಮಾನ ನಿಲ್ದಾಣಗಳ ಸಂಪರ್ಕವನ್ನು ಕಳೆದುಕೊಂಡ ನಂತರ ವಿಮಾನವು ಇದ್ದಕ್ಕಿದ್ದಂತೆ ಸ್ವಲ್ಪ ಬಲಭಾಗಕ್ಕೆ ತಿರುಗಿ ಮತ್ತೆ ಎರಡೇ ಕ್ಷಣದಲ್ಲಿ ಪೂರ್ತಿಯಾಗಿ ಯು ಟರ್ನ್ ತೆಗೆದುಕೊಂಡಿತು. ಒಂದು ಗಂಟೆ 52 ನಿಮಿಷದವರೆಗೆ ಆ ರೀತಿಯಾಗಿ ಹಾರಿದ ವಿಮಾನವು ಮತ್ತೆ ಒಂದಿಷ್ಟು ಬಲಕ್ಕೆ ತಿರುಗಿಕೊಂಡು 2 ಗಂಟೆ 22 ನಿಮಿಷದವರೆಗೆ ಹಿಂದೂ ಮಹಾಸಾಗರದ ಮೇಲೆ ಹಾರುತ್ತಿರುವುದನ್ನು ಮಿಲಿಟರಿ ರೇಡಾರ್ ಗಳು ಗಮನಿಸಿದವು. ಕೊನೆಗೊಮ್ಮೆ ಮಿಲಿಟರಿ ರೇಡಾರ್ ಗಳ ಪರಿದಿಯಿಂದಲೂ ವಿಮಾನವು ಹೊರಗೆ ಹೊರಟು ಹೋಯ್ತು!

ಅದಾದ ಮೇಲೆ ಇನ್ ಮಾರ್ ಸ್ಯಾಟ್ ಎಂಬ ಮೊಬೈಲ್ ಸೆಟಲೈಟ್ ಕಂಪನಿಯ ಉಪಗ್ರಹದ ಸಂಪರ್ಕದಲ್ಲಿ ವಿಮಾನ ಇತ್ತು. ಆ ಮಾಹಿತಿಯನ್ನು ನೋಡಿದರೆ ಮತ್ತೆ ಎಡ ತಿರುವನ್ನು ಪಡೆದುಕೊಂಡು ವಿಮಾನವು ನೇರವಾಗಿ ಸತತ ಐದು ಗಂಟೆಗಳ ಕಾಲ ಹಾರುತ್ತಲೇ ಇತ್ತು. ವಿಮಾನದ ನೇರ ಸಂಪರ್ಕಸಿಗದೆ ಹೋಗಿದ್ದರಿಂದ ರಾತ್ರಿ ಎರಡು 39ಕ್ಕೆ ಒಂದು ಸ್ಯಾಟಲೈಟ್ ಕರೆಯನ್ನು ಮಾಡಲಾಯಿತು. ಅಲ್ಲಿ ರಿಂಗಾಯಿತಾದರೂ ಯಾರೂ ರಿಸೀವ್ ಮಾಡಲಿಲ್ಲ. ಬೆಳಿಗ್ಗೆ ಐದು ಹದಿಮೂರಕ್ಕೆ ಮತ್ತೆ ಅದೇ ಮೊಬೈಲ್ ಕಂಪನಿಯಿಂದ ಕಾಕ್ಪಿಟ್ ಗೆ ಕರೆ ಮಾಡಿದರು. ಆಗಲೂ ಕೂಡ ಕಾಕ್ ಪಿಟ್ ನಲ್ಲಿ ರಿಂಗ್ ಆಯಿತು. ಆದರೂ ಯಾರು ಕರೆಯನ್ನು ಸ್ವೀಕರಿಸಲಿಲ್ಲ.

 ಬೀಜಿಂಗ್ ಅನ್ನು ತಲುಪಬೇಕಾಗಿದ್ದ ಸಮಯ ಕಳೆದು ಒಂದು ಗಂಟೆ ಆಗಿ ಹೋಗಿದ್ದರೂ ವಿಮಾನವು ಇನ್ನೂ ಹಿಂದೂ ಮಹಾ ಸಾಗರದ ಮೇಲೆಯೇ ಹಾರುತ್ತಿರುವ ಮಾಹಿತಿ ಸ್ಯಾಟಲೈಟ್ ನಿಂದ ಸಿಗುತ್ತಿತ್ತು. ವಿಮಾನವು ಸಂಪರ್ಕವನ್ನು ಕಳೆದುಕೊಂಡ ಕೆಲವೇ ಸಮಯದಲ್ಲಿ ಮಲೇಶಿಯಾ ಸರ್ಕಾರವು ಅದನ್ನು ಹುಡುಕಲು ಮಿಲಿಟರಿ ಯವರಿಗೆ ತಿಳಿಸಿದ್ದು ಮಿಲಿಟರಿ ವಿಮಾನಗಳು ಇದನ್ನು ಒಂದು ಕಡೆಯಿಂದ ಹುಡುಕುತ್ತಾ ಹೊರಟಿದ್ದರೆ ಮಲೇಷಿಯನ್ ಥ್ರೀ ಸೆವೆಂಟಿ ವಿಮಾನವು ಮತ್ತೆ ಇನ್ನೆಲ್ಲೋ ಹಾರಾಡುತ್ತಲೇ ಇತ್ತು. 8:19 ರ ವರೆಗೂ ವಿಮಾನ ಹಾರಾಡುತ್ತಲೇ ಇರುವ ಬಗ್ಗೆ ಮಾಹಿತಿಯು ಸ್ಯಾಟಲೈಟ್ ಗೆ ಸಿಗುತ್ತಲೇ ಇತ್ತು. ಐದೂವರೆ ಗಂಟೆ ಹಾರಾಟ ನಡೆಸಿ ಬೀಜಿಂಗ್ ತಲುಪಬೇಕಾಗಿದ್ದ ವಿಮಾನವು ಏಳೂವರೆ ಗಂಟೆ ಕಳೆದರೂ ಹಾರಾಡುತ್ತಲೇ ಇತ್ತು. ಅಂದರೆ ಅಲ್ಲಿಗೆ ವಿಮಾನದಲ್ಲಿದ್ದ ಇಂಧನವು ಖಾಲಿಯಾಗುವ ಹೊತ್ತಾಗಿತ್ತು. 9 ಹದಿನೈದಕ್ಕೆ ಮತ್ತೊಂದು ಸ್ಯಾಟಲೈಟ್ ಕರೆಯನ್ನು ಮಾಡಲಾಯಿತು. ಆದರೆ ಈ ಬಾರಿ ಕರೆಯು ಸಂಪರ್ಕಗೊಳ್ಳಲಿಲ್ಲ! ಅಂದರೆ ಇದರ ಅರ್ಥ ವಿಮಾನವು ಬೆಳಗ್ಗೆ 8:19 ರಿಂದ 9:15 ರ ನಡುವೆ ಎಲ್ಲಿಯೋ ಬಿದ್ದು ಹೋಗಿರಬೇಕು. ಆದರೆ ಎಲ್ಲಿ ಅನ್ನೋದು ಮಾತ್ರ ಯಾರಿಗೂ ತಿಳಿಯಲಿಲ್ಲ.

ಉಪಗ್ರಹದ ಮಾಹಿತಿಯ ಪ್ರಕಾರ ವಿಮಾನವು ಕೊನೆಯದಾಗಿ ಹಿಂದೂ ಮಹಾ ಸಾಗರದ ಈ ಕಪ್ಪು ಪಟ್ಟಿಯ ಜಾಗದಲ್ಲೇ ಹಾರಾಡಿದೆ ಎಂದು ತಿಳಿಯಲಾಗಿದೆ. ಇದು ಆಸ್ಟ್ರೇಲಿಯಾದಿಂದ ಕೆಲವು ಸಾವಿರ ಕಿಲೋಮೀಟರ್ ಗಳ ದೂರ ಆಗುತ್ತದೆ. ಅದಾಗಲೇ ಮಲೇಷಿಯನ್ ಏರ್ಲೈನ್ಸ್ ಥ್ರೀ ಸೆವೆಂಟಿ ಮಿಸ್ಸಿಂಗ್ ಆಗಿರುವ ಸುದ್ದಿ ಎಲ್ಲಾ ಕಡೆ ಹರಡತೊಡಗಿತ್ತು. ಅದರ ಹುಡುಕಾಟಕ್ಕೆ ಸಮರೋಪಾದಿಯಲ್ಲಿ ಇಳಿಯಲಾಯಿತು. ಹಿಂದೂ ಮಹಾಸಾಗರದ ತುಂಬಾ ಹುಡುಕಲಾಯಿತಾದರೂ ಏನೂ ಉಪಯೋಗವಾಗಲಿಲ್ಲ. ಮಾರ್ಚ್ 18 ರಿಂದ ಏಪ್ರಿಲ್ 28 ರವರೆಗೆ 13 ದೇಶಗಳ 19 ಹಡಗುಗಳು, 345 ಮಿಲಿಟರಿ ವಿಮಾನಗಳು ಮತ್ತು ಸಾವಿರಾರು ವಿವಿಧ ವಿಭಾಗದ ತಂತ್ರಜ್ಞರು ಸೇರಿಕೊಂಡು 45 ಲಕ್ಷ ಚದುರ ಕಿಲೋ ಮೀಟರ್ ವಿಸ್ತೀರ್ಣದಲ್ಲಿ ಹುಡುಕಾಟ ನಡೆಸಲಾಯಿತು. ಇದು  ನಮ್ಮ ಇಡೀ ಭಾರತ ದೇಶಕ್ಕಿಂತಲೂ ಹೆಚ್ಚು ವಿಸ್ತೀರ್ಣದ ಪ್ರೇದೇಶವಾಗಿತ್ತು. ಆದರೆ ಒಂದು ಚಿಕ್ಕ ಸುಳಿವು ಕೂಡ ಸಿಗಲಿಲ್ಲ! ಮುಖ್ಯವಾಗಿ ವಿಮಾನ ಅಪಘಾತದ ತನಿಖೆಗೆ ಅಗತ್ಯವಾದ ಕಪ್ಪು-ಪೆಟ್ಟಿಗೆಯು ಸಿಗಬೇಕಿತ್ತು. ವಿಮಾನ ಕಳೆದು ಹೋಗಿ ಸುಮಾರು 15 ಇಪ್ಪತ್ತು ದಿನ ಗಳವರೆಗೆ ಪೆಟ್ಟಿಗೆಯಿಂದ ಸಣ್ಣ ಕಂಪನವು ಹುಡುಕಾಟದಲ್ಲಿ ನಿರತವಾಗಿದ್ದ ಮಿಲಿಟರಿ ಹಡಗುಗಳಿಗೆ ಸಿಕ್ಕಿತ್ತು. ಆದರೆ ಅದು ಯಾವ ಕಡೆಯಿಂದ ಬರುತ್ತದೆ ಎಂಬುದನ್ನು ತಿಳಿಯಲು ಆಗಲೇ ಇಲ್ಲ. ಕೊನೆಗೊಂದು ದಿನ ಅದು ಕ್ಷೀಣವಾಗುತ್ತ ಹೋಗಿ ನಿಂತೇ ಹೋಯ್ತು.

ವಿಮಾನವು ಕಳೆದು ಹೋಗಿ ಒಂದು ವರ್ಷ ಕಳೆದರೂ ಏನೋ ಒಂದು ಚಿಕ್ಕ ಸುಳಿವು ಕೂಡ ಸಿಗದಾಯಿತು. ಇನ್ನೊಂದೆಡೆ ಆಸ್ಟ್ರೇಲಿಯಾದ ಪರ್ಥ್ ನಿಂದ 1,800 ಕಿಲೋಮೀಟರ್ ದೂರದ ಸಮುದ್ರದಲ್ಲಿಯೂ ಹುಡುಕಾಟ ನಡೆಸಲಾಯಿತು. 1 ವರ್ಷದ ನಂತರ 2015 ರ ಜುಲೈಯಲ್ಲಿ ವಿಮಾನ ಬಿದ್ದಿರಬಹುದು ಎಂದು ತಿಳಿಯಲಾದ ಜಾಗದಿಂದ ನಾಲ್ಕು ಸಾವಿರ ಕಿಲೋಮೀಟರ್ ದೂರದ ರಿಯೂನಿಯನ್ ಎಂಬಲ್ಲಿ ವಿಮಾನದ ರೆಕ್ಕೆಯ ತುಣುಕೊಂದು ಸಿಕ್ಕಿತು! ಈ ತುಣುಕು ಎಂಎಚ್ 370 ಯದ್ದೇ ಎಂದು ತಜ್ಞರು ಖಚಿತಪಡಿಸಿದ್ದಾರೆ. ಇದರಿಂದ ಆ ವಿಮಾನವು ಸಮುದ್ರದಲ್ಲಿ ಬಿದ್ದು ಹೋಗಿದೆ ಎಂಬ ವಾದಕ್ಕೆ ಪುಷ್ಠಿ ದೊರೆಯಿತು. ಅದರ ನಂತರ ಆಫ್ರಿಕಾ ಖಂಡದ ಪೂರ್ವ ಕರಾವಳಿಯಲ್ಲಿ ಇನ್ನೂ ಹಲವಾರು ತುಂಡುಗಳು ಸಿಕ್ಕವು. ಅವುಗಳನ್ನು ಹೊರತುಪಡಿಸಿ ಬೇರೆ ಯಾವುದೇ ದೊಡ್ಡ ಭಾಗವು ಸಿಗಲೇ ಇಲ್ಲ. ಮುಖ್ಯವಾಗಿ ತನಿಖೆಗೆ ಬೇಕಾದ ಕಪ್ಪು ಪೆಟ್ಟಿಗೆಯ ಸುಳಿವು ಸಿಗಲೇ ಇಲ್ಲ. ಹೀಗಾಗಿ 2017ರ ಜನವರಿ 17 ರಂದು, ಅಂದರೆ ಮೂರು ವರ್ಷಗಳ ಸತತ ಹುಡುಕಾಟದ ನಂತರ ಎಂಎಚ್ 370 ವಿಮಾನದ ಹುಡುಕಾಟವನ್ನು ಅಧಿಕೃತವಾಗಿ ನಿಲ್ಲಿಸಲಾಯಿತು. ಈ ಹುಡುಕಾಟದಲ್ಲಿ ಮುಖ್ಯವಾಗಿ ಮಲೇಶಿಯಾ, ಚೀನಾ ಮತ್ತು ಆಸ್ಟ್ರೇಲಿಯಗಳು ಭಾಗವಹಿಸಿದ್ದರೆ ಇತರೆ ಹಲವಾರು ದೇಶಗಳು ಬೇರೆ ಬೇರೆ ಸಹಾಯವನ್ನು ಒದಗಿಸಿದ್ದವು. ಈ ಹುಡುಕಾಟಕ್ಕೆ ಖರ್ಚಾಗಿದ್ದು ಸುಮಾರು 155 ಮಿಲಿಯನ್ ಡಾಲರುಗಳು. ಇದು ವಿಮಾನ ಯಾನದ ಇತಿಹಾಸದಲ್ಲಿಯೇ ಒಂದು ಹುಡುಕಾಟಕ್ಕೆ ಖರ್ಚಾದ ಅತಿ ದೊಡ್ಡ ಮೊತ್ತವಾಗಿದೆ.

ಓಶನ್ ಇಂಫಿನಿಟಿ ಎಂಬ ಅಮೆರಿಕದ ಖಾಸಗಿ ಸಂಸ್ಥೆಯೊಂದು ವಿಮಾನ ಬಿದ್ದಿದೆ ಎಂದು ತಿಳಿಯಲಾದ ಸುಮಾರು 33 ಸಾವಿರ ಚದುರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಹುಡುಕಾಟ ನಡೆಸಿ ಆ ಭಾಗದಲ್ಲಿ ಯಾವುದೇ ಚಿಕ್ಕ ಅವಶೇಷಗಳು ಇಲ್ಲ ಎಂಬುದಾಗಿ ಕಳೆದ ವರ್ಷ ವರದಿ ಸಲ್ಲಿಸಿತು. 4 ವರ್ಷಗಳ ಸತತ ಹುಡುಕಾಟದ ನಂತರ ತನಿಖಾ ಸಂಸ್ಥೆಗಳಿಗೆ ಒಂದು ಸ್ಪಷ್ಟ ನಿಲುವು ತೆಗೆದುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಆದರೂ ಕೆಲವೊಂದು ವಾದಗಳನ್ನು ಅವು ಮುಂದಿಟ್ಟಿವೆ. ಅವುಗಳಲ್ಲಿ ಮುಖ್ಯವಾದದ್ದು ಎಂಎಚ್ 370 ವಿಮಾನವನ್ನು ಯಾರೋ ಅಪಹರಿಸಿದ್ದಾರೆ ಅನ್ನುವುದು ಒಂದು. ಇದಕ್ಕೆ ಪುರಾವೆಯಾಗಿ ವಿಮಾನದಲ್ಲಿದ್ದ ಇಬ್ಬರು ಇರಾನಿ ಪ್ರಯಾಣಿಕರ ಪಾಸ್ ಪೋರ್ಟ್ ಗಳು ನಕಲಿ ಯಾಗಿರುವುದು. ವಿಮಾನ ಹೊರಡುವ ದಿನದ ಒಂದು ವಾರ ಮೊದಲಷ್ಟೇ ಇವರಿಬ್ಬರು ಮಲೇಷಿಯಾವನ್ನು ಪ್ರವೇಶಿಸಿದ್ದರು. ಮತ್ತು ಮಲೇಷಿಯಾದಿಂದ ಹೊರಟಿದ್ದ ಇವರು ಬೀಜಿಂಗ್ ಗೆ ಒಮ್ಮುಖದ ಟಿಕೆಟ್ ಅನ್ನು ಮಾತ್ರ ಪಡೆದಿದ್ದರು. ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿತು. ಆದರೆ ಹೆಚ್ಚಿನ ತನಿಖೆಯನ್ನು ನಡೆಸಿದ ಮೇಲೆ ಅವರು ಭಯೋತ್ಪಾದಕರಾಗಿರಲಿಲ್ಲ ಎನ್ನುವ ಮಾಹಿತಿಯೂ ಬಂತು.

ಅಮೆರಿಕದ ಎಫ್ ಬಿಐ ವಿಮಾನದಲ್ಲಿದ್ದ ಪ್ರತಿಯೊಬ್ಬ ಪ್ರಯಾಣಿಕರ ಹಿನ್ನೆಲೆಯನ್ನು ತನಿಖೆಗೆ ಒಳಪಡಿಸಿ ಪರಿಶೀಲಿತು. ಯಾವುದೇ ಪ್ರಯಾಣಿಕರ ಮೇಲೆ ಒಂದು ಚಿಕ್ಕ ಅನುಮಾನವೂ ಉಳಿಯಲಿಲ್ಲ. ಆಗ ತನಿಖಾ ಸಂಸ್ಥೆಗಳ ಅನುಮಾನ ತಿರುಗಿದ್ದು ವಿಮಾನ ಚಾಲಕರ ಮೇಲೆ. ಮುಖ್ಯವಾಗಿ ಮುಖ್ಯ ಪೈಲಟ್ ಜಾಹರ್ ಅಹಮದ್ ಶಾ ಮೇಲೆ ಹೆಚ್ಚಿನ ಅನುಮಾನ ಮೂಡಿತು. ಏಕೆಂದರೆ ವಿಮಾನ ಹೊರಟ ಅರ್ಧ ಗಂಟೆಯ ನಂತರ ಅವರು ವಿನಾಕಾರಣ "ಎಲ್ಲವೂ ಸರಿ ಇದೆ" ಎಂಬ ಮಾತನ್ನು ಹೇಳಿದ್ದರು, ಮತ್ತು ಇವರ ಮನೆಯ ಕಂಪ್ಯೂಟರನ್ನು ಪರಿಶೀಲಿಸಿದಾಗ ಒಂದೆರಡು ದಿನಗಳ ಹಿಂದಷ್ಟೇ ಅದರಲ್ಲಿದ್ದ ಕೆಲವು ಮಾಹಿತಿಗಳನ್ನು ಅಳಿಸಿ ಹಾಕಿರುವುದು ಕಂಡುಬಂತು. ಇದರಿಂದಾಗಿ ಅವರಿಗೆ ಸಂಬಂಧಿಸಿದ ನೂರಾರು ಜನರನ್ನು ತನಿಖೆಗೆ ಒಳಪಡಿಸಲಾಯಿತು. ಆದರೆ ಅನುಮಾನ ಗಟ್ಟಿಯಾಗುವಂತಹ ಬೇರೆ ಯಾವುದೇ ಸುಳಿವು ಕೂಡ ಸಿಗಲಿಲ್ಲ. ಕೋ ಪೈಲೆಟ್ ಮತ್ತು ಇತರೆ ಎಲ್ಲಾ ಸಿಬ್ಬಂದಿಗಳ ಹಿನ್ನೆಲೆಯನ್ನು ಅವರ ಹಣಕಾಸು ವಹಿವಾಟುಗಳನ್ನು ಎಳೆಎಳೆಯಾಗಿ ಪರಿಶೀಲಿಸಿದರೂ ಯಾವುದೇ ಅನುಮಾನಕ್ಕೆ ಎಡೆ ಮಾಡಿಕೊಡುವ ವಿಷಯ ಸಿಗಲಿಲ್ಲ.

ವಿಮಾನವು ತನ್ನ ದಾರಿಯನ್ನು ಬಿಟ್ಟು ಎಡಕ್ಕೆ ತಿರುಗಿ ಮತ್ತೆ ನೇರವಾಗಿ ಐದು ಗಂಟೆಗಳ ಕಾಲ ಚಲಿಸಿದ್ದನ್ನು ನೋಡಿದಾಗ ತಿಳಿಯುವುದೇನೆಂದರೆ, ಕೊನೆಯ ತಿರುವು ಪಡೆದುಕೊಂಡ ನಂತರ ಯಾರೋ ಬೇಕೆಂದೇ ಆಟೋ ಪೈಲೆಟ್ ಗೆ ವಿಮಾನವನ್ನು ಒಪ್ಪಿಸಿದ್ದಾರೆ. ಆದರೆ ಯಾಕೆ ಅನ್ನೋದು ಮಾತ್ರ ಬಗೆಹರಿಯದ ಒಗಟಾಗಿದೆ. ಕೆಲವು ತಜ್ಞರ ಪ್ರಕಾರ ವಿಮಾನದಲ್ಲಿ ಏನೋ ತೊಂದರೆ ಕಾಣಿಸಿಕೊಂಡು, ವಿಮಾನ ಚಾಲಕರು ಮರಳಿ ಹತ್ತಿರದ ವಿಮಾನ ನಿಲ್ದಾಣಕ್ಕೆ ಇಳಿಸಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟರಲ್ಲೇ ವಿಮಾನವು ಅವರ ನಿಯಂತ್ರಣವನ್ನು ಕಳೆದುಕೊಂಡಿದೆ. ಈ ಸಮಯದಲ್ಲಿ ಬಹುಶಃ ವಿಮಾನದ ಸಂಪರ್ಕ ಸಾಧನಗಳು ಒಂದೊಂದಾಗಿ ನಿಂತು ಹೋಗಿವೆ.  ಹಾಗೆಯೇ ವಿಮಾನದ ಒಳಗೆ ಆಮ್ಲಜನಕದ ಕೊರತೆ ಉಂಟಾಗಿ ಉಸಿರಾಟದ ತೊಂದರೆ ಶುರುವಾಗಿರಬೇಕು. ಹೀಗಾಗಿ ಚಾಲಕರು ವಿಮಾನವನ್ನು ಆಟೋ ಪೈಲೆಟ್ ಗೆ ಒಪ್ಪಿಸಿ ಮೂರ್ಛೆ ಹೋಗಿದ್ದಾರೆ. ಆನಂತರ ಪ್ರಯಾಣಿಕರನ್ನು ಸೇರಿಸಿ ಎಲ್ಲರೂ ಆಮ್ಲಜನಕದ ಕೊರತೆಯಿಂದ ವಿಮಾನ ಹಾರಾಡುತ್ತಿರುವಾಗಲೇ ಸತ್ತು ಹೋಗಿರಬೇಕು. ಅದರ ನಂತರ ಸತತ ಐದು ಗಂಟೆಗಳ ಕಾಲ ತನ್ನಲ್ಲಿರುವ ಉರುವಲು ಮುಗಿಯುವವರೆಗೂ ವಿಮಾನವು ನೇರವಾಗಿ ಸಾಗಿದೆ. ಉರುವಲು ಮುಗಿದ ಬಳಿಕ ಬಹುದೊಡ್ಡ ಹಿಂದೂ ಮಹಾಸಾಗರದ ಯಾವುದೋ ಒಂದು ಬಿಂದುವಿನಲ್ಲಿ ಬಿದ್ದು ಮುಳುಗಿ ಹೋಗಿದೆ.

ಇದು ನಂಬಬಹುದಾದ ಒಂದು ವಾದವಾದರೆ ನಂಬಲು ಕಷ್ಟವಾದ ಇನ್ನೂ ಕೆಲವು ವಾದಗಳನ್ನು ಹಲವರು ಹೇಳುವುದಿದೆ. ಅವುಗಳೆಂದರೆ ವಿಮಾನವನ್ನು ಯಾರೋ ಅಪಹರಿಸಿ ಯಾವುದೋ ಒಂದು ಕಡೆ ಬಚ್ಚಿಟ್ಟಿದ್ದಾರೆ. ಅಥವಾ ಬೇರೆ ಗ್ರಹದ ಜೀವಿಗಳು ಅಪಹರಿಸಿರಬಹುದು ಅಥವಾ ವಿಮಾನವು ಟೈಮ್ ಟ್ರಾವೆಲ್ ಎಂಬ ವಿಶಿಷ್ಟ ಸಿದ್ಧಾಂತದಂತೆ ಬೇರೆ ದೇಶಕಾಲಕ್ಕೆ ಹೊರಟು ಹೋಗಿರಬಹುದು ಅನ್ನುವುದು.

ಹೀಗೆ ಹಲವಾರು ವಾದಗಳು ಕಳೆದು ಹೋಗಿರುವ ಎಂಎಚ್ 370 ವಿಮಾನದ ಮೇಲೆ ಇದ್ದರೂ ಇದುವರೆಗೂ ಇಂತಾದ್ದೆ ನಡೆದಿದೆ ಎಂದು ಸ್ಪಷ್ಟವಾಗಿ ನಿರ್ಧರಿಸಲು ಸಾಧ್ಯವಾಗಿಲ್ಲ. ಆದರೆ ಅದರ 12 ಸಿಬ್ಬಂದಿ ಮತ್ತು 229 ಪ್ರಯಾಣಿಕರ ಮನೆಯ ಮಂದಿ ತಮ್ಮವರ ಮುಖವನ್ನು ನೋಡಲಾಗಲಿಲ್ಲವಲ್ಲ ಎಂಬ ನೋವಿನಲ್ಲಿ, ಮತ್ತೆ ಮರಳಿ ಬರಬಹುದೇನೋ ಎಂಬ ಆಸೆಯೊಂದಿಗೆ ಇಂದಿಗೂ ಕಾಯುತ್ತಲೇ ಇದ್ದಾರೆ.

ಏವಿಯೇಷನ್ ಹಿಸ್ಟರಿಯಲ್ಲಿ ಈ ಘಟನೆಯು ಅತ್ಯಂತ ಒಗಟಿನದಾಗಿ ದಾಖಲಾಗಿದೆ. ವಿಮಾನವು ಕಳೆದು ಹೋಗಿ 5 ವರ್ಷ ಕಳೆದಿದ್ದರು ಇನ್ನೂ ಅನೇಕ ಸಂಘ ಸಂಸ್ಥೆಗಳು, NGO ಗಳು ಅದರ ಹುಡುಕಾಟದಲ್ಲಿ ನಿರತವಾಗಿವೆ. ಈ ಕಣ್ಮರೆಯ ನಂತರ ವಿಮಾನ ತಯಾರಿಕಾ ಸಂಸ್ಥೆಗಳು ಎಲ್ಲಾ ವಿಮಾನಗಳಿಗೆ ಜಿಪಿಎಸ್ ಅನ್ನು ಅಳವಡಿಸಿ ಅದನ್ನು ಉಪಗ್ರಹಗಳಿಗೆ ಸಂಪರ್ಕಿಸಿ ಪ್ರತಿ ವಿಮಾನವು ಯಾವ ಸಮಯದಲ್ಲಿ ಯಾವ ಸ್ಥಳದಲ್ಲಿ ಹಾರಾಡುತ್ತಿತ್ತು ಎಂಬುದರ ಮಾಹಿತಿಯನ್ನು ಸಂಗ್ರಹಿಸಲು ಮುಂದಾಗಿವೆ. ಇದು ಮೇಲೆ ಹಾರಾಡುತ್ತಿರುವ ಉಪಗ್ರಹಗಳಿಗೆ ಸಂಪರ್ಕ ಪಡೆದು ಅಲ್ಲಿ ದಾಖಲಾಗುವುದರಿಂದ, ಯಾವುದೇ ವಿಮಾನವು ಭೂಮಿಯ ಮೇಲಿರುವ ರೇಡಾರ್ ಪರಿದಿಯಿಂದ ತಪ್ಪಿಸಿಕೊಂಡರೂ ಉಪಗ್ರಹಗಳ ಸಂಪರ್ಕದಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ.

ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ಏನು, ಆ ವಿಮಾನ ಏನಾಗಿರಬಹುದು ಅಂತ ನಿಮಗೆ ಅನ್ನಿಸುತ್ತೆ ಅನ್ನೋದನ್ನ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು . * ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ. * ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ . * ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್. * ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ. * ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ. * ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ. * ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ. * ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ . * ಶಿಕ್ಷಣವೇ ಜೀವನದ ಬೆಳಕು - ಗೊರೂರು * ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್. * ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ. * ವಿದ್ಯೆ ಗುರುಗಳ ಗುರು - ಭ್ರತೃ ಹರಿ. * ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ,

ಹೆಣ್ಣಿನ ಕಣ್ಣು : ಸುಂದರವಷ್ಟೇ ಅಲ್ಲ... ಸೂಕ್ಷ್ಮವೂ ಹೌದು

ಮಹಿಳೆಯರ ಕಣ್ಣು ಪುರುಷರ ಕಣ್ಣಿಗಿಂತಲೂ ತುಂಬಾ ಸೂಕ್ಷ್ಮ. ಅವರು ಎದುರಿನ ವ್ಯಕ್ತಿಗಳ ಭಾವನೆಗಳನ್ನು ಬರಿಯ ನೋಟವೊಂದರಿಂದಲೇ ತಿಳಿದುಕೊಂಡು ಬಿಡುತ್ತಾರೆ. ಇದು ಪುರುಷರಿಂದ ಅಸಾಧ್ಯ. ಕಣ್ಣು ಮಾತ್ರವಲ್ಲದೇ ಸ್ತ್ರೀಯರ ಎಲ್ಲಾ ಗ್ರಹಣೇಂದ್ರಿಯಗಳೂ ಸಹ ತುಂಬಾ ಸೂಕ್ಷ್ಮ ಸಂವೇದಿಗಳೆಂಬುದರಲ್ಲಿ ಎರಡು ಮಾತಿಲ್ಲ ! ಅದಕ್ಕಾಗಿಯೆ ಹುಡುಗಿಯರೊಂದಿಗೆ ವ್ಯವಹರಿಸುವಾಗ ಹುಡುಗರು ತುಂಬಾ ಎಚ್ಚರಿಕೆಯಿಂದಿರಬೇಕಾಗುತ್ತದೆ. ಏಕೆಂದರೆ ಹುಡುಗನ ಮನದಲ್ಲೇಳುವ ಕಾಮನೆಗಳನ್ನೆಲ್ಲಾ ಹುಡುಗಿ ಅವನ ಮುಖಭಾವದಿಂದಲೇ ಗ್ರಹಿಸಿಬಿಡುವ ಸಾಮಥ್ರ್ಯ ಹೊಂದಿದ್ದಾಳೆ. ತನ್ನೊಂದಿಗೆ ಸ್ನೇಹದಿಂದ ವತರ್ಿಸುವ ಹುಡುಗನನ್ನೂ, ಸ್ನೇಹದ ನೆಪದಲ್ಲಿ ಪ್ರೇಮ ವ್ಯಕ್ತಪಡಿಸುವ ಹುಡುಗನನ್ನೂ ಹುಡುಗಿಯೊಬ್ಬಳು ಬಹುಬೇಗನೆ ಗುರುತಿಸಿಬಿಡುತ್ತಾಳೆ. ಆದರೂ ಕೆಲವು ಹುಡುಗಿಯರು ತಿಳಿದೂ ತಿಳಿಯದಂತಿರುತ್ತಾರೆ. ಅದಕ್ಕೆ ಕಾರಣವೇನೆಂದರೆ ಮುಂದೇನು ಮಾಡಬೇಕೆಂಬುದು ಅವರಿಗೆ ತೋಚುವುದಿಲ್ಲ. ವಿವೇಚನೆಗಿಂತಾ ಭಾವನೆಗೇ ಹೆಚ್ಚು ಮಹತ್ವ ಕೊಡುತ್ತಾರವರು. ಆ ಹುಡುಗನೊಂದಿಗಿನ ಸ್ನೇಹವನ್ನು ಕಳೆದುಕೊಳ್ಳಲಿಚ್ಚಿಸುವುದಿಲ್ಲ. ಈ ಎಲ್ಲಾ ಕಾರಣಗಳಿಂದಾಗಿಯೇ ಹುಡುಗಿಯೊಬ್ಬಳು ಹುಡುಗನೊಂದಿಗಿನ ತನ್ನ ಸ್ನೇಹವನ್ನು ಮುರಿದುಕೊಂಡಳೆಂದರೆ ಅದಕ್ಕೆ ಕಾರಣ ಹೆಚ್ಚಾಗಿ ಅವನೇ ಆಗಿರುತ್ತಾನೆ. ಹೆಣ್ಣಾದವಳು ತನ್ನ ಸುತ್ತ ಮುತ್ತಲಿನ ಆಗು ಹೋಗುಗಳನ್ನೆಲ್ಲ ತುಂಬಾ ಸೂಕ್ಷ್ಮವಾಗಿ, ಅಷ್ಟೇ ವಿವರವಾಗಿ ಗ್ರಹಿಸುತ್ತಾಳೆ. ಗಂಡ ತಡವ

ಸಮ್ಮೋಹನ ಅಂದರೇನು ?

ನಂಬಿಕೆ | ಪೂರ್ವಾಗ್ರಹ | ವಾಸ್ತವ   ಸಮ್ಮೋಹನ ಅಂದರೇನು ? ಸಮ್ಮೋಹನ (ಹಿಪ್ನೋಟಿಸಮ್) ಕಲೆಯ ಬಗ್ಗೆ ನಿಮಗೆ ಗೊತ್ತೇ ? ಅದನ್ನು ಬಲ್ಲವರನ್ನು ಹತ್ತಿರದಿಂದ ಯಾರನ್ನಾದರೂ ನೋಡಿದ್ದೀರಾ ? ಎಂಬ ಪ್ರಶ್ನೆಗಳಿಗೆ ನಿಮ್ಮ ಉತ್ತರ ಏನು ? ಮೊದಲ ಪ್ರಶ್ನೆಗೆ ಬಹುತೇಕ ಮಂದಿ ಹೌದು ಎಂದರೆ, ಎರಡನೇ ಪ್ರಶ್ನೆಗೆ ಬಹುತೇಕ ಮಂದಿ ಇಲ್ಲ ಅಥವಾ ಒಂದು ಬಾರಿ ನೋಡಿದ್ದೇನೆ ಎಂದೇ ಹೇಳುತ್ತಾರೆ. ಇದರಿಂದಾಗಿ ಸಮ್ಮೋಹನ ಅನ್ನುವುದು ತೀರಾ ಅಪರೂಪದ ಒಂದು ವಿದ್ಯೆ ಅನ್ನುವುದು ಅರಿವಾಗುತ್ತದೆ. ಸಮ್ಮೋಹನದ ಬಗ್ಗೆ ಗೊತ್ತು ಎಂದು ಉತ್ತರಿಸಿದವರನ್ನು ಅದರ ಬಗ್ಗೆ ವಿವರ ಕೇಳಿ ನೋಡಿ, ಬೇರೆಯವರನ್ನು ತಮ್ಮ ಹತೋಟಿಗೆ ತೆಗೆದುಕೊಂಡು ಅವರಿಂದ ಏನು ಬೇಕಾದರೂ ಬಾಯಿ ಬಿಡಿಸುವ ವಿದ್ಯೆ. ಅನ್ನಬಹುದು. ಆದರೆ ಇದು ಪೂರ್ತಿ ಸರಿಯಲ್ಲ. ಅದು ನಿಜವಾಗಿದ್ದರೆ ಪೊಲೀಸ್ ತನಿಖಾಧಿಕಾರಿಗಳೆಲ್ಲಾ ಸಮ್ಮೋಹನ ಕಲಿತು ಕಳ್ಳರ ಬಾಯಿಯನ್ನು ಸುಲಭವಾಗಿ ಬಿಡಿಸುತ್ತಿದ್ದರು. ಮೊದಲನೆಯದಾಗಿ ಸಮ್ಮೋಹನದ ಬಗ್ಗೆ ಜನರಲ್ಲಿರುವ ತಿಳುವಳಿಕೆಗಿಂತಲೂ ಪೂರ್ವಾಗ್ರಹವಾದ ಮೂಢ ನಂಬಿಕೆಗಳೇ ಹೆಚ್ಚು. ಸಮ್ಮೋಹನ ಎಂದರೆ ಏನೋ ಮಾಟ, ಮಂತ್ರ, ತಂತ್ರದಂತೆ ಭಯ ಬೀಳುವುದೂ ಇದೆ. ಅಥವಾ ಹಾಗೆ ಭಯ ಬೀಳುವಂತೆ ನಂಬಿಸಲಾಗಿದೆ. ಇದು ಈ ವಿದ್ಯೆಯನ್ನು ಕಲಿತ ಕೆಲವೇ ಕೆಲವು ವ್ಯಕ್ತಿಗಳ ಹುನ್ನಾರವಷ್ಟೇ. ಒಬ್ಬ ಮಂತ್ರವಾದಿ ಹೇಗೆ ತನ್ನ ವಿದ್ಯೆ ಬೇರೆಯವರಿಗೆ ತಿಳಿಯದಂತೆ ರಹಸ್ಯ ಕಾಪಾಡಿ ಅದೊಂದು ಬ್ರಹ್ಮವಿದ್ಯೆ